ಶುಕ್ರವಾರ, ಜುಲೈ 1, 2022
21 °C

ಹಿರಿಯರಿಗಿರಲಿ ನೆರವಿನ ಹಸ್ತ

ಮಂಜುಶ್ರೀ ಎಂ. ಕಡಕೋಳ Updated:

ಅಕ್ಷರ ಗಾತ್ರ : | |

Prajavani

‘ವರ್ಕ್ ಫ್ರಂ ಹೋಂ’ ಕೆಲಸ ಮಾಡುವ ಎಂಜಿನಿಯರ್ ಮಗಳು ಲ್ಯಾಪ್‌ಟಾಪ್‌ನಲ್ಲಿ ಮುಳುಗಿಬಿಟ್ಟರೆ, ಅಪ್ಪ–ಅಮ್ಮನ ನೆನಪೇ ಇರದು. ಮಧ್ಯಾಹ್ನ ಹೊಟ್ಟೆ ತಾಳ ಹಾಕಿದಾಗಲೇ ಅವಳಿಗೆ ಅಮ್ಮನ ಕೈರುಚಿ ನೆನಪಾಗೋದು. 66ರ ಲಕ್ಷ್ಮಮ್ಮ ಮೊದಲೆಲ್ಲ ಆರಾಮವಾಗಿಯೇ ಮನೆ ಸಮೀಪದ ಮಾರುಕಟ್ಟೆಗೆ ಹೋಗಿ ತಾಜಾ ತರಕಾರಿ ತರುತ್ತಿದ್ದರು. ಕೋವಿಡ್‌ನಿಂದಾಗಿ ಮನೆ ಹತ್ತಿರ ಗಾಡಿಯಲ್ಲಿ ಬರುವ ತರಕಾರಿಯನ್ನಷ್ಟೇ ಖರೀದಿಸುವ ಅವರಿಗೀಗ ತರಕಾರಿಯನ್ನು ಉಪ್ಪು ನೀರಿನಲ್ಲಿ ಗಂಟೆಗಟ್ಟಲೆ ನೆನೆಸಿ ತೊಳೆಯುವುದೇ ದೊಡ್ಡ ಕೆಲಸ. ಕಾಲು ನೋವಿನ ನಡುವೆಯೇ ತರಕಾರಿ ತೊಳೆದು ಅಡುಗೆಗೆ ಅಣಿಯಾಗುತ್ತಾರೆ. ಅವರ ನೋವು ಮಗಳಿಗೆ ಗೊತ್ತಿದ್ದರೂ ಅವಳು ಮಾತ್ರ ‘ಮೌನ ಗೌರಿ’.

ದೂರದ ಅಮೆರಿಕದಲ್ಲಿರುವ ಮಗ–ಸೊಸೆ–ಮೊಮ್ಮಗನನ್ನು ನೆನಪಿಸಿಕೊಳ್ಳುತ್ತಲೇ ಇತ್ತ ಬೆಂಗಳೂರಿನಲ್ಲಿ ಕಣ್ಣೀರಾಗುವ ವಿಶಾಲಾ–ಶರಣಪ್ಪ ದಂಪತಿಗೆ ಕೋವಿಡ್ ಶಾಪವೆನಿಸುತ್ತಿದೆ. ಅತ್ತ ಅಮೆರಿಕಕ್ಕೂ ಹೋಗಲಾರದೇ, ಇತ್ತ ನಗರದಲ್ಲೂ ಇರಲಾರದೇ ಒದ್ದಾಡುತ್ತಿರುವ ಅವರಿಗೆ ತಮ್ಮ ಸಂಬಂಧಿಕರು, ಸ್ನೇಹಿತರಂತೆ ತಾವೆಲ್ಲಿ ಕೋವಿಡ್‌ಗೆ ಬಲಿಯಾಗುತ್ತೇವೋ ಎಂಬ ಭಯ. ಮಗನಿದ್ದೂ ಅನಾಥ ಹೆಣಗಳಾಗುವ ಆತಂಕ. ಪಕ್ಕದ ಮನೆಯ ಹುಡುಗ ಹೊರಗೆ ಹೋದಾಗ ಈ ವೃದ್ಧ ದಂಪತಿಯ ನೆನಪಾಗಿ ತರಕಾರಿ, ಹಣ್ಣು–ಹಂಪಲು ತಂದುಕೊಡುವುದರಿಂದ ಅವನೀಗ ಅವರ ಪಾಲಿಗೆ ಆಪತ್ಪಾಂಧವ.

ಹೀಗೆ ಭಿನ್ನ ಪರಿಸ್ಥಿತಿಗಳಲ್ಲಿ ಬದುಕುತ್ತಿರುವ ಹಿರಿಯರಿಗೆ ಕೋವಿಡ್ ಭೀತಿ ಎದುರಾಗಿದ್ದರೂ ಮನೋಸ್ಥೈರ್ಯವೊಂದೇ ಅವರ ಪಾಲಿನ ಸಂಜೀವಿನಿ. ಕೋವಿಡ್ ಬಂದ ಆರಂಭದಲ್ಲೇ ಹಿರಿಯ ನಾಗರಿಕರ ಆರೋಗ್ಯದ ಬಗ್ಗೆ ಮಾರ್ಗಸೂಚಿ ಪ್ರಕಟಿಸಿದ್ದ ವಿಶ್ವಸಂಸ್ಥೆ, ಇತ್ತೀಚೆಗೆಷ್ಟೇ ಮತ್ತೊಮ್ಮೆ ಹಿರಿಯರ ಬದಲಾಗುತ್ತಿರುವ ಪರಿಸ್ಥಿತಿ ಬಗ್ಗೆಯೂ ಮಾತನಾಡಿದೆ. ‘ಕೋವಿಡ್‌ ನಡುವೆಯೇ ನಾವು ಹಿರಿಯರ ಹಕ್ಕುಗಳು ಮತ್ತು ಘನತೆಯನ್ನು ಗೌರವಿಸಬೇಕಿದೆ. ಕೋವಿಡ್‌ನ ಸಮಯದಲ್ಲಿ ಒಂಟಿಯಾಗಿರುವ ಹಿರಿಯರು ಅದರಲ್ಲೂ ಬಡತನ ಮತ್ತು ಅಪೌಷ್ಟಿಕತೆಯಿಂದ ಬಳಲುತ್ತಿರುವ ಹಿರಿಯ ಜೀವಗಳಿಗೆ ನಾಗರಿಕ ಸಮಾಜ ಸಹಾಯ ಹಸ್ತ ಚಾಚಬೇಕಿದೆ’ ಎನ್ನುವುದು ವಿಶ್ವಸಂಸ್ಥೆಯ ಆಶಯ.

ಹಿರಿಯರಿಗೆ ನೆರವಾಗಿ..

ನಿಮ್ಮ ಅಕ್ಕ–ಪಕ್ಕದ ಮನೆ ಅಥವಾ ಅಪಾರ್ಟ್‌ಮೆಂಟ್‌ಗಳಲ್ಲಿ ಹಿರಿಯರಿದ್ದರೆ ಅವರನ್ನು ಮಾತನಾಡಿಸಿ, ಅವರಲ್ಲಿನ ಆತಂಕ, ಒಂಟಿತನದ ಭಾವ ನಿವಾರಿಸಬಹುದು.
ಮನೆ ಬಿಟ್ಟು ಹೊರಹೋಗಲಾರದ ಹಿರಿಯರಿಗೆ ತರಕಾರಿ, ಅಗತ್ಯ ಔಷಧಗಳನ್ನು ತಂದುಕೊಡುವ ಮೂಲಕ ನೆರವಾಗಬಹುದು.

ಮನೆಯೊಳಗೇ ಇರುವ ವರ್ಕ್ ಫ್ರಂ ಹೋಂ ಕೆಲಸ ಮಾಡುವವರೂ ಕೂಡಾ ಅಪ್ಪ–ಅಮ್ಮ, ಅತ್ತೆ–ಮಾವ, ಅಜ್ಜ–ಅಜ್ಜಿಯೊಂದಿಗೆ ಆಗಾಗ ಮಾತನಾಡುವುದು, ಅವರ ಆರೋಗ್ಯದ ಬಗ್ಗೆ ವಿಚಾರಿಸುವುದು ಮಾಡುತ್ತಿದ್ದರೆ ಹಿರಿಯರಿಗೂ ಸಂತೋಷ.

ಟೆಕ್ನಾಲಜಿಯಲ್ಲಿ ಹಿಂದಿರುವ ಕೆಲ ಹಿರಿಯರಿಗೆ ಸಾಮಾಜಿಕ ಮಾಧ್ಯಮಗಳ ಮೂಲಕ ತಮ್ಮ ಸ್ನೇಹಿತರೊಂದಿಗೆ ಸಂಪರ್ಕ ಸಾಧಿಸುವ ಬಗ್ಗೆ ಹೇಳಿಕೊಡುವುದು. ಆನ್‌ಲೈನ್‌ನಲ್ಲಿ ಆರ್ಡರ್ ಮಾಡಿ ರೇಷನ್, ತರಕಾರಿ, ಔಷಧ ತರಿಸಿಕೊಳ್ಳುವ ಬಗೆ ತಿಳಿಸಿಕೊಡಬಹುದು.

ನಿಮ್ಮ ಮಾರ್ಗದರ್ಶನ, ಸಲಹೆ ಈಗಲೂ ಬೇಕು ಎನ್ನುವುದನ್ನು ಮನವರಿಕೆ ಮಾಡಿಕೊಡುವ ಮೂಲಕ ಹಿರಿಯರಲ್ಲಿ ಆತ್ಮವಿಶ್ವಾಸ ತುಂಬುವುದು.

ಸ್ನೇಹಿತರಿಗೆ ಪತ್ರ ಬರೆಯುವಂತೆ ಪ್ರೇರೇಪಿಸುವುದು. ಸಂಬಂಧಿಕರ ಜತೆಗಿನ ಮುನಿಸನ್ನು ಸರಿಪಡಿಸಿಕೊಳ್ಳುವ ಬಗ್ಗೆ ಐಡಿಯಾ ಕೊಡಬಹುದು.

ಹಿರಿಯರೂ ಕೂಡ ಹೊರದೇಶ, ನಗರಗಳಲ್ಲಿರುವ ಸಂಬಂಧಿಕರೊಂದಿಗೆ ಕನಿಷ್ಠ ವಾರಕ್ಕೊಮ್ಮೆಯಾದರೂ ವಾಟ್ಸ್‌ ಆ್ಯಪ್ ಕಾಲ್, ಜೂಮ್ ಕಾಲ್ ಇಲ್ಲವೇ ಇತರ ವಿಡಿಯೊ ಕಾಲ್ ಮೂಲಕ ಸಂಪರ್ಕ ಸಾಧಿಸಬೇಕು.

ಗಂಡ–ಹೆಂಡತಿ ಇಬ್ಬರೇ ಇದ್ದಲ್ಲಿ, ಪರಸ್ಪರ ಕೆಲಸಗಳಿಗೆ ನೆರವಾಗುವ ಮೂಲಕ ಪ್ರೀತಿ ಅಭಿವ್ಯಕ್ತಪಡಿಸುವುದು. ಫೋಟೊ ಆಲ್ಬಂಗಳನ್ನು ನೋಡಿ ಹಳೆಯ ದಿನಗಳನ್ನು ಮೆಲುಕು ಹಾಕುವುದು. 

ನಿವೃತ್ತರು ಇಷ್ಟು ವರ್ಷಗಳ ಕಾಲ ಮಾಡಬೇಕೆಂದುಕೊಂಡಿದ್ದ ಕೆಲಸಗಳ ಬಗ್ಗೆ ಯೋಜನೆ ರೂಪಿಸುವುದು. ಇಷ್ಟದ ಹವ್ಯಾಸಗಳಿಗೆ ಮರುಜೀವ ನೀಡುವುದು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು