ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೇದ: ಮನುಷ್ಯ ಬರೆದದ್ದಲ್ಲ

Last Updated 17 ಆಗಸ್ಟ್ 2018, 19:30 IST
ಅಕ್ಷರ ಗಾತ್ರ

ಭಾರತೀಯ ಸಂಸ್ಕೃತಿಗೆ ವೇದ ಬುನಾದಿಯಂತಿದೆ. ನಾಡಿನ ಎಲ್ಲ ಧರ್ಮಕ್ಕೂ ದರ್ಶನಗಳಿಗೂ ಶಾಸ್ತ್ರ–ಸಂಪ್ರದಾಯಗಳಿಗೂ ಆಚಾರ–ವಿಚಾರಗಳಿಗೂ ತಾಯಿಬೇರು ವೇದ. ಆದರೆ ವೇದವನ್ನು ಕುರಿತಂತೆ ಖಚಿತವಾದ ಯಥಾವತ್ತಾದ ಪರಿಚಯ ಜನರಿಗಿಲ್ಲದಿರುವುದು ಅನೇಕ ವಿವಾದಗಳಿಗೆ ಎಡೆ ಕೊಟ್ಟಿದೆ.

ವೇದವೆನ್ನುವ ಮಾತಿಗೆ ಮೂಲಾರ್ಥ ತಿಳಿವಳಿಕೆ ಎಂಬುದು (‘ವಿದ್‌’ ಧಾತುವಿನಿಂದ); ಪಡೆದುಕೊಳ್ಳವುದು ಎಂಬರ್ಥವೂ ಇದೆ (‘ವಿದ್‌ ಲೃ’ ಎಂಬ ಧಾತುವಿನಿಂದ). ಮನುಷ್ಯನು ಪುರುಷಾರ್ಥಗಳನ್ನು ಪಡೆದುಕೊಳ್ಳಲು ತಿಳಿವಳಿಕೆ ಮೊದಲ ಹೆಜ್ಜೆ. ಇಷ್ಟಪ್ರಾಪ್ತಿ, ಅನಿಷ್ಟ ಪರಿಹಾರಗಳಿಗೆ ವೇದವು ಅಲೌಕಿಕವಾದ ಉಪಾಯವನ್ನು ತಿಳಿಸುತ್ತದೆ. ಅಲೌಕಿಕವೆಂದರೆ ಪ್ರತ್ಯಕ್ಷವಾಗಿಯಾಗಲಿ ಅನುಮಾನದಿಂದಾಗಲಿ ಯಾವುದು ತಿಳಿಯಬಾರದೋ ಅದನ್ನು ತಿಳಿಸುವುದು. ವೇದ ಎಂದರೆ ವಿಚಾರ ಮಾಡುವುದು ಎಂಬರ್ಥವೂ ಆಗುತ್ತದೆ. (‘ಸತ್ತಾಯಾಂ ವಿದ್ಯತೇ ಜ್ಞಾನೇ ವೇತ್ತಿ ವಿಂತೇ ವಿಚಾರಣೇ). ‘ದಕ್ಷಸ್ಮೃತಿ’ಯಲ್ಲಿ ವೇದಾಧ್ಯಯನದ ಐದು ಹಂತಗಳನ್ನು ಈ ರೀತಿ ಹೇಳಿದೆ (2–25):

ವೇದಸ್ವೀಕರಣಂ ಪೂರ್ವಂ ವಿಚಾರೋsಭಸನಂ ಜಪಃ|

ತದ್ದಾನಂ ಚೈವ ಶಿಷ್ಯೇಭ್ಯಃ ವೇದಾಭ್ಯಾಸೋ ಹಿ ಪಂಚಧಾ||

ಮೊದಲು ವೇದವನ್ನು ಕಂಠಪಾಠ ಮಾಡುವುದು. ಆನಂತರ ಅದನ್ನು ಕುರಿತಂತೆ ವಿಚಾರ ಮಾಡುವುದು. ಮೂರನೆಯದು ಮತ್ತೆ ಮತ್ತೆ ಅದರ ಪಾರಾಯಣ. ಇದಾದ ನಂತರ ಜಪ–ಧ್ಯಾನದಲ್ಲಿ ಇದರ ಇಂಗಿತವನ್ನು ಮನದಟ್ಟು ಮಾಡಿಕೊಳ್ಳುವುದು. ಕಡೆಯಲ್ಲಿ ವೇದವನ್ನು ಶಿಷ್ಯರಿಗೆ ಪಾಠ ಹೇಳುವುದು.

ವೇದದಲ್ಲಿ ವಿಚಾರ ಮಾಡುವ ಭಾಗವಿರದಿದ್ದರೆ, ವೇದದ ತಾತ್ಪರ್ಯವೇನೆಂದು ಪರಿಶೀಲಿಸುವ ಕರ್ತವ್ಯವಿರದಿದ್ದರೆ, ಮೀಮಾಂಸವಾಗಲಿ ವೇದಾಂತವಾಗಲಿ ಹೊರಬರುತ್ತಿರಲೇ ಇರಲಿಲ್ಲ. ಮೀಮಾಂಸೆಯೆಂದರೆ ವಿಚಾರವೇ, ಪರೀಕ್ಷೆಯೇ; ಯುಕ್ತಿ, ಅನುಭವಗಳ ನೆರವು ಇಲ್ಲಿ ಅಗತ್ಯ. ವೇದದ ತಾತ್ಪರ್ಯವು ಧರ್ಮ – ಎಂದು ಮೀಮಾಂಸಕರು ನಿರ್ಧರಿಸಿದರು; ಆತ್ಮಜ್ಞಾನ ಎಂದು ವೇದಾಂತಿಗಳು ನೆಲೆಗಾಣಿಸಿದರು. ವೇದಾಂತವೂ ಮೀಮಾಂಸೆಯೇ. ಆದುದರಿಂದ ಮೊದಲನೆಯದನ್ನು ಪೂರ್ವಮೀಮಾಂಸೆಯೆನ್ನುತ್ತಾರೆ. ಅದರಲ್ಲಿ ವಿಶೇಷವಾಗಿ ಬರುವ ಕರ್ಮಕಾಂಡದಲ್ಲೂ ವಿಚಾರದ ಅಗತ್ಯವಿದೆಯೆಂದು ಸ್ಮೃತಿಗಳೇ ಹೇಳುತ್ತವೆ (‘ಯುಕ್ತಿಹೀನವಿಚಾರೇ ತು ಧರ್ಮಹಾನಿಃ ಪ್ರಜಾಯತೇ’).

ವೇದವನ್ನು ಪ್ರಾಚೀನ ಗ್ರಂಥಗಳೆಲ್ಲ ಏಕವಚನದಲ್ಲೇ ಪ್ರಸ್ತಾಪಿಸುತ್ತವೆ. ಪುರಾಣಗಳು ಕೂಡ ‘ಏಕ ಏವ ವೇದಃ, ತಂ ಚತುರ್ಧಾ ವ್ಯಕಲ್ಪಯತ್‌’ ಎಂದು ಸೂಚಿಸುತ್ತವೆ. ಒಂದೇ ವೇದವನ್ನು ಮುಂದೆ ವಿನಿಯೋಗದ ದೃಷ್ಟಿಯಿಂದ ಮೂರಾಗಿಯೋ (ತ್ರಯೀ), ನಾಲ್ಕಾಗಿಯೋ ವಿಭಜಿಸಿದ ಉಲ್ಲೇಖವಿದೆ.

ವೇದಮಂತ್ರಗಳು – ಕಾವ್ಯ, ಇತಿಹಾಸ,‍ಪುರಾಣಗಳಂತೆ ವೈಖರೀ ಬಗೆಯ ಮಾತಲ್ಲ. ಇವೆಲ್ಲ ಮನುಷ್ಯನ ಬುದ್ಧಿಯನ್ನವಲಂಬಿಸಿ ಸಿದ್ಧವಾದುದು; ಅವನ್ನು ‘ಸ್ವಯಂ ಸಿದ್ಧ’ ಎನ್ನಲಾಗದು, ಅವು ಪುರುಷಕೃತ; ವೇದವಾದರೆ ಹಾಗಲ್ಲ. ಅದರ ಮೂಲವಿರುವುದು ‘ಪರಾ’ ನೆಲೆಯಲ್ಲಿ ; ಅದನ್ನೇ ಸತ್ಯವೆಂದೂ ನಿತ್ಯವೆಂದೂ ಹೇಳುವುದು. ಅದು ಋಷಿಯ ಅರಿವಿಗೆ ಬರುವುದು ‘ಪಶ್ಯಂತೀ’ ನೆಲೆಯಲ್ಲಿ. ‘ಋಷಿಯಾಗುವುದು ದರ್ಶನದಿಂದಲೇ’ (ಋಷಿಶ್ಚ ಕಿಲ ದರ್ಶ ನಾತ್) ಅಲ್ಲವೇ? ಈ ಕಾಣ್ಕೆಯನ್ನು ಅವನು ವ್ಯಕ್ತಪಡಿಸುವುದು ‘ಮಧ್ಯಮಾ’ ನೆಲೆಯಲ್ಲಿ. ನಮ್ಮ ಮಾತಿನಂತೆಯೇ ಋಷಿಯ ಮಾತೂ ಎನ್ನುವಂತಿಲ್ಲ.

ನಮ್ಮದು ವೈಖರೀನೆಲೆಯ ಮಾತು ಯಾರಿಗಾದರೂ ಅರ್ಥವಾದೀತು. ಮಂತ್ರಗಳು ಹೀಗೆ ಎಲ್ಲರಿಗೂ ಅರ್ಥವಾಗುವುದಿಲ್ಲ. ಯಾಸ್ಕರೇ ಹೇಳುತ್ತಾರೆ – ‘ಋಷಿಯಲ್ಲದವನಿಗೆ, ತಪಸ್ಸು ಮಾಡದವನಿಗೆ ವೇದದ ಅರ್ಥ ತಿಳಿಯುವುದಿಲ್ಲ’ ಎಂದು. ಇದಕ್ಕೆ ಕಾರಣ ವೇದ ಅಪೌರುಷೇಯ ಎಂಬುದು.

(ಆಧಾರ: ಸಾ. ಕೃ. ರಾಮಚಂದ್ರರಾವ್‌ ಅವರ ‘ಧರ್ಮ–ವೇದ–ವೇದಾಂತ’)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT