ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳ–ಅಗಲ: ಬಾಲ್ಯವಿವಾಹ ತಡೆ– ಸರ್ಕಾರಕ್ಕೆ ಅಸಡ್ಡೆ, ಜನರಿಗೆ ಬೇಕಿಲ್ಲ

Last Updated 5 ಫೆಬ್ರುವರಿ 2023, 19:09 IST
ಅಕ್ಷರ ಗಾತ್ರ

ಅಸ್ಸಾಂನಲ್ಲಿ ಬಾಲ್ಯವಿವಾಹ ನಡೆದ 4,000ಕ್ಕೂ ಹೆಚ್ಚು ಪ್ರಕರಣಗಳನ್ನು ಅಲ್ಲಿನ ಪೊಲೀಸ್ ಇಲಾಖೆ ಗುರುತಿಸಿದೆ. ಬಾಲ್ಯವಿವಾಹಕ್ಕೆ ಕಾರಣವಾದವರನ್ನು ಬಂಧಿಸಲಾಗುತ್ತಿದೆ. ಅಸ್ಸಾಂ ಸೇರಿ ದೇಶದ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಬಾಲ್ಯವಿವಾಹವು ದೊಡ್ಡ ಪ್ರಮಾಣದಲ್ಲಿ ನಡೆದಿದೆ ಎಂಬುದನ್ನು ಕೇಂದ್ರ ಸರ್ಕಾರದ ದಾಖಲೆಗಳೇ ಹೇಳುತ್ತವೆ. ಕರ್ನಾಟಕದ ಸ್ಥಿತಿಯೂ ಇದಕ್ಕಿಂತ ಭಿನ್ನವಾಗೇನೂ ಇಲ್ಲ. ರಾಜ್ಯದಲ್ಲಿ 2019–21ರ ಅವಧಿಯಲ್ಲಿ 20–24 ವರ್ಷ ವಯಸ್ಸಿನ ವಿವಾಹಿತ ಮಹಿಳೆಯರಲ್ಲಿ ಶೇ 21ಕ್ಕೂ ಹೆಚ್ಚು ಮಂದಿ, 18 ವರ್ಷ ತುಂಬುವ ಮೊದಲೇ ತಮಗೆ ಮದುವೆಯಾಗಿತ್ತು ಎಂದು ಹೇಳಿಕೊಂಡಿದ್ದಾರೆ. ಈ ಬಾಲ್ಯವಿವಾಹಗಳಲ್ಲಿ ಬಹುತೇಕ ಯಾರ ವಿರುದ್ಧವೂ ಪ್ರಕರಣ ದಾಖಲಾಗಿಲ್ಲ. ಆದರೆ, ಅಸ್ಸಾಂನಲ್ಲಿ ಮುಸ್ಲಿಮರನ್ನು ಗುರಿಯಾಗಿಸಿ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂಬ ಆರೋಪ ಇದೆ

–––––

ದೇಶದಲ್ಲಿ ಬಾಲ್ಯವಿವಾಹವು ಅವ್ಯಾಹತವಾಗಿ ನಡೆಯುತ್ತಿವೆ ಎಂದು ಸರ್ಕಾರದ ದಾಖಲೆಗಳೇ ಹೇಳುತ್ತವೆ. ಅವುಗಳ ವಿರುದ್ಧ ಯಾವುದೇ ಪ್ರಕರಣ ದಾಖಲಾಗುತ್ತಿಲ್ಲ ಎಂಬುದರತ್ತಲೂ ಸರ್ಕಾರದ ದಾಖಲೆಗಳೇ ಬೊಟ್ಟುಮಾಡುತ್ತವೆ. ಆದರೆ, ಬಾಲ್ಯವಿವಾಹಗಳಿಗೆ ಸಂಬಂಧಿಸಿದಂತೆ ಸರ್ಕಾರದ ಬಳಿ ನಿಖರ ಮಾಹಿತಿಯೇ ಇಲ್ಲ.

ದೇಶದಲ್ಲಿನ ಪ್ರತಿ ಕುಟುಂಬದ ಸ್ಥಿತಿಗತಿ ಪರಿಶೀಲನೆಗೆ ಕೇಂದ್ರ ಆರೋಗ್ಯ ಸಚಿವಾಲಯವು ಪ್ರತಿ ಐದು ವರ್ಷಕ್ಕೊಮ್ಮೆ ‘ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ’ಯನ್ನು ನಡೆಸುತ್ತದೆ. ಕುಟುಂಬದ ಎಲ್ಲಾ ಸದಸ್ಯರ ಆರೋಗ್ಯ, ವೈವಾಹಿಕ ಸ್ಥಿತಿಗತಿ, ವಿವಾಹವಾದ ವಯಸ್ಸು ಮೊದಲಾದ ಮಾಹಿತಿಯನ್ನು ಸಂಗ್ರಹಿಸುತ್ತದೆ. ಇಂತಹ ಐದನೇ ಸುತ್ತಿನ ಸಮೀಕ್ಷೆಯನ್ನು (ಎನ್‌ಎಫ್‌ಎಚ್‌ಎಸ್‌) 2019–21ರ ಮಧ್ಯೆ ನಡೆಸಲಾಗಿತ್ತು. ಈ ಸಮೀಕ್ಷೆಯಲ್ಲಿ ಭಾಗಿಯಾದ ವಿವಾಹಿತ ಮಹಿಳೆಯರಲ್ಲಿ ಹಲವರು, ತಾವು ಬಾಲ್ಯವಿವಾಹವಾಗಿದ್ದೇವೆ ಎಂಬುದನ್ನು ಹೇಳಿಕೊಂಡಿದ್ದಾರೆ. 2022ರಲ್ಲಿ ಬಿಡುಗಡೆಯಾಗಿದ್ದ ಎನ್‌ಎಫ್‌ಎಚ್‌ಎಸ್‌–5ರ ವರದಿಯಲ್ಲಿ ಬಾಲ್ಯವಿವಾಹಕ್ಕೆ ಸಂಬಂಧಿಸಿದ ಮಾಹಿತಿಯನ್ನು ಉಲ್ಲೇಖಿಸಲಾಗಿದೆ.

2019–21ರ ಅವಧಿಯಲ್ಲಿ ಸಮೀಕ್ಷೆಗಾಗಿ, ಬಾಲ್ಯ ವಿವಾಹದ ಮಾಹಿತಿ ಕೇಳಲಾದ ಮಹಿಳೆಯರ ವಯಸ್ಸು 20–24 ವರ್ಷಗಳಷ್ಟು. ದೇಶದಾದ್ಯಂತ 20–24 ವರ್ಷ ವಯಸ್ಸಿನ ವಿವಾಹಿತ ಮಹಿಳೆಯರಲ್ಲಿ ಶೇ 23.3ರಷ್ಟು ಮಂದಿ ‘ತಮಗೆ 18 ವರ್ಷ ತುಂಬುವ ಮೊದಲೇ ವಿವಾಹವಾಗಿತ್ತು’ ಎಂದು ಹೇಳಿಕೊಂಡಿದ್ದಾರೆ ಎನ್ನುತ್ತದೆ ಎನ್‌ಎಫ್‌ಎಚ್‌ಎಸ್‌–5 ವರದಿ.

ಇದೇ ಸಮೀಕ್ಷೆ ವೇಳೆ ದೇಶದಾದ್ಯಂತ 15–19 ವರ್ಷ ವಯಸ್ಸಿನ ವಿವಾಹಿತ ಬಾಲಕಿ/ಯುವತಿಯರಲ್ಲಿ ಶೇ 6.9ರಷ್ಟು ಮಂದಿ ತಾವು ಗರ್ಭಿಣಿ ಅಥವಾ ತಾಯಿಯಾಗಿದ್ದೇವೆ ಎಂಬುದನ್ನು ಹೇಳಿಕೊಂಡಿದ್ದಾರೆ. ಈ ದತ್ತಾಂಶವೂ ಬಾಲ್ಯವಿವಾಹವನ್ನು ಸೂಚಿಸುತ್ತದೆ. ಈ ಮಾಹಿತಿಯನ್ನೂ ಒಟ್ಟುಗೂಡಿಸಿದರೆ, ಬಾಲ್ಯವಿವಾಹದ ಪ್ರಮಾಣ ಮತ್ತಷ್ಟು ಹೆಚ್ಚುತ್ತದೆ.

ಆದರೆ, 2021ರಲ್ಲಿ ದೇಶದಾದ್ಯಂತ ಬಾಲ್ಯವಿವಾಹ ನಿಷೇಧ ಕಾಯ್ದೆ ಅಡಿ ದಾಖಲಾದ ಪ್ರಕರಣಗಳ ಸಂಖ್ಯೆ 1,050 ಮಾತ್ರ. ಸರ್ಕಾರವೇ ಈ ಮಾಹಿತಿ ಸಂಗ್ರಹಿಸಿದ್ದರೂ, ಈ ದತ್ತಾಂಶವನ್ನು ಅಧ್ಯಯನಕ್ಕೆ ಮಾತ್ರ ಬಳಸಿಕೊಂಡಿದೆ.

ದೇಶದಲ್ಲಿ ಬಾಲ್ಯವಿವಾಹವಾದ ಮಹಿಳೆಯರ ಶೇಕಡಾವಾರು ಪ್ರಮಾಣವಷ್ಟೇ ಲಭ್ಯವಿದೆ. ಆದರೆ ಇತ್ತೀಚಿನ ಜನಸಂಖ್ಯಾ ಮಾಹಿತಿ ಲಭ್ಯವಿಲ್ಲದಿರುವ ಕಾರಣ, ಎಷ್ಟು ಮಹಿಳೆಯರು ಬಾಲ್ಯವಿವಾಹಕ್ಕೆ ಒಳಗಾಗಿರಬಹುದು ಎಂಬ ಸಂಖ್ಯೆಯನ್ನು ಅಂದಾಜು ಮಾಡಲು ಸಾಧ್ಯವಾಗಿಲ್ಲ. ಹೀಗಾಗಿ ಬಾಲ್ಯವಿವಾಹಕ್ಕೆ ಸಂಬಂಧಿಸಿದಂತೆ ಸರ್ಕಾರದ ಬಳಿ ನಿಖರವಾದ ಮಾಹಿತಿ ಇಲ್ಲ.

ಕರ್ನಾಟಕ: ಬಾಲ್ಯ ವಿವಾಹ–14 ಜಿಲ್ಲೆಗಳಲ್ಲಿ ಏರಿಕೆ

ಬಾಲ್ಯವಿವಾಹ ತಡೆಯುವ ದಿಸೆಯಲ್ಲಿ ರಾಜ್ಯ ಸರ್ಕಾರ ಕೈಗೊಂಡ ಕ್ರಮಗಳು ಏನೇನೂ ಸಾಲವು ಎಂಬುದನ್ನು ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯ 2019–21ರ ಸಾಲಿನ ವರದಿಯ (ಎನ್‌ಎಫ್‌ಎಚ್‌ಎಸ್–5) ದತ್ತಾಂಶಗಳು ತಿಳಿಸುತ್ತವೆ.

ರಾಜ್ಯದಲ್ಲಿ ಬಾಲ್ಯವಿವಾಹಕ್ಕೆ ಒಳಗಾದವರ ಪ್ರಮಾಣ ಶೇ 21.3ರಷ್ಟಿದೆ ಎಂದು ಎನ್‌ಎಫ್‌ಎಚ್‌ಎಸ್–5 ವರದಿ ಹೇಳುತ್ತದೆ. ಆದರೆ, 2015–16ನೇ ಸಾಲಿನಲ್ಲಿ (ಎನ್‌ಎಫ್‌ಎಚ್‌ಎಸ್–4) ಈ ಪ್ರಮಾಣ ಶೇ 21.4ರಷ್ಟಿತ್ತು ಎಂದು ಉಲ್ಲೇಖವಾಗಿದೆ. ಈ ಎರಡೂ ವರದಿಗಳನ್ನು ಗಮನಿಸಿದರೆ, ಬಾಲ್ಯವಿವಾಹಕ್ಕೆ ಒಳಗಾದ ಮಹಿಳೆಯರ ಪ್ರಮಾಣದಲ್ಲಿ ಆಗಿರುವ ಇಳಿಕೆ ಶೇಕಡಾ 0.1ರಷ್ಟು ಮಾತ್ರ. ಇದು ತೀರಾ ನಗಣ್ಯ. 18 ವರ್ಷಕ್ಕಿಂತಲೂ ಕಡಿಮೆ ವಯಸ್ಸಿನ ಹೆಣ್ಣುಮಕ್ಕಳ ವಿವಾಹ ತಡೆಯಲು ಸರ್ಕಾರವು ನಡೆಸಿರಬಹುದಾದ ಯತ್ನಗಳ ಯಶಸ್ಸಿನ ಮಟ್ಟವನ್ನು ಈ ವರದಿಗಳು ಬಿಂಬಿಸುತ್ತವೆ.

ರಾಜ್ಯದ 30 ಜಿಲ್ಲೆಗಳ ಪೈಕಿ (ಅವಿಭಜಿತ ಬಳ್ಳಾರಿ) 14 ಜಿಲ್ಲೆಗಳಲ್ಲಿ ಬಾಲ್ಯವಿವಾಹದ ಪ್ರಕರಣಗಳು ಹೆಚ್ಚಾಗಿ ನಡೆದಿವೆ ಎಂಬುದರ ಸೂಚನೆಗಳು ಇಲ್ಲಿ ದೊರಕುತ್ತವೆ. ಈ ಜಿಲ್ಲೆಗಳಲ್ಲಿ ಬಾಲ್ಯವಿವಾಹಕ್ಕೆ ಒಳಗಾಗಿದ್ದೇವೆ ಎಂಬುದರ ಮಾಹಿತಿ ನೀಡಿದ 20ರಿಂದ 24 ವರ್ಷದೊಳಗಿನ ಮಹಿಳೆಯರ ಪ್ರಮಾಣವು ಕಳೆದ ಅವಧಿಗೆ ಹೋಲಿಸಿದರೆ ಅಧಿಕವಾಗಿದೆ. ಈ ಹದಿನಾಲ್ಕು ಜಿಲ್ಲೆಗಳಲ್ಲಿ ರಾಜಧಾನಿ ಬೆಂಗಳೂರು ನಗರ ಜಿಲ್ಲೆಯೂ ಇದೆ (ಶೇ 11.6ರಿಂದ ಶೇ 14.5ಕ್ಕೆ ಏರಿಕೆ). ಬೆಂಗಳೂರಿನಿಂದ ಕೆಲವೇ ಕಿಲೋಮೀಟರ್‌ ದೂರದಲ್ಲಿರುವ ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು ಜಿಲ್ಲೆಗಳೂ ಈ ಪಟ್ಟಿಯಲ್ಲಿದ್ದು, ಜನರು ಬಾಲ್ಯವಿವಾಹ ತಡೆ ಕಾನೂನನ್ನು ನಿರ್ಲಕ್ಷಿಸಿರುವುದು ಕಾಣುತ್ತದೆ.

ವಿಜಯಪುರ, ಬಾಗಲಕೋಟೆ, ಯಾದಗಿರಿ, ಕಲಬುರಗಿ, ಗದಗ, ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಗಳಲ್ಲಿ ಈ ವಯೋಮಾನದ ಶೇ 25ಕ್ಕಿಂತಲೂ ಹೆಚ್ಚಿನ ಹೆಣ್ಣುಮಕ್ಕಳು ಇದ್ದಾರೆ. ವಿಜಯಪುರದಲ್ಲಿ ಈ ವಯೋಮಾನದವರ ಪ್ರಮಾಣ ಶೇ 31.9ರಿಂದ 39.2ಕ್ಕೆ ಏರಿಕೆಯಾಗಿದ್ದು, ಇದು ರಾಜ್ಯದಲ್ಲೇ ಅತ್ಯಧಿಕ. ಬಾಗಲಕೋಟೆಯಲ್ಲಿ ಶೇ 32.2ರಿಂದ 38.7ಕ್ಕೆ ಹೆಚ್ಚಳವಾಗಿದೆ. ಯಾದಗಿರಿಯಲ್ಲಿ ಶೇ 29.6ರಿಂದ ಶೇ 33.2ಕ್ಕೆ ಜಿಗಿದಿದೆ. ಚಿಕ್ಕಬಳ್ಳಾ‍ಪುರದಲ್ಲಿ ಶೇ 7ರಷ್ಟು (27.1) ಹೆಚ್ಚಳ ಕಂಡುಬಂದಿದೆ. ಕೋಲಾರದಲ್ಲಿಯೂ ಇದೇ ರೀತಿಯ (ಶೇ 26.7) ಚಿತ್ರಣವಿದೆ. ಕಲಬುರಗಿ, ಕೊಡಗು, ಶಿವಮೊಗ್ಗ, ಹಾಸನ, ಗದಗ, ಚಿತ್ರದುರ್ಗ, ಚಿಕ್ಕಮಗಳೂರು ಜಿಲ್ಲೆಗಳಲ್ಲಿಯೂ ಏರಿಕೆ ಕಂಡುಬಂದಿದೆ.

ಇಳಿಕೆ ಪ್ರವೃತ್ತಿ: ತಮಗೆ 18 ವರ್ಷ ತುಂಬುವ ಮೊದಲೇ ಮದುವೆ ಆಗಿತ್ತು ಎಂಬ ಮಾಹಿತಿ ಕೊಟ್ಟ 20–24ರ ವಯಸ್ಸಿನ ಮಹಿಳೆಯರ ಪ್ರಮಾಣವು ರಾಮನಗರ, ಕೊಪ್ಪಳ, ಮಂಡ್ಯ ಜಿಲ್ಲೆಗಳಲ್ಲಿ ಗಮನಾರ್ಹವಾಗಿ ಇಳಿಕೆಯಾಗಿದೆ. ಇಳಿಕೆ ಪ್ರಮಾಣವು ಶೇ 8ರಷ್ಟಿದೆ. ಈ ವರ್ಗದ ಹೆಣ್ಣುಮಕ್ಕಳು ಉಡುಪಿ (ಶೇ 4.4) ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ (ಶೇ 4.9) ರಾಜ್ಯದಲ್ಲೇ ಅತಿಕಡಿಮೆ ಪ್ರಮಾಣದಲ್ಲಿದ್ದಾರೆ. ಕೊಪ್ಪಳ, ಬೆಂಗಳೂರು ಗ್ರಾಮಾಂತರ, ಅವಿಭಜಿತ ಬಳ್ಳಾರಿ, ಚಾಮರಾಜನಗರ, ರಾಯಚೂರು ಜಿಲ್ಲೆಗಳಲ್ಲೂ ಇಳಿಮುಖ ಪ್ರವೃತ್ತಿ ಕಂಡುಬಂದಿದೆ ಎಂದು ವರದಿ ಹೇಳುತ್ತದೆ.

ದೇಶದ ಬಹುತೇಕ ರಾಜ್ಯಗಳಲ್ಲಿ ಹೆಚ್ಚು

l ದೇಶದಾದ್ಯಂತ ಬಾಲ್ಯವಿವಾಹ ಪ್ರವೃತ್ತಿ ಏಕರೂಪದಲ್ಲಿ ಇಲ್ಲ. ಬಾಲ್ಯವಿವಾಹದ ಪ್ರಮಾಣ ಅತ್ಯಂತ ಕಡಿಮೆ ಇರುವುದು ಲಡಾಖ್‌ನಲ್ಲಿ. ಬಾಲ್ಯವಿವಾಹದ ಪ್ರಮಾಣ ಅತಿಹೆಚ್ಚು ಇರುವುದು ಪಶ್ಚಿಮ ಬಂಗಾಳದಲ್ಲಿ. ದೇಶದ ಬೇರೆಲ್ಲಾ ರಾಜ್ಯಗಳಿಗೆ ಹೋಲಿಸಿದರೆ ಉತ್ತರದ ಜಮ್ಮು–ಕಾಶ್ಮೀರ, ಲಡಾಖ್‌, ಪಂಜಾಬ್‌, ಉತ್ತರಾಖಂಡದಲ್ಲಿ ಬಾಲ್ಯವಿವಾಹದ ಪ್ರಮಾಣ ಕಡಿಮೆ ಇದೆ

l ಈಶಾನ್ಯ ಭಾರತದ ಕೆಲವು ರಾಜ್ಯಗಳಲ್ಲಿ ಬಾಲ್ಯವಿವಾಹಕ್ಕೆ ಒಳಗಾದವರ ಪ್ರಮಾಣ ಹೆಚ್ಚು ಇದೆ, ಕೆಲವು ರಾಜ್ಯಗಳಲ್ಲಿ ಕಡಿಮೆ ಇದೆ

l ಬಾಲ್ಯವಿವಾಹದ ವಿರುದ್ಧ ಸರ್ಕಾರ ತೆಗೆದುಕೊಂಡ ಕ್ರಮದ ಕಾರಣ ಈಗ ಸುದ್ದಿಯಲ್ಲಿರುವ ಅಸ್ಸಾಂನಲ್ಲಿ ಬಾಲ್ಯವಿವಾಹದ ಪ್ರಮಾಣ ಶೇ 31.8ರಷ್ಟಿದೆ. 2014–15ರ ವೇಳೆಯಲ್ಲಿ ರಾಜ್ಯದಲ್ಲಿ ಬಾಲ್ಯವಿವಾಹದ ಪ್ರಮಾಣ ಶೇ 30.8ರಷ್ಟಿತ್ತು. ನಂತರದ ಐದು ವರ್ಷಗಳ ಅವಧಿಯಲ್ಲಿ ಬಾಲ್ಯವಿವಾಹದ ಪ್ರಮಾಣ ಏರಿಕೆಯಾಗಿದೆ

l ದಕ್ಷಿಣ ಭಾರತದ ರಾಜ್ಯಗಳಲ್ಲಿ ಬಾಲ್ಯವಿವಾಹದ ಪ್ರಮಾಣ ದೊಡ್ಡಮಟ್ಟದಲ್ಲಿಯೇ ಇದೆ. ಆಂಧ್ರಪ್ರದೇಶ, ತೆಲಂಗಾಣ ಮತ್ತು ಕರ್ನಾಟಕದಲ್ಲಿ ಬಾಲ್ಯವಿವಾಹದ ಪ್ರಮಾಣ ಶೇ 20ಕ್ಕಿಂತಲೂ ಹೆಚ್ಚು ಇದೆ. ಈ ರಾಜ್ಯಗಳಿಗೆ ಹೋಲಿಸಿದರೆ ಕೇರಳ ಮತ್ತು ತಮಿಳುನಾಡಿನಲ್ಲಿ ಬಾಲ್ಯವಿವಾಹದ ಪ್ರಮಾಣ ಕಡಿಮೆ ಇದೆ

l ಪಶ್ಚಿಮದ ರಾಜ್ಯಗಳಾದ ಮಹಾರಾಷ್ಟ್ರ, ಗುಜರಾತ್‌ ಮತ್ತು ರಾಜಸ್ಥಾನದಲ್ಲೂ ಬಾಲ್ಯವಿವಾಹದ ಪ್ರಮಾಣ ಶೇ 20ಕ್ಕಿಂತ ಹೆಚ್ಚು. ಮಧ್ಯಪ್ರದೇಶದಲ್ಲೂ ಇದೇ ಸ್ಥಿತಿ ಇದೆ

l ಹಿಂದಿ ಭಾಷಿಕ ರಾಜ್ಯಗಳಲ್ಲಿ ಬಾಲ್ಯವಿವಾಹದ ಪ್ರಮಾಣ ಅತಿಹೆಚ್ಚು ಇರುವುದು ಬಿಹಾರದಲ್ಲಿ (ಶೇ40.8). ಜಾರ್ಖಂಡ್‌ನಲ್ಲಿ ಈ ಪ್ರಮಾಣ ಶೇ 32.2ರಷ್ಟು

ಅಸ್ಸಾಂ: ಮುಸ್ಲಿಮರು ಹೆಚ್ಚಿರುವ ಜಿಲ್ಲೆಗಳಲ್ಲಿ ಬಂಧನ ಹೆಚ್ಚು

ಅಸ್ಸಾಂನಲ್ಲಿ ಬಾಲ್ಯವಿವಾಹ ತಡೆ ಕಾಯ್ದೆ ಅಡಿ ಪುರುಷರನ್ನು ಬಂಧಿಸುವ ಕಾರ್ಯಾಚರಣೆ ಭಾನುವಾರವೂ ಮುಂದುವರಿದಿತ್ತು. ಬಾಲ್ಯವಿವಾಹ ತಡೆ ಕಾಯ್ದೆಯಡಿ ಬಂಧಿಸಲಾದ ಪುರುಷರ ಸಂಖ್ಯೆ ಭಾನುವಾರದ ವೇಳೆಗೆ 2,278ರಷ್ಟಾಗಿತ್ತು. ಈ ಕಾಯ್ದೆ ಅಡಿ ಈವರೆಗೆ ಒಟ್ಟು 4,074 ಪ್ರಕರಣಗಳು ದಾಖಲಾಗಿವೆ. ಬಾಲ್ಯವಿವಾಹವನ್ನು ನಡೆಸಿಕೊಟ್ಟ ಖಾಜಿಗಳು, ಪುರೋಹಿತರ ಸಂಖ್ಯೆ 50 ದಾಟಿದೆ. ಮುಸ್ಲಿಮರು ಹೆಚ್ಚಿರುವ ಜಿಲ್ಲೆಗಳಲ್ಲೇ ಹೆಚ್ಚು ಜನರನ್ನು ಬಂಧಿಸಲಾಗಿದೆ ಎಂದು ಇಲ್ಲಿನ ಸಾಮಾಜಿಕ ಕಾರ್ಯಕರ್ತರು ಆರೋಪಿಸಿದ್ದಾರೆ. ಮುಸ್ಲಿಂ ಪ್ರಾಬಲ್ಯವಿರುವ ಧುಬ್ರಿ (374), ಗೋಲಪಾರಾ (157), ಬರ್ಪೇಟಾ (81), ಮೊರಿಗಾನ್‌ನಲ್ಲಿ (224) ಪ್ರಕರಣಗಳು ದಾಖಲಾಗಿವೆ.

ಬಾಲ್ಯವಿವಾಹ ತಡೆ ಕಾಯ್ದೆ ಅಡಿ ದಾಖಲಾಗುವ ಪ್ರಕರಣದಲ್ಲಿ ಜಾಮೀನು ನೀಡಲು ಅವಕಾಶವಿದೆ. ಆದರೆ, 14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಬಾಲಕಿಯರನ್ನು ಮದುವೆಯಾದವರ ವಿರುದ್ಧ ‘ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆ–ಪೋಕ್ಸೊ’ ಅಡಿಯಲ್ಲಿ ಪ್ರಕರಣ ದಾಖಲಿಸುವಂತೆ ಮುಖ್ಯಮಂತ್ರಿ ಹಿಮಂತ್ ಬಿಸ್ವ ಶರ್ಮಾ ಸೂಚನೆ ನೀಡಿದ್ದಾರೆ.

ಧುಬ್ರಿಯಲ್ಲಿ, ಈ ಪ್ರಕರಣದಲ್ಲಿ ಬಂಧನಕ್ಕೊಳಗಾದವರ ಪರವಾಗಿ ವಕಾಲತ್ತು ವಹಿಸಿರುವ ವಕೀಲ ಮಸೂದ್ ಝಮನ್‌ ಮುಖ್ಯಮಂತ್ರಿಯ ಈ ಸೂಚನೆಯನ್ನು ಪ್ರಶ್ನಿಸಿದ್ದಾರೆ. ‘ಬಾಲ್ಯವಿವಾಹ ತಡೆಗೆ ಈಗಾಗಲೇ ಒಂದು ಕಾಯ್ದೆ ಇದೆ. ಹೀಗಿದ್ದೂ, ಪೋಕ್ಸೊ ಕಾಯ್ದೆ ಅಡಿ ಪ್ರಕರಣ ದಾಖಲಿಸಲು ಸರ್ಕಾರ ನಿರ್ಧರಿಸಿದ್ದೇಕೆ ಎಂಬುದು ನನಗೆ ಅರ್ಥವಾಗುತ್ತಿಲ್ಲ’ ಎಂದು ಅವರು ಹೇಳಿದ್ದಾರೆ.

‘ನಮ್ಮನ್ನು ನೋಡಿಕೊಳ್ಳುವವರು ಯಾರು?’- ಧುಬ್ರಿ ಜಿಲ್ಲೆಯ ಪೊಲೀಸ್‌ ಠಾಣೆ ಎದುರು ಗೋಳಿಡುತ್ತಿದ್ದ 17 ವರ್ಷದ ಸಾಜಿದಾ ಬೇಗಂ ಅವರ ಪ್ರಶ್ನೆ ಇದು. ಸಾಜಿದಾ ಅವರ ಪತಿಯನ್ನು ಪೊಲೀಸರು ಬಾಲ್ಯವಿವಾಹ ತಡೆ ಕಾಯ್ದೆ ಅಡಿ ಬಂಧಿಸಿದ್ದಾರೆ. ಕಳೆದ ತಿಂಗಳಷ್ಟೇ ತಮ್ಮ ಮೊದಲ ಮಗುವಿಗೆ ಜನ್ಮ ನೀಡಿದ ಸಾಜಿದಾ, ‘ನನ್ನ ಗಂಡನನ್ನು ಬಿಡಿ. ಇಲ್ಲವೇ ನನ್ನನ್ನೂ ಜೈಲಿಗೆ ಹಾಕಿ’ ಎಂದು ಗೋಳಿಡುತ್ತಿದ್ದಾರೆ. ರಾಜ್ಯದ ಇತರ ಜಿಲ್ಲೆಗಳ ಪೊಲೀಸ್‌ ಠಾಣೆಗಳ ಎದುರೂ ಇಂಥದ್ದೇ ದೃಶ್ಯಗಳು ಸಾಮಾನ್ಯ ಎಂಬಂತಾಗಿದ್ದವು.

ಆಧಾರ: ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷಾ ವರದಿ–5, ಎನ್‌ಸಿಆರ್‌ಬಿಯ ‘ಭಾರತದಲ್ಲಿ ಅಪರಾಧ–2021’ ವರದಿ, ಪಿಟಿಐ ಪ್ರಜಾವಾಣಿ ಗ್ರಾಫಿಕ್ಸ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT