ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳ–ಅಗಲ: ಶಿವಸೇನಾದಲ್ಲಿ ತಳಮಳ ಸಿದ್ಧಾಂತ ಬದಲಿನ ಸಂಕಟ

ಆಧಾರ: ಪಿಟಿಐ, ಬಿಬಿಸಿ
Last Updated 26 ಜೂನ್ 2022, 19:45 IST
ಅಕ್ಷರ ಗಾತ್ರ

ಶಿವಸೇನಾ ಅತ್ಯಂತ ದೊಡ್ಡ ಮಟ್ಟದ ಬಂಡಾಯದ ಬಿಸಿ ಎದುರಿಸುತ್ತಿದೆ. ಪಕ್ಷವುಈಗಿನದ್ದೂ ಸೇರಿ ಒಟ್ಟು ನಾಲ್ಕು ಬಾರಿ ಬಂಡಾಯ ಎದುರಿಸಿದೆ. ಈ ಹಿಂದೆ ಮೂರು ಬಾರಿ ಬಂಡಾಯ ಉಂಟಾದಾಗಲೂ ಶಿವಸೇನಾವು ವಿರೋಧ ಪಕ್ಷದ ಸ್ಥಾನದಲ್ಲಿತ್ತು. ಆದರೆ ಈಗ, ಪಕ್ಷವು ಅಧಿಕಾರದಲ್ಲಿದ್ದಾಗಲೇ ಮುಕ್ಕಾಲುಪಾಲು ಶಾಸಕರು ಬಂಡಾಯದ ಕಹಳೆ ಊದಿದ್ದಾರೆ.ಪಕ್ಷದ ಮುಖ್ಯಸ್ಥ ಮತ್ತು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ಪಕ್ಷದ ಸಿದ್ಧಾಂತಗಳಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ ಎಂಬುದು ಬಂಡಾಯವೆದ್ದಿರುವ ಶಾಸಕರು ನೀಡುತ್ತಿರುವ ಪ್ರಮುಖ ಕಾರಣ. ಆದರೆ, ಪಕ್ಷವು ಅಸ್ತಿತ್ವಕ್ಕೆ ಬಂದಾಗಿನಿಂದ ತನ್ನ ಸಿದ್ಧಾಂತವನ್ನು ಹಲವು ಬಾರಿ ಬದಲಿಸಿದೆ.

ಪಕ್ಷದ ಸಂಸ್ಥಾಪಕ ಬಾಳಾ ಠಾಕ್ರೆ ಅವರು, ‘ನಮ್ಮದು ಶೇ 80ರಷ್ಟು ಸಮಾಜ ಸೇವೆ, ಶೇ 20ರಷ್ಟು ರಾಜಕಾರಣ’ ಎಂದು ಹೇಳುತ್ತಿದ್ದರು. ಅವರು ಎಂದೂ ಚುನಾವಣಾ ರಾಜಕಾರಣದಲ್ಲಿ ನೇರವಾಗಿ ಭಾಗಿಯಾದವರಲ್ಲ. ಆದರೆ, ಈಗ ಶಿವಸೇನಾ ಒಂದು ಪೂರ್ಣ ಪ್ರಮಾಣದ ರಾಜಕೀಯ ಪಕ್ಷವಾಗಿ ರೂಪುಗೊಂಡಿದೆ.

‘ಬಾಳಾ ಠಾಕ್ರೆ ಅವರ ಹಿಂದುತ್ವಕ್ಕೆ ವಿರುದ್ಧವಾದ ಸಿದ್ಧಾಂತವನ್ನು ಉದ್ಧವ್ ಠಾಕ್ರೆ ಅನುಸರಿಸುತ್ತಿದ್ದಾರೆ. ಪಕ್ಷದ ಸಿದ್ಧಾಂತಕ್ಕೆ ಸರಿಹೊಂದದ ಕಾಂಗ್ರೆಸ್‌ ಮತ್ತು ಎನ್‌ಸಿಪಿ ಜತೆಗೆ ಅಸಹಜ ಮೈತ್ರಿ ಮಾಡಿಕೊಂಡಿದ್ದಾರೆ’ ಎಂದು ಭಿನ್ನಮತೀಯ ಶಾಸಕರ ನಾಯಕ ಏಕನಾಥ ಶಿಂಧೆ ಅವರು ಆರೋಪಿಸಿದ್ದಾರೆ. ಆದರೆ, ಪಕ್ಷ ಅಸ್ತಿತ್ವಕ್ಕೆ ಬಂದಾಗ ಹಿಂದುತ್ವ ಅದರ ಸಿದ್ಧಾಂತವೇ ಆಗಿರಲಿಲ್ಲ.1966ರಲ್ಲಿ ಅಸ್ತಿತ್ವಕ್ಕೆ ಬಂದ ಶಿವಸೇನಾವು, ಮರಾಠಿಗರ ಹಕ್ಕುಗಳ ರಕ್ಷಣೆಯ ಗುರಿ ಹೊಂದಿತ್ತು. ಮುಂಬೈನಲ್ಲಿ ವಲಸಿಗರ ಕೈ ಮೇಲಾಗುವುದನ್ನು ಶಿವಸೇನಾ ವಿರೋಧಿಸುತ್ತಿತ್ತು. ಗುಜರಾತಿಗಳು, ದಕ್ಷಿಣ ಭಾರತೀಯ ವಲಸಿಗರ ಸಂಖ್ಯೆ ಮುಂಬೈನಲ್ಲಿ ಹೆಚ್ಚಾಗುವುದರಿಂದ ಮರಾಠಿಗರಿಗೆ ಅವಕಾಶಗಳು ಕಡಿಮೆಯಾಗುತ್ತವೆ ಎಂಬುದು ಶಿವಸೇನಾದ ಪ್ರತಿಪಾದನೆಯಾಗಿತ್ತು. ಜತೆಗೆ ಮುಸ್ಲಿಮರಿಗೆ ಸಂಬಂಧಿಸಿದಂತೆಯೂ ಶಿವಸೇನಾಗೆ ಇಂತಹದ್ದೇ ನಿಲುವು ಇತ್ತು. ‘ಮರಾಠಿಗರ ಹಕ್ಕುಗಳ ರಕ್ಷಣೆಗಾಗಿ ನಾವು ಏನನ್ನಾದರೂ ಮಾಡುತ್ತೇವೆ’ ಎಂದು ಸ್ವತಃ ಬಾಳಾ ಠಾಕ್ರೆ ಹಲವು ಭಾರಿ ಘೋಷಿಸಿದ್ದರು.

ಶಿವಸೇನಾದ ನಿಲುವು 1970ರ ದಶಕದಲ್ಲಿ ಹಿಂದುತ್ವದತ್ತ ತಿರುಗಿತು. 80–90ರ ದಶಕದಲ್ಲಿ ಇದು ತೀವ್ರ ಹಿಂದುತ್ವದ ರೂಪ ಪಡೆಯಿತು. 1992ರಲ್ಲಿ ಬಾಬರಿ ಮಸೀದಿ ಧ್ವಂಸಕ್ಕೆ ಪ್ರೇರಣೆ ನೀಡಿದ ಆರೋಪ ಬಾಳಾ ಠಾಕ್ರೆ ಮೇಲಿತ್ತು. ಆನಂತರ ಮುಂಬೈನಲ್ಲಿ ನಡೆದಿದ್ದ ಕೋಮುಗಲಭೆ ಹಿಂದೆ ಬಾಳಾ ಠಾಕ್ರೆ ಅವರ ಕೈವಾಡವಿತ್ತು ಎಂಬ ಆರೋಪವೂ ಇತ್ತು. ಈ ಬಗ್ಗೆ ತನಿಖೆ ನಡೆಸಲು ಸುಪ್ರೀಂ ಕೋರ್ಟ್‌, ನಿವೃತ್ತ ನ್ಯಾಯಮೂರ್ತಿ ಬಿ.ಎನ್‌.ಶ್ರೀಕೃಷ್ಣಾ ಅವರ ನೇತೃತ್ವದಲ್ಲಿ ಆಯೋಗ ರಚಿಸಿತ್ತು. ಶ್ರೀಕೃಷ್ಣಾ ಸಮಿತಿಯು ತನ್ನ ವರದಿಯಲ್ಲಿ, ‘ಮುಸ್ಲಿಂ ವಿರೋಧಿ ಗಲಭೆಯ ಹಿಂದೆ ಶಿವಸೇನಾ ಮತ್ತು ಬಾಳಾ ಠಾಕ್ರೆ ಅವರ ಕುಮ್ಮಕ್ಕು ಇದೆ’ ಎಂದು ಹೇಳಿತ್ತು. ಈ ವರದಿಯನ್ನು ಶಿವಸೇನಾ ವಿರೋಧಿಸಿತ್ತು. ಆದರೆ, ಬಾಳಾ ಠಾಕ್ರೆ ನಿರಾಕರಿಸಿರಲಿಲ್ಲ. ನಂತರದ ದಿನಗಳಲ್ಲಿ ಠಾಕ್ರೆ ಅವರು, ‘ನಾವು ಯಾವುದೇ ಧರ್ಮದ ವಿರೋಧಿಗಳಲ್ಲ. ಆದರೆ, ಇಲ್ಲಿದ್ದು ದೇಶದ ಕಾನೂನನ್ನು ಪಾಲಿಸದೇ ಇರುವವರು ದ್ರೋಹಿಗಳು. ಅವರನ್ನು ನಾವು ವಿರೊಧಿಸುತ್ತೇವೆ’ ಎಂದು ಹಲವು ಬಾರಿ ಹೇಳಿದ್ದರು.

ಠಾಕ್ರೆ ಅವರು ತಾವಿನ್ನೂ ಗಟ್ಟಿಯಾಗಿರುವಾಗಲೇ ಮಗ ಉದ್ಧವ್ ಠಾಕ್ರೆ ಅವರನ್ನು ಮುನ್ನೆಲೆಗೆ ತಂದರು. ಬಾಳಾ ಠಾಕ್ರೆ ಅವರ ಕಾಲಾನಂತರ ಉದ್ಧವ್ ಅವರು ಬಿಜೆಪಿ ಜತೆಯಲ್ಲಿಯೇ ತಮ್ಮ ಮೈತ್ರಿ ಮುಂದುವರಿಸಿದ್ದರು. 2019ರ ಚುನಾವಣೆಯ ನಂತರ ಆ ಮೈತ್ರಿ ಮುರಿದುಬಿತ್ತು. ಶಿವಸೇನಾದ ಆವರೆಗಿನ ಸಿದ್ಧಾಂತಕ್ಕೆ ವಿರುದ್ಧ ನಿಲುವುಗಳ ಎನ್‌ಸಿಪಿ ಮತ್ತು ಕಾಂಗ್ರೆಸ್‌ನ ಜತೆ ಮೈತ್ರಿ ಮಾಡಿಕೊಂಡರು. ಆನಂತರದ ದಿನಗಳಲ್ಲಿ ಶಿವಸೇನಾದ ಉಗ್ರ ಹಿಂದುತ್ವದ ನಿಲುವಿನ ತೀವ್ರತೆ ಕಡಿಮೆಯಾಗುತ್ತಾ ಬಂದಿದೆ ಮತ್ತು ಶಿವಸೇನಾ ತನ್ನ ಮೂಲ ಸಿದ್ಧಾಂತವನ್ನು ತೊರೆದಿದೆ ಎಂದು ಈಗಿನ ಬಂಡಾಯ ನಾಯಕ ಏಕನಾಥ ಶಿಂಧೆ ಆರೋಪಿಸಿದ್ದಾರೆ.

‘ಪಕ್ಷವು ಸಿದ್ಧಾಂತ ಬದಲಿಸಿದ್ದರ ಬಗ್ಗೆ ಮತದಾರರು ಸಿಟ್ಟಾಗಿದ್ದಾರೆ. ನಾವು ಮತದಾರರ ಸಿಟ್ಟಿಗೆ ಗುರಿಯಾಗುತ್ತಿದ್ದೇವೆ’ ಎಂದು ಅವರು ಹೇಳುತ್ತಿದ್ದಾರೆ. ತಮ್ಮ ಜತೆಯಲ್ಲಿ ಈಗ ಶಿವಸೇನಾದ 40ಕ್ಕೂ ಹೆಚ್ಚು ಶಾಸಕರು ಮತ್ತು ಕೆಲವು ಸಂಸದರು ಗುರುತಿಸಿಕೊಂಡಿದ್ದಾರೆ ಎಂದು ಶಿಂಧೆ ಹೇಳುತ್ತಿದ್ದಾರೆ. ಆದರೆ ಶಿವಸೇನಾದ ಸ್ಥಳೀಯ ಮಟ್ಟದ ನಾಯಕರು, ಸ್ಥಳೀಯ ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳು,ಜಿಲ್ಲಾ ಪ್ರಮುಖರು, ಮುಂಬೈ ವಿಭಾಗೀಯ ಪ್ರಮುಖರು, ತಾಲ್ಲೂಕು ಪ್ರಮುಖರು, ನಗರ ಪ್ರಮುಖರು, ಶಾಖಾ ಪ್ರಮುಖರು ಮತ್ತು ಕಾರ್ಯಕರ್ತರು ಠಾಕ್ರೆ ಅವರ ಜತೆಗೆ ಇರುತ್ತಾರೆಯೇ ಅಥವಾ ಶಿಂಧೆ ಅವರನ್ನು ಬೆಂಬಲಿಸುತ್ತಾರೆಯೇ ಎಂಬುದನ್ನು ಕಾದು ನೋಡಬೇಕಿದೆ.

ಭುಜಬಲ್ ಮೊದಲ ಬಂಡಾಯ

ಶಿವಸೇನಾದಲ್ಲಿ ಒಬಿಸಿ ನಾಯಕ ಎಂದು ಗುರುತಿಸಿಕೊಂಡಿದ್ದ ಛಗನ್ ಭುಜಬಲ್ ಅವರು ಶಿವಸೇನಾ ಪಕ್ಷದ ಇತಿಹಾಸದಲ್ಲಿ ಮೊದಲ ಬಾರಿಗೆ ಬಂಡಾಯದ ಬಾವುಟ ಹಾರಿಸಿದ್ದರು. ಮುಂಬೈ ಮೇಯರ್ ಆಗಿಯೂ ಕೆಲಸ ಮಾಡಿದ್ದ ಭುಜಬಲ್ ಅವರು 1991ರಲ್ಲಿ 18 ಮಂದಿ ಶಿವಸೇನಾ ಶಾಸಕರ ಜೊತೆ ಪಕ್ಷದಿಂದ ಹೊರನಡೆದರು. ಅಂದು ಶರದ್ ಪವಾರ್ ನೇತೃತ್ವದ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವುದು ಬಂಡಾಯ ಗುಂಪಿನ ಉದ್ದೇಶವಾಗಿತ್ತು. ಭುಜಬಲ್ ನಿರ್ಧಾರ ಶಿವಸೈನಿಕರನ್ನು ರೊಚ್ಚಿಗೇಳಿಸಿತು. ಮುಂಬೈನಲ್ಲಿರುವ ಭುಜಬಲ್ ಅಧಿಕೃತ ನಿವಾಸದ ಮೇಲೆ ಕಾರ್ಯಕರ್ತರು ದಾಳಿ ಮಾಡಿ ಆಕ್ರೋಶ ಹೊರಹಾಕಿದ್ದರು.

ವಿಧಾನಸಭೆಯಲ್ಲಿ ಪ್ರತಿಪಕ್ಷದ ನಾಯಕರನ್ನಾಗಿ ಮನೋಹರ ಜೋಷಿ ಅವರನ್ನು ಆಯ್ಕೆ ಮಾಡಿದ್ದು ಭುಜಬಲ್‌ ಬೇಸರಕ್ಕೆ ಕಾರಣವಾಗಿತ್ತು. ರಾಜ್ಯದಾದ್ಯಂತ ಪಕ್ಷ ಸಂಘಟನೆ ಹಾಗೂ ಅಭ್ಯರ್ಥಿಗಳ ಗೆಲುವಿಗೆ ಶ್ರಮ ವಹಿಸಿದ್ದರೂ, ಶಿವಸೇನಾ ತಮ್ಮನ್ನು ಗುರುತಿಸಿಲ್ಲ ಎಂಬುದು ಅವರ ಮುಖ್ಯ ಆರೋಪವಾಗಿತ್ತು.ಆದರೆ ಭುಜಬಲ್ ಅಂದುಕೊಂಡಂತೆ, ಬಂಡಾಯ ಯಶಸ್ವಿಯಾಗಲಿಲ್ಲ. 12 ಶಾಸಕರು ಮಾತೃಪಕ್ಷಕ್ಕೆ ವಾಪಸಾದರು. ಭುಜಬಲ್ ನೇತೃತ್ವದ ಶಾಸಕರನ್ನು ಪ್ರತ್ಯೇಕ ಗುಂಪು ಎಂಬುದಾಗಿ ಸ್ಪೀಕರ್ ಪರಿಗಣಿಸಿದರು. ಶಾಸಕರ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳಲಿಲ್ಲ.

1995ರ ಚುನಾವಣೆಯಲ್ಲಿ ಮುಂಬೈನ ಮಜಗಾಂವ್ ಕ್ಷೇತ್ರದಿಂದ ಭುಜಬಲ್ ಪರಾಭವಗೊಂಡರು. ಇಲ್ಲಿಂದ ಶಿವಸೇನಾದ ಬಾಳಾ ನಂದಗಾಂವ್ಕರ್ ಎಂಬುವರು ಆಯ್ಕೆಯಾದರು. ನಂತರ, ಭುಜಬಲ್ ನಾಸಿಕ್‌ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡರು. ಎನ್‌ಸಿಪಿಗೆ ಸೇರಿದರು. ಈಗ, ಮಹಾ ವಿಕಾಸ ಆಘಾಡಿ ಸರ್ಕಾರದಲ್ಲಿ ಸಚಿವರಾಗಿದ್ದಾರೆ.

2005ರಲ್ಲಿ ರಾಣೆ ಸರದಿ

ಮನೋಹರ ಜೋಷಿ ಅವರ ಬಳಿಕ ಮುಖ್ಯಮಂತ್ರಿಯಾಗಿ ಆಯ್ಕೆಯಾದವರು ನಾರಾಯಣ ರಾಣೆ. ಶಿವಸೇನಾ ನಾಯಕತ್ವವನ್ನು ಉದ್ಧವ್ ಠಾಕ್ರೆ ಅವರಿಗೆ ವಹಿಸಿದ್ದು ನಾರಾಯಣ ರಾಣೆ ಅವರಿಗೆ ಸರಿಕಾಣಲಿಲ್ಲ. ಪಕ್ಷದ ವಿರುದ್ಧ ಬಂಡಾಯ ಹೂಡಿದ ರಾಣೆ,ಶಿವಸೇನಾದಲ್ಲಿ ಪಕ್ಷದ ಟಿಕೆಟ್‌ಗಳನ್ನು ಮಾರಾಟಕ್ಕೆ ಇಡಲಾಗಿದೆ ಎಂದು ಆರೋಪಿಸಿದ್ದರು. ರಾಣೆ ಅವರ ಭಿನ್ನಮತದಿಂದ ಪಕ್ಷವು ಎರಡು ಹೋಳಾಗಲಿದೆ ಎಂದೇ ಎಲ್ಲರೂ ಭಾವಿಸಿದ್ದರು. ಆದರೆಈ ಬಿಕ್ಕಟ್ಟು ಪಕ್ಷದಿಂದ ರಾಣೆ ಉಚ್ಚಾಟನೆಯೊಂದಿಗೆ ಕೊನೆಗೊಂಡಿತು. ಮತ್ತೆ ಮುಖ್ಯಮಂತ್ರಿಯಾಗುವ ಆಕಾಂಕ್ಷೆಯೊಂದಿಗೆ ಅವರು ಕಾಂಗ್ರೆಸ್ ಸೇರಿದರು. ಅವರು ಬೇಡಿಕೆಯಿಟ್ಟಿದ್ದ ಮಹಾರಾಷ್ಟ್ರ ಪ್ರದೇಶ ಕಾಂಗ್ರೆಸ್ ಘಟಕದ ಅಧ್ಯಕ್ಷ ಹುದ್ದೆಯೂ ಸಿಗಲಿಲ್ಲ. ಹೀಗಾಗಿ ಕಾಂಗ್ರೆಸ್‌ನಿಂದಲೂ ಹೊರಬಂದರು. ವಿಧಾನಸಭಾ ಚುನಾವಣೆಯಲ್ಲೂ ಸೋತರು. 2018ರಲ್ಲಿ ಮಹಾರಾಷ್ಟ್ರ ಸ್ವಾಭಿಮಾನಿ ಪಕ್ಷವನ್ನು (ಎಂಎಸ್‌ಪಿ) ಕಟ್ಟಿದ ರಾಣೆ, ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟವನ್ನು ಸೇರಿದರು. ಈಗ ಕೇಂದ್ರ ಸಚಿವರಾಗಿ ಕೆಲಸ ಮಾಡುತ್ತಿದ್ದಾರೆ.

ರಾಜ್‌ ಠಾಕ್ರೆ

ಬಾಳಾ ಠಾಕ್ರೆ ಅವರ ಅಣ್ಣನ ಮಗ ರಾಜ್ ಠಾಕ್ರೆ ಅವರು ಶಿವಸೇನಾವನ್ನು ತೊರೆದದ್ದು ಆ ಪಕ್ಷದ ಇತಿಹಾಸದಲ್ಲಿ ಒಂದು ದೊಡ್ಡ ಅಧ್ಯಾಯ. ಬಾಳಾ ಠಾಕ್ರೆ ಅವರು ತಮ್ಮ ಮಗ ಉದ್ಧವ್ ಠಾಕ್ರೆ ಅವರನ್ನು ಮುನ್ನೆಲೆಗೆ ತಂದಿದ್ದರ ವಿರುದ್ಧ ರಾಜ್‌ ಠಾಕ್ರೆ ಅಸಮಾಧಾಗೊಂಡಿದ್ದರು. 2005ರ ನವೆಂಬರ್‌ನಲ್ಲಿ ಪಕ್ಷ ತೊರೆದ ರಾಜ್‌ ಅವರು, ನಂತರದ ಕೆಲವೇ ತಿಂಗಳಲ್ಲಿ ತಮ್ಮದೇ ಮಹಾರಾಷ್ಟ್ರ ನವ ನಿರ್ಮಾಣ ಸೇನಾವನ್ನು ಸ್ಥಾಪಿಸಿದರು. ರಾಜ್ ಅವರ ‍ಪಕ್ಷವು ಚುನಾವಣಾ ರಾಜಕೀಯದಲ್ಲಿ ಸಕ್ರಿಯವಾಗಿದೆ, ಅದರೆ ನಿರೀಕ್ಷಿತ ಯಶಸ್ಸು ಗಳಿಸಿಲ್ಲ.

ಪಕ್ಷಗಳಲ್ಲಿ ಬಿರುಕು ಹೊಸದಲ್ಲ

ಪಕ್ಷಗಳಲ್ಲಿ ಬಿರುಕು, ಬಂಡಾಯ ಭಾರತದ ರಾಜಕಾರಣದಲ್ಲಿ ಹೊಸದೇನಲ್ಲ. ಬಂಡಾಯದ ಗುಂಪೇ ಮೂಲ ಪಕ್ಷದ ನಿಯಂತ್ರಣವನ್ನು ಕೈಗೆ ತೆಗೆದುಕೊಂಡ ಉದಾಹರಣೆಗಳೂ ಇವೆ.

ಇಂದಿರಾ ಉಚ್ಚಾಟನೆ

1969ರಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಆದ ವಿಭಜನೆಯು ಆ ಪಕ್ಷದ ಭವಿಷ್ಯವನ್ನೇ ಬದಲಿಸಿತು. ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಎಸ್‌. ನಿಜಲಿಂಗಪ್ಪ ಅವರುಅತ್ಯಂತ ಪ್ರಭಾವಿ ಪ‍್ರಧಾನಿ ಎಂದು ಬಣ್ಣಿಸಲಾಗುವ ಇಂದಿರಾ ಗಾಂಧಿ ಅವರನ್ನು 1969ರಲ್ಲಿ ಪಕ್ಷದಿಂದ ಹೊರಗೆ ಹಾಕಿದ್ದರು. ‘ಸಿಂಡಿಕೇಟ್‌’ ಎಂದು ಕರೆಯಲಾಗುತ್ತಿದ್ದ, ದಕ್ಷಿಣದ ರಾಜ್ಯಗಳ ನಾಯಕರೇ ಇದ್ದ ಗುಂ‍ಪು ಕಾಂಗ್ರೆಸ್‌ನಲ್ಲಿ ಅತ್ಯಂತ ಪ್ರಭಾವಿಯಾಗಿತ್ತು. ‌ಇಂದಿರಾ ಅವರನ್ನು ‘ಮೂಕ ಗೊಂಬೆ’ ಎಂದೇ ಈ ಸಿಂಡಿಕೇಟ್‌ ಕರೆಯುತ್ತಿತ್ತು. ತಮ್ಮಿಷ್ಟದಂತೆ ಅವರು ಆಳ್ವಿಕೆ ಮಾಡಬಹುದು ಎಂಬ ಭಾವನೆಯಿಂದ ಇಂದಿರಾ ಅವರನ್ನು ಪ್ರಧಾನಿ ಸ್ಥಾನಕ್ಕೆ ಈ ಗುಂಪು ಆಯ್ಕೆ ಮಾಡಿತ್ತು. ಆದರೆ, ಸಿಂಡಿಕೇಟ್‌ ನೆರಳಿನಲ್ಲಿ ಇಂದಿರಾ ಕೆಲಸ ಮಾಡಲಿಲ್ಲ.

ಆಗ ನಡೆದ ರಾಷ್ಟ್ರಪತಿ ಚುನಾವಣೆಯು ಕಾಂಗ್ರೆಸ್‌ನೊಳಗಿನ ಬಿರುಕನ್ನು ಬಹಿರಂಗಪ‍ಡಿಸಿತು. ರಾಷ್ಟ್ರಪತಿಯಾಗಿದ್ದ ಡಾ. ಝಾಕಿರ್ ಹುಸೇನ್‌ ಅವರು ನಿಧನರಾದರು. ಲೋಕಸಭೆಯ ಸ್ಪೀಕರ್ ಆಗಿದ್ದ ನೀಲಂ ಸಂಜೀವ ರೆಡ್ಡಿ ಅವರನ್ನು ರಾಷ್ಟ್ರಪತಿ ಮಾಡಬೇಕು ಎಂಬುದು ಸಿಂಡಿಕೇಟ್‌ನ ನಿರ್ಧಾರವಾಗಿತ್ತು. ಆದರೆ, ಇದಕ್ಕೆ ಒಪ್ಪಿದರೆ ಸಿಂಡಿಕೇಟ್‌ ಇನ್ನಷ್ಟು ಪ್ರಭಾವಿಯಾಗಬಹುದು ಎಂಬುದು ಇಂದಿರಾ ಅವರ ಭೀತಿಯಾಗಿತ್ತು. ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಸಭೆಯಲ್ಲಿ ಜಗಜೀವನ್‌ರಾಂ ಅವರ ಹೆಸರನ್ನು ಇಂದಿರಾ ಮುಂದಿಟ್ಟರು. ಸಿಂಡಿಕೇಟ್‌ ಒಪ್ಪಲಿಲ್ಲ. ರೆಡ್ಡಿ ಅವರ ಹೆಸರೇ ಅಂತಿಮವಾಯಿತು. ಉಪರಾಷ್ಟ್ರಪತಿಯಾಗಿದ್ದ ವಿ.ವಿ. ಗಿರಿ ಅವರು ಪಕ್ಷೇತರರಾಗಿ ಕಣಕ್ಕೆ ಇಳಿದರು. ‘ನಿಮ್ಮ ಆತ್ಮಸಾಕ್ಷಿಗೆ ಅನುಗುಣವಾಗಿ ಮತ ಚಲಾಯಿಸಿ’ ಎಂದು ಕಾಂಗ್ರೆಸ್ಸಿಗರಿಗೆಇಂದಿರಾ ಹೇಳಿದರು. ಗಿರಿ ಅವರನ್ನು ಬೆಂಬಲಿಸಿ ಎಂಬ ಪರೋಕ್ಷ ಕರೆ ಅದಾಗಿತ್ತು. ಗಿರಿ ಅವರು ಗೆದ್ದರು. ಪಕ್ಷ ವಿರೋಧಿ ಚಟುವಟಿಕೆಗಾಗಿ ಇಂದಿರಾ ಅವರನ್ನು ಪಕ್ಷದಿಂದ ಉಚ್ಚಾಟಿಸಲಾಯಿತು. ಅವರು ಕಾಂಗ್ರೆಸ್‌ (ಆರ್‌) ಎಂಬ ಪಕ್ಷ ಕಟ್ಟಿದರು. ಕಾಂಗ್ರೆಸ್‌ನ ಬಹುಪಾಲು ಮುಖಂಡರು ಇಂದಿರಾ ಅವರ ಜತೆಗೆ ಹೋದರು. ಇಂದಿರಾ ಅವರ ಬಣವೇ ಮೂಲ ಪಕ್ಷವಾಯಿತು.

ಎಐಎಡಿಎಂಕೆ ಬಿರುಕು

ಎಐಎಡಿಎಂಕೆ ಎರಡು ಬಾರಿ ಬಿಕ್ಕಟ್ಟು ಎದುರಿಸಿದೆ. ಪಕ್ಷದ ಸ್ಥಾಪಕ ಎಂ.ಜಿ.ರಾಮಚಂದ್ರನ್‌ (ಎಂಜಿಆರ್‌) ಅವರು 1988ರ ಡಿಸೆಂಬರ್‌ನಲ್ಲಿ ಮೃತಪಟ್ಟಾಗ ಪಕ್ಷವು ವಿಭಜನೆಗೊಂಡಿತು. ಎಂಜಿಆರ್‌ ಹೆಂಡತಿ ಜಾನಕಿ ಮತ್ತು ಎಂಜಿಆರ್ ಅವರ ಜತೆಗೇ ಇದ್ದ ಜಯಲಲಿತಾ ನಡುವೆ ಪಕ್ಷದ ಚುಕ್ಕಾಣಿಗಾಗಿ ಪೈಪೋಟಿ ಇತ್ತು. ಎರಡೂ ಬಣಗಳು ಪಕ್ಷವು ತಮಗೆ ಸೇರಿದ್ದು ಎಂದು ಹಟ ಹಿಡಿದವು. ಪರಿಣಾಮವಾಗಿ ಪಕ್ಷದ ಚಿಹ್ನೆಯಾಗಿದ್ದ ಎರಡೆಲೆಯನ್ನು ಸ್ಥಗಿತಗೊಳಿಸಲಾಯಿತು. ತಮಿಳುನಾಡು ವಿಧಾನಸಭೆಗೆ 1989ರಲ್ಲಿ ನಡೆದ ಚುನಾವಣೆಯಲ್ಲಿ ಎರಡೂ ಬಣಗಳು ಪ್ರತ್ಯೇಕವಾಗಿ ಸ್ಪರ್ಧಿಸಿ ಸೋತವು. ಚುನಾವಣೆ ಬಳಿಕ ಎರಡೂ ಬಣಗಳು ಒಂದಾದವು. ಜಯಲಲಿತಾ ಅವರು 2016ರಲ್ಲಿ ನಿಧನರಾದ ಬಳಿಕವೂ ಪಕ್ಷವು ಎರಡು ಬಣವಾಗಿತ್ತು. ಶಶಿಕಲಾ, ದಿನಕರನ್‌ ಮತ್ತು ಪನ್ನೀರ್‌ಸೆಲ್ವಂ ಅವರು ಒಂದು ಬಣದ ನಾಯಕರಾದರೆ, ಪಳನಿಸ್ವಾಮಿ ಅವರು ಮತ್ತೊಂದು ಬಣದಲ್ಲಿದ್ದರು. 2017ರಲ್ಲಿ ಪಳನಿಸ್ವಾಮಿ ಮತ್ತು ಪನ್ನೀರ್‌ಸೆಲ್ವಂ ಒಟ್ಟಾದರು. ಈಗ, ಈ ಇಬ್ಬರ ನಡುವೆ ಮತ್ತೆ ಮನಸ್ತಾಪ ಕಾಣಿಸಿಕೊಂಡಿದೆ.

ನಾಯ್ಡು ಬಂಡಾಯ

ಎನ್‌.ಟಿ.ರಾಮರಾವ್‌ (ಎನ್‌ಟಿಆರ್‌) ಅವರು 1982ರಲ್ಲಿ ಸ್ಥಾಪಿಸಿದ್ದ ತೆಲುಗುದೇಶಂ ಪಕ್ಷದಲ್ಲಿ (ಟಿಡಿಪಿ) 1993ರ ಹೊತ್ತಿಗೆ ಬಿರುಕುಗಳು ಕಾಣಿಸಿಕೊಳ್ಳಲಾರಂಭಿಸಿತು. ಎನ್‌ಟಿಆರ್‌ ಅವರು ಲಕ್ಷ್ಮಿ ಪಾರ್ವತಿಯನ್ನು ಮದುವೆಯಾಗಿದ್ದು ಮತ್ತು ಪಕ್ಷದಲ್ಲಿ ಲಕ್ಷ್ಮಿ ಪಾರ್ವತಿ ಅವರ ಪ್ರಭಾವ ಹೆಚ್ಚತೊಡಗಿದ್ದು ಬಿರುಕಿಗೆ ಕಾರಣವಾಗಿತ್ತು. ಎನ್‌ಟಿಆರ್ ಅವರ ಅಳಿಯ ಚಂದ್ರಬಾಬು ನಾಯ್ಡು ಅವರು ಆ ಹೊತ್ತಿಗಾಗಲೇ ಪಕ್ಷದಲ್ಲಿ ಪ್ರಭಾವಿಯಾಗಿ ಬೆಳೆದಿದ್ದರು. 1995ರ ಸೆಪ್ಟೆಂಬರ್‌ನಲ್ಲಿ ನಾಯ್ಡು ಅವರು ಬಂಡಾಯ ಎದ್ದರು. ಎನ್‌ಟಿಆರ್‌ ಅವರು ಮುಖ್ಯಮಂತ್ರಿಯಾಗಿ ಮೂರನೇ ಅವಧಿ ಪೂರ್ಣಗೊಳಿಸಲು ಒಂಬತ್ತು ತಿಂಗಳಷ್ಟೇ ಉಳಿದಿತ್ತು. ತೆಲುಗುದೇಶಂ ಪಕ್ಷದ ಬಹುತೇಕ ಶಾಸಕರು, ಕುಟುಂಬದ ಹೆಚ್ಚಿನ ಸದಸ್ಯರು ನಾಯ್ಡು ಪರ ನಿಂತರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT