ಶನಿವಾರ, 10 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳ–ಅಗಲ | ಅಮೆರಿಕದ ಸಿಲಿಕಾನ್‌ ವ್ಯಾಲಿ ಬ್ಯಾಂಕ್‌ ದಿವಾಳಿ ಆಗಿದ್ದೇಕೆ?

Last Updated 12 ಮಾರ್ಚ್ 2023, 21:42 IST
ಅಕ್ಷರ ಗಾತ್ರ

ಅಮೆರಿಕದ 14ನೇ ಅತಿದೊಡ್ಡ ಬ್ಯಾಂಕ್ ಆಗಿದ್ದ ‘ಸಿಲಿಕಾನ್ ವ್ಯಾಲಿ ಬ್ಯಾಂಕ್’ ಅನ್ನು ಸ್ಥಗಿತಗೊಳಿಸಲಾಗಿದೆ ಎಂದು ಕ್ಯಾಲಿಫೋರ್ನಿಯಾದ ಹಣಕಾಸು ರಕ್ಷಣೆ ಮತ್ತು ನಾವೀನ್ಯತೆ ಇಲಾಖೆಯು ಶುಕ್ರವಾರ ಅಧಿಕೃತವಾಗಿ ಘೋಷಿಸಿತು. ಇದರೊಂದಿಗೆ ಬ್ಯಾಂಕ್‌ನ ಗ್ರಾಹಕರು ತೀವ್ರ ಬಿಕ್ಕಟ್ಟಿಗೆ ಸಿಲುಕಿಸಿದ್ದಾರೆ. ಬ್ಯಾಂಕ್‌ನ ಸ್ವತ್ತಿನ ಮೌಲ್ಯ ಕುಸಿದಿದೆ. ಷೇರುಗಳು ಪಾತಾಳ ಕಂಡಿವೆ. ಗ್ರಾಹಕರ ಹಿತರಕ್ಷಣೆಗೆ ಹಲವು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.

ಬಿಕ್ಕಟ್ಟು ನಿರ್ವಹಣೆ ಯತ್ನದ ಭಾಗವಾಗಿ, ಫೆಡರಲ್ ಡೆಪಾಸಿಟ್ ಇನ್ಷುರೆನ್ಸ್ ಕಾರ್ಪೊರೇಷನ್ (ಎಫ್‌ಡಿಐಸಿ) ಅನ್ನು ಎಸ್‌ವಿಬಿಯ ಆಸ್ತಿ ನಿರ್ವಾಹಕ ಸಂಸ್ಥೆಯಾಗಿ ನೇಮಿಸಲಾಗಿದೆ. ಬ್ಯಾಂಕ್‌ಗೆ ಸಂಬಂಧಿಸಿದ ಆಸ್ತಿ, ಠೇವಣಿಯನ್ನು ಸುರಕ್ಷಿತವಾಗಿ ಇರಿಸುವ ಉದ್ದೇಶದಿಂದ ‘ನ್ಯಾಷನಲ್ ಬ್ಯಾಂಕ್ ಆಫ್ ಸಾಂಟಾಕ್ಲಾರಾ’ ಎಂಬ ಹೊಸ ಬ್ಯಾಂಕ್ ಅನ್ನು ಎಫ್‌ಡಿಐಸಿ ಸ್ಥಾಪಿಸಿದೆ. ಈ ಬ್ಯಾಂಕ್ ಸೋಮವಾರದಿಂದ ಕಾರ್ಯಾರಂಭ ಮಾಡಲಿದೆ. ಎಸ್‌ವಿಬಿ ವಿತರಿಸಿದ್ದ ಹಳೆಯ ಚೆಕ್‌ಗಳಿಗೆ ಇಲ್ಲಿ ಮಾನ್ಯತೆಯಿದೆ ಎನ್ನಲಾಗಿದೆ.

ಎಸ್‌ವಿಬಿ ಗ್ರಾಹಕರ ₹14.3 ಲಕ್ಷ ಕೋಟಿ (17,500 ಕೋಟಿ ಡಾಲರ್) ಠೇವಣಿ ಹಣವು ಈಗ ಹಣಕಾಸು ನಿಯಂತ್ರಕರ ಸುಪರ್ದಿಯಲ್ಲಿದೆ. ಬ್ಯಾಂಕ್‌ನಲ್ಲಿ ಪ್ರತಿ ಠೇವಣಿದಾರರ 2.5 ಲಕ್ಷ ಡಾಲರ್‌ವರೆಗಿನ ಠೇವಣಿಗೆ ಮಾತ್ರ ವಿಮೆ ಇದೆ. ಇದಕ್ಕೂ ಹೆಚ್ಚಿನ ಠೇವಣಿಯು ವಿಮೆಯ ವ್ಯಾಪ್ತಿಗೆ ಒಳಪಡುವುದಿಲ್ಲ. ಹೆಚ್ಚಿನ ಠೇವಣಿ ಇರಿಸಿರುವವರು, ಬ್ಯಾಂಕ್‌ನ ಸ್ವತ್ತು ಮಾರಾಟದವರೆಗೂ ಕಾಯಬೇಕಿದೆ.

ಬಾಂಡ್‌ಗಳಲ್ಲಿ ಹೆಚ್ಚು ಹೂಡಿಕೆ
ಮಾಹಿತಿ ತಂತ್ರಜ್ಞಾನ ಮತ್ತು ಆರೋಗ್ಯ ವಲಯದ ನವೋದ್ಯಮಗಳಿಗೆ ಎಸ್‌ವಿಬಿ ಹೆಚ್ಚಿನ ಪ್ರಾಶಸ್ತ್ಯ ನೀಡುತ್ತಿತ್ತು. ಹೆಚ್ಚಿನ ನವೋದ್ಯಮಗಳಿಗೆ ತಮ್ಮ ಹಣಕಾಸು ವ್ಯವಹಾರಗಳಿಗೆ ಎಸ್‌ವಿಬಿ ಮೊದಲ ಆಯ್ಕೆಯಾಗಿತ್ತು. ಬ್ಯಾಂಕ್‌ಗೆ ಹಣದ ಹರಿವು ಹೆಚ್ಚೇ ಇತ್ತು. ಗ್ರಾಹಕರ ಠೇವಣಿ ಹಣವನ್ನು ಬಾಂಡ್‌ಗಳಲ್ಲಿ ತೊಡಗಿಸಲು ಬ್ಯಾಂಕ್ ಮುಂದಾಯಿತು. ಗ್ರಾಹಕರ ಠೇವಣಿಯ ಬಹುತೇಕ ಹಣವನ್ನು ಬಾಂಡ್‌ ಖರೀದಿಗೆ ಬ್ಯಾಂಕ್ ಬಳಸಿತು. ತನ್ನ ಬಳಿ ಅಲ್ಪ ಪ್ರಮಾಣದ ನಗದು ಇರಿಸಿಕೊಂಡು, ಉಳಿದೆಲ್ಲ ಹಣವನ್ನು ಹೆಚ್ಚು ಆದಾಯ ಗಳಿಸಲು ಹೂಡಿಕೆ ಮಾಡಿತು. ಬಾಂಡ್‌ಗಳಿಂದ ಬರಬೇಕಿದ್ದ ಆದಾಯ ಕುಸಿದಿದ್ದರಿಂದ ಬ್ಯಾಂಕ್‌ ಸಂಕಷ್ಟಕ್ಕೆ ಈಡಾಯಿತು.

₹16,400 ಕೋಟಿ ನಷ್ಟ
ಕಳೆದ ಒಂದು ವರ್ಷದಲ್ಲಿ ಬ್ಯಾಂಕ್ ಬಡ್ಡಿದರ ಹೆಚ್ಚಿತು. ಈ ಅವಧಿಯಲ್ಲಿ ನವೋದ್ಯಮಗಳಲ್ಲಿ ಹೂಡಿಕೆ ಕುಸಿಯಲು ಆರಂಭಿಸಿತು. ಬಹುತೇಕ ನವೋದ್ಯಮಗಳು ಸಿಲಿಕಾನ್ ವ್ಯಾಲಿ ಬ್ಯಾಂಕ್‌ನಲ್ಲಿ ಇರಿಸಿದ್ದ ತಮ್ಮ ಠೇವಣಿ ಹಣವನ್ನು ವಾಪಸ್ ಪಡೆಯಲು ಮುಂದಾದವು. ಠೇವಣಿದಾರರ ಹಣವನ್ನು ವಾಪಸ್ ನೀಡುವ ಒತ್ತಡಕ್ಕೆ ಸಿಲುಕಿದ ಬ್ಯಾಂಕ್, ತನ್ನ ಕೈಯಲ್ಲಿದ್ದ ಅಲ್ಪಸ್ವಲ್ಪ ನಗದು ಬರಿದು ಮಾಡಿಕೊಂಡಿತು. ಬಿಕ್ಕಟ್ಟಿನಿಂದ ಪಾರಾಗಲು ಬ್ಯಾಂಕ್ ಯತ್ನಿಸಿತು. ಠೇವಣಿದಾರರ ಬೇಡಿಕೆ ಹೆಚ್ಚಾಗಿದ್ದರಿಂದ ತನ್ನ ಹೂಡಿಕೆಯ ಒಂದಿಷ್ಟು ಭಾಗವನ್ನು ಮಾರಾಟ ಮಾಡಬೇಕಾಯಿತು. ಹೂಡಿಕೆಯ ಮೌಲ್ಯವೂ ಕುಸಿದಿತ್ತು. ಈ ಒತ್ತಡದಲ್ಲಿ ಬುಧವಾರ ಹೇಳಿಕೆ ನೀಡಿದ ಬ್ಯಾಂಕ್, ಹೂಡಿಕೆ ಮಾರಾಟದಿಂದ ₹16,400 ಕೋಟಿಯಷ್ಟು (200 ಕೋಟಿ ಡಾಲರ್) ನಷ್ಟವಾಗಿದೆ ಎಂದು ಬಹಿರಂಗಪಡಿಸಿತು. ಜನರು ಇನ್ನಷ್ಟು ದಿಗಿಲಿಗೆ ಒಳಗಾಗಿ, ಬ್ಯಾಂಕ್‌ನಿಂದ ಠೇವಣಿ ವಾಪಸ್ ಪಡೆಯಲು ಮುಗಿಬಿದ್ದರು. ಸಂಕಷ್ಟದಿಂದ ಹೊರಬರಲು ತನ್ನಲಿರುವ ಷೇರುಗಳನ್ನು ಮಾರಾಟ ಮಾಡಲು ಮುಂದಾಯಿತು. ಆದರೆ ಬ್ಯಾಂಕ್‌ನ ಬಿಕ್ಕಟ್ಟು ಷೇರುಪೇಟೆಯ ಮೇಲೂ ಪರಿಣಾಮ ಬೀರಿ, ಬ್ಯಾಂಕ್‌ನ ಷೇರುಗಳು ಶೇ 60ರಷ್ಟು ಕುಸಿತ ಕಂಡವು.

ಫೆಡರಲ್ ರಿಸರ್ವ್ ಬಡ್ಡಿದರ ಏರಿಕೆ ಕಾರಣ
ಅಮೆರಿಕದ ಕೇಂದ್ರೀಯ ಬ್ಯಾಂಕ್ ಫೆಡರಲ್ ರಿಸರ್ವ್, ಹಣದುಬ್ಬರ ತಡೆಗೆ ಬಡ್ಡಿದರವನ್ನು ಏರಿಸುವ ಮಾರ್ಗ ಅನುಸರಿಸಲು ಮುಂದಾಯಿತು. ಕಳೆದ ಒಂದು ವರ್ಷದ ಅವಧಿಯಲ್ಲಿ 5 ಶೇಕಡಾವಾರು ಅಂಶದಷ್ಟು ಬಡ್ಡಿದರ ಏರಿಸಿತು. ಇದು ಸಿಲಿಕಾನ್ ವ್ಯಾಲಿ ಬ್ಯಾಂಕ್‌ನ ಮುಖ್ಯ ಗ್ರಾಹಕರಾಗಿದ್ದ ತಂತ್ರಜ್ಞಾನ ನವೋದ್ಯಮಗಳನ್ನೂ ಬಾಧಿಸಿತು. ನವೋದ್ಯಮಗಳ ಹೂಡಿಕೆದಾರರು ಬಡ್ಡಿ ದರ ಏರಿಕೆಯನ್ನು ನಿರೀಕ್ಷಿಸಿರಲಿಲ್ಲ. ಜೊತೆಗೆ ಕೋವಿಡ್‌ ಬಾಧಿಸಿದ್ದರಿಂದ ನವೋದ್ಯಮಗಳಲ್ಲಿನ ಹೂಡಿಕೆಯೂ ಕುಸಿಯಲು ಶುರುವಾಯಿತು. ಒಂದೊಂದೇ ನವೋದ್ಯಮಗಳು ಬಾಗಿಲು ಹಾಕಲು ಶುರು ಮಾಡಿದವು.

ಇತರೆ ಬ್ಯಾಂಕ್‌ಗಳ ಪರಿಣಾಮ ಆರಂಭ
ಅಮೆರಿಕದ ಇತರೆ ಬ್ಯಾಂಕ್‌ಗಳಿಗೆ ಹೋಲಿಸಿದರೆ, ಸಿಲಿಕಾನ್ ವ್ಯಾಲಿ ಬ್ಯಾಂಕ್‌ನಲ್ಲಿದ್ದ ಠೇವಣಿಯ ಮೊತ್ತ ದೊಡ್ಡದೇನೂ ಆಗಿರಲಿಲ್ಲ. ಆದರೆ, ಠೇವಣಿದಾರರು ಅಥವಾ ಹೂಡಿಕೆದಾರರು ದಿಗಿಲಿಗೆ ಒಳಗಾಗಿ ತಮ್ಮ ಹಣವನ್ನು ಹಿಂಪಡೆಯಲು ಮುಂದಾದರೆ ಎಂತಹ ಬ್ಯಾಂಕ್‌ನ ನಗದೂ ಬರಿದಾಗುತ್ತದೆ. ಇಂತಹ ವಿದ್ಯಮಾನಗಳು ಇನ್ನಷ್ಟು ಬ್ಯಾಂಕ್‌ಗಳ ಮೇಲೆ ಪರಿಣಾಮ ಬೀರುತ್ತವೆ. ಸಿಲಿಕಾನ್ ವ್ಯಾಲಿ ಬ್ಯಾಂಕ್ ಪ್ರಕರಣದಿಂದ ಸ್ಯಾನ್‌ ಫ್ರಾನ್ಸಿ‌ಸ್ಕೊದ ಫಸ್ಟ್ ರಿಪಬ್ಲಿಕ್ ಬ್ಯಾಂಕ್, ನ್ಯೂಯಾರ್ಕ್‌ನ ಸಿಗ್ನೇಚರ್ ಬ್ಯಾಂಕ್‌ಗಳ ಷೇರು ಮೌಲ್ಯ ಶೇ 20ರಷ್ಟು ಕುಸಿದಿದೆ. ಐರೋಪ್ಯ ದೇಶಗಳು, ಆಸ್ಟ್ರೇಲಿಯಾ ಮೊದಲಾದ ಕಡೆ ಬ್ಯಾಂಕಿಂಗ್ ವಲಯದ ಮೇಲೂ ಪರಿಣಾಮ ಆಗುತ್ತಿದೆ.

ಒಂದೇ ವಲಯ ಮುಳುವಾಯಿತೇ?
ಉಳಿದ ಬ್ಯಾಂಕ್‌ಗಳಿಗಿಂತ ಭಿನ್ನವಾಗಿ ಕಾರ್ಯಾಚರಣೆ ನಡೆಸಿದ್ದೇ ಬ್ಯಾಂಕ್‌ನ ಅವನತಿಗೆ ಕಾರಣ ಎನ್ನಲಾಗಿದೆ. ಮಾಹಿತಿ ತಂತ್ರಜ್ಞಾನ ಮತ್ತು ಆರೋಗ್ಯ ವಲಯದ ನವೋದ್ಯಮಗಳನ್ನೇ ದೃಷ್ಟಿಯಲ್ಲಿರಿಸಿಕೊಂಡು ಬ್ಯಾಂಕ್ ಕೆಲಸ ಮಾಡುತ್ತಿತ್ತು. ಕಳೆದ ಒಂದು ವರ್ಷದಿಂದ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಕಂಪನಿಗಳು ಷೇರುಗಳು ಕುಸಿತ ಕಾಣಲು ಆರಂಭಿಸಿದವು. ಈ ಕ್ಷೇತ್ರದಲ್ಲಿ ಉಂಟಾದ ಇಂತಹ ವ್ಯತ್ಯಯಗಳು, ಇಡೀ ಬ್ಯಾಂಕನ್ನು ಬೀದಿಗೆ ಬರುವಂತೆ ಮಾಡಿವೆ. ಬೇರೆ ಕ್ಷೇತ್ರಗಳ ಗ್ರಾಹಕರನ್ನೂ ಹೊಂದಿದ್ದರೆ, ಬಹುಶಃ ಬ್ಯಾಂಕ್‌ ದಿವಾಳಿಯ ಅಂಚಿಗೆ ಬರುತ್ತಿರಲಿಲ್ಲ ಎನ್ನುತ್ತಾರೆ ತಜ್ಞರು.

ಲೆಹ್ಮನ್ ಬ್ರದರ್ಸ್‌ ಛಾಯೆ
2008ರಲ್ಲಿ ಅಮೆರಿಕದ ಬ್ಯಾಂಕಿಂಗ್ ವಲಯದಲ್ಲಿ ಬಿಕ್ಕಟ್ಟು ಎದುರಾಗಿತ್ತು. ಸುಮಾರು 63 ಸಾವಿರ ಕೋಟಿ ಡಾಲರ್ ಮೌಲ್ಯದ ಸ್ವತ್ತು ಹೊಂದಿದ್ದ, ಅಮೆರಿಕದ ಅತಿದೊಡ್ಡ ಹೂಡಿಕೆ ಬ್ಯಾಂಕ್ ಎನಿಸಿದ್ದ ಲೆಹ್ಮನ್ ಬ್ರದರ್ಸ್ ದಿವಾಳಿಯಾಗಿತ್ತು. ಲೆ‌ಹ್ಮನ್ ಬ್ಯಾಂಕ್ ಅತಿಹೆಚ್ಚಾಗಿ ರಿಯಲ್‌ ಎಸ್ಟೇಟ್‌ ಕ್ಷೇತ್ರದ ಮೇಲೆ ಒತ್ತು ನೀಡಿತ್ತು. ಸಬ್‌ಪ್ರೈಮ್ ಲೆಂಡಿಂಗ್‌ ವ್ಯವಹಾರದಲ್ಲಿ ತೊಡಗಿತ್ತು. ಅಂದರೆ, ಕಡಿಮೆ ಆದಾಯದ ವ್ಯಕ್ತಿಗಳಿಗೂ ಗೃಹ ಸಾಲ ನೀಡಲು ಹಾಗೂ ಅಡಮಾನ ಸಾಲ ನೀಡಲು ಹೆಚ್ಚು ಒತ್ತು ನೀಡಿತು. ಇತರ ಬ್ಯಾಂಕ್‌ಗಳಲ್ಲಿ ತಿರಸ್ಕೃತಗೊಂಡಿದ್ದ ಅಡಮಾನ ಸಾಲದ ಅರ್ಜಿದಾರರಿಗೆ ಲೆಹ್ಮನ್ ಬ್ರದರ್ಸ್ ಬ್ಯಾಂಕ್ ಸಾಲ ನೀಡಿತು. ಈ ಅವಧಿಯಲ್ಲಿ ರಿಯಲ್ ಎಸ್ಟೇಟ್‌ ವಲಯ ಕುಸಿಯಲು ಆರಂಭಿಸಿತು. ಠೇವಣಿದಾರರು ಹಣ ವಾಪಸ್‌ ಪಡೆಯಲು ಮುಗಿಬಿದ್ದರು. ಬ್ಯಾಂಕ್‌ ಬಳಿಕ ಹೆಚ್ಚಿನ ನಗದು ಇರಲಿಲ್ಲ. ಬ್ಯಾಂಕ್ ಹೂಡಿಕೆ ಮಾಡಿದ್ದ ಆಸ್ತಿಗಳನ್ನು ಮಾರಾಟ ಮಾಡುವಂತಿರಲಿಲ್ಲ. ಹೀಗಾಗಿ ಬ್ಯಾಂಕ್ ದಿವಾಳಿಯಾಗಿತ್ತು. ಒಂದೇ ಕ್ಷೇತ್ರದಲ್ಲಿ ನೆಲೆ, ಸಾಲದ ಅಸಮರ್ಪಕ ನಿರ್ವಹಣೆಯಿಂದ ಬ್ಯಾಂಕ್ ಬೀದಿಗೆ ಬರಬೇಕಾಯಿತು.

ಭಾರತ ಮೂಲದ ನವೋದ್ಯಮಗಳಿಗೆ ತೊಡಕು
ಸಿಲಿಕಾನ್‌ ವ್ಯಾಲಿ ಬ್ಯಾಂಕ್‌ (ಎಸ್‌ವಿಬಿ) ದಿವಾಳಿಯಾಗಿದ್ದು, ಭಾರತ ಮೂಲದ ನವೋದ್ಯಮ ಕ್ಷೇತ್ರಕ್ಕೆ ಭಾರಿ ಹೊಡೆತ ನೀಡಲಿದೆ ಎಂದು ತಜ್ಞರು ಅಂದಾಜಿಸಿದ್ದಾರೆ. ಅಮೆರಿಕದಲ್ಲಿ ಹೊಸದಾಗಿ ಆರಂಭವಾಗುವ ಪ್ರತಿ ಮೂರು ನವೋದ್ಯಮಗಳಲ್ಲಿ ಒಂದು ಭಾರತೀಯರು ಅಥವಾ ಭಾರತೀಯ ಅಮೆರಿಕನ್ನರಿಗೆ ಸೇರಿದ್ದಾಗಿರುತ್ತದೆ. ಈ ನವೋದ್ಯಮಗಳು ಅಮೆರಿಕದ ಕಂಪನಿಗಳು/ಗ್ರಾಹಕರಿಗಾಗಿ ಕೆಲಸ ಮಾಡುತ್ತವೆ. ಇಂತಹ ಬಹುತೇಕ ನವೋದ್ಯಮಗಳ ಆರ್ಥಿಕ ವ್ಯವಹಾರಗಳು ಎಸ್‌ವಿಬಿ ಮೂಲಕವೇ ನಡೆಯುತ್ತಿತ್ತು. ಈಗ ಬ್ಯಾಂಕ್‌ ದಿವಾಳಿಯಾಗಿರುವುದು ಭಾರತ ಮೂಲದ ನವೋದ್ಯಮಗಳಿಗೆ ದೊಡ್ಡ ಹೊಡೆತ ಎಂದು ತಜ್ಞರು ಅಂದಾಜಿಸಿದ್ದಾರೆ.

ಅಮೆರಿಕದ ಬಹುತೇಕ ಬ್ಯಾಂಕ್‌ಗಳ ನೀತಿ ಮತ್ತು ನಿಯಮಗಳು ಭಾರತ ಮೂಲದ ನವೋದ್ಯಮಗಳ ಜತೆಗೆ ವ್ಯವಹಾರ ನಡೆಸಲು ಪೂರಕವಾಗಿಲ್ಲ. ನವೋದ್ಯಮಗಳಲ್ಲಿ ಅಮೆರಿಕದ ನೌಕರರು ಇಲ್ಲದೇ ಇದ್ದರೆ, ಬಹುತೇಕ ಬ್ಯಾಂಕ್‌ಗಳು ಭಾರತ ಮೂಲದ ನವೋದ್ಯಮಗಳೊಂದಿಗೆ ವ್ಯವಹರಿಸುವುದೇ ಇಲ್ಲ. ಆದರೆ, ಎಸ್‌ವಿಬಿಯಲ್ಲಿ ಇಂತಹ ನಿರ್ಬಂಧಗಳು ಇರಲಿಲ್ಲ. ಹೀಗಾಗಿ ಭಾರತ ಮೂಲದ ಬಹುತೇಕ ನವೋದ್ಯಮಗಳು ಎಸ್‌ವಿಬಿ ಮೂಲಕವೇ ಬ್ಯಾಂಕ್‌ ವ್ಯವಹಾರ ನಡೆಸುತ್ತಿದ್ದವು. ಈಗ ಎಸ್‌ವಿಬಿ ದಿವಾಳಿಯಾಗಿರುವುದು ಇಂತಹ ನವೋದ್ಯಮಗಳ ಭವಿಷ್ಯವನ್ನೇ ಅತಂತ್ರವಾಗಿಸಿದೆ ಎನ್ನುತ್ತಾರೆ ಸಿಲಿಕಾನ್‌ ವ್ಯಾಲಿಯಲ್ಲಿನ ಹೂಡಿಕೆದಾರ ಅಶು ಗಾರ್ಗ್‌.

ಭಾರತ ಮೂಲದ ನವೋದ್ಯಮಗಳು ಮುಖ್ಯವಾಗಿ ಮೂರು ಕಾರಣಗಳಿಗಾಗಿ ಎಸ್‌ವಿಬಿಯನ್ನು ಅವಲಂಬಿಸಿದ್ದವು. ಮೊದಲನೆಯದಾಗಿ ಸಾಲ, ಎರಡನೆಯದಾಗಿ ಹೂಡಿಕೆ ಮತ್ತು ಮೂರನೆಯದಾಗಿ ವೇತನ ಪಾವತಿ. ಭಾರತದಲ್ಲೇ ಕಚೇರಿ ಹೊಂದಿರುವ ಮತ್ತು ಭಾರತೀಯರೇ ನೌಕರರಾಗಿದ್ದು, ಅಮೆರಿಕನ್ನರಿಗಾಗಿ ಕಾರ್ಯನಿರ್ವಹಿಸುವ ನವೋದ್ಯಮಗಳ ಸ್ಥಾಪನೆಗೆ ಅಗತ್ಯವಿರುವ ಬಂಡವಾಳವನ್ನು ಸಾಲದ ರೂಪದಲ್ಲಿ ಒದಗಿಸುವ ಸೇವೆಯನ್ನು ಎಸ್‌ವಿಬಿ ನೀಡುತ್ತಿತ್ತು. ಇದರಿಂದ ಇಂತಹ ನವೋದ್ಯಮಗಳ ಸ್ಥಾಪನೆಗೆ ಆರ್ಥಿಕ ನೆರವು ದೊರೆಯುತ್ತಿತ್ತು. ಜತೆಗೆ ಇದು ಹೂಡಿಕೆ ಬ್ಯಾಂಕ್‌ ಸಹ ಆಗಿದ್ದರಿಂದ ಇಂತಹ ನವೋದ್ಯಮಗಳಲ್ಲಿ ಎಸ್‌ವಿಬಿ ಹೂಡಿಕೆಯನ್ನೂ ಮಾಡುತ್ತಿತ್ತು. ಇವೆರಡೂ ಸೇವೆಗಳು ಭಾರತ ಮೂಲದ ನವೋದ್ಯಮಗಳು ದೊಡ್ಡಮಟ್ಟದಲ್ಲಿ ಬೆಳೆಯಲು ಸಹಕಾರಿಯಾಗಿದ್ದವು.

ಈಗ ಎಸ್‌ವಿಬಿ ದಿವಾಳಿಯಾಗಿರುವ ಕಾರಣ ಅದು ನೀಡಿರುವ ಸಾಲಗಳು ಬೇರೆ ಬ್ಯಾಂಕ್‌ಗಳಿಗೆ ಅಥವಾ ಹೂಡಿಕೆದಾರರಿಗೆ ಮಾರಾಟವಾಗುವ ಸಾಧ್ಯತೆಗಳು ಇವೆ. ಬೇರೆ ಬ್ಯಾಂಕ್‌ಗಳ ನಿಯಮಗಳು ಭಾರತ ಮೂಲದ ನವೋದ್ಯಮಗಳಿಗೆ ಪ್ರತಿಕೂಲವಾಗಿರುವ ಕಾರಣ, ಸಾಲವನ್ನು ತಕ್ಷಣವೇ ಮರುಪಾವತಿಸಿ ಎಂದು ಕೇಳುವ ಸಾಧ್ಯತೆ ಇದೆ. ಅಥವಾ ಸಾಲದ ಮೇಲಿನ ಬಡ್ಡಿಯ ನಿಯಮಗಳು ಮತ್ತು ದರಗಳು ಬದಲಾಗುವ ಸಾಧ್ಯತೆಗಳು ಇವೆ. ಇವು ಭಾರತ ಮೂಲದ ನವೋದ್ಯಮಗಳ ಕಾರ್ಯನಿರ್ವಹಣೆ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು ಎಂದು ಅಂದಾಜಿಸಲಾಗಿದೆ.

ಇನ್ನು ಗ್ರಾಹಕರೊಂದಿಗೆ ವ್ಯವಹಾರಗಳು ಎಸ್‌ವಿಬಿ ಮೂಲಕವೇ ನಡೆಯುತ್ತಿದ್ದ ಕಾರಣ, ಈಗ ಬಾಕಿ ಇರುವ ವಹಿವಾಟುಗಳು ಅಥವಾ ವರ್ಗಾವಣೆಗಳು ಸ್ಥಗಿತವಾಗಿವೆ. ಇದರಿಂದ ನವೋದ್ಯಮಗಳ ಖಾತೆಗಳಲ್ಲಿ ಹಣವೇ ಇಲ್ಲದಂತ ಸ್ಥಿತಿ ನಿರ್ಮಾಣವಾಗಬಹುದು. ನವೋದ್ಯಮಗಳು ಮಾಡಬೇಕಿರುವ ಪಾವತಿಗಳು ವಿಳಂಬವಾಗಬಹುದು. ಜತೆಗೆ ನೌಕರರ ವೇತನ ಪಾವತಿಯೂ ಸ್ಥಗಿತವಾಗಬಹುದು ಎಂದು ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ.

______________________________________________________________________________________

ಆಧಾರ: ಪಿಟಿಐ, ರಾಯಿಟರ್ಸ್, ನ್ಯೂಯಾರ್ಕ್‌ ಟೈಮ್ಸ್, ಎಪಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT