ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾದ್ರಿಗಳೇಕೆ ಮದುವೆ ಆಗಬಾರದು?

Last Updated 1 ಫೆಬ್ರುವರಿ 2020, 19:30 IST
ಅಕ್ಷರ ಗಾತ್ರ

‘ನಾನು ಮೌನವಾಗಿರಲು ಸಾಧ್ಯವಿಲ್ಲ...’

–ಕ್ಯಾಥೊಲಿಕ್‌ ಧರ್ಮಸಭೆಯ ಪರಮೋಚ್ಛ ಪದವಿಯಾದ ಪೋಪ್‌ ಹುದ್ದೆಯಲ್ಲಿದ್ದು, ನಂತರ ಆ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ ಹೊರಬಂದ, ಕಳೆದ 7 ವರ್ಷಗಳಿಂದ ವಿಶ್ರಾಂತ ಪೋಪ್‌ ಆಗಿರುವ 16ನೇ ಬೆನೆಡಿಕ್ಟ್‌ ಅವರು ಇತ್ತೀಚೆಗೆ ಸಾರ್ವಜನಿಕವಾಗಿ ಹೇಳಿದ ಜೋರು ಮಾತಿದು.

ಈ ಮಾತಿನ ಜೊತೆಗೆ ಕ್ಯಾಥೊಲಿಕ್‌ ಧರ್ಮಸಭೆಯಲ್ಲಿ ‘ಮದುವೆಯಾದವರು ಪಾದ್ರಿಯಾಗುವ’ ಅಥವಾ ‘ಪಾದ್ರಿಗಳಿಗೆ ಮದುವೆಗೆ ಅನುಮತಿ ಕೊಡುವ’ ಜಿಜ್ಞಾಸೆ ಮತ್ತೆ ಮುನ್ನೆಲೆಗೆ ಬಂದಿದೆ. ವಿಶ್ರಾಂತ ಪೋಪ್‌ ಬೆನೆಡಿಕ್ಟ್ ಅವರ ಪ್ರತಿರೋಧ ಚರ್ಚೆಯನ್ನು ಬಿರುಸಾಗಿಸಿದೆ.

2013ರಲ್ಲಿ ಬೆನೆಡಿಕ್ಟ್‌ ಅವರು ಪೋಪ್‌ ಪದವಿ ತ್ಯಜಿಸಿದಾಗ ಇಡೀ ವಿಶ್ವವೇ ನಿಬ್ಬೆರಗಾಗಿತ್ತು. ಕ್ಯಾಥೊಲಿಕ್‌ ಧರ್ಮಸಭೆಯ 600 ವರ್ಷಗಳ ಇತಿಹಾಸದಲ್ಲಿ ಮೊದಲ ಬಾರಿಗೆ ಪೋಪ್‌ ಒಬ್ಬರು ಪದತ್ಯಾಗ ಮಾಡಿದ್ದರು.‘ಕ್ಯಾಥೊಲಿಕ್‌ ಧರ್ಮಸಭೆ ಎಂಬ ದೋಣಿ ನನ್ನದಲ್ಲ. ನಮ್ಮದೂ ಅಲ್ಲ. ಅದು ದೇವರದ್ದು. ಆ ದೋಣಿ ಮುಳುಗಲು ಅವನು ಬಿಡುವುದಿಲ್ಲ’ ಎಂದು ಅವರು ತಮ್ಮ ವಿದಾಯದ ಭಾಷಣದಲ್ಲಿ ಹೇಳಿದ್ದರು. ವಿವಾಹಿತರಿಗೆ ಯಾಜಕ ದೀಕ್ಷೆ ನೀಡುವುದಕ್ಕೆ ಆಗ ಅವರ ಸ್ಪಷ್ಟ ವಿರೋಧವಿತ್ತು.

ಈಗಲೂ ಅವರು ಅದನ್ನೇ ಗಟ್ಟಿಧ್ವನಿಯಲ್ಲಿ ಹೇಳುತ್ತಿದ್ದಾರೆ. ‘ವಿವಾಹಿತರಿಗೆ ಯಾಜಕ ದೀಕ್ಷೆ ನೀಡುವ ನಿರ್ಧಾರವು, ಪೌರೋಹಿತ್ಯ ಬ್ರಹ್ಮಚರ್ಯವನ್ನು ಅಪಮೌಲ್ಯಗೊಳಿಸುವ ಸಂಚು. ಇದು ಕ್ಯಾಥೊಲಿಕ್‌ ಧರ್ಮಸಭೆಯ ಪರಂಪರಾಗತ ನಿಯಮಗಳಿಗೆ ವಿರುದ್ಧವಾದದ್ದು’ ಎನ್ನುವುದು ಅವರ ವಾದ.

‘ಕೆಲವು ವಿಶೇಷ ಸಂದರ್ಭಗಳಲ್ಲಿ ವಿವಾಹಿತ ಪುರುಷರನ್ನು ಯಾಜಕರನ್ನಾಗಿ ನೇಮಿಸಬಹುದು’ ಎಂದು ಕಳೆದ ವರ್ಷ ವ್ಯಾಟಿಕನ್‌ನಲ್ಲಿ ಅಮೆಜಾನ್‌ ವಲಯದ ಬಿಷಪ್‌ಗಳ ಸಮಿತಿ ನಿರ್ಣಯ ಕೈಗೊಂಡಿತ್ತು. ಈ ನಿರ್ಣಯದ ವಿರುದ್ಧ ಬೆನೆಡಿಕ್ಟ್‌ ಕಿಡಿಕಾರುತ್ತಿದ್ದಾರೆ.

ಸಾಮಾನ್ಯವಾಗಿ ನಿವೃತ್ತಿಯ ನಂತರ ಪೋಪ್‌ಗಳು ಕ್ಯಾಥೊಲಿಕ್‌ ಧರ್ಮಸಭೆಯ ನೀತಿ ನಿರೂಪಣೆಯ ವಿಚಾರದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ. ಸಾರ್ವಜನಿಕ ಅಭಿಪ್ರಾಯಗಳನ್ನು ರೂಪಿಸಬಲ್ಲ ಹೇಳಿಕೆಗಳನ್ನೂ ನೀಡುವುದಿಲ್ಲ. ಆದರೆ, 92 ವರ್ಷ ವಯಸ್ಸಿನ ಬೆನೆಡಿಕ್ಟ್‌, ಈ ಸಂಪ್ರದಾಯ ಮುರಿದು, ಸಾರ್ವಜನಿಕವಾಗಿ ಮಾತನಾಡಿರುವುದು ವ್ಯಾಟಿಕನ್‌ ತಜ್ಞರಿಗೆ ಅಚ್ಚರಿ ಮೂಡಿಸಿದೆ.

ಪ್ರಖಾಂಡ ಧರ್ಮತಜ್ಞರೂ ಆಗಿರುವ ಜರ್ಮನಿಯ ಬೆನೆಡಿಕ್ಟ್‌, ತಾವು ಪೋಪ್‌ ಆಗಿದ್ದಾಗ ಕ್ಯಾಥೊಲಿಕ್‌ ಧರ್ಮಸಭೆಯ ನವೀಕರಣಕ್ಕೆ ಭಾರಿ ಮಹತ್ವ ನೀಡಿದ್ದರು. ಕ್ಯಾಥೊಲಿಕ್‌ ಪಾದ್ರಿಗಳು ಮಕ್ಕಳ ಮೇಲೆ ನಡೆಸಿದ್ದ ಲೈಂಗಿಕ ದೌರ್ಜನ್ಯ ಅವರು ಅಧಿಕಾರದಲ್ಲಿದ್ದಾಗ ದೊಡ್ಡ ಸುದ್ದಿಯಾಗಿತ್ತು. ಅದುವರೆಗೆ ಪಾದ್ರಿಗಳ ಮೇಲಿನ ಇಂತಹ ಆರೋಪಗಳನ್ನು ಕ್ಯಾಥೊಲಿಕ್‌ ಧರ್ಮಸಭೆ ಅಲ್ಲೆಗಳೆದಿತ್ತು. ಆದರೆ, ಪೋಪ್‌ ಬೆನೆಡಿಕ್ಟ್‌ ಅವರು ಈ ಆರೋಪಗಳನ್ನು ಒಪ್ಪಿಕೊಂಡು, ಅದನ್ನು ಸರಿಪಡಿಸಲು ಪ್ರಯತ್ನಿಸಿದ್ದರು.

ಧರ್ಮಸಭೆಯ ನವೀಕರಣಕ್ಕೆ ಮಾತ್ರವಲ್ಲ, ಸಮಕಾಲೀನ ಸಮಸ್ಯೆಗಳಿಗೂ ಅವರು ತ್ವರಿತವಾಗಿ ಸ್ಪಂದಿಸುತ್ತಿದ್ದರು. ಪರಿಸರ ಸಂರಕ್ಷಣೆ ಕುರಿತು ಅತೀವ ಕಾಳಜಿ ಹೊಂದಿದ್ದ ಬೆನೆಡಿಕ್ಟ್‌ ‘ಗ್ರೀನ್‌ ಪೋಪ್‌’ ಎಂದೇ ಹೆಸರಾಗಿದ್ದರು. ಕ್ಯಾಥೊಲಿಕ್‌ ಚರ್ಚ್‌ನಲ್ಲಿ ಪುರುಷರಷ್ಟೇ ಮಹಿಳೆಯರಿಗೂ ಸಮಾನ ಸ್ಥಾನಮಾನ ಇದೆ ಎಂದು ಪ್ರತಿಪಾದಿಸಿದ್ದರು. ತಮ್ಮ ಪಾಂಡಿತ್ಯದ ಮೂಲಕ ಕ್ಯಾಥೊಲಿಕ್‌ ಧರ್ಮಸಭೆಯ ದಿಕ್ಸೂಚಿಯಾಗಿದ್ದ ಅವರು, ಈಗ ಪೌರೋಹಿತ್ಯ ಬ್ರಹ್ಮಚರ್ಯ ವಿಷಯದಲ್ಲಿ ಮುಂದಿಟ್ಟಿರುವ ಅಭಿಪ್ರಾಯಕ್ಕೆ ಭಾರಿ ಮಹತ್ವ ಇದೆ ಎನ್ನುತ್ತಾರೆ ಕ್ಯಾಥೊಲಿಕ್‌ ಕಾನೂನು ತಜ್ಞರು.

ಕಾರ್ಡಿನಲ್‌ ರಾಬರ್ಟ್‌ ಸಾರಾ ಅವರೊಂದಿಗೆ ಬೆನೆಡಿಕ್ಟ್ ಜಂಟಿಯಾಗಿ ಪುಸ್ತಕವೊಂದನ್ನು ಬರೆದಿದ್ದಾರೆ. ಕ್ರೈಸ್ತ ಪಾದ್ರಿಗಳು ಪಾಲಿಸಬೇಕಾದ ಪೌರೋಹಿತ್ಯ ಬ್ರಹ್ಮಚರ್ಯದ ಕುರಿತು ಅದರಲ್ಲಿ ವಿಶ್ಲೇಷಿಸಿದ್ದಾರೆ.

‘ಪೌರೋಹಿತ್ಯ ಮತ್ತು ಬ್ರಹ್ಮಚರ್ಯ ರಕ್ಷಣೆ’ ಕುರಿತು ಅವರು ಪಟ್ಟಿ ಮಾಡಿರುವ ಟಿಪ್ಪಣಿಗಳನ್ನು ಆಧರಿಸಿ ಫ್ರಾನ್ಸ್‌ನ ‘ಲೆ ಫಿಗರೊ’ ದಿನಪತ್ರಿಕೆ ವಿಶೇಷ ಲೇಖನ ಪ್ರಕಟಿಸಿದೆ. ಇದು ಜಾಗತಿಕಮಟ್ಟದಲ್ಲಿ ಕ್ಯಾಥೊಲಿಕ್‌ ಸಮುದಾಯದಲ್ಲಿ ಹೊಸ ಚರ್ಚೆಯನ್ನೇ ಹುಟ್ಟುಹಾಕಿದೆ.

‘ವಿವಾಹಿತ ಸದ್ಗುಣ ಪುರುಷರು ಪೌರೋಹಿತ್ಯಕ್ಕೆ ಬರಲಿದ್ದಾರೆ’ ಎಂಬ ವಾಕ್ಯದೊಂದಿಗೆ ಈ ಲೇಖನ ಆರಂಭಗೊಳ್ಳುತ್ತದೆ. ಕ್ಯಾಥೊಲಿಕ್‌ ಚರ್ಚ್‌ ಮತ್ತು ಪೌರೋಹಿತ್ಯ ಬ್ರಹ್ಮಚರ್ಯದ ಮೇಲೆ ನಂಬಿಕೆ ಹೊಂದಿರುವ ಪ್ರತಿಯೊಬ್ಬರೂ ಈ ವಿಷಯದ ಬಗ್ಗೆ ಮರುಚಿಂತನೆ ನಡೆಸುವ ತುರ್ತು ಅಗತ್ಯ ಇದೆ’ ಎನ್ನುವುದು ಬೆನೆಡಿಕ್ಟ್‌ ಅವರ ಸ್ಪಷ್ಟಮಾತು.

ದಕ್ಷಿಣ ಅಮೆರಿಕದ ಅಮೆಜಾನ್‌ ಪ್ರದೇಶಗಳಲ್ಲಿ ಕೈಸ್ತ ಪಾದ್ರಿಗಳ ಕೊರತೆತೀವ್ರವಾಗಿದೆ. ಇಂತಹ ಪ್ರದೇಶಗಳಲ್ಲಿ ಕ್ಯಾಥೊಲಿಕ್‌ ಸಮುದಾಯವನ್ನು ಮುನ್ನಡೆಸಲು ವಿವಾಹಿತ ಪುರುಷರಿಗೆ ಯಾಜಕ ದೀಕ್ಷೆಗೆ ಅನುಮತಿ ನೀಡಬೇಕು ಎಂದು ಅಲ್ಲಿನ ಬಿಷಪ್‌ ಒಕ್ಕೂಟವು, ಕಳೆದ ವರ್ಷ ಈಗಿನ ಪೋಪ್‌ ಫ್ರಾನ್ಸಿಸ್‌ ಅವರನ್ನು ಆಗ್ರಹಿಸಿತ್ತು. ಪೋಪ್‌ ಫ್ರಾನ್ಸಿಸ್ ಅವರೂ, ಇದಕ್ಕೆ ಸಹಮತ ಹೊಂದಿದ್ದಾರೆ ಎನ್ನಲಾಗುತ್ತಿದೆ. ಆದರೆ, ಇದುವರೆಗೆ ಯಾವುದೇ ಅಧಿಕೃತ ನಿರ್ಧಾರ ಪ್ರಕಟಿಸಿಲ್ಲ. ‘ಕ್ಯಾಥೊಲಿಕ್‌ ಧರ್ಮಸಭೆ ಎದುರಿಸುತ್ತಿರುವ ಅನೇಕ ಸಮಸ್ಯೆಗಳಿಗೆ ಪರಂಪರಾಗತ ಮಾರ್ಗಗಳಿಂದ ಪರಿಹಾರ ಕಂಡುಕೊಳ್ಳಲು ಸಾಧ್ಯವಿಲ್ಲ. ಕೆಲವು ಬದಲಾವಣೆಗೆ ತೆರೆದುಕೊಳ್ಳಬೇಕು’ ಎಂದಷ್ಟೇ ಪೋಪ್‌ ಫ್ರಾನ್ಸಿಸ್‌ ಹೇಳಿದ್ದಾರೆ.

ವಿವಾಹಿತರಿಗೆ ಪೌರೋಹಿತ್ಯಕ್ಕೆ ಅವಕಾಶ ನೀಡಬಾರದು ಎನ್ನುವುದರ ಕುರಿತು ಸಾರ್ವಜನಿಕವಾಗಿ ಮಾತನಾಡಿರುವುದರ ಹಿಂದೆ ರಾಜಕೀಯ ತಂತ್ರಗಾರಿಕೆ ಇದೆಯೆ? ಅಥವಾ ಇದೊಂದು ‘ಪವರ್‌ ಗೇಮ್‌’ ಇರಬಹುದೆ? ಬೆನೆಡಿಕ್ಟ್‌ ಮತ್ತು ಕಾರ್ಡಿನಲ್ ಸಾರಾ ಇಬ್ಬರೂ ಇದನ್ನು ಅಲ್ಲಗಳೆಯುತ್ತಾರೆ.

‘ಬ್ರಹ್ಮಚರ್ಯ ಪಾಲಿಸದೆ ಭಗವಂತನ ಸೇವೆಯಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳುವುದು ಕಷ್ಟ’ ಎನ್ನುವುದು ಬೆನೆಡಿಕ್ಟ್‌ ಅಭಿಪ್ರಾಯ. ‘ಬ್ರಹ್ಮಚರ್ಯವು ಒಂದು ಪ್ರಯೋಗ ಆಗಿದ್ದರೂ, ಅದು ಒಂದು ವಿಮೋಚನೆ’ ಎನ್ನುವುದು ಕಾರ್ಡಿನಲ್‌ ಸಾರಾ ಅವರ ವಿಶ್ಲೇಷಣೆ.

‘ವಿವಾಹಿತ ಪುರುಷರಿಗೆ ಪೌರೋಹಿತ್ಯಕ್ಕೆ ಅವಕಾಶ ನೀಡುವ ಮೂಲಕ ಪಾದ್ರಿಗಳ ಕೊರತೆ ಇರುವ ಸ್ಥಳಗಳಲ್ಲಿ ಅವರನ್ನು ಭರ್ತಿ ಮಾಡುವ ಕ್ಯಾಥೊಲಿಕ್‌ ಧರ್ಮಸಭೆಯ ಆಲೋಚನೆಯು ಒಮ್ಮೆ ವಿಫಲವಾಗಿದೆ. ಮತ್ತೆ ಈ ಭಾವನಾತ್ಮಕ ವಿಷಯವು ಕ್ಯಾಥೊಲಿಕ್ ಚರ್ಚ್ ವ್ಯವಸ್ಥೆಯಲ್ಲಿ ಬಿರುಕು ಮೂಡಿಸಬಹುದು’ ಎನ್ನುವುದು ಸಮುದಾಯದೊಳಗಿನ ವಿಮರ್ಶಕರ ಎಚ್ಚರಿಕೆ.

ನ್ಯಾಷನಲ್ ಕ್ಯಾಥೊಲಿಕ್‌ ಧರ್ಮಸಭೆಯ ವರದಿಗಾರ ಜೋಶುವಾ ಮೆಕ್ಲೀ, ಬೆನೆಡಿಕ್ಟ್‌ ವಾದದ ಬಗ್ಗೆ ಅಪಸ್ವರ ಎತ್ತಿದ್ದಾರೆ. ‘ಮಾಜಿ ಪೋಪ್ ತಮ್ಮ ಉತ್ತರಾಧಿಕಾರಿ ಪ್ರಸ್ತುತ ಪರಿಗಣಿಸುವ ಪ್ರಕ್ರಿಯೆಯ ಬಗ್ಗೆ ಸಾರ್ವಜನಿಕವಾಗಿ ಮಾತನಾಡಿರುವುದು ವಿಶ್ವಾಸಾರ್ಹವಲ್ಲ’ ಎಂದು ಟ್ವೀಟ್ ಮಾಡಿದ್ದಾರೆ. ‘ಬೆನೆಡಿಕ್ಟ್‌ ನಿವೃತ್ತಿಯ ನಂತರ ಕ್ಯಾಥೊಲಿಕ್‌ ಧರ್ಮಸಭೆಯ ನಿಯಮಗಳನ್ನು ಉಲ್ಲಂಘಿಸಿದ್ದಾರೆ’ ಎಂದು ಹಲವರು ದೂರಿದ್ದಾರೆ.

ಇದರ ಮಧ್ಯೆ ಸಮನ್ವಯ ವಾದವೊಂದು ಕೇಳಿಸುತ್ತಿದೆ. ‘ಪಾದ್ರಿಗಳ ಕೊರತೆ ನೀಗಿಸಲು, ಕ್ಯಾಥೊಲಿಕ್‌ ಧರ್ಮಸಭೆ ಹೊಸ ಕಾನೂನು ರಚಿಸುವ ಅಗತ್ಯವಿಲ್ಲ. ಈಗಿರುವ ಕಾನೂನಿನಲ್ಲೇ ಸ್ವಲ್ಪ ಸಡಿಲಿಕೆ ನೀಡಿದರೆ ಸಮಸ್ಯೆ ಪರಿಹಾರ ಆಗುತ್ತದೆ’ ಎನ್ನುವುದು ಈ ಗುಂಪಿನ ವಾದ. ಅದರಂತೆ, ವಿವಾಹಿತ ಆಂಗ್ಲಿಕನ್ ಪಾದ್ರಿಗಳಿಗೆ ಕ್ಯಾಥೊಲಿಕ್ ಧರ್ಮಕ್ಕೆ ಮತಾಂತರಗೊಳ್ಳಲು ಅವಕಾಶ ನೀಡಿದರೆ, ಪಾದ್ರಿಗಳ ಕೊರತೆ ನೀಗಿಸಬಹುದು.

ಆದರೆ, ಕ್ಯಾಥೊಲಿಕ್‌ ಚರ್ಚ್‌ನ ಸಂಪ್ರದಾಯವಾದಿ ಗುಂಪು ಮದುವೆಯಾದವರು ಪಾದ್ರಿಗಳಾಗುವುದನ್ನು ಕಟುವಾಗಿ ವಿರೋಧಿಸುತ್ತಿದೆ. ವಿಶೇಷವಾಗಿ ಯೂರೋಪ್ ಮತ್ತು ಉತ್ತರ ಅಮೆರಿಕದಲ್ಲಿ ಈ ಗುಂಪು ಪ್ರಾಬಲ್ಯ ಹೊಂದಿದೆ. ವಿವಾಹಿತರಿಗೆ ಪಾದ್ರಿಗಳಾಗಲು ಅವಕಾಶ ನೀಡಿದರೆ ಅದು ಜಾಗತಿಕವಾಗಿ ಕ್ರೈಸ್ತ ಪೌರೋಹಿತ್ಯ ಬ್ರಹ್ಮಚರ್ಯವನ್ನು ನಿರ್ಮೂಲನೆ ಮಾಡಲು ದಾರಿ ಮಾಡಿಕೊಡಲಿದೆ ಎನ್ನುವುದು ಸಂಪ್ರದಾಯವಾದಿಗಳ ಆತಂಕ. ಒಟ್ಟಾರೆ ಮದುವೆಯ ಪ್ರಸ್ತಾಪ ವ್ಯಾಟಿಕನ್‌ನಲ್ಲಿ ಕೋಲಾಹಲ ಉಂಟು ಮಾಡಿರುವುದಂತೂ ಸುಳ್ಳಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT