ಶನಿವಾರ, ಸೆಪ್ಟೆಂಬರ್ 25, 2021
24 °C
ಮತ್ತಿಕೆರೆ ವಾರ್ಡ್‌ನಲ್ಲಿ ಶುದ್ಧ ನೀರಿಗಾಗಿ ಪರದಾಡಿದ ಸಾವಿರಾರು ಜನರು

ಕಾವೇರಿ ಕೊಳವೆಯಲ್ಲಿ ಕೊಳಚೆ ನೀರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಮತ್ತಿಕೆರೆ ವಾರ್ಡ್‌ನಲ್ಲಿನ ಕಾವೇರಿ ನೀರು ಪೂರೈಕೆಯ ಕೊಳವೆಗಳಲ್ಲಿ ಗುರುವಾರ ಕೊಳಚೆ ಮಿಶ್ರಿತ ನೀರು ಸರಬರಾಜು ಆಯಿತು. ಇದರಿಂದ ಜನ ಜಲಮಂಡಳಿ ವಿರುದ್ಧ ಆಕ್ರೋಶ  ವ್ಯಕ್ತಪಡಿಸಿದರು.

ರಾಮಯ್ಯ ಬಸ್‌ ನಿಲ್ದಾಣದಿಂದ ನೇತಾಜಿ ವೃತ್ತದ ವರೆಗಿನ ನೂರಾರು ಮನೆಗಳಿಗೆ ಕೊಳಚೆ ಮಿಶ್ರಿತ ನೀರು ಹರಿಯಿತು. ಆ ನೀರಿನಿಂದ ಗಬ್ಬು ವಾಸನೆಯೂ ಬರುತ್ತಿತ್ತು.

‘ಆರು ತಿಂಗಳುಗಳಿಂದಲೂ ಸ್ವಲ್ಪ ಮಟ್ಟಿನ ಕಲುಷಿತ ನೀರು ಮಿಶ್ರಣಗೊಂಡು ಸರಬರಾಜು ಆಗುತ್ತಿತ್ತು. ಆ ಬಗ್ಗೆ ಪಾಲಿಕೆಯ ಸ್ಥಳೀಯ ಸದಸ್ಯರು ಹಾಗೂ ಜಲಮಂಡಳಿಯ ಅಧಿಕಾರಗಳ ಗಮನ ಸೆಳೆದಿದ್ದೆವು. ಅವರು ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಮೊನ್ನೆಯ ಮಳೆಗೆ ಮೂರ್ನಾಲ್ಕು ಮ್ಯಾನ್‌ಹೋಲ್‌ಗಳು ಕುಸಿದು ಕಾವೇರಿ ನೀರಿಗೆ ಚರಂಡಿ ನೀರು ಸೇರುತ್ತಿದೆ’ ಎಂದು ಸ್ಥಳೀಯರಾದ ನಾಗರಾಜ್‌ ಹೇಳಿದರು.

ಸ್ಥಳೀಯ ನಿವಾಸಿ ಮಂಜುನಾಥ್‌,‘ಇಷ್ಟು ದಿನ ಕಡಿಮೆ ಕಲುಷಿತ ನೀರು ಬರುತ್ತಿತ್ತು. ಗುರುವಾರವಂತೂ ಕೆಂಗೇರಿ ಮೋರಿಯ ನೀರಿನಂತಹ ನೀರೇ ಈ ಪ್ರದೇಶದ ಸುಮಾರು 3,000 ಮನೆಗಳಿಗೆ ಬಂತು. ಅದರಿಂದ ವಾಸನೆಯೂ ಬರುತ್ತಿತ್ತು. ನನ್ನ ನಾಲ್ವರು ಸ್ನೇಹಿತರು ಗೊತ್ತಾಗದೆ, ಅದೇ ನೀರನ್ನು ಕುಡಿದಿದ್ದಾರೆ. ಅವರಿಗೆ ಗಂಟಲು ನೋವು ಶುರುವಾಗಿದೆ. ಇದಕ್ಕೆಲ್ಲ ಯಾರು ಹೊಣೆ’ ಎಂದು ಕಿಡಿಕಾರಿದರು.

‘ಈ ಸಮಸ್ಯೆಯನ್ನು ಜಲಮಂಡಳಿಯ ಅಧಿಕಾರಿಗಳ ಗಮನಕ್ಕೆ ತರುತ್ತಲೇ ಇದ್ದೇವೆ. ಅವರಂತೂ ಸರಿಯಾಗಿ ಸ್ಪಂದಿಸುತ್ತಿಲ್ಲ. ದೂರು ನೀಡಲು ಹೋದವರಿಗೇನೇ ಅವಾಚ್ಯ ಶಬ್ದಗಳಿಂದ ಬೈಯ್ದು ಕಳಿಸುತ್ತಾರೆ’ ಎಂದು ಆರೋಪಿಸಿದರು.

‘ನೀರಿಲ್ಲದೆ ಅಡುಗೆ, ಸ್ನಾನಕ್ಕೂ ತೊಂದರೆಯಾಯಿತು. ಪಕ್ಕದ ವಾರ್ಡ್‌ಗೆ ಹೋಗಿ ಕ್ಯಾನ್‌ಗಳಲ್ಲಿ ನೀರು ತುಂಬಿಸಿಕೊಂಡು ಬಂದೆವು’ ಎಂದು ಸ್ಥಳೀಯರಾದ ಮಂಜುಳಾ ತಿಳಿಸಿದರು.

‘ರಾಜಕಾಲುವೆ ನೀರು ಸೇರುತ್ತಿತ್ತು’

‘ರಾಜಕಾಲುವೆ ಪಕ್ಕವೇ ಕಾವೇರಿ ನೀರಿನ ಕೊಳವೆ ಹಾದುಹೋಗಿದೆ. ಎರಡು ಕಡೆ ಕೊಳವೆ ಒಡೆದಿದ್ದರಿಂದ ಕಾಲುವೆ ನೀರು ಮಿಶ್ರಣಗೊಂಡು ನಾಲ್ಕೈದು ಅಡ್ಡರಸ್ತೆಗಳ ಕೆಲವು ಮನೆಗಳಿಗೆ ಮಾತ್ರ ಸರಬರಾಜು ಆಗಿತ್ತು’ ಎಂದು ಜಲಮಂಡಳಿಯ ಕಾರ್ಯನಿರ್ವಾಹಕ ಎಂಜಿನಿಯರ್‌ ಬಿ.ಜಿ.ಪುರುಷೋತ್ತಮ್ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಕಲುಷಿತ ನೀರು ಸೇರುತ್ತಿದ್ದ ಪಾಯಿಂಟ್‌ಗಳನ್ನು ನಮ್ಮ ಸಿಬ್ಬಂದಿ ಬುಧವಾರ ಬೆಳಿಗ್ಗೆಯಿಂದ ತುಂಬಾ ಕಷ್ಟಪಟ್ಟು ಗುರುವಾರ ಮಧ್ಯಾಹ್ನ ಗುರುತಿಸಿದ್ದಾರೆ. ಅದನ್ನು ಶುಕ್ರವಾರ ಸಂಜೆಯೊತ್ತಿಗೆ ಸರಿಪಡಿಸುತ್ತೇವೆ. ಶನಿವಾರದಂದು ಕೊಳವೆಮಾರ್ಗವನ್ನು ಶುಚಿಗೊಳಿಸಿ, ಎಂದಿನಂತೆ ಶುದ್ಧ ನೀರನ್ನು ಹರಿಸುತ್ತೇವೆ’ ಎಂದು ಅವರು ಹೇಳಿದರು.

ಜಲಮಂಡಳಿ ನೌಕರರಿಂದ ಜೂನ್‌ 3ರಂದು ಪ್ರತಿಭಟನೆ

ಬೆಂಗಳೂರು: ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವಂತೆ ಒತ್ತಾಯಿಸಿ ಜಲಮಂಡಳಿಯ ನೌಕರರ ಸಂಘವು ಜೂನ್‌ 3ರಂದು ಪ್ರತಿಭಟನೆ ಮಾಡಲು ನಿರ್ಧರಿಸಿದೆ.  

‘ಮಂಡಳಿಯಲ್ಲಿ 3,500 ಹುದ್ದೆಗಳು ಮಂಜೂರಾಗಿವೆ. ಅದರಲ್ಲಿ 1,944 ಸ್ಥಾನಗಳು ಮಾತ್ರ ಭರ್ತಿಯಾಗಿವೆ. ಇದರಿಂದ ನೌಕರರು ಒತ್ತಡದ ನಡುವೆ ಕಾರ್ಯನಿರ್ವಹಿಸುತ್ತಿದ್ದಾರೆ. ಅಲ್ಲದೆ ಮುಂದಿನ ಮೂರ್ನಾಲ್ಕು ವರ್ಷಗಳಲ್ಲಿ 500 ಸಿಬ್ಬಂದಿ ನಿವೃತ್ತರಾಗುತ್ತಾರೆ. ಇದರಿಂದ ಮತ್ತಷ್ಟು ಒತ್ತಡ ಹೆಚ್ಚಲಿದೆ’ ಎಂದು ಸಂಘವು ಪ್ರಕಟಣೆಯಲ್ಲಿ ತಿಳಿಸಿದೆ.

‘ಸಿಬ್ಬಂದಿ ಕೊರತೆಯ ನೆಪದಲ್ಲಿ ಮಂಡಳಿಯ ಬಹುತೇಕ ವಿಭಾಗಗಳ ಕಾರ್ಯಾಚರಣೆ ಮತ್ತು ನಿರ್ವಹಣೆಯನ್ನು ಖಾಸಗಿ ಕಂಪನಿಗಳಿಗೆ ದೀರ್ಘಕಾಲಿಕ ಹೊರಗುತ್ತಿಗೆ ನೀಡುವುದನ್ನು ರದ್ದುಪಡಿಸಬೇಕು. 2006ರ ನಂತರ ನೇಮಕಾತಿ ಹೊಂದಿರುವ ನೌಕರರಿಗೆ ಹಳೆಯ ಪಿಂಚಣಿ ವ್ಯವಸ್ಥೆಯನ್ನು ಮುಂದುವರೆಸಬೇಕು’ ಎಂದು ಒತ್ತಾಯಿಸಿದೆ. 

‘2018ರ ಜುಲೈನಿಂದ ಅನ್ವಯವಾಗುವಂತೆ ವೇತನ ಪರಿಷ್ಕರಣೆ ಮಾಡಬೇಕು. ಜತೆಗೆ ಪಿಂಚಣಿ ನಿಧಿ ಯೋಜನೆ ಪ್ರಾರಂಭಿಸಬೇಕು’ ಎಂಬ ಬೇಡಿಕೆ ಮಂಡಿಸಿದೆ.

ಫೋನ್‌–ಇನ್‌ ನಾಳೆ

ಜಲಮಂಡಳಿಯು ಮೇ 4ರಂದು ಬೆಳಿಗ್ಗೆ 9ರಿಂದ 10.30ರ ವರೆಗೆ ಫೋನ್‌ ಇನ್‌ ಕಾರ್ಯಕ್ರಮ ಆಯೋಜಿಸಿದೆ.

ಕುಡಿಯುವ ನೀರಿನ ಸಮಸ್ಯೆ, ಒಳಚರಂಡಿ, ಮೀಟರ್‌ ರೀಡಿಂಗ್‌, ನೀರಿನ ಬಿಲ್‌ಗಳ ಕುರಿತ ಕುಂದುಕೊರತೆಗಳನ್ನು ಮಂಡಳಿಯ ಅಧ್ಯಕ್ಷರ ಗಮನಕ್ಕೆ ತರಬಹುದಾಗಿದೆ. 

ನೀರಿನ ಸಂಪರ್ಕ ಹೊಂದಿರುವ ಗ್ರಾಹಕರು ಆರ್‌.ಆರ್‌.ಸಂಖ್ಯೆಯನ್ನು ತಿಳಿಸಿ ದೂರನ್ನು ನೀಡಲು ಮಂಡಳಿಯು ಪ್ರಕಟಣೆಯಲ್ಲಿ ತಿಳಿಸಿದೆ. 

ಸಂಪರ್ಕ:  080 22945119

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು