ಮಂಗಳವಾರ, 30 ಮೇ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊರ ರಾಜ್ಯ | ತೆಲಂಗಾಣ: ಚುನಾವಣೆಗಳಿಗೆ ಈಗಲೇ ಅಣಿ

Last Updated 27 ಅಕ್ಟೋಬರ್ 2022, 21:30 IST
ಅಕ್ಷರ ಗಾತ್ರ

ತೆಲಂಗಾಣದ ರಾಜಕಾರಣದಲ್ಲಿ ಸಂಚಲನ ಸೃಷ್ಟಿಯಾಗಿದೆ. ಪ್ರತಿ ದಿನವೂ ಹೊಸ ಹೊಸ ಬೆಳವಣಿಗೆಗಳಿಗೆ ಅಲ್ಲಿನ ರಾಜಕೀಯವು ಸಾಕ್ಷಿಯಾಗುತ್ತಿದೆ. ಇಷ್ಟೊಂದು ಬಿಸಿ ಬಿಸಿಯಾಗಿ ರಾಜಕೀಯ ನಡೆಯಲು ಇರುವ ಕಾರಣವು ಯಾರೂ ಊಹಿಸಲಾಗದ್ದೇನೂ ಅಲ್ಲ. ಬೆನ್ನು ಬೆನ್ನಿಗೆ ಎರಡು ಚುನಾವಣೆಗಳು ಹತ್ತಿರ ಬಂದಿವೆ. 2023ರಲ್ಲಿ ತೆಲಂಗಾಣ ವಿಧಾನಸಭೆಗೆ ಚುನಾವಣೆ ನಡೆಯಲಿದೆ. 2024ರಲ್ಲಿ ಲೋಕಸಭೆಗೆ ಚುನಾವಣೆ ನಡೆಯಲಿದೆ.

ದಕ್ಷಿಣ ಭಾರತದಲ್ಲಿ ಬಿಜೆಪಿ ದುರ್ಬಲ ಎಂದೇ ಹೇಳಬಹುದು. ಕರ್ನಾಟಕವನ್ನು ಬಿಟ್ಟರೆ ಬೇರೆ ರಾಜ್ಯದಲ್ಲಿ ಛಾಪು ಮೂಡಿಸಲು ಬಿಜೆಪಿಗೆ ಸಾಧ್ಯವಾಗಿಲ್ಲ. ಕರ್ನಾಟಕದಲ್ಲಿ ಕೂಡ ಯಾವುದೇ ಚುನಾವಣೆಯಲ್ಲಿ ಸರಳ ಬಹುಮತ ಪಡೆಯಲು ಬಿಜೆಪಿಗೆ ಆಗಿಲ್ಲ. ಆದರೆ, ಎರಡು ಚುನಾವಣೆಗಳಲ್ಲಿ ಅತಿ ದೊಡ್ಡ ಪಕ್ಷವಾಗಿ ಅದು ಹೊರಹೊಮ್ಮಿದೆ. ಕರ್ನಾಟಕವಲ್ಲದೆ ದಕ್ಷಿಣದಲ್ಲಿ ಇನ್ನೊಂದು ರಾಜ್ಯದಲ್ಲಿ ಅವಕಾಶ ಇದ್ದರೆ ಅದು ತೆಲಂಗಾಣ ಎಂದು ಬಿಜೆಪಿ ಭಾವಿಸಿದೆ. ಅದರ ಪರಿಣಾಮ ಅಲ್ಲಿನ ನಿತ್ಯದ ರಾಜಕಾರಣದಲ್ಲಿ ಕಾಣಿಸುತ್ತಿದೆ.

ಬಿಜೆಪಿಯ ಪ್ರಚಾರದ ಮುಂಚೂಣಿಯಲ್ಲಿ ಸದಾ ಇರುವ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಅದಿತ್ಯನಾಥ ಅವರು ತೆಲಂಗಾಣಕ್ಕೆ ಇತ್ತೀಚಿನ ದಿನಗಳಲ್ಲಿ ಪದೇ ಪದೇ ಭೇಟಿ ಕೊಟ್ಟಿದ್ದಾರೆ. ಬಿಜೆಪಿಯ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯನ್ನು ಹೈದರಾಬಾದ್‌ನಲ್ಲಿ ಜುಲೈನಲ್ಲಿ ನಡೆಸಲಾಗಿದೆ. ಈ ಸಭೆಯಲ್ಲಿ ಮೋದಿ, ಶಾ ಅವರೆಲ್ಲ ಭಾಗಿಯಾಗಿದ್ದಾರೆ. ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಂಡಿ ಸಂಜಯ ರೆಡ್ಡಿ ಅವರು ಪಾದಯಾತ್ರೆ ನಡೆಸಿದ್ದಾರೆ.ಹೀಗೆ ತೆಲಂಗಾಣ ತಮ್ಮ ಆದ್ಯತೆಯ ಪಟ್ಟಿಯಲ್ಲಿದೆ ಎಂಬುದನ್ನು ಮತದಾರರಿಗೆ ಮನದಟ್ಟು ಮಾಡುವ ಪ್ರಯತ್ನವನ್ನು ಬಿಜೆಪಿ‌ ಮಾಡುತ್ತಿದೆ.

ಕೋಮು ಧ್ರುವೀಕರಣದ ಪ್ರಯತ್ನವು ಬಿಜೆಪಿ ವಿವಿಧ ರಾಜ್ಯಗಳಲ್ಲಿ ಪ್ರಯೋಗಿಸಿದ್ದ ಮತ್ತು ಪ್ರಯೋಗಿಸುತ್ತಿರುವ ಚುನಾವಣಾ ಕಾರ್ಯತಂತ್ರ. ತೆಲಂಗಾಣದಲ್ಲಿಯೂ ಈ ‍ಪ್ರಯತ್ನವನ್ನು ಬಿಜೆಪಿ ನಡೆಸಿದೆ. ತೆಲಂಗಾಣ ರೈತರ ಸಶಸ್ತ್ರ ಹೋರಾಟವನ್ನು ಹಿಂದೂ–ಮುಸ್ಲಿಮರ ನಡುವಣ ಹೋರಾಟ ಎಂದು ಬಿಂಬಿಸಲು ಬಿಜೆಪಿ ಯತ್ನಿಸಿದೆ ಎಂದು ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಮ ಯೆಚೂರಿ ಇತ್ತೀಚೆಗೆ ಹೇಳಿದ್ದರು. ಹೈದರಾಬಾದ್‌ನ ಹೆಸರನ್ನು ಭಾಗ್ಯ ನಗರ ಎಂದು ಬದಲಾಯಿಸುವುದಾಗಿ ಮೋದಿ, ಯೋಗಿ ಸೇರಿ ಬಿಜೆಪಿಯ ಹಲವು ಮುಖಂಡರು ಹಲವು ಬಾರಿ ಹೇಳಿದ್ದಾರೆ. ಬಂಡಿ ಸಂಜಯ ಅವರು ಧ್ರುವೀಕರಣದ ಹಲವು ಪ್ರಯತ್ನ ಮಾಡಿದ್ದಾರೆ. ತೆಲಂಗಾಣದ ಮಸೀದಿಗಳನ್ನು ಅಗೆದರೆ ಎಲ್ಲೆಡೆಯೂ ಶಿವಲಿಂಗ ಇರಬಹುದು ಎಂದು ಅವರು ಹೇಳಿದ್ದಾರೆ. ‘ಕಾಶ್ಮೀರ್‌ ಫೈಲ್ಸ್‌’ ಮಾದರಿಯಲ್ಲಿಯೇ ‘ರಜಾಕಾರ ಫೈಲ್ಸ್‌’ ಚಲನಚಿತ್ರ ನಿರ್ಮಿಸಬೇಕು ಎಂದಿದ್ದಾರೆ.

ಆಂಧ್ರ ಪ್ರದೇಶವು ಭಾರತದೊಂದಿಗೆ ಸೇರ್ಪಡೆಯಾದ ದಿನವನ್ನು ಬಿಆರ್‌ಎಸ್‌‌ ಮತ್ತು ಬಿಜೆಪಿ ಪ್ರತ್ಯೇಕವಾಗಿ ಆಚರಿಸಿವೆ. ತೆಲಂಗಾಣ ಸೇರ್ಪಡೆಯ ವಜ್ರ ಮಹೋತ್ಸವ ಎಂಬ ಉತ್ಸವಕ್ಕೆ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್‌ (ಕೆಸಿಆರ್‌) ಅವರು ಹೈದಾರಾಬಾದ್‌ನಲ್ಲಿ ಚಾಲನೆ ನೀಡಿದರೆ, ತೆಲಂಗಾಣ ವಿಮೋಚನಾ ದಿನಕ್ಕೆ ಅಮಿತ್ ಶಾ ಅವರು ಸಿಕಂದರಾಬಾದ್‌ನಲ್ಲಿ ಚಾಲನೆ ನೀಡಿದ್ದರು.

ಬಿಜೆಪಿಯೇ ತನ್ನ ನೇರ ಪ್ರತಿಸ್ಪರ್ಧಿ ಎಂದು ಭಾವಿಸಿರುವ ಕೆ.ಚಂದ್ರಶೇಖರ ರಾವ್ ಅವರು ಆ ಪಕ್ಷವನ್ನು ಟೀಕಿಸುವ ಯಾವ ಅವಕಾಶವನ್ನೂ ಬಿಟ್ಟುಕೊಡುತ್ತಿಲ್ಲ.

ಬಿಆರ್‌ಎಸ್‌ ರಾಷ್ಟ್ರ ರಾಜಕಾರಣದ ಕನಸು

ಕೆಸಿಆರ್‌ ನೇತೃತ್ವದ ಟಿಆರ್‌ಎಸ್ ಈಗ ಬಿಆರ್‌ಎಸ್‌ ಎಂದು ಮರುನಾಮಕರಣಕ್ಕೆ ಒಳಗಾಗಿದೆ. ಪಕ್ಷವನ್ನು ಒಂದು ರಾಷ್ಟ್ರೀಯ ಪಕ್ಷವನ್ನಾಗಿಸುವ ಉದ್ದೇಶದ ಭಾಗವಾಗಿ ಕೆಸಿಆರ್‌ ಅವರು ಹೆಸರು ಬದಲಾವಣೆ ಮಾಡಿದ್ದಾರೆ. ರಾಷ್ಟ್ರ ರಾಜಕಾರಣದಲ್ಲಿ ಒಂದು ಪ್ರಮುಖ ಶಕ್ತಿಯಾಗಬೇಕು ಎಂದು ಹೊರಟಿರುವ ಕೆಸಿಆರ್‌ ಅವರು, ಅದಕ್ಕೆ ಆಯ್ಕೆ ಮಾಡಿಕೊಂಡಿದ್ದು ತೃತೀಯ ರಂಗದ ಹಾದಿಯನ್ನು.

ಎರಡು ಪ್ರಮುಖ ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್‌ ಅನ್ನು ಕೆಸಿಆರ್‌ ಈಗ ವಿರೋಧಿಸುತ್ತಿದ್ದಾರೆ. ಆದರೆ, 2018ರವರೆಗೆ ಕೆಸಿಆರ್‌ ಅವರು ಬಿಜೆಪಿಯನ್ನು ಬೆಂಬಲಿಸುತ್ತಿದ್ದರು. ರಾಷ್ಟ್ರಪತಿ ಚುನಾವಣೆಯಲ್ಲಿ ಬಿಜೆಪಿಯ ರಾಮನಾಥ ಕೋವಿಂದ್‌ ಅವರಿಗೆ ಕೆಸಿಆರ್ ಅವರ ಪಕ್ಷ ಬೆಂಬಲ ನೀಡಿತ್ತು. ಸಂಸತ್ತಿನಲ್ಲಿಯೂ ಮಹತ್ವದ ವಿಚಾರಗಳಲ್ಲಿ ಬಿಜೆಪಿಗೆ ಬೆಂಬಲ ನೀಡಲಾಗಿತ್ತು. ಈಗ, ರಾಜ್ಯ ಮತ್ತು ದೇಶದಲ್ಲಿನ ಬಿಕ್ಕಟ್ಟಿನ ಸ್ಥಿತಿಗೆ ಬಿಜೆಪಿಯೇ ಕಾರಣ ಎಂದು ಬಿಆರ್‌ಎಸ್‌‌ ದೂರುತ್ತಿದೆ. ಅದೇ ಸಂದರ್ಭದಲ್ಲಿ ಕಾಂಗ್ರೆಸ್‌ ಅನ್ನೂ ವಿರೋಧಿಸುತ್ತದೆ. ಬಿಜೆಪಿಯನ್ನು ಸೋಲಿಸಲು ಕಾಂಗ್ರೆಸ್‌ನಿಂದ ಸಾಧ್ಯವಿಲ್ಲ. ಹೀಗಾಗಿ ಕಾಂಗ್ರೆಸ್‌ ಅನ್ನು ಹೊರತುಪಡಿಸಿದ ವಿರೋಧ ಪಕ್ಷಗಳ ಕೂಟವನ್ನು ರಚಿಸಬೇಕು ಎಂಬುದು ಕೆಸಿಆರ್‌ ಅವರ ನಿಲುವು. ಇದಕ್ಕಾಗಿ ಅವರು ದೇಶದ ಎಲ್ಲಾ ರಾಜ್ಯಗಳಲ್ಲಿರುವ ಪ್ರಾದೇಶಿಕ ಪಕ್ಷಗಳ ನಾಯಕರನ್ನು ಭೇಟಿ ಮಾಡಿ ಹಲವು ಸುತ್ತಿನ ಮಾತುಕತೆ ನಡೆಸಿದ್ದಾರೆ.

ವಿರೋಧ ಪಕ್ಷಗಳ ನಾಯಕರನ್ನು ಬಿಜೆಪಿ ಸೆಳೆದುಕೊಳ್ಳುತ್ತದೆ ಎಂದು ಆರೋಪಿಸುವ ಬಿಆರ್‌ಎಸ್‌‌, ತೆಲಂಗಾಣದಲ್ಲಿ ತಾನೇ ಈ ಕೆಲಸವನ್ನು ಮಾಡಿದೆ. ಸರ್ಕಾರ ರಚನೆಯಾದ ಕೆಲವೇ ತಿಂಗಳುಗಳಲ್ಲಿ ಟಿಡಿಪಿ ಮತ್ತು ಪಕ್ಷೇತರ ಅಭ್ಯರ್ಥಿಗಳಲ್ಲಿ ಮೂವರು ಬಿಆರ್‌ಎಸ್‌‌ ಸೇರಿದರು. ಇದರಿಂದ ಪಕ್ಷದ ಬಲ 91ಕ್ಕೆ ಏರಿಕೆಯಾಗಿತ್ತು. ಅದು ಹಾಗೇ ಉಳಿಯಲಿಲ್ಲ. ವಿರೋಧ ಪಕ್ಷವಾಗಿದ್ದ ಕಾಂಗ್ರೆಸ್‌ನ 12 ಶಾಸಕರನ್ನು ಬಿಆರ್‌ಎಸ್‌‌ ತನ್ನತ್ತ ಸೆಳೆಯಿತು. ಇದರಿಂದ ರಾಜ್ಯ ವಿಧಾನಸಭೆಯಲ್ಲಿ ಆಡಳಿತಾರೂಢ ಬಿಆರ್‌ಎಸ್‌‌ನ ಬಲ 100ರ ಗಡಿ ದಾಟಿತು. ಒಂದು ಹಂತದಲ್ಲಿ ಬಿಆರ್‌ಎಸ್‌‌ನ ಬಲ 105ಕ್ಕೆ ಏರಿಕೆಯಾಗಿತ್ತು. ಆದರೆ ಅಷ್ಟು ಬಲವನ್ನು ಕಾಯ್ದುಕೊಳ್ಳಲು ಬಿಆರ್‌ಎಸ್‌‌ಗೆ ಸಾಧ್ಯವಾಗಲಿಲ್ಲ. ಪಕ್ಷಾಂತರದಿಂದ ಕೆಲವು ಶಾಸಕರನ್ನು ಕಳೆದುಕೊಂಡರೆ, ಕೆಲವು ಶಾಸಕರು ನಿಧನರಾದರು. ಇದರಿಂದ ಪಕ್ಷದ ಬಲ ಕುಗ್ಗಿದರೂ, ಬೇರೆ ಪಕ್ಷಗಳ ಶಾಸಕರು ಬಂದಿದ್ದರಿಂದ ವಿಧಾನಸಭೆಯಲ್ಲಿ ಈಗ ಬಿಆರ್‌ಎಸ್‌‌ನ 102 ಶಾಸಕರಿದ್ದಾರೆ.

ಹೊರ ರಾಜ್ಯ | ತೆಲಂಗಾಣ: ಚುನಾವಣೆಗಳಿಗೆ ಈಗಲೇ ಅಣಿ

ಉಪಚುನಾವಣೆಗಳಲ್ಲಿ ಬಿಜೆಪಿಗೆ ಲಾಭ

ತೆಲಂಗಾಣದಲ್ಲಿ ಈಗಷ್ಟೇ ನೆಲೆ ಕಂಡುಕೊಳ್ಳುತ್ತಿರುವ ಬಿಜೆಪಿ, 2018ರಲ್ಲಿ ನಡೆದಿದ್ದ ಚುನಾವಣೆಯಲ್ಲಿ ಒಂದು ಸ್ಥಾನವನ್ನು ಮಾತ್ರ ಗೆದ್ದುಕೊಂಡಿತ್ತು. ಆದರೆ, ಚಲಾವಣೆಯಾದ ಒಟ್ಟು ಮತದಲ್ಲಿ ಶೇ 6ರಷ್ಟು ಮತಗಳು ಬಿಜೆಪಿಗೆ ಬಂದಿದ್ದವು. ತನ್ನ ನೆಲೆಯನ್ನು ವಿಸ್ತರಿಸಿಕೊಳ್ಳಲು ಬಿಜೆಪಿ ಮುಂದಿನ ಚುನಾವಣೆವರೆಗೆ ಕಾಯುವಷ್ಟು ತಾಳ್ಮೆ ಹೊಂದಿಲ್ಲ. ಕಾಂಗ್ರೆಸ್‌ ಮತ್ತು ಬಿಆರ್‌ಎಸ್‌‌ನ ಕೆಲವು ನಾಯಕರನ್ನು ಈಗಾಗಲೇ ಪಕ್ಷಕ್ಕೆ ಸೇರಿಸಿಕೊಂಡಿದೆ.

ಮಧ್ಯಪ್ರದೇಶ, ಕರ್ನಾಟಕ, ಮಹಾರಾಷ್ಟ್ರದಲ್ಲಿ ಮಾಡಿದಂತೆ ಇಲ್ಲಿಯೂ ಆಡಳಿತಾರೂಢ ಪಕ್ಷದ ಶಾಸಕರನ್ನು ಸೆಳೆದುಕೊಳ್ಳಲು ಯತ್ನಿಸಿದೆ. ಯಶಸ್ವಿಯೂ ಆಗಿದೆ. 2021ರಲ್ಲಿ ಬಿಆರ್‌ಎಸ್‌‌ ಶಾಸಕ ಮತ್ತು ಪ್ರಮುಖ ನಾಯಕ ಇ.ರಾಜೇಂದರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಕೆಲವೇ ದಿನಗಳಲ್ಲಿ ಬಿಜೆಪಿ ಸೇರಿದರು. ಅವರ ರಾಜೀನಾಮೆಯಿಂದ ತೆರವಾಗಿದ್ದ ಹುಜೂರಾಬಾದ್‌ ವಿಧಾನಸಭಾ ಕ್ಷೇತ್ರಕ್ಕೆ ಅದೇ ವರ್ಷದಲ್ಲೇ ಚುನಾವಣೆ ನಡೆಯಿತು. ಬಿಜೆಪಿಯಿಂದ ಕಣಕ್ಕೆ ಇಳಿದಿದ್ದ ರಾಜೇಂದರ್ ಬಿಆರ್‌ಎಸ್‌‌ ಅಭ್ಯರ್ಥಿಯ ಎದುರು ಪ್ರಯಾಸದ ಗೆಲುವು ಸಾಧಿಸಿದರು.

2020ರಲ್ಲಿ ಬಿಆರ್‌ಎಸ್‌‌ನ ಪ್ರಮುಖ ನಾಯಕ ರಾಮಲಿಂಗಾ ರೆಡ್ಡಿ ಅವರು ನಿಧನರಾದರು. ತೆರವಾದ ಕ್ಷೇತ್ರದಲ್ಲಿ ರಾಮಲಿಂಗಾ ರೆಡ್ಡಿ ಅವರ ಪತ್ನಿಯನ್ನು ಬಿಆರ್‌ಎಸ್‌‌ ಕಣಕ್ಕೆ ಇಳಿಸಿತ್ತು. ಬಿಆರ್‌ಎಸ್‌‌ ಅಭ್ಯರ್ಥಿಗೇ ಗೆಲುವಾಗುತ್ತದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ. ಬಿಜೆಪಿಯ ಅಭ್ಯರ್ಥಿ ರಘುನಂದನ್ ರಾಮ್ ಒಂದು ಸಾವಿರದಷ್ಟು ಮತಗಳ ಅಂತರದಿಂದ, ಬಿಆರ್‌ಎಸ್‌‌ ಅಭ್ಯರ್ಥಿಯನ್ನು ಸೋಲಿಸಿದರು. ಬಿಆರ್‌ಎಸ್‌‌ ಒಂದು ಸ್ಥಾನವನ್ನು ಕಳೆದುಕೊಂಡರೆ, ಬಿಜೆಪಿ ಒಂದು ಸ್ಥಾನವನ್ನು ಹೆಚ್ಚಿಸಿಕೊಂಡಿತು. ಈಗ ಉಪಚುನಾವಣೆ ನಡೆಯುತ್ತಿರುವ ಮುನುಗೋಡು ಕ್ಷೇತ್ರದಲ್ಲಿ ಗೆಲುವು ಸಾಧಿಸಲು ಬಿಜೆಪಿ ಹೋರಾಡುತ್ತಿದೆ. ಬಿಜೆಪಿ ಕಾರ್ಯಕರ್ತರು ಕ್ಷೇತ್ರದ ಮತದಾರರ ಮನೆಗೆ ಈವರೆಗೆ ಕನಿಷ್ಠ ಹತ್ತು ಬಾರಿ ಭೇಟಿ ನೀಡಿದ್ದಾರೆ. ಇಲ್ಲೂ ಗೆಲುವು ಸಾಧಿಸುವ ವಿಶ್ವಾಸದಲ್ಲಿದೆ ಬಿಜೆಪಿ.

ಹೈದರಾಬಾದ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೋದಿ
ಹೈದರಾಬಾದ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೋದಿ

ಕಾಂಗ್ರೆಸ್‌ ದುಃಸ್ಥಿತಿ

ತೆಲಂಗಾಣದಲ್ಲಿ ಕಾಂಗ್ರೆಸ್‌ ಈಗ ಅತ್ಯಂತ ಕೆಟ್ಟ ಸ್ಥಿತಿಯನ್ನು ಎದುರಿಸುತ್ತಿದೆ. 2014ರ ವಿಧಾನಸಭೆ ಚುನಾವಣೆಯಲ್ಲಿ 22 ಮತ್ತು 2019ರ ಚುನಾವಣೆಯಲ್ಲಿ 19 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆದ್ದಿತ್ತು. ಆದರೆ, ಇತರ ಕೆಲವು ರಾಜ್ಯಗಳ ರೀತಿಯಲ್ಲಿಯೇ ಇಲ್ಲಿಯೂ ಗೆದ್ದ ಶಾಸಕರನ್ನು ಉಳಿಸಿಕೊಳ್ಳಲು ಕಾಂಗ್ರೆಸ್‌ಗೆ ಸಾಧ್ಯವಾಗಿಲ್ಲ. ಹಲವು ಶಾಸಕರು ಆಡಳಿತಾರೂಢ ಬಿಆರ್‌ಎಸ್‌‌ಗೆ ಪಕ್ಷಾಂತರ ಮಾಡಿದ್ದಾರೆ. ಈಗ ಕಾಂಗ್ರೆಸ್‌ ಶಾಸಕರ ಸಂಖ್ಯೆ ಐದು ಮಾತ್ರ. ಮುನುಗೋಡು ಕ್ಷೇತ್ರದ ಶಾಸಕರಾಗಿದ್ದ ಕೋಮಟಿರೆಡ್ಡಿ ರಾಜಗೋಪಾಲ ರೆಡ್ಡಿ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ್ದಾರೆ. ಈಗ ಈ ಕ್ಷೇತ್ರದ ಉಪಚುನಾವಣೆಯಲ್ಲಿ ಅವರು ಬಿಜೆಪಿ ಅಭ್ಯರ್ಥಿ. ಅವರ ಅಣ್ಣ ಕೋಮಟಿರೆಡ್ಡಿ ವೆಂಕಟರೆಡ್ಡಿ ಕಾಂಗ್ರೆಸ್‌ ಸಂಸದ.

ಮುನುಗೋಡು ಕ್ಷೇತ್ರದ ಉಪಚುನಾವಣೆಯನ್ನು ಕಾಂಗ್ರೆಸ್‌ ಪ್ರತಿಷ್ಠೆಯಾಗಿ ತೆಗೆದುಕೊಳ್ಳಬೇಕಿತ್ತು. ಹಾಗೆ ಆಗುತ್ತಿಲ್ಲ. ಕ್ಷೇತ್ರವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಬಿಜೆಪಿ ಶತಾಯ ಗತಾಯ ಪ್ರಯತ್ನಿಸುತ್ತಿದೆ. ಮುನುಗೋಡು ಉಪಚುನಾವಣೆಯ ಮೂಲಕ ಮತದಾರರ ನಾಡಿಮಿಡಿತ ಅರಿಯುವ ಯತ್ನವನ್ನು ಬಿಜೆಪಿ ಮಾಡುತ್ತಿದೆ. ಇಲ್ಲಿ ಗೆದ್ದರೆ, ದಕ್ಷಿಣ ಭಾರತದಲ್ಲಿ ಕರ್ನಾಟಕದ ನಂತರ ಬಿಜೆಪಿಯ ಮುಂದಿನ ತಾಣ ತೆಲಂಗಾಣ ಎಂಬುದು ಖಚಿತವಾಗಲಿದೆ.

ಬಿಜೆಪಿ ಅಭ್ಯರ್ಥಿಗೆ ಮತ ಕೊಡಿ ಎಂದು ವೆಂಕಟರೆಡ್ಡಿ ಅವರು ಮುಸ್ಲಿಂ ಸಮುದಾಯದ ಮತದಾರರ ಬಳಿ ಹೇಳಿದ್ದರ ವಿಡಿಯೊ ಬಹಿರಂಗವಾಗಿದೆ. ಕಾಂಗ್ರೆಸ್‌ನ ಹಲವು ಮುಖಂಡರು ಬಿಜೆಪಿ ಅಥವಾ ಬಿಆರ್‌ಎಸ್‌‌ ಪರವಾಗಿ ಕೆಲಸ ಮಾಡುತ್ತಿದ್ದಾರೆ. ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ರೇವಂತ ರೆಡ್ಡಿ ಅವರು ಇದನ್ನು ಪಕ್ಷದ ಕಾರ್ಯಕರ್ತರ ಬಳಿ ಹೇಳಿ ಕಣ್ಣೀರಿಟ್ಟಿದ್ದಾರೆ. ರೇವಂತ ರೆಡ್ಡಿ ಅವರನ್ನು ಅಧ್ಯಕ್ಷರನ್ನಾಗಿ ನೇಮಿಸಿದ್ದು ಕಾಂಗ್ರೆಸ್‌ನ ಹಲವು ಮುಖಂಡರಿಗೆ ಇಷ್ಟ ಇಲ್ಲ. ಈ ಸ್ಥಾನದ ಮೇಲೆ ಕಣ್ಣಿಟ್ಟಿರುವ ಹಲವರು ಈಗ ಪಕ್ಷದ ವಿರುದ್ಧ ಕೆಲಸ ಮಾಡುತ್ತಿದ್ದಾರೆ. ಕಾಂಗ್ರೆಸ್‌ನ ಗಟ್ಟಿ ನೆಲೆಯಾದ ಮುನುಗೋಡು ಕ್ಷೇತ್ರದಲ್ಲಿ ಪಕ್ಷವನ್ನು ಸೋಲಿಸುವ ಮೂಲಕ ರೇವಂತ ರೆಡ್ಡಿ ಅವರಿಗೆ ಯಾವುದೇ ಸಾಮರ್ಥ್ಯ ಇಲ್ಲ ಎಂದು ಸಾಬೀತುಪಡಿಸಲು ಕಾಂಗ್ರೆಸ್‌ನ ಹಲವರು ಯತ್ನಿಸುತ್ತಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT