ಗುರುವಾರ , ಜೂನ್ 30, 2022
24 °C
ಉತ್ತರ ಕರ್ನಾಟಕದ ಐದು ಜಿಲ್ಲೆಗಳಿಗೆ ನದಿಯ ನೀರು ಹರಿಸುವ ಬಜೆಟ್ ಪ್ರಸ್ತಾವಕ್ಕೆ ವಿರೋಧ

ಆಳ –ಅಗಲ: ಕಾಳಿ ಕಣಿವೆಯಲ್ಲಿ ಆಕ್ರೋಶದ ಕಿಡಿ

ಸದಾಶಿವ ಎಂ.ಎಸ್ Updated:

ಅಕ್ಷರ ಗಾತ್ರ : | |

Prajavani

ಕಾಳಿ ನದಿಯ ನೀರನ್ನು ಉತ್ತರ ಕರ್ನಾಟಕದ ಐದು ಜಿಲ್ಲೆಗಳಿಗೆ ಹರಿಸುವ ರಾಜ್ಯ ಸರ್ಕಾರದ ಬಜೆಟ್ ಪ‍್ರಸ್ತಾವವು ನದಿಯ ಉದ್ದಗಲಕ್ಕೂ ಭಾರಿ ಆಕ್ಷೇಪ, ವಿರೋಧ ಹುಟ್ಟು ಹಾಕಿದೆ. ಹೇಳಿಕೆಗಳು, ಮನವಿಗಳು, ಪ್ರತಿಭಟನೆಗಳನ್ನು ದಾಟಿರುವ ಅಸಮಾಧಾನವು, ಈಗ ತಾಲ್ಲೂಕು, ಹೋಬಳಿಗಳ ಬಂದ್ ಹಂತಕ್ಕೆ ತಲುಪಿದೆ. ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ ಮೊರೆ ಹೋಗುವ ಸಿದ್ಧತೆಯೂ ನಡೆದಿದೆ.

ಅಸಮಾಧಾನವೇನು?: ಸೂಪಾದಲ್ಲಿ ಜಲಾಶಯ ನಿರ್ಮಾಣದ ಸಂದರ್ಭದಲ್ಲಿ ನಿರಾಶ್ರಿತರಾದವರಿಗೆ ಅದೇ ಜೊಯಿಡಾ ತಾಲ್ಲೂಕಿನ ರಾಮನಗರದಲ್ಲಿ ಪುನರ್ವಸತಿ ಕಲ್ಪಿಸಲಾಗಿದೆ. ನೀರು ಸಂಗ್ರಹಕ್ಕಾಗಿ ಹುಟ್ಟೂರು ತೊರೆದು ಬಂದವರಿಗೆ ಇನ್ನೂ ಕುಡಿಯುವ ನೀರಿನ ವ್ಯವಸ್ಥೆಯಾಗಿಲ್ಲ. ಕಾಳಿ ನದಿಯ ದಂಡೆಯಲ್ಲಿರುವ ಹಲವು ಗ್ರಾಮಗಳಲ್ಲೂ ನೀರಿನ ಸಮಸ್ಯೆಯಿದೆ. ಅದನ್ನು ಪರಿಹರಿಸಿಲ್ಲ ಎಂಬ ಅಸಮಾಧಾನ ಪ್ರಬಲವಾಗಿದೆ.

‘ಮೊದಲು ಇಲ್ಲಿನ ಜನರಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಿ. ನಂತರ ಬೇರೆ ಜಿಲ್ಲೆಗಳಿಗೆ ನೀರು ಸಾಗಿಸಲು ಪೈಪ್‌ಲೈನ್ ಅಳವಡಿಸಿ’ ಎನ್ನುತ್ತಾರೆ ದಾಂಡೇಲಿ ನಗರಸಭೆಯ ಮಾಜಿ ಸದಸ್ಯರೂ ಆಗಿರುವ ಡಿ.ವೈ.ಎಫ್.ಒ ಜಿಲ್ಲಾ ಘಟಕದ ಕಾರ್ಯದರ್ಶಿ ಡಿ.ಸ್ಯಾಮ್ಸನ್.

‘ನೀರು ರಾಷ್ಟ್ರೀಯ ಸಂಪತ್ತು. ಎಲ್ಲರಿಗೂ ಕುಡಿಯಲು ಬೇಕು. ಹಾಗೆಂದು ನಮ್ಮ ಜಿಲ್ಲೆಗೆ ಅನ್ಯಾಯ ಮಾಡಿ ಬೇರೆ ಕಡೆಗೆ ತೆಗೆದುಕೊಂಡು ಹೋಗುವುದಲ್ಲ. ಸರ್ಕಾರವು ನಿರಾಶ್ರಿತರ ಪ್ರದೇಶಗಳಿಗೆ ಕುಡಿಯುವ ನೀರಿನ ವ್ಯವಸ್ಥೆಗೆ ವಿಶೇಷ ಅನುದಾನ ಬಿಡುಗಡೆ ಮಾಡಬೇಕು’ ಎಂದು ಆಗ್ರಹಿಸುತ್ತಾರೆ.

‘ದಾಂಡೇಲಿಯಲ್ಲಿ ಈಗಾಗಲೇ ಎರಡು ಕಾರ್ಖಾನೆಗಳು ಸ್ಥಗಿತಗೊಂಡಿವೆ. ಒಂದೇ ಒಂದು ಕಾಗದ ಕಾರ್ಖಾನೆಯಿದೆ. ಯುವಕರು ಉದ್ಯೋಗಕ್ಕಾಗಿ ಪ್ರವಾಸೋದ್ಯಮವನ್ನು ಅವಲಂಬಿಸಿದ್ದಾರೆ. ಹೀಗಿರುವಾಗ ಪಕ್ಷಾತೀತವಾಗಿ ಯೋಚಿಸಿ ನದಿಯ ನೀರನ್ನು ಬೇರೆ ಕಡೆ ಹರಿಸದಂತೆ ನೋಡಿಕೊಳ್ಳಬೇಕು’ ಎಂದು ದಾಂಡೇಲಿ ನಗರಸಭೆ ಸದಸ್ಯ ಮೋಹನ್ ಹಲವಾಯಿ ಒತ್ತಾಯಿಸುತ್ತಾರೆ.

‘ಸೂಪಾ, ನಾಗಝರಿ, ಕದ್ರಾ ಜಲಾಶಯಗಳಲ್ಲಿ ಉತ್ಪಾದನೆಯಾಗುವ ವಿದ್ಯುತ್ ನಾಡನ್ನು ಬೆಳಗುತ್ತಿದೆ. ಜೊತೆಗೇ ಕೈಗಾ ಅಣುವಿದ್ಯುತ್ ಸ್ಥಾವರದ ಟರ್ಬೈನ್ ತಂಪಾಗಿಸಲು ನದಿಯ ನೀರು ಬೇಕು. ಹೊಸ ಹೊಸ ಯೋಜನೆಗಳ ಮೂಲಕ ನದಿಯಲ್ಲಿ ನೀರಿನ ಹರಿವು ಕಡಿಮೆ ಮಾಡಿದರೆ ವಿದ್ಯುತ್ ಉತ್ಪಾದನೆಯ ಮೇಲೆ ಪರಿಣಾಮವಾಗಲಿದೆ’ ಎಂದು ಅವರು ಕಳವಳ ವ್ಯಕ್ತಪಡಿಸುತ್ತಾರೆ.

ದಾಂಡೇಲಿ ತಾಲ್ಲೂಕು ರಚನಾ ಸಮಿತಿ ಪ್ರಧಾನ ಕಾರ್ಯದರ್ಶಿ ರೋಶನ್ ನೇತ್ರಾವಳಿ ಕೂಡ ವಿರೋಧಿಸುತ್ತಾರೆ. ‘ಇದು ಅವೈಜ್ಞಾನಿಕ, ಕಾರ್ಯಸಾಧುವಲ್ಲದ ಯೋಜನೆ. ಹಳಿಯಾಳದ ಸಕ್ಕರೆ ಕಾರ್ಖಾನೆಗೆ ಈಗಾಗಲೇ ಪೈಪ್‌ಲೈನ್ ಮೂಲಕ ನೀರು ಸಾಗಿಸಿದ್ದಾರೆ. ಅದರ ಜೊತೆಗೇ ಹಳಿಯಾಳ ಪಟ್ಟಣಕ್ಕೆ 24/7 ಕುಡಿಯುವ ನೀರಿನ ಯೋಜನೆಗೆ ಪೈಪ್‌ಲೈನ್ ಅಳವಡಿಸಿದ್ದಾರೆ. ಕೆರೆ, ಬಾಂದಾರ ಭರ್ತಿ ಮಾಡಲು ಒಂದೂವರೆ ಮೀಟರ್ ಅಗಲದ ಪೈಪ್‌ಲೈನ್‌ಗಳನ್ನು ಅಳವಡಿಸಲಾಗುತ್ತಿದೆ. ಅಳ್ನಾವರಕ್ಕೂ ಇಲ್ಲಿಂದ ನೀರು ಕೊಂಡೊಯ್ಯಲಾಗುತ್ತಿದೆ. ಇನ್ನು ಐದು ಜಿಲ್ಲೆಗಳಿಗೆ ನೀರು ಸಾಗಿಸಲು ನದಿಯಲ್ಲಿ ಏನು ಉಳಿಯುತ್ತದೆ’ ಎಂದು ಪ್ರಶ್ನಿಸುತ್ತಾರೆ.

ಕಾಳಿ ನದಿಯು ಕಾರವಾರದ ಬಳಿ ಸದಾಶಿವಗಡದಲ್ಲಿ ಸಮುದ್ರಕ್ಕೆ ಸೇರುತ್ತದೆ. ಸಿಹಿನೀರಿನ ಹರಿವು ಕಡಿಮೆಯಾದಾಗ ಸಮುದ್ರದ ಉಪ್ಪು ನೀರು ನದಿಗೆ ಹರಿದು ಬರುತ್ತದೆ. ಇದರಿಂದ ಸುತ್ತಮುತ್ತಲಿನ ಸಾವಿರಾರು ಎಕರೆ ಕೃಷಿ ಜಮೀನು ಸವಳಾಗುತ್ತಿದೆ. ಫಲವತ್ತತೆ ಕಳೆದುಕೊಂಡು ಪಾಳು ಬೀಳುತ್ತಿದೆ. ಜೊತೆಗೆ ತಾಲ್ಲೂಕಿನ ಹತ್ತಾರು ಗ್ರಾಮಗಳಲ್ಲಿ ಬೇಸಿಗೆ ಆರಂಭದಿಂದಲೇ ಬಾವಿಗಳಲ್ಲಿ ಸಿಹಿನೀರು ಮಾಯವಾಗಿ ಉಪ್ಪು ನೀರು ತುಂಬಿಕೊಳ್ಳುತ್ತಿದೆ. ನದಿಯನ್ನೇ ಅವಲಂಬಿಸಿ ಅದೆಷ್ಟೋ ಮೀನುಗಾರ ಕುಟುಂಬಗಳಿವೆ. ಹಾಗಾಗಿ ನದಿ ತಿರುವಿನ ಯೋಜನೆಗೆ ಕರಾವಳಿ ಭಾಗದಲ್ಲೂ ತೀವ್ರ ಆಕ್ಷೇಪ ವ್ಯಕ್ತವಾಗುತ್ತಿದೆ.


ದಾಂಡೇಲಿಯಲ್ಲಿ ಕಾಳಿ ನದಿಯ ದಂಡೆಯಲ್ಲಿ ದೊಡ್ಡ ದೊಡ್ಡ ಜಾಕ್‌ವೆಲ್‌ಗಳನ್ನು ನಿರ್ಮಿಸಲಾಗುತ್ತಿದೆ

ನಿಗೂಢ ಯೋಜನೆ: ಆರೋಪ
‘ಕಾಳಿ ನದಿಯಿಂದ ನೀರು ಸಾಗಿಸುವ ಯೋಜನೆಗಳನ್ನು ನಿಗೂಢವಾಗಿ ಮಾಡಲಾಗುತ್ತಿದೆ. ಸ್ಪಷ್ಟವಾದ ಮಾಹಿತಿಯನ್ನೇ ಕೊಡುತ್ತಿಲ್ಲ. ಹಳಿಯಾಳ ತಾಲ್ಲೂಕಿನ ಕೆರೆ ಮತ್ತು ಬಾಂದಾರಗಳನ್ನು ತುಂಬಿಸುವ ಕಾಮಗಾರಿಯ ಪಂಪ್‌ಹೌಸ್ ನಿರ್ಮಾಣಕ್ಕೆ, ದಾಂಡೇಲಿ ನಗರಸಭೆಯು ಒಂದು ಎಕರೆ 10 ಗುಂಟೆ ಜಾಗವನ್ನು 2020ರ ಜುಲೈ 6ರಂದು ಮಾರಾಟ ಮಾಡಿದೆ’ ಎಂದು ರೋಶನ್ ನೇತ್ರಾವಳಿ ವಿವರಿಸುತ್ತಾರೆ.

‘ಅದರ ಒಪ್ಪಂದಕ್ಕೆ ಕರ್ನಾಟಕ ನೀರಾವರಿ ನಿಗಮದ ಖಾನಾಪುರದ ಕಳಸಾ ಯೋಜನಾ ವಿಭಾಗದ ಕಾರ್ಯ ನಿರ್ವಾಹಕ ಎಂಜಿನಿಯರ್ ಸಹಿ ಮಾಡಿದ್ದಾರೆ’ ಎಂದು ಹೇಳುತ್ತಾರೆ.

‘ಅಳ್ನಾವರದಿಂದ 17 ಕಿಲೋಮೀಟರ್ ದೂರದಲ್ಲಿ ಘಟಪ್ರಭಾ ನದಿ ಹರಿಯುತ್ತದೆ. ಮೂರು ದೊಡ್ಡ ಪೈಪ್‌ಲೈನ್‌ಗಳಲ್ಲಿ ಕಾಳಿ ನದಿಯ ನೀರನ್ನು ಘಟಪ್ರಭಾಕ್ಕೆ ಹರಿಸುವ ಯೋಚನೆ ಇದ್ದಂತಿದೆ’ ಎಂಬುದು ಅವರ ಶಂಕೆಯಾಗಿದೆ.

‘ಅಳ್ನಾವರಕ್ಕೆ ಸಾಗಿಸುವುದನ್ನೇ ಬಿಡಿ’
‘ಅಳ್ನಾವರಕ್ಕೆ ನೀರು ಸಾಗಿಸಲು ಈಗ ನಡೆಯುತ್ತಿರುವ ಕಾಮಗಾರಿಯೇ ಐದು ಜಿಲ್ಲೆಗಳಿಗೆ ನೀರು ಸಾಗಿಸುವುದರ ಪ್ರಾರಂಭಿಕ ಹಂತ. ಹಾಗಾಗಿ ಅಳ್ನಾವರಕ್ಕೆ ನೀರು ಸಾಗಿಸುವ ಯೋಜನೆಯನ್ನೇ ಮೊದಲು ನಿಲ್ಲಿಸಬೇಕು’ ಎಂಬ ಆಗ್ರಹ ಕಾಳಿ ಬ್ರಿಗೇಡ್ ಸಂಚಾಲಕ ರವಿ ರೇಡ್ಕರ್ ಅವರದ್ದು.

‘ಅಮೃತಧಾರೆ ಹೆಸರಿನಲ್ಲಿ 25 ಟಿ.ಎಂ.ಸಿ ಅಡಿ ನೀರನ್ನು ಸಾಗಿಸಬಹುದು ಎಂದು ಸುಳ್ಳು ವರದಿ ಸಿದ್ಧಪಡಿಸಿದ್ದಾರೆ. ಅಷ್ಟೊಂದು ನೀರಿನ ಲಭ್ಯತೆಯೇ ಇಲ್ಲಿಲ್ಲ. ನದಿಯ ಮೇಲೆ ಯೋಜನೆಗಳ ಭಾರ ಜಾಸ್ತಿಯಾಗಿದೆ. ಬೇರೆ ಊರುಗಳಿಗೆ ನೀರು ಸಾಗಿಸಿದರೆ ಕಾಳಿ ಖಂಡಿತ ಒಣಗುತ್ತದೆ’ ಎಂದು ಎಚ್ಚರಿಕೆ ನೀಡುತ್ತಾರೆ.

‘ಕೃಷ್ಣೆಯ ನೀರು ಸದ್ಬಳಕೆಯಾಗಲಿ’
‘ಆಲಮಟ್ಟಿ ಜಲಾಶಯದ ಎತ್ತರವನ್ನು 519.6 ಅಡಿಗಳಿಂದ 524 ಅಡಿಗಳಿಗೆ ಏರಿಸಲು ಸುಪ್ರೀಂ ಕೋರ್ಟ್ ಅನುಮತಿ ಕೊಟ್ಟಿದೆ. ಹಿಡಕಲ್ ಜಲಾಶಯದಲ್ಲಿ 52 ಟಿ.ಎಂ.ಸಿ.ಗಳಷ್ಟು ನೀರು ಸಂಗ್ರಹವಾಗುತ್ತದೆ. ಕೃಷ್ಣ ನದಿ ನೀರಿನ ಬಳಕೆಯ ಬಗ್ಗೆ ಸರಿಯಾದ ಯೋಜನೆ ಮಾಡದೇ ಸರ್ಕಾರ ಮೌನವಾಗಿದೆ. ಅದನ್ನು ಬಿಟ್ಟುಕಾಳಿ ಕಡೆ ಹೊರಟಿದೆ’ ಎನ್ನುತ್ತಾರೆ ಪರಿಸರ ಬರಹಗಾರ ಶಿವಾನಂದ ಕಳವೆ.

‘ಮಲಪ್ರಭಾಕ್ಕೆ 12 ಟಿ.ಎಂ.ಸಿ ನೀರಿನ ಕೊರತೆಯಿದೆ. ಮಹದಾಯಿ ಸೇರಿದಂತೆ ಬೇರೆ ಬೇರೆ ಮೂಲಗಳಿಂದ ಪಡೆಯುವ ಯೋಚನೆಯಲ್ಲಿ ಕೆಲವರಿದ್ದಾರೆ. ಕಾಳಿ ನದಿಯಿಂದ ತೆಗೆದುಕೊಂಡು ಹೋಗುವುದು ಅವರ ಆಲೋಚನೆಯಾಗಿದೆ’ ಎಂದು ಹೇಳುತ್ತಾರೆ.

‘ಚಿಕ್ಕೋಡಿ, ಬೆಳಗಾವಿ, ಬಾಗಲಕೋಟೆ ಭಾಗದಲ್ಲಿ ನೀರಾವರಿ ಅತಿಯಾಗಿದೆ. ಎರೆ ಮಣ್ಣಿಗೆ (ಕಪ್ಪು ಮಣ್ಣು) ಹೆಚ್ಚು ನೀರು ಹರಿಸಿದ್ದರಿಂದ ಮಣ್ಣು ಹಾಳಾಗಿದೆ. 60 ಟನ್‌ ಕಬ್ಬು ಬೆಳೆಯಬೇಕಾದ ಗದ್ದೆಯಲ್ಲಿ ಈಗ 15 ಟನ್ ಕೂಡ ಬೆಳೆಯುತ್ತಿಲ್ಲ. ಸರಾಸರಿ 29.5 ಟನ್‌ಗಳಿಗೆ ಇಳಿಕೆಯಾಗಿದೆ. ನೀರಿನ ಮಿತ ಬಳಕೆ ಕಲಿಸುವುದು ಬಿಟ್ಟು, ಹೆಚ್ಚು ನೀರು ಬೇಕಾಗುವ ಶುಗರ್ ಬೀಟ್ ಬೆಳೆಯನ್ನು ಬೆಳೆಯಲಾಗುತ್ತಿದೆ’ ಎಂದು ಅವರು ಬೇಸರಿಸುತ್ತಾರೆ.

‘ಮೇಲ್ನೋಟಕ್ಕೆ ಸಮೃದ್ಧಿ ಅಂದರೂ ನೀರಿನಿಂದ ಆಗಿರುವ ಸಂಕಟಗಳನ್ನು ಯೋಚಿಸಬೇಕು. ಎರೆ ಮಣ್ಣಿನ ಹೊಲಗಳಲ್ಲಿ ಕೆರೆಗಳನ್ನು ಮಾಡಿ ಪ್ರವಾಹದ ನೀರನ್ನು ತುಂಬಿಸಿ ಅಂತರ್ಜಲ ಹೆಚ್ಚಿಸಿ ಕೃಷಿ ಮಾಡುವ ಅವಕಾಶಗಳಿವೆ. ಸರ್ಕಾರ ಇನ್ನೂ ದೊಡ್ಡ ಜಲಾಶಯಗಳು, ಪೈಪ್‌ಲೈನ್‌ಗಳನ್ನೇ ಯೋಚಿಸುತ್ತಿದೆ’ ಎಂದು ಅಸಮಾಧಾನ ವ್ಯಕ್ತಪಡಿಸುತ್ತಾರೆ.

‘ಮರ್ಮವೇನು?’
‘1.70 ಲಕ್ಷ ಜನಸಂಖ್ಯೆ ಇರುವ ಹಳಿಯಾಳ ತಾಲ್ಲೂಕಿಗೆ 14 ಇಂಚಿನ ಪೈಪ್‌ನಲ್ಲಿ ನೀರು ಸಾಗಿಸಲಾಗಿದೆ. ಆದರೆ, 18 ಸಾವಿರ ಜನಸಂಖ್ಯೆಯಿರುವ ಧಾರವಾಡ ಜಿಲ್ಲೆಯ ಅಳ್ನಾವರ ಪಟ್ಟಣಕ್ಕೆ ಒಂದೂವರೆ ಮೀಟರ್‌ಗಳಷ್ಟು ಬೃಹತ್ ಗಾತ್ರದ ಪೈಪ್‌ಗಳನ್ನು ಅಳವಡಿಸಲಾಗುತ್ತಿದೆ. ಇದ್ಯಾಕೆ ಹೀಗೆ’ ಎಂದು ರವಿ ರೇಡ್ಕರ್ ಪ್ರಶ್ನಿಸುತ್ತಾರೆ.

‘ಕಾಳಿಯ ನೀರನ್ನು ಹಳಿಯಾಳದಿಂದ ಅಳ್ನಾವರಕ್ಕೆ ಸಾಗಿಸಿ, ಕಳಸಾ ಬಂಡೂರಿ ನಾಲೆಗೆ ಸೇರಿಸುತ್ತಾರೆ ಎಂಬ ಮಾತುಗಳಿವೆ. ಈ ಬಗ್ಗೆ ಸರ್ಕಾರದ ಮನವೊಲಿಸಿ ಯೋಜನೆಯನ್ನು ಕೈಬಿಡಲು ಪ್ರತಿಯೊಬ್ಬರೂ ಹೋರಾಡುವ ಅನಿವಾರ್ಯ ಎದುರಾಗಿದೆ’ ಎಂದು ಮೋಹನ್ ಹಲವಾಯಿ ಹೇಳುತ್ತಾರೆ.

ಕಾಳಿಯ ಮೇಲಿನ ಅವಲಂಬನೆ

* ವಿದ್ಯುತ್ ಉತ್ಪಾದನೆಗೆ ಐದು ಜಲಾಶಯಗಳು

* ಕೈಗಾ ಅಣು ವಿದ್ಯುತ್ ಸ್ಥಾವರ

* ದಾಂಡೇಲಿ ಕಾಗದ ಕಾರ್ಖಾನೆ

* ಹಳಿಯಾಳ ಸಕ್ಕರೆ ಕಾರ್ಖಾನೆ

* ದಾಂಡೇಲಿ ಮೊಸಳೆ ಉದ್ಯಾನ

* ಕಾಳಿ ಹುಲಿ ಸಂರಕ್ಷಿತ ಪ್ರದೇಶ

* ಪ್ರವಾಸೋದ್ಯಮದ ಚಟುವಟಿಕೆಗಳು

* ದಾಂಡೇಲಿ ನಗರಕ್ಕೆ ಕುಡಿಯುವ ನೀರು

* ಕೆ.ಪಿ.ಸಿ.ಎಲ್ ಅಂಬಿಕಾನಗರಕ್ಕೆ ನೀರು

* ಹಳಿಯಾಳ ಪಟ್ಟಣಕ್ಕೆ 24/7 ನೀರು

ಮುಂಬರುವ ಯೋಜನೆಗಳು

* ಅಳ್ನಾವರಕ್ಕೆ ಕುಡಿಯುವ ನೀರು

* ಬಹುಗ್ರಾಮ ಕುಡಿಯುವ ನೀರು ಸರಬರಾಜು

* ಕೈಗಾ ಅಣು ವಿದ್ಯುತ್ ಸ್ಥಾವರದಲ್ಲಿ ಎರಡು ಹೊಸ ಘಟಕಗಳು

* ಹಳಿಯಾಳ ಸಕ್ಕರೆ ಕಾರ್ಖಾನೆಯ ಸಾಮರ್ಥ್ಯ ದ್ವಿಗುಣ‌

* ದಾಂಡೇಲಿ ಪೇಪರ್ ಮಿಲ್‌ನಲ್ಲಿ ಉತ್ಪಾದನೆ ಹೆಚ್ಚಳ

*
ನೀರು ಇರುವ ಕಾರಣ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದಾರೆ. ಇಲ್ಲಿನ ನೀರನ್ನು ಕೊಂಡೊಯ್ದರೆ ಪ್ರವಾಸೋದ್ಯಮ, ಪರಿಸರ ಮತ್ತು ವನ್ಯಜೀವಿಗಳಿಗೆ ತೊಂದರೆಯಾಗಲಿದೆ
–ಡಿ.ಸ್ಯಾಮ್ಸನ್, ಡಿ .ವೈ.ಎಫ್.ಒ ಜಿಲ್ಲಾ ಘಟಕದ ಕಾರ್ಯದರ್ಶಿ

*
ಸರ್ಕಾರ ದಬ್ಬಾಳಿಕೆಯಿಂದ ಯೋಜನೆ ಜಾರಿ ಮಾಡುತ್ತಿದೆ. ಇದರ ವಿರುದ್ಧ ಕಾನೂನುಬದ್ಧವಾಗಿ ನಾವು ರಾಷ್ಟ್ರೀಯ ಹಸಿರುಪೀಠದಲ್ಲಿ ಹೋರಾಡುತ್ತೇವೆ
–ರೋಶನ್ ನೇತ್ರಾವಳಿ, ಪ್ರಧಾನ ಕಾರ್ಯದರ್ಶಿ ದಾಂಡೇಲಿ ತಾಲ್ಲೂಕು ರಚನಾ ಸಮಿತಿಐ

*
ಡಿಗ್ಗಿಯಿಂದ ಸದಾಶಿವಗಡದವರೆಗೆ ಹಲವು ಊರುಗಳಿಗೆ ಇನ್ನೂ ಕುಡಿಯುವ ನೀರಿಲ್ಲ. ಮೊದಲು ಆ ವ್ಯವಸ್ಥೆ ಮಾಡಿ. ಇಲ್ಲೇ ನೀರಿನ ಕೊರತೆಯಾದರೆ ಎಲ್ಲಿಂದ ತರುತ್ತೀರಿ?
-ರವಿ ರೇಡ್ಕರ್, ಕಾಳಿ ಬ್ರಿಗೇಡ್ ಸಂಚಾಲಕ

*
ಜೊಯಿಡಾ ಜನ ನಾಡಿಗೆ ಬೆಳಕು ಕೊಡಲು ತಮ್ಮ ಊರನ್ನು ತ್ಯಾಗ ಮಾಡಿದರು. ಆದರೆ, ಅವರೀಗ ಕತ್ತಲಲ್ಲಿದ್ದಾರೆ. ಮುಗ್ಧ ಜನರೆಂದು ಮೋಸ ಮಾಡಿದವರು ಉದ್ಧಾರವಾಗುವುದಿಲ್ಲ.
-ಮೋಹನ ಹಲವಾಯಿ ದಾಂಡೇಲಿ ನಗರಸಭೆ ಸದಸ್ಯ

*
ಕಾಳಿ ನದಿ ನೀರಿನ ಯೋಜನೆ ಪರಿಸರಕ್ಕೆ ಮಾರಕವಾಗಿದ್ದು, ಜನವಿರೋಧಿ ಯೋಜನೆಯನ್ನು ಘೋಷಿಸುವ ಮೊದಲು ಸಾಧಕ ಬಾಧಕಗಳನ್ನು ಮುಖ್ಯಮಂತ್ರಿ ತಿಳಿದುಕೊಳ್ಳಬೇಕಾಗಿತ್ತು.
-ಆರ್.ವಿ.ದೇಶಪಾಂಡೆ, ಹಳಿಯಾಳ– ದಾಂಡೇಲಿ ಶಾಸಕ

*
ಕಾಳಿ ನದಿ ನೀರನ್ನು ಬೇರೆ ಜಿಲ್ಲೆಗಳಿಗೆ ಸಾಗಿಸುವ ಯೋಜನೆಯ ಕುರಿತು ಬಜೆಟ್‌ನಲ್ಲಿ ಘೋಷಿಸಿರುವುದರ ಬಗ್ಗೆ ಮುಖ್ಯಮಂತ್ರಿ ಜೊತೆ ಚರ್ಚಿಸಲಾಗುವುದು
-ರೂಪಾಲಿ ನಾಯ್ಕ, ಕಾರವಾರ– ಅಂಕೋಲಾ ಶಾಸಕಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು