ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾರ ಭವಿಷ್ಯ | ನವೆಂಬರ್ 27, 2022ರಿಂದ ಡಿಸೆಂಬರ್ 3, 2022ರವರೆಗೆ

ಅಕ್ಷರ ಗಾತ್ರ

ಮೇಷ ರಾಶಿ (ಅಶ್ವಿನಿ ಭರಣಿ ಕೃತಿಕ 1)
ಮಕ್ಕಳಿಗೆ ವಿದ್ಯಾಭ್ಯಾಸದ ಬಗ್ಗೆ ತಿಳಿ ಹೇಳುವುದರ ಜೊತೆಗೆ ಪ್ರೋತ್ಸಾಹವೂ ಸಿಗುತ್ತದೆ. ವಾಹನ ಚಾಲನೆ ಮಾಡುವವರು ಚಾಲನೆ ಮಾಡುವಾಗ ಜಾಗರೂಕರಾಗಿರುವುದು ಉತ್ತಮ. ಕೃಷಿ ಕಾರ್ಯಗಳ ವೆಚ್ಚಕ್ಕಾಗಿ ಹಣಕಾಸು ಸಂಸ್ಥೆಗಳ ಮೊರೆ ಹೋಗುವಿರಿ. ಬಹಳ ದಿನಗಳಿಂದ ನನೆಗುದಿಗೆ ಬಿದ್ದಿದ್ದ ವಿಷಯವೊಂದನ್ನು ಬಹಳ ದೃಢ ನಿರ್ಧಾರ ಮಾಡಿ ಕೈಗೆತ್ತಿಕೊಳ್ಳುವಿರಿ. ಉದ್ಯೋಗಸ್ಥ ಮಹಿಳೆಯರಿಗೆ ವರಮಾನ ಹೆಚ್ಚಿಗೆ ಮಾಡಿಕೊಳ್ಳಲು ಹೆಚ್ಚು ಅವಕಾಶ ಇರುವುದಿಲ್ಲ. ಧಾನ್ಯವನ್ನು ಸಂಗ್ರಹಣೆ ಮಾಡುವವರಿಗೆ ಹೆಚ್ಚು ಸಂಗ್ರಹಣೆ ಮಾಡಲು ಅವಕಾಶ ಸಿಗುವ ಸಾಧ್ಯತೆಗಳಿವೆ. ವಿದೇಶಗಳಿಗೆ ಸಿದ್ಧಪಡಿಸಿದ ಆಹಾರ ವಸ್ತುಗಳನ್ನು ರಫ್ತು ಮಾಡುವವರ ವ್ಯವಹಾರ ವಿಸ್ತರಿಸುತ್ತದೆ. ಸಂಗಾತಿಯ ಆದಾಯದಲ್ಲಿ ಸ್ವಲ್ಪಮಟ್ಟಿನ ಏರಿಳಿತಗಳನ್ನು ಕಾಣಬಹುದು.

ವೃಷಭ ರಾಶಿ (ಕೃತಿಕಾ2 3 4 ರೋಹಿಣಿ ಮೃಗಶಿರಾ1 2)
ಹಿತಶತ್ರುಗಳಿಂದ ಉದ್ಯೋಗ ಕ್ಷೇತ್ರದಲ್ಲಿ ತೊಂದರೆ ಬರುವ ಸಾಧ್ಯತೆ ಇದೆ. ವ್ಯವಹಾರಕ್ಕೆ ತಾಯಿಯಿಂದ ಮಾರ್ಗದರ್ಶನದ ಜೊತೆಗೆ ಸ್ವಲ್ಪ ಧನಸಹಾಯವೂ ದೊರೆಯುವುದು. ಸಂಬಂಧಿಕರೊಡನೆ ಸುಧೀರ್ಘ ಸಮಾಲೋಚನೆಯಿಂದ ಬಾಂಧವ್ಯದಲ್ಲಿ ವೃದ್ಧಿ ಕಾಣಬಹುದು. ಸಹಕಾರ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಉತ್ತಮ ಹೆಸರು ಬರುತ್ತದೆ. ಮನೆಯ ಹಿರಿಯರ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿಯನ್ನು ವಹಿಸಬೇಕಾದೀತು. ಮಕ್ಕಳ ಉನ್ನತ ವ್ಯಾಸಂಗಕ್ಕಾಗಿ ಹೆಚ್ಚಿನ ಹಣ ತೊಡಗಿಸುವಿರಿ. ಮಕ್ಕಳ ವಿದ್ಯಾಭ್ಯಾಸದಲ್ಲಿ ಸಾಕಷ್ಟು ಪ್ರಗತಿಯನ್ನು ಕಾಣಬಹುದು. ಹಣದ ಒಳಹರಿವು ಚೇತರಿಕೆಯ ಹಾದಿಯಲ್ಲಿ ಇರುತ್ತದೆ. ಸಾಲ ಹೆಚ್ಚಿರುವವರು ಈಗ ತೀರಿಸಲು ಪ್ರಯತ್ನ ಪಡಬಹುದು. ಸ್ತ್ರೀಯರಿಗೆ ಉತ್ತಮ ಅಭಿವೃದ್ಧಿ ಇರುತ್ತದೆ.

ಮಿಥುನ ರಾಶಿ (ಮೃಗಶಿರಾ 3.4 ಆರಿದ್ರಾ ಪುನರ್ವಸು 1 2 3)
ಮಹಿಳೆಯರು ಸಾಮಾಜಿಕ ಕ್ಷೇತ್ರಗಳಲ್ಲಿ ದುಡಿಯುವ ಸಾಮರ್ಥ್ಯವನ್ನು ಹೊಂದುತ್ತಾರೆ. ಹಣದ ಹರಿವು ನಿಮ್ಮ ಅಗತ್ಯದಷ್ಟು ಇರುತ್ತದೆ. ಹಣಕಾಸಿನ ವ್ಯವಹಾರಗಳಲ್ಲಿ ಸ್ವಲ್ಪ ಎಚ್ಚರಿಕೆ ಇರಲಿ. ನೆರೆಹೊರೆಯವರೊಂದಿಗೆ ಇದ್ದ ಮುನಿಸುಗಳು ದೂರವಾಗುತ್ತವೆ. ವೈಯಕ್ತಿಕ ವಿಚಾರಗಳತ್ತ ಹೆಚ್ಚಿನ ಗಮನವನ್ನು ಕೊಡಿರಿ. ಕೋರ್ಟ್‌ ಕಚೇರಿ ವ್ಯವಹಾರಗಳಲ್ಲಿ ದೃಢ ಮನಸ್ಸಿನಿಂದ ಹೋರಾಡಿದರೆ ನಿಮಗೆ ಯಶಸ್ಸು ಇರುತ್ತದೆ. ಸಹೋದರಿಯರಿಗೆ ಉಡುಗೊರೆಯನ್ನು ಕೊಟ್ಟು ಸಂತಸಪಡೆಯುವಿರಿ. ಮೂಳೆ ನೋವು ಹೆಚ್ಚು ಬಾಧಿಸಬಹುದು. ಕಮಿಷನ್ ವ್ಯವಹಾರವನ್ನು ಮಾಡುವವರಿಗೆ ಆದಾಯದಲ್ಲಿ ಹೆಚ್ಚಳ ಇರುತ್ತದೆ. ವಿದ್ಯಾರ್ಥಿಗಳು ಅಧ್ಯಯನದಲ್ಲಿ ಹೆಚ್ಚಿನ ಶ್ರದ್ಧೆ ವಹಿಸಬೇಕು. ರಫ್ತು ಉದ್ಯಮಗಳಿಗೆ ಪ್ರೋತ್ಸಾಹ ದೊರೆಯುತ್ತದೆ.

ಕಟಕ ರಾಶಿ (ಪುನರ್ವಸು 4 ಪುಷ್ಯ ಆಶ್ಲೇಷ)
ಉನ್ನತ ಹುದ್ದೆಯಲ್ಲಿರುವವರಿಗೆ ಜನರಿಂದ ಅಭಿಮಾನದ ಮಾತುಗಳು ಕೇಳಿಬರುತ್ತವೆ. ಮಹಿಳೆಯರ ಕೆಲವು ಇಷ್ಟಾರ್ಥಗಳು ಪೂರ್ಣಗೊಂಡು ಸಂತಸವಾಗುವುದು. ವಿದೇಶಿ ವ್ಯವಹಾರಗಳನ್ನು ಮಾಡುವವರಿಗೆ ಹೆಚ್ಚಿನ ಅಭಿವೃದ್ಧಿ ಇರುತ್ತದೆ. ಕಚೇರಿ ಕೆಲಸದ ನಿಮಿತ್ತವಾಗಿ ದೂರ ಪ್ರದೇಶದಲ್ಲಿ ಇದ್ದವರಿಗೆ ಹತ್ತಿರಕ್ಕೆ ವರ್ಗಾವಣೆ ಸಿಗುವ ಸಾಧ್ಯತೆ ಇದೆ. ಸಂಬಂಧಿಕರ ಮಧ್ಯಸ್ಥಿಕೆಯಿಂದ ಕುಟುಂಬದ ಕೆಲವು ಸಮಸ್ಯೆಗಳು ದೂರವಾಗುವವು. ಜನಸಾಮಾನ್ಯರಿಗೆ ಉಪಕಾರ ಮಾಡಿ ಸಂತಸಪಡುವಿರಿ. ಪ್ರಾಮಾಣಿಕ ಪ್ರಯತ್ನದಿಂದ ಹಿಡಿದ ಕೆಲಸವನ್ನು ಪೂರ್ಣಗೊಳಿಸುವಿರಿ. ಕೇಂದ್ರ ಸರ್ಕಾರದ ಕೆಲವು ಹಿರಿಯ ಅಧಿಕಾರಿಗಳಿಗೆ ಬೇರೆ ವಿಭಾಗದಲ್ಲಿ ಉನ್ನತ ಹುದ್ದೆ ಸಿಗುವ ಲಕ್ಷಣಗಳಿವೆ. ಹಣದ ಒಳಹರಿವು ತಕ್ಕಮಟ್ಟಿಗೆ ಇರುತ್ತದೆ.

ಸಿಂಹ ರಾಶಿ (ಮಖ ಪೂರ್ವಪಲ್ಗುಣಿ ಉತ್ತರ ಫಲ್ಗುಣಿ 1)
ತುರ್ತು ವಿಷಯಕ್ಕಾಗಿ ಸಂಬಂಧಿಕರ ನೆರವನ್ನು ಪಡೆಯಬೇಕಾಗುತ್ತದೆ. ಅನಗತ್ಯ ಸುತ್ತಾಟದಿಂದ ದೇಹಾಲಸ್ಯ ಆಗಬಹುದು. ಕೆಲವು ಅರೆಕಾಲಿಕ ನೌಕರರಿಗೆ ಕಾಯಂ ನೌಕರಿ ಒದಗುವ ಸಾಧ್ಯತೆ ಇದೆ. ಆತ್ಮಗೌರವ ಸ್ವಲ್ಪ ಹೆಚ್ಚಾಗಿ ವ್ಯಾಪಾರ ವ್ಯವಹಾರಗಳಿಗೆ ಧಕ್ಕೆ ತರಬಹುದು. ಹಣದ ಒಳಹರಿವು ಸಮಾಧಾನಕರವಾಗಿರುತ್ತದೆ. ತಾಂತ್ರಿಕ ಶಿಕ್ಷಣವನ್ನು ಮಾಡುತ್ತಿರುವವರಿಗೆ ಹೆಚ್ಚಿನ ಯಶಸ್ಸು ಇರುತ್ತದೆ. ತಾಯಿಯೊಂದಿಗೆ ನಿಮ್ಮ ಸಂಬಂಧ ಹಳಸುವ ಲಕ್ಷಣವಿದೆ. ವಿದೇಶದಲ್ಲಿ ಉದ್ಯೋಗವನ್ನು ಮಾಡುತ್ತಿರುವವರಿಗೆ ಹೆಚ್ಚಿನ ಪ್ರೋತ್ಸಾಹ ದೊರೆಯುತ್ತದೆ. ವ್ಯಾಪಾರ ಮತ್ತು ವ್ಯವಹಾರಗಳನ್ನು ಮಾಡುತ್ತಿರುವವರಿಗೆ ಆದಾಯ ಹೆಚ್ಚಿಸಿಕೊಳ್ಳುವ ಅವಕಾಶ ದೊರೆಯುತ್ತದೆ.

ಕನ್ಯಾ ರಾಶಿ (ಉತ್ತರ ಫಲ್ಗುಣಿ 2 3 4 ಹಸ್ತಾ ಚಿತ್ತಾ 1.2)
ನೆರೆಹೊರೆಯವರೊಂದಿಗೆ ವಿನಾ ಕಾರಣ ವೈಮನಸ್ಯ ಮೂಡಬಹುದು. ಸಂಯಮದ ಮಾತುಗಳಿಂದಲೇ ಈ ತೊಂದರೆಯನ್ನು ನಿವಾರಿಸಿಕೊಳ್ಳಬಹುದು. ಅಧ್ಯಯನದಲ್ಲಿ ಆಸಕ್ತಿಯು ಸ್ವಲ್ಪ ಕಡಿಮೆಯಾಗುವ ಸಂದರ್ಭವಿದೆ. ಉದ್ಯೋಗ ಕ್ಷೇತ್ರದಲ್ಲಿ ನಿಮ್ಮ ಪ್ರತಿಭೆಗೆ ಗೌರವ ದೊರೆಯುತ್ತದೆ. ರೈತಾಪಿ ವರ್ಗದವರು ಸಾಮಾನ್ಯ ಬೆಳೆಯನ್ನು ಮತ್ತು ಉತ್ತಮ ಬೆಲೆಯ ನಿರೀಕ್ಷೆ ಮಾಡಬಹುದು. ಹಣದ ಒಳಹರಿವು ಕಡಿಮೆ ಮಟ್ಟದಲ್ಲಿರುವುದರಿಂದ ಖರ್ಚನ್ನು ಕಡಿಮೆ ಮಾಡಿಕೊಳ್ಳುವುದು ನಿಮಗೆ ಅನಿವಾರ್ಯ. ಆಸೆಪಟ್ಟ ವಸ್ತುವೊಂದನ್ನು ಪಡೆಯುವ ಅವಕಾಶವಿದೆ. ನಿರುದ್ಯೋಗಿಗಳಿಗೆ ಉದ್ಯೋಗದ ವಿಚಾರದಲ್ಲಿ ಸ್ನೇಹಿತರಿಂದ ಸೂಕ್ತ ಸಲಹೆ ಸಿಗುತ್ತದೆ. ಗರ್ಭಿಣಿಯರು ಸ್ವಲ್ಪ ಎಚ್ಚರವಾಗಿರುವುದು ಒಳ್ಳೆಯದು. ಸಂಗಾತಿಯ ಸಹಕಾರ ಸಕಾಲದಲ್ಲಿ ದೊರೆಯುತ್ತದೆ.

ತುಲಾ ರಾಶಿ (ಚಿತ್ತಾ 3 4 ಸ್ವಾತಿ ವಿಶಾಖ 1 2 3)
ಆಸ್ತಿ ವಿಷಯಕ್ಕೆ ಸಂಬಂಧಿಸಿದಂತೆ ಮನಃಸ್ತಾಪ ಎದುರಾಗುವ ಸಂದರ್ಭವಿದೆ. ಮಹಿಳೆಯರಿಗೆ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಅವಕಾಶಗಳಿವೆ. ಜಮೀನಿನಲ್ಲಿ ಹೆಚ್ಚಿನ ಕೃಷಿ ಕೆಲಸಗಳನ್ನು ಆರಂಭಿಸುವಿರಿ. ಅಪೇಕ್ಷಿಸಿದ್ದ ಸಾಲ ಇದೀಗ ಹಣಕಾಸು ಸಂಸ್ಥೆಗಳಿಂದ ದೊರೆಯುತ್ತದೆ. ವಿದೇಶಿ ಕಂಪನಿಯೊಂದು ನಿಮಗೆ ಪಾಲುದಾರಿಕೆಗೆ ಆಹ್ವಾನ ನೀಡಬಹುದು. ಹಣದ ಒಳಹರಿವು ಸಮಾಧಾನಕರವಾಗಿ ಇರುತ್ತದೆ. ರಾಜಕೀಯ ವ್ಯಕ್ತಿಗಳಿಗೆ ನಿರೀಕ್ಷಿಸಿದ್ದ ಸ್ಥಾನಮಾನ ವ್ಯತ್ಯಾಸವಾಗಬಹುದು. ಸಂಸಾರದಲ್ಲಿ ಹೆಚ್ಚಿನ ಮಾತುಗಳಿಗೆ ಅವಕಾಶಕೊಡದೆ ಮೌನವಾಗಿರುವುದು ಒಳ್ಳೆಯದು. ಲೇವಾದೇವಿ ಮಾಡುವವರಿಗೆ ಹಿನ್ನಡೆಯಾಗಬಹುದು. ಮೂಳೆಯ ತೊಂದರೆ ಕೆಲವರಿಗೆ ಬಾಧಿಸಬಹುದು.

ವೃಶ್ಚಿಕ ರಾಶಿ (ವಿಶಾಖಾ 4 ಅನುರಾಧ ಜೇಷ್ಠ)
ಸ್ಥಿರಾಸ್ತಿಯ ಬೆಲೆಯಲ್ಲಿ ಏರಿಕೆಯನ್ನು ಕಾಣಬಹುದು. ಹೂ ವ್ಯಾಪಾರಿಗಳಿಗೆ ವ್ಯಾಪಾರ ವೃದ್ಧಿಸಿ ಆದಾಯ ಹೆಚ್ಚುತ್ತದೆ. ನೌಕರಿಯಲ್ಲಿರುವವರು ಅಧಿಕಾರಿಗಳ ಸೂಚನೆಯಂತೆ ಹೆಚ್ಚಿನ ಜವಾಬ್ದಾರಿಯನ್ನು ವಹಿಸಿಕೊಳ್ಳಬೇಕಾಗುತ್ತದೆ. ಹಿತ ಮಿತವಾದ ಮಾತುಗಳಿಂದ ನೆರೆಹೊರೆಯವರನ್ನು ಗೆಲ್ಲುವಿರಿ. ಸಗಟು ವ್ಯಾಪಾರಗಾರರ ವ್ಯವಹಾರಗಳಲ್ಲಿ ಏರಿಕೆ ಕಂಡುಬರುತ್ತದೆ. ಮಕ್ಕಳಿಗಾಗಿ ಹೆಚ್ಚಿನ ಹಣ ಖರ್ಚು ಮಾಡಬೇಕಾಗುತ್ತದೆ. ರಾಜಕೀಯಪಟುಗಳಿಗೆ ಕೆಲವು ಆಪಾದನೆಗಳಿಂದ ಮಾನಸಿಕವಾಗಿ ಒತ್ತಡ ಹೆಚ್ಚಬಹುದು. ಒಡಹುಟ್ಟಿದವರು ವಿನಾಕಾರಣ ನಿಮ್ಮ ಮೇಲೆ ಕೂಗಾಡಬಹುದು. ಸಂತಾನಕ್ಕಾಗಿ ಅಪೇಕ್ಷಿಸುತ್ತಿದ್ದವರಿಗೆ ಶುಭಸಮಾಚಾರ ದೊರೆಯುತ್ತದೆ.

ಧನಸ್ಸು ರಾಶಿ (ಮೂಲ ಪೂರ್ವಾಷಾಢ ಉತ್ತರಾಷಾಢ 1)
ಉದ್ಯೋಗದಲ್ಲಿ ಅಭಿವೃದ್ಧಿಗೊಂಡು ಆರ್ಥಿಕವಾಗಿ ಚೇತರಿಸಿಕೊಳ್ಳುವಿರಿ. ಉದ್ದಿಮೆದಾರರು ತಾಂತ್ರಿಕ ಯಂತ್ರೋಪಕರಣಗಳನ್ನು ಖರೀದಿ ಮಾಡುವ ಯೋಗವಿದೆ. ಹಿರಿಯ ಅಧಿಕಾರಿಗಳಿಗೆ ಹೆಚ್ಚಿನ ರೀತಿಯ ಅಧಿಕಾರ ದೊರೆಯುವ ಹಾಗೂ ಇರುವಲ್ಲೇ ಮೇಲ್ದರ್ಜೆಗೇರುವ ಸಂದರ್ಭವಿದೆ. ಯೋಗ್ಯ ವಯಸ್ಕರಿಗೆ ವಿವಾಹ ಸಂಬಂಧ ಒದಗುವ ಸಾಧ್ಯತೆ ಇದೆ. ಪರಿಚಯದ ಗಣ್ಯರೊಂದಿಗೆ ಅನಿರೀಕ್ಷಿತವಾಗಿ ವೇದಿಕೆಯನ್ನು ಹಂಚಿಕೊಳ್ಳುವಂತಹ ಸಾಧ್ಯತೆ ಇದೆ. ಮಾಡಬೇಕಾದ ಕೆಲಸಗಳ ಬಗ್ಗೆ ಸರಿಯಾಗಿ ಚಿಂತನೆ ಮಾಡಿ ದೃಢ ನಿರ್ಧಾರಗಳಿಂದ ಮುಂದುವರಿಯಿರಿ. ಚಿನ್ನದ ವ್ಯಾಪಾರಿಗಳಿಗೆ ವ್ಯಾಪಾರ ಹೆಚ್ಚಾಗಿ ತನ್ಮೂಲಕ ಆದಾಯವೂ ಹೆಚ್ಚಾಗುವುದು. ಹಣದ ಒಳಹರಿವು ನಿಮ್ಮ ನಿರೀಕ್ಷೆಯಷ್ಟು ಇರುತ್ತದೆ. ಕೃಷಿ ಕಾರ್ಯಗಳಿಗಾಗಿ ಹಣ ಖರ್ಚು ಮಾಡಲೇಬೇಕಾಗುತ್ತದೆ. ಸಿಹಿಪದಾರ್ಥಗಳನ್ನು ತಯಾರಿಸಿ ಮಾರಾಟ ಮಾಡುವವರ ವ್ಯವಹಾರ ವಿಸ್ತರಣೆಯಾಗುತ್ತದೆ.

ಮಕರ ರಾಶಿ (ಉತ್ತರಾಷಾಢ 2 3 4 ಶ್ರವಣ ಧನಿಷ್ಠ 1.2)
ಕೆಲಸಗಾರರ ಕೊರತೆಯಿಂದಾಗಿ ಉದ್ದಿಮೆಗಳಲ್ಲಿ ತಯಾರಿಕೆಗೆ ಬಹಳ ಅಡಚಣೆ ಉಂಟಾಗುತ್ತದೆ. ಕೃಷಿ ಕ್ಷೇತ್ರದಲ್ಲಿನ ಯಂತ್ರೋಪಕರಣಗಳನ್ನು ತಯಾರಿಸುವವರಿಗೆ ಅಭಿವೃದ್ಧಿ ಇರುತ್ತದೆ. ಚಿನ್ನಾಭರಣಗಳ ವ್ಯಾಪಾರವನ್ನು ಆರಂಭಿಸಬೇಕೆಂದು ಇಚ್ಛಿಸುವವರು ಈಗ ಆರಂಭಿಸುವುದು ಬೇಡ. ತೆರಿಗೆ ತಜ್ಞರು ಲೆಕ್ಕಪತ್ರಗಳ ಪರಿಶೀಲನೆಯಲ್ಲಿ ಹೆಚ್ಚಿನ ಕಾಲ ಕಳೆಯಬೇಕಾಗಬಹುದು ಹಾಗೂ ಹೆಚ್ಚಿನ ಆದಾಯವನ್ನು ಪಡೆಯಬಹುದು. ಸ್ವಂತ ಶಕ್ತಿಯೇ ನಿಮ್ಮ ಆಧಾರವಾಗಿ ಕೆಲಸಕಾರ್ಯಗಳಲ್ಲಿ ಜಯವನ್ನು ಸಾಧಿಸುವಿರಿ. ಹಣದ ಒಳಹರಿವು ಸಾಮಾನ್ಯವಾಗಿರುತ್ತದೆ. ವಾಹನ ಮಾರಾಟದಲ್ಲಿ ತೊಡಗಿಸಿಕೊಂಡಿರುವವರಿಗೆ ಮಾರಾಟದಲ್ಲಿ ಸ್ವಲ್ಪ ಚೇತರಿಕೆಯನ್ನು ಕಾಣಬಹುದು. ವಾರಾಂತ್ಯಕ್ಕೆ ದೈವ ದರ್ಶನಕ್ಕಾಗಿ ಹೋಗಿ ಬರುವಿರಿ.

ಕುಂಭ ರಾಶಿ (ಧನಿಷ್ಠ 3.4 ಶತಭಿಷಾ ಪೂರ್ವಭಾದ್ರ 1 2 3)
ಹೊಸದಾಗಿ ಕಟ್ಟಿಸುತ್ತಿರುವ ಮನೆಯ ಕೆಲಸ ಪೂರ್ಣಗೊಂಡು ಮನಸ್ಸಿಗೆ ನೆಮ್ಮದಿ ಕೊಡುತ್ತದೆ. ಮಕ್ಕಳ ವಿವಾಹದ ವಿಷಯದಲ್ಲಿ ನಿಮ್ಮ ಸಂಬಂಧಿಕರಿಂದ ಕೆಲವು ಒತ್ತಾಯಗಳು ಬರಬಹುದು. ಸಮಾಜಮುಖಿ ಕೆಲಸಗಳನ್ನು ಮಾಡುತ್ತಿರುವವರಿಗೆ ಜನರಿಂದ ಸಹಾಯಹಸ್ತಗಳು ದೊರೆಯುತ್ತವೆ. ಪ್ರೀತಿಪಾತ್ರರ ಭೇಟಿಯಿಂದ ಬಾಲ್ಯದ ನೆನಪುಗಳನ್ನು ಮೆಲುಕು ಹಾಕುವಿರಿ. ಹಣದ ಒಳಹರಿವು ನಿಮ್ಮ ನಿರೀಕ್ಷೆಯಷ್ಟು ಇರುತ್ತದೆ. ಲೇವಾದೇವಿ ವ್ಯವಹಾರವನ್ನು ಮಾಡುವವರಿಗೆ ಅಂತಹ ಪ್ರಗತಿ ಇರುವುದಿಲ್ಲ. ಈ ರಾಶಿಯ ಮಕ್ಕಳಿಂದ ಹಿರಿಯರಿಗೆ ಬೇಸರ ಉಂಟಾಗಬಹುದು. ಪ್ರೀತಿ ಪ್ರೇಮದ ವಿಚಾರದಲ್ಲಿ ಬಹಳ ಎಚ್ಚರದಿಂದ ಇರುವುದು ಒಳ್ಳೆಯದು. ಸರ್ಕಾರಿ ಮಟ್ಟದ ಕೆಲಸಕಾರ್ಯಗಳಲ್ಲಿ ಮುನ್ನಡೆ ಇರುತ್ತದೆ.

ಮೀನ ರಾಶಿ (ಪೂರ್ವಭಾದ್ರ 4 ಉತ್ತರಾಭಾದ್ರ ರೇವತಿ)
ಧಾನ್ಯಗಳ ಸಗಟು ವ್ಯಾಪಾರವನ್ನು ಮಾಡುತ್ತಿರುವವರಿಗೆ ವ್ಯವಹಾರದಲ್ಲಿ ಅಭಿವೃದ್ಧಿ ಇದ್ದೇ ಇರುತ್ತದೆ. ಕೈಗೆತ್ತಿಕೊಂಡ ಕೆಲಸಗಳನ್ನು ಶಕ್ತ್ಯಾನುಸಾರ ಮಾಡಿ ಪೂರೈಸುವಿರಿ. ಸರ್ಕಾರದಿಂದ ಆಗಬೇಕಾದ ಕೆಲಸಗಳಲ್ಲಿ ಮುನ್ನಡೆಯನ್ನು ಕಾಣುವಿರಿ. ಶೀತ ಬಾಧೆ ನಿಮ್ಮನ್ನು ಬಾಧಿಸಬಹುದು. ಹಣದ ಒಳಹರಿವು ತೃಪ್ತಿದಾಯಕವಾಗಿರುತ್ತದೆ. ತೈಲ ವ್ಯಾಪಾರಿಗಳಿಗೆ ಸ್ವಲ್ಪ ಹಿನ್ನಡೆ ಕಂಡರೂ ನಂತರ ಮುನ್ನಡೆಯುತ್ತದೆ. ಸರ್ಕಾರಿ ನೌಕರರಿಗೆ ಇಲಾಖೆಯ ಸಹೋದ್ಯೋಗಿಗಳ ಸಹಾಯದಿಂದ ವೃತ್ತಿಯಲ್ಲಿ ಮೇಲೇರುವ ಅವಕಾಶವಿದೆ. ಪುಸ್ತಕ ಪ್ರಕಾಶಕರಿಗೆ ಬಹುಬೇಡಿಕೆಯ ಬರಹಗಾರನ ಪುಸ್ತಕ ಪ್ರಕಟ ಮಾಡುವ ಅವಕಾಶ ಸಿಗುತ್ತದೆ. ಒಡಹುಟ್ಟಿದವರ ಜೊತೆಗಿನ ಸಂಬಂಧ ಕಡಿಮೆಯಾಗಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT