ಗುರುವಾರ , ಮಾರ್ಚ್ 23, 2023
28 °C

ಆಳ–ಅಗಲ: ಶಾರ್ಟ್‌ ಸೆಲ್ಲಿಂಗ್‌– ಬೀಳೋ ಮಾರುಕಟ್ಟೆಯಲ್ಲಿ ಕಾಸು ಮಾಡುವ ತಂತ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಷೇರುಪೇಟೆ ಮತ್ತು ಷೇರೊಂದರ ಮೌಲ್ಯ ಕುಸಿಯುವಾಗ ಲಾಭ ಮಾಡಿಕೊಳ್ಳುವ ವಹಿವಾಟನ್ನು ‘ಶಾರ್ಟ್‌ ಸೆಲ್ಲಿಂಗ್‌’ ಎನ್ನಲಾಗುತ್ತದೆ. ಅದಾನಿ ಸಮೂಹದ ಹೂಡಿಕೆ ಬಗ್ಗೆ ವರದಿ ಪ್ರಕಟಿಸಿದ್ದ ಅಮೆರಿಕದ ಹಿಂಡನ್‌ಬರ್ಗ್‌ ರಿಸರ್ಚ್‌, ಅದಾನಿ ಸಮೂಹದ ಷೇರುಗಳನ್ನು ಶಾರ್ಟ್‌ ಸೆಲ್‌ ಮಾಡುವುದಾಗಿ ಹೇಳಿತ್ತು. ಈ ಸ್ವರೂಪದ ವಹಿವಾಟು ಭಾರತವೂ ಸೇರಿ, ವಿಶ್ವದ ಬಹುತೇಕ ಷೇರು ಮಾರುಕಟ್ಟೆಗಳಲ್ಲಿ ಕಾನೂನಬದ್ಧ

ಅಮೆರಿಕದ ಶಾರ್ಟ್‌ ಸೆಲ್ಲಿಂಗ್‌, ಹೂಡಿಕೆ ಮತ್ತು ಸಂಶೋಧನಾ ಸಂಸ್ಥೆ ‘ಹಿಂಡನ್‌ಬರ್ಗ್‌ ರಿಸರ್ಚ್‌’, ಅದಾನಿ ಸಮೂಹವು ಅಕ್ರಮ ಎಸಗಿದೆ ಮತ್ತು ತನ್ನ ಮೌಲ್ಯವನ್ನು ಭಾರಿ ಪ್ರಮಾಣದಲ್ಲಿ ಕೃತಕವಾಗಿ ಉಬ್ಬಿಸಿದೆ ಎಂಬ ವರದಿಯನ್ನು ಪ್ರಕಟಿಸಿತ್ತು. ಅದಾನಿ ಸಮೂಹದ ಮುಂದೆ ಹಲವು ಮಹತ್ವದ ಪ್ರಶ್ನೆಗಳನ್ನು ಇಟ್ಟಿತ್ತು. ಅಮೆರಿಕ ಷೇರುಪೇಟೆಯಲ್ಲಿ ಇರುವ ಅದಾನಿ ಸಮೂಹದ ಷೇರುಗಳನ್ನು ಶಾರ್ಟ್‌ ಸೆಲ್ಲಿಂಗ್ ಮಾಡುವುದಾಗಿಯೂ ಹೇಳಿತ್ತು. ಇದರ ಪರಿಣಾಮವಾಗಿ ಅದಾನಿ ಸಮೂಹದ ಕಂಪನಿಗಳ ಷೇರು ಮೌಲ್ಯ ಅರ್ಧಕ್ಕಿಂತಲೂ ಹೆಚ್ಚು ಪ್ರಮಾಣದಲ್ಲಿ ಕುಸಿದಿದೆ. 

ಹಿಂಡನ್‌ಬರ್ಗ್‌ ವರದಿಗೆ ಅದಾನಿ ಸಮೂಹವು 400ಕ್ಕೂ ಹೆಚ್ಚು ಪುಟಗಳ ಪ್ರತಿಕ್ರಿಯೆ ನೀಡಿದೆ. ಆದರೆ, ಈ ಪ್ರತಿಕ್ರಿಯೆಯಲ್ಲಿ ತಾನು ಎತ್ತಿದ ಪ್ರಶ್ನೆಗಳಿಗೆ ಉತ್ತರ ಇಲ್ಲ ಎಂದು ಹಿಂಡನ್‌ಬರ್ಗ್‌ ಹೇಳಿದೆ. 

ಹಿಂಡನ್‌ಬರ್ಗ್ ವರದಿ ಮತ್ತು ಅದಾನಿ ಪ್ರಕರಣದಿಂದಾಗಿ ಶಾರ್ಟ್‌ ಸೆಲ್ಲಿಂಗ್ ಎಂಬ ಷೇರುಪೇಟೆ ವಹಿವಾಟು ಕಾರ್ಯತಂತ್ರವು ಮುನ್ನೆಲೆಗೆ ಬಂದಿದೆ.

ಭಾರತದಲ್ಲಿ ಶಾರ್ಟ್‌ ಸೆಲ್ಲಿಂಗ್‌ ಕಾನೂನುಬಾಹಿರ ಅಲ್ಲ. ಆದರೆ, ನೇಕೆಡ್‌ ಶಾರ್ಟ್ ಸೆಲ್ಲಿಂಗ್‌ ಅಂದರೆ, ಷೇರು ತಮ್ಮ ಕೈಗೆ ಬರಲಿದೆ ಎಂಬುದು ಖಚಿತವಾಗಿ ಇಲ್ಲದೆಯೇ ಷೇರುಗಳನ್ನು ಮಾರಾಟ ಮಾಡುವುದಕ್ಕೆ ನಿಷೇಧ ಇದೆ. 

2001ರಲ್ಲಿ ಭಾರತೀಯ ಷೇರುಪೇಟೆ ವಿನಿಮಯ ಮಂಡಳಿಯು (ಸೆಬಿ) ಶಾರ್ಟ್‌ ಸೆಲ್ಲಿಂಗ್ ಮೇಲೆ ನಿಷೇಧ ಹೇರಿತ್ತು. 

ಬಾಂಬೆ ಷೇರುಪೇಟೆಯ (ಬಿಎಸ್‌ಇ) ಅಧ್ಯಕ್ಷರಾಗಿದ್ದ ಆನಂದ್ ರಾಠಿ ಅವರು ತಮಗೆ ಸಿಕ್ಕ ಗೌಪ್ಯ ಮಾಹಿತಿಯನ್ನು ಲಾಭ ಮಾಡಿಕೊಳ್ಳುವುದಕ್ಕೆ ಮತ್ತು ಷೇರುಪೇಟೆಯನ್ನು ಚಂಚಲವಾಗಿ ಇರಿಸುವುದಕ್ಕೆ ಬಳಸಿಕೊಂಡರು ಎಂಬ ಆರೋಪದ ಕಾರಣಕ್ಕೆ ಶಾರ್ಟ್‌ ಸೆಲ್ಲಿಂಗ್‌ ಮೇಲೆ ನಿಷೇಧ ಹೇರಲಾಗಿತ್ತು. ಬಳಿಕ, ರಾಠಿ ಅವರನ್ನು ಸೆಬಿ ದೋಷಮುಕ್ತಗೊಳಿಸಿತು. 

ಶಾರ್ಟ್‌ ಸೆಲ್ಲಿಂಗ್‌ ಮೇಲಿನ ನಿಷೇಧ ಬಹುಕಾಲ ಇರಲಿಲ್ಲ. ಮ್ಯೂಚುವಲ್‌ ಫಂಡ್‌ಗಳೂ ಮತ್ತು ಸಾಂಸ್ಥಿಕ ಹೂಡಿಕೆದಾರರು ಕೂಡ ಶಾರ್ಟ್‌ ಸೆಲ್ಲಿಂಗ್‌ ಮಾಡಲು ಸೆಬಿಯು 2008ರಲ್ಲಿ ಅವಕಾಶ ಕೊಟ್ಟಿತು. 

ಶಾರ್ಟ್‌ ಸೆಲ್ಲಿಂಗ್‌ ಮಾರ್ಗಸೂಚಿಗಳು: ಸಾಂಸ್ಥಿಕ ಹೂಡಿಕೆದಾರರಿಗೆ ಸೆಬಿಯು 2007ರ ಜುಲೈನಲ್ಲಿ ಮಾರ್ಗಸೂಚಿ ಪ್ರಕಟಿಸಿತು. 

ಈ ಮಾರ್ಗಸೂಚಿ ಪ್ರಕಾರ, ಸಾಂಸ್ಥಿಕ ಹೂಡಿಕೆದಾರರು ತಾವು ನಡೆಸುತ್ತಿರುವ ವಹಿವಾಟು ‘ಶಾರ್ಟ್‌ ಸೆಲ್ಲಿಂಗ್‌’ ಹೌದೇ ಎಂಬುದನ್ನು ಪ್ರಾಮಾಣಿಕವಾಗಿ ಬಹಿರಂಗಪಡಿಸಬೇಕು. ಚಿಲ್ಲರೆ ಹೂಡಿಕೆದಾರರು ದಿನದ ವಹಿವಾಟಿನ ಮುಕ್ತಾಯಕ್ಕೆ ಮೊದಲು ಇದೇ ರೀತಿಯಲ್ಲಿ ತಮ್ಮ ವಹಿವಾಟಿನ ಬಗ್ಗೆ ತಿಳಿಸಬೇಕು. ಸಾಂಸ್ಥಿಕ ಹೂಡಿಕೆದಾರರು ಒಂದೇ ದಿನದ ವಹಿವಾಟಿನಲ್ಲಿ ಶಾರ್ಟ್‌ ಸೆಲ್ಲಿಂಗ್‌ ನಡೆಸುವಂತಿಲ್ಲ. 

ಚಿಲ್ಲರೆ ಹೂಡಿಕೆದಾರ ಮತ್ತು ಖರೀದಿದಾರರ ನಡುವಣ ಕರಾರು ಪೂರ್ಣಗೊಳ್ಳುವ ಹೊತ್ತಿಗೆ ಷೇರುಗಳನ್ನು ನೀಡಲು ಸಾಧ್ಯವಾಗದಿರುವುದನ್ನು ‘ನೇಕೆಡ್‌ ಸೆಲ್ಲಿಂಗ್‌’ ಎನ್ನುತ್ತಾರೆ. ಖರೀದಿ ಕರಾರು ಪೂರ್ಣಗೊಳ್ಳುವ ಹೊತ್ತಿಗೆ ಎಲ್ಲ ಹೂಡಿಕೆದಾರರು ಷೇರುಗಳನ್ನು ನೀಡಲು ಬದ್ಧರಾಗಿರಬೇಕು ಎಂಬುದು ಸೆಬಿಯ ನಿಯಮವಾಗಿದೆ. 

ಕರಾರು ಪೂರ್ಣಗೊಳ್ಳುವ ಹೊತ್ತಿಗೆ ದಲ್ಲಾಳಿಗಳು ಷೇರು ನೀಡಿದ್ದಾರೆ ಎಂಬುದನ್ನು ಖಚಿತಪಡಿಸಿಕೊಳ್ಳಲು ಷೇರುಪೇಟೆಗಳು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ಯಾರೊಬ್ಬರೂ ಇದನ್ನು ಉಲ್ಲಂಘಿಸಲು ಸಾಧ್ಯವಾಗದಷ್ಟು ಈ ಕ್ರಮಗಳು ಕಠಿಣವಾಗಿರಬೇಕು ಎಂದು ಸೆಬಿ ಹೇಳಿದೆ. 

2020ರ ಮಾರ್ಚ್‌ನಲ್ಲಿ ಕೂಡ ಒಂದು ಬಾರಿ ಶಾರ್ಟ್‌ ಸೆಲ್ಲಿಂಗ್‌ ಮೇಲೆ ನಿಷೇಧ ಹೇರಲಾಗಿತ್ತು. 2020ರಲ್ಲಿ ಸೃಷ್ಟಿಯಾದ ಬಿಕ್ಕಟ್ಟು ಇದಕ್ಕೆ ಕಾರಣ. ಶಾರ್ಟ್ ಸೆಲ್ಲಿಂಗ್‌ನಿಂದಾಗಿ ಮಾರುಕಟ್ಟೆಯು ಅಸ್ಥಿರಗೊಳ್ಳುತ್ತಿದೆ ಎಂದು ಜಗತ್ತಿನ ವಿವಿಧ ಭಾಗಗಳ ಹಣಕಾಸು ಪ್ರಾಧಿಕಾರಗಳು ಭಾವಿಸಿದ್ದರಿಂದ ನಿಷೇಧ ಹೇರಲಾಯಿತು. ಈ ನಿಷೇಧದಿಂದಾಗಿ ಷೇರುಪೇಟೆಯು ನ್ಯಾಯಸಮ್ಮತ, ಮುಕ್ತ, ದಕ್ಷ ಮತ್ತು ವ್ಯವಸ್ಥಿತ ರೀತಿಯಲ್ಲಿ ಕಾರ್ಯನಿರ್ವಹಿಸಲು ಸಾಧ್ಯ ಎಂದು ನಿಯಂತ್ರಣ ಸಂಸ್ಥೆಗಳು ಹೇಳಿದ್ದವು. ಆದರೆ, 2020ರ ಅಕ್ಟೋಬರ್‌ನಲ್ಲಿ ಶಾರ್ಟ್‌ ಸೆಲ್ಲಿಂಗ್‌ ಮೇಲಿನ ನಿಷೇಧವನ್ನು ತೆರವು ಮಾಡಲಾಯಿತು. 

ಶಾರ್ಟ್ ಸೆಲ್ಲಿಂಗ್‌ ಕಾರ್ಯತಂತ್ರವು ವರ್ತಕರಿಗೆ ದೊಡ್ಡ ಮೊತ್ತದ ಲಾಭ ತಂದು ಕೊಡುತ್ತದೆ. ಆದರೆ ಷೇರುಪೇಟೆಯಲ್ಲಿ ಸಮಸ್ಯೆಗೆ ಕಾರಣವಾಗಬಹುದು ಎಂಬುದು ಶಾರ್ಟ್ ಸೆಲ್ಲಿಂಗ್‌ನ ಟೀಕಾಕಾರರ ಆಕ್ಷೇಪ. 

‘ಬೈ ಅಂಡ್‌ ಹೋಲ್ಡ್‌

* ಷೇರಿನ ಮೌಲ್ಯ ಏರುಗತಿಯಲ್ಲಿ ಇರುವಾಗ ಷೇರನ್ನು ಖರೀದಿಸಿ, ಅದು ಭವಿಷ್ಯದಲ್ಲಿ ಮತ್ತಷ್ಟು ಏರುವವರೆಗೆ ಕಾಯುವುದು. ಇದನ್ನು ‘ಬೈ ಅಂಡ್‌ ಹೋಲ್ಡ್‌’ ಎಂದು ಕರೆಯಲಾಗುತ್ತದೆ. ‘ಪೊಸಿಷನ್‌’ ಎಂದೂ ಕರೆಯಲಾಗುತ್ತದೆ.

* ಷೇರನ್ನು ಖರೀದಿಸಿ, ಅದನ್ನು ಮತ್ತೆ ಮಾರಾಟ ಮಾಡುವವರೆಗಿನ ಅವಧಿ ದೀರ್ಘವಾಗಿರುತ್ತದೆ. ಅದು ಕೆಲವು ವಾರಗಳಿಂದ ಹಿಡಿದು, ಹಲವು ವರ್ಷಗಳವರೆಗೆ ಹೋಗಬಹುದು 

* ಷೇರು ಮಾರುಕಟ್ಟೆಯಲ್ಲಿ ವಹಿವಾಟು ನಡೆಸುವ ‘ಟ್ರೇಡರ್‌’ಗಳಲ್ಲಿ ಬಹುತೇಕ ಮಂದಿ ಈ ಸ್ವರೂಪದ ವಹಿವಾಟನ್ನೇ ನಡೆಸುತ್ತಾರೆ. ಚಿಲ್ಲರೆ ಹೂಡಿಕೆದಾರರಲ್ಲೂ ಬಹುತೇಕ ಮಂದಿ ಈ ಸ್ವರೂಪದ ವಹಿವಾಟಿನಲ್ಲೇ ಹೆಚ್ಚು ಹೂಡಿಕೆ ಮಾಡುತ್ತಾರೆ

* ಕೂಲಂಕಷವಾಗಿ ವಿಶ್ಲೇಷಿಸಿ ಹೂಡಿಕೆ ಮಾಡಿದಾಗ, ಈ ಸ್ವರೂಪದ ಹೂಡಿಕೆಯಲ್ಲಿ ನಷ್ಟದ ಸಾಧ್ಯತೆಗಳು ಕಡಿಮೆ. ಷೇರುಗಳ ಬೆಲೆಯಲ್ಲಿ ಏರಿಳಿತವಿದ್ದರೂ ದೀರ್ಘಾವಧಿಯಲ್ಲಿ ಲಾಭದ ಸಾಧ್ಯತೆ ಅತ್ಯಧಿಕವಾಗಿರುತ್ತವೆ

ಷೇರೊಂದರ ‘ಬೈ ಅಂಡ್‌ ಹೋಲ್ಡ್‌’ ವಹಿವಾಟು

1. ಷೇರಿನ ಮೌಲ್ಯದಲ್ಲಿ ಏರಿಕೆಯಾಗುತ್ತಿದ್ದಾಗ ಮತ್ತು ಮೌಲ್ಯ ಏರಿಕೆಯಾಗುವ ಸಂಭವ ಹೆಚ್ಚು ಇದ್ದಾಗ ‘ಟ್ರೇಡರ್‌’ ಆ ಷೇರನ್ನು ಖರೀದಿಸಲು ನಿರ್ಧರಿಸುತ್ತಾನೆ

2. ತನ್ನ ತಾಂತ್ರಿಕ ವಿಶ್ಲೇಷಣೆ ಅಥವಾ ತಜ್ಞರ ತಾಂತ್ರಿಕ ವಿಶ್ಲೇಷಣೆಯ ಆಧಾರದಲ್ಲಿ, ಷೇರು ಒಂದು ಸೂಚಿತ ಮೌಲ್ಯವನ್ನು ಮುಟ್ಟಿದಾಗ ಟ್ರೇಡರ್ ಅದನ್ನು ಖರೀದಿಸುತ್ತಾನೆ

3. ಷೇರಿನ ಮೌಲ್ಯ ಏರಿಕೆಯಾಗುವವರೆಗೆ ಟ್ರೇಡರ್ ಕಾಯುತ್ತಾನೆ. ನಂತರ ಮಾರಾಟ ಮಾಡುತ್ತಾನೆ

* ಈ ಕಾಯುವ ಅವಧಿ ಎರಡು ದಿನಗಳಿಂದ ಕೆಲವು ವಾರಗಳವರೆಗೆ ಇದ್ದರೆ ಅದನ್ನು ‘ಸ್ವಿಂಗ್‌ ಪೊಸಿಷನ್’ ಎಂದು ಕರೆಯುತ್ತಾರೆ

* ಷೇರಿನ ಬೆಲೆ ಏರಿಕೆಯಾಗಲಿ ಎಂದು ಟ್ರೇಡರ್‌ ಹಲವು ತಿಂಗಳಿನಿಂದ ಎರಡು–ಮೂರು ವರ್ಷಗಳವರೆಗೆ ಕಾಯುವುದಾದರೆ, ಅದನ್ನು ‘ಶಾರ್ಟ್‌ ಪೊಸಿಷನ್‌’ ಎಂದು ಕರೆಯುತ್ತಾರೆ

* ಟ್ರೇಡರ್‌ ಒಮ್ಮೆ ಖರೀದಿಸಿದ ಷೇರನ್ನು ಗರಿಷ್ಠ ಐದು ವರ್ಷಗಳವರೆಗೆ ಕಾಯ್ದುಕೊಂಡಿದ್ದು, ಆನಂತರ ಮಾರಾಟ ಮಾಡಿದರೆ ಅದನ್ನು ‘ಮೀಡಿಯಂ ಪೊಸಿಷನ್‌’ ಎಂದು ಕರೆಯಲಾಗುತ್ತದೆ

* ಟ್ರೇಡರ್‌ ಒಮ್ಮೆ ಖರೀದಿಸಿದ ಷೇರನ್ನು ಐದು ವರ್ಷಗಳಿಗಿಂತಲೂ ಹೆಚ್ಚಿನ ಅವಧಿಯವರೆಗೆ ಕಾಯ್ದಿಟ್ಟುಕೊಂಡು, ಆನಂತರ ಮಾರಾಟ ಮಾಡಿದರೆ ಅದನ್ನು ‘ಲಾಂಗ್‌ ಪೊಸಿಷನ್’ ಎಂದು ಕರೆಯಲಾಗುತ್ತದೆ

‘ಶಾರ್ಟ್‌ ಸೆಲ್ಲಿಂಗ್‌’

ಯಾವುದೇ ಷೇರು ಕುಸಿಯುತ್ತದೆ ಎಂಬುದು ತಾಂತ್ರಿಕ ವಿಶ್ಲೇಷಣೆಯಲ್ಲಿ ಗೊತ್ತಾದಾಗ, ಟ್ರೇಡರ್ ಅದನ್ನು ‘ಶಾರ್ಟ್‌ ಸೆಲ್‌’ ಮಾಡಲು ನಿರ್ಧರಿಸುತ್ತಾನೆ. ಈ ವಹಿವಾಟಿನಲ್ಲಿ ಷೇರುಗಳನ್ನು ಖರೀದಿಸುವ ಮುನ್ನವೇ ಮಾರಾಟ ಮಾಡಲಾಗುತ್ತದೆ. ಇದು ಅತ್ಯಂತ ಸಂಕೀರ್ಣವಾದ ಮತ್ತು ನಷ್ಟದ ಸಾಧ್ಯತೆ ಅತ್ಯಧಿಕವಾಗಿರುವ ವಹಿವಾಟು ವಿಧಾನ. ಶಾರ್ಟ್‌ ಸೆಲ್ಲಿಂಗ್‌ ವಹಿವಾಟು ಈ ರೀತಿ ನಡೆಯುತ್ತದೆ

1. ಒಂದು ಷೇರಿನ ಮೌಲ್ಯ ಕುಸಿಯುತ್ತದೆ ಎಂಬುದು ಗೊತ್ತಾದಾಗ, ಟ್ರೇಡರ್‌ ಒಬ್ಬ ಷೇರು ಮಾರುಕಟ್ಟೆ ಬ್ರೋಕರ್‌ನಿಂದ ಆ ಷೇರುಗಳನ್ನು ಸಾಲವಾಗಿ ಪಡೆಯುತ್ತಾನೆ. ಸಾಲವಾಗಿ ಪಡೆಯಲು ಷೇರಿನ ಮೌಲ್ಯದಷ್ಟು, ವಹಿವಾಟು ಶುಲ್ಕ, ಬಡ್ಡಿ ಮತ್ತು ಇತರ ಶುಲ್ಕಗಳಿಗಿಂತ ಸ್ವಲ್ಪ ಹೆಚ್ಚಿನ ಮೊತ್ತದ ಹಣವನ್ನು ಬ್ರೋಕರ್‌ ಬಳಿ ಭದ್ರತೆ ಇಡುತ್ತಾನೆ

2. ಹೀಗೆ ಸಾಲವಾಗಿ ಪಡೆದ ಷೇರುಗಳ ಮೌಲ್ಯ ಒಂದು ನಿಗದಿತ ಮೌಲ್ಯದಷ್ಟು ಕುಸಿದಾಗ ಟ್ರೇಡರ್, ಅವನ್ನು ಮಾರಾಟ ಮಾಡುತ್ತಾನೆ. ಅಲ್ಲಿಗೆ ಆತನ ವಹಿವಾಟು ಆರಂಭವಾಗುತ್ತದೆ. ಷೇರಿನ ಮೌಲ್ಯ ಕುಸಿದಷ್ಟೂ ಟ್ರೇಡರ್‌ಗೆ ಲಾಭವಾಗುತ್ತದೆ

3. ಒಂದು ಸೂಚಿತ ಮಟ್ಟಕ್ಕೆ ಷೇರುಗಳ ಮೌಲ್ಯ ಕುಸಿದಾಗ, ಟ್ರೇಡರ್ ಅವನ್ನು ಮಾರುಕಟ್ಟೆಯಿಂದ ಖರೀದಿಸುತ್ತಾನೆ. ಆತ ಮೊದಲು ಷೇರುಗಳನ್ನು ಮಾರಾಟ ಮಾಡಿದಾಗ ಇದ್ದ ಮೌಲ್ಯ ಮತ್ತು ಆತ ಅದೇ ಷೇರುಗಳನ್ನು ಖರೀದಿಸಿದಾಗ ಇದ್ದ ಮೌಲ್ಯದ ನಡುವಣ ವ್ಯತ್ಯಾಸವೇ ಲಾಭ

* ಶಾರ್ಟ್‌ ಸೆಲ್ಲಿಂಗ್‌ ವಹಿವಾಟು ನಿಗದಿತ ಅವಧಿಯ ‘ಕಾಂಟ್ರಾಕ್ಟ್‌’ಗಳ ಮೂಲಕ ನಡೆಯುತ್ತದೆ. ಶಾರ್ಟ್‌ ಸೆಲ್ಲಿಂಗ್‌ ವಹಿವಾಟಿನ ವೇಳೆ ಷೇರುಗಳನ್ನು ಮಾರಾಟ ಮಾಡುವಾಗ, ಅವುಗಳನ್ನು ಮತ್ತೆ ಖರೀದಿಸುವ ಷರತ್ತಿನೊಂದಿಗೇ ವಹಿವಾಟು ಆರಂಭಿಸಲಾಗಿರುತ್ತದೆ. ಟ್ರೇಡರ್‌ ಅವನ್ನು ಮರುಖರೀದಿಸದೇ ಇದ್ದರೆ, ನಿಗದಿತ ಅವಧಿಯೊಳಗೆ ಸ್ವಯಂಚಾಲಿತವಾಗಿ ಷೇರುಗಳ ಖರೀದಿ ನಡೆಯುತ್ತದೆ. ಈ ಅವಧಿಯನ್ನು ವಿಸ್ತರಿಸಬೇಕೆಂದರೆ, ಟ್ರೇಡರ್ ಹೆಚ್ಚುವರಿ ಶುಲ್ಕಗಳನ್ನು ಪಾವತಿಸಬೇಕಾಗುತ್ತದೆ

* ಭಾರತದಲ್ಲಿ ಶಾರ್ಟ್‌ ಸೆಲ್ಲಿಂಗ್‌ಗೆ ಕಠಿಣ ನಿಯಮಗಳಿವೆ. ಈಗ ಭಾರತದ ಷೇರು ಮಾರುಕಟ್ಟೆಯ ‘ಫ್ಯೂಚರ್ಸ್‌ ಮತ್ತು ಆಪ್ಷನ್ಸ್‌’ ಮಾರುಕಟ್ಟೆಯಲ್ಲಷ್ಟೇ ಶಾರ್ಟ್‌ ಸೆಲ್ಲಿಂಗ್‌ಗೆ ಅವಕಾಶವಿದೆ. ಈ ಸ್ವರೂಪದ ವಹಿವಾಟಿನಲ್ಲಿ ಹೂಡಿಕೆ ಮಾಡಲು ದೊಡ್ಡ ಮೊತ್ತದ ಬಂಡವಾಳದ ಅಗತ್ಯವಿರುವ ಕಾರಣ, ಸಣ್ಣ–ಪುಟ್ಟ ಟ್ರೇಡರ್‌ಗಳು ಶಾರ್ಟ್‌ ಸೆಲ್ಲಿಂಗ್‌ ನಡೆಸುವುದಿಲ್ಲ

* ಶಾರ್ಟ್‌ ಸೆಲ್ಲಿಂಗ್‌ ವೇಳೆ ಷೇರಿನ ಮೌಲ್ಯ ಕುಸಿಯುವ ಬದಲು ಏರಿಕೆಯಾಗಿಬಿಟ್ಟರೆ ಟ್ರೇಡರ್‌ ನಷ್ಟ ಅನುಭವಿಸಬೇಕಾಗುತ್ತದೆ. ಮೌಲ್ಯ ಕುಸಿತವೂ ನಿರೀಕ್ಷಿತ ಮಟ್ಟದಲ್ಲಿ ಆಗದೇ ಇದ್ದರೆ, ವಹಿವಾಟಿನಲ್ಲಿ ಗಳಿಸಿದ ಹಣವು ಬ್ರೋಕರ್ ಶುಲ್ಕ, ಮಾರುಕಟ್ಟೆ ಶುಲ್ಕ, ಬಡ್ಡಿ ಮೊದಲಾದವುಗಳಿಗೇ ವೆಚ್ಚವಾಗುತ್ತದೆ. ಅಂತಿಮವಾಗಿ ನಷ್ಟದ ಸಾಧ್ಯತೆ ಅತ್ಯಧಿಕವಾಗಿರುತ್ತದೆ. ಈ ಕಾರಣದಿಂದಲೂ ಬಹುತೇಕ ಟ್ರೇಡರ್‌ಗಳು ಶಾರ್ಟ್‌ ಸೆಲ್ಲಿಂಗ್‌ನ ವಹಿವಾಟು ನಡೆಸುವುದಿಲ್ಲ

 

ಆಧಾರ: ಸೆಬಿ, ಪಿಟಿಐ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು