ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೇದವ್ಯಾಸರ ಶಿವಪುರಾಣಸಾರ: ಶಿವ-ಪಾರ್ವತಿ ಪಾಣಿಗ್ರಹಣ

ಅಕ್ಷರ ಗಾತ್ರ

ಶಿವನ ಗೋತ್ರ, ಕುಲ ಎಲ್ಲವೂ ಓಂಕಾರರೂಪವಾದ ನಾದವೇ ಆಗಿದೆ. ಶಿವನು ನಾದರೂಪನಾದರೆ, ನಾದವೂ ಶಿವನ ರೂಪ. ನಾದಕ್ಕೂ ಶಿವನಿಗೂ ಭೇದವೇ ಇಲ್ಲ. ಅದುವೇ ನಿಜವಾದ ತತ್ವ. ಸಗುಣನಾದ ಪರಮೇಶ್ವರನಿಂದ ನಾದವು ಮೊದಲು ಜನಿಸಿತು. ಆದುದರಿಂದ ನಾದವು ಸರ್ವೋತ್ತಮವಾದುದು. ಈ ಕಾರಣದಿಂದಲೇ ವೀಣೆಯಿಂದ ನಾನು ನಾದವನ್ನು ನುಡಿಸಿದೆ. ಹಾಗೆ ನುಡಿಸುವಂತೆ ಸರ್ವೇಶ್ವರನಾದ ಶಿವನೇ ನನ್ನ ಮನಸ್ಸಿನಲ್ಲಿ ಪ್ರೇರೇಪಿಸಿದ - ಎಂದು ನಾರದ ಹೇಳಿದ.

ಹೀಗೆ ನಾರದ ಹೇಳಿದ ಮಾತನ್ನು ಕೇಳಿ ಹಿಮವಂತ ಸಂತಸಗೊಂಡರೆ, ದೇವತೆಗಳು, ಮುನಿಗಳು ‘ಚೆನ್ನಾಗಿ ಹೇಳಿದೆ’ ಎಂದು ನಾರದನಿಗೆ ಧನ್ಯವಾದಗಳನ್ನು ಅರ್ಪಿಸಿದರು. ನಾರದನಿಂದ ಮಹೇಶ್ವರನ ಮಹಾಮಹಿಮೆಯನ್ನು ತಿಳಿದ ಅವರೆಲ್ಲ ಸಂತೋಷಪಟ್ಟರು. ಸರ್ವಸ್ವತಂತ್ರನಾದ, ಜಗತ್ತಿಗೆಲ್ಲ ಒಡೆಯನೂ ಆದ ಶಿವನನ್ನು ಬ್ರಹ್ಮಜ್ಞಾನದಿಂದ ಮಾತ್ರ ತಿಳಿಯಲು ಸಾಧ್ಯ ಎಂದು ಪರಸ್ಪರ ಮಾತನಾಡಿಕೊಂಡರು. ಅಲ್ಲಿದ್ದ ಪರ್ವತೋತ್ತಮರೆಲ್ಲರೂ ಸಂಭ್ರಮದಿಂದ ಹಿಮವಂತನಿಗೆ ಹೇಳಿದರು, ‘ಗಿರಿರಾಜ, ಕನ್ಯಾದಾನಕ್ಕೆ ಸಿದ್ಧನಾಗು. ಇಲ್ಲಿ ವಿಮರ್ಶೆಮಾಡಬೇಕಾದುದೇನೂ ಇಲ್ಲ. ಶಂಕರನಿಗೆ ಗಿರಿಜೆಯನ್ನು ಧಾರೆ ಎರೆದುಕೊಡು’ ಎಂದು ಒತ್ತಾಯಿಸಿದರು.

ಹಿಮವಂತ ಬ್ರಹ್ಮನ ಪ್ರೇರಣೆಯಂತೆ ಶಿವನಿಗೆ ಕನ್ಯಾದಾನವನ್ನು ಮಾಡಿದ. ‘ಪರಮೇಶ್ವರ ಈ ನನ್ನ ಕನ್ಯೆಯನ್ನು ನಿನಗೆ ಕೊಡುತ್ತಿದ್ದೇನೆ. ಇವಳನ್ನು ಪತ್ನಿಯನ್ನಾಗಿ ಪರಿಗ್ರಹಿಸು’ ಎಂದ ಗಿರಿರಾಜ, ಜಗನ್ಮಾತೆಯಾದ ತನ್ನ ಪುತ್ರಿಯನ್ನು ಶಿವನಿಗೆ ಧಾರೆಯೆರೆದು ಕೊಟ್ಟ. ಇದಕ್ಕೆ ಪ್ರತಿಯಾಗಿ ಪರಮೇಶ್ವರ ಸಹ ಲೋಕಾಚಾರದಂತೆ ಗಿರಿಜೆಯ ಕರಕಮಲವನ್ನು ಪಾಣಿಗ್ರಹಣಮಾಡಿದ. ಆಗ ಎಲ್ಲೆಡೆ ಹರ್ಷೋದ್ಗಾರ ವ್ಯಕ್ತವಾಯಿತು. ಸ್ವರ್ಗ, ಭೂಮಿ, ಆಕಾಶ ಮೊದಲಾದ ಎಲ್ಲಾ ಸ್ಥಳಗಳಲ್ಲೂ ಜಯಘೋಷ ಮೊಳಗಿತು. ಗಂಧರ್ವರು ಪ್ರೀತಿಯಿಂದ ಗಾನಮಾಡಿದರು. ಅಪ್ಸರೆಯರು ನರ್ತನ ಮಾಡಿದರು. ಪಟ್ಟಣದ ಜನರು ಸಂತೋಷದಿಂದ ಸಂಭ್ರಮಿಸಿದರು. ದೇವತೆಗಳೆಲ್ಲರೂ ಆನಂದದ ಸಮುದ್ರದಲ್ಲಿ ಮುಳುಗಿದರು.

ಈ ಸಂದರ್ಭದಲ್ಲಿ ಹಿಮವಂತ ಕನ್ಯಾದಾನಕ್ಕೆ ಯೋಗ್ಯವಾದಂತಹ ಪರಿಕರಗಳನ್ನು ಶಿವನಿಗೆ ಕೊಟ್ಟ. ಹಾಗೇ, ಒಂದು ಸಾವಿರ ಹಸುಗಳು, ನೂರು ಕುದುರೆಗಳು, ನೂರು ಆನೆಗಳು, ಸುವರ್ಣ, ಮುತ್ತುರತ್ನಗಳಿಂದ ಕೆತ್ತಲ್ಪಟ್ಟ ನೂರು ರಥಗಳು, ಕರ್ತವ್ಯನಿಷ್ಠರಾದ ದಾಸಿಯರನ್ನು ಬಳುವಳಿಯಾಗಿ ಕೊಟ್ಟ. ಇವುಗಳೊಂದಿಗೆ ಅನೇಕ ಬಗೆಯ ಸುಂದರವಾದ ರತ್ನಕಲಶಗಳನ್ನು ಸಹ ಉಡುಗೊರೆಯಾಗಿ ನೀಡಿದ. ಹಿಮವಂತನ ಬಂಧುಗಳು ಗಿರಿಜೆಯನ್ನು ಭಕ್ತಿಯಿಂದ ಪೂಜಿಸಿ, ಶಿವನಿಗೆ ವಿಧಿವತ್ತಾಗಿ ಅನೇಕ ದ್ರವ್ಯಗಳನ್ನು ಉಡುಗೊರೆಯಾಗಿ ಕೊಟ್ಟರು.

ಹೀಗೆ ಹಿಮಾಲಯ ತನ್ನ ಮಗಳಾದ ಗಿರಿಜೆಯನ್ನು ಪರಮೇಶ್ವರನಾದ ಶಿವನಿಗೆ ವಿಧಿಪೂರ್ವಕವಾಗಿ ಧಾರೆಯೆರೆದುಕೊಟ್ಟು ಕೃತಾರ್ಥನಾದ. ಇದಾದ ನಂತರ ಹಿಮವಂತ ಕೈಮುಗಿದುಕೊಂಡು ಮಧ್ಯಾಹ್ನದಲ್ಲಿ ಹೇಳಬೇಕಾದಂತಹ ಸ್ತೋತ್ರದಿಂದ ಶಿವನನ್ನು ಮಧುರವಾಗಿ ಸ್ತುತಿಸಿದ.

ವೇದವಿತ್ತುಗಳಾದ ಮುನಿಗಳು ಹಿಮವಂತನ ಅಪ್ಪಣೆಯಂತೆ ಪರ್ಯುಕ್ಷಣವೆಂಬ ಕರ್ಮವನ್ನುಮಾಡಿ ‘ದೇವಸ್ಯ ತ್ವಾ ಸವಿತುಃ ಪ್ರಸವೇ’ ಎಂಬ ಮಂತ್ರವನ್ನು ಉಚ್ಚರಿಸುತ್ತಾ ದಂಪತಿಗಳಿಗೆ ಪ್ರೋಕ್ಷಣಾದಿಗಳನ್ನು ಮಾಡಿದರು. ಆಗ ಅಲ್ಲಿ ಶಿವ-ಪಾರ್ವತಿಯರ ವಿವಾಹ ಮಹೋತ್ಸವವು ಬಹು ವಿಜೃಂಭಣೆಯಿಂದ ನಡೆಯಿತು.

ಇಲ್ಲಿಗೆ ಶ್ರೀಶಿವಮಹಾಪುರಾಣದ ರುದ್ರಸಂಹಿತೆಯ ಪಾರ್ವತೀಖಂಡದಲ್ಲಿ ನಲವತ್ತೆಂಟನೆಯ ಅಧ್ಯಾಯ ಮುಗಿಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT