ಗ್ರಾಹಕನಿಗೆ ಸಿಗದ ತೈಲ ಬೆಲೆ ಇಳಿಕೆಯ ಲಾಭ
ಭಾರತದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಅವುಗಳ ಮೂಲದರಕ್ಕಿಂತ ಹಲವು ಪಟ್ಟು ಹೆಚ್ಚು ತೆರಿಗೆಯನ್ನು ವಿಧಿಸಲಾಗುತ್ತದೆ. ಸರ್ಕಾರವು ಈ ಎರಡೂ ಇಂಧನಗಳನ್ನು ಅಗತ್ಯವಸ್ತುಗಳ ಪಟ್ಟಿಯಲ್ಲಿ ಸೇರಿಸಿದೆ. ಈ ಇಂಧನಗಳು ದೇಶದ ಆರ್ಥಿಕತೆಯ ಚಾಲಕ ಶಕ್ತಿಗಳೂ ಆಗಿವೆ. ಸರ್ಕಾರಕ್ಕೆ ಇದರಿಂದ ಬರುವ ಆದಾಯದ ಪ್ರಮಾಣವೂ ಹೆಚ್ಚು.
ಈ ಮೊದಲು ಪೆಟ್ರೋಲ್ ಮತ್ತ ಡೀಸೆಲ್‌ನ ಬೆಲೆಯನ್ನು ಕೇಂದ್ರ ಸರ್ಕಾರ ನಿರ್ಧರಿಸುತ್ತಿತ್ತು. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆಯಲ್ಲಿ ಏರಿಳಿತವಾದರೂ ಭಾರತದಲ್ಲಿ ಚಿಲ್ಲರೆ ಮಾರಾಟದ ಬೆಲೆಯಲ್ಲಿ ಯಾವುದೇ ವ್ಯತ್ಯಾಸವಾಗುತ್ತಿರಲಿಲ್ಲ. ನಂತರದ ವರ್ಷಗಳಲ್ಲಿ ಸರ್ಕಾರವು ಈ ಇಂಧನಗಳ ಬೆಲೆಯನ್ನು ಮುಕ್ತಗೊಳಿಸಿತು. ಪ್ರತಿದಿನ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆಯಲ್ಲಿ ಏರಿಳಿತವಾದರೆ, ಅದು ಚಿಲ್ಲರೆ ಮಾರಾಟದ ಬೆಲೆಯ ಮೇಲೂ ಪರಿಣಾಮ ಬೀರುತ್ತದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆ ಇಳಿಕೆಯಾದರೆ, ತೈಲ ಉತ್ಪಾದಕ ದೇಶಗಳು ಉತ್ಪಾದನೆಯನ್ನು ಕಡಿತಗೊಳಿಸುತ್ತವೆ. ಆಗ ಕಚ್ಚಾತೈಲಕ್ಕೆ ಬೇಡಿಕೆ ಹೆಚ್ಚಾಗಿ, ಬೆಲೆಯೂ ಏರಿಕೆಯಾಗುತ್ತದೆ.
ಲಾಕ್‌ಡೌನ್ ಅವಧಿಯಲ್ಲಿ ಬೇಡಿಕೆ ಕುಸಿದ ಕಾರಣ, ಕಚ್ಚಾತೈಲದ ಬೆಲೆ ಭಾರಿ ಪ್ರಮಾಣದಲ್ಲಿ ಇಳಿಕೆಯಾಗಿತ್ತು. ಆದರೆ, ಕೇಂದ್ರ ಸರ್ಕಾರವು ಇದನ್ನು ಗ್ರಾಹಕರಿಗೆ ವರ್ಗಾಯಿಸಲಿಲ್ಲ. ತೈಲ ಬೆಲೆ ಇಳಿಕೆಯಾದರೂ, ಅದರ ಮೇಲೆ ವಿಧಿಸಲಾಗುತ್ತಿದ್ದ ತೆರಿಗೆಯನ್ನು ಏರಿಕೆ ಮಾಡುತ್ತಿತ್ತು. ಇದರಿಂದ ಪೆಟ್ರೋಲ್ ಮತ್ತು ಡೀಸೆಲ್‌ನ ಚಿಲ್ಲರೆ ಮಾರಾಟ ದರದಲ್ಲಿ ಯಾವುದೇ ವ್ಯತ್ಯಾಸವಾಗಲಿಲ್ಲ. ಈಗ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆ ಏರಿಕೆಯಾಗಿದೆ. ಆದರೆ ಬೆಲೆ ಕಡಿಮೆಯಾದಾಗ ಏರಿಕೆ ಮಾಡಿದ್ದ ತೆರಿಗೆಯನ್ನು ಕೇಂದ್ರ ಸರ್ಕಾರವು ಇಳಿಕೆ ಮಾಡಿಲ್ಲ. ಇದರಿಂದ ಲಾಕ್‌ಡೌನ್‌ಪೂರ್ವದಲ್ಲಿ ಇದ್ದ ಬೆಲೆಗಿಂತಲೂ ಹೆಚ್ಚಿನ ಬೆಲೆಗೆ ಪೆಟ್ರೋಲ್ ಮತ್ತು ಡೀಸೆಲ್ ಬಿಕರಿಯಾಗುತ್ತಿವೆ.
ಪೆಟ್ರೋಲ್‌ನ ಮೂಲದರದ ಮೇಲೆ ಕೇಂದ್ರ ಸರ್ಕಾರವು ಈಗ ಶೇ 124.2ರಷ್ಟು ತೆರಿಗೆಯನ್ನು ವಿಧಿಸುತ್ತಿದೆ. ಇದರ ಮೇಲೆ ಸಂಸ್ಕರಣ ಶುಲ್ಕ ಮತ್ತು ಡೀಲರ್ಸ್ ಕಮಿಷನ್ ಪಾವತಿಸಬೇಕು. ಈ ವೆಚ್ಚದ ಮೇಲೆ ರಾಜ್ಯ ಸರ್ಕಾರವು ಶೇ 35ರಷ್ಟು (ಮೂಲ ದರಕ್ಕೆ ಹೋಲಿಸಿದರೆ, ರಾಜ್ಯ ಸರ್ಕಾರದ ತೆರಿಗೆ ದರ ಶೇಕಡಾ 88.50ರಷ್ಟಾಗುತ್ತದೆ) ತೆರಿಗೆ ವಿಧಿಸುತ್ತದೆ. ಒಟ್ಟಾರೆ, ಭಾರತದಲ್ಲಿ ಪೆಟ್ರೋಲ್‌ನ ಮೂಲ ದರದ ಮೇಲೆ ಶೇ 212.7ರಷ್ಟು ತೆರಿಗೆ ಪಾವತಿಸಬೇಕಿದೆ.
ಡೀಸೆಲ್‌ನ ಮೂಲದರದ ಮೇಲೆ ಕೇಂದ್ರ ಸರ್ಕಾರವು ಈಗ ಶೇ 119.93ರಷ್ಟು ತೆರಿಗೆಯನ್ನು ವಿಧಿಸುತ್ತಿದೆ. ಇದರ ಮೇಲೆ ಸಂಸ್ಕರಣ ಶುಲ್ಕ ಮತ್ತು ಡೀಲರ್ಸ್ ಕಮಿಷನ್ ಪಾವತಿಸಬೇಕು. ಈ ವೆಚ್ಚದ ಮೇಲೆ ರಾಜ್ಯ ಸರ್ಕಾರವು ಶೇ 24ರಷ್ಟು (ಮೂಲ ದರಕ್ಕೆ ಹೋಲಿಸಿದರೆ, ರಾಜ್ಯ ಸರ್ಕಾರದ ತೆರಿಗೆ ದರ ಶೇಕಡಾ 60ರಷ್ಟಾಗುತ್ತದೆ) ತೆರಿಗೆ ವಿಧಿಸುತ್ತದೆ. ಒಟ್ಟು ಭಾರತದಲ್ಲಿ ಪೆಟ್ರೋಲ್‌ನ ಮೂಲ ದರದ ಮೇಲೆ
ಶೇ 179.93ರಷ್ಟು ತೆರಿಗೆ ಪಾವತಿಸಬೇಕಿದೆ.
ಬಜೆಟ್‌ನಲ್ಲಿ ಏರಿಕೆ-ಇಳಿಕೆ
2021-22ನೇ ಸಾಲಿನ ಬಜೆಟ್‌ನಲ್ಲಿ ಕೇಂದ್ರ ಸರ್ಕಾರವು ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಕ್ರಮವಾಗಿ ₹ 2.50 ಮತ್ತು ₹ 4ರಷ್ಟು ಕೃಷಿ ಮೂಲಸೌಕರ್ಯ ಅಭಿವೃದ್ಧಿ ಸೆಸ್ ವಿಧಿಸಿದೆ. ಆದರೆ. ಇಷ್ಟೇ ಪ್ರಮಾಣದಲ್ಲಿ ಇಂಧನದ ಮೇಲಿನ ಸೆಸ್ ಅನ್ನು ಇಳಿಕೆ ಮಾಡಿದೆ. ಹೀಗಾಗಿ ಹೊಸ ಸೆಸ್ ಹೇರಿಕೆ ಮಾಡಿದರೂ, ಪೆಟ್ರೋಲ್ ಮತ್ತು ಡೀಸೆಲ್‌ನ ಚಿಲ್ಲರೆ ಮಾರಾಟ ದರದಲ್ಲಿ ಯಾವುದೇ ಏರಿಕೆಯಾಗಿಲ್ಲ. ಆದರೆ, ಮುಂದಿನ ದಿನಗಳಲ್ಲಿ ಸೆಸ್ ಅನ್ನು ಏರಿಕೆ ಮಾಡಲು ಅವಕಾಶವಿದೆ. ಆಗ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆಯ ಪ್ರಮಾಣ ಏರಿಕೆಯಾಗಲಿದೆ. ತತ್ಪರಿಣಾಮವಾಗಿ ಇಂಧನಗಳ ಚಿಲ್ಲರೆ ಮಾರಾಟದ ಬೆಲೆಯಲ್ಲಿ ಏರಿಕೆಯಾಗುವ ಸಾಧ್ಯತೆ ಇದೆ.
lಪ್ರತಿ ಲೀಟರ್ ಪೆಟ್ರೋಲ್‌ನ ಚಿಲ್ಲರೆ ಮಾರಾಟ ದರದಲ್ಲಿ ಶೇ 37.87ರಷ್ಟು ಹಣ ಕೇಂದ್ರ ಅಬಕಾರಿ ಸುಂಕ. ಪೆಟ್ರೋಲ್ ಮೇಲೆ ಕೇಂದ್ರ ಸರ್ಕಾರವು ವಿಧಿಸುವ ತೆರಿಗೆಯ ಪ್ರಮಾಣವು ಶೇ 124.2ರಷ್ಟು. ಅಂದರೆ ಸಂಸ್ಕರಣೆಗೂ ಮುನ್ನ ಇಂಧನದ ದರವು ಪ್ರತಿ ಲೀಟರ್‌ಗೆ ₹ 26.54ರಷ್ಟು ಇದೆ. ಆದರೆ ಮೂಲದರದ ಮೇಲೆ ಶೇ 124.2ರಷ್ಟು (₹ 32.98) ತೆರಿಗೆಯನ್ನು ಕೇಂದ್ರ ಸರ್ಕಾರವು ವಿಧಿಸುತ್ತಿದೆ.
lರಾಜ್ಯ ಸರ್ಕಾರವು ಪ್ರತಿ ಲೀಟರ್ ಪೆಟ್ರೋಲ್ ಮೇಲೆ ಶೇ 35ರಷ್ಟು ತೆರಿಗೆಯನ್ನು ವಿಧಿಸುತ್ತದೆ. ಪೆಟ್ರೋಲ್‌ನ ಮೂಲ ಬೆಲೆಯ ಮೇಲೆ ರಾಜ್ಯ ಸರ್ಕಾರವು ಶೇ 88.50ರಷ್ಟು ತೆರಿಗೆ ವಿಧಿಸುತ್ತದೆ.
lಪ್ರತಿ ಲೀಟರ್ ಡೀಸೆಲ್‌ನ ಚಿಲ್ಲರೆ ಮಾರಾಟ ದರದಲ್ಲಿ ಶೇ 38.42ರಷ್ಟು ಹಣ ಕೇಂದ್ರ ಅಬಕಾರಿ ಸುಂಕ. ಡೀಸೆಲ್ ಮೇಲೆ ಕೇಂದ್ರ ಸರ್ಕಾರವು ವಿಧಿಸುವ ತೆರಿಗೆಯ ಪ್ರಮಾಣವು ಶೇ 119.93ರಷ್ಟು. ಅಂದರೆ ಸಂಸ್ಕರಣೆಗೂ ಮುನ್ನ ಇಂಧನದ ದರವು ಪ್ರತಿ ಲೀಟರ್‌ಗೆ ₹ 26.54ರಷ್ಟು ಇದೆ. ಆದರೆ ಮೂಲದರದ ಮೇಲೆ ಶೇ 119.93ರಷ್ಟು (₹ 31.83) ತೆರಿಗೆಯನ್ನು ಕೇಂದ್ರ ಸರ್ಕಾರವು ವಿಧಿಸುತ್ತಿದೆ.
lರಾಜ್ಯ ಸರ್ಕಾರವು ಪ್ರತಿ ಲೀಟರ್ ಡೀಸೆಲ್ ಮೇಲೆ ಶೇ 24ರಷ್ಟು ತೆರಿಗೆಯನ್ನು ವಿಧಿಸುತ್ತದೆ. ಆದರೆ ಈ ಶೇ 24ರಷ್ಟು ತೆರಿಗೆಯನ್ನು ಡೀಸೆಲ್‌ನ ಮೂಲ ಬೆಲೆಗೆ ಹೋಲಿಸಿದರೆ ಶೇ 60ರಷ್ಟಾಗುತ್ತದೆ.
*ಪೆಟ್ರೋಲ್ ಮೇಲೆ ಮಣಿಪುರ, ರಾಜಸ್ಥಾನ, ಕರ್ನಾಟಕ, ಮಧ್ಯಪ್ರದೇಶ ಹಾಗೂ ಅಸ್ಸಾಂ ರಾಜ್ಯಗಳು ಅತಿಹೆಚ್ಚು ತೆರಿಗೆ ವಿಧಿಸುವ ಅಗ್ರ ಐದು ರಾಜ್ಯಗಳೆನಿಸಿವೆ
*ರಾಜಸ್ಥಾನದಲ್ಲಿ ಶೇ 36ರಷ್ಟು ತೆರಿಗೆಯ ಜತೆಗೆ ಪ್ರತಿ 1,000 ಲೀಟರ್‌ಗೆ ₹1,500 ರಸ್ತೆ ಅಭಿವೃದ್ಧಿ ಸೆಸ್ ವಿಧಿಸುತ್ತದೆ.
*ಮಧ್ಯಪ್ರದೇಶದಲ್ಲಿ ಶೇ 33ರಷ್ಟು ವ್ಯಾಟ್ ಜೊತೆಗೆ ಪ್ರತಿ ಲೀಟರ್ ಪೆಟ್ರೋಲ್‌ಗೆ ₹4.5 ವ್ಯಾಟ್ ಹಾಗೂ ಶೇ 1ರಷ್ಟು ಸೆಸ್ ವಿಧಿಸುಲಾಗುತ್ತದೆ
*ಅಸ್ಸಾಮಿನಲ್ಲಿ ಶೇ 32ರಷ್ಟು ಅಥವಾ ಪ್ರತಿ ಲೀಟರ್‌ಗೆ ₹22.63 – ಇದರಲ್ಲಿ ಯಾವುದು ಹೆಚ್ಚೋ ಅದು ಅನ್ವಯವಾಗುತ್ತದೆ
*ಲಕ್ಷದ್ವೀಪದಲ್ಲಿ ಪೆಟ್ರೋಲ್‌ಗೆ ತೆರಿಗೆ ಇಲ್ಲ; ಅಂಡಮಾನ್, ನಿಕೋಬಾರ್, ತಮಿಳುನಾಡು, ಅರುಣಾಚಲ ಪ್ರದೇಶ ಹಾಗೂ ದಾದ್ರಾ ನಗರ ಹವೇಲಿಯಲ್ಲಿ ಕಡಿಮೆ ತೆರಿಗೆ ವಿಧಿಸಲಾಗುತ್ತಿದೆ
*ತೆಲಂಗಾಣ, ಒಡಿಶಾ, ರಾಜಸ್ಥಾನ, ಮಹಾರಾಷ್ಟ್ರ ಹಾಗೂ ಛತ್ತೀಸಗಡದಲ್ಲಿ ಡೀಸೆಲ್‌ಗೆ ಅತ್ಯಧಿಕ ತೆರಿಗೆ ವಿಧಿಸಲಾಗುತ್ತದೆ
*ರಾಜಸ್ಥಾನದಲ್ಲಿ ಶೇ 26ರಷ್ಟು ವ್ಯಾಟ್ ಜೊತೆಗೆ ಪ್ರತಿ 1,000 ಲೀಟರ್‌ಗೆ ₹1,750 ರಸ್ತೆ ಅಭಿವೃದ್ಧಿ ಸೆಸ್ ವಸೂಲಿ ಮಾಡಲಾಗುತ್ತದೆ
*ಮಹಾರಾಷ್ಟ್ರದಲ್ಲಿ ಶೇ 24ರಷ್ಟು ತೆರಿಗೆ ಮೇಲೆ ಹೆಚ್ಚುವರಿಯಾಗಿ ₹3 ಹಾಗೂ ಛತ್ತೀಸಗಡದಲ್ಲಿ ಶೇ 25ರಷ್ಟು ತೆರಿಗೆ ಮೇಲೆ ಹಚ್ಚುವರಿಯಾಗಿ ₹1 ತೆರಿಗೆ ವಿಧಿಸಲಾಗುತ್ತದೆ.
*ಲಕ್ಷದ್ವೀಪದಲ್ಲಿ ಡೀಸೆಲ್‌ಗೆ ತೆರಿಗೆ ಇಲ್ಲ; ಅಂಡಮಾನ್ ನಿಕೋಬಾರ್ ದ್ವೀಪ, ಅರುಣಾಚಲ ಪ್ರದೇಶ, ಹಿಮಾಚಲ ಪ್ರದೇಶ ಮತ್ತು ಮಿಜೋರಾಂನಲ್ಲಿ ಕಡಿಮೆ ತೆರಿಗೆ ಇದೆ
ಕಚ್ಚಾ ತೈಲ ಬೆಲೆ ಗರಿಷ್ಠ ಮಟ್ಟಕ್ಕೆ
ಜಾಗತಿಕ ಮಟ್ಟದಲ್ಲಿ ಆರ್ಥಿಕತೆ ಚೇತರಿಕೆಯ ಲಕ್ಷಣಗಳು ಕಾಣಿಸಿದ್ದರಿಂದ, ಮತ್ತು ಉತ್ಪಾದನೆಗೆ ಸಂಬಂಧಿಸಿದಂತೆ ತೈಲ ಪೂರೈಕೆ ರಾಷ್ಟ್ರಗಳ ಒಕ್ಕೂಟದ (ಒಪೆಕ್) ನಿರ್ಬಂಧಗಳ ಕಾರಣದಿಂದ ಏಪ್ರಿಲ್ ತಿಂಗಳಲ್ಲಿ ವಿತರಣೆಯಾಗಲಿರುವ ಬ್ರೆಂಟ್ ಕಚ್ಚಾ ತೈಲದ ಬೆಲೆಯು ಬ್ಯಾರಲ್‌ಗೆ 60 ಡಾಲರ್‌ಗೆ ತಲುಪಿದೆ.
ಇದರ ಪರಿಣಾಮವಾಗಿ ಶೀಘ್ರದಲ್ಲೇ ಭಾರತದಲ್ಲೂ ತೈಲ ಬೆಲೆಯಲ್ಲಿ ಇನ್ನಷ್ಟು ಏರಿಕೆಯಾಗುವ ಸಾಧ್ಯತೆ ಇದೆ. ಸತತವಾಗಿ ತೈಲಬೆಲೆ ಏರಿಕೆಯಾಗುವುದರಿಂದ ಇತರ ಸರಕುಗಳ ಬೆಲೆಯಲ್ಲೂ ಹೆಚ್ಚಳವಾಗಬಹುದು. ತೈಲ ಬೆಲೆಯನ್ನು ಇಳಿಸುವಂತೆ ಭಾರತೀಯ ರಿಜರ್ವ್ ಬ್ಯಾಂಕ್ ಸರ್ಕಾರಕ್ಕೆ ಸಲಹೆ ನೀಡಿದ್ದರೂ, ಆದಾಯಕ್ಕೆ ಇತರ ದಾರಿಗಳಿಲ್ಲದ ಕಾರಣ ಸರ್ಕಾರವು ಸುಂಕವನ್ನು ಅಥವಾ ಇನ್ಯಾವುದೇ ತೆರಿಗೆಯನ್ನು ಕಡಿತ ಮಾಡುವ ಸಾಧ್ಯತೆ ಇಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.
ಭಾರತದಲ್ಲಿ ತೈಲ ಬೆಲೆಯು ಈವರೆಗಿನ ಗರಿಷ್ಠ ಮಟ್ಟಕ್ಕೆ ಏರಿರುವುದರಿಂದ ಜನರ ಮೇಲಿನ ಹೊರೆ ಕಡಿಮೆ ಮಾಡಲು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ತೈಲದ ಮೇಲಿನ ತೆರಿಗೆಯನ್ನು ಸ್ವಲ್ಪ ಇಳಿಸಬೇಕು ಎಂದು ಆರ್‌ಬಿಐ ಸಲಹೆ ನೀಡಿತ್ತು.
2020–21ನೇ ಸಾಲಿನ ಮೊದಲ ಏಳು ತಿಂಗಳಲ್ಲಿ ಕೊರೊನಾ ಕಾರಣದಿಂದ ಇತರ ಎಲ್ಲಾ ತೆರಿಗೆ ಸಂಗ್ರಹ ಪ್ರಮಾಣ ಕುಸಿದಿದ್ದರೂ, ಹಿಂದಿನ ವರ್ಷದ ಅದೇ ಅವಧಿಗೆ ಹೋಲಿಸಿದರೆ ತೈಲದಿಂದ ಬರುವ ಎಕ್ಸೈಸ್ ಸುಂಕವು ಶೇ 40ರಷ್ಟು ಏರಿಕೆಯಾಗಿತ್ತು.
ಆಧಾರ: ಕೇಂದ್ರ ಬಜೆಟ್‌ಗಳು (2013-14ರಿಂದ 2021-22), ಉಜ್ವಲ ಯೋಜನೆಯ ಸಿಎಜಿ ವರದಿ, ಪೆಟ್ರೋಲಿಯಂ ಯೋಜನಾ ಮತ್ತು ವಿಶ್ಲೇಷಣಾ ಘಟಕದ ವರದಿಗಳು
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.