ಬುಧವಾರ, ಮೇ 18, 2022
23 °C

ಆಳ-ಅಗಲ| ಬ್ಯಾಡ್‌ ಬ್ಯಾಂಕ್‌ ಬೇಕೇ ಬೇಡವೇ?

ಉದಯ ಯು./ಜಯಸಿಂಹ ಆರ್. Updated:

ಅಕ್ಷರ ಗಾತ್ರ : | |

Prajavani

ಬ್ಯಾಡ್‌ ಬ್ಯಾಂಕ್‌ ಎಂದರೇನು?

ಬ್ಯಾಂಕ್‌ ಮತ್ತು ಹಣಕಾಸು ಸಂಸ್ಥೆಗಳ ವಸೂಲಾಗದ ಸಾಲಗಳ (ಎನ್‌ಪಿಎ) ನಿರ್ವಹಣೆ ಮಾಡಲೆಂದೇ ಸ್ಥಾಪಿಸುವ ಪ್ರತ್ಯೇಕ ಬ್ಯಾಂಕ್‌ ಅನ್ನುಬ್ಯಾಡ್‌ ಬ್ಯಾಂಕ್ ಎಂದು ಕರೆಯಲಾಗುತ್ತದೆ. ಬ್ಯಾಂಕ್‌ ಮತ್ತು ಹಣಕಾಸು ಸಂಸ್ಥೆಗಳ ಎನ್‌ಪಿಎಗಳನ್ನು ಈ ಬ್ಯಾಡ್‌ ಬ್ಯಾಂಕ್‌ಗಳಿಗೆ ವರ್ಗಾಯಿಸಲಾಗುತ್ತದೆ. ಹೀಗೆ ಮಾಡಿದಾಗ ಬ್ಯಾಂಕ್ ಮತ್ತು ಹಣಕಾಸು ಸಂಸ್ಥೆಗಳ ನಷ್ಟದ ಪ್ರಮಾಣ ಕಡಿಮೆಯಾಗುತ್ತದೆ. ಇದರಿಂದ ಸಾಲ ನೀಡಲು ಬ್ಯಾಂಕ್‌ಗಳ ಬಳಿ ಹಣ ಉಳಿಯುತ್ತದೆ. ಬ್ಯಾಂಕ್‌ಗಳು ತಮ್ಮ ಆರ್ಥಿಕ ಚಟುವಟಿಕೆಗಳನ್ನು ಸರಾಗವಾಗಿ ನಡೆಸಲು ಸಾಧ್ಯವಾಗುತ್ತದೆ.

ಬ್ಯಾಡ್‌ ಬ್ಯಾಂಕ್‌ಗಳ ಪರಿಕಲ್ಪನೆ ಹೊಸತೇನೂ ಅಲ್ಲ. ಬ್ಯಾಂಕ್‌ಗಳು ದಿವಾಳಿಯಾಗುವ ಸ್ಥಿತಿ ಬಂದಾಗ ಮತ್ತು ಎನ್‌ಪಿಎ ಪ್ರಮಾಣ ಹೆಚ್ಚಾದಾಗ ವಿಶ್ವದ ವಿವಿಧ ದೇಶಗಳು ಬ್ಯಾಡ್‌ ಬ್ಯಾಂಕ್‌ಗಳನ್ನು ಸ್ಥಾಪಿಸಿವೆ. ಆರ್ಥಿಕತೆ ಕುಸಿತದ ಹಾದಿಯಲ್ಲಿ ಇದ್ದಾಗ ಹಲವು ದೇಶಗಳು ಬ್ಯಾಡ್‌ ಬ್ಯಾಂಕ್‌ಗಳನ್ನು ಸ್ಥಾಪಿಸಿವೆ. ಈಗ ಭಾರತವೂ ಈ ಹಾದಿ ಹಿಡಿದಿದೆ.

l ಬ್ಯಾಂಕ್‌ಗಳು ತಮ್ಮ ಎನ್‌ಪಿಎಗಳನ್ನು ನಿರ್ವಹಿಸಲು ತಮ್ಮಲ್ಲೇ ಒಂದು ಉಪ ಘಟಕವನ್ನು ಸ್ಥಾಪಿಸಿದರೂ ಅದು ಬ್ಯಾಡ್‌ ಬ್ಯಾಂಕ್‌ ಎನಿಸಿಕೊಳ್ಳುತ್ತದೆ. ಇಂತಹ ವ್ಯವಸ್ಥೆಯಲ್ಲಿ ಎನ್‌ಪಿಎ ಮತ್ತು ಸಂಭಾವ್ಯ ಎನ್‌ಪಿಎಯನ್ನು ಬ್ಯಾಡ್‌ ಬ್ಯಾಂಕ್ ಘಟಕಕ್ಕೆ ವರ್ಗಾಯಿಸಲಾಗುತ್ತದೆ

l ಬ್ಯಾಂಕ್‌ಗಳು ತಮ್ಮ ಎನ್‌ಪಿಎಗಳನ್ನು ನಿರ್ವಹಿಸಲು ಪ್ರತ್ಯೇಕ ಬ್ಯಾಂಕ್ ಅನ್ನೇ ಸ್ಥಾಪಿಸಬಹುದು. ಇದೂ ಬ್ಯಾಡ್‌ ಬ್ಯಾಂಕ್ ಎನಿಸಿಕೊಳ್ಳುತ್ತದೆ. ಇಂತಹ ವ್ಯವಸ್ಥೆಯಲ್ಲಿಯೂ ಪ್ರತ್ಯೇಕ ಬ್ಯಾಂಕ್‌ಗೆ ಎನ್‌ಪಿಎ ಮತ್ತು ಸಂಭಾವ್ಯ ಎನ್‌ಪಿಎಗಳನ್ನು ವರ್ಗಾಯಿಸಲಾಗುತ್ತದೆ. ಇದು ಒಂದು ಬ್ಯಾಂಕ್‌ಗೆ ಮಾತ್ರ ಸಂಬಂಧಪಟ್ಟಿರಬಹುದು ಅಥವಾ ಹಲವು ಬ್ಯಾಂಕ್‌ಗಳು ಸೇರಿ ಒಂದು ಬ್ಯಾಡ್‌ ಬ್ಯಾಂಕ್ ಸ್ಥಾಪಿಸಬಹುದು

l ದೇಶದ ಎಲ್ಲಾ ಬ್ಯಾಂಕ್‌ಗಳ ಎನ್‌ಪಿಎಗಳನ್ನು ನಿರ್ವಹಣೆ ಮಾಡಲು ಸರ್ಕಾರವೇ ಒಂದು ಬ್ಯಾಡ್‌ ಬ್ಯಾಂಕ್‌ ಸ್ಥಾಪಿಸಬಹುದು. ಎನ್‌ಪಿಎ ಮತ್ತು ಸಂಭಾವ್ಯ ಎನ್‌ಪಿಎಗಳನ್ನು ಈ ಬ್ಯಾಡ್‌ ಬ್ಯಾಂಕ್‌ಗೆ ವರ್ಗಾಯಿಸಲಾಗುತ್ತದೆ. ಸರ್ಕಾರ ಬೆಂಬಲಿತ ಬ್ಯಾಡ್‌ ಬ್ಯಾಂಕ್‌ ವ್ಯವಸ್ಥೆ ಹೆಚ್ಚು ಪರಿಣಾಮಕಾರಿ ಎಂಬ ಅಭಿಪ್ರಾಯವಿದೆ. ಹೀಗಾಗಿ ಇಂತಹ ವ್ಯವಸ್ಥೆ ಹೆಚ್ಚು ಚಾಲ್ತಿಯಲ್ಲಿ ಇದೆ. ಭಾರತದಲ್ಲೂ ಈಗ ಇಂತಹದ್ದೇ ಬ್ಯಾಡ್‌ ಬ್ಯಾಂಕ್‌ ಸ್ಥಾಪಿಸಲು ಸರ್ಕಾರ ಚಿಂತನೆ ನಡೆಸಿದೆ

ಕಾರ್ಯನಿರ್ವಹಣೆ ಹೇಗೆ?

ಸರ್ಕಾರ ಬೆಂಬಲಿತ ಬ್ಯಾಡ್‌ ಬ್ಯಾಂಕ್‌ಗಳ ಸ್ಥಾಪನೆ ವೇಳೆ ಸರ್ಕಾರವೇ ಸ್ವಲ್ಪ ಬಂಡವಾಳ ಹೂಡುತ್ತದೆ. ಈ ಬ್ಯಾಂಕ್‌ಗಳು ಮಾರುಕಟ್ಟೆಯಿಂದಲೂ ಬಂಡವಾಳವನ್ನು ಸಂಗ್ರಹಿಸಲು ಅವಕಾಶವಿರುತ್ತದೆ. ಬಂಡವಾಳ ಕ್ರೋಡೀಕರಣದ ನಂತರ, ಬ್ಯಾಂಕ್‌ಗಳು ಮತ್ತು ಹಣಕಾಸು ಸಂಸ್ಥೆಗಳ ಎನ್‌ಪಿಎಗಳನ್ನು ಈ ಬ್ಯಾಡ್‌ ಬ್ಯಾಂಕ್‌ಗಳಿಗೆ ವರ್ಗಾಯಿಸಲಾಗುತ್ತದೆ. ವರ್ಗಾವಣೆ ಎಂದರೆ, ಎನ್‌ಪಿಎಗಳನ್ನು ಬ್ಯಾಡ್‌ ಬ್ಯಾಂಕ್ ಖರೀದಿಸುತ್ತದೆ. ಈ ಖರೀದಿ ಬೆಲೆಯು ವಸೂಲಾಗಲು ಬಾಕಿ ಇರುವ ಮೊತ್ತಕ್ಕಿಂತ ಕಡಿಮೆ ಇರುತ್ತದೆ.

ಎನ್‌ಪಿಎಗಳನ್ನು ವಸೂಲಿ ಮಾಡುವ ಮತ್ತು ಅದರಿಂದ ಲಾಭಗಳಿಸುವ ಉದ್ದೇಶದಿಂದ ಅವುಗಳನ್ನು ಬ್ಯಾಡ್‌ ಬ್ಯಾಂಕ್‌ಗಳು ಖರೀದಿಸಿರುತ್ತವೆ. ಇದಕ್ಕಾಗಿ ಸರ್ಕಾರ ಹೂಡಿರುವ ಬಂಡವಾಳ ಮತ್ತು ಮಾರುಕಟ್ಟೆಯಿಂದ ಸಂಗ್ರಹಿಸಿದ ಬಂಡವಾಳವನ್ನು ಬಳಸಲಾಗುತ್ತದೆ. ಹೀಗೆ ಖರೀದಿಸಿದ ಎನ್‌ಪಿಎಗಳನ್ನು ವಸೂಲಿ ಮಾಡಲು ಬ್ಯಾಡ್‌ ಬ್ಯಾಂಕ್‌ಗಳು ಕ್ರಮ ತೆಗೆದುಕೊಳ್ಳುತ್ತವೆ. ಎನ್‌ಪಿಎ ವಸೂಲಿಯೇ ಬ್ಯಾಡ್‌ ಬ್ಯಾಂಕ್‌ಗಳ ಪ್ರಾಥಮಿಕ ಮತ್ತು ಏಕೈಕ ಕರ್ತವ್ಯವಾಗಿರುವ ಕಾರಣ, ಎನ್‌ಪಿಎಗಳ ವಸೂಲಿ ಪ್ರಮಾಣ ಹೆಚ್ಚು ಇರುತ್ತದೆ.

ಎಲ್ಲೆಲ್ಲಿ ಇದೆ, ಸ್ಥಿತಿಗತಿ ಏನು?

ಸದ್ಯ ವಿಶ್ವದಲ್ಲಿ ಎಲ್ಲಿಯೂ ಸರ್ಕಾರದ ಬೆಂಬಲದ ಬ್ಯಾಡ್‌ ಬ್ಯಾಂಕ್‌ಗಳು ಕಾರ್ಯನಿರ್ವಹಿಸುತ್ತಿಲ್ಲ. ಹಲವು ದೇಶಗಳ ಸರ್ಕಾರಗಳು ಬ್ಯಾಡ್‌ ಬ್ಯಾಂಕ್‌ಗಳನ್ನು ಸ್ಥಾಪಿಸಿ, ಆರ್ಥಿಕ ಬಿಕ್ಕಟ್ಟು ಪರಿಹಾರವಾದ ನಂತರ ಅವುಗಳನ್ನು ಮುಚ್ಚಿವೆ.

1980ರಲ್ಲಿ ಅಮೆರಿಕದ ಮೆಲ್ಲನ್ ಬ್ಯಾಂಕ್‌ ದಿವಾಳಿ ಹಂತ ತಲುಪಿದಾಗ ಬ್ಯಾಡ್‌ ಬ್ಯಾಂಕ್‌ ಅನ್ನು ಸ್ಥಾಪಿಸುವ ಪ್ರಸ್ತಾವವನ್ನು ಇಡಲಾಗಿತ್ತು. ಈ ಪ್ರಸ್ತಾವ ಕಾರ್ಯರೂಪಕ್ಕೆ ಬಂದಿದ್ದು, 1988ರಲ್ಲಿ. ಈ ಬ್ಯಾಡ್‌ ಬ್ಯಾಂಕ್‌ನ ಸ್ಥಾಪನೆಯ ಉದ್ದೇಶ ಈಡೇರಿದ ನಂತರ 1995ರಲ್ಲಿ ಅದನ್ನು ರದ್ದುಪಡಿಸಲಾಯಿತು. ಭಾರತದಲ್ಲಿ 2004ರಲ್ಲಿ ಐಡಿಬಿಐ ಅನ್ನು ಎನ್‌ಪಿಎ ಇಂದ ರಕ್ಷಿಸಲು ಮತ್ತು ಬ್ಯಾಂಕ್‌ ಆಗಿ ಪರಿವರ್ತಿಸಲು ‘ಸ್ಟ್ರೆಸ್ಡ್‌ ಅಸೆಟ್ಸ್ ಸ್ಟೆಬಿಲೈಸೇಷನ್‌ ಫಂಡ್‌’ ಅನ್ನು ಸ್ಥಾಪಿಸಲಾಗಿತ್ತು. ಈ ನಿಧಿಯ ಸ್ಥಾಪನೆಯಿಂದ ಐಡಿಬಿಐಗೆ ₹ 9,000 ಕೋಟಿ ಲಭ್ಯವಾಗಿತ್ತು.

2008ರ ಜಾಗತಿಕ ಆರ್ಥಿಕ ಹಿಂಜರಿತದ ಸಂದರ್ಭದಲ್ಲಿ ವಿಶ್ವದ ಹಲವು ದೇಶಗಳು ಬ್ಯಾಡ್‌ ಬ್ಯಾಂಕ್‌ಗಳನ್ನು ಸ್ಥಾಪಿಸಿದ್ದವು. ಕೆಲವು ಬ್ಯಾಂಕ್‌ಗಳು ತಮ್ಮದೇ ಪ್ರತ್ಯೇಕ ಬ್ಯಾಡ್‌ ಬ್ಯಾಂಕ್‌ಗಳನ್ನು ಸ್ಥಾಪಿಸಿಕೊಂಡಿದ್ದವು. ಕೆಲವು ದೇಶಗಳಲ್ಲಿ ಸರ್ಕಾರಗಳೇ ಬ್ಯಾಡ್‌ ಬ್ಯಾಂಕ್‌ಗಳನ್ನು ಸ್ಥಾಪಿಸಿದ್ದವು. ಬ್ಯಾಂಕ್‌ ಆಫ್ ಅಮೆರಿಕ, ಸಿಟಿಗ್ರೂಪ್ ಬ್ಯಾಂಕ್‌, ಸ್ವೀಡ್‌ಬ್ಯಾಂಕ್‌ಗಳು ಬ್ಯಾಡ್‌ ಬ್ಯಾಂಕ್‌ಗಳನ್ನು ಸ್ಥಾಪಿಸಿದ್ದವು. ಬೆಲ್ಜಿಯಂ, ಐರ್ಲೆಂಡ್‌, ಇಂಡೊನೇಷ್ಯಾ, ಜರ್ಮನಿ ಸೇರಿದಂತೆ ಹಲವು ದೇಶಗಳ ಸರ್ಕಾರಗಳು ಬ್ಯಾಡ್‌ ಬ್ಯಾಂಕ್‌ಗಳನ್ನು ಸ್ಥಾಪಿಸಿದ್ದವು. ಆರ್ಥಿಕತೆ ಪ್ರಗತಿಯತ್ತ ಹೊರಳಿದ ನಂತರ ಈ ಬ್ಯಾಡ್‌ ಬ್ಯಾಂಕ್‌ಗಳನ್ನು ಮುಚ್ಚಲಾಯಿತು.

ಸಮಸ್ಯೆ ಬಗೆಹರಿಯಲಿದೆಯೇ?

ಬ್ಯಾಡ್‌ ಬ್ಯಾಂಕ್‌ ಸ್ಥಾಪನೆಯಿಂದ ಬ್ಯಾಂಕ್‌ಗಳ ಎನ್‌ಪಿಎ ಹೊರೆ ಸಂಪೂರ್ಣವಾಗಿ ಇಳಿಕೆಯಾಗುವುದಿಲ್ಲ. ಬ್ಯಾಂಕ್ ಮತ್ತು ಹಣಕಾಸು ಸಂಸ್ಥೆಗಳ ಎಲ್ಲಾ ಎನ್‌ಪಿಎಗಳನ್ನು ಬ್ಯಾಡ್‌ ಬ್ಯಾಂಕ್ ಖರೀದಿಸುವುದಿಲ್ಲ. ವಿಶ್ವದಲ್ಲಿ ಈವರೆಗೆ ಕಾರ್ಯನಿರ್ವಹಿಸಿದ ಬ್ಯಾಡ್‌ ಬ್ಯಾಂಕ್‌ಗಳು ವಸೂಲಾಗುವ ಸಾಧ್ಯತೆ ಅತ್ಯಧಿಕವಾಗಿರುವ ಎನ್‌ಪಿಎಗಳನ್ನು ಮಾತ್ರ ಖರೀದಿಸಿವೆ. ಹೀಗಾಗಿ ವಸೂಲಾಗುವ ಸಾಧ್ಯತೆ ಇಲ್ಲದ ಎನ್‌ಪಿಎಗಳು ಬ್ಯಾಂಕ್‌ ಮತ್ತು ಹಣಕಾಸು ಸಂಸ್ಥೆಗಳ ಬಳಿಯೇ ಉಳಿಯಲಿವೆ. ಆದರೆ, ಎನ್‌ಪಿಎಯ ಹೊರೆ ಇಳಿಯುತ್ತದೆ. ಎನ್‌ಪಿಎಗಳನ್ನು ವಸೂಲಿ ಮಾಡುವ ಹೊಣೆ ಕಡಿಮೆಯಾಗುತ್ತದೆ.

ಭಾರತಕ್ಕೆ ಅಗತ್ಯವಿದೆಯೇ?

ಭಾರತದ ಈಗಿನ ಆರ್ಥಿಕ ಸ್ಥಿತಿಗತಿಯಲ್ಲಿ ಬ್ಯಾಡ್‌ ಬ್ಯಾಂಕ್‌ನ ಅವಶ್ಯಕತೆ ಇದೆ ಎಂದು ಭಾರತದ ಬ್ಯಾಂಕ್‌ಗಳು, ಕೇಂದ್ರ ಸರ್ಕಾರ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್‌ಗೆ (ಆರ್‌ಬಿಐ) ಸಲ್ಲಿಸಿರುವ ಮನವಿಯಲ್ಲಿ ವಿವರಿಸಿವೆ. ಬ್ಯಾಡ್‌ ಬ್ಯಾಂಕ್‌ ಸ್ಥಾಪನೆಯಿಂದ ಬ್ಯಾಂಕ್‌ಗಳ ಎನ್‌ಪಿಎ ಹೊರೆ ಕಡಿಮೆಯಾಗುತ್ತದೆ. ಬ್ಯಾಲೆನ್ಸ್ ಶೀಟ್‌ನಲ್ಲಿ ಸಮತೋಲನ ಇರುತ್ತದೆ. ಇದರಿಂದ ಬ್ಯಾಂಕ್‌ಗಳ ಸಾಲ ನೀಡಿಕೆ ಸಾಮರ್ಥ್ಯ ಉತ್ತಮವಾಗುತ್ತದೆ. ಸಾಲ ನೀಡಿಕೆಯಿಂದ ಆರ್ಥಿಕತೆಗೆ ಚಾಲನೆ ದೊರೆಯುತ್ತದೆ ಎಂದು ಬ್ಯಾಂಕ್‌ಗಳು ಪ್ರತಿಪಾದಿಸಿವೆ.

ದೇಶದಲ್ಲಿ ಬ್ಯಾಡ್‌ ಬ್ಯಾಂಕ್‌ ಸ್ಥಾಪಿಸಲು ಕೇಂದ್ರ ಸರ್ಕಾರವೇ ಹಣ ಹೂಡಿಕೆ ಮಾಡಲಿದೆ. ಆರಂಭಿಕ ಹಂತದಲ್ಲಿ ಸರ್ಕಾರವು ₹ 10,000 ಕೋಟಿಯಿಂದ ₹15,000 ಕೋಟಿ ಅನುದಾನವನ್ನು ಬ್ಯಾಡ್‌ ಬ್ಯಾಂಕ್‌ಗೆ ನೀಡುವ ಸಾಧ್ಯತೆ ಇದೆ. ಇದು ತೆರಿಗೆದಾರರ ಹಣ. ಅಲ್ಲದೆ ಅಗತ್ಯವಿರುವ ಮತ್ತಷ್ಟು ಬಂಡವಾಳವನ್ನು ಬ್ಯಾಡ್‌ ಬ್ಯಾಂಕ್, ಮಾರುಕಟ್ಟೆಯಿಂದ ಸಂಗ್ರಹಿಸಲಿದೆ. ಈ ಬಂಡವಾಳದಿಂದಲೂ ಎನ್‌ಪಿಎಗಳನ್ನು ಖರೀದಿಸಲಾಗುತ್ತದೆ.

ಎನ್‌ಪಿಎಗಳು ವಸೂಲಿಯಾದರೆ ಸರ್ಕಾರ ಹೂಡಿರುವ ಬಂಡವಾಳ ಮತ್ತು ಹೂಡಿಕೆದಾರರ ಬಂಡವಾಳವು ವಾಪಸ್ ಆಗಲಿದೆ. ಎನ್‌ಪಿಎ ವಸೂಲಿ ಆಗದಿದ್ದರೆ, ತೆರಿಗೆದಾರರ ಹಣ ಮತ್ತು ಹೂಡಿಕೆದಾರರ ಹಣ ನಷ್ಟವಾಗಲಿದೆ. ಅಲ್ಲದೆ ಬ್ಯಾಡ್‌ ಬ್ಯಾಂಕ್‌, ಎನ್‌ಪಿಎಗಳ ಗೋದಾಮು ಆಗುವ ಅಪಾಯವೂ ಇದೆ.

ರಘುರಾಂ ರಾಜನ್‌ ವಿರೋಧ

ರಘುರಾಂ ರಾಜನ್ ಅವರು ಆರ್‌ಬಿಐ ಗವರ್ನರ್‌ ಆಗಿದ್ದ ಕಾಲದಲ್ಲೇ ‘ಬ್ಯಾಡ್‌ ಬ್ಯಾಂಕ್‌’ ಸ್ಥಾಪನೆಯ ಬಗ್ಗೆ ಚರ್ಚೆಗಳು ನಡೆದಿದ್ದವು. ಆದರೆ ಸ್ವತಃ ರಾಜನ್‌ ಅವರು ಈ ಚಿಂತನೆಯನ್ನು ಅಷ್ಟಾಗಿ ಒಪ್ಪಿಕೊಂಡಿರಲಿಲ್ಲ.

‘ಸಾಲವನ್ನು ಒಂದು ಬ್ಯಾಂಕ್‌ನಿಂದ ಇನ್ನೊಂದು ಬ್ಯಾಂಕ್‌ಗೆ ವರ್ಗಾವಣೆ ಮಾಡುವುದರಿಂದ ಸಮಸ್ಯೆ ಹೇಗೆ ಬಗೆಹರಿಯುತ್ತದೆ? ಬ್ಯಾಡ್‌ ಬ್ಯಾಂಕ್‌ ಸಹ ಸಾರ್ವಜನಿಕ ಕ್ಷೇತ್ರದ ಬ್ಯಾಂಕೇ ಆಗಿದ್ದರೆ, ಎನ್‌ಪಿಎ ಅನ್ನು ಸ್ಥಳಾಂತರ ಮಾಡಿದ್ದಷ್ಟೇ ಸಾಧನೆಯಾಗಬಹುದು. ಅದರ ಬದಲು, ಬ್ಯಾಡ್‌ ಬ್ಯಾಂಕ್‌ಗೆ ನೀಡುವ ಬಂಡವಾಳವನ್ನು, ನೇರವಾಗಿ ಸಾರ್ವಜನಿಕ ಕ್ಷೇತ್ರದ ಬ್ಯಾಂಕ್‌ಗಳಿಗೇ ಯಾಕೆ ಕೊಡಬಾರದು? ಒಂದು ವೇಳೆ ಬ್ಯಾಡ್‌ ಬ್ಯಾಂಕ್‌ ಖಾಸಗಿ ಕ್ಷೇತ್ರದ್ದಾಗಿದೆ ಎಂದರೆ, ಬರುವ ಹಣದಲ್ಲಿ ಸಾಕಷ್ಟು ಕಡಿತವಾಗುತ್ತದೆ ಎಂಬ ಕಾರಣಕ್ಕೆ ಸಾಲ ನೀಡಿರುವ ಸಾರ್ವಜನಿಕ ಕ್ಷೇತ್ರದ ಬ್ಯಾಂಕ್‌ಗಳು ಎನ್‌ಪಿಎಯನ್ನು ಅದಕ್ಕೆ ಹಸ್ತಾಂತರಿಸಲು ಹಿಂಜರಿಯಬಹುದು. ಒಟ್ಟಿನಲ್ಲಿ ಈ ಚಿಂತನೆಯಿಂದ ಏನನ್ನೂ ಸಾಧಿಸಿದಂತಾಗುವುದಿಲ್ಲ’ ಎಂದು ಅವರು ತಮ್ಮ ‘ಐ ಡು ವಾಟ್‌ ಐ ಡು’ ಕೃತಿಯಲ್ಲಿ ಬರೆದಿದ್ದಾರೆ.

ಪರ– ವಿರೋಧ ವಾದ

ಬ್ಯಾಡ್‌ ಬ್ಯಾಂಕ್‌ ಕಲ್ಪನೆಯ ಬಗ್ಗೆ ಪರ–ವಿರೋಧ ವಾದಗಳಿವೆ. ವಸೂಲಾಗದ ಸಾಲವನ್ನು ಬೇರೆಕಡೆಗೆ ಹಸ್ತಾಂತರಿಸಿದರೆ ಬ್ಯಾಂಕ್‌ಗಳು ತಮ್ಮ ಮೂಲ ಚಟುವಟಿಕೆಯಾದ ಸಾಲ ನೀಡಿಕೆಯ ಕಡೆಗೆ ಗಮನಹರಿಸಲು ಸಾಧ್ಯವಾಗುತ್ತದೆ. ಜತೆಗೆ ವಸೂಲಾತಿಯ ಹೊಣೆಯನ್ನು ತಜ್ಞರಿಗೆ ವಹಿಸಿದಂತಾಗುತ್ತದೆ. ಇದರಿಂದ ವಸೂಲಾತಿ ಪ್ರಮಾಣ ಹೆಚ್ಚಾಗುತ್ತದೆ ಎಂದು ಬ್ಯಾಡ್‌ ಬ್ಯಾಂಕ್‌ ಪರ ವಾದಿಸುವವರು ಹೇಳುತ್ತಾರೆ.

ಬೇರೆಬೇರೆ ಬ್ಯಾಂಕ್‌ಗಳು ಸೇರಿ ನೀಡಿರುವ ಸಾಲವು ವಸೂಲಾಗದೆ ಇದ್ದಾಗ, ಸಾಲಗಾರರ ಆಸ್ತಿ ಮಾರಾಟ ಮಾಡಿ ಹಣ ವಸೂಲು ಮಾಡಲು ಅವಕಾಶ ಇದೆ. ಆದರೆ ಖರೀದಿದಾರರು ಎಲ್ಲಾ ಬ್ಯಾಂಕ್‌ಗಳ ಜತೆಗೆ ವ್ಯವಹಾರ ಮಾಡಬೇಕಾಗುತ್ತದೆ. ಬ್ಯಾಡ್‌ ಬ್ಯಾಂಕ್‌ ರಚನೆಯಾದರೆ ಖರೀದಿದಾರರು ಒಂದೇ ಸಂಸ್ಥೆಯ ಜತೆಗೆ ವ್ಯವಹರಿಸಬಹುದಾಗಿದೆ ಎಂದು  ಇಂಥವರು ವಾದಿಸುತ್ತಾರೆ.

ಆದರೆ, ‘ಒಂದು ಮಾದರಿಯನ್ನಿಟ್ಟುಕೊಂಡು ಎಲ್ಲಾ ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯವಾಗಲಾರದು’ ಎಂದು ಬ್ಯಾಡ್‌ ಬ್ಯಾಂಕ್‌ ಚಿಂತನೆಯನ್ನು ವಿರೋಧಿಸುವವರು ಹೇಳುತ್ತಾರೆ.

ಪರಿಹಾರವೇ?

‘ಬ್ಯಾಡ್‌ ಬ್ಯಾಂಕ್‌ ಸ್ಥಾಪನೆಯ ಕಲ್ಪನೆ ಒಮ್ಮೆಗೇ ಹುಟ್ಟಿಕೊಂಡದ್ದಲ್ಲ. ಈ ಕುರಿತ ಚರ್ಚೆ ಹಲವು ವರ್ಷಗಳಿಂದ ನಡೆದಿದೆ. 2015ರಲ್ಲಿ ಭಾರತೀಯ ರಿಸರ್ವ್‌ ಬ್ಯಾಂಕ್‌ನ ಅಂದಿನ ಗವರ್ನರ್‌ ರಘುರಾಂ ರಾಜನ್‌ ಅವರು ಬ್ಯಾಂಕ್‌ ಸೊತ್ತುಗಳ ಗುಣಮಟ್ಟದ ಪರಿಶೀಲನೆ ನಡೆಸಿದ್ದರು. ಇದರಿಂದಾಗಿ ಸಾಲದ ಅನೇಕ ಖಾತೆಗಳನ್ನು ವಸೂಲಾಗದ ಸಾಲ ಎಂದು ಘೋಷಿಸುವುದು ಬ್ಯಾಂಕ್‌ಗಳಿಗೆ ಅನಿವಾರ್ಯವಾಯಿತು. ಎನ್‌ಪಿಎ ಸಮಸ್ಯೆಗೆ ‘ಬ್ಯಾಡ್‌ ಬ್ಯಾಂಕ್‌’ ಒಂದು ಪರಿಹಾರವಾಗಬಲ್ಲದೇ ಎಂಬ ಚರ್ಚೆಗೆ ಅವರು ನಾಂದಿ ಹಾಡಿದ್ದರು. ಆದರೆ ಇದು ಹೊಸ ಯೋಚನೆಯೇನೂ ಆಗಿರಲಿಲ್ಲ. ಅನೇಕ ಆರ್ಥಿಕ ತಜ್ಞರು ಅದಕ್ಕೂ ಹಿಂದೆಯೇ ಬ್ಯಾಡ್‌ ಬ್ಯಾಂಕ್‌ ಆರಂಭಿಸುವ ಬಗೆಗಿನ ಚರ್ಚೆಯನ್ನು ಮುನ್ನೆಲೆಗೆ ತಂದಿದ್ದರು.

ಸಾರ್ವಜನಿಕ ಕ್ಷೇತ್ರದ ಬ್ಯಾಂಕ್‌ಗಳಲ್ಲಿ ಏರುತ್ತಿರುವ ಎನ್‌ಪಿಎ ಪ್ರಮಾಣವನ್ನು ನಿಯಂತ್ರಣಕ್ಕೆ ತರಬೇಕೆಂಬ ಉದ್ದೇಶದಿಂದ 2018ರಲ್ಲಿ ಅಂದಿನ ಹಂಗಾಮಿ ಹಣಕಾಸು ಸಚಿವ ಪೀಯೂಷ್‌ ಗೋಯಲ್‌ ಅವರು ಪಿಎನ್‌ಬಿ ಅಧ್ಯಕ್ಷ ಸುನಿಲ್‌ ಮೆಹ್ತಾ ಅವರ ಅಧ್ಯಕ್ಷತೆಯಲ್ಲಿ ಒಂದು ಸಮಿತಿ ರಚಿಸಿದ್ದರು. ಬ್ಯಾಂಕ್‌ ಸೊತ್ತುಗಳ ಮರುನಿರ್ಮಾಣದ ಸಾಧ್ಯತೆಗಳ ಬಗ್ಗೆ ಅಧ್ಯಯನ ನಡೆಸುವುದು ಈ ಸಮಿತಿಯ ಉದ್ದೇಶವಾಗಿತ್ತು. ಇನ್ನೊಂದರ್ಥದಲ್ಲಿ ಅದು ಬ್ಯಾಡ್‌ ಬ್ಯಾಂಕ್‌ ಸ್ಥಾಪನೆಯ ಸಾಧ್ಯತೆಯನ್ನು ಪರಿಶೀಲಿಸುವ ಸಮಿತಿಯೇ ಆಗಿತ್ತು.

ಆಧಾರ: ಪಿಟಿಐ, ಆರ್‌ಬಿಐ, ಮೆಕ್‌ಕಿನ್ಸೆ ಬ್ಯಾಡ್‌ ಬ್ಯಾಂಕ್ ವರದಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು