ಸೋಮವಾರ, 5 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿಗೆ ಫೇಸ್‌ಬುಕ್‌ ನೆರವು ಭಾಗ-2: 34,884 ಸುದ್ದಿ ರೂಪದ ಜಾಹೀರಾತುಗಳು

ಚುನಾವಣೆಗಳಲ್ಲಿ ಪ್ರಚಾರಕ್ಕೆ ಬಿಜೆಪಿಗೆ ಫೇಸ್‌ಬುಕ್ ನೆರವು
Last Updated 29 ಮಾರ್ಚ್ 2022, 19:30 IST
ಅಕ್ಷರ ಗಾತ್ರ

2019ರ ಲೋಕಸಭಾ ಚುನಾವಣೆಯಿಂದ ಆರಂಭವಾಗಿ 2020ರ ಮಹಾರಾಷ್ಟ್ರ ವಿಧಾನಸಭಾ ಚುನಾವಣೆವರೆಗಿನ ಒಟ್ಟು 10 ಚುನಾವಣೆಗಳಲ್ಲಿ ಫೇಸ್‌ಬುಕ್‌, ಬಿಜೆಪಿಗೆ ನೆರವಾಗಿದೆ. ತನ್ನ ವೇದಿಕೆಯಲ್ಲಿ ಬಿಜೆಪಿ ಪರವಾದ ಸುದ್ದಿ ರೂಪದ ಜಾಹೀರಾತುಗಳು ಭಾರಿ ಸಂಖ್ಯೆಯಲ್ಲಿ ಪ್ರಕಟವಾಗಲು ಫೇಸ್‌ಬುಕ್ ಅವಕಾಶ ನೀಡಿದೆ. ಈ ಅವಧಿಯಲ್ಲಿ ಫೇಸ್‌ಬುಕ್‌ನಲ್ಲಿ ಪ್ರಕಟವಾದ, ಬಿಜೆಪಿ ಪರವಾದ ಸುದ್ದಿ ರೂಪದ ಜಾಹೀರಾತುಗಳ ಸಂಖ್ಯೆ 34 ಸಾವಿರವನ್ನು ದಾಟುತ್ತದೆ. ಆದರೆ ಇಂಥದ್ದೇ ಅವಕಾಶವನ್ನು ಫೇಸ್‌ಬುಕ್ ಕಾಂಗ್ರೆಸ್‌ಗೆ ನಿರಾಕರಿಸಿದೆ. ಈ ಮೂಲಕ ಬಿಜೆಪಿ ಪರವಾಗಿ ಫೇಸ್‌ಬುಕ್ ಕೆಲಸ ಮಾಡಿದೆ. ಈ ಅವಧಿಯಲ್ಲಿ ನಡೆದ 10 ಚುನಾವಣೆಗಳಲ್ಲಿ, ಬಿಜೆಪಿ ಒಂಬತ್ತು ಚುನಾವಣೆಗಳನ್ನು ಗೆದ್ದಿದೆ

ರಾಜಕೀಯ ಪಕ್ಷ ಮತ್ತು ರಾಜಕೀಯ ನಾಯಕ ಅಥವಾ ಚುನಾವಣೆ ಕಣದಲ್ಲಿರುವ ಅಭ್ಯರ್ಥಿಗೆ ಯಾವುದೇ ರೀತಿಯ ಸಂಬಂಧ ಇರದ ವ್ಯಕ್ತಿ ಅಥವಾ ಸಂಸ್ಥೆಯು, ಆ ಅಭ್ಯರ್ಥಿಯ ಪರವಾಗಿ ನೀಡುವ ಜಾಹೀರಾತುಗಳು ಮತ್ತು ಸುದ್ದಿರೂಪದ ಜಾಹೀರಾತನ್ನು ಪ್ರಕಟಿಸುವುದಿಲ್ಲ ಎಂಬುದು ಫೇಸ್‌ಬುಕ್‌ನ ನಿಯಮಗಳಲ್ಲಿ ಒಂದು.ಅಮೆರಿಕದ ಅಧ್ಯಕ್ಷರ ಚುನಾವಣೆಯಲ್ಲಿ ಫೇಸ್‌ಬುಕ್ ಒಬ್ಬ ಅಭ್ಯರ್ಥಿಯ ಪರವಾಗಿ ಲಾಬಿ ನಡೆಸಿತ್ತು ಎಂಬ ಆರೋಪ ಕೇಳಿಬಂದ ನಂತರ ಇಂತಹ ಒಂದು ನಿಯಮವನ್ನು ಫೇಸ್‌ಬುಕ್ 2018ರಲ್ಲಿ ಜಾರಿಗೆ ತಂದಿತ್ತು. ಆದರೆ, ಭಾರತದಲ್ಲಿ ನಡೆದ 10 ಚುನಾವಣೆಗಳ ಸಂದರ್ಭದಲ್ಲಿ ಫೇಸ್‌ಬುಕ್ ಈ ನಿಯಮವನ್ನು ಒಂದೇ ರೀತಿಯಲ್ಲಿ ಅನುಷ್ಠಾನಕ್ಕೆ ತಂದಿಲ್ಲ. ಬಿಜೆಪಿ ಪರ ಪ್ರಕಟವಾದ ಇಂತಹ ಜಾಹೀರಾತುಗಳು ಮತ್ತು ಸುದ್ದಿ ರೂಪದ ಜಾಹೀರಾತುಗಳ ವಿಚಾರದಲ್ಲಿ ಫೇಸ್‌ಬುಕ್‌ ಜಾಣಕುರುಡು ಪ್ರದರ್ಶಿಸಿದೆ. ಆದರೆ, ಪ್ರಮುಖ ವಿರೋಧ ಪಕ್ಷವಾಗಿದ್ದ ಕಾಂಗ್ರೆಸ್‌ ವಿರುದ್ಧ ಮಾತ್ರ ಕ್ರಮ ತೆಗೆದುಕೊಂಡಿದೆ.

2019ರ ಫೆಬ್ರುವರಿಯಿಂದ 2020ರ ನವೆಂಬರ್ 18ರವರೆಗೆ ಬಿಜೆಪಿ, ಆ ಪಕ್ಷದ ನಾಯಕರು, ಅಭ್ಯರ್ಥಿಗಳು ಮತ್ತು ಬಿಜೆಪಿ ಪರವಾದ ಅಧಿಕೃತ ಪ್ರಚಾರ ಸಂಸ್ಥೆಗಳು 26,291 ಅಧಿಕೃತ ಜಾಹೀರಾತುಗಳನ್ನು ನೀಡಿವೆ. ಆದರೆ ಇದೇ ಅವಧಿಯಲ್ಲಿ ಬಿಜೆಪಿ ಜತೆಗೆ ಯಾವುದೇ ರೀತಿ ಸಂಬಂಧವಿಲ್ಲದ 23 ಸಂಸ್ಥೆಗಳು, ಬಿಜೆಪಿ/ಬಿಜೆಪಿ ನಾಯಕರು/ಪ್ರಧಾನಿ ನರೇಂದ್ರ ಮೋದಿ/ಬಿಜೆಪಿ ಅಭ್ಯರ್ಥಿಗಳ ಪರವಾಗಿ ಮತ್ತು ಕಾಂಗ್ರೆಸ್‌ ವಿರುದ್ಧವಾಗಿ 34,884 ಜಾಹೀರಾತುಗಳನ್ನು ನೀಡಿವೆ. ಇವುಗಳಲ್ಲಿ ಬಹುತೇಕವು ಸುದ್ದಿರೂಪದ ಜಾಹೀರಾತುಗಳು. ಇವುಗಳನ್ನು ಪ್ರಕಟಿಸುವುದಕ್ಕಾಗಿ ಈ 23 ಸಂಸ್ಥೆಗಳು ಫೇಸ್‌ಬುಕ್‌ಗೆ ಒಟ್ಟು ₹5.83 ಕೋಟಿ ಶುಲ್ಕ ಪಾವತಿಸಿವೆ. ಈ ಜಾಹೀರಾತುಗಳನ್ನು ಒಟ್ಟು 131 ಕೋಟಿ ಬಾರಿ ವೀಕ್ಷಿಸಲಾಗಿದೆ. ಈ 23 ಸಂಸ್ಥೆಗಳು ಬಿಜೆಪಿ ಜತೆಗೆ ಯಾವ ರೀತಿ ಸಂಬಂಧ ಹೊಂದಿವೆ ಎಂಬುದನ್ನು ಬಹಿರಂಗಪಡಿಸಿಲ್ಲ.ಫೇಸ್‌ಬುಕ್‌ನ ನಿಯಮಗಳ ಪ್ರಕಾರ ಈ ಜಾಹೀರಾತುಗಳನ್ನು ತೆಗೆದುಹಾಕಬೇಕಿತ್ತು. ಆದರೆ, ತೆಗದುಹಾಕಿಲ್ಲ.

ಬಿಜೆಪಿಗೆ ಫೇಸ್‌ಬುಕ್‌ ನೆರವು ಭಾಗ-2: 34,884 ಸುದ್ದಿ ರೂಪದ ಜಾಹೀರಾತುಗಳು

ಬಿಜೆಪಿ ಪರವಾದ ಈ ಸುದ್ದಿರೂಪದ ಜಾಹೀರಾತುಗಳ ವಿರುದ್ಧ ಫೇಸ್‌ಬುಕ್‌ ಕ್ರಮ ತೆಗೆದುಕೊಳ್ಳದೇ ಇರುವುದು, ಆ ಪಕ್ಷದ ಪರವಾಗಿ ಪ್ರಚಾರವು ಹೆಚ್ಚು ಪರಿಣಾಮಕಾರಿ ಆಗುವಲ್ಲಿ ಮಹತ್ವದ ಪಾತ್ರ ವಹಿಸಿದೆ. ಬಿಜೆಪಿ ಅಧಿಕೃತವಾಗಿ ನೀಡಿದ ಜಾಹೀರಾತುಗಳನ್ನು ಒಟ್ಟು 136 ಕೋಟಿ ಬಾರಿ ವೀಕ್ಷಿಸಲಾಗಿದೆ. ಆದರೆ ಬಿಜೆಪಿ ಪರವಾಗಿ ಅನಧಿಕೃತವಾಗಿ ಪ್ರಕಟವಾದ ಸುದ್ದಿರೂಪದ ಜಾಹೀರಾತುಗಳನ್ನು 131 ಕೋಟಿ ಬಾರಿ ವೀಕ್ಷಿಸಲಾಗಿದೆ. ಎರಡೂ ರೀತಿಯ ಜಾಹೀರಾತುಗಳನ್ನು ಒಟ್ಟು 267 ಕೋಟಿ ಬಾರಿ ವೀಕ್ಷಿಸಲಾಗಿದೆ. ಹೀಗೆ ಬಿಜೆಪಿ ಪರವಾದ ಜಾಹೀರಾತುಗಳು ಮತ್ತು ಸುದ್ದಿ ರೂಪದ ಜಾಹೀರಾತುಗಳು ಹೆಚ್ಚು ಜನರನ್ನು ತಲುಪುವಂತೆ ಮಾಡುವಲ್ಲಿ ಫೇಸ್‌ಬುಕ್ ನೆರವಾಗಿದೆ.

ಭಾರತದಲ್ಲಿ ಫೇಸ್‌ಬುಕ್‌ಗೆ, ಬಿಜೆಪಿ ನಂತರ ಕಾಂಗ್ರೆಸ್‌ ಎರಡನೇ ಅತಿದೊಡ್ಡ ಜಾಹೀರಾತು ನೀಡುವ ಗ್ರಾಹಕ. ಈ ಹತ್ತು ಚುನಾವಣೆಗಳ ಅವಧಿಯಲ್ಲಿ ಕಾಂಗ್ರೆಸ್‌ ಅಧಿಕೃತವಾಗಿ ಒಟ್ಟು 30,374 ಜಾಹೀರಾತುಗಳನ್ನು ನೀಡಿದೆ. ಇವುಗಳನ್ನು 110 ಕೋಟಿ ಬಾರಿ ವೀಕ್ಷಿಸಲಾಗಿದೆ. ಇದಕ್ಕಾಗಿ ಕಾಂಗ್ರೆಸ್‌ ₹6.44 ಕೋಟಿ ಶುಲ್ಕವನ್ನು ಪಾವತಿಸಿದೆ. ಕಾಂಗ್ರೆಸ್‌ ಜತೆಗೆ ಯಾವುದೇ ಸಂಬಂಧ ಇಲ್ಲದ ಎರಡು ಸಂಸ್ಥೆಗಳಷ್ಟೇ, ಕಾಂಗ್ರೆಸ್‌ ಪರವಾಗಿ ಜಾಹೀರಾತು ಮತ್ತು ಸುದ್ದಿರೂಪದ ಜಾಹೀರಾತು ಪ್ರಕಟಿಸಿವೆ. ಅವುಗಳ ಸಂಖ್ಯೆ 3,130 ಮಾತ್ರ. ಇವುಗಳನ್ನು ಕೇವಲ 7.38 ಕೋಟಿ ಬಾರಿ ವೀಕ್ಷಿಸ ಲಾಗಿದೆ. ಇದಕ್ಕಾಗಿ ಆ ಎರಡು ಸಂಸ್ಥೆಗಳು ಫೇಸ್‌ಬುಕ್‌ಗೆ ₹23 ಲಕ್ಷ ಶುಲ್ಕ ಪಾವತಿಸಿವೆ.

ಬಿಜೆಪಿಗೆ ಫೇಸ್‌ಬುಕ್‌ ನೆರವು ಭಾಗ-2: 34,884 ಸುದ್ದಿ ರೂಪದ ಜಾಹೀರಾತುಗಳು

ಕಾಂಗ್ರೆಸ್‌ ಪರವಾಗಿ ನೀಡಲಾದ ಅನಧಿಕೃತ ಮತ್ತು ಸುದ್ದಿರೂಪದ ಜಾಹೀರಾತುಗಳ ಸಂಖ್ಯೆ ಮತ್ತು ಅವುಗಳ ವೀಕ್ಷಣೆ ಸಂಖ್ಯೆ ಕಡಿಮೆ ಇರಲು, ಫೇಸ್‌ಬುಕ್ ತೆಗೆದುಕೊಂಡಿದ್ದ ಕ್ರಮಗಳೇ ಕಾರಣ. ಕಾಂಗ್ರೆಸ್‌ ಪರವಾಗಿ ಹೀಗೆ ಪ್ರಕಟವಾಗಿದ್ದ ಅನಧಿಕೃತ ಜಾಹೀರಾತು ಮತ್ತು ಸುದ್ದಿರೂಪದ ಜಾಹೀರಾತುಗಳನ್ನು ಪ್ರಕಟಿಸಿದ್ದ 687 ಪುಟಗಳು ಮತ್ತು ಖಾತೆಗಳನ್ನು ಫೇಸ್‌ಬುಕ್ ತೆಗೆದುಹಾಕಿತ್ತು. ಹೀಗಾಗಿ ಈ ಸ್ವರೂಪದಲ್ಲಿ ಹೆಚ್ಚು ಜನರನ್ನು ತಲುಪಲು ಕಾಂಗ್ರೆಸ್‌ಗೆ ಸಾಧ್ಯವಾಗಿರಲಿಲ್ಲ. ಆದರೆ ಇದೇ ರೀತಿ ಸುದ್ದಿರೂಪದ ಜಾಹೀರಾತುಗಳನ್ನು ಬಿಜೆಪಿ ಪರವಾಗಿ ಪ್ರಕಟಿಸಿದ್ದ 1 ಪುಟ ಮತ್ತು 14 ಖಾತೆಗಳನ್ನು ಮಾತ್ರ ಫೇಸ್‌ಬುಕ್ ತೆಗದುಹಾಕಿತ್ತು.

ಹೀಗೆ ಪ್ರಕಟವಾಗುವ ಜಾಹೀರಾತುಗಳ ವೆಚ್ಚವು ಪಕ್ಷ ಮತ್ತು ಅಭ್ಯರ್ಥಿಯ ಚುನಾವಣಾ ವೆಚ್ಚದಲ್ಲಿ ಸೇರುವುದಿಲ್ಲ. ಇದರ ವಿರುದ್ಧ ಚುನಾವಣಾ ಆಯೋಗವು ಯಾವುದೇ ಕ್ರಮ ತೆಗದುಕೊಳ್ಳುವುದಿಲ್ಲ. ಈ ಬಗ್ಗೆ ಪ್ರತಿಕ್ರಿಯೆ ಕೇಳಿ ಕಳುಹಿಸಲಾಗಿದ್ದ ಇ–ಮೇಲ್‌ಗೆ ಚುನಾವಣಾ ಆಯೋಗವು ಪ್ರತಿಕ್ರಿಯೆ ನೀಡಿಲ್ಲ.ಫೇಸ್‌ಬುಕ್ ಸಹ ಇದನ್ನು ನಿಯಂತ್ರಿಸದೇ ಇದ್ದ ಕಾರಣ, ಬಿಜೆಪಿ ಅಭ್ಯರ್ಥಿಗಳು ಚುನಾವಣಾ ಪ್ರಚಾರಕ್ಕೆ ಎದುರಾಳಿಗಳಿಗಿಂತ ಹೆಚ್ಚು ಹಣ ವೆಚ್ಚ ಮಾಡಲು ಸಾಧ್ಯವಾಗಿದೆ. ಫೇಸ್‌ಬುಕ್‌ ಮೂಲಕ ಬಿಜೆಪಿ ಹೆಚ್ಚು ಜನರನ್ನು ತಲುಪುವುದು ಸಾಧ್ಯವಾಗಿದೆ. ಅಂತಿಮವಾಗಿ ಈ ಅವಧಿಯಲ್ಲಿ ನಡೆದಿದ್ದ 10 ಚುನಾವಣೆಗಳಲ್ಲಿ 9ರಲ್ಲಿ ಬಿಜೆಪಿ ಗೆಲುವು ಸಾಧಿಸಿದೆ.

ಕಾಂಗ್ರೆಸ್‌ಗೆ ದುಬಾರಿ ಶುಲ್ಕ

ಬೇರೆಲ್ಲ ಪಕ್ಷಗಳಿಗೆ ಹೋಲಿಸಿದರೆ, ಬಿಜೆಪಿಗೆ ಅತಿಕಡಿಮೆ ಶುಲ್ಕದಲ್ಲಿ ಜಾಹೀರಾತುಗಳನ್ನು ಪ್ರಕಟಿಸಲು ಫೇಸ್‌ಬುಕ್ ಅಲ್ಗಾರಿದಂ ವ್ಯವಸ್ಥೆಯು ಅವಕಾಶ ಮಾಡಿಕೊಟ್ಟಿದೆ. 22 ತಿಂಗಳಲ್ಲಿ ನಡೆದ 10 ಚುನಾವಣೆಗಳ ಜಾಹೀರಾತುಗಳನ್ನು ವಿಶ್ಲೇಷಿಸಿದಾಗ ಈ ಅಂಶ ಸ್ಪಷ್ಟವಾಗಿದೆ.

ಭಾರತದಲ್ಲಿ ಫೇಸ್‌ಬುಕ್‌ನ ಅತಿದೊಡ್ಡ ರಾಜಕೀಯ ಗ್ರಾಹಕ ಎನಿಸಿರುವ ಬಿಜೆಪಿಗೆ ಅನುಕೂಲಕರ ಶುಲ್ಕದಲ್ಲಿ ಜಾಹೀರಾತು ಪ್ರಕಟಣೆಗೆ ಅವಕಾಶ ನೀಡಿದ್ದರಿಂದ, ಪಕ್ಷವು ಕಡಿಮೆ ಹಣದಲ್ಲಿ ಹೆಚ್ಚು ಮತದಾರರನ್ನು ತಲುಪಲು ಸಾಧ್ಯವಾಗಿದೆ.

ಬಿಜೆಪಿಗೆ ಫೇಸ್‌ಬುಕ್‌ ನೆರವು ಭಾಗ-2: 34,884 ಸುದ್ದಿ ರೂಪದ ಜಾಹೀರಾತುಗಳು

ಬಿಜೆಪಿ, ಪಕ್ಷದ ಅಭ್ಯರ್ಥಿಗಳು ಅಥವಾ ಪಕ್ಷಕ್ಕೆ ಸಂಬಂಧಿಸಿದರವರು ನೀಡಿದ್ದ ಜಾಹೀರಾತು 10 ಲಕ್ಷ ಬಾರಿ (1 ಮಿಲಿಯನ್) ವೀಕ್ಷಣೆಗೆ ಒಳಪಟ್ಟರೆ, ಅದಕ್ಕೆ ಸರಾಸರಿ ₹41,844 ಶುಲ್ಕವನ್ನು ಫೇಸ್‌ಬುಕ್ ಅಲ್ಗಾರಿದಂ ವಿಧಿಸಿದೆ. ಆದರೆ ಕಾಂಗ್ರೆಸ್ ಪಕ್ಷ ನೀಡಿದ್ದ ಜಾಹೀರಾತಿಗೆ ಸರಾಸರಿ ₹53,776 ಶುಲ್ಕ ವಿಧಿಸಿದೆ. ಅಂದರೆ ಬಿಜೆಪಿಗಿಂತ ಶೇ 29ರಷ್ಟು ಹೆಚ್ಚು ಶುಲ್ಕವನ್ನು ಕಾಂಗ್ರೆಸ್‌ನಿಂದ ಫೇಸ್‌ಬುಕ್ ವಸೂಲಿ ಮಾಡಿದೆ.

22 ತಿಂಗಳ ಅವಧಿಯಲ್ಲಿ ಬಿಜೆಪಿ ಹಾಗೂ ಪಕ್ಷಕ್ಕೆ ಸಂಬಂಧಪಟ್ಟವರು ತಮ್ಮ ಅಧಿಕೃತ ಖಾತೆಗಳಿಂದ ಜಾಹೀರಾತು ನೀಡಲು ಫೇಸ್‌ಬುಕ್‌ಗೆ ₹10.4 ಕೋಟಿ ಹಣ ಪಾವತಿಸಿದ್ದಾರೆ. ಈ ಹಣಕ್ಕೆ ಬಿಜೆಪಿ 136 ಕೋಟಿ ವೀಕ್ಷಣೆಗಳನ್ನು ಪಡೆದಿದೆ. ಇದೇ ಅವಧಿಯಲ್ಲಿ ಕಾಂಗ್ರೆಸ್ ಹಾಗೂ ಕಾಂಗ್ರೆಸ್‌ಗೆ ಸಂಬಂಧಪಟ್ಟವರು ಫೇಸ್‌ಬುಕ್‌ಗೆ ಜಾಹೀರಾತು ಮೊತ್ತವಾಗಿ ₹6.44 ಕೋಟಿ ಪಾವತಿಸಿದ್ದಾರೆ. ಈ ಮೊತ್ತಕ್ಕೆ ಕಾಂಗ್ರೆಸ್‌ 110 ಕೋಟಿ ವೀಕ್ಷಣೆಗಳನ್ನು ಪಡೆದಿದೆ. ಇಷ್ಟು ವೀಕ್ಷಣೆಗಳನ್ನು ನೀಡಲು ಫೇಸ್‌ಬುಕ್, ಬಿಜೆಪಿಗಿಂತ 1.1 ಕೋಟಿ ರೂಪಾಯಿ ಹೆಚ್ಚುವರಿ ಹಣವನ್ನು ಕಾಂಗ್ರೆಸ್‌ನಿಂದ ಪಡೆದಿದೆ. ಬಿಜೆಪಿಗೆ ಕಡಿಮೆ ಶುಲ್ಕ ವಿಧಿಸಿ ಕಾಂಗ್ರೆಸ್‌ಗೆ ಹೆಚ್ಚು ನಿಗದಿಪಡಿಸಿದ್ದರಿಂದ, ಬಿಜೆಪಿಗಿಂತ ಕಾಂಗ್ರೆಸ್ ಹೆಚ್ಚು ಹಣ ಪಾವತಿಸಿದೆ.

ಬಿಜೆಪಿ ಪರವಾಗಿ ಸುದ್ದಿರೂಪದ ಜಾಹೀರಾತು ನೀಡುವ ಜಾಹೀರಾತುದಾರರಿಗೆ ಫೇಸ್‌ಬುಕ್ ₹39,552 ಶುಲ್ಕ (ಪ್ರತಿ 10 ಲಕ್ಷ ವ್ಯೂಸ್) ನಿಗದಿಪಡಿಸಿದ್ದರೆ, ಕಾಂಗ್ರೆಸ್‌ ಪರವಾಗಿ ಸುದ್ದಿರೂಪದ ಜಾಹೀರಾತು ನೀಡುವವರಿಗೆ ₹52,150 ಶುಲ್ಕ ನಿಗದಿಪಡಿಸಿದೆ. ಅಂದರೆ ಶೇ 32ರಷ್ಟು ಅಧಿಕ ಹಣವನ್ನು ಫೇಸ್‌ಬುಕ್ ಅಲ್ಗಾರಿದಂ ಗೊತ್ತುಪಡಿಸಿದೆ.ದೇಶದ ಚುನಾವಣಾ ನೀತಿಗಳು ಮತ್ತು ಪ್ರಜಾಪ್ರಭುತ್ವಕ್ಕೆ ಫೇಸ್‌ಬುಕ್‌ನ ನೀತಿಗಳು ಹಾಗೂ ಅಲ್ಗಾರಿದಂ ಬೆದರಿಕೆಗಳಾಗಿವೆ ಎಂದು ಸುಪ್ರೀಂಕೋರ್ಟ್ ವ್ಯಕ್ತಪಡಿಸಿದ್ದ ಕಳವಳವನ್ನು, ಈ ವಿಶ್ಲೇಷಣೆಯಿಂದ ಕಂಡುಬಂದ ಅಂಶಗಳೂ ಬಿಂಬಿಸುತ್ತವೆ.

ತನ್ನನ್ನು ತಟಸ್ಥ ವೇದಿಕೆ ಎಂದು ಬಿಂಬಿಸಲು ಮುಂದಾಗಿದ್ದ ಫೇಸ್‌ಬುಕ್‌ನ ವಾದವನ್ನು ತಿರಸ್ಕರಿಸಿದ್ದ ಸುಪ್ರೀಂಕೋರ್ಟ್, ಚುನಾವಣೆ ಹಾಗೂ ಮತದಾನ ಪ್ರಕ್ರಿಯೆಗಳಿಗೆ ಸಾಮಾಜಿಕ ಜಾಲತಾಣಗಳ ತಿರುಚಿದ ವರದಿಗಳು ಬೆದರಿಕೆಗಳಾಗಿವೆ ಎಂದಿತ್ತು. 2020ರ ದೆಹಲಿ ಗಲಭೆ ಪ್ರಕರಣದಲ್ಲಿ ಕೋರ್ಟ್ ಈ ಅಭಿಪ್ರಾಯ ವ್ಯಕ್ತಪಡಿಸಿತ್ತು.

ಬಿಜೆಪಿಗೆ ಒಂದು, ಕಾಂಗ್ರೆಸ್‌ಗೆ ಮತ್ತೊಂದು ದರ ನಿಗದಿಪಡಿಸಿರುವ ಕುರಿತು ಕೇಳಿದ ಪ್ರಶ್ನೆಗೆ ಫೇಸ್‌ಬುಕ್ ಮಾತೃಸಂಸ್ಥೆ ‘ಮೆಟಾ’ ಉತ್ತರಿಸುವ ಗೋಜಿಗೆ ಹೋಗಿಲ್ಲ.ಭಾರತದ ಚುನಾವಣಾ ಆಯೋಗ, ಬಿಜೆಪಿ ಐಟಿ ಘಟಕದ ಮುಖ್ಯಸ್ಥ ಅಮಿತ್ ಮಾಳವೀಯ ಹಾಗೂ ಬಿಜೆಪಿ ವಕ್ತಾರ ಅನುಲ್ ಬಲೂನಿ ಅವರೂ ಉತ್ತರಿಸಿಲ್ಲ.

ಆಧಾರ: ದಿ ರಿಪೋರ್ಟರ್ಸ್ ಕಲೆಕ್ಟಿವ್ ವರದಿ. ಈ ವರದಿಯ ಇಂಗ್ಲಿಷ್ ಆವೃತ್ತಿ ಆಲ್‌ಜಜೀರಾ ಸುದ್ದಿತಾಣದಲ್ಲಿ ಪ್ರಕಟವಾಗಿದೆ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT