ಬುಧವಾರ, ನವೆಂಬರ್ 25, 2020
26 °C

ಆಳ–ಅಗಲ: ಅಧಿಕಾರಿಗಳ ರಾಜಕೀಯ ಮೋಹ

ಪ್ರಜಾವಾಣಿ ವಿಶೇಷ Updated:

ಅಕ್ಷರ ಗಾತ್ರ : | |

Prajavani

ಕರ್ನಾಟಕ ಕೇಡರ್‌ನ ಐಎಎಸ್‌ ಅಧಿಕಾರಿಯಾಗಿದ್ದ ಸಸಿಕಾಂತ್‌ ಸೆಂಥಿಲ್‌ ಅವರು ಕಾಂಗ್ರೆಸ್‌ ಪಕ್ಷಕ್ಕೆ ಸೇರಿದ್ದಾರೆ. ಕರ್ನಾಟಕ ಕೇಡರ್‌ನ ಐಪಿಎಸ್‌ ಅಧಿಕಾರಿಯಾಗಿದ್ದ ಅಣ್ಣಾಮಲೈ ಕುಪ್ಪುಸ್ವಾಮಿ ಅವರು ಕೆಲ ತಿಂಗಳ ಹಿಂದೆ ಬಿಜೆಪಿ ಸೇರಿದ್ದಾರೆ. ಈ ಇಬ್ಬರೂ ಕರ್ತವ್ಯದಲ್ಲಿದ್ದಾಗ ಹೆಚ್ಚು ಪ್ರಚಾರ ಪಡೆದುಕೊಂಡಿದ್ದವರು. ಸರಿ ಸುಮಾರು ಒಂದೇ ಸಮಯದಲ್ಲಿ ಸರ್ಕಾರದ ಉನ್ನತ ಹುದ್ದೆ ಬಿಟ್ಟು ರಾಜಕೀಯ ಸೇರಿದ್ದಾರೆ.

ಸರ್ಕಾರಿ ಅಧಿಕಾರಿಗಳಾಗಿದ್ದವರು ತಮ್ಮ ಕೆಲಸಕ್ಕೆ ರಾಜೀನಾಮೆ ಕೊಟ್ಟು ರಾಜಕೀಯಕ್ಕೆ ಧುಮುಕುವುದು ಹೊಸ ಸುದ್ದಿ ಏನಲ್ಲ. ಹೀಗೆ ಬಂದವರಲ್ಲಿ ಹಲವರು ಕೆಲವೇ ವರ್ಷಗಳಲ್ಲಿ ಜನಮಾನಸದಿಂದ ಮರೆಯಾಗಿ ಹೋದ ಉದಾಹರಣೆಗಳಿವೆ. ಜತೆಗೇ, ಕೆಲವರು ಬಹುದೊಡ್ಡ ಎತ್ತರಕ್ಕೆ ಏರಿದ ನಿದರ್ಶನಗಳೂ ಇವೆ. ಯಶವಂತ ಸಿನ್ಹಾ ಅವರದ್ದು ಅಂತಹ ಒಂದು ಉದಾಹರಣೆ. ಅಟಲ್‌ ಬಿಹಾರಿ ವಾಜಪೇಯಿ ನೇತೃತ್ವದ ಎನ್‌ಡಿಎ ಸರ್ಕಾರ ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಅವಧಿಯಲ್ಲಿ ಸಿನ್ಹಾ ಅವರು ಅತ್ಯಂತ ಪ್ರಭಾವಿ ರಾಜಕಾರಣಿಗಳಲ್ಲಿ ಒಬ್ಬರಾಗಿದ್ದರು. ಸರ್ಕಾರಿ ಕೆಲಸ ತೊರೆದು ರಾಜಕಾರಣಕ್ಕಿಳಿದು ಉನ್ನತ ಹುದ್ದೆಗೇರಿದವರ ಪಟ್ಟಿಯಲ್ಲಿ ಛತ್ತೀಸಗಡ ಮುಖ್ಯಮಂತ್ರಿಯಾಗಿದ್ದ ಅಜಿತ್‌ ಜೋಗಿ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರೂ ಇದ್ದಾರೆ. 

ನಮ್ಮ ದೇಶದಲ್ಲಿ ಸರ್ಕಾರಿ ಕೆಲಸ ದೊರಕುವುದೇ ದೊಡ್ಡ ಸಾಧನೆ ಎಂದು ಭಾವಿಸಲಾಗುತ್ತದೆ. ಕೇಂದ್ರ ಲೋಕಸೇವಾ ಆಯೋಗ ನಡೆಸುವ ನಾಗರಿಕ ಸೇವೆ ಪರೀಕ್ಷೆ ಮತ್ತು ರಾಜ್ಯ ಲೋಕಸೇವಾ ಆಯೋಗಗಳು ನಡೆಸುವ ಪರೀಕ್ಷೆಗಳಲ್ಲಿ ಆಯ್ಕೆ ಆಗುವುದು ಬಹುದೊಡ್ಡ ಪ್ರತಿಷ್ಠೆಯ ವಿಚಾರ. ಹೀಗೆ ಆಯ್ಕೆ ಆಗಿ ಕೆಲಸಕ್ಕೆ ಸೇರಿದವರಿಗೆ ಅಪಾರ ಅಧಿಕಾರ ಮತ್ತು ಗೌರವಗಳು ಸಿಗುತ್ತವೆ. ಜನರ ಒಳಿತಿಗಾಗಿ ಕೆಲಸ ಮಾಡುವ ದೊಡ್ಡ ಅವಕಾಶವೂ ಇರುತ್ತದೆ. ಹಾಗಿದ್ದರೂ ಇಂತಹ ಹುದ್ದೆಗಳನ್ನು ತೊರೆದು ರಾಜಕೀಯಕ್ಕೆ ಏಕೆ ಹೋಗುತ್ತಾರೆ ಎಂಬ ಪ್ರಶ್ನೆಗೆ ಇಂತಹುದೇ ಎಂಬ ಉತ್ತರ ದೊರಕುವುದು ಸಾಧ್ಯವಿಲ್ಲ.

ತಮಗಿರುವ ಅಧಿಕಾರದಿಂದಲೇ ಜನಪ್ರೀತಿ ಗಳಿಸುವ ಈ ಅಧಿಕಾರಿಗಳು ರಾಜಕೀಯಕ್ಕೆ ಬಂದಾಗ ಅದನ್ನೇ ಬಂಡವಾಳ ಮಾಡಿಕೊಳ್ಳುವ ಸಾಧ್ಯತೆಯೂ ಇದೆ. ಅದಲ್ಲದೆ, ಅಧಿಕಾರದಲ್ಲಿ ಇದ್ದಾಗ ಯಾವುದೋ ಒಂದು ಪಕ್ಷದ ಪರವಾಗಿ ಮಾಡಿದ ಕೆಲಸಕ್ಕೆ ಬಳುವಳಿಯಾಗಿ ಚುನಾವಣೆಯಲ್ಲಿ ಸ್ಪರ್ಧಿಸಲು ಆ ಪಕ್ಷ ಟಿಕೆಟ್‌ ನೀಡಲೂಬಹುದು. ಇಂತಹ ನೈತಿಕ ಪ್ರಶ್ನೆಗಳು ಯಾವಾಗಿನಿಂದಲೂ ಇವೆ. 

ಸರ್ಕಾರಿ ಅಧಿಕಾರಿಯೊಬ್ಬರು ಚುನಾವಣೆಯಲ್ಲಿ ಸ್ಪರ್ಧಿಸಬೇಕಿದ್ದರೆ, ಕರ್ತವ್ಯದಿಂದ ಹೊರಗೆ ಬಂದು ನಿರ್ದಿಷ್ಟ ಅವಧಿ ಆಗಿರಬೇಕು ಎಂಬ ನಿಯಮ ರೂಪಿಸುವ ಅಗತ್ಯ ಇದೆ ಎಂದು ಚುನಾವಣಾ ಆಯೋಗವು 2012ರಲ್ಲಿ ಕೇಂದ್ರ ಸರ್ಕಾರಕ್ಕೆ ಶಿಫಾರಸು ಸಲ್ಲಿಸಿತ್ತು. ತಮ್ಮ ಕರ್ತವ್ಯದ ಕೊನೆಯ ಅವಧಿಯಲ್ಲಿ ಅವರು ಯಾವುದೇ ರಾಜಕೀಯ ಪಕ್ಷದ ಪರವಾಗಿ ಕೆಲಸ ಮಾಡಬಾರದು ಎಂಬುದು ಈ ಶಿಫಾರಸಿನ ಉದ್ದೇಶವಾಗಿತ್ತು. ಆದರೆ ಇದು ಸಂವಿಧಾನವು ನೀಡಿರುವ ಸಮಾನತೆಯ ಹಕ್ಕಿನ ಉಲ್ಲಂಘನೆ ಆಗುತ್ತದೆ ಎಂಬ ಕಾರಣಕ್ಕೆ ಸರ್ಕಾರ ಅದನ್ನು ಮಾನ್ಯ ಮಾಡಲಿಲ್ಲ.

ಈಸಿ ಜೈಸಿದವರು

ಅಧಿಕಾರಿಗಳು ಸರ್ಕಾರಿ ಹುದ್ದೆ ತ್ಯಜಿಸಿ ರಾಜಕೀಯ ಸೇರುವ ಪ್ರವೃತ್ತಿ ಈಗಿನದ್ದಲ್ಲ. ಅಜಿತ್ ಜೋಗಿ ಅವರು 1968ನೇ ಬ್ಯಾಚಿನ ಐಎಎಸ್ ಅಧಿಕಾರಿಯಾಗಿದ್ದವರು. ರಾಜೀವ್‌ಗಾಂಧಿ ಅವರ ಆಪ್ತವಲಯದಲ್ಲಿ ಗುರುತಿಸಿಕೊಂಡಿದ್ದ ಅವರು ಛತ್ತೀಸಗಡದ ಮೊದಲ ಮುಖ್ಯಮಂತ್ರಿ ಹುದ್ದೆಗೇರಿದರು. ಭ್ರಷ್ಟಾಚಾರ ಪ್ರಕರಣಗಳಿಂದಾಗಿ 2016ರಲ್ಲಿ ಪಕ್ಷ ಅವರನ್ನು ಹೊರಹಾಕಿತು.


ಅಜಿತ್ ಜೋಗಿ

ಹಿರಿಯ ರಾಜಕಾರಣಿ ಯಶವಂತ್ ಸಿನ್ಹಾ ಅವರು 1960ನೇ ಬ್ಯಾಚಿನ ಐಎಎಸ್ ಅಧಿಕಾರಿ. 1984ವರೆಗೂ ಅಧಿಕಾರದಲ್ಲಿದ್ದ ಅವರು, ಜನತಾದಳ ಸರ್ಕಾರದಲ್ಲಿ ಹಣಕಾಸು ಸಚಿವರಾಗಿ ಕೇಂದ್ರ ಸಂಪುಟ ಸೇರಿದ್ದರು. ಬಳಿಕ ಬಿಜೆಪಿಗೆ ಹೋದ ಅವರು ಈಗ ಯಾವ ಪಕ್ಷದ ಜೊತೆಗೂ ಗುರುತಿಸಿಕೊಂಡಿಲ್ಲ.

ಲೋಕಸಭೆಯ ಮೊದಲ ಮಹಿಳಾ ಸ್ಪೀಕರ್ ಆಗಿದ್ದ ಮೀರಾ ಕುಮಾರ್ ಅವರು 1973ರಲ್ಲಿ ಐಎಫ್‌ಎಸ್ ಅಧಿಕಾರಿಯಾಗಿದ್ದವರು. ರಾಮ್‌ವಿಲಾಸ್ ಪಾಸ್ವಾನ್, ಮಾಯಾವತಿ ಅಂತಹ ನಾಯಕರನ್ನು ಸೋಲಿಸಿದ ಹೆಗ್ಗಳಿಕೆ ಇವರದ್ದು. ಕಾಂಗ್ರೆಸ್ ಸರ್ಕಾರದಲ್ಲಿ ಕೇಂದ್ರ ಸಚಿವರಾಗಿದ್ದರು.


ಮೀರಾ ಕುಮಾರ್

ಲಾಹೋರ್‌ನಲ್ಲಿ ಜನಿಸಿದ ಮಣಿಶಂಕರ್ ಅಯ್ಯರ್ ಅವರು 1963ರಲ್ಲಿ ಐಎಫ್‌ಎಫ್ ಸೇರಿದರು. ರಾಜಕೀಯ ಸೇರುವ ಹಂಬಲದಿಂದ ನಿವೃತ್ತಿ ಪಡೆದು, 1991ರಲ್ಲಿ ತಮಿಳುನಾಡಿನಿಂದ ಸ್ಪರ್ಧಿಸಿದರು. ಕೇಂದ್ರ ಸರ್ಕಾರದಲ್ಲಿ ಮಹತ್ವದ ಹುದ್ದೆಗಳನ್ನು ನಿಭಾಯಿಸಿದ್ದಾರೆ.

1953ನೇ ಸಾಲಿನ ಐಎಫ್‌ಎಸ್ ಅಧಿಕಾರಿಯಾಗಿದ್ದ ನಟವರ್ ಸಿಂಗ್ ಅವರು 31 ವರ್ಷ ಸೇವೆ ಸಲ್ಲಿಸಿದ ಬಳಿಕ 1984ರಲ್ಲಿ ಕಾಂಗ್ರೆಸ್ ಸೇರ್ಪಡೆಯಾದರು. ವಿದೇಶಾಂಗ ಸಚಿವರಾಗಿ ಅವರು ಹೆಚ್ಚು ಖ್ಯಾತಿ ಪಡೆದಿದ್ದರು.


ನಟವರ್ ಸಿಂಗ್

ದೆಹಲಿಯ ಹಾಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಭಾರತೀಯ ಕಂದಾಯ ಸೇವೆಯ 1992ನೇ ಬ್ಯಾಚಿನ ಅಧಿಕಾರಿ. ಮಾಹಿತಿ ಹಕ್ಕುಗಳಿಗಾಗಿ ಅಭಿಯಾನ ಶುರು ಮಾಡಿದ ಅವರು ಅಣ್ಣಾ ಹಜಾರೆ ಜತೆ ಸೇರಿ ಲೋಕಪಾಲ‌ ಮಸೂದೆಗಾಗಿ ಧರಣಿ ಕುಳಿತರು. 2012ರಲ್ಲಿ ಆಮ್ ಆದ್ಮಿ ಪಕ್ಷ ಕಟ್ಟಿದ ಅವರು ಮರು ವರ್ಷ ನಡೆದ ಚುನಾವಣೆಯಲ್ಲಿ ಮಹತ್ವದ ಹೆಜ್ಜೆಗುರುತು ಮೂಡಿಸಿದರು. ಮುಖ್ಯಮಂತ್ರಿ ಗದ್ದುಗೆಯನ್ನೂ ಏರಿದರು.


ಅರವಿಂದ ಕೇಜ್ರಿವಾಲ್

ಕೇಂದ್ರ ಸಚಿವರಾಗಿರುವ ಹರ್‌ದೀಪ್‌ಸಿಂಗ್ ಪುರಿ, ರಾಜ್‌ಕುಮಾರ್ ಸಿಂಗ್, ಸತ್ಯಪಾಲ್ ಸಿಂಗ್ ಅವರೂ ಸರ್ಕಾರಿ ಸೇವೆಯ ಬಳಿಕ ರಾಜಕೀಯಕ್ಕೆ ಇಳಿದು ಯಶಸ್ವಿಯಾಗಿದ್ದಾರೆ.

ಕೆಲಸದ ವ್ಯಾಪ್ತಿ ವಿಸ್ತಾರ

ಸರ್ಕಾರಿ ಅಧಿಕಾರಿ ಆಗಿದ್ದರೆ ಒಂದು ಸೀಮಿತ ವ್ಯಾಪ್ತಿಯಲ್ಲಿ ಕೆಲಸ ಮಾಡಬೇಕಾಗುತ್ತದೆ. ಅದೇ ರಾಜಕಾರಣಕ್ಕೆ ಬಂದು ಶಾಸಕ ಅಥವಾ ಸಂಸದನಾಗಿ ಆಯ್ಕೆಯಾದರೆ ಕೆಲಸದ ವ್ಯಾಪ್ತಿ ವಿಸ್ತಾರವಾಗುತ್ತದೆ. ನಮ್ಮ ವೃತ್ತಿಯ ಅನುಭವವನ್ನೂ ರಾಜಕಾರಣದಲ್ಲಿ ಬಳಸುವುದಕ್ಕೆ ಅವಕಾಶ ಇದೆ. ಇದೇ ಕಾರಣಕ್ಕೆ ರಾಜಕೀಯಕ್ಕೆ ಬಂದೆ.

ನಾನು ಸಮಾಜ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಯಾಗಿದ್ದೆ. ಸಮಾಜಮುಖಿಯಾಗಿ ಇನ್ನಷ್ಟು ಹೆಚ್ಚು ಕೆಲಸ ಮಾಡಬೇಕು ಎಂದು ಹುದ್ದೆ ತೊರೆದು ರಾಜಕೀಯಕ್ಕೆ ಧುಮುಕಿದೆ. 20 ವರ್ಷಗಳ ನಂತರ ಶಾಸಕನಾಗಿ ಆಯ್ಕೆಯಾಗಿದ್ದೇನೆ. ಮೊದಲು ಸಮಾಜ ಕಲ್ಯಾಣ ಇಲಾಖೆಗೆ ಮಾತ್ರ ನಾನು ಸೀಮಿತನಾಗಿದ್ದೆ. ಈಗ ಎಲ್ಲ 36 ಇಲಾಖೆಗಳ ಬಗ್ಗೆಯೂ ಗಮನಹರಿಸುವುದಕ್ಕೆ ಅವಕಾಶ ಸಿಕ್ಕಿದೆ.

ಸರ್ಕಾರಿ ಕೆಲಸ ತೊರೆದು ರಾಜಕೀಯಕ್ಕೆ ಬಂದ ಎಲ್ಲರೂ ನನ್ನಷ್ಟು ಹೋರಾಟ ಮಾಡಬೇಕು ಎಂದಿಲ್ಲ. ಕಾಂಗ್ರೆಸ್‌, ಬಿಜೆಪಿಗೆ ಸೇರ್ಪಡೆಗೊಂಡು ಅದೃಷ್ಟ ಚೆನ್ನಾಗಿದ್ದರೆ, ಚುನಾವಣೆಯಲ್ಲಿ ಬೇಗನೇ ಗೆಲ್ಲಬಹುದು. ಆದರೆ, ಒಂದಂತೂ ನಿಜ. ರಾಜಕೀಯ ಪಕ್ಷಗಳ ಒಳಗಡೆ ಕೆಲಸ ಮಾಡುವುದು ಸುಲಭ ಏನಿಲ್ಲ. ಏನು ಅಂದುಕೊಳ್ಳುತ್ತೇವೆಯೋ ಅದನ್ನು ಮಾಡುವುದಕ್ಕೆ ಆಗುವುದಿಲ್ಲ. ಹಾಗಾಗಿ, ನಿರಾಸೆ ಅನುಭವಿಸುವ ಸಂದರ್ಭವೂ ಇರುತ್ತದೆ.

– ಎನ್‌.ಮಹೇಶ್‌, ಕೊಳ್ಳೇಗಾಲ ಶಾಸಕ

ಅಧಿಕಾರಶಾಹಿಯ ರಾಜಕೀಕರಣ

ಅಧಿಕಾರಿಗಳಿಗೆ ಜನಸೇವೆ ಮಾಡುವ ಮಹತ್ವಾಕಾಂಕ್ಷೆ ಅಥವಾ ಇನ್ಯಾವುದೋ ಉದ್ದೇಶ ಇರಬಹುದು ಅಥವಾ ಇಲ್ಲದಿರಬಹುದು. ಆದರೆ ಇತ್ತೀಚೆಗೆ ಕಿರಿ ವಯಸ್ಸಿನ ಐಎಎಸ್‌, ಐಪಿಎಸ್‌ ಅಧಿಕಾರಿಗಳು ಹುದ್ದೆ ತ್ಯಜಿಸಿ, ರಾಜಕೀಯ ಪ್ರವೇಶಿಸುವ ಪ್ರಮಾಣ ಹೆಚ್ಚಾಗುತ್ತಿರುವುದು, ನಮ್ಮ ವ್ಯವಸ್ಥೆಯಲ್ಲಿ ಅಧಿಕಾರಶಾಹಿಯ ರಾಜಕೀಕರಣ ಎಷ್ಟು ಆಳವಾಗಿದೆ ಎಂಬುದನ್ನು ಸಂಕೇತಿಸುತ್ತಿದೆ.

ಇದು ಈಚಿನ ವರ್ಷಗಳಲ್ಲಿ ಆಗಿರುವ ಬದಲಾವಣೆಯಲ್ಲ, ಹಲವು ವರ್ಷಗಳಿಂದ ಆಗುತ್ತಿರುವ ಅಪಾಯಕಾರಿ ಬೆಳವಣಿಗೆ. ಪ್ರಜಾಪ್ರಭುತ್ವದಲ್ಲಿ ಯಾವುದೇ ಪಕ್ಷ ಅಧಿಕಾರದಲ್ಲಿ ಇದ್ದರೂ ಕಾರ್ಯಾಂಗ, ನ್ಯಾಯಾಂಗ ಮತ್ತು ಮಾಧ್ಯಮ ಕ್ಷೇತ್ರಗಳಿಂದ ಜನತೆ ಸ್ಥಿರತೆ, ಗಾಂಭೀರ್ಯ ಹಾಗೂ ವಸ್ತುನಿಷ್ಠೆ ನಿರೀಕ್ಷಿಸಬೇಕು. ಪರಿಸ್ಥಿತಿ ಈಗ ಬದಲಾಗಿದೆ. ಸೇವೆಯಲ್ಲಿರುವ ಕೆಲವು ಅಧಿಕಾರಿಗಳ ಟ್ವೀಟ್‌ಗಳು, ಅವರು ನೀಡುವ ಹೇಳಿಕೆಗಳನ್ನು ನೋಡಿದರೆ ಅವರ ಉದ್ದೇಶವೇನು, ಯಾರನ್ನು ಮೆಚ್ಚಿಸುತ್ತಿದ್ದಾರೆ ಎಂಬುದು ಸ್ಪಷ್ಟವಾಗುತ್ತದೆ. ಸರ್ಕಾರಕ್ಕೆ ಹಿತವಾಗುವಂತೆ ಮಾತನಾಡುವುದು, ಅನಗತ್ಯ ಪೌರುಷ ಪ್ರದರ್ಶನ ಮುಂತಾದವು ನಡೆಯುತ್ತಿವೆ. ಇದರಿಂದಾಗಿ ಜನರು ವ್ಯವಸ್ಥೆಯ ಮೇಲಿನ ವಿಶ್ವಾಸವನ್ನು ಕಳೆದುಕೊಳ್ಳುವಂತಾಗಿದೆ.

ರಾಜಕೀಯ ವ್ಯವಸ್ಥೆಯ ಜತೆಯಲ್ಲೇ ಇರುವ ಅಧಿಕಾರಿಗಳು, ಅದರ ಲಾಭವನ್ನು ಪಡೆದುಕೊಳ್ಳುತ್ತಿದ್ದಾರಾ ಎಂಬ ಸಂಶಯ ಹುಟ್ಟುತ್ತದೆ. ಟಿ.ಎನ್‌. ಚತುರ್ವೇದಿ ಸಿಎಜಿ ಆಗಿದ್ದ ಕಾಲದಲ್ಲಿ ಬೊಫೋರ್ಸ್‌ ಹಗರಣ ಬೆಳಕಿಗೆ ಬಂದಿತ್ತು. ಇದು ರಾಜೀವ್ ಗಾಂಧಿ ಸರ್ಕಾರವನ್ನು ಉರುಳಿಸಲು ಬಿಜೆಪಿಗೆ ಉಪಯೋಗವಾಯಿತು. ಚತುರ್ವೇದಿ ಅವರು ನಿವೃತ್ತಿಹೊಂದಿದ ಬಳಿಕ ಬಿಜೆಪಿ ಸೇರಿ, ಕರ್ನಾಟಕದ ರಾಜ್ಯಪಾಲರೂ ಆಗಿದ್ದರು. ಐಆರ್‌ಎಸ್ ಅಧಿಕಾರಿ ಅರವಿಂದ ಕೇಜ್ರಿವಾಲ್ ಈಗ ಮುಖ್ಯಮಂತ್ರಿ. ನಿವೃತ್ತ ಅಧಿಕಾರಿಗಳು ರಾಜಕೀಯ ಪ್ರವೇಶ ಪಡೆದಿರುವ ಉದಾಹರಣೆ ನಮ್ಮಲ್ಲೂ ಸಾಕಷ್ಟು ಇವೆ.

ಸರ್ಕಾರಿ ಸೇವೆಯಲ್ಲಿದ್ದ ಅಧಿಕಾರಿಗಳು ನಿವೃತ್ತಿ ಹೊಂದಿದ ಬಳಿಕ ಸ್ವಲ್ಪ ಕಾಲದವರೆಗೆ ಬೇರೆ ಯಾವುದೇ ಖಾಸಗಿ ಸಂಸ್ಥೆಯನ್ನು ಸೇರಬಾರದು ಎಂಬ ವ್ಯವಸ್ಥೆ ಹಿಂದೆ ಜಾರಿಯಲ್ಲಿತ್ತು. ಈಗ ಅದನ್ನು ರಾಜಕೀಯಕ್ಕೂ ವಿಸ್ತರಿಸುವ ಅಗತ್ಯ ಕಾಣಿಸುತ್ತಿದೆ. ಅಧಿಕಾರಶಾಹಿಯಲ್ಲಿ ಹೆಚ್ಚುತ್ತಿರುವ ರಾಜಕೀಕರಣದ ಬಗ್ಗೆ ಐಎಎಸ್‌, ಐಪಿಎಸ್‌ ಅಧಿಕಾರಿಗಳ ಸಂಘಟನೆಗಳು ಧ್ವನಿ ಎತ್ತಬೇಕಾಗಿದೆ.

–ಕೃಷ್ಣಪ್ರಸಾದ್‌, ಹಿರಿಯ ಪತ್ರಕರ್ತ

ಯಾರೂ ತುಳಿಯದ ಹಾದಿಯಲ್ಲಿ...

‘ರಾಬರ್ಟ್‌ ಫ್ರಾಸ್ಟ್‌’ನ ‘ರೋಡ್‌ ನಾಟ್‌ ಟೇಕನ್‌’ ಪದ್ಯದ ನಿರೂಪಕನಂತೆ ನಾನು ಯಾರೂ ತುಳಿಯದ ಹಾದಿಯನ್ನೇ ತುಳಿದಿದ್ದೇನೆ. ಅದಕ್ಕೆ ಗಟ್ಟಿ ಧೈರ್ಯಬೇಕು. ನಿರೀಕ್ಷಿತ ಫಲಿತಾಂಶ ಬರುವವರೆಗೂ ದೀರ್ಘಕಾಲ ಸಹನೆಯಂತೂ ಬೇಕು. ನನ್ನ ಆಶಯವನ್ನು ಗೌರವಿಸಿ ಪರ್ಯಾಯ ರಾಜಕಾರಣದಲ್ಲಿ ನಡೆಯುವ ಸಹಪಥಿಕರಿಗಾಗಿ ಹುಡುಕಾಟ ನಡೆಸುತ್ತಲೇ ನಡೆದಿದ್ದೇನೆ.

ಐಪಿಎಸ್‌ ಅಧಿಕಾರಿಯಾಗಿದ್ದ ಅಣ್ಣಾಮಲೈ ಬಿಜೆಪಿ, ಐಎಎಸ್‌ ಅಧಿಕಾರಿಯಾಗಿದ್ದ ಸಸಿಕಾಂತ್‌ ಸೆಂಥಿಲ್‌ ಕಾಂಗ್ರೆಸ್‌ ಸೇರಿದರೂ ನಾನು ಒಬ್ಬ ಮಹಿಳೆಯಾಗಿ ನನ್ನದೇ ಪಕ್ಷದ ನೆಲೆಯನ್ನು ನೆಚ್ಚಿಕೊಂಡು ನಿಂತಿದ್ದೇನೆ. ಇಂಥ ಸಮಯದಲ್ಲಿ ಎಲ್ಲಿ ಹೋದರೂ ‘ಪೊಲೀಸ್‌ ಅಧಿಕಾರಿ ಕೆಲಸನ್ನು ಏಕೆ ಬಿಟ್ಟಿರಿ, ಪಕ್ಷ ಕಟ್ಟಿ ಏನು ಸಾಧನೆ ಮಾಡಿದ್ದೀರಿ’ ಎಂಬ ಪ್ರಶ್ನೆಗಳು ಮೊದಲು ತೂರಿ ಬರುತ್ತವೆ.

ಈ ಪ್ರಶ್ನೆ ನನ್ನನ್ನೂ ಕಾಡುತ್ತದೆ. ಒಮ್ಮೊಮ್ಮೆ ಗೊಂದಲವೂ ಆಗುತ್ತದೆ. ಆದರೆ ಅಧಿಕಾರಿಯ ಕೆಲಸಕ್ಕೆ ರಾಜೀನಾಮೆ ಕೊಡುವಾಗ ರಾಜಕೀಯಕ್ಕೆ ಬರಬೇಕೆಂಬ ಆಲೋಚನೆ ಕಿಂಚಿತ್ತೂ ಇರಲಿಲ್ಲ. ಬೇರೆ ಏನು ಮಾಡಬಹುದು ಎಂದು ಪರ್ಯಾಯಗಳ ಬಗ್ಗೆ ಕುಳಿತು ಚಿಂತಿಸಿದಾಗ ರಾಜಕಾರಣದಲ್ಲಿ ಮುಂದುವರಿಯಬಹುದು ಎಂದು ಬಲವಾಗಿ ಅನ್ನಿಸಿದ್ದರಿಂದಲೇ ಹೆಜ್ಜೆ ಶುರುವಿಟ್ಟೆ.

ಸರ್ಕಾರಿ ಕೆಲಸಕ್ಕೆ ರಾಜೀನಾಮೆ ಕೊಟ್ಟಿದ್ದರಿಂದ ಪ್ರತಿ ತಿಂಗಳು ನಿಯಮಿತವಾಗಿ ಸಂಬಳ ಬರುವುದಿಲ್ಲ ಎಂಬ ಚಿಂತೆ ಬಿಟ್ಟರೆ ನಾನು ನನ್ನಂತೆಯೇ ನಡೆಯಲು ಸ್ವತಂತ್ರಳಾಗಿದ್ದೇನೆ. ಯಾವುದೇ ನೆಲೆಯಿಂದ ಏನನ್ನಾದರೂ ಆರಂಭಿಸಬಹುದು.

ಈಗ ಪ್ರಧಾನಧಾರೆಯ ಮೂರು ಪಕ್ಷಗಳನ್ನು ಬಿಟ್ಟು ಹೊಸ ಪಕ್ಷ ಕಟ್ಟುತ್ತಿದ್ದೇನೆ. ರಾಜಕೀಯ ಈಗ ಗಂಡಸರ ಕ್ಷೇತ್ರ. ಅಲ್ಲಿ ಹೆಣ್ಣೊಬ್ಬಳ ಮುಂದಾಳತ್ವವನ್ನು ಒಪ್ಪಿ ಬರುವ ಮನಸ್ಥಿತಿ ಉಳ್ಳವರು ಕಡಿಮೆ. ಅಂಥವರು ಬಂದರೂ ಅವರಿಗೆ ಸಹನೆ ಹೆಚ್ಚು ಬೇಕು. ಈಗ ಅಲ್ಲಿ ಅಪರೂಪವಾಗಿರುವ ಪ್ರಾಮಾಣಿಕತೆ, ಪಾರದರ್ಶಕತೆಯಂತೂ ಬೇಕೇಬೇಕು.

ಒಂದು ಕಠಿಣ ಹಾದಿಯಲ್ಲಿ ನಡೆಯಲು, ಅದಕ್ಕೆ ಪೂರ್ವಸಿದ್ಧತೆ ಮಾಡಿಕೊಳ್ಳುವುದರ ಕುರಿತು ಪೊಲೀಸ್‌ ಇಲಾಖೆಯೇ ನನಗೆ ಕಲಿಸಿದೆ. ಆ ಪಾಠಗಳನ್ನು ಮರೆತಿಲ್ಲ. ಈಗ ನಾನು ಕಾನೂನು ವಿದ್ಯಾರ್ಥಿಯೂ ಹೌದು.

ಜನರಿಗೆ ರಾಜಕೀಯ ಪಕ್ಷಗಳ ಆಯ್ಕೆಯ ಅವಕಾಶಗಳು ಹೆಚ್ಚಾಗಬೇಕು. ಅದಕ್ಕೆ ನನ್ನ ಪಕ್ಷದ ಸ್ಥಾಪನೆಯೊಂದು ಮುನ್ನುಡಿ ಅಷ್ಟೇ. ಹಿಂದೆ ಸರಿಯುವ ಪ್ರಶ್ನೆ ಇಲ್ಲ.

- ಅನುಪಮಾ ಶೆಣೈ, ಡಿವೈಎಸ್‌ಪಿ ಹುದ್ದೆಗೆ ರಾಜೀನಾಮೆ ನೀಡಿ ರಾಜಕೀಯಕ್ಕೆ ಬಂದವರು

ಅಧಿಕಾರಿಯಾಗಿದ್ದಾಗಲೇ ಪಕ್ಷದ ಗುಲಾಮರು

ಐಎಎಸ್‌ ಹಾಗೂ ಐಪಿಎಸ್‌ ಅಧಿಕಾರಿಗಳು ರಾಜೀನಾಮೆ ನೀಡಿ ರಾಜಕೀಯ ಪಕ್ಷ ಸೇರುವುದಕ್ಕೆ ನನ್ನ ಸ್ಪಷ್ಟ ವಿರೋಧ ಇದೆ. ಏಕೆಂದರೆ, ಈ ಅಧಿಕಾರಿಗಳು 50–55 ವರ್ಷದವರೆಗೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಆಗಿರುತ್ತಾರೆ. ಜಿಲ್ಲಾ ಚುನಾವಣಾಧಿಕಾರಿಗಳಾಗಿ ಚುನಾವಣೆ ನಡೆಸುವವರು ಇವರೇ. ಸ್ವಲ್ಪ ಸಮಯದಲ್ಲೇ ಸ್ವಯಂನಿವೃತ್ತಿ ಪಡೆದು ರಾಜಕೀಯ ಪಕ್ಷಕ್ಕೆ ಸೇರ್ಪಡೆಯಾಗುತ್ತಾರೆ. ಅಂದರೆ ಇವರು ಮೊದಲೇ ನಿರ್ದಿಷ್ಟ ಪಕ್ಷವೊಂದಕ್ಕೆ ಮಾನಸಿಕವಾಗಿ ಗುಲಾಮರಾಗಿದ್ದರು ಎಂಬುದು ಸ್ಪಷ್ಟ. ಅಧಿಕಾರಿಯಾಗಿದ್ದಾಗಲೇ ಪಕ್ಷ ಸೇರ್ಪಡೆಗೆ ಮಾನಸಿಕವಾಗಿ ಸಿದ್ಧತೆ ಮಾಡಿಕೊಂಡಿರುತ್ತಾರೆ. ಆ ಪಕ್ಷದ ಪರವಾಗಿ ಒಲವು, ಮಮತೆ ಹೊಂದಿರುತ್ತಾರೆ. ಹೀಗಿರುವಾಗ ಚುನಾವಣೆಗಳನ್ನು ಪಾರದರ್ಶಕವಾಗಿ ನಡೆಸುತ್ತಾರೆ ಎಂದು ನಂಬುವುದು ಹೇಗೆ.

2018ರ ಚುನಾವಣೆಯಲ್ಲಿ ನಾನು ಕಡೂರು ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿದ್ದೆ. ಆಗ ಅಣ್ಣಾಮಲೈ ಚಿಕ್ಕಮಗಳೂರು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಯಾಗಿದ್ದರು. ಕ್ಷೇತ್ರದ ಚುನಾವಣಾ ಅಕ್ರಮಗಳ ಬಗ್ಗೆ ಅಣ್ಣಾಮಲೈ ಅವರಿಗೆ ನಾನು ಸಾವಿರ ದೂರುಗಳನ್ನು ಕೊಟ್ಟಿರಬಹುದು. ಒಂದೇ ಒಂದು ಅಕ್ರಮದ ಬಗ್ಗೆ ಅವರು ಕ್ರಮ ಕೈಗೊಳ್ಳಲಿಲ್ಲ. ನಾನು ಚುನಾವಣೆಯಲ್ಲಿ ಸೋತೆ. ಆದರೆ, ಸೋಲಿಗೂ ಅದಕ್ಕೂ ಗಂಟು ಹಾಕುವುದಿಲ್ಲ. ಜಿಲ್ಲೆಯಲ್ಲಿ ಶೃಂಗೇರಿ ಬಿಟ್ಟು ಎಲ್ಲ ಕಡೆಗಳಲ್ಲಿ ಬಿಜೆಪಿ ಗೆಲುವು ಸಾಧಿಸಿತು. ಕೆಲವೇ ಸಮಯದಲ್ಲಿ ಅವರು ಬಿಜೆಪಿಗೆ ಸೇರ್ಪಡೆಯಾದರು. ಆಗ ನನ್ನ ಮನಸ್ಸಿನಲ್ಲಿ ಯಾವ ಭಾವನೆ ಮೂಡಿತು ಎಂಬುದನ್ನು ಯಾರಾದರೂ ಸುಲಭದಲ್ಲಿ ಅರ್ಥ ಮಾಡಿಕೊಳ್ಳಬಹುದು.

ಅಧಿಕಾರಿಗಳು ಪಕ್ಷ ಸೇರ್ಪಡೆಯಾಗುವಾಗ ಸ್ವಲ್ಪ ಸಮಯ ಚುನಾವಣೆಯಲ್ಲಿ ಸ್ಪರ್ಧೆಗೆ ಅವಕಾಶ ನೀಡುವುದಿಲ್ಲ ಎಂಬ ಷರತ್ತು ಹಾಕಬೇಕು. ಸ್ವಯಂನಿವೃತ್ತಿಗೆ ಅರ್ಜಿ ಹಾಕಿದಾಗ ಅಧಿಕಾರಿಯ ಸೇವಾ ಹಿನ್ನೆಲೆಯ ಬಗ್ಗೆ ನಿಷ್ಪಕ್ಷಪಾತವಾದ ವರದಿ ತರಿಸಿಕೊಳ್ಳಬೇಕು. ಇಲ್ಲದಿದ್ದರೆ ಇದು ಕೆಟ್ಟ ಪರಿಪಾಟ ಆಗುತ್ತದೆ.

-ವೈ.ಎಸ್‌.ವಿ.ದತ್ತ, ಜೆಡಿಎಸ್‌ ಮುಖಂಡ

ಇತ್ತೀಚಿನ ಕೆಲ ನಿದರ್ಶನಗಳು

* ಡಾ. ಶಾ ಫೈಸಲ್: 2010ರ ಬ್ಯಾಚಿನ ಐಎಎಸ್‌ ಟಾಪರ್ ಆಗಿದ್ದ ಕಾಶ್ಮೀರದ ಡಾ. ಶಾ ಫಸಲ್ ಅವರು 2019ರಲ್ಲಿ ರಾಜೀನಾಮೆ ನೀಡಿದರು. ಕಾಶ್ಮೀರದಲ್ಲಿ ನಡೆಯುತ್ತಿದ್ದ ಹತ್ಯೆಗಳನ್ನು ಖಂಡಿಸಿ ಪ್ರತಿಭಟನಾರ್ಥವಾಗಿ ಹುದ್ದೆ ತ್ಯಜಿಸಿದ್ದ ಅವರು ವಾಕ್‌ಸ್ವಾತಂತ್ರ್ಯದ ದನಿಯಾಗಲು ಬಯಸಿದ್ದರು. ಜಮ್ಮು ಕಾಶ್ಮೀರ ಪೀಪಲ್ಸ್ ಮೂವ್‌ಮೆಂಟ್ ಪಾರ್ಟಿಯನ್ನು (ಜೆಕೆಪಿಎಂ) ಕಟ್ಟಿದರು. ಗೃಹಬಂಧನದಲ್ಲಿರುವ ಅವರು ಪಕ್ಷ ತೊರೆದು ಮತ್ತೆ ಸರ್ಕಾರಿ ಹುದ್ದೆಗೆ ಮರಳುವ ಅಥವಾ ವಿದೇಶದಲ್ಲಿ ಉನ್ನತ ವ್ಯಾಸಂಗಕ್ಕೆ ತೆರಳುವ ಆಲೋಚನೆಯಲ್ಲಿದ್ದಾರೆ ಎಂಬ ವದಂತಿಗಳು ಹರಿದಾಡುತ್ತಿವೆ.

* ಗುಪ್ತೇಶ್ವರ ಪಾಂಡೆ: 1987ನೇ ಸಾಲಿನ ಐಪಿಎಸ್ ಅಧಿಕಾರಿ ಗುಪ್ತೇಶ್ವರ ಪಾಂಡೆ ಅವರು ಬಿಹಾರ ಡಿಜಿಪಿ ಹುದ್ದೆಗೆ ರಾಜೀನಾಮೆ ನೀಡಿದ ಕೆಲವೇ ದಿನಗಳಲ್ಲಿ ಬಿಹಾರ ವಿಧಾನಸಭಾ ಚುನಾವಣೆಗೆ ದಿನಾಂಕ ನಿಗದಿಯಾಯಿತು. ರಾಜಕೀಯ ಸೇರುತ್ತಾರೆ ಎಂಬ ಊಹಾಪೋಹಗಳ ನಡುವೆಯೇ ಅವರು ನಿತೀಶ್‌ಕುಮಾರ್ ನೇತೃತ್ವದ ಜೆಡಿಯು ಸೇರಿದರು. ಬಿಹಾರ ಜನರ ಸೇವೆ ಮಾಡುವುದೇ ತಮ್ಮ ಧ್ಯೇಯ ಎಂದು ಘೋಷಿಸಿದ್ದ ಅವರು ಅಚ್ಚರಿಯ ಬೆಳವಣಿಗೆಯಲ್ಲಿ ಟಿಕೆಟ್ ವಂಚಿತರಾದರು. ತವರು ಬಕ್ಸಾರ್‌ನಿಂದ ಟಿಕೆಟ್ ಕೊಡುವ ಸಾಧ್ಯತೆ ಇತ್ತಾದರೂ, ಆ ಕ್ಷೇತ್ರ ಬಿಜೆಪಿಗೆ ಹಂಚಿಕೆಯಾಗಿತ್ತು.

* ವಿ.ಎಸ್. ಚಂದ್ರಲೇಖ: 1971ರ ಬ್ಯಾಚಿನ ಐಎಎಸ್ ಅಧಿಕಾರಿ ವಿ.ಎಸ್. ಚಂದ್ರಲೇಖ ಅವರು ತಮಿಳುನಾಡಿನ ಮೊದಲ ಮಹಿಳಾ ಜಿಲ್ಲಾಧಿಕಾರಿ ಎಂಬ ಶ್ರೇಯ ಪಡೆದವರು. 1992ರಲ್ಲಿ ಹುದ್ದೆ ತೊರೆದು ಜನತಾ ಪಕ್ಷ ಸೇರಿದರು. ಪಕ್ಷವು 2013ರಲ್ಲಿ ಬಿಜೆಪಿ ಜತೆ ವಿಲೀನವಾಯಿತು. ಇವರು ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಆಪ್ತ ವಲಯದಲ್ಲಿದ್ದಾರೆ.

* ಪಿ. ಶಿವಗಾಮಿ: ಕೇಂದ್ರ ಮತ್ತು ರಾಜ್ಯದ ವಿವಿಧ ಹುದ್ದೆಗಳಲ್ಲಿ 28 ವರ್ಷಗಳ ಕಾಲ ಕೆಲಸ ನಿರ್ವಹಿಸಿದ್ದ 1980ರ ಬ್ಯಾಚಿನ ಐಎಎಸ್ ಅಧಿಕಾರಿ ಶಿವಗಾಮಿ ಅವರು 2008ರಲ್ಲಿ ಸ್ವಯಂ ನಿವೃತ್ತಿ ಪಡೆದು ಲೋಕಸಭೆ ಚುನಾವಣೆ ಮುನ್ನ ಬಿಎಸ್‌ಪಿ ಸೇರಿದರು. ಪಕ್ಷ ತೊರೆದು ತಮ್ಮದೇ ಆದ ಸಾಮುಗ ಸಮತುವ ಪಡೈ ಹೆಸರಿನ ಪಕ್ಷ ಕಟ್ಟಿದ್ದರು. ರಾಜ್ಯದ ದಲಿತರು ಹಾಗೂ ಮಹಿಳೆಯರ ಸಬಲೀಕರಣ ಅವರ ಉದ್ದೇಶವಾಗಿತ್ತು. 2016ರ ಚುನಾವಣೆಯಲ್ಲಿ ಡಿಎಂಕೆ ಚಿಹ್ನೆಯಡಿ ಪೆರಂಬಲೂರು ಮೀಸಲು ಕ್ಷೇತ್ರದಲ್ಲಿ ಸ್ಪರ್ಧಿಸಿ ಸೋಲುಂಡರು.

* ಆರ್.ರಂಗರಾಜನ್: ನಟ ಕಮಲಹಾಸನ್ ಅವರ ಮಕ್ಕಳ್ ನೀಧಿ ಮೈಯಂ ಪಕ್ಷದ ಬಗೆಗಿನ ಒಲವಿನಿಂದ ಅಧಿಕಾರ ತ್ಯಜಿಸಿ ಬಂದವರಲ್ಲಿ ಹೊಸ ತಲೆಮಾರಿನ ಆರ್.ರಂಗರಾಜನ್ ಪ್ರಮುಖರು. 2005ರ ಬ್ಯಾಚಿನ ಅಸ್ಸಾಂ ಕೇಡರ್‌ನ ಅಧಿಕಾರಿ 2018ರಲ್ಲಿ ಹುದ್ದೆ ತೊರೆದು 2019ರ ಲೋಕಸಭಾ ಚುನಾವಣೆಯಲ್ಲಿ ಚೆನ್ನೈ ದಕ್ಷಿಣದಿಂದ ಸ್ಪರ್ಧೆಗಿಳಿದಿದ್ದರು.

* ಬೃಜೇಂದ್ರ ಸಿಂಗ್ ಅವರು ಹಿಸ್ಸಾರ್ ಲೋಕಸಭೆಯಿಂದ ಸ್ಪರ್ಧಿಸುವ ಸಲುವಾಗಿ ಐಎಎಸ್ ಹುದ್ದೆ ತೊರೆದಿದ್ದರು. ಐಎಎಸ್ ಅಧಿಕಾರಿಯಾಗಿದ್ದ ಅಪರಾಜಿತಾ ಸಾರಂಗಿ ಅವರು ಬಿಜೆಪಿ ಟಿಕೆಟ್‌ನಡಿ ಭುವನೇಶ್ವರದಿಂದ ಕಣಕ್ಕಿಳಿದಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು