ಮಂಗಳವಾರ, ಮಾರ್ಚ್ 21, 2023
29 °C

ರಿಪೋರ್ಟರ್ಸ್‌ ಕಲೆಕ್ಟಿವ್‌ ವರದಿ ಭಾಗ–3: ಹಣದುಬ್ಬರಕ್ಕೆ ಅಂಕುಶ ಆರ್‌ಬಿಐ ತಾತ್ಸಾರ

ಸೋಮೇಶ್‌ ಝಾ Updated:

ಅಕ್ಷರ ಗಾತ್ರ : | |

ಕೋವಿಡೋತ್ತರ ಯುಗದಲ್ಲಿ ಹಣದುಬ್ಬರ ಏರುತ್ತಲೇ ಇದ್ದರೂ ಬಡ್ಡಿದರವನ್ನು ಏರಿಸಲು ಮನಸ್ಸು ಮಾಡದೆ, ಬಡ್ಡಿದರ ಕಡಿತಕ್ಕೆ ಸದಾ ಮುಕ್ತವಾಗಿರುವ ಮೂಲಕ ಭಾರತೀಯ ರಿಸರ್ವ್ ಬ್ಯಾಂಕ್‌ (ಆರ್‌ಬಿಐ) ಕೇಂದ್ರೀಯ ಬ್ಯಾಂಕುಗಳಲ್ಲಿಯೇ ಭಿನ್ನವಾಗಿ ನಿಂತಿದೆ.

ಹಣಕಾಸು ನೀತಿಯಲ್ಲಿ ಇರುವ, ಹಣಕಾಸು ಸಚಿವಾಲಯವು ‘ತಪ್ಪಿಸಿಕೊಳ್ಳುವ ಷರತ್ತು’ ಎಂದು ಬಣ್ಣಿಸುವ ಅಂಶವನ್ನು ಮುಂದಿರಿಸಿಕೊಂಡು ಬಡ್ಡಿದರವನ್ನು ಆರ್‌ಬಿಐ ಕೆಳ ಮಟ್ಟದಲ್ಲಿಯೇ ಇರಿಸಿಕೊಂಡಿದೆ. ಹಣದುಬ್ಬರ ದರವು ಶೇ 4ಕ್ಕಿಂತ ಹೆಚ್ಚು ಇರಲು ಈ ಷರತ್ತು ಅವಕಾಶ ಮಾಡಿಕೊಡುತ್ತದೆ.

2021ರಲ್ಲಿ ನಡೆದ ಹಣಕಾಸು ನೀತಿ ಸಮಿತಿಯ (ಎಂಪಿಸಿ) ಸಭೆಯು ಬಡ್ಡಿದರವನ್ನು ಹೆಚ್ಚಿಸಲಿಲ್ಲ. ಆರ್ಥಿಕ ಪುನಶ್ಚೇತನಕ್ಕೆ ‘ನೀತಿಯ ಸುಸ್ಥಿರ ಬೆಂಬಲ’ ಅಗತ್ಯ ಎಂದು ಆರ್‌ಬಿಐ ಹೇಳಿತು. ‘ದೃಢ ನಿರ್ಧಾರಕ್ಕಾಗಿ ಪ್ರಗತಿಯ ಸಂಕೇತಗಳನ್ನು ಎದುರು ನೋಡಲಾಗುತ್ತಿದೆ ಮತ್ತು ಹಣದುಬ್ಬರದ ವಿಚಾರದ ಬಗ್ಗೆಯೂ ನಿಗಾ ಇರಿಸಲಾಗಿದೆ’ ಎಂದು ಹೇಳಿದೆ. ಹಣಕಾಸು ನೀತಿಯಲ್ಲಿ ಯಾವುದೇ ಬದಲಾವಣೆ ಮಾಡದೇ ಇರುವ ಮೂಲಕ ಆರ್‌ಬಿಐ 2022ರ ಫೆಬ್ರುವರಿಯಲ್ಲಿಯೂ ವಿಶ್ಲೇಷಕರನ್ನು ಅಚ್ಚರಿಗೊಳಿಸಿತು. ಹಣದುಬ್ಬರವು ನಿಭಾಯಿಸಬಹುದಾದ ಮಟ್ಟದಲ್ಲಿದೆ ಮತ್ತು ಓಮೈಕ್ರಾನ್‌ಗೆ ಸಂಬಂಧಿಸಿ ಅನಿಶ್ಚಿತ ಸ್ಥಿತಿ ಇದೆ ಎಂದು ಕಾರಣ ಕೊಟ್ಟಿತು.

ಈ ನಿರ್ಧಾರಗಳು ನೀತಿ ವಿಶ್ಲೇಷಕರ ನಡುವೆ ಚರ್ಚೆ ಹುಟ್ಟು ಹಾಕಿತು. ಅಭಿವೃದ್ಧಿ ಮತ್ತು ಸರ್ಕಾರಿ ಸಾಲ ನಿರ್ವಹಣೆಗೆ ಆರ್‌ಬಿಐ ‌ಆದ್ಯತೆ ನೀಡಿದೆ ಎಂಬುದಕ್ಕೆ ಇದು ಪುರಾವೆ ಎಂದು ಕೆಲವರು ಹೇಳಿದರು. ಸರ್ಕಾರಕ್ಕಾಗಿ ಸಾಲ ಪಡೆಯುವುದು ಆರ್‌ಬಿಐನ ಕೆಲಸ. ಬಡ್ಡಿದರವು ಕಡಿಮೆ ಇದ್ದರೆ ಸರ್ಕಾರವು ಕಡಿಮೆ ಬಡ್ಡಿದರದಲ್ಲಿ ಮಾರುಕಟ್ಟೆಯಿಂದ ಸಾಲ ಪಡೆಯುವುದು ಸಾಧ್ಯವಾಗುತ್ತದೆ. ಆರ್ಥಿಕ ಪ್ರಗತಿಯೇ ಕೇಂದ್ರೀಯ ಬ್ಯಾಂಕ್‌ನ ಆದ್ಯತೆ ಎಂದು ಹೇಳುವ ಮೂಲಕ ಎಂಪಿಸಿಯ ನಿರ್ಧಾರಗಳನ್ನು ಆರ್‌ಬಿಐ ಗವರ್ನರ್‌ ಶಕ್ತಿಕಾಂತ ದಾಸ್‌ ಅವರು ಬಹಿರಂಗವಾಗಿಯೇ ಸಮರ್ಥಿಸಿಕೊಂಡಿದ್ದಾರೆ.

‘ಪ್ರಗತಿಯೇ ತನ್ನ ಆದ್ಯತೆ ಎಂದು ಆರ್‌ಬಿಐ ಹೇಳಿಕೊಂಡಿದೆ. ಆದರೆ, ಸಾಲ ನಿರ್ವಹಣೆ ಹೊಣೆಗಾರಿಕೆಯೇ ಬಡ್ಡಿದರ ಏರಿಸದೇ ಇರಲು ಪ್ರಾಥಮಿಕ ಕಾರಣ ಎಂದು ಅನ್ನಿಸುತ್ತದೆ’ ಎಂದು ನ್ಯಾಷನಲ್‌ ಇನ್ಸ್‌ಟಿಟ್ಯೂಟ್‌ ಆಫ್‌ ಪಬ್ಲಿಕ್‌ ಫೈನಾನ್ಸ್‌ ಆ್ಯಂಡ್‌ ಪಾಲಿಸಿಯ (ಎನ್‌ಐಪಿಎಫ್‌ಪಿ) ಹಿರಿಯ ಫೆಲೊ ರಾಧಿಕಾ ಪಾಂಡೆ ಹೇಳುತ್ತಾರೆ.

ಹಣದುಬ್ಬರ ನಿಯಂತ್ರಣವನ್ನು ಗುರಿಯಾಗಿಸಿ ರುವ ಹಣಕಾಸು ನೀತಿ ಚೌಕಟ್ಟಿನ ಕರಡು ನೀತಿ ರೂಪಿಸುವಲ್ಲಿ ಹಣಕಾಸು ಸಚಿವಾಲಯದ ಜತೆಗೆ ಕೆಲಸ ಮಾಡಿರುವವರಲ್ಲಿ ರಾಧಿಕಾ ಅವರೂ ಒಬ್ಬರು.

ಜಗತ್ತಿನಾದ್ಯಂತ ಹಣದುಬ್ಬರವು ಹೆಚ್ಚುತ್ತಲೇ ಹೋದಾಗ ಕೇಂದ್ರೀಯ ಬ್ಯಾಂಕುಗಳು ತಮ್ಮ ಸುಲಭ ಹಣಕಾಸು ನೀತಿಯನ್ನು ಕೈಬಿಟ್ಟಿವೆ. ಬ್ಯಾಂಕ್‌ ಆಫ್‌ ಇಂಗ್ಲೆಂಡ್‌ ಇತ್ತೀಚಿನ ದಿನಗಳಲ್ಲಿ ಮೂರು ಬಾರಿ ಬಡ್ಡಿ ದರ ಏರಿಕೆ ಮಾಡಿದೆ. ಅಮೆರಿಕದ ಫೆಡರಲ್‌ ರಿಸರ್ವ್‌ ಈ ವರ್ಷ ಆರು ಬಾರಿ ಬಡ್ಡಿದರ ಕಡಿತದ ಯೋಜನೆ ರೂಪಿಸಿದ್ದು, ಮಾರ್ಚ್‌ನಲ್ಲಿ ಮೊದಲ ಕಡಿತ ಜಾರಿಗೆ ಬಂದಿದೆ. ಬ್ರೆಜಿಲ್‌, ಮೆಕ್ಸಿಕೊ, ದಕ್ಷಿಣ ಆಫ್ರಿಕಾ, ಚಿಲಿ, ರಷ್ಯಾ ದೇಶದ ಕೇಂದ್ರೀಯ ಬ್ಯಾಂಕುಗಳು ಕೂಡ ಬಡ್ಡಿ ದರ ಏರಿಕೆಯ ತಂತ್ರವನ್ನು ಅನುಸರಿಸಲು ತೊಡಗಿವೆ.  

ರಷ್ಯಾ–ಉಕ್ರೇನ್‌ ಯುದ್ಧಕ್ಕೂ ಮುಂಚೆಯೇ ಭಾರತದಲ್ಲಿ ಸತತ ಐದು ತಿಂಗಳು ಹಣದುಬ್ಬರ ದರ ಏರುತ್ತಲೇ ಇತ್ತು. ಹಾಗಿದ್ದರೂ ಬಡ್ಡಿದರ ಏರಿಕೆಗೆ ಆರ್‌ಬಿಐ ಮುಂದಾಗಲಿಲ್ಲ. 2022ರ ಜನವರಿಯಲ್ಲಿ ಹಣದುಬ್ಬರ ದರವು ಶೇ 6.1ರಷ್ಟಿದ್ದರೆ, ನಂತರದ ತಿಂಗಳಲ್ಲಿ ಶೇ 6.07ರಷ್ಟು ಇತ್ತು. ದರಗಳು ಇನ್ನಷ್ಟು ಏರುವ ಅಂದಾಜು ಇದೆ. ಈ ಹಣಕಾಸು ವರ್ಷದಲ್ಲಿ ಹಣದುಬ್ಬರವು ಶೇ 6.2ಕ್ಕೆ ತಲುಪಲಿದೆ, ಆರ್‌ಬಿಐ ಅಂದಾಜಿಸಿದಂತೆ ಶೇ 4.5ರಷ್ಟು ಅಲ್ಲ ಎಂದು ಜಪಾನ್‌ನ ಬ್ರೋಕರೇಜ್‌ ಸಂಸ್ಥೆ ನೊಮುರಾ ಹೋಲ್ಡಿಂಗ್ಸ್‌ ಇ. ಹೇಳಿದೆ.

ಸರ್ಕಾರಿ ಸಾಲದಲ್ಲಿ ಏರಿಕೆ: ಬಡ್ಡಿದರ ಏರಿಕೆ ಮಾಡದಿರುವ ಮೂಲಕ ಸರ್ಕಾರಕ್ಕೆ ಕಡಿಮೆ ವೆಚ್ಚದಲ್ಲಿ ಸಾಲ ದೊರೆಯುವಂತೆ ಆರ್‌ಬಿಐ ನೋಡಿಕೊಂಡಿದೆ.

2022–23ರಲ್ಲಿ ₹15 ಲಕ್ಷ ಕೋಟಿ ಸಾಲ ‍ಪಡೆಯುವ ಯೋಜನೆಯನ್ನು ಕೇಂದ್ರ ಸರ್ಕಾರ ಹೊಂದಿದೆ. 2021–22ರಲ್ಲಿ ₹10.5 ಲಕ್ಷ ಕೋಟಿ, 2020–21ರಲ್ಲಿ ₹12.6 ಲಕ್ಷ ಕೋಟಿ ಸಾಲ ಪಡೆಯಲಾಗಿದೆ.

ಆರ್‌ಬಿಐನ ನೀತಿ ಉದ್ದೇಶಗಳಲ್ಲಿ ಹಿತಾಸಕ್ತಿ ಸಂಘರ್ಷವನ್ನು ತಪ್ಪಿಸುವುದಕ್ಕಾಗಿ ಸಾಲ ನಿರ್ವಹಣೆಯನ್ನು ಪ್ರತ್ಯೇಕಗೊಳಿಸಬೇಕು– ಹಣದುಬ್ಬರ ಕೇಂದ್ರಿತವಾದ ಹೊಸ ಹಣಕಾಸು ನೀತಿ ವ್ಯವಸ್ಥೆಗೆ ದೇಶವು 2015ರಲ್ಲಿ ಹೊರಳಿಕೊಂಡಾಗ ನೀತಿ ನಿರೂಪಕರು ನೀಡಿದ್ದ ಸಲಹೆ ಇದು. 

‘ಹಣಕಾಸು ನೀತಿ ಮತ್ತು ಸಾಲ ನಿರ್ವಹಣೆ ಹೊಣೆಗಾರಿಕೆಗಳ ನಡುವೆ ಹಿತಾಸಕ್ತಿ ಸಂಘರ್ಷ ಏರ್ಪಡುತ್ತದೆ ಎಂಬುದು ಅಂತರರಾಷ್ಟ್ರೀಯ ಅನುಭವ ಮತ್ತು ಪರಿಣತರ ಸಮಿತಿಗಳ ಶಿಫಾರಸುಗಳಿಂದ ಸ್ಪಷ್ಟವಾಗಿದೆ’ ಎಂದು ಪ್ರಧಾನ ಆರ್ಥಿಕ ಸಲಹೆಗಾರರಾಗಿದ್ದ ಇಳಾ ಪಟ್ನಾಯಕ್‌ 2015ರ ಫೆಬ್ರುವರಿ 11ರ ಆಂತರಿಕ ಟಿಪ್ಪಣಿಯಲ್ಲಿ ಹೇಳಿದ್ದರು. ‘ಹಾಗಾಗಿ, ಸಾಲ ನಿರ್ವಹಣೆ ಹೊಣೆಯನ್ನು ಆರ್‌ಬಿಐನಿಂದ ಪ್ರತ್ಯೇಕಿಸುವವರೆಗೆ ಹಣಕಾಸು ನೀತಿ ಉದ್ದೇಶಗಳನ್ನು ಆರ್‌ಬಿಐ ಕಾಯ್ದೆಯಲ್ಲಿ ಸೇರಿಸಿಕೊಳ್ಳಬಾರದು’ ಎಂಬ ಸಲಹೆಯನ್ನು ಅವರು ನೀಡಿದ್ದರು. 

ಈ ಅಸಮಂಜಸತೆಯನ್ನು ನಿವಾರಿಸುವ ಪ್ರಯತ್ನಕ್ಕೆ ಕೇಂದ್ರ ಸರ್ಕಾರವು ಮುಂದಾಗಿತ್ತು. ಕಾಯ್ದೆಗೆ ತಿದ್ದುಪಡಿ ಮಾಡಿ ಸಾಲ ನಿರ್ವಹಣೆಗೆ ಪ್ರತ್ಯೇಕ ಸಂಸ್ಥೆಯೊಂದನ್ನು ಸ್ಥಾಪಿಸಿ, ಸರ್ಕಾರದ ಸಾಲ ನಿರ್ವಹಣೆಯ ಮೇಲ್ವಿಚಾರಣೆಯನ್ನು ಆರ್‌ಬಿಐನಿಂದ ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಗೆ (ಸೆಬಿ) ವಹಿಸುವ ಪ್ರಸ್ತಾವವನ್ನು ಮುಂದಿಟ್ಟಿತ್ತು. ಆದರೆ, ಆರ್‌ಬಿಐ ಆಕ್ಷೇಪ ವ್ಯಕ್ತಪಡಿಸಿದ ಕಾರಣ, ಸರ್ಕಾರವು
ಪ್ರಸ್ತಾವವನ್ನು ಕೈಬಿಟ್ಟಿತು.

ಹಣದುಬ್ಬರವನ್ನು ಈ ಹಂತದಲ್ಲಿಯೇ ನಿಯಂತ್ರಿಸದಿದ್ದರೆ, ಹಣದುಬ್ಬರವು ಹೆಚ್ಚುತ್ತಲೇ ಇರುತ್ತದೆ ಎಂಬ ಭಾವ ದೃಢಗೊಳ್ಳುತ್ತದೆ. ಹಾಗಾದರೆ. ದರ ನಿಯಂತ್ರಣವು ಇನ್ನಷ್ಟು ಕಷ್ಟಕರವಾಗುತ್ತದೆ.

ಬಡ್ಡಿದರ ನಿಗದಿಯಲ್ಲಿ ಸಾಲ ನಿರ್ವಹಣೆಯು ಯಾವುದೇ ಪಾತ್ರ ವಹಿಸುವುದಿಲ್ಲ. ಸಮಿತಿಯ ಸದಸ್ಯರಲ್ಲಿ ಅರ್ಧದಷ್ಟು ಮಂದಿ ಬಾಹ್ಯ ತಜ್ಞರಾಗಿರುವ ಕಾರಣ ಹಿತಾಸಕ್ತಿ ಸಂಘರ್ಷಕ್ಕೆ ಅವಕಾಶ ಇಲ್ಲ ಎಂದು ಎಂಪಿಸಿಯ ಬಾಹ್ಯ ಸದಸ್ಯರಾಗಿರುವ ಜಯಂತ್‌ ಆರ್‌. ವರ್ಮಾ ಹೇಳಿದ್ದಾರೆ. 

ಈ ಕುರಿತಂತೆ ಕೇಳಿದ್ದ ಪ್ರತಿಕ್ರಿಯೆಗೆ ಹಣಕಾಸು ಸಚಿವಾಲಯ ಮತ್ತು ಆರ್‌ಬಿಐ ಸ್ಪಂದಿಸಿಲ್ಲ.

ಭಿನ್ನ ಆದ್ಯತೆಗಳು

‘ಭಾರತದ ಕೇಂದ್ರೀಯ ಬ್ಯಾಂಕ್‌ನ ಆದ್ಯತೆ ಪ್ರಗತಿಯೇ ಅಥವಾ ಹಣದುಬ್ಬರವೇ?’– 2021ರ ಡಿಸೆಂಬರ್‌ 8ರಂದು ನಡೆದ ಹಣಕಾಸು ನೀತಿ ಘೋಷಣೆಯ ಮಾಧ್ಯಮಗೋಷ್ಠಿಯಲ್ಲಿ ಮಾಧ್ಯಮ ಪ್ರತಿನಿಧಿಯೊಬ್ಬರು ಶಕ್ತಿಕಾಂತ ಅವರಿಗೆ ಕೇಳಿದ್ದ ನೇರವಾದ ಮತ್ತು ಮಹತ್ವದ ಪ್ರಶ್ನೆ ಇದು.

‘ನನ್ನ ಹೇಳಿಕೆಯಲ್ಲಿ ಸ್ಪಷ್ಟವಾಗಿ ತಿಳಿಸಿರುವಂತೆ, ಈ ಹಂತದಲ್ಲಿ ಆರ್‌ಬಿಐನ ಒಟ್ಟಾರೆ ಆದ್ಯತೆಯು ಪ್ರಗತಿಯೇ ಆಗಿದೆ. ಅದರ ಜತೆಗೆ, ದರ ಸ್ಥಿರತೆ ಕೂಡ ನಮ್ಮ ಗಮನದಲ್ಲಿ ಇದೆ. ಹಾಗಾಗಿ, ದರ ಸ್ಥಿರತೆಯನ್ನು ಗಮನದಲ್ಲಿ ಇರಿಸಿಕೊಂಡೇ ಪ್ರಗತಿಯನ್ನು ಒಟ್ಟಾರೆ ಆದ್ಯತೆಯಾಗಿ ಇರಿಸಿಕೊಳ್ಳಲಾಗಿದೆ’ ಎಂದು ಶಕ್ತಿಕಾಂತ ಉತ್ತರಿಸಿದ್ದರು.

ಅನಿಯಂತ್ರಿತ ಹಣದುಬ್ಬರದ ವಿರುದ್ಧ  ವಾದ ಮಾಡುವಲ್ಲಿ ಶಕ್ತಿಕಾಂತ ಅವರು ನಿಸ್ಸೀಮ. 2016ರಲ್ಲಿ ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿಯಾಗಿದ್ದ ಶಕ್ತಿಕಾಂತ ಅವರು ಹಣಕಾಸು ನೀತಿ ಗುರಿಗಳನ್ನು ನಿಗದಿ ಮಾಡುವ ಸಂಪುಟ ಟಿಪ್ಪಣಿಯ ಕರಡು ತಯಾರಿಯಲ್ಲಿ ಭಾಗಿಯಾಗಿದ್ದರು. ಸಂಪುಟ ಟಿಪ್ಪಣಿಯು ಹೀಗಿತ್ತು: ‘ಹಣದುಬ್ಬರವನ್ನು ನಿಯಂತ್ರಣದಲ್ಲಿ ಇರಿಸುವುದು ಮತ್ತು ಹಣದುಬ್ಬರವು ಅಪೇಕ್ಷಿತ ಮಟ್ಟವನ್ನು ಮೀರಿ ಹೋಗುವುದನ್ನು ತಡೆಯುವುದು ಹಣಕಾಸು ನೀತಿಯ ಅತ್ಯಂತ ಮುಖ್ಯ ಮತ್ತು ಮೊದಲ ಉದ್ದೇಶವಾಗಿರಬೇಕು’.

ಕಾಯ್ದೆಯಲ್ಲಿ ಹೀಗೆ ಹೇಳಲಾಗಿದೆ: ‘ಪ್ರಗತಿಯ ಗುರಿಯನ್ನೂ ಗಮನದಲ್ಲಿ ಇರಿಸಿಕೊಂಡು ದರ ಸ್ಥಿರತೆಯನ್ನು ಕಾಯ್ದುಕೊಳ್ಳುವುದು ಹಣಕಾಸು ನೀತಿಯ ಮೊದಲ ಉದ್ದೇಶ’. ಅರ್ಥ ವ್ಯವಸ್ಥೆಯು ಪುನಶ್ಚೇತನದ ಹಾದಿಯಲ್ಲಿದ್ದು, ಹಣದುಬ್ಬರವು ಏರುತ್ತಲೇ ಇರುವಾಗಲೂ ಆರ್ಥಿಕ ಪ್ರಗತಿಯು ದರ ಸ್ಥಿರತೆಯಷ್ಟೇ ಅಥವಾ ಅದಕ್ಕೂ ಹೆಚ್ಚು ಮುಖ್ಯ ಎಂದು 2018ರಲ್ಲಿ ಆರ್‌ಬಿಐ ಗವರ್ನರ್‌ ಆಗಿ ಅಧಿಕಾರ ವಹಿಸಿಕೊಂಡ ಬಳಿಕ ಶಕ್ತಿಕಾಂತ ಅವರು ಹಲವು ಬಾರಿ ಹೇಳಿದ್ದಾರೆ.

2019ರಲ್ಲಿ ಐದು ಬಾರಿ ಬಡ್ಡಿದರ ಕಡಿತ ಮಾಡುವ ಮೂಲಕ ಎಂಪಿಸಿಯು ಅರ್ಥ ವ್ಯವಸ್ಥೆಗೆ ಹಣ ಹರಿದು ಬರುವಂತೆ ನೋಡಿಕೊಂಡಿದೆ. 2019ರ ಫೆಬ್ರುವರಿಯಿಂದ 2020ರ ಫೆಬ್ರುವರಿ ಅವಧಿಯಲ್ಲಿ ರೆಪೊ ದರವನ್ನು (ಬ್ಯಾಂಕ್‌ಗಳಿಗೆ ಆರ್‌ಬಿಐ ನೀಡುವ ಸಾಲದ ಬಡ್ಡಿದರ) ಶೇ 1.35ರಷ್ಟು ತಗ್ಗಿಸಲಾಗಿದೆ. ಸಾಂಕ್ರಾಮಿಕವು ಆರಂಭಗೊಂಡ ಬಳಿಕ, ಪ್ರಗತಿಗೆ ಬೆಂಬಲ ನೀಡುವುದಕ್ಕೆ ಅಗತ್ಯ ಇರುವ ಕ್ರಮ ಕೈಗೊಳ್ಳಲಾಗುವುದು ಎಂದು ಶಕ್ತಿಕಾಂತ ಹೇಳಿದ್ದರು. ಹಣದುಬ್ಬರ ತೀವ್ರವಾಗಿಯೇ ಇದ್ದರೂ 2020ರಲ್ಲಿ ಶೇ 1.15ರಷ್ಟು ಬಡ್ಡಿದರ ಕಡಿತ ಮಾಡಲಾಗಿದೆ. ಇದರೊಂದಿಗೆ ರೆಪೊ ದರವು ಶೇ 4ಕ್ಕೆ ಕುಸಿದಿದೆ.

ಹಣಕಾಸು ನೀತಿಯ ಉದ್ದೇಶಗಳನ್ನು ಭಿನ್ನವಾಗಿ ವ್ಯಾಖ್ಯಾನಿಸಿರುವುದೇ ಶಕ್ತಿಕಾಂತ ಅವರು ಭಿನ್ನ ಧೋರಣೆಗಳನ್ನು ಅನುಸರಿಸಲು ಇರುವ ಮುಖ್ಯ ಕಾರಣಗಳಲ್ಲಿ ಒಂದು ಎಂದು ಪರಿಣತರು ಹೇಳುತ್ತಾರೆ.

ಸಾಂಕ್ರಾಮಿಕದ ಪರಿಣಾಮ

ಕೋವಿಡ್‌ ಸಾಂಕ್ರಾಮಿಕದ ಹೊಡೆತದ ನಂತರ ವಿಶ್ವದ ಬಹುತೇಕ ಭಾಗಗಳಲ್ಲಿ ಹಣದುಬ್ಬರ ಇಳಿಕೆಯ ಹಾದಿಯಲ್ಲಿತ್ತು. ಆದರೆ ಭಾರತದಲ್ಲಿ ಮಾತ್ರ 2020ರ ಏಪ್ರಿಲ್‌ನಿಂದ 2021ರ ಮಾರ್ಚ್‌ವರೆಗಿನ ಆರ್ಥಿಕ ವರ್ಷದಲ್ಲಿ ಹಣದುಬ್ಬರವು ಶೇ 6.2ರಷ್ಟು ಇತ್ತು. ಇಂಧನದ ಮೇಲೆ ತೆರಿಗೆ ಹೆಚ್ಚಳ ಮತ್ತು ಪೂರೈಕೆಯಲ್ಲಿನ ವ್ಯತ್ಯಯಗಳೇ ಈ ಏರಿಕೆಗೆ ಕಾರಣವಾಗಿದ್ದವು.

‘ಆರ್ಥಿಕತೆಯ ಮೇಲೆ ಕೋವಿಡ್‌–19ರ ಪರಿಣಾಮಗಳನ್ನು ಹೋಗಲಾಡಿಸಲು ಮತ್ತು ಹಣದುಬ್ಬರವು ನಿಗದಿತ ಮಟ್ಟದ ಒಳಗೇ ಇರುವಂತೆ ನೋಡಿಕೊಳ್ಳಲು ಆರ್ಥಿಕತೆಯ ಪುನಶ್ಚೇತನ, ಸ್ಥಿರ ಬೆಳವಣಿಗೆಯನ್ನು ಕಾಯ್ದುಕೊಳ್ಳವುದು ಅವಶ್ಯವಾಗಿರುವವರೆಗೂ ದರ ಕಡಿತ ನೀತಿಯನ್ನು ಮುಂದುವರಿಸುತ್ತೇವೆ’ ಎಂದು ಎಲ್ಲಾ ಎಂಪಿಸಿ ಸಭೆಗಳಲ್ಲಿ ಆರ್‌ಬಿಐ ಹೇಳಿತ್ತು.

ಆರ್‌ಬಿಐನ ಈ ನೀತಿಗೆ ಎಂಪಿಸಿಯ ಎಲ್ಲಾ ಸದಸ್ಯರ ಸಹಮತವಿರಲಿಲ್ಲ. 2020ರ ಆಗಸ್ಟ್‌ನಲ್ಲಿ ಎಂಪಿಸಿ ಸದಸ್ಯತ್ವ ಪಡೆದಿದ್ದ ವರ್ಮಾ ಅವರು, ಆರ್ಥಿಕ ಬೆಳವಣಿಗೆಯೇ ಆದ್ಯತೆ ಎನ್ನುತ್ತಿದ್ದ ಆರ್‌ಬಿಐನ ನೀತಿಗೆ ಆಕ್ಷೇಪ ವ್ಯಕ್ತಪಡಿಸಿದ್ದರು. ‘ಆರ್ಥಿಕ ಬೆಳವಣಿಗೆಯೊಂದಕ್ಕೇ ಆದ್ಯತೆ ನೀಡುವ ಮೂಲಕ ಹಣದುಬ್ಬರದ ಬಗ್ಗೆ ಯಾವುದೇ ಕಾಳಜಿ ಇಲ್ಲ ಎಂಬ ತಪ್ಪಾದ ಗ್ರಹಿಕೆಯನ್ನು ಎಂಪಿಸಿ ಸೃಷ್ಟಿಸುತ್ತಿದೆ...’ ಎಂದು ವರ್ಮಾ ಅವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಹಣದುಬ್ಬರ ನಿಯಂತ್ರಣಕ್ಕೆ ಎಂಪಿಸಿ ಕ್ರಮ ತೆಗೆದುಕೊಳ್ಳಲೇಬೇಕು ಎಂದು ಆಗ್ರಹಿಸಿದ್ದರು.

ಸರ್ಕಾರದ ನೀತಿ...

ಹಣದುಬ್ಬರದ ಗರಿಷ್ಠ ಮಟ್ಟವನ್ನು ನಿಗದಿ ಮಾಡಲು ಆರ್‌ಬಿಐ, ಆರ್‌ಬಿಐನ ಮಾಜಿ ಗವರ್ನರ್‌ಗಳು ಮತ್ತು ತಜ್ಞರ ಜತೆಯಲ್ಲಿ 2016ರಲ್ಲಿ ಸಮಾಲೋಚನೆ ನಡೆಸಲಾಗಿತ್ತು. ಆನಂತರ, ಹಣದುಬ್ಬರವು ಶೇ 4ರಷ್ಟು ಇದ್ದರೆ, ಆರ್ಥಿಕತೆಯು ಗರಿಷ್ಠ ಮತ್ತು ಅತ್ಯಂತ ದಕ್ಷತೆಯಲ್ಲಿ ಬೆಳವಣಿಗೆ ಸಾಧಿಸುತ್ತದೆ ಎಂದು ಅಂದಾಜಿಸಲಾಗಿತ್ತು. ಇದಕ್ಕಿಂತ ಹೆಚ್ಚಾದರೆ, ಜನರಿಗೆ ಹೊರೆ ಎಂದು ಹೇಳಲಾಗಿತ್ತು.

‘ಶೇ 4 +/–2ರಷ್ಟು ಹಣದುಬ್ಬರ ದರವು ಆರ್‌ಬಿಐಗೆ ಸಾಕಷ್ಟು ಅವಕಾಶವನ್ನು ನೀಡುತ್ತದೆ. ಆದರೆ ಶೇ 6ಕ್ಕಿಂತಲೂ (ಶೇ 4+2) ಹೆಚ್ಚಿನ ದರವನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ’ ಎಂದು 2016ರ ಜುಲೈನಲ್ಲಿ ಹಣಕಾಸು ಸಚಿವಾಲಯಕ್ಕೆ ಬರೆದಿದ್ದ ಶಿಫಾರಸಿನಲ್ಲಿ ಶಕ್ತಿಕಾಂತ ದಾಸ್ ಅವರು ಆಗ್ರಹಿಸಿದ್ದರು.

ಹಣದುಬ್ಬರದ ಗರಿಷ್ಠ ದರ ನಿಗದಿ ಮಾಡುವ ಸಭೆಗಳಲ್ಲಿ, ವಿಶೇಷ ಸಂದರ್ಭಗಳಲ್ಲಿ ಹಣದುಬ್ಬರವು ಗರಿಷ್ಠ ಮಿತಿಯನ್ನು ದಾಟುವುದಕ್ಕೆ ಅವಕಾಶ ಕೊಡುವ ‘ತಪ್ಪಿಸಿಕೊಳ್ಳುವ ಷರತ್ತು’ ಬಗ್ಗೆಯೂ ಪರಿಶೀಲನೆ ನಡೆಸಲಾಗಿತ್ತು. ಝೆಕ್ ಗಣರಾಜ್ಯ ಮತ್ತು ರೊಮೇನಿಯಾದಲ್ಲಿ ಇಂತಹ ಷರತ್ತುಗಳ ಇರುವ ಬಗ್ಗೆ ಚರ್ಚಿಸಲಾಗಿತ್ತು.

ಹಣದುಬ್ಬರವು ನಿಗದಿತ ಗರಿಷ್ಠ ಮಟ್ಟಕ್ಕಿಂತಲೂ ಏರಿಕೆಯಾದಾಗ ಈ ದೇಶಗಳು ‘ತಪ್ಪಿಸಿಕೊಳ್ಳುವ ಷರತ್ತು’ ಅನುಷ್ಠಾನಕ್ಕೆ ತಂದ ರೀತಿಯಲ್ಲೇ, ಭಾರತದಲ್ಲಿ ಈಗಾಗಲೇ ಹಣದುಬ್ಬರದ ದರ ಏರಿಕೆಯನ್ನು ಈ ರೀತಿಯಲ್ಲಿ ನಿರ್ವಹಿಸಲಾಗಿದೆ ಎಂಬ ನಿರ್ಣಯಕ್ಕೆ ಹಣಕಾಸು ಸಚಿವಾಲಯವು ಬಂದಿತು. ಆದರೆ ಇದಕ್ಕೆ ಯಾವುದೇ ಕಾನೂನು ಇಲ್ಲ. 

ಬಹುತೇಕ ದೇಶಗಳಲ್ಲಿ ಹಣದುಬ್ಬರದ ನಿಯಂತ್ರಣವು ಒಂದು ತಿಂಗಳಲ್ಲಿ ಸಾಧ್ಯವಾಗದೇ ಇದ್ದರೆ, ಅದನ್ನು ಕೇಂದ್ರೀಯ ಬ್ಯಾಂಕ್‌ನ ವೈಫಲ್ಯ ಎಂದು ಪರಿಗಣಿಸಲಾಗುತ್ತದೆ. ಆದರೆ ಭಾರತದಲ್ಲಿ ಹಣದುಬ್ಬರದ ನಿಯಂತ್ರಣವು ಸತತ ಮೂರು ತ್ರೈಮಾಸಿಕಗಳವರೆಗೆ ಸಾಧ್ಯವಾಗದೇ ಇದ್ದರೆ ಮಾತ್ರ ಅದು ಕೇಂದ್ರೀಯ ಬ್ಯಾಂಕ್‌ನ ವೈಫಲ್ಯ ಎಂದು ಪರಿಗಣಿಸಲಾಗುತ್ತದೆ. 

‘ಈಗಿನ ಹಣದುಬ್ಬರವು ತಾತ್ಕಾಲಿಕ ಮಾತ್ರ’ ಎಂದು ಶಕ್ತಿಕಾಂತ ಅವರು ಮಾರ್ಚ್‌ನಲ್ಲಿ ಹೇಳಿದ್ದರು. ‘ಇದು ತಾತ್ಕಾಲಿಕವಲ್ಲ ಎಂಬುದನ್ನು ಒಪ್ಪಿಕೊಳ್ಳಲು ಇದು ಸರಿಯಾದ ಸಮಯ. ಹಣದುಬ್ಬರವನ್ನು ಶೇ 4ರೊಳಗೆ ಉಳಿಸಿಕೊಳ್ಳಬೇಕು ಎಂಬ ಬಗ್ಗೆ ಆರ್‌ಬಿಐ ಗಂಭೀರವಾಗಿ ಇರುವುದೇ ಆದರೆ, ತಕ್ಷಣವೇ ಬಡ್ಡಿ ದರವನ್ನು ಏರಿಕೆ ಮಾಡಬೇಕು’ ಎಂದು ಬ್ಯುಟರ್‌ ಹೇಳಿದ್ದಾರೆ.

(ರಿಪೋರ್ಟರ್ಸ್‌ ಕಲೆಕ್ಟಿವ್‌ನ ಈ ವರದಿಯ ಇಂಗ್ಲಿಷ್‌ ಅವತರಣಿಕೆಯು ‘ಅಲ್‌ ಜಝೀರಾ’ದಲ್ಲಿ ಪ್ರಕಟವಾಗಿದೆ)

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು