ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳ–ಅಗಲ: ಲಿಂಗ ಸಮಾನತೆ ದಾರಿ ಇನ್ನೂ ಬಹಳ ದೂರ

ವಿಶ್ವ ಆರ್ಥಿಕ ವೇದಿಕೆ ವರದಿ
Last Updated 14 ಜುಲೈ 2022, 19:19 IST
ಅಕ್ಷರ ಗಾತ್ರ

ಜಾಗತಿಕ ಲಿಂಗ ಸಮಾನತೆಯ ಅಂತರದ ರ‍್ಯಾಂಕಿಂಗ್‌ನಲ್ಲಿ ಭಾರತವು 135ನೇ ಸ್ಥಾನದಲ್ಲಿದೆ. ಉದ್ಯೋಗ, ಶಿಕ್ಷಣ, ರಾಜಕೀಯದಲ್ಲಿ ಮಹಿಳೆಯರಿಗೆ ಇರುವ ಅವಕಾಶಗಳು, ಪುರುಷರಿಗೆ ಇರುವ ಅವಕಾಶಗಳಿಗಿಂತ ತೀರಾ ಕಡಿಮೆ ಇದೆ.

ಈ ಕ್ಷೇತ್ರಗಳಲ್ಲಿ ಪುರುಷರಿಗೆ ದೊರೆಯುತ್ತಿರುವ ಅವಕಾಶಗಳು ಮತ್ತು ಮಹಿಳೆಯರಿಗೆ ಲಭ್ಯವಿರುವ ಅವಕಾಶಗಳ ನಡುವಣ ವ್ಯತ್ಯಾಸವನ್ನೇ ‘ಲಿಂಗ ಸಮಾನತೆಯ ಅಂತರ’ ಎನ್ನಲಾಗುತ್ತದೆ.

ವಿಶ್ವದ 146 ದೇಶಗಳನ್ನು ಅಧ್ಯಯನಕ್ಕೆ ಒಳಪಡಿಸಿ ಈ ರ‍್ಯಾಂಕಿಂಗ್‌ ಅನ್ನು ಸಿದ್ಧಪಡಿಸಲಾಗಿದೆ. ಈ ಪಟ್ಟಿಯಲ್ಲಿ ಭಾರತವು ಕೊನೆಯಿಂದ 12ನೇ ಸ್ಥಾನದಲ್ಲಿದೆ. ಮಹಿಳೆಯರಿಗೆ ಹೆಚ್ಚು ಅವಕಾಶಗಳು ಇಲ್ಲದೇ ಇರುವ ಕಾರಣ ಭಾರತವು, ಈ ರ‍್ಯಾಂಕಿಂಗ್‌ ಪಟ್ಟಿಯಲ್ಲಿ ಪಾತಾಳದಲ್ಲಿದೆ‌

ನಾಯಕತ್ವ: ತಯಾರಿಕೆ, ಮೂಲಸೌಕರ್ಯವಲಯದಲ್ಲಿ ಮಹಿಳೆಯರು ಹಿಂದೆ

ಜಾಗತಿಕವಾಗಿ ಪ್ರಮುಖ ಉದ್ಯಮಗಳಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ ಪ್ರಮಾಣ ಎಷ್ಟಿದೆ ಎಂಬುದನ್ನು ವರದಿ ವಿಶ್ಲೇಷಿಸಿದೆ. ಯಾವ ಕ್ಷೇತ್ರದಲ್ಲೂ ಮಹಿಳೆಯರ ಪಾಲ್ಗೊಳ್ಳುವಿಕೆ ಶೇ 50ರನ್ನು ದಾಟಿಲ್ಲ ಎಂಬುದರ ಮೇಲೆ ವರದಿ ಬೆಳಕು ಚೆಲ್ಲಿದೆ.ಸರ್ಕಾರೇತರ ಸಂಸ್ಥೆ,ಶಿಕ್ಷಣ,ವೈಯಕ್ತಿಕ ಸೇವೆ ಮತ್ತು ಆರೈಕೆ ಕ್ಷೇತ್ರಗಳಲ್ಲಿ ಗಮನಾರ್ಹ ಮಟ್ಟದಲ್ಲಿದೆ. ಆದರೆ, ಮೂಲಸೌಕರ್ಯ, ತಯಾರಿಕೆ ವಲಯಗಳಲ್ಲಿ ಶೇ 20ರಷ್ಟೂ ಪಾಲ್ಗೊಳ್ಳುವಿಕೆ ಕಂಡುಬಂದಿಲ್ಲ. ಇಂಧನ, ಪೂರೈಕೆ ವ್ಯವಸ್ಥೆ ಮತ್ತು ಸಾರಿಗೆಯಂತಹ ರಂಗಗಳಲ್ಲೂ ಹೆಚ್ಚಿನ ಹಿನ್ನಡೆ ಕಂಡುಬಂದಿದೆ ಎಂದು ದತ್ತಾಂಶಗಳು ಹೇಳುತ್ತವೆ.

ಕಡೆಯ ಸ್ಥಾನದಲ್ಲಿ ದಕ್ಷಿಣ ಏಷ್ಯಾ

ಜಾಗತಿಕವಾಗಿ ಎಂಟು ಪ್ರಾದೇಶಿಕ ವಲಯಗಳ ಪೈಕಿ ದಕ್ಷಿಣ ಏಷ್ಯಾ ವಿಭಾಗವು ಲಿಂಗ ಸಮಾನತೆ ಸಾಧಿಸುವ ಪ್ರಯತ್ನದಲ್ಲಿ ಕೊನೆಯ ಸ್ಥಾನದಲ್ಲಿದೆ. ಮೊದಲ ಸ್ಥಾನದಲ್ಲಿರುವ ಉತ್ತರ ಅಮೆರಿಕ ವಿಭಾಗ ಶೇ 76.9ರಷ್ಟು ಪ್ರಗತಿ ದಾಖಲಿಸಿದ್ದರೆ,ದಕ್ಷಿಣ ಏಷ್ಯಾದ ಪ್ರಗತಿ ಶೇ 62.4ರಷ್ಟು ಮಾತ್ರ.ಶಿಕ್ಷಣ, ಆರೋಗ್ಯ, ರಾಜಕೀಯ ಸಬಲೀಕರಣ ಹಾಗೂ ಆರ್ಥಿಕ ಪಾಲ್ಗೊಳ್ಳುವಿಕೆ ವಿಭಾಗಗಳಲ್ಲಿ ದಕ್ಷಿಣ ಏಷ್ಯಾ ಶೇಕಡ ನೂರರಷ್ಟು ಸುಧಾರಣೆ ಕಾಣಲು ಇನ್ನೂ 197 ವರ್ಷ ಸಮಯ ಹಿಡಿಯುತ್ತದೆ ಎಂದು ವರದಿ ವಿಶ್ಲೇಷಿಸಿದೆ. ಈ ನಾಲ್ಕೂ ವಲಯಗಳ ಪ್ರಗತಿಯ ನಡುವೆ ಬಹಳ ಅಂತರವಿದೆ. ಶಿಕ್ಷಣ ಮತ್ತು ಆರೋಗ್ಯದ ಅಂಶಗಳಲ್ಲಿ ಶೇ 90ಕ್ಕಿಂತ ಹೆಚ್ಚು ಶ್ರೇಯಾಂಕ ಸಿಕ್ಕಿದೆ. ಆದರೆ, ಆರ್ಥಿಕ ಪಾಲ್ಗೊಳ್ಳುವಿಕೆಯಲ್ಲಿ (ಶೇ 35.7) ರಾಜಕೀಯ ಸಬಲೀಕರಣದಲ್ಲಿ (ಶೇ 26.2) ಕ್ರಾಂತಿಕಾರಕ ಸುಧಾರಣೆ ಆಗಬೇಕಿದೆ.

ಸುಧಾರಿಸದ ಭಾರತ ಸ್ಥಿತಿಗತಿ

ದಕ್ಷಿಣ ಏಷ್ಯಾ ವಲಯದಲ್ಲಿ ಒಂಬತ್ತು ದೇಶಗಳಿದ್ದು, ಇವುಗಳಲ್ಲಿ ಭಾರತದ ರ್‍ಯಾಂಕ್ 6ನೇಯದ್ದು. ಭಾರತದ ನಂತರದ ಸ್ಥಾನಗಳಲ್ಲಿ ಇರಾನ್, ಪಾಕಿಸ್ತಾನ ಹಾಗೂ ಅಫ್ಗಾನಿಸ್ತಾನ ದೇಶಗಳಿವೆ. ಬಾಂಗ್ಲಾದೇಶ ಹಾಗೂ ನೇಪಾಳ ಮೊದಲ ಎರಡು ಶ್ರೇಯಾಂಕ ಪಡೆದಿವೆ. ರಾಜಕೀಯ ಹಾಗೂ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವ ಶ್ರೀಲಂಕಾವು ಲಿಂಗ ಸಮಾನತೆ ವಿಚಾರದಲ್ಲಿ ಭಾರತಕ್ಕಿಂತ ಉತ್ತಮ ಸ್ಥಿತಿಯಲ್ಲಿದ್ದು ಮೂರನೇ ರ್‍ಯಾಂಕ್ ಗಳಿಸಿದೆ. ಭೂತಾನ್ ಹಾಗೂ ಮಾಲ್ದೀವ್ಸ್ ಸಹ ಭಾರತಕ್ಕಿಂತ ಉತ್ತಮ ಸ್ಥಿತಿಯಲ್ಲಿವೆ ಎಂದು ವರದಿ ಹೇಳಿದೆ. ಬಾಂಗ್ಲಾ ಹಾಗೂ ನೇಪಾಳ ಶೇ 69ರಷ್ಟು ಲಿಂಗ ಸಮಾನತೆ ಸಾಧಿಸಿವೆ. ಪ್ರಾದೇಶಿಕವಾಗಿ ಹಾಗೂ ಜಾಗತಿಕವಾಗಿ ಕೊನೆಯ ಸ್ಥಾನದಲ್ಲಿರುವ ಅಫ್ಗಾನಿಸ್ತಾನದಲ್ಲಿ ಶೇ 43.5ರಷ್ಟು ಲಿಂಗ ಸಮಾನತೆಯಷ್ಟೇ ಸಾಧ್ಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT