ಮಂಗಳವಾರ, ಸೆಪ್ಟೆಂಬರ್ 28, 2021
22 °C

ಇಂದು ಅಜ್ಜ–ಅಜ್ಜಿಯರ ದಿನ: ಇದರ ಹಿನ್ನೆಲೆ ಹಾಗೂ ಮಹತ್ವ ಏನು?

ಪ್ರಜಾವಾಣಿ ವೆಬ್‌ಡೆಸ್ಕ್‌‌ Updated:

ಅಕ್ಷರ ಗಾತ್ರ : | |

ಪ್ರತಿಯೊಂದು ಮನೆಯಲ್ಲಿ ಹಿರಿಯರಿದ್ದರೆ ಆ ಮನೆಯ ಸೊಬಗೇ ಚಂದ. ನಮ್ಮ ಸಂಸ್ಕೃತಿಯಲ್ಲಿ ಈ ಹಿರಿಯರ ಸ್ಥಾನವನ್ನು ತುಂಬುವರು ಅಜ್ಜ–ಅಜ್ಜಿ. ಸಂಸಾರದ ದೋಣಿಯನ್ನು ದಡ ಮುಟ್ಟಿಸಿ, ಕುಟುಂಬದ ಜೊತೆ ಕಾಲ ಕಳೆಯುತ್ತಾ ಅವರಿಗೆ ಸರಿಯಾದ ಮಾರ್ಗದರ್ಶನ ಮಾಡುವ ಅಜ್ಜ ಅಜ್ಜಿಯರು ಪ್ರತಿಯೊಂದು ಮನೆಯ ನಿಜವಾದ ಆಸ್ತಿ.

ಅಜ್ಜ–ಅಜ್ಜಿ ಎಂದರೆ ಮಕ್ಕಳಿಗೆ ಬಲು ಪ್ರೀತಿ. ಅನೇಕ ಮಕ್ಕಳು ತಮ್ಮ ತಂದೆ ತಾಯಿಗಿಂತ ತಮ್ಮ ಅಜ್ಜ–ಅಜ್ಜಿಯರನ್ನೇ ಹೆಚ್ಚು ಹಚ್ಚಿಕೊಂಡಿರುತ್ತವೆ. ಇಂತಹ ಅಜ್ಜ–ಅಜ್ಜಿಯರನ್ನು ಪ್ರತಿದಿನ ನೆನೆಯುವುದು ನಮ್ಮ ಕರ್ತವ್ಯವಾದರೂ ಜಗತ್ತು ಅವರಿಗಾಗಿಯೇ ಒಂದು ದಿನವನ್ನು ಮೀಸಲಿಟ್ಟಿದೆ. ಅದೇ ಇಂದು (ಸೆ.12) ವಿಶ್ವ ಅಜ್ಜ–ಅಜ್ಜಿಯರ ದಿನ (Grandparents Day).

ಪ್ರತಿ ವರ್ಷ ಸೆಪ್ಟೆಂಬರ್ ಎರಡನೇ ಭಾನುವಾರವನ್ನು ಅಜ್ಜ–ಅಜ್ಜಿಯರ ದಿನವನ್ನಾಗಿ ಆಚರಿಸಲಾಗುತ್ತಿದೆ. ಈ ದಿನ ವಿಶೇಷವಾಗಿ ಅಜ್ಜ–ಅಜ್ಜಿಯರ ಜೊತೆ ಕಾಲ ಕಳೆಯಲು ಆಚರಿಸಲಾಗುತ್ತಿದೆ. ಮೊಮ್ಮಕ್ಕಳು ತಮ್ಮ ಅಜ್ಜ–ಅಜ್ಜಿಯರಿಗೆ ಈ ದಿನ ವಿಶೇಷ ಉಡುಗೊರೆ ಕೊಟ್ಟು ಸನ್ಮಾನಿಸುವುದುಂಟು. ಅವರೊಟ್ಟಿಗೆ ಎಲ್ಲಾದರೂ ಪ್ರವಾಸ, ಹೋಟೆಲ್ ಹೋಗುವ ಮೂಲಕ ಸಂತಸದ ಕ್ಷಣಗಳನ್ನು ಈ ದಿನ ಹಂಚಿಕೊಳ್ಳುತ್ತಾರೆ.

ಕೆಲವರು ಪ್ರತಿ ವರ್ಷ ಕಾರ್ಮಿಕ ದಿನಾಚರಣೆ ನಂತರದ ಬರುವ ಮೊದಲ ಭಾನುವಾರವನ್ನು ಕೂಡ ಅಜ್ಜ–ಅಜ್ಜಿಯರ ದಿನವನ್ನಾಗಿ ಆಚರಿಸುತ್ತಾರೆ. ಆದರೆ, ಸೆ. ಎರಡನೇ ಭಾನುವಾರ ಹೆಚ್ಚು ಜನಪ್ರಿಯವಾಗಿದೆ.

ಅಜ್ಜ–ಅಜ್ಜಿಯರ ದಿನದ ಇತಿಹಾಸ

ತನ್ನ ಅಜ್ಜ–ಅಜ್ಜಿಯರನ್ನು ಅತೀವವಾಗಿ ಪ್ರೀತಿಸುತ್ತಿದ್ದ ಅಮೆರಿಕ 9 ವರ್ಷದ ಬಾಲಕ ರಸೆಲ್ ಚಾಪರ್ ಅಜ್ಜ–ಅಜ್ಜಿಯರನ್ನು ಸ್ಮರಣೀಯವಾಗಿಸಲು ಏನಾದರೂ ಮಾಡಬೇಕು ಎಂದು, ಅವರಿಗಾಗಿ ಒಂದು ದಿನವನ್ನು ಆಚರಿಸುವಂತೆ 1969 ರಲ್ಲಿ ಅಮೆರಿಕದ ಅಂದಿನ ಅಧ್ಯಕ್ಷರಾಗಿದ್ದ ರಿಚರ್ಡ್‌ ನಿಕ್ಸನ್ ಅವರಿಗೆ ಪತ್ರ ಬರೆದ. ಇದರ ಬಗ್ಗೆ ಅಮೆರಿಕ ಕಾಂಗ್ರೆಸ್ ಸೆನೆಟ್‌ನಲ್ಲಿ ಗೊತ್ತುವಳಿ ಪಾಸ್ ಮಾಡಿ, ಅಂಗೀಕರಿಸಿತು. ಅದಕ್ಕೆ ಮುಂದೆ 1978 ರಲ್ಲಿ ಅಧ್ಯಕ್ಷ ಜಿಮ್ಮಿ ಕಾರ್ಟರ್ ಸಹಿ ಹಾಕುವ ಮೂಲಕ National Grandparents' Day ಆಚರಿಸಲು ಅವಕಾಶ ನೀಡಿದರು. ಹೀಗೆ ಮೊದಲ ಬಾರಿಗೆ ಅಂದರೆ ಸೆ 10, 1978 ರಂದು ಮೊದಲ ಬಾರಿಗೆ ಅಜ್ಜ–ಅಜ್ಜಿಯರ ದಿನವನ್ನು ಆಚರಿಸಲಾಯಿತು. ಹೀಗೆ ಸೆಪ್ಟೆಂಬರ್ ಎರಡನೇ ಭಾನುವಾರವನ್ನು ಜಗತ್ತಿನಾದ್ಯಂತ ಅಜ್ಜ–ಅಜ್ಜಿಯರ ದಿನವನ್ನಾಗಿ ಆಚರಿಸಲಾಗುತ್ತಿದೆ.

ಅಜ್ಜ–ಅಜ್ಜಿಯರ ದಿನದ ಮಹತ್ವ

ನಮ್ಮ ಜೀವನದಲ್ಲಿ ನಮಗೆ ಸಂಬಂಧಗಳೇ ಮುಖ್ಯ. ಉತ್ತಮ ಸಂಬಂಧಗಳು ಮನೆಯಲ್ಲಿ ಉತ್ತಮ ವಾತಾವರಣ ನಿರ್ಮಾಣವಾಗಲು ಕಾರಣವಾಗುತ್ತವೆ. ಅದರಲ್ಲೂ ಅಜ್ಜ–ಅಜ್ಜಿಯರು ಪ್ರತಿ ಮನೆಗೆ ಬೇಕು. ಅವರು ಒಂದು ರೀತಿ ಸಂಸಾರ ದೋಣಿಯ ನಾವಿಕರು. ಮನೆಯ ಕಿರಿಯ ಸದಸ್ಯರಿಗೆ ದಾರಿ ತಪ್ಪದಂತೆ ತಮ್ಮ ಜೀವನದ ಅನುಭವದ ಮೂಲಕ ಪಾಠ ಹೇಳುತ್ತಾರೆ. ಮುದ್ದು ಮಕ್ಕಳಿಗೆ ಉತ್ತಮ ಸಂಗಾತಿಗಳಾಗುತ್ತಾರೆ. ಆಧ್ಯಾತ್ಮಿಕ ದಾರಿದೀಪವಾಗಿ ಅವರು ಕೆಲಸ ಮಾಡುತ್ತಾರೆ. ಇಂತಹ ಅಜ್ಜ ಅಜ್ಜಿಯರು ಪ್ರತಿ ಮನೆಯಲ್ಲಿ ಇರಬೇಕು ಎಂಬುದು ಮಕ್ಕಳ ಆಸೆ.

ಆದರೆ, ಇಂದಿನ ಆಧುನಿಕ ಜೀವನಶೈಲಿಯಿಂದ ಕುಟುಂಬಗಳು ತಮ್ಮ ಹಳೆಯ ಸಂಸ್ಕೃತಿಯನ್ನು ಕಳೆದುಕೊಳ್ಳುತ್ತಿವೆ. ವಯಸ್ಸಿಗೆ ಬಂದ ಮಕ್ಕಳು ವಯಸ್ಸಾದ ಅಜ್ಜ–ಅಜ್ಜಿಯರನ್ನು ವೃದ್ದಾಶ್ರಮಗಳಿಗೆ ದಾಖಲಿಸುತ್ತಿದ್ದಾರೆ. ಅನೇಕರು ಅವರನ್ನು ಸರಿಯಾಗಿ ನೋಡಿಕೊಳ್ಳದೇ ಅವರು ಮನೆಗೆ ಭಾರ ಎಂದು ಅವರನ್ನು ಅವಮಾನಕಾರಿಯಾಗಿ ನಡೆಸಿಕೊಳ್ಳುತ್ತಿರುವುದು ಇಂದಿನ ಬದಲಾದ ಸಾಮಾಜಿಕ ಪರಿಸ್ಥಿತಿಯ ದುಸ್ಥಿತಿ.

ಇದನ್ನೂ ಓದಿ: ಸಿನಿಪ್ರಿಯರಿಗೆ ನಿರಾಸೆ: ರಾಜಮೌಳಿಯ ‘ಆರ್‌ಆರ್‌ಆರ್‌‘ ಬಿಡುಗಡೆ ಮುಂದಕ್ಕೆ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು