ಸೋಮವಾರ, ನವೆಂಬರ್ 23, 2020
22 °C

ಆಳ-ಅಗಲ| ಬೈಡನ್‌ ಗೆದ್ದರೆ ಏನೇನು ಬದಲಾವಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿದೇಶಾಂಗ ನೀತಿ

ಟ್ರಂಪ್‌ ಅಧಿಕಾರಕ್ಕೆ ಬಂದ ನಂತರ ಅಮೆರಿಕದ ವಿದೇಶಾಂಗ ನೀತಿಯಲ್ಲಿ ಭಾರಿ ಬದಲಾವಣೆಯಾಗಿದೆ. ಇವರ ನೀತಿಗಳನ್ನು ಟೀಕಿಸುವ ವಿಶ್ಲೇಷಕರು, ‘ಅಮೆರಿಕವು ಜಾಗತಿಕ ವ್ಯವಸ್ಥೆಯನ್ನು ಹಾಳುಮಾಡಿ ‘ಜಂಗಲ್‌ ರಾಜ್‌’ ನಿರ್ಮಿಸುತ್ತಿದೆ’ ಎಂದು ಆರೋಪಿಸಿದ್ದಾರೆ. ಬೈಡನ್‌ ಅಧಿಕಾರಕ್ಕೆ ಬಂದರೆ ಟ್ರಂಪ್‌ ಅವರ ‘ಅಮೆರಿಕ ಮೊದಲು’ ನೀತಿಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಬಹುದು. ಜಾಗತಿಕ ಮಟ್ಟದಲ್ಲಿ ತನ್ನ ಪ್ರಾಬಲ್ಯವನ್ನು ಉಳಿಸಿಕೊಳ್ಳಲು ಅಗತ್ಯ ಕ್ರಮ ಕೈಗೊಳ್ಳಬಹುದು ಎಂದು ನಿರೀಕ್ಷಿಸಲಾಗಿದೆ. ಜತೆಗೆ, ಅಮೆರಿಕದ ತಯಾರಿಕಾ ಕ್ಷೇತ್ರಕ್ಕೆ ಆದ್ಯತೆ ನೀಡುವ ಸಾಧ್ಯತೆ ಇದೆ.

ವೀಸಾ ನೀತಿ

ಎಚ್‌–1ಬಿ ವೀಸಾ ವಿಚಾರದಲ್ಲಿ ಕಠಿಣ ನಿಲುವು ತಳೆಯುವುದಿಲ್ಲ ಎಂದು ಬೈಡನ್‌ ಭರವಸೆ ನೀಡಿದ್ದಾರೆ. ಇದು ಭಾರತೀಯರಿಗೆ ಸ್ವಲ್ಪ ಸಮಾಧಾನ ಕೊಡುವ ವಿಚಾರವಾಗಿದೆ.

ಅಮೆರಿಕದ ವಿ.ವಿ.ಗಳಲ್ಲಿ ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್‌ ಹಾಗೂ ಗಣಿತ ಕ್ಷೇತ್ರಗಳಲ್ಲಿ ಸಂಶೋಧನೆ ನಡೆಸುವ ವಿದ್ಯಾರ್ಥಿಗಳಿಗೆ ನೀಡುವ ವೀಸಾಗಳಿಗೆ ಮಿತಿ ಹೇರುವುದಿಲ್ಲ. ಅಷ್ಟೇ ಅಲ್ಲ, ಸಂಶೋಧನೆ ಪೂರ್ಣಗೊಳಿಸಿದ ನಂತರ ಅವರಿಗೆ ಗ್ರೀನ್‌ ಕಾರ್ಡ್‌ ನೀಡುವ ವ್ಯವಸ್ಥೆ ಮಾಡಲಾಗುವುದು ಎಂದು ಅವರು ಹೇಳಿದ್ದಾರೆ.

ಆದರೆ ಎಚ್‌–1ಬಿ ವೀಸಾಗೆ ಸಂಬಂಧಿಸಿದ ಟ್ರಂಪ್‌ ಅವರ ಒಂದು ನೀತಿಯನ್ನು ಬೈಡನ್‌ ಬೆಂಬಲಿಸಿದ್ದು, ಅದು ಈ ವೀಸಾ ಹೊಂದಿರುವವರಿಗೆ ಮತ್ತು, ಈ ವೀಸಾದ ನಿರೀಕ್ಷೆಯಲ್ಲಿರುವವರಿಗೆ  ಅಡ್ಡಿಯಾಗಬಲ್ಲದು. ಅದೆಂದರೆ,  ಎಚ್‌–1ಬಿ ವೀಸಾಗಳನ್ನು ವೇತನದ ಆಧಾರದಲ್ಲಿ ನೀಡುವುದನ್ನು ಅವರು ಬೆಂಬಲಿಸಿದ್ದಾರೆ. ಹೆಚ್ಚು ಕೌಶಲ ಬಯಸುವ ಉದ್ಯೋಗಗಳಿಗೆ, ಕಡಿಮೆ ವೇತನ ನೀಡಿ ಹೊಸಬರನ್ನು ನೇಮಕ ಮಾಡುವುದನ್ನು ಇದು ತಡೆಯುತ್ತದೆ. ಆದ್ದರಿಂದ ಪ್ರಸಕ್ತ ಕಡಿಮೆ ವೇತನ ಪಡೆಯುವ ಹಲವರು ಉದ್ಯೋಗ ಕಳೆದುಕೊಳ್ಳುವ ಅಪಾಯವಿದೆ. ಅಮೆರಿಕದ ಐಟಿ ಕ್ಷೇತ್ರದಲ್ಲಿ ಇಂಥ ಹುದ್ದೆಗಳಲ್ಲಿ ಅನೇಕ ಭಾರತೀಯರು ಕೆಲಸ ಮಾಡುತ್ತಿದ್ದಾರೆ.

ಜಾಗತಿಕ ಬದ್ಧತೆ ಪ್ರದರ್ಶನ

ವಿಶ್ವ ಆರೋಗ್ಯ ಸಂಸ್ಥೆ ಸೇರಿದಂತೆ ಟ್ರಂಪ್‌ ಅವರು ಅನೇಕ ಜಾಗತಿಕ ಮಟ್ಟದ ಸಂಸ್ಥೆಗಳಿಂದ ಅಮೆರಿಕವು ಹೊರನಡೆಯುವಂತೆ ಮಾಡಿದ್ದರು. ಬೈಡನ್‌ ಅಧಿಕಾರಕ್ಕೆ ಬಂದರೆ ವಿಶ್ವ ವ್ಯಾಪಾರ ಸಂಸ್ಥೆ ಮತ್ತು ನ್ಯಾಟೋದಂತಹ ಸಂಸ್ಥೆಗಳ ಜತೆಗೆ ಅಮೆರಿಕ ಮತ್ತೆ ಬದ್ಧತೆ ಪ್ರದರ್ಶಿಸಬಹುದು ಎಂದು ನಿರೀಕ್ಷಿಸಲಾಗಿದೆ.

ತಾಪಮಾನ ಏರಿಕೆ ತಡೆಗೆ ಸಂಬಂಧಿಸಿದಂತೆ ಪ್ಯಾರಿಸ್‌ ಒಪ್ಪಂದಕ್ಕೆ ಪುನಃ ಬದ್ಧತೆಯನ್ನು ಪ್ರದರ್ಶಿಸಲಾಗುವುದು ಎಂದು ಬೈಡನ್‌ ಈಗಾಗಲೇ ಹೇಳಿದ್ದಾರೆ. ಇದರಿಂದಾಗಿ ವಿವಿಧ ಸಂಸ್ಥೆಗಳಿಗೆ ಅಮೆರಿಕದ ಆರ್ಥಿಕ ನೆರವು ಪುನಃ ಲಭಿಸಬಹುದೆಂಬ ಭರವಸೆ ಮೂಡಿದೆ. ಜಾಗತಿಕ ಅಭಿವೃದ್ಧಿಯ ದೃಷ್ಟಿಯಿಂದ ಇದು ಪೂರಕವಾಗಿದೆ ಎಂದು ವಿಶ್ಲೇಷಿಸಲಾಗುತ್ತದೆ

ಚೀನಾ ಜತೆ ಸಂಘರ್ಷ ನಿಲ್ಲದು

ಯಾರೇ ಗೆದ್ದರೂ ಅಮೆರಿಕ ಚೀನಾ ಸಂಬಂಧದಲ್ಲಿ ಹೆಚ್ಚಿನ ಸುಧಾರಣೆ ಆಗಲಾರದು. ಬೈಡನ್‌ ಅವರ ಚೀನಾ ನೀತಿ ಹೆಚ್ಚು ಆಕ್ರಮಣಕಾರಿಯಾಗಿ ಇರಲಾರದು ಆದರೆ, ಹೆಚ್ಚು ಸ್ಪಷ್ಟತೆ ಕಾಣಬಹುದು ಎಂದು ವಿಶ್ಲೇಷಿಸಲಾಗಿದೆ. ಚೀನಾದ ವಿರುದ್ಧ ಧ್ವನಿ ಎತ್ತಿರುವ ಏಷ್ಯಾದ ರಾಷ್ಟ್ರಗಳು, ಟ್ರಂಪ್‌ ಅವರ ಮರು ಆಯ್ಕೆಯನ್ನು ನಿರೀಕ್ಷಿಸುತ್ತಿವೆ

* ಚೀನಾದ ದೌರ್ಜನ್ಯವನ್ನು ಖಂಡಿಸಿ, ಪ್ರಜಾಪ್ರಭುತ್ವ ಪರ ಹೋರಾಟ ನಡೆಸುತ್ತಿರುವ ಹಾಂಗ್‌ಕಾಂಗ್‌ನ  ಜನರು, ಟ್ರಂಪ್‌ ಪುನಃ ಅಧಿಕಾರಕ್ಕೆ ಬರಲಿ ಎಂದು ನಿರೀಕ್ಷಿಸುತ್ತಾರೆ. ಚೀನಾದ ಕಮ್ಯುನಿಸ್ಟ್‌ ಪಾರ್ಟಿಯನ್ನು ನಿಯಂತ್ರಿಸಲು ಟ್ರಂಪ್‌ಒಬ್ಬರೇ ಅಮರ್ಥರು ಎಂಬುದು ಅವರ ನಂಬಿಕೆ

* ತಾನು ಸ್ವತಂತ್ರ ರಾಷ್ಟ್ರ ಎಂದು ಘೋಷಿಸಿಕೊಂಡಿರುವ ತೈವಾನ್‌ ಸಹ ಟ್ರಂಪ್‌ ಅಧಿಕಾರಕ್ಕೆ ಮರಳುವುದನ್ನು ಬಯಸುತ್ತದೆ. ಬೈಡನ್‌ ಚೀನಾದ ವಿರುದ್ಧ ಗಟ್ಟಿದನಿಯಲ್ಲಿ ಮಾತನಾಡಲಾರರು ಎಂದು ತೈವಾನ್‌ನ ಜನರು ಭಾವಿಸುತ್ತಾರೆ

* ಚೀನಾದ ದೌರ್ಜನ್ಯದ ಭೀತಿಯಲ್ಲಿರುವ ವಿಯೆಟ್ನಾಂ ಸಹ ಟ್ರಂಪ್‌ ಅಧಿಕಾರಕ್ಕೆ ಮರಳುವುದನ್ನು ಬಯಸುತ್ತದೆ

* ‘ಅಮೆರಿಕ ಮೊದಲು’ ನೀತಿಗೆ ಜಪಾನ್‌ ಆರಂಭದಲ್ಲಿ ಆತಂಕ ವ್ಯಕ್ತಪಡಿಸಿತ್ತು. ಆದರೆ, ದೇಶಕ್ಕೆ ಹೆಚ್ಚಿನ ಭದ್ರತೆಯನ್ನು ಒದಗಿಸಿದ ಕಾರಣಕ್ಕೆ ಅಲ್ಲಿನ ಜನರೂ ಟ್ರಂಪ್‌ ಅವರನ್ನು ಬೆಂಬಲಿಸುತ್ತಿದ್ದಾರೆ

* ಚೀನಾ ವಿರುದ್ಧದ ಯಾವುದೇ ಹೋರಾಟದಲ್ಲಿ ಭಾರತವನ್ನು ಬೆಂಬಲಿಸುವುದಾಗಿ ಹೇಳಿದ ಕಾರಣಕ್ಕೆ ಭಾರತದಲ್ಲೂ ದೊಡ್ಡ ಪ್ರಮಾಣದಲ್ಲಿ ಜನರು ಟ್ರಂಪ್‌ ಅಧಿಕಾರಕ್ಕೆ ಮರಳುವುದನ್ನು ನಿರೀಕ್ಷಿಸುತ್ತಿದ್ದಾರೆ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು