ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಂದೂ ಎಂದರೆ ಏನು: ಗಾಂಧಿ-ಸಾವರ್ಕರ್ ಮುಖಾಮುಖಿ

Last Updated 4 ಅಕ್ಟೋಬರ್ 2020, 3:27 IST
ಅಕ್ಷರ ಗಾತ್ರ

ಗಾಂಧಿಯವರ ಆಧ್ಯಾತ್ಮಿಕ ನೆಲೆಯ ಧರ್ಮದೃಷ್ಟಿ ಹಿಂದ್ ಸ್ವರಾಜ್ ಎನ್ನುವ ವಿಶ್ವಾತ್ಮಕ ನೈತಿಕ ಕಲ್ಪನೆಯನ್ನು ನಮ್ಮ ಮುಂದಿರಿಸಿದರೆ, ಸಾವರ್ಕರ್‌ ಅವರ ಲೌಕಿಕ ನೆಲೆಯ ಧರ್ಮದೃಷ್ಟಿ ಹಿಂದೂ ರಾಷ್ಟ್ರದ ಪ್ರತಿಪಾದನೆಯನ್ನು ಮಾಡುತ್ತದೆ…

***

ಮೋಹನದಾಸ ಕರಮಚಂದ ಗಾಂಧಿ ಮತ್ತು ವಿನಾಯಕ ದಾಮೋದರ ಸಾವರ್ಕರ್ ಆಧುನಿಕ ಭಾರತದ ಸೈದ್ಧಾಂತಿಕ ಚರಿತ್ರೆಯ ಎರಡು ಬಹುಮುಖ್ಯ ವಿದ್ಯಮಾನಗಳು. ಧರ್ಮ, ನಾಗರಿಕತೆ, ಇತಿಹಾಸ ಮತ್ತು ರಾಷ್ಟ್ರ ಎಂಬ ಪ್ರಮುಖವಾದ ನಾಲ್ಕು ಪರಿಕಲ್ಪನೆಗಳ ಬಗ್ಗೆ ಈ ಈರ್ವರು ನಡೆಸಿರುವ ಜಿಜ್ಞಾಸೆ ವಿಶಿಷ್ಟವಾದುದು. ಈ ಜಿಜ್ಞಾಸೆಗಳಲ್ಲಿರುವ ಬೌದ್ಧಿಕ ಪರಿಶ್ರಮಗಳನ್ನು ಪರಿಶೀಲಿಸಿದಾಗ ಇವರಿಬ್ಬರ ನಡುವೆ ಪರಿಹರಿಸಲಾಗದ ಹಲವು ಭಿನ್ನಮತಗಳು ಮತ್ತು ಆಶ್ಚರ್ಯಕರವಾದ ಕೆಲವು ಸಹಮತಗಳು ಇವೆ. ಧರ್ಮದ ಸ್ವರೂಪವನ್ನು ಕುರಿತು ಇವರು ಮುಂದಿಟ್ಟ ಕೆಲವು ಅಂಶಗಳನ್ನು ಮತ್ತು ಅದರ ರಾಜಕೀಯ ಪರಿಣಾಮಗಳನ್ನು ಮತ್ತೆ ನೆನಪಿಗೆ ತಂದುಕೊಳ್ಳುವ ಪ್ರಯತ್ನವನ್ನು ಈ ಲೇಖನ ಮಾಡುತ್ತದೆ.

ಭಾರತದ ಧಾರ್ಮಿಕ ಹಾಗೂ ಸಮಾಜ ಸುಧಾರಣೆಯ ಚರಿತ್ರೆ 19ನೆಯ ಶತಮಾನದ ಆದಿಭಾಗದಿಂದ ಆರಂಭಗೊಳ್ಳುತ್ತದೆ. ರಾಜಾರಾಮ ಮೋಹನರಾಯ್, ಜ್ಯೋತಿಬಾ ಫುಲೆ, ದಯಾನಂದ ಸರಸ್ವತಿ, ಕೇಶವಚಂದ್ರ ಸೇನ್, ವಿವೇಕಾನಂದ, ಬಂಕಿಮ್ ಚಂದ್ರರಿಂದ ಉಗಮಗೊಳ್ಳುವ ಈ ಚರಿತ್ರೆ ತಿಲಕ್, ಅರವಿಂದೋ, ಗಾಂಧಿ, ನಾರಾಯಣ ಗುರು, ಸಾವರ್ಕರ್ ಮತ್ತು ಅಂಬೇಡ್ಕರ್‌ ಅವರವರೆಗೆ ಹರಿದು ಬರುವಾಗ ಹಿಂದೂಧರ್ಮಕ್ಕೆ ಅನೇಕ ವ್ಯಾಖ್ಯಾನಗಳು ಒದಗಿದವು. ಇವರೆಲ್ಲರೂ ಹಿಂದೂ ಧರ್ಮದ ಅರ್ಥ ನಿರೂಪಣೆ ಮಾಡಿದ್ದಾರೆ. ಹಾಗೆಯೇ ಹಿಂದೂ ಸಮಾಜದ ಸ್ವರೂಪದಲ್ಲಿರುವ ಸಂಕೀರ್ಣತೆಯನ್ನೂ ವಿವರಿಸಿದ್ದಾರೆ. ವೈವಿಧ್ಯಮಯವಾಗಿರುವ ಈ ವ್ಯಾಖ್ಯಾನಗಳಲ್ಲಿ ಗಾಂಧಿಯವರ ವ್ಯಾಖ್ಯಾನ ಒಂದು ಬಗೆಯದ್ದಾದರೆ ಸಾವರ್ಕರ್‌ ಅವರದ್ದು ಮತ್ತೊಂದು ಬಗೆಯದ್ದು. ಈ ಎರಡೂ ವ್ಯಾಖ್ಯಾನಗಳನ್ನು ಎದುರುಬದುರಾಗಿಸಿದರೆ ಇವುಗಳ ವೈಶಿಷ್ಟ್ಯ ಸ್ವಯಂಸ್ಪಷ್ಟವಾಗುತ್ತದೆ.

ತನ್ನನ್ನು ಒಬ್ಬ ಹಿಂದುವೆಂದೂ ಅಥವಾ ವೈಷ್ಣವನೆಂದೂ ಗುರುತಿಸಿಕೊಳ್ಳುವಲ್ಲಿ ಗಾಂಧಿಯವರಿಗೆ ಯಾವ ಬಗೆಯ ಸಂಕೋಚವೂ ಇರಲಿಲ್ಲ. ಗಾಂಧಿಯವರ ಕುರಿತು ಆಳವಾದ ಒಳನೋಟಗಳಿರುವ ಮಾತುಗಳನ್ನು ಬರೆದಿರುವ ಆಶಿಶ್ ನಂದಿಯವರ ಪ್ರಕಾರ, ಧರ್ಮವನ್ನು ತನ್ನ ಖಾಸಗಿ ಮತ್ತು ಸಾರ್ವಜನಿಕ ಜೀವನದಲ್ಲಿ ಅವಿಚ್ಛಿನ್ನವಾಗಿ ಅಳವಡಿಸಿಕೊಂಡ ಏಕೈಕ ಧೀಮಂತ ಗಾಂಧಿ. ಗಾಂಧಿಯವರ ಹಿಂದೂ ಧಾರ್ಮಿಕ ದೃಷ್ಟಿಯಲ್ಲಿ ಇತರ ಅನೇಕ ಧಾರ್ಮಿಕ ಪರಂಪರೆಗಳ ಅಂಶಗಳು ಬೆಸೆದುಕೊಂಡಿವೆ. ಅವರ ವಿಚಾರಗಳನ್ನು ಆಳವಾಗಿ ಪ್ರಭಾವಿಸಿದ ಅನೇಕ ಚಿಂತಕರು, ಕ್ರಿಶ್ಚಿಯನ್ ಮತಪಂಥದ ಹಿನ್ನೆಲೆಯವರು. ಗಾಂಧಿಯವರ ಧರ್ಮದೃಷ್ಟಿಯಲ್ಲಿ ಸ್ಪಷ್ಟವಾಗಿ ಕಂಡು ಬರುವ ಈ ಕ್ರಿಶ್ಚಿಯನ್ ಪ್ರಭಾವದಿಂದಾಗಿ ಅನೇಕ ಟೀಕಾಕಾರರು ಅವರನ್ನು ಪ್ರಚ್ಛನ್ನ ಕ್ರೈಸ್ತ ಎಂದು ಹಂಗಿಸಿದ್ದೂ ಇದೆ. ಇದರ ಜೊತೆಗೆ ಇಸ್ಲಾಂ, ಜೈನ, ಬೌದ್ಧ ಹಾಗೂ ಸಿಖ್ಖ್ ಧರ್ಮಗಳ ಅತ್ಯುತ್ತಮವಾದ ಅಂಶಗಳನ್ನೂ ಗಾಂಧಿಯವರ ಧರ್ಮದೃಷ್ಟಿಯಲ್ಲಿ ಕಾಣಬಹುದು. ಗಾಂಧಿಯವರ ರಾಜಕೀಯ ತತ್ತ್ವಜ್ಞಾನದಲ್ಲಿ ಹಾಸುಹೊಕ್ಕಂತಿರುವ ಈ ಬಹುಧರ್ಮೀಯತೆ ಎಲ್ಲ ಧರ್ಮಗಳನ್ನು ಸಮದೃಷ್ಟಿಯಲ್ಲಿ ಕಾಣುವಂತೆ ಹಾಗೂ ಧರ್ಮಗಳ ಕಟ್ಟುಕಟ್ಟಲೆಗಳ ಸಿಪ್ಪೆಗಿಂತ ಧರ್ಮಗಳ ಉದಾತ್ತ ಧ್ಯೇಯದ ಒಳಗಿನ ತಿರುಳನ್ನು ಮುಕ್ತಭಾವದಿಂದ ಸ್ವೀಕರಿಸುವಂತೆ ಮಾಡಿದೆ.

ಮನುಷ್ಯ ಸೃಷ್ಟಿಯಾಗಿರುವ ಧರ್ಮದಲ್ಲಿ, ಮನುಷ್ಯನ ಇತಿ-ಮಿತಿಗಳು ಖಂಡಿತವಾಗಿಯೂ ಪ್ರತಿಫಲಿಸಲೇಬೇಕು ಎಂದವರು ಹೇಳಿದ್ದರು. ಇದು ಧರ್ಮದ ಕುರಿತು ಶುದ್ಧಾಂಗ ಧಾರ್ಮಿಕನೊಬ್ಬ ತೋರಬಹುದಾದ ಕ್ರಾಂತಿಕಾರಿ ದೃಷ್ಟಿಯೇ ಸರಿ. ಹಾಗಾಗಿ ಗಾಂಧಿಯವರಿಗೆ ಮತಾಂತರ ಸೂಕ್ತವಾದ ಕ್ರಿಯೆಯಲ್ಲ. ತನ್ನ ಧರ್ಮದ ನೆಲೆಯಿಂದಲೇ ಇತರ ಧರ್ಮಗಳ ಒಳಿತನ್ನು ಅರಿಯುವ ಹಾಗೂ ಅದನ್ನು ತನ್ನಲ್ಲಿ ಒಳಗೊಳ್ಳುವ ನಿಲುವು ಗಾಂಧಿಯವರದಾಗಿತ್ತು. ಧರ್ಮವನ್ನು ಅದರ ಆಧ್ಯಾತ್ಮಿಕ ಹಾಗೂ ಸಾಮುದಾಯಿಕ ಆಯಾಮಗಳೆರಡರಲ್ಲೂ ಶೋಧಿಸುವ ಮತ್ತು ಪಾಲಿಸುವ ಪ್ರಯತ್ನವನ್ನು ಅವರು ನಿರಂತರವಾಗಿ ನಡೆಸಿದರು.

ಗಾಂಧಿಯವರು ಪ್ರತಿನಿಧಿಸಿದ ಹಿಂದೂಧರ್ಮ ಒಂದು ಅಸಂಘಟಿತ ವಿಶ್ವದೃಷ್ಟಿ. ಎಲ್ಲ ಮತಧರ್ಮಗಳ ಸತ್ತ್ವವನ್ನು ತನ್ನೊಳಗೆ ಧಾರಣೆ ಮಾಡಿಕೊಂಡು ಧಾರ್ಮಿಕ ಗಡಿರೇಖೆಗಳನ್ನು ದಾಟಿ ವಿಶ್ವಾತ್ಮಕತೆಯನ್ನು ಪ್ರತಿನಿಧಿಸುವಂತಹ ವೈಶ್ವಿಕ ದೃಷ್ಟಿ ಅವರದು. ಗಾಂಧಿಯವರ ಧರ್ಮದೃಷ್ಟಿಯಲ್ಲಿ ವ್ಯಕ್ತಗೊಳ್ಳುವ ಆಧ್ಯಾತ್ಮಿಕತೆ, ನೈತಿಕತೆ ಹಾಗೂ ಸಾಮುದಾಯಿಕತೆಗಳನ್ನು ಗಮನಿಸಿದ, ಗಾಂಧಿ ಬದುಕು-ಬರಹಗಳನ್ನು ಆಳವಾಗಿ ಅಭ್ಯಾಸ ಮಾಡಿದ ಬಿ.ಆರ್.ನಂದಾ, ಗಾಂಧಿಯವರನ್ನು ಹಿಂದೂಗಳೆಲ್ಲರ ಹಿಂದೂ ಎಂದು ಬಣ್ಣಿಸುತ್ತಾರೆ. ಅಂತೆಯೇ, ಹಿಂದೂ ಧರ್ಮದ ಕುರಿತ ಗಾಂಧಿಯವರ ಚಿಂತನೆಯನ್ನು ಆಧುನಿಕ ಹಿಂದೂ ಧರ್ಮದ ಅತ್ಯುತ್ತಮ ಅರ್ಥ ನಿರೂಪಣೆ ಎಂದೂ ಗುರುತಿಸಿದ್ದಾರೆ.

ವೈಕಂ ಸತ್ಯಾಗ್ರಹದ ಕಾಲಘಟ್ಟದಲ್ಲಿ ಅಸ್ಪೃಶ್ಯತೆಯ ಕುರಿತು ತಿರುವಾಂಕೂರು ಪಂಡಿತರ ಜೊತೆ ಗಾಂಧಿ ನಡೆಸಿದ ಸಂವಾದ, ಅಂಬೇಡ್ಕರ್‌ ಅವರ ಜೊತೆಗೆ ಹಿಂದೂ ಧರ್ಮದ ಸಾಮಾಜಿಕ ಸ್ವರೂಪಕ್ಕೆ ಸಂಬಂಧಿಸಿದಂತೆ ಅವರು ನಡೆಸಿದ ವಾಗ್ವಾದ, ತನ್ನ ಬ್ರಹ್ಮಚರ್ಯದ ಸಾಧನೆಯನ್ನು ಪರೀಕ್ಷಿಸಲು ನಡೆಸಿದ ಅವರ ಲೈಂಗಿಕ ಪ್ರಯೋಗಗಳು, ಹರಿಜನೋದ್ಧಾರ ಮತ್ತು ಹಿಂದೂ-ಮುಸ್ಲಿಂ ಬಾಂಧವ್ಯವನ್ನು ಅವರು ಸ್ವಾತಂತ್ರ್ಯ ಹೋರಾಟದ ಜೊತೆಗೆ ಬೆಸೆದ ರೀತಿ ಇವೆಲ್ಲವೂ ಗಾಂಧಿಯವರ ಆಧ್ಯಾತ್ಮಿಕ ನೆಲೆಯ ಧರ್ಮವನ್ನು ಹಾಗೂ ನೈತಿಕ ನೆಲೆಯ ರಾಜಕಾರಣವನ್ನು ಬಿಂಬಿಸುತ್ತವೆ. ಗಾಂಧಿ ಜಗತ್ತಿನ ಮುಂದಿರಿಸಿದ ಹಿಂದೂ ಧರ್ಮದೃಷ್ಟಿ ಪ್ರಜಾತಾಂತ್ರಿಕವಾದ ಮತ್ತು ಎಲ್ಲರನ್ನೂ ಒಳಗೊಳ್ಳುವ ಆಧುನಿಕ ಹಿಂದೂಧರ್ಮದ ಒಂದು ನವನವೀನ ಹೇಳಿಕೆ ಎನ್ನಬಹುದು. ನಿತ್ಯನೂತನವೆನ್ನುವ ಅರ್ಥದಲ್ಲಿ ತನ್ನನ್ನು ತಾನು ಸನಾತನಿ ಎಂದು ಕರೆದುಕೊಂಡ ಗಾಂಧಿ ಸಂಪ್ರದಾಯ ಮತ್ತು ಆಧುನಿಕತೆಯ ನಡುವೆ ವಿಶಿಷ್ಟ ಭಾರತೀಯ ಅನುಸಂಧಾನವನ್ನೇ ನಡೆಸಿದ್ದಾರೆ.

ಗಾಂಧಿಯವರ ಆಧ್ಯಾತ್ಮಿಕ ನೆಲೆಯ ಧರ್ಮದೃಷ್ಟಿಗೆ ಎದುರಾಗಿ ಸಾವರ್ಕರ್‌ ಅವರ ಧರ್ಮದೃಷ್ಟಿ ಆಧ್ಯಾತ್ಮಿಕತೆಗೆ ಹೊರತಾದ ಲೌಕಿಕವಾದಿ ನೆಲೆಯ ಧರ್ಮಪ್ರತಿಪಾದನೆಯನ್ನು ಮಾಡುತ್ತದೆ. ಗಾಂಧಿಯವರಂತೆ ಸಾವರ್ಕರ್‌ ಅವರದ್ದೂ ಸಂಪ್ರದಾಯ ಮತ್ತು ಆಧುನಿಕತೆಗಳ ನಡುವಿನ ಇನ್ನೊಂದು ಭಾರತೀಯ ಅನುಸಂಧಾನ. ಸಾವರ್ಕರ್‌ ಪ್ರತಿಪಾದಿಸುವ ಧರ್ಮ, ಆಧ್ಯಾತ್ಮಿಕತೆಯನ್ನು ನಿರಾಕರಿಸುತ್ತದೆ. ಮಾನವ ಬದುಕಿನ ಲೌಕಿಕ ಸಂಗತಿಗಳನ್ನು ಸಂಘಟಿಸುವ, ನಿರ್ವಹಿಸುವ ಮತ್ತು ನಿಯಂತ್ರಿಸುವ ಸೂತ್ರವಾಗಿ ಅವರು ಧರ್ಮವನ್ನು ಕಾಣುತ್ತಾರೆ. ಸಾವರ್ಕರ್‌ ಅವರ ಪ್ರಕಾರ ಅರ್ಥ ಮತ್ತು ಕಾಮನೆಗಳನ್ನು ಸಂಘಟಿಸುವ ನೀತಿ ಸಂಹಿತೆಯೇ ಧರ್ಮ. ಈ ಅರ್ಥದಲ್ಲಿ ಅವರು ಭಾರತದ ಚಿಂತಕ ಚಾಣಕ್ಯನ ಮುಂದುವರಿಕೆಯಾಗಿ ಕಾಣಿಸುತ್ತಾರೆ.

ಸಾವರ್ಕರ್‌ ಅವರಿಗೆ ಧರ್ಮ ಒಂದು ಸಾಧನ ಮತ್ತು ಆ ಧರ್ಮವನ್ನು ‘ಬಳಸಿಕೊಂಡು’ ಮಾಡುವ ರಾಜಕಾರಣ ಒಂದು ಸಾಧನೆ. ತಾವು ಪ್ರತಿಪಾದಿಸಿದ ರಾಷ್ಟ್ರವಾದಿ ರಾಜಕಾರಣದ ಯಶಸ್ಸಿಗಾಗಿ ಅವರು ಎಲ್ಲ ಬಗೆಯ ಧಾರ್ಮಿಕ ಸಂಪನ್ಮೂಲಗಳನ್ನು ಯಥೇಚ್ಛವಾಗಿ ಬಳಸಿದರು. ಧರ್ಮಗ್ರಂಥಗಳು, ಧಾರ್ಮಿಕ ಪ್ರತಿಮೆಗಳು ಸಾವರ್ಕರ್‌ ಅವರ ರಾಷ್ಟ್ರವಾದಿ ಸಂಕಥನದಲ್ಲಿ ಕಿಕ್ಕಿರಿದಿವೆ. ಬಹುಶಃ, ಸಾವರ್ಕರ್‌ ಅವರಷ್ಟು ಯಶಸ್ವಿಯಾಗಿ ಧರ್ಮವನ್ನು ಸಾಂಸ್ಕೃತಿಕ ಬಂಡವಾಳವಾಗಿ ಪರಿವರ್ತಿಸಿ ಬಳಸಿದಂತಹ ಇನ್ನೊಬ್ಬ ಚತುರ ರಾಜಕೀಯ ಧುರೀಣ ಇಲ್ಲ.

ಧರ್ಮವನ್ನು ತಮ್ಮ ರಾಜಕಾರಣದ ನೆಲೆಯನ್ನಾಗಿಸಿದ ಸಾವರ್ಕರ್ ಖಾಸಗಿ ಜೀವನದಲ್ಲಿ ಯಾವುದೇ ಬಗೆಯ ಧಾರ್ಮಿಕ ನಂಬಿಕೆಯನ್ನು ಹೊಂದಿದವರಲ್ಲ. ಆಶಿಶ್ ನಂದಿಯವರು ಸಾವರ್ಕರ್‌ ಅವರನ್ನು ಪಾಕಿಸ್ತಾನದ ಸಂಸ್ಥಾಪಕ ಮುಹಮ್ಮದ್ ಅಲಿ ಜಿನ್ನಾರ ಜೊತೆ ಹೋಲಿಸುತ್ತಾರೆ. ಸಾವರ್ಕರ್ ಹಿಂದೂ ಜನಾಂಗೀಯತೆಯ ಆಧಾರದಲ್ಲಿ ತಮ್ಮ ರಾಷ್ಟ್ರವಾದ ರೂಪಿಸಿಕೊಂಡರೆ, ಜಿನ್ನಾ ಮುಸ್ಲಿಂ ಜನಾಂಗೀಯತೆಯ ನೆಲೆಯಲ್ಲಿ ಪಾಕಿಸ್ತಾನದ ಕನಸು ಕಂಡರು. ಜನರಲ್ಲಿ ಅವ್ಯಕ್ತವಾಗಿ ಮಡುಗಟ್ಟಿದ್ದ ಧಾರ್ಮಿಕ ಭಾವನೆಗಳನ್ನು ತಮ್ಮತಮ್ಮ ರಾಜಕಾರಣಗಳಿಗಾಗಿ ಬಳಸಿಕೊಂಡ ಈ ಇಬ್ಬರು ಮಹಾಶಯರೂ ತಮ್ಮ ಖಾಸಗಿ ಜೀವನದಲ್ಲಿ ನಾಸ್ತಿಕರು ಮತ್ತು ಬದುಕಿನ ಸೊಗಸುಗಾರಿಕೆಯನ್ನು ಆಸ್ವಾದಿಸುವ ರಸಿಕರು.

ಗಾಂಧಿಯವರ ‘ಹಿಂದ್ ಸ್ವರಾಜ್’ 1908ರಲ್ಲಿ ಅವರು ಇಂಗ್ಲೆಂಡಿನಿಂದ ದಕ್ಷಿಣ ಆಫ್ರಿಕಾಕ್ಕೆ ಸಮುದ್ರಯಾನದ ಮೂಲಕ ಮರಳುತ್ತಿದ್ದಾಗ ವಿಶಿಷ್ಟ ಆಧ್ಯಾತ್ಮಿಕ ಪ್ರೇರಣೆಯಿಂದ ಬರೆದ ಕೃತಿ. ಅದು ರಾಷ್ಟ್ರದ ಗಡಿರೇಖೆಗಳಿಗಿಂತ ಹೊರತಾದ ಸ್ಥಳಾವಕಾಶದಲ್ಲಿ ಹೊರಹೊಮ್ಮಿದ ಚಿಂತನೆಯೂ ಹೌದು. ಆಧುನಿಕ ನಾಗರಿಕತೆಯ ಭೌತಿಕತೆ, ಯಾಂತ್ರಿಕತೆ ಹಾಗೂ ಕೇಂದ್ರೀಯತೆಗಳಿಗೆ ಎದುರಾಗಿ ಗಾಂಧಿ ಆಧ್ಯಾತ್ಮಿಕ, ನೈತಿಕ ಹಾಗೂ ವಿಕೇಂದ್ರೀಕೃತ ಪರ್ಯಾಯವನ್ನು ನಮ್ಮ ಮುಂದಿರಿಸುತ್ತಾರೆ. ಹಿಂದ್ ಸ್ವರಾಜ್ ಭಾರತ ನಿರ್ದಿಷ್ಟ ಕಲ್ಪನೆಯಾದರೂ ಅದು ಭಾರತಕ್ಕಷ್ಟೇ ಸೀಮಿತವಾದದ್ದಲ್ಲ. ಭಾರತದಲ್ಲಿ ಆ ವೇಳೆಗಾಗಲೇ ರೂಪುಗೊಳ್ಳುತ್ತಿದ್ದ ಸ್ವಾತಂತ್ರ್ಯ ಹೋರಾಟವನ್ನು ಆಧುನಿಕ ನಾಗರಿಕತೆಯ ವಿರುದ್ಧದ ವಿಶ್ವ ಹೋರಾಟವೆಂದು ಬಣ್ಣಿಸಿದ ಗಾಂಧಿ, ಈ ಹೋರಾಟದಲ್ಲಿ ಬ್ರಿಟಿಷ್ ಸಮುದಾಯದ ಪಾಲ್ಗೊಳ್ಳುವಿಕೆಯ ಅಗತ್ಯವನ್ನೂ ಮನಗಂಡಿದ್ದರು. ಹೀಗೆ, ಹಿಂದ್ ಸ್ವರಾಜ್ ಇಡೀ ಮಾನವ ಸಮುದಾಯದ ಸ್ವಾತಂತ್ರ್ಯ ಮತ್ತು ಘನತೆಯ ಪ್ರತೀಕವಾಗಿ ಕಾಣುತ್ತದೆ. ತಮ್ಮ ಸ್ವರಾಜ್ಯವೆನ್ನುವ ಈ ಉಜ್ವಲ ಆದರ್ಶವನ್ನು ಅವರು ಅಹಿಂಸೆಯ ಅಡಿಪಾಯದಲ್ಲಿ ಸತ್ಯಾಗ್ರಹ, ಸ್ವಾವಲಂಬನೆ ಹಾಗೂ ಸರ್ವೋದಯದಂತಹ ಮೌಲಿಕ ಆಶಯಗಳ ಜೊತೆಗೆ ಬೆಸೆದು ಕಲ್ಪಿಸಿದರು.

ತಮ್ಮ ಸ್ವರಾಜ್ಯದ ವಿಶ್ವಕಲ್ಪನೆಯನ್ನು ಗಾಂಧಿ ಭಾರತದ ನಿರ್ದಿಷ್ಟ ಚಾರಿತ್ರಿಕ ಕಾಲದಲ್ಲಿ ನೆಲೆ
ಯೂರಿಸಲು ಪ್ರಯತ್ನಿಸುತ್ತಾರಾದರೂ ಅವರಿಗೆ ಚರಿತ್ರೆ ಎನ್ನುವ ಆಧುನಿಕ ಜ್ಞಾನಮೀಮಾಂಸೆಯ ಪ್ರಮೇಯ-ಪ್ರಮಾಣಗಳು ಮುಖ್ಯವಲ್ಲ. ಹಾಗಾಗಿ ಗಾಂಧಿ ಆಧುನಿಕ ಚರಿತ್ರಾಶಾಸ್ತ್ರದ ಬೌದ್ಧಿಕ ಪ್ರಭುತ್ವವನ್ನು ಬದಿಗೆ ಸರಿಸಿ ತಮ್ಮದೇ ಆದ ವಿಶಿಷ್ಟ ಶೈಲಿಯಲ್ಲಿ ಗತ, ವರ್ತಮಾನ ಹಾಗೂ ಭವಿಷ್ಯಗಳನ್ನು ಮರುಸಂಘಟಿಸಿದರು.

ಗಾಂಧಿಯವರ ಸ್ವರಾಜ್ಯದ ಕಲ್ಪನೆಗೆ ಪ್ರತಿಯಾಗಿ ಸಾವರ್ಕರ್ ಹಿಂದೂ ರಾಷ್ಟ್ರದ ಕಲ್ಪನೆಯನ್ನು ಮಾಡುತ್ತಾರೆ. 1928ರಲ್ಲಿ ಪ್ರಕಟಗೊಂಡ ಅವರ ‘ಹಿಂದುತ್ವ: ಹಿಂದೂ ಅಂದರೆ ಯಾರು?’ ಎನ್ನುವ ಕೃತಿ ನಿಖರವಾಗಿ ಹಿಂದೂ ರಾಷ್ಟ್ರದ ಕಲ್ಪನೆಯನ್ನು ನಮ್ಮ ಮುಂದಿರಿಸುತ್ತದೆ. ಸಪ್ತ ಸಿಂಧೂ ನದೀಮುಖಜ ಭೂಮಿಯೇ ಅವರ ಹಿಂದೂ ರಾಷ್ಟ್ರದ ಭೌಗೋಳಿಕ ನೆಲೆ. ಈ ಭೂಪ್ರದೇಶದಲ್ಲಿ ಬದುಕುವ ಜನಸಮುದಾಯಗಳ ದಟ್ಟವಾದ ನೆನಪುಗಳೇ ಅದರ ಚರಿತ್ರೆ. ತಾವು ಬದುಕಿದ ನೆಲವನ್ನು ಪುಣ್ಯಭೂಮಿಯೆಂದು ಬಗೆಯುವ ಜನರೇ ಅದರ ಪ್ರಜೆಗಳು. ಹೀಗೆ, ಭೌಗೋಳಿಕತೆ, ಜನಾಂಗೀಯ ಸಾಮುದಾಯಿಕತೆ, ಚರಿತ್ರೆ ಹಾಗೂ ಪೌರತ್ವದ ಸ್ಫುಟವಾದ ಪರಿಕಲ್ಪನೆಗಳಲ್ಲಿ ಸಾವರ್ಕರ್‌ ಅವರ ಹಿಂದೂ ರಾಷ್ಟ್ರ ಸಾಕಾರಗೊಳ್ಳುತ್ತದೆ. ರಾಜಕೀಯವನ್ನು ಹಿಂದೂಗೊಳಿಸಿ ಹಾಗೂ ಹಿಂದೂವನ್ನು ಸಶಕ್ತಗೊಳಿಸಿ ಎನ್ನುವ ತಮ್ಮ ಧ್ಯೇಯ ವಾಕ್ಯದ ಬೆಳಕಿನಲ್ಲಿ ಸಾವರ್ಕರ್ ಹಿಂದೂ ರಾಷ್ಟ್ರದ ಭವಿಷ್ಯವನ್ನು ಕಾಣುತ್ತಾರೆ.

ಗಾಂಧೀಜಿ ಮತ್ತು ಸಾವರ್ಕರ್‌ ಅವರ ವಿಭಿನ್ನ ಪ್ರಕೃತಿಯ ಧರ್ಮದೃಷ್ಟಿ ಮತ್ತು ಅವು ಮುಂದಿಡುವ ರಾಜಕೀಯ ಆದರ್ಶಗಳ ನಡುವೆ ನಮ್ಮ ಆಯ್ಕೆ ಯಾವುದು ಎನ್ನುವುದು ನಮ್ಮ ರಾಜಕಾರಣದ ಸ್ವರೂಪವನ್ನು ಬಿಂಬಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT