ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೌಹಾರ್ದ ಯುಗಾದಿ: ಸಾಮರಸ್ಯ ಲಕ್ಕಸಕೊಪ್ಪದ ಅಂತಃಕರಣ

ಯುಗಾದಿಗೆ ಜಾಗರಣೆ, ರಮ್ಜಾನ್‌ಗೆ ರೋಜಾ ಆಚರಣೆ
Last Updated 12 ಏಪ್ರಿಲ್ 2021, 20:08 IST
ಅಕ್ಷರ ಗಾತ್ರ

ಮನುಷ್ಯರ ನಡುವೆ ಅಪನಂಬಿಕೆ ಹೆಚ್ಚುತ್ತಿರುವ ವಿಷಮ ಕಾಲಘಟ್ಟದಲ್ಲಿ ಮನಸ್ಸಿಗೆ ಮುದ ನೀಡುವ ಯುಗಾದಿ ಬಂದಿದೆ. ಹೊಸ ವರ್ಷದ ಹರ್ಷದ ಜತೆಗೆ ಈ ಯುಗಾದಿಯು ಮನಸ್ಸುಗಳನ್ನು ಬೆಸೆಯುವ ಸಂದರ್ಭವೂ ಹೌದು. ರಾಜ್ಯದ ಕೆಲವೆಡೆಗಳಲ್ಲಿರುವ ಮಾದರಿ ಎನ್ನಬಹುದಾದ ಸಾಮರಸ್ಯದ ನಿದರ್ಶನಗಳನ್ನು ಹೆಕ್ಕಿ ತಂದು ನಿಮ್ಮ ಮುಂದಿರಿಸಿದ್ದೇವೆ

ಬಾಗಲಕೋಟೆ: ‘ನಮ್ಮಲ್ಲಿ ಅವರಿವರು ಅನ್ನೋ ಭೇದ–ಭಾವ ಇಲ್ರೀ ಸರ.ರಮ್ಜಾನ ಹಬ್ಬದಾಗ ಹಿಂದೂ ಹುಡುಗರು ರೋಜಾ ಇರ್ತಾರ. ಯುಗಾದಿ ಹಬ್ಬದಾಗನಾವು ಅವರೊಂದಿಗೆ ಸೇರಿ ಜಾಗರಣ ಮಾಡ್ತೀವಿ.. ಊರು ಹುಟ್ಟಿದಾಗಿನಿಂದಲೂ ನಮ್ಮ ಹಿರೇರು ಇಂತಹದ್ದೊಂದು ಶ್ರದ್ಧಾ ಪಾಲಿಸಿಕೊಂಡು ಬಂದಾರ, ನಾವು ಅದನ್ನೇ ಮುಂದುವರೆಸೀವಿ...’

ಹೀಗೆಂದು ತಮ್ಮೂರಿನ ಸಾಮರಸ್ಯದ ಅಂತಃಕರಣವನ್ನು ಬಾದಾಮಿ ತಾಲ್ಲೂಕಿನ ಲಕ್ಕಸಕೊಪ್ಪದ ಶಿಕ್ಷಕ ಪೀರ್‌‌ಸಾಬ್ ವಾಲೀಕಾರ ಅನಾವರಣಗೊಳಿಸಿದರು.

ಲಕ್ಕಸಕೊಪ್ಪದಲ್ಲಿ ಶೇಕಡ 40ರಷ್ಟು ಮುಸ್ಲಿಮರು ಇದ್ದಾರೆ. ಉಳಿದ ಸಮಾಜದವರು ಗಮನಾರ್ಹ ಸಂಖ್ಯೆಯಲ್ಲಿದ್ದಾರೆ. ಬಹುತೇಕರು ಕೃಷಿಯನ್ನೇ ಬದುಕನ್ನಾಗಿಸಿಕೊಂಡಿದ್ದಾರೆ.

ಗಂಗೆಪೂಜೆಯ ಸಂಪ್ರದಾಯ...: ಯುಗಾದಿ ದಿನ ಊರಿನ ಉಳಿದ ಸಮುದಾಯದವರಂತೆ ನಾವೂ ಕೊಳವೆಬಾವಿಗಳಿಗೆ ಪೂಜೆ ಸಲ್ಲಿಸಿ ಗಂಗಮ್ಮನ ಗೌರವಿಸುತ್ತೇವೆ ಎಂದು ವಾಲೀಕಾರ ಹೇಳುತ್ತಾರೆ. ಪಾಡ್ಯದ ದಿನ ಕೊಳವೆ ಬಾವಿಗೆ ಚಪ್ಪರ ಹಾಕಿ ನೆರಳು ಮಾಡುತ್ತೇವೆ. ಅಂದು ಇಡೀ ದಿನ ಊರಿನ ಐವರು ಹೆಣ್ಣುಮಕ್ಕಳು ಉಪವಾಸ ಇದ್ದು, ಸಂಜೆ ಕೊಳವೆಬಾವಿ ಬಳಿ ಬಂದು ಗಂಗೆಪೂಜೆ ನೆರವೇರಿಸುತ್ತಾರೆ. ಈ ವೇಳೆ ಅವರಿಗೆ ಉಡಿ ತುಂಬಿ, ಹೋಳಿಗೆ, ಸಜ್ಜಕ, ಕರ್ಚಿಕಾಯಿ, ಸಂಡಿಗೆ, ಬದನಿಕಾಯಿ ಪಲ್ಲೆ, ತರಹೇವಾರಿ ಚಟ್ನಿ, ಅನ್ನ, ಸಾಂಬಾರು–ಹೀಗೆ ಬಗೆ ಬಗೆಯ ಭಕ್ಷ್ಯಗಳನ್ನು ಒಳಗೊಂಡ ಊಟ ಮಾಡಿಸಲಾಗುವುದು. ಗಂಗಾಪೂಜೆ ನೆರವೇರಿಸುವ ಹೆಣ್ಣುಮಕ್ಕಳಲ್ಲಿ ಎಲ್ಲ ಸಮಾಜದವರು ಇರುವುದು ವಿಶೇಷ.

ಭಜನೆ–ರಿವಾಯತು...: ಯುಗಾದಿ ಅಮಾವಾಸ್ಯೆಯಂದು ಲಕ್ಕಸಕೊಪ್ಪದ ಸಿದ್ಧಾರೂಢ ಮಠದಲ್ಲಿ (ಶಿವಶರಣರ ಮಠ)ಜಾಗರಣೆ ನಡೆಯುತ್ತದೆ. ಈ ವೇಳೆ ಭಜನೆ–ರಿವಾಯತು ಪದಗಳನ್ನು ಹಾಡಲಾಗುತ್ತದೆ. ಭಜನಾ ತಂಡದಲ್ಲಿ ಹಿರಿಯರಾದ ಲಾಲ್‌ಸಾಬ್ ವಾಲೀಕಾರ ಹಾರ್ಮೋನಿಯಂ ನುಡಿಸಿದರೆ, ಮೊಗಲ್‌ಸಾಬ್ ಜಲಗೇರಿ, ಮನ್ಸೂರ್‌ಸಾಬ್, ರೆಹಮಾನ್‌ಸಾಬ್ ವಾಲೀಕಾರ ಭಜನಾ ಪದಗಳನ್ನು ಹಾಡುತ್ತಾರೆ. ಮಹಾದೇವಪ್ಪ ಗೌಡರು, ಮಲ್ಲನಗೌಡ ಗೌಡರು, ವಿಠ್ಠಲ ತಳವಾರ, ಪಾಂಡು ಆಡಿನ, ಯಲ್ಲಪ್ಪ ಕೊಪ್ಪದ ಭಜನಾ ತಂಡದ ಪ್ರಮುಖರು.

ಮಠಕ್ಕೆ ಹರಕೆ ಹೊತ್ತವರು, ಅಂದು ಭಜನೆ ಮಾಡುವವರು ಹಾಗೂ ಕೇಳುವವರಿಗೆ ಮುಂಜಾನೆ ಉಪಹಾರದ ವ್ಯವಸ್ಥೆ ಮಾಡುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT