ಶುಕ್ರವಾರ, ಜನವರಿ 27, 2023
23 °C
ಆಧಾರ: ಡಿಜಿಟಲ್‌ ವೈಯಕ್ತಿಕ ದತ್ತಾಂಶ ಸಂರಕ್ಷಣಾ ಮಸೂದೆಯ ಕರಡು–2022

Explainer ಆಳ ಅಗಲ| ದತ್ತಾಂಶ ರಕ್ಷಣಾ ಕರಡು ಮಸೂದೆ: ಸರ್ಕಾರಕ್ಕೆ ಪರಮಾಧಿಕಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವೈಯಕ್ತಿಕ ದತ್ತಾಂಶ ರಕ್ಷಣಾ ಮಸೂದೆ 2019 ಅನ್ನು ಸರ್ಕಾರವು ಹಿಂದಕ್ಕೆ ಪಡೆದಿದೆ. ಇದರಲ್ಲಿದ್ದ ಹಲವು ಅಂಶಗಳ ಕುರಿತು ದೊಡ್ಡ ದೊಡ್ಡ ತಂತ್ರಜ್ಞಾನ ಕಂಪನಿಗಳು ಮತ್ತು ನವೋದ್ಯಮಗಳು ಆಕ್ಷೇಪ ವ್ಯಕ್ತಪಡಿಸಿದ್ದು ಇದಕ್ಕೆ ಕಾರಣ. ಈ ಮಸೂದೆಯ ಬದಲಿಗೆ ಡಿಜಿಟಲ್‌ ದತ್ತಾಂಶ ಸಂರಕ್ಷಣಾ ಮಸೂದೆ 2022 ಅನ್ನು ಸರ್ಕಾರವು ರೂಪಿಸಿದೆ. ಪರಿಷ್ಕೃತ ಮಸೂದೆಯು ಮೊದಲಿನ ಮಸೂದೆಗಿಂತ ದುರ್ಬಲವಾಗಿದೆ, ಸರ್ಕಾರಕ್ಕೆ ಅತೀ ಹೆಚ್ಚು ಅಧಿಕಾರ ನೀಡುತ್ತದೆ ಎಂಬ ಆಕ್ಷೇಪ ಪರಿಣತರಿಂದ ವ್ಯಕ್ತವಾಗಿದೆ. ಡಿಜಿಟಲ್‌ ವೈಯಕ್ತಿಕ ದತ್ತಾಂಶ ಸಂರಕ್ಷಣಾ ಮಸೂದೆಯ ಕರಡನ್ನು ಕೇಂದ್ರ ಸರ್ಕಾರವು ಪ್ರಕಟಿಸಿದೆ. ಜನರು ಡಿಸೆಂಬರ್ 17ರೊಳಗೆ ಪ್ರತಿಕ್ರಿಯೆಗಳನ್ನು ಸಲ್ಲಿಸಬಹುದು

ರಕ್ಷಣೆಯ ಹಕ್ಕು ನಿರ್ಬಂಧಿತ

ವ್ಯಕ್ತಿಯ ವೈಯಕ್ತಿಕ ಮಾಹಿತಿ ಮತ್ತು ದತ್ತಾಂಶಗಳನ್ನು ರಕ್ಷಿಸುವುದಕ್ಕಾಗಿ ಈ ಮಸೂದೆ ರೂಪಿಸಲಾಗಿದೆ ಎಂದು ಕರಡು ಮಸೂದೆಯಲ್ಲಿ ವಿವರಿಸಲಾಗಿದೆ. ಆದರೆ, ವ್ಯಕ್ತಿಯ ವೈಯಕ್ತಿಕ ಮಾಹಿತಿ ಮತ್ತು ದತ್ತಾಂಶಗಳ ರಕ್ಷಣೆಯು ಅನಿರ್ಬಂಧಿತ ಅಲ್ಲ. ಕಾನೂನು ಕ್ರಮದ ಸಂದಂರ್ಭದಲ್ಲಿ ಮತ್ತು ನ್ಯಾಯಾಂಗದ ವಿಚಾರಣೆ ಸಂದರ್ಭದಲ್ಲಿ ಈ ಹಕ್ಕುಗಳು ರದ್ದಾಗುತ್ತವೆ. ಆದರೆ, ಒಂದೇ ಒಂದು ಅಧಿಸೂಚನೆ ಹೊರಡಿಸುವ ಮೂಲಕ ಈ ಹಕ್ಕುಗಳನ್ನು ಮೊಟಕುಗೊಳಿಸುವ ಅಧಿಕಾರವನ್ನು ಈ  ಮಸೂದೆಯು ಸರ್ಕಾರಕ್ಕೆ ನೀಡುತ್ತದೆ. ಹೀಗಾಗಿ, ಈ ಕರಡು ಮಸೂದೆಯು ಮೇಲ್ನೋಟಕ್ಕೆ ಕಾಣುತ್ತಿರುವಂತೆ ಸರಳವಾಗಿಲ್ಲ. ಬದಲಿಗೆ, ಯಾವುದೇ ವ್ಯಕ್ತಿಯ ವೈಯಕ್ತಿಕ ಮಾಹಿತಿಯನ್ನು ಸಂಗ್ರಹಿಸುವ ಮತ್ತು ತನಗೆ ಬೇಕಾದಂತೆ ಅದನ್ನು ಬಳಸಿಕೊಳ್ಳುವ ಅತಿ ಅಧಿಕಾರವನ್ನು ಸರ್ಕಾರಕ್ಕೆ ಈ ಕರಡು ಮಸೂದೆ ನೀಡುತ್ತದೆ.

ವ್ಯಕ್ತಿಯ ವೈಯಕ್ತಿಕ ಮಾಹಿತಿ ಮತ್ತು ದತ್ತಾಂಶಗಳಿಗೆ ನೀಡಿರುವ ರಕ್ಷಣೆಯನ್ನು ಈ ಕರಡು ಮಸೂದೆಯ 18ನೇ ಸೆಕ್ಷನ್‌ನ ಅಡಿ ತೆಗೆದುಹಾಕಲಾಗಿದೆ. ರಾಷ್ಟ್ರೀಯ ಭದ್ರತೆ, ಸಾರ್ವಭೌಮತೆ, ಕಾನೂನು ಮತ್ತು ಸುವ್ಯವಸ್ಥೆ ಹಾಗೂ ಮಿತ್ರ ರಾಷ್ಟ್ರಗಳೊಂದಿಗಿನ ಸಂಬಂಧಕ್ಕೆ ಧಕ್ಕೆಯಾಗುತ್ತಿದೆ ಎಂದು ಸರ್ಕಾರಕ್ಕೆ ಭಾಸವಾದರೆ, ಒಂದು ಅಧಿಸೂಚನೆ ಹೊರಡಿಸುವ ಮೂಲಕ 18ನೇ ಸೆಕ್ಷನ್‌ ಅನ್ನು ಜಾರಿಗೆ ತರಬಹುದು. ಆಗ ವೈಯಕ್ತಿಕ ಮಾಹಿತಿ ಮತ್ತು ದತ್ತಾಂಶ ರಕ್ಷಣೆಯ ಹಕ್ಕುಗಳೆಲ್ಲವೂ ಮೊಟಕಾಗುತ್ತವೆ.

l ವ್ಯಕ್ತಿಯು ತಾನು ಯಾವುದೇ ಸರ್ಕಾರಿ ಅಥವಾ ಖಾಸಗಿ ಸಂಸ್ಥೆಗೆ ನೀಡಿರುವ ಮಾಹಿತಿ ಮತ್ತು ದತ್ತಾಂಶಗಳನ್ನು ಹೇಗೆ ಬಳಸಿಕೊಳ್ಳಲಾಗುತ್ತದೆ ಎಂಬುದರ ಬಗ್ಗೆ ಮಾಹಿತಿ ಪಡೆಯುವ ಹಕ್ಕನ್ನು ಈ ಕರಡು ಮಸೂದೆಯ 12 (3) ಮತ್ತು 12ನೇ (4) ಸೆಕ್ಷನ್‌ಗಳು ನೀಡುತ್ತವೆ. ಈ ದತ್ತಾಂಶಗಳನ್ನು ಮೂರನೇ ವ್ಯಕ್ತಿ/ಸಂಸ್ಥೆಯ ಜತೆಗೆ ಹಂಚಿಕೊಳ್ಳಲಾಗಿದೆಯೇ ಎಂಬುದನ್ನು ತಿಳಿದುಕೊಳ್ಳುವ ಹಕ್ಕನ್ನೂ ಈ ಸೆಕ್ಷನ್‌ಗಳು ನೀಡುತ್ತವೆ. ಆದರೆ, 18ನೇ ಸೆಕ್ಷನ್‌ ಅನ್ನು ಅನ್ವಯ ಮಾಡಿದರೆ, ಈ ಹಕ್ಕುಗಳು ರದ್ದಾಗುತ್ತವೆ. ವ್ಯಕ್ತಿಯು ತನ್ನ ದತ್ತಾಂಶಗಳು ಹೇಗೆ ಬಳಕೆಯಾಗುತ್ತಿವೆ ಮತ್ತು ಯಾರಿಗೆಲ್ಲಾ ಹಂಚಿಕೆಯಾಗಿವೆ ಎಂಬುದನ್ನು ತಿಳಿದುಕೊಳ್ಳುವ ಹಕ್ಕನ್ನು ಕಳೆದುಕೊಳ್ಳುತ್ತಾನೆ

l ವ್ಯಕ್ತಿಯು ತನ್ನ ವೈಯಕ್ತಿಕ ಮಾಹಿತಿ ಮತ್ತು ದತ್ತಾಂಶವನ್ನು ಯಾವ ಉದ್ದೇಶಕ್ಕೆ ನೀಡಿದ್ದನೋ, ಆ ಉದ್ದೇಶ ಈಡೇರಿದ ನಂತರ ಸಂಬಂಧಿತ ಸಂಸ್ಥೆಯು ಆ ದತ್ತಾಂಶವನ್ನು ಸಂಪೂರ್ಣವಾಗಿ ಅಳಿಸಿ ಹಾಕಬೇಕು. ಈ ಮೂಲಕ ವ್ಯಕ್ತಿಯ ವೈಯಕ್ತಿಕ ಮಾಹಿತಿ ಮತ್ತು ದತ್ತಾಂಶಕ್ಕೆ ರಕ್ಷಣೆ ನೀಡಲಾಗಿದೆ. ಆದರೆ 18ನೇ ಸೆಕ್ಷನ್‌ ಅನ್ವಯ ಮಾಡಿದರೆ, ಉದ್ದೇಶ ಮತ್ತು ಕಾರ್ಯ ಈಡೇರಿದ್ದರೂ ದತ್ತಾಂಶಗಳನ್ನು ಅಳಿಸಿಹಾಕಬೇಕಿಲ್ಲ. ಸರ್ಕಾರ ಕೇಳಿದರೆ, ಆ ದತ್ತಾಂಶವನ್ನು ಸರ್ಕಾರಕ್ಕೆ ಹಸ್ತಾಂತರ ಮಾಡಬೇಕಾಗುತ್ತದೆ

l ವೈಯಕ್ತಿಕ ದತ್ತಾಂಶ ಮತ್ತು ಮಾಹಿತಿ ಸಂಗ್ರಹಕ್ಕೂ ಮುನ್ನ ಸಂಬಂಧಿತ ವ್ಯಕ್ತಿಗೆ ಸಂಬಂಧಿತ ಸಂಸ್ಥೆಯು ಪೂರ್ವಭಾವಿಯಾಗಿ ನೋಟಿಸ್‌ ನೀಡಬೇಕು. ವ್ಯಕ್ತಿಯ ಒಪ್ಪಿಗೆಯ ನಂತರವೇ ಮಾಹಿತಿ ಮತ್ತು ದತ್ತಾಂಶವನ್ನು ಸಂಗ್ರಹಿಸಬೇಕು. ಆದರೆ 18ನೇ ಸೆಕ್ಷನ್ ಅನ್ವಯವಾದರೆ, ವೈಯಕ್ತಿಕ ಮಾಹಿತಿ ಮತ್ತು ದತ್ತಾಂಶ ಸಂಗ್ರಹಕ್ಕೆ ಪೂರ್ವಭಾವಿಯಾಗಿ ನೋಟಿಸ್‌ ನೀಡುವ ಮತ್ತು ಒಪ್ಪಿಗೆ ಪಡೆಯುವ ಅವಶ್ಯಕತೆ ಇರುವುದಿಲ್ಲ. ವ್ಯಕ್ತಿಗೆ ತನ್ನ ವೈಯಕ್ತಿಕ ಮಾಹಿತಿ ಮತ್ತು ದತ್ತಾಂಶಗಳ ಮೇಲೆ ಯಾವುದೇ ಅಧಿಕಾರವಿರುವುದಿಲ್ಲ

l ‘ನಿಮ್ಮ ಗ್ರಾಹಕರನ್ನು ತಿಳಿದುಕೊಳ್ಳಿ ಕಾಯ್ದೆಯಲ್ಲಿ (ನೋ ಯುವರ್ ಕಸ್ಟಮರ್–ಕೆವೈಸಿ)’ ವೈಯಕ್ತಿಕ ಮಾಹಿತಿ ಮತ್ತು ದತ್ತಾಂಶಕ್ಕೆ ನೀಡಲಾಗಿರುವ ರಕ್ಷಣೆಯನ್ನು ಈ ಕರಡು ಮಸೂದೆಯು ರದ್ದು ಮಾಡುತ್ತದೆ. ಕೆವೈಸಿ ಕಾಯ್ದೆಯ ಪ್ರಕಾರ ಯಾವುದೇ ವ್ಯಕ್ತಿಯು ಯಾವುದೇ ಸಂಸ್ಥೆಯೊಂದಿಗೆ ತನ್ನ ವ್ಯಾವಹಾರಿಕ ಸಂಬಂಧ ಕಡಿದುಕೊಂಡರೆ, ಆತನಿಗೆ ಸಂಬಂಧಿಸಿದ ಸಂಪೂರ್ಣ ಮಾಹಿತಿ ಮತ್ತು ದತ್ತಾಂಶವನ್ನು ಆ ಸಂಸ್ಥೆಯು ಅಳಿಸಿ ಹಾಕಬೇಕು. ವ್ಯಾವಹಾರಿಕ ಸಂಬಂಧ ಕಡಿದುಕೊಂಡ ನಂತರದ ಆರು ತಿಂಗಳ ಒಳಗೆ ಅಳಿಸಿಹಾಕುವ ಪ್ರಕ್ರಿಯೆ ಪೂರ್ಣಗೊಳ್ಳಬೇಕು. ಆದರೆ, ಈ ಷರತ್ತನ್ನು ಈ ನೂತನ ಕರಡು ಮಸೂದೆಯು ಅಮಾನ್ಯ ಮಾಡುತ್ತದೆ. ಆರು ತಿಂಗಳ ನಂತರವೂ ಅಂತಹ ಮಾಹಿತಿಯನ್ನು ಸಂಗ್ರಹಿಸಿ ಇಟ್ಟುಕೊಳ್ಳಬಹುದು ಎಂದು ಕರಡು ಮಸೂದೆಯಲ್ಲಿ ವಿವರಿಸಲಾಗಿದೆ

ಕಳವಳಕಾರಿ ಅಂಶಗಳು

l ದೇಶದ ಸಾರ್ವಭೌಮತೆ ಮತ್ತು ಏಕತೆ ಹಾಗೂ ರಾಷ್ಟ್ರೀಯ ಭದ್ರತೆಯ ಹೆಸರಿನಲ್ಲಿ ಯಾವುದೇ ದತ್ತಾಂಶವನ್ನು ಸರ್ಕಾರವು ಪಡೆದುಕೊಳ್ಳಬಹುದು. ಸ್ನೇಹ ಸಂಬಂಧ ಇರುವ ದೇಶಗಳ ಹಿತಾಸಕ್ತಿ ರಕ್ಷಣೆ, ಸಾರ್ವಜನಿಕ ಸುವ್ಯವಸ್ಥೆ ಕಾಯ್ದುಕೊಳ್ಳುವುದು, ಯಾವುದೇ ಅಪರಾಧ ಕೃತ್ಯಕ್ಕೆ ಕುಮ್ಮಕ್ಕು ನೀಡುವುದಕ್ಕೆ ತಡೆ, ಸುಳ್ಳು ಹರಡುವುದಕ್ಕೆ ತಡೆ ಒಡ್ಡುವುದಕ್ಕಾಗಿಯೂ ಸರ್ಕಾರ ದತ್ತಾಂಶಗಳನ್ನು ಪಡೆದುಕೊಳ್ಳಬಹುದು. ಇಂತಹ ವ್ಯಾಪಕ ಅವಕಾಶವು ದತ್ತಾಂಶ ದುರ್ಬಳಕೆಗೆ ಅವಕಾಶ ಕೊಡಬಹುದು ಎಂಬ ಆಕ್ಷೇಪ ಕೇಳಿ ಬಂದಿದೆ

l ಸರಳಗೊಳಿಸಬೇಕು ಎಂಬ ಕಾರಣಕ್ಕೆ ಮಸೂದೆಯಲ್ಲಿ 30 ಭಾಗಗಳು ಇವೆ. ಆದರೆ, ಹೀಗೆ ಸಂಕ್ಷಿಪ್ತಗೊಳಿಸಲಾದ ಕಾರಣ ಖಾಸಗಿತನ ಸಂರಕ್ಷಣೆಯ ವಿಚಾರದಲ್ಲಿ ಸ್ಪಷ್ಟತೆಯ ಕೊರತೆ ಇದೆ

l ವ್ಯಕ್ತಿಗಳ ದತ್ತಾಂಶವು ಕಳವಾದರೆ, ದುರ್ಬಳಕೆಯಾದರೆ ಅದಕ್ಕೆ ಪರಿಹಾರ ನೀಡುವ ಪ್ರಸ್ತಾವ ಇಲ್ಲ

l ಸ್ವಯಂಚಾಲಿತ ನಿರ್ಧಾರ ಕೈಗೊಳ್ಳುವಿಕೆಯ ಹಿಂದೆ ಇರುವ ತರ್ಕ ಏನು ಎಂಬುದನ್ನು ವೆಬ್‌ಸೈಟ್‌ಗಳು
ಬಹಿರಂಗಪಡಿಸುವುದು ಕಡ್ಡಾಯವಲ್ಲ. ಹೀಗಾಗಿ, ಸ್ವಯಂಚಾಲಿತ ನಿರ್ಧಾರ ಕೈಗೊಳ್ಳುವಿಕೆಯು ತಾರತಮ್ಯಕ್ಕೆ ಕಾರಣ ಆಗಬಹುದು

l ವಿದೇಶಗಳಲ್ಲಿ ದತ್ತಾಂಶ ಸಂಗ್ರಹಿಸಿ ಇರಿಸುವುದಕ್ಕೆ ಸಂಬಂಧಿಸಿ ಮೂಲ ಮಸೂದೆಯಲ್ಲಿ ಇದ್ದ ಅಂಶಗಳನ್ನು ಪರಿಷ್ಕೃತ ಮಸೂದೆಯಲ್ಲಿ ಕೈಬಿಡಲಾಗಿದೆ. ದೊಡ್ಡ ತಂತ್ರಜ್ಞಾನ ಕಂಪನಿಗಳು ಇವನ್ನು ವಿರೋಧಿಸಿದ್ದವು

l ವೈಯಕ್ತಿಕ ದತ್ತಾಂಶಗಳನ್ನು ಸ್ವಯಂಚಾಲಿತವಲ್ಲದೆ ಬಳಸಿಕೊಳ್ಳುವುದು, ಆಫ್‌ಲೈನ್‌ ದತ್ತಾಂಶ ಬಳಕೆ,
ವ್ಯಕ್ತಿಯೊಬ್ಬರು ವೈಯಕ್ತಿಕ ಅಥವಾ ಕೌಟುಂಬಿಕ ಉದ್ದೇಶಕ್ಕಾಗಿ ದತ್ತಾಂಶ ಬಳಸಿಕೊಳ್ಳುವುದಕ್ಕೆ ಈ ಮಸೂದೆಯು ಅನ್ವಯ ಆಗುವುದಿಲ್ಲ

ಮಾಹಿತಿ ನೀಡದಿದ್ದರೆ ಸೇವೆ ಇಲ್ಲ

ಪ್ರತಿ ಖಾಸಗಿ ಅಥವಾ ಸರ್ಕಾರಿ ಸಂಸ್ಥೆಯ ಯಾವುದೇ ಸೇವೆ ಬೇಕೆಂದರೆ, ಆ ಸಂಸ್ಥೆಯು ಕೇಳುವ ಎಲ್ಲಾ ಮಾಹಿತಿಗಳನ್ನು ವ್ಯಕ್ತಿಯು ನೀಡಬೇಕು ಎಂದು ಈ ಕರಡು ಮಸೂದೆಯು ಹೇಳುತ್ತದೆ. ಅಂತಹ ಸೇವೆ ಬೇಕು ಎಂದರೆ, ಮಾಹಿತಿಯನ್ನು ನೀಡಬೇಕು ಮತ್ತು ಅದನ್ನು ಬಳಸಲು ಒಪ್ಪಿಗೆ ನೀಡಬೇಕು ಎಂದು ಕರಡು ಮಸೂದೆಯಲ್ಲಿ ವಿವರಿಸಲಾಗಿದೆ. ಇದಕ್ಕೆ ಒಪ್ಪಿಗೆ ನೀಡದೇ ಇದ್ದರೆ, ಸಂಸ್ಥೆಯು ತಾನು ನೀಡುತ್ತಿರುವ ಸೇವೆಯನ್ನು ತಕ್ಷಣವೇ ಸ್ಥಗಿತಗೊಳಿಸಬಹುದು ಎಂದು
ಕರಡು ಮಸೂದೆಯಲ್ಲಿ ಹೇಳಲಾಗಿದೆ.

ವ್ಯಕ್ತಿಯು ತನ್ನ ವೈಯಕ್ತಿಕ ಮಾಹಿತಿ ಮತ್ತು ದತ್ತಾಂಶಗಳ ಸಂಗ್ರಹ ಹಾಗೂ ಬಳಕೆಗೆ ಅನುಮತಿ ನೀಡಿದ್ದು, ಬಳಕೆಗೆ ನೀಡಿದ್ದ ಒಪ್ಪಿಗೆಯನ್ನು  ನಂತರದ ದಿನಗಳಲ್ಲಿ ಹಿಂಪಡೆಯಬಹುದು. ಹೀಗೆ ಒಪ್ಪಿಗೆ ಹಿಂಪಡೆದ ತಕ್ಷಣ ಆತನಿಗೆ ನೀಡಲಾಗುತ್ತಿದ್ದ ಸೇವೆಯನ್ನು ಸ್ಥಗಿತಗೊಳಿಸಬೇಕು ಎಂದು ಕರಡು ಮಸೂದೆಯು ಹೇಳುತ್ತದೆ. 

ಮಾಹಿತಿ ತಪ್ಪಾಗಿದ್ದರೆ ದಂಡ: ವ್ಯಕ್ತಿಯು ಯಾವುದೇ ಖಾಸಗಿ ಅಥವಾ ಸರ್ಕಾರಿ ಸಂಸ್ಥೆಗೆ ನೀಡಿರುವ ಮಾಹಿತಿಯು ತಪ್ಪಾಗಿದ್ದರೆ, ಅಂತಹ ವ್ಯಕ್ತಿಗೆ ಗರಿಷ್ಠ ₹ 10 ಸಾವಿರ ದಂಡ ವಿಧಿಸಲು ಅವಕಾಶವಿದೆ.

ನಿಯಮ ರಚಿಸುವ ಅಧಿಕಾರ ದುರ್ಬಳಕೆ ಸಾಧ್ಯತೆ?

ಕೇಂದ್ರ ಸರ್ಕಾರವು ಈ ಮಸೂದೆಯು ಕಾಯ್ದೆಯಾದ ನಂತರ ಅದಕ್ಕೆ ಸಂಬಂಧಿಸಿದ ನಿಯಮಗಳನ್ನು ಅಧಿಸೂಚನೆ ಮೂಲಕ ಪ್ರಕಟಿಸಬಹುದು ಎಂದು ಕರಡು ಮಸೂದೆಯ 26‌ನೇ ಸೆಕ್ಷನ್ ಉಲ್ಲೇಖಿಸುತ್ತದೆ.  ಭಾರತದ ಶಾಸಕಾಂಗ ಪರಿಭಾಷೆಯಲ್ಲಿ ನಿಯಮಾವಳಿಗಳು ಕಾಯ್ದೆಯ ವಿಸ್ತೃತ ರೂಪಗಳಾಗಿದ್ದು, ಕಾಯ್ದೆಯಲ್ಲಿನ ಅಂಶಗಳಿಗೆ ಪೂರಕವಾಗಿರುತ್ತವೆ. ಕಾಯ್ದೆಯಲ್ಲಿ ಹೇಳಲಾಗಿರುವ ಅಂಶಗಳ ಅನುಷ್ಠಾನದ ವಿಧಾನವನ್ನು ಅವು ತಿಳಿಸುತ್ತವೆ. 

ಈ ಪ್ರಕಾರ, ಸಂಸತ್ತಿನ ಎರಡೂ ಸದನಗಳ ಮುಂದೆ ನಿಯಮಾವಳಿಗಳನ್ನು ಮಂಡಿಸಲಾಗುತ್ತದೆ. ಸಂಸತ್ತಿನಲ್ಲಿ ಇರಿಸಿದ ಬಳಿಕ ಅವು ಜಾರಿಗೊಳ್ಳುತ್ತವೆ. ಸಂಸತ್ತಿನಲ್ಲಿ ಮಂಡನೆಯಾದ ಸಮಯದಲ್ಲಿ, ಅವುಗಳಿಗೆ ಬದಲಾವಣೆ ತರಲು ಅವಕಾಶವಿರುತ್ತದೆ. ಸಂಸತ್ತಿನ ಎರಡೂ ಸದನಗಳು ಈ ನಿಮಯಗಳಿಗೆ ಒಪ್ಪಿಗೆ ಸೂಚಿಸಬಹುದು ಅಥವಾ ಸೂಚಿಸದೆಯೂ ಇರಬಹುದು. ಮಸೂದೆಗಳ ಹಾಗೆ, ನಿಯಮಾವಳಿಗಳ ಬಗ್ಗೆ ಸದನದಲ್ಲಿ ಚರ್ಚೆ ನಡೆಯಬೇಕು ಎಂದೇನೂ ಇಲ್ಲ. ಒಂದು ವೇಳೆ ಬದಲಾವಣೆಗೆ ಒಳಪಟ್ಟಲ್ಲಿ, ಅದೇ ಸ್ವರೂಪದಲ್ಲಿ ನಿಯಮಗಳು  ಜಾರಿಯಾಗುತ್ತವೆ. ಪ್ರತೀ ಸದನದಲ್ಲಿ ಮಂಡಿಸಿದ 30 ದಿನಗಳ ಬಳಿಕ ಅವು ಜಾರಿಗೆ ಬರುತ್ತವೆ ಎಂದು ಕರಡು ಮಸೂದೆಯಲ್ಲಿ  ಉಲ್ಲೇಖಿಸಲಾಗಿದೆ. 

ಯಾವುದಾದರೂ ನಿಯಮಗಳನ್ನು ಹೊಸದಾಗಿ ರೂಪಿಸಬೇಕಾದ ಪ್ರಸಂಗ ಬಂದರೆ, ಸರ್ಕಾರವು ಎಷ್ಟು ಬೇಕಾದರೂ ನಿಯಮಗಳನ್ನು ಪ್ರಕಟಿಸಲು ಅವಕಾಶವಿದೆ. ‘ಕಳೆದ ಕೆಲವು ವರ್ಷಗಳಿಂದ ಕೇಂದ್ರ ಸರ್ಕಾರವು ನಿಯಮಗಳನ್ನು ರೂಪಿಸುವ ಅಧಿಕಾರವನ್ನು ತನ್ನ ಅಧಿಕಾರ ವ್ಯಾಪ್ತಿ ವಿಸ್ತರಿಸಿಕೊಳ್ಳಲು ಬಳಸುತ್ತಿದೆ’ ಎಂದು ಡಿಜಿಟಲ್ ಖಾಸಗಿತನ ಸೇವೆ ಒದಗಿಸುವ ವರ್ಚ್ಯು ಸಂಸ್ಥೆಯ ಉಪಾಧ್ಯಕ್ಷೆ ಮಿಶಿ ಚೌಧರಿ ಅವರು ಅಭಿಪ್ರಾಯಪಟ್ಟಿದ್ದಾರೆ. ಅಂದರೆ ಇಂತಹ ಕಾಯ್ದೆಗಳಿಗೆ ನಿಯಮಗಳನ್ನು ರೂಪಿಸುವ ಮೂಲಕ ಎಲ್ಲ ಅಧಿಕಾರವನ್ನೂ ಸರ್ಕಾರ ತನ್ನಲ್ಲಿ ಕೇಂದ್ರೀಕರಿಸಿಕೊಳ್ಳಲು ಯತ್ನಿಸುತ್ತದೆ ಎಂದು ಅವರು ವಿಶ್ಲೇಷಿಸಿದ್ದಾರೆ. 

‘ಪ್ರಾಯೋಗಿಕ ಎನಿಸುವ ನಿಯಮಾವಳಿಗಳನ್ನು ಹಾಗೂ ಶಿಫಾರಸುಗಳನ್ನು ಮುಂದಿಡುವ ಕೆಲಸವನ್ನು ಯುರೋಪಿಯನ್ ಡಾಟಾ ಪ್ರೊಟೆಕ್ಷನ್ ಬೋರ್ಡ್ (ಇಡಿಪಿಬಿ) ಈಗಲೂ ಮುಂದುವರಿಸುತ್ತಿದೆ. ಇದೇ ರೀತಿ, ಕಾಯ್ದೆಗೆ ಪೂರಕವಾದ ಹಾಗೂ ಪರಿಣಾಮಕಾರಿ ನಿಯಮಾವಳಿಗಳನ್ನು ಪ್ರಾಧಿಕಾರಗಳು ಶಿಫಾರಸು ಮಾಡಿದಾಗ ಮಾತ್ರ, ಜಾರಿಯಲ್ಲಿರುವ ಕಾಯ್ದೆಯು ಪರಿಣಾಮಕಾರಿಯಾಗಿ ಜಾರಿಗೊಳ್ಳಲು ಸಾಧ್ಯವಾಗುತ್ತದೆ’ ಎಂದು ಡೆಲಾಯ್ಟ್ ನಿರ್ವಹಣಾ ಸಂಸ್ಥೆಯ ಮನೀಶ್ ಅವರು ಅಭಿಪ್ರಾಯಪಟ್ಟಿದ್ದಾರೆ. 

ಮಂಡಳಿ ಸ್ವಾಯತ್ತೆ ಕುರಿತು ಪ್ರಶ್ನೆ

ಬಳಕೆದಾರರ ಕುಂದು ಕೊರತೆಗಳಿಗೆ ಉತ್ತರಿಸಲು ಮಂಡಳಿಯೊಂದನ್ನು ಸ್ಥಾಪಿಸುವ ಉದ್ದೇಶದ ಬಗ್ಗೆ ಮಸೂದೆಯ 19ನೇ ಸೆಕ್ಷನ್‌ನಲ್ಲಿ ಉಲ್ಲೇಖಿಸಲಾಗಿದೆ. ಮಂಡಳಿಯ ರಚನೆ, ನಿಯಮಾವಳಿಗಳು, ಸದಸ್ಯರ ನೇಮಕ ಹಾಗೂ ವಜಾ ಮೊದಲಾದ ವಿಚಾರಗಳು ಕೇಂದ್ರ ಸರ್ಕಾರದ ನಿಯಂತ್ರಣಕ್ಕೆ ಒಳಪಡಲಿವೆ. ಇದು ಮಂಡಳಿಯ ಸ್ವಾಯತ್ತೆ ಬಗ್ಗೆ ಪ್ರಶ್ನೆಗಳನ್ನು ಹಟ್ಟುಹಾಕಿದೆ. ಆದರೆ, ಮಂಡಳಿಯ ಕಾರ್ಯಾಚರಣೆಯು ಸ್ವತಂತ್ರವಾಗಿ ಇರಲಿದೆ ಎಂದು ಕರಡು ಮಸೂದೆಯಲ್ಲಿ ಉಲ್ಲೇಖಿಸಲಾಗಿದೆ. ಆದರೆ, ಇದಕ್ಕೆ ಪೂರಕವಾದ ಯಾವ ಅಂಶಗಳೂ ಇದರಲ್ಲಿ ಇಲ್ಲ. ಸರ್ಕಾರ ವಾಪಸ್ ಪಡೆದಿರುವ 2019ರ ಮಸೂದೆಯಲ್ಲಿ, ಮಂಡಳಿಯು ಸ್ವತಂತ್ರವಾಗಿ ಕಾರ್ಯ ನಿರ್ವಹಿಸಲು ನೆರವಾಗುವ ಅಂಶಗಳಿದ್ದವು. ಆದರೆ, ಈ ಬಾರಿ ಅಂತಹ ಅಂಶಗಳನ್ನು ಕೈಬಿಡಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು