ಮಂಗಳವಾರ, ಡಿಸೆಂಬರ್ 7, 2021
24 °C
ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ: ಶೇ 40ರಷ್ಟು ಸೀಟು ಸ್ತ್ರೀಯರಿಗೆ ನೀಡುವುದಾಗಿ ಕಾಂಗ್ರೆಸ್‌ ಘೋಷಣೆ

ಆಳ–ಅಗಲ:ಉತ್ತರ ಪ್ರದೇಶ ಚುನಾವಣೆಗೆ ಮಹಿಳೆಯರ ಓಲೈಕೆಗಾಗಿ ‘ಕೈ’ ಟಿಕೆಟ್‌ ಮೀಸಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಉತ್ತರ ಪ್ರದೇಶ ವಿಧಾನಸಭೆಗೆ ಮುಂದಿನ ವರ್ಷದ ಆರಂಭದಲ್ಲಿ ನಡೆಯಲಿರುವ ಚುನಾವಣೆಯಲ್ಲಿ ಪಕ್ಷದ ಶೇ 40ರಷ್ಟು ಟಿಕೆಟ್‌ಗಳನ್ನು ಮಹಿಳೆಯರಿಗೆ ಮೀಸಲು ಇರಿಸಲಾಗುವುದು ಎಂದು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಇತ್ತೀಚೆಗೆ ಪ್ರಕಟಿಸಿದ್ದಾರೆ. ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್‌ಗೆ ದೊಡ್ಡ ನೆಲೆಯೇನೂ ಇಲ್ಲ. ಹಾಗಿದ್ದರೂ ಇತರ ಪ್ರಮುಖ ಪಕ್ಷಗಳು ‍ಪ್ರಿಯಾಂಕಾ ಅವರ ಘೋಷಣೆಗೆ ಎದುರೇಟು ನೀಡುವುದು ಹೇಗೆ ಎಂಬ ಬಗ್ಗೆ ಗಂಭೀರವಾಗಿ ಯೋಚಿಸುತ್ತಿವೆ. ಏಕೆಂದರೆ, ಉತ್ತರ ‍ಪ್ರದೇಶದ ಒಟ್ಟು 14.40 ಕೋಟಿ ಮತದಾರರಲ್ಲಿ ಮಹಿಳೆಯರ ಸಂಖ್ಯೆ 6.60 ಕೋಟಿ. ಪ್ರಮಾಣ ಶೆ 45.89ರಷ್ಟು. ಪ್ರಿಯಾಂಕಾ ಮಾಡಿರುವ ಘೋಷಣೆಯು ಮಹಿಳೆಯರ ಮನ ಮುಟ್ಟಿದರೆ, ಫಲಿತಾಂಶದಲ್ಲಿ ದೊಡ್ಡ ಬದಲಾವಣೆಗೆ ಅದು ಕಾರಣವಾಗಬಲ್ಲುದು ಎಂಬುದು ಎಲ್ಲ ರಾಜಕೀಯ ಪಕ್ಷಗಳಿಗೂ ತಿಳಿದಿದೆ.

ಆದರೆ, ರಾಜಕೀಯ ಪಕ್ಷಗಳ ಇಂತಹ ಘೋಷಣೆಯ ಹಿಂದೆ ಪ್ರಾಮಾಣಿಕವಾದ ಕಳಕಳಿ ಇದೆಯೇ ಎಂಬುದು ಪ್ರಶ್ನಾರ್ಹ. ಕೇರಳ ವಿಧಾನಸಭೆಗೆ ಈ ವರ್ಷ ಚುನಾವಣೆ ನಡೆದಿದೆ. ಮಹಿಳಾ ಕಾಂಗ್ರೆಸ್‌ ಅಧ್ಯಕ್ಷೆಯಾಗಿದ್ದ ಲತಿಕಾ ಸುರೇಶ್‌ ಅವರೂ ಟಕೆಟ್‌ ಆಕಾಂಕ್ಷಿಯಾಗಿದ್ದರು. ತಮಗೆ ಟಿಕೆಟ್‌ ಸಿಗದಿರುವುದು ಮತ್ತು ಮಹಿಳೆಯರಿಗೆ ಪ್ರಾತಿನಿಧ್ಯ ಕಡಿಮೆ ಇರುವುದನ್ನು ತಮ್ಮ ತಲೆ ಬೋಳಿಸಿ ಅವರು ಪ್ರತಿಭಟಿಸಿದ್ದರು. ಮಹಿಳಾ ಸಬಲೀಕರಣದ ವಿಚಾರದಲ್ಲಿ ರಾಜಕೀಯ ಪಕ್ಷವೊಂದು ರಾಜ್ಯಕ್ಕೊಂದು ನೀತಿ ಅನುಸರಿಸುವುದು ಸಾಧ್ಯವೇ?

ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್‌ ಕೂಡ ಮಹಿಳೆಯರಿಗೆ ಪ್ರಾತಿನಿಧ್ಯ ನೀಡುವ ವಿಚಾರದಲ್ಲಿ ಹೆಚ್ಚು ಮಾತನಾಡುತ್ತಿದೆ. ಆದರೆ, ಪಶ್ಚಿಮ ಬಂಗಾಳ ವಿಧಾನಸಭೆಗೆ ಈ ವರ್ಷ ನಡೆದ ಚುನಾವಣೆಯಲ್ಲಿ 292 ಕ್ಷೇತ್ರಗಳ ಪೈಕಿ 50ರಲ್ಲಿ ಮಾತ್ರ  ಮಹಿಳೆಯರನ್ನು ಕಣಕ್ಕೆ ಇಳಿಸಿತ್ತು. ರಾಜ್ಯದ 43 ಸಚಿವ ಸ್ಥಾನಗಳ ಪೈಕಿ ಮಹಿಳೆಯರಿಗೆ ಸಿಕ್ಕಿದ್ದು 8 ಸ್ಥಾನಗಳು ಮಾತ್ರ. 

ಮಹಿಳಾ ಪ್ರಾತಿನಿಧ್ಯವನ್ನು ರಾಜಕೀಯ ಪಕ್ಷಗಳು ಮತ ಗಳಿಕೆಯ ಅಸ್ತ್ರವಾಗಿ ಮಾತ್ರ ನೋಡುತ್ತಿವೆ ಎಂಬುದಕ್ಕೆ ಇವು ಉದಾಹರಣೆ ಗಳು. ಆದರೆ, ಜನಪ್ರತಿನಿಧಿಗಳಾಗಿ ಹೆಚ್ಚು ಮಹಿಳೆಯರು ಆಯ್ಕೆ ಆಗಬೇಕಾದ ಅನಿವಾರ್ಯ ಈಗ ಇದೆ. ಸಂಸತ್ತಿನಲ್ಲಿ ಮಹಿಳಾ ಪ್ರಾತಿನಿಧ್ಯ ಶೇ 14.39ರಷ್ಟು ಮಾತ್ರ ಇದೆ. ಈಗ ಇರುವ 540 ಸಂಸದರ ಪೈಕಿ ಮಹಿಳೆಯರ ಸಂಖ್ಯೆ 78. ರಾಜ್ಯ ವಿಧಾನಸಭೆಗಳ ಪರಿಸ್ಥಿತಿ ಇದಕ್ಕಿಂತ ಭಿನ್ನವಾಗಿಲ್ಲ. 

ಜಗತ್ತಿನ ಸಣ್ಣ ಮತ್ತು ಹಿಂದುಳಿದ ಹಲವು ದೇಶಗಳು ಮಹಿಳಾ ಪ್ರಾತಿನಿಧ್ಯದ ವಿಚಾರದಲ್ಲಿ ಬಹಳ ಮುಂದೆ ಇವೆ. ರುವಾಂಡದಲ್ಲಿ ಮಹಿಳಾ ಪ್ರಾತಿನಿಧ್ಯ ಗರಿಷ್ಠ ಪ್ರಮಾಣದಲ್ಲಿದೆ. ಅಲ್ಲಿನ ಮಹಿಳಾ ಸಂಸದರ ಪ್ರಮಾಣ ಶೇ 61.3ರಷ್ಟು. ಕ್ಯೂಬಾ ಮತ್ತು ಬೊಲಿವಿಯಾದಲ್ಲಿಯೂ ಶೇ 50ಕ್ಕಿಂತ ಮೇಲೆ ಇದೆ. ಮೆಕ್ಸಿಕೊ, ಸ್ವೀಡನ್‌, ನಮೀಬಿಯಾದಲ್ಲಿ ಮಹಿಳಾ ಪ್ರಾತಿನಿಧ್ಯವು ಶೇ 50ರ ಸಮೀಪ ಇದೆ. 

ಶಾಸನಬದ್ಧವಾದ ಮೀಸಲು ಮತ್ತು ರಾಜಕೀಯ ಪಕ್ಷಗಳ ಸ್ವಇಚ್ಛೆಯ ಮೀಸಲಾತಿ ಮೂಲಕ ಇದು ಸಾಧ್ಯವಾಗಿದೆ. ಶಾಸನಬದ್ಧವಾದ ಮೀಸಲು ಮತ್ತು ರಾಜಕೀಯ ಪಕ್ಷಗಳು ನೀಡುವ ಮೀಸಲಿನ ಮೂಲಕ ಭಾರತದಲ್ಲಿಯೂ ಮಹಿಳಾ ಜನಪ್ರತಿನಿಧಿಗಳ ಪ್ರಮಾಣ ಹೆಚ್ಚಳ ಸಾಧ್ಯ ಇದೆ. 

ಕಾಯ್ದೆಗೆ ಇಚ್ಛಾಶಕ್ತಿಯ ಕೊರತೆ

ವಿಧಾನಸಭೆಗಳು, ಸಂಸತ್ತಿನ ಉಭಯ ಸದನಗಳಲ್ಲಿ ಮಹಿಳೆಯರಿಗೆ ಶೇ 33ರಷ್ಟು ಸೀಟುಗಳನ್ನು ಮೀಸಲಿಡುವ ಪ್ರಯತ್ನಕ್ಕೆ 26 ವರ್ಷಗಳ ಇತಿಹಾಸವಿದೆ. ಸರಪಂಚ ಸ್ಥಾನಗಳಲ್ಲಿ ಮಹಿಳೆಯರಿಗೆ ಮೂರನೇ ಒಂದರಷ್ಟು ಸ್ಥಾನಗಳನ್ನು ಮೀಸಲಿರಿಸುವ ಸಂಬಂಧ ಸಂವಿಧಾನಕ್ಕೆ 1993ರಲ್ಲಿ ತಿದ್ದುಪಡಿ ತರಲಾಗಿತ್ತು.

ಅದೇ ನೆಲೆಯಲ್ಲಿ ಮಹಿಳೆಯರಿಗೆ ಮೀಸಲಾತಿ ನೀಡುವ ಸಲುವಾಗಿ 1996ರಲ್ಲಿ ಲೋಕಸಭೆಯಲ್ಲಿ ಮಸೂದೆಯನ್ನು ಮಂಡಿಸಲಾಗಿತ್ತು. ಆದರೆ ಮಸೂದೆಗೆ ಅನುಮೋದನೆ ದೊರೆಯಲೇ ಇಲ್ಲ. ಈ ಮಸೂದೆಗೆ ಆಡಳಿತ ಮತ್ತು ವಿರೋಧ ಪಕ್ಷಗಳ ಮಹಿಳೆಯರೆಲ್ಲರೂ ಬೆಂಬಲ ಸೂಚಿಸಿದರೆ, ಪಕ್ಷಾತೀತವಾಗಿ ಈ ಮಸೂದೆಯನ್ನು ವಿರೋಧಿಸಿದ ಪುರುಷರ ಸಂಖ್ಯೆಯೇ ಹೆಚ್ಚು. 1996ರಿಂದ 2010ರವರೆಗೆ ಅಧಿಕಾರ ನಡೆಸಿದ ಎಲ್ಲಾ ಪಕ್ಷಗಳೂ ಈ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸಲು ಯತ್ನಿಸಿವೆ. 

1996, 1998, 1999 ಮತ್ತು 2008ರಲ್ಲಿ ಈ ಮಸೂದೆಯ ಸುಧಾರಿತ ರೂಪಗಳನ್ನು ಲೋಕಸಭೆಯಲ್ಲಿ ಮಂಡಿಸಲಾಗಿತ್ತು. ಆದರೆ ಒಂದು ಬಾರಿಯೂ ಮಸೂದೆಗೆ ಅನುಮೋದನೆ ದೊರೆತಿಲ್ಲ. 2008ರಲ್ಲಂತೂ ರಾಜ್ಯಸಭೆಯಲ್ಲಿ ಮಸೂದೆಯ ಪ್ರತಿಯನ್ನು ಹರಿದುಹಾಕುವ ಯತ್ನವೂ ನಡೆದಿತ್ತು. ಮಹಿಳಾ ಸದಸ್ಯರೇ ಮಸೂದೆಯ ಪ್ರತಿಗೆ ರಕ್ಷಣೆ ನೀಡಿದ್ದರು. 2008ರಲ್ಲಿ ಮಸೂದೆಯನ್ನು ಸಂಸತ್ತಿನ ಸ್ಥಾಯಿ ಸಮಿತಿ ಪರಿಶೀಲನೆಗೆ ಕಳುಹಿಸಲಾಯಿತು. 2010ರಲ್ಲಿ ಮತ್ತೆ ಈ ಮಸೂದೆಯನ್ನು ರಾಜ್ಯಸಭೆಯಲ್ಲಿ ಮಂಡಿಸಿ, ಅನುಮೋದನೆ ಪಡೆದುಕೊಳ್ಳಲಾಯಿತು. ಆದರೆ ಲೋಕಸಭೆಯಲ್ಲಿ ಚರ್ಚೆಗೆ ಬರದೇ ಇರುವ ಕಾರಣ, ಮಸೂದೆ ಮಾನ್ಯತೆ ಕಳೆದುಕೊಂಡಿತು.

ಪ್ರತಿ ಬಾರಿ ಈ ಮಸೂದೆ ಸಂಸತ್ತಿನಲ್ಲಿ ಚರ್ಚಗೆ ಬಂದಾಗ, ಮಹಿಳೆಯರಿಗೆ ಮೀಸಲಾತಿಯನ್ನು ವಿರೋಧಿಸುವವರ ಸಂಖ್ಯೆಯೇ ಹೆಚ್ಚು ಇತ್ತು. ‘ಮೀಸಲಾತಿ ಅಡಿ ಆಯ್ಕೆಯಾಗುವ ಮಹಿಳೆಯರಿಗೆ, ಸಂಸದೀಯ ಪಟುವಿನ ಸಾಮರ್ಥ್ಯವಿರುವುದಿಲ್ಲ. ಅವರು ಸಂಸದೆಯ ಕರ್ತವ್ಯವನ್ನು ಸರಿಯಾಗಿ ನಿರ್ವಹಿಸಲು ಸಾಧ್ಯವಾಗುವುದಿಲ್ಲ’ ಎಂಬ ನೆಪವನ್ನು ಮೀಸಲಾತಿ ವಿರೋಧಕ್ಕೆ ಆಧಾರ ಮಾಡಿಕೊಳ್ಳಲಾಗುತ್ತಿತ್ತು. 2014ರ ನಂತರ ಅಧಿಕಾರಕ್ಕೆ ಬಂದ ನರೇಂದ್ರ ಮೋದಿ ಅವರ ನೇತೃತ್ವದ ಸರ್ಕಾರವು ಈ ಮಸೂದೆಯನ್ನು ಮತ್ತೆ ಮಂಡಿಸುವ ಪ್ರಯತ್ನವನ್ನೂ ಮಾಡಿಲ್ಲ.

ಪ್ರಣಾಳಿಕೆಯಲ್ಲೂ ಮಹಿಳಾ ಆದ್ಯತೆ

ಕಳೆದ ಕೆಲ ವರ್ಷಗಳಲ್ಲಿನ ವಿಧಾನಸಭೆ ಚುನಾವಣೆಗಳಲ್ಲಿ ರಾಜಕೀಯ ಪಕ್ಷಗಳು ಮಹಿಳಾ ಮತದಾರರ ಕಡೆಗೆ ವಿಶೇಷ ಗಮನ ಹರಿಸಿವೆ. ಪ್ರಣಾಳಿಕೆಗಳಲ್ಲಿ ಮಹಿಳಾ ಪರ ಯೋಜನೆಗಳನ್ನು ರಾಜಕೀಯ ಪಕ್ಷಗಳು ಸೇರಿಸಿರುವುದೇ ಇದಕ್ಕೆ ಸಾಕ್ಷಿ.

ಪಶ್ಚಿಮ ಬಂಗಾಳ ವಿಧಾನಸಭೆಗೆ ಇತ್ತೀಚೆಗೆ ನಡೆದ ಚುನಾವಣೆ ವೇಳೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ‘ಲೋಕ್ಖಿರ್‌ ಬಂಡಾರ’ ಎಂಬ ಯೋಜನೆ ಅನುಷ್ಠಾನದ ಭರವಸೆ ನೀಡಿದ್ದರು. 1.6 ಕೋಟಿ ಕುಟುಂಬಗಳ ಹೆಣ್ಣುಮಕ್ಕಳಿಗೆ ಪ್ರತಿ ತಿಂಗಳು ಹಣ ನೀಡುವ ಯೋಜನೆ ಇದು. ಅಧಿಕಾರಕ್ಕೆ ಬರುತ್ತಿದ್ದಂತೆ ಆ ಯೋಜನೆ ಜಾರಿ ಮಾಡಿದರು. ಇದು ಮಹಿಳೆಯರನ್ನು ಸಬಲರಾಗಿ ಮಾಡುವ ಯೋಜನೆಯಲ್ಲ ಬದಲಾಗಿ ಪಾಕೆಟ್‌ ಮನಿ ನೀಡುವ ಯೋಜನೆ ಎಂದು ವಿಪಕ್ಷಗಳು ಟೀಕೆ ಮಾಡಿದ್ದವು. ಈ ವಿಷಯದಲ್ಲಿ ಬಿಜೆಪಿ ಕೂಡಾ ಹಿಂದೆ ಬಿದ್ದಿರಲಿಲ್ಲ. ದಲಿತ ಮತ್ತು ಬುಡಕಟ್ಟು ಹೆಣ್ಣು ಮಕ್ಕಳಿಗೆ ಸ್ನಾತಕೋತ್ತರ ಪದವಿ ವರೆಗೆ ಉಚಿತ ಶಿಕ್ಷಣ ನೀಡುವ ಭರವಸೆ ಸೇರಿ ಹಲವಾರು ಯೋಜನೆಗಳನ್ನು ಪ್ರಣಾಳಿಕೆಯಲ್ಲಿ ಸೇರಿಸಿತ್ತು.

2020ರ ಬಿಹಾರ ವಿಧಾನಸಭೆ ಚುನಾವಣೆ ವೇಳೆ ಬಿಜೆಪಿ, ಆರ್‌ಜೆಡಿ ಮತ್ತು ಜೆಡಿಯು ಮಹಿಳೆಯರಿಗಾಗಿ ಹಲವು ಭರವಸೆಗಳನ್ನು ನೀಡಿದ್ದವು. ಗುತ್ತಿಗೆ ಆಧಾರಿತ 1.5 ಕೋಟಿ ಜೀವಿಕಾ ಕಾರ್ಯಕರ್ತೆಯರ ಉದ್ಯೋಗಗಳನ್ನು ಕಾಯಂಗೊಳಿಸುವುದಾಗಿ ಮತ್ತು ಅವರ ವೇತನವನ್ನು ದುಪ್ಪಟ್ಟು ಮಾಡುವುದಾಗಿ ಆರ್‌ಜೆಡಿ ಹೇಳಿತ್ತು. ಜೆಡಿಯು ಮಹಿಳಾ ಅಭ್ಯರ್ಥಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಕಣಕ್ಕಿಳಿಸಿತ್ತು. ಆಡಳಿತದಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಇರುವಂತೆ ನೋಡಿಕೊಳ್ಳುವುದಾಗಿ ಭರವಸೆ ನೀಡಿತ್ತು.

ಅಸ್ಸಾಂ ವಿಧಾನಸಭೆ ಚುನಾವಣೆ ವೇಳೆ ಕಾಂಗ್ರೆಸ್‌ ಮತ್ತು ಬಿಜೆಪಿ ಮಹಿಳೆಯರನ್ನೇ ಕೇಂದ್ರವಾಗಿ ಇರಿಸಿಕೊಂಡು ಪ್ರಣಾಳಿಕೆ ರಚಿಸಿದ್ದವು. ತಮಿಳುನಾಡಿನಲ್ಲಿ ಉಚಿತ ವಾಷಿಂಗ್‌ ಮಷಿನ್‌, ಉಚಿತ ಸೋಲಾರ್‌ ಒಲೆ, ಉಚಿತ ಕೇಬಲ್‌ ಸಂಪರ್ಕ, ಮನೆ ಬಾಗಿಲಿಗೆ ಪಡಿತರ ನೀಡುವಂಥ ಭರವಸೆಗಳನ್ನು ಎಐಡಿಎಂಕೆ ಮಹಿಳಾ ಮತದಾರರಿಗೆ ನೀಡಿತ್ತು. ಸರ್ಕಾರಿ ಉದ್ಯೋಗಗಳಲ್ಲಿ ಮಹಿಳೆಯರಿಗೆ
ಶೇ 40ರಷ್ಟು ಮೀಸಲಾತಿ ನೀಡುವುದು ಸೇರಿ ಮತ್ತಿತರ ಯೋಜನೆಗಳನ್ನು ಡಿಎಂಕೆ ಘೋಷಿಸಿತ್ತು.

ಮಹಿಳೆಯ ಪಾತ್ರ: ಹಲವಾರು ರಾಜ್ಯಗಳಲ್ಲಿ ಮಹಿಳಾ ಮತದಾರರ ಸಂಖ್ಯೆ ಪುರುಷ ಮತದಾರರ ಸಂಖ್ಯೆಯಷ್ಟೇ ಇದೆ. ಕೆಲವೆಡೆ ಸ್ವಲ್ಪ ಕಡಿಮೆ ಇದೆ. ಮಹಿಳಾ ಮತದಾರರು ಮತದಾನದಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಿರುವುದನ್ನು ಅಂಕಿಅಂಶಗಳು ಹೇಳುತ್ತವೆ.

ಪಶ್ಚಿಮ ಬಂಗಾಳದ ಒಟ್ಟು ಮತದಾರರ ಸಂಖ್ಯೆ 6.99 ಕೋಟಿ ಅವರಲ್ಲಿ ಮಹಿಳಾ ಮತದಾರರ ಸಂಖ್ಯೆ 3.4 ಕೋಟಿ. ತಮಿಳುನಾಡಿನ ಒಟ್ಟು 6.28 ಕೋಟಿ ಮತದಾರರಲ್ಲಿ 3.18 ಕೋಟಿ ಮತದಾರರು ಮಹಿಳೆಯರೇ. ಕೇರಳದ ಒಟ್ಟು 2.74 ಕೋಟಿ ಮತದಾರರ ಪೈಕಿ 1.42 ಕೋಟಿ ಮತದಾರರು ಮಹಿಳೆಯರು.

ಟಿಕೆಟ್‌ ಕಣ್ಣಾಮುಚ್ಚಾಲೆ

ಮಹಿಳಾ ಪ್ರಾತಿನಿಧ್ಯದ ಬಗ್ಗೆ ಎಲ್ಲ ರಾಜಕೀಯ ಪಕ್ಷಗಳೂ  ಚುನಾವಣೆಯ ಸಂದರ್ಭದಲ್ಲಿ  ದನಿ ಎತ್ತುತ್ತವೆ.  ಆದರೆ, ಗೆಲ್ಲುವ ಸಾಧ್ಯತೆ ಇರುವಲ್ಲಿ ಹಾಗೂ ಅನುಕಂಪ ಕೆಲಸ ಮಾಡುವಲ್ಲಿ ಮಾತ್ರ ಮಹಿಳಾ ಅಭ್ಯರ್ಥಿಗಳಿಗೆ ಟಿಕೆಟ್ ನೀಡುವ  ಅವಕಾಶವಾದವನ್ನಷ್ಟೇ ಬಹುತೇಕ ಪಕ್ಷಗಳು ರೂಢಿಸಿಕೊಂಡು ಬಂದಿವೆ. ‌

2014ರ ಲೋಕಸಭಾ ಚುನಾವಣೆಗಿಂತ 2019ರಲ್ಲಿ ಮಹಿಳಾ ಅಭ್ಯರ್ಥಿಗಳ ಸಂಖ್ಯೆ ಹೆಚ್ಚಿದೆ.‌ 2014ರಲ್ಲಿ, ಕಣದಲ್ಲಿದ್ದ 665 ಮಹಿಳೆಯರ ಪೈಕಿ 62  ಮಂದಿ ಆಯ್ಕೆಯಾದರು; 2019ರಲ್ಲಿ 716 ಮಹಿಳೆಯರ ಪೈಕಿ 78 ಮಂದಿ ಆಯ್ಕೆಯಾಗಿದ್ದಾರೆ. 

2014ರ ಲೋಕಸಭಾ ಚುನಾವಣೆಯಲ್ಲಿ, ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್‌ 41 ಹಾಗೂ ಬಿಜೆಪಿ 30 ಟಿಕೆಟ್‌ಗಳನ್ನು ಮಹಿಳೆಯರಿಗೆ ನೀಡಿದ್ದರೆ, ಆಮ್‌ ಆದ್ಮಿ ಪಾರ್ಟಿ 47 ಟಿಕೆಟ್‌ಗಳನ್ನು ನೀಡಿತ್ತು. 2020ರಲ್ಲಿ ನಡೆದ ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಆಮ್‌ ಆದ್ಮಿ ಪಾರ್ಟಿಯ ಒಂಬತ್ತು ಮಹಿಳೆಯರ ಪೈಕಿ ಎಂಟು ಜನ ಗೆಲುವು ಸಾಧಿಸಿದ್ದರು. 

2019ರಲ್ಲಿ ನಡೆದ ಆಂಧ್ರಪ್ರದೇಶ ಚುನಾವಣೆಯಲ್ಲಿ  ಮಹಿಳೆಯರಿಗೆ ಶೇ 33ರಷ್ಟು ಟಿಕೆಟ್‌ ನೀಡುವುದಾಗಿ ರಾಜಕೀಯ ಪಕ್ಷಗಳು ಹೇಳಿದ್ದವು. ಆದರೆ, ವಿಧಾನಸಭೆಯ 175 ಸ್ಥಾನಗಳ ಪೈಕಿ 138ರಲ್ಲಿ ಮಹಿಳೆಯರು ನಿರ್ಣಾಯಕ  ಆಗಿದ್ದರೂ ಯಾವ ಪಕ್ಷವೂ ಶೇ 33ರಷ್ಟು ಟಿಕೆಟ್‌ ನೀಡಲಿಲ್ಲ.

ಕರ್ನಾಟಕದ ವಿಧಾನಸಭೆಗೆ 2018ರಲ್ಲಿ ನಡೆದ ಚುನಾವಣೆಯಲ್ಲಿ 216 ಮಹಿಳೆಯರು ಕಣದಲ್ಲಿದ್ದರು. ಅವರಲ್ಲಿ ಏಳು ಜನರು ಮಾತ್ರ ಗೆದ್ದಿದ್ದಾರೆ.

2021ರಲ್ಲಿ ನಡೆದ ಅಸ್ಸಾಂ, ಕೇರಳ, ಪುದುಚೇರಿ, ತಮಿಳುನಾಡು ಹಾಗೂ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗಳ ಪೈಕಿ, ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಪಕ್ಷವು ತಾನು ಸ್ಪರ್ಧಿಸಿದ್ದ 291ರ ಸ್ಥಾನಗಳ ಪೈಕಿ 50 ಸ್ಥಾನಗಳನ್ನು ಮಹಿಳೆಯರಿಗೆ ಮೀಸಲಿಟ್ಟಿತ್ತು . ಇದು ಉಳಿದ ರಾಜ್ಯಗಳಲ್ಲಿ ಬೇರೆ ಪಕ್ಷಗಳು ನೀಡಿದ್ದಕ್ಕಿಂತ ಹೆಚ್ಚು. ಆದರೆ, 2019ರ ಲೋಕಸಭಾ ಚುನಾವಣೆ (ಶೇ 41) ಸಂದರ್ಭದಲ್ಲಿ ಕಣಕ್ಕಿಳಿಸಿದ ಅದೇ ಪಕ್ಷದ ಮಹಿಳಾ ಅಭ್ಯರ್ಥಿಗಳಿಗೆ ಹೋಲಿಸಿದರೆ ಕಡಿಮೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು