ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳ –ಅಗಲ: ತಾಯಿಕಾರ್ಡ್‌ ಮತ್ತಿತರ ಸವಲತ್ತು, ಅನುಷ್ಠಾನದಲ್ಲಿ ಹಲವು ತೊಡಕು

Last Updated 7 ನವೆಂಬರ್ 2022, 19:32 IST
ಅಕ್ಷರ ಗಾತ್ರ

ತಾಯಿ ಕಾರ್ಡ್‌ ಮತ್ತು ಆಧಾರ್ ಕಾರ್ಡ್‌ ಇಲ್ಲ ಎಂದು ತುಮಕೂರು ಜಿಲ್ಲಾ ಆಸ್ಪತ್ರೆಯಲ್ಲಿ ಗರ್ಭಿಣಿಯೊಬ್ಬರನ್ನು ದಾಖಲು ಮಾಡಿಕೊಳ್ಳದೇ ಇದ್ದ ಕಾರಣ, ಮನೆ ಹೆರಿಗೆ ವೇಳೆ ಆಕೆ ಮತ್ತು ಆಕೆಯ ಅವಳಿ ಶಿಶುಗಳು ಮೃತಪಟ್ಟ ಘಟನೆ ಇನ್ನೂ ಹಸಿಯಾಗೇ ಇದೆ. ಈ ಘಟನೆ ರಾಜ್ಯದಾದ್ಯಂತ ಆಕ್ರೋಶಕ್ಕೆ ಕಾರಣವಾಗಿದೆ. ಇದರ ಮಧ್ಯೆಯೇ, ಸಂಬಂಧಿತ ವೈದ್ಯಾಧಿಕಾರಿ ತಾನು ಕರ್ತವ್ಯಲೋಪ ಎಸಗಿಲ್ಲ ಎಂದಿದ್ದಾರೆ. ಆದರೆ, ತಾಯಿ ಕಾರ್ಡ್‌ ಇಲ್ಲದೇ ಇದ್ದರೂ ಚಿಕಿತ್ಸೆ ನೀಡಬೇಕು ಎನ್ನುತ್ತದೆ ಕೇಂದ್ರ ಆರೋಗ್ಯ ಸಚಿವಾಲಯದ ತಾಯಿ ಮತ್ತು ಶಿಶು ಕಾರ್ಡ್‌ ಮಾರ್ಗಸೂಚಿ. ರಾಜ್ಯ ಸರ್ಕಾರವೂ ಈ ಸಂಬಂಧ ಈಗಷ್ಟೇ ಆದೇಶ ಹೊರಡಿಸಿ, ದಾಖಲೆ ಇಲ್ಲದಿದ್ದರೆ ತುರ್ತು ಸಂದರ್ಭದಲ್ಲಿ ಚಿಕಿತ್ಸೆ ನಿರಾಕರಿಸುವಂತಿಲ್ಲ ಎಂದು ಹೇಳಿದೆ. ಆದರೆ, ಕೇಂದ್ರ ಸರ್ಕಾರವು 2018ರಲ್ಲೇ ಇಂತಹ ಮಾರ್ಗಸೂಚಿ ಹೊರಡಿಸಿದೆ. ಅದು ರಾಜ್ಯದಲ್ಲಿ ಪೂರ್ಣ ಪ್ರಮಾಣದಲ್ಲಿ ಅನುಷ್ಠಾನವಾಗಿಲ್ಲ ಅಷ್ಟೆ. ರಾಜ್ಯದಾದ್ಯಂತ ತಾಯಿಕಾರ್ಡ್‌ನಿಂದ ವಂಚಿತರಾಗಿರುವ ಗರ್ಭಿಣಿಯರ ಸರಾಸರಿ ಪ್ರಮಾಣವು ಶೇ 2.4ರಷ್ಟಿದೆ. ತುಮಕೂರು ಜಿಲ್ಲೆಯಲ್ಲಿ ಅಂತಹ ವಂಚಿತರ ಪ್ರಮಾಣ ಶೇ 0.7ರಷ್ಟಿದೆ. ಗರ್ಭಿಣಿ, ತಾಯಿ ಮತ್ತು ಶಿಶು ಆರೈಕೆ ಉದ್ದೇಶದಿಂದ ಸರ್ಕಾರವು ಜಾರಿಗೆ ತಂದಿರುವ ಯೋಜನೆಗಳು ರಾಜ್ಯದಲ್ಲಿ ಪರಿಣಾಮಕಾರಿಯಾಗಿ ಜಾರಿಯಾಗುತ್ತಿಲ್ಲ ಎಂಬುದರತ್ತ ಬೊಟ್ಟುಮಾಡುತ್ತವೆ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯ ದತ್ತಾಂಶಗಳು.

***

ತಾಯಿ ಕಾರ್ಡ್‌ ಇಲ್ಲವೆಂದು ಚಿಕಿತ್ಸೆ ನಿರಾಕರಿಸುವಂತೆಯೇ ಇಲ್ಲ
ಗರ್ಭಿಣಿಯಾದ ದಿನದಿಂದ, ಹೆರಿಗೆಯ ನಂತರವೂ ಆಕೆಯ ಆರೋಗ್ಯದ ಮೇಲೆ ನಿಗಾ ಇರಿಸುವ ಉದ್ದೇಶದಿಂದ ತಾಯಿ ಕಾರ್ಡ್‌ ಯೋಜನೆ ಆರಂಭಿಸಲಾಗಿತ್ತು. ಆಸ್ಪತ್ರೆಗೆ ಬರುವ ಯಾವುದೇ ಗರ್ಭಿಣಿಯು ತಾಯಿ ಕಾರ್ಡ್‌ಗೆ ನೋಂದಣಿ ಮಾಡಿಕೊಳ್ಳದೇ ಇದ್ದರೆ, ನೋಂದಣಿ ಮಾಡಿಸಿ ತಾಯಿ ಕಾರ್ಡ್‌ ನೀಡುವ ಹೊಣೆ ಸರ್ಕಾರಿ ಆಸ್ಪತ್ರೆಯ ಸಿಬ್ಬಂದಿಯದ್ದಾಗಿರುತ್ತದೆ. ಆದರೆ, ರಾಜ್ಯದ ಗರ್ಭಿಣಿಯರಲ್ಲಿ ಶೇ 2.4ರಷ್ಟು ಮಂದಿ ಈ ಸವಲತ್ತಿನಿಂದ ವಂಚಿತರಾಗಿದ್ದಾರೆ ಎನ್ನುತ್ತದೆ ಎನ್‌ಎಫ್‌ಎಚ್‌ಎಸ್‌–5 ವರದಿ.

ಪ್ರಮಾಣವಾರು ಮಟ್ಟದಲ್ಲಿ ಈ ಸಂಖ್ಯೆ ಅತ್ಯಂತ ಕಡಿಮೆ. ತುಮಕೂರು ಜಿಲ್ಲೆಯಲ್ಲಿ ಈ ಸವಲತ್ತಿನಿಂದ ವಂಚಿತರಾದ ಗರ್ಭಿಣಿಯರ ಪ್ರಮಾಣ ಶೇ 0.7ರಷ್ಟು ಮಾತ್ರ. ಆದರೆ, ಅದೇ ಜಿಲ್ಲೆಯಲ್ಲಿ ತಾಯಿಕಾರ್ಡ್‌ ಇಲ್ಲ ಎಂಬ ಕಾರಣಕ್ಕೆ ಗರ್ಭಿಣಿಯೊಬ್ಬರಿಗೆ ಆಸ್ಪತ್ರೆಗೆ ದಾಖಲಾತಿ ಮತ್ತು ವೈದ್ಯಕೀಯ ಸೇವೆಯನ್ನು ನಿರಾಕರಿಸಲಾಗಿದೆ. ಆಸ್ಪತ್ರೆಗೆ ದಾಖಲಾಗದೇ ಇದ್ದ ಕಾರಣ, ಮನೆಯಲ್ಲಿ ಹೆರಿಗೆಯಾಗಿ ಆ ವೇಳೆ ಆಕೆ ಮೃತಪಟ್ಟಿದ್ದಾರೆ. ಅವಳಿ ಮಕ್ಕಳೂ ಮೃತಪಟ್ಟಿವೆ. ಎನ್‌ಎಫ್‌ಎಚ್‌ಎಸ್‌–5ರ ದತ್ತಾಂಶಗಳ ಪ್ರಕಾರ ಐದು ವರ್ಷಗಳ ಅವಧಿಯಲ್ಲಿ ತುಮಕೂರು ಜಿಲ್ಲೆಯಲ್ಲಿ ಒಂದೂ ಮನೆ ಹೆರಿಗೆ ನಡೆದಿಲ್ಲ. ಆದರೆ, ಈಗ ವರದಿಯಾದ ಒಂದೇ ಮನೆಹರಿಗೆಯಲ್ಲಿ ತಾಯಿ ಮತ್ತು ಶಿಶುಗಳು ಸಾವಿಗೀಡಾಗಿವೆ.

ಗರ್ಭ ಧರಿಸಿದ ಮೂರು ತಿಂಗಳ ಒಳಗೆ ಮಹಿಳೆ ಈ ಕಾರ್ಡ್‌ಗೆ ನೋಂದಣಿ ಮಾಡಿಸಿಕೊಳ್ಳಬೇಕು. ಇಲ್ಲದೇ ಇದ್ದಲ್ಲಿ, ಮೂರು ತಿಂಗಳ ನಂತರ ಆಕೆ ಆಸ್ಪತ್ರೆಗೆ ನೀಡಿದ ಮೊದಲ ಭೇಟಿಯಲ್ಲೇ ಈ ಸೌಲಭ್ಯಕ್ಕೆ ಒಳಪಡಿಸುವ ಹೊಣೆ ಪ್ರತಿ ಸರ್ಕಾರಿ ಆಸ್ಪತ್ರೆಯ ಸಿಬ್ಬಂದಿಯದ್ದಾಗಿರುತ್ತದೆ. ಆರೋಗ್ಯ ಇಲಾಖೆಗೆ ಸಂಬಂಧಿಸಿದ ಯಾವುದೇ ಹಂತದ ಆಸ್ಪತ್ರೆ ಮತ್ತು ಆರೋಗ್ಯ ಕೇಂದ್ರಗಳಿಗೂ ಈ ಹೊಣೆ ಅನ್ವಯವಾಗತ್ತದೆ.

ಪ್ರತಿ ಹೆರಿಗೆಯೂ ಆಸ್ಪತ್ರೆಯಲ್ಲೇ ನಡೆಯಬೇಕು ಎಂಬ ಉದ್ದೇಶದಿಂದ, ‘ತಾಯಿ ಕಾರ್ಡ್‌ ಇಲ್ಲದೇ ಇದ್ದರೂ, ಹೆರಿಗೆ ನಡೆಸಬೇಕು. ತಾಯಿ ಕಾರ್ಡ್‌ ಇಲ್ಲ ಎಂಬ ಒಂದೇ ಕಾರಣಕ್ಕೆ ಆಸ್ಪತ್ರೆಗೆ ದಾಖಲಾತಿ ಮತ್ತು ಚಿಕಿತ್ಸೆಯನ್ನು ನಿರಾಕರಿಸುವಂತಿಲ್ಲ’ ಎನ್ನುತ್ತದೆ ತಾಯಿ ಮತ್ತು ಶಿಶು ಕಾರ್ಡ್‌ ಮಾರ್ಗಸೂಚಿ. ಗರ್ಭಿಣಿಯು ತಾಯಿ ಕಾರ್ಡ್‌ಗೆ ನೋಂದಣಿಯಾಗಿದ್ದು, ಅವರ ಕಾರ್ಡ್‌ ಕಳೆದು ಹೋಗಿದ್ದರೂ ಅಥವಾ ಹರಿದುಹೋಗಿದ್ದರೂ ಚಿಕಿತ್ಸೆ ನಿರಾಕರಿಸುವಂತಿಲ್ಲ.

2018ರಿಂದಲೂ ಇದು ಜಾರಿಯಲ್ಲಿದೆ. ಆದರೆ, ರಾಜ್ಯದ ಆಸ್ಪತ್ರೆಗಳಲ್ಲಿ ಇದು ಪಾಲನೆಯಾಗುತ್ತಿರಲಿಲ್ಲ ಎಂಬುದನ್ನು ತುಮಕೂರಿನ ಘಟನೆ ಎತ್ತಿ ತೋರಿಸಿದೆ. ಈ ಮಾರ್ಗಸೂಚಿಯ ಬಗ್ಗೆ ಅರಿವೇ ಇರಲಿಲ್ಲ ಎಂಬುದನ್ನು ಸಂಬಂಧಿತ ವೈದ್ಯಾಧಿಕಾರಿಯ ಸಮಜಾಯಿಷಿಯಗಳು ಸೂಚಿಸುತ್ತವೆ.

ಪ್ರಸವಪೂರ್ವ ಆರೈಕೆಯಲ್ಲೂ ವಂಚಿತರು
ಗರ್ಭಧಾರಣೆಯ ಒಂಬತ್ತು ತಿಂಗಳ ಅವಧಿಯಲ್ಲಿ ಪ್ರತಿ ಗರ್ಭಿಣಿಯೂ ಕನಿಷ್ಠ ನಾಲ್ಕು ಬಾರಿ ಪ್ರಸವಪೂರ್ವ ಆರೈಕೆಗಾಗಿ ಆಸ್ಪತ್ರೆಗೆ ಭೇಟಿ ನೀಡಬೇಕು. ಪ್ರಸವಪೂರ್ವ ಆರೈಕೆ ಮತ್ತು ತಪಾಸಣೆಗೆ ಒಳಗಾಗುವಂತೆ ಆಯಾ ವಸತಿ ಪ್ರದೇಶದಲ್ಲಿರುವ ಗರ್ಭಿಣಿಯ ಮತ್ತು ಅವರ ಕುಟುಂಬದವರ ಮನವೊಲಿಸುವ ಹೊಣೆ ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು ಮತ್ತು ಸಂಬಂಧಿತ ಆಸ್ಪತ್ರೆಯ ಸ್ಟಾಫ್‌ನರ್ಸ್‌ಗಳದ್ದು ಎಂದು ತಾಯಿ ಮತ್ತು ಶಿಶು ಕಾರ್ಡ್‌ ಮಾರ್ಗಸೂಚಿಯಲ್ಲಿ ಹೇಳಲಾಗಿದೆ. ರಾಜ್ಯದಲ್ಲಿ ಇದನ್ನು ಜಾರಿಗೆ ತಂದಿದ್ದರೂ ಶೇ 30ರಷ್ಟು ಗರ್ಭಿಣಿಯರು ಈ ಸವಲತ್ತಿನಿಂದ ವಂಚಿತರಾಗಿದ್ದಾರೆ ಎನ್ನುತ್ತದೆ ಎನ್‌ಎಫ್‌ಎಚ್‌ಎಸ್‌ ದತ್ತಾಂಶ.

ತುಮಕೂರು ಜಿಲ್ಲೆಯಲ್ಲಿ ನಾಲ್ಕು ಮತ್ತು ಅದಕ್ಕಿಂತ ಹೆಚ್ಚು ಬಾರಿ ಆಸ್ಪತ್ರೆಗೆ ಭೇಟಿ ನೀಡುತ್ತಿರುವ ಗರ್ಭಿಣಿಯರ ಪ್ರಮಾಣ ಶೇ 80ರಷ್ಟಿದೆ. ಜಿಲ್ಲೆಯಲ್ಲಿ ಶೇ 20ರಷ್ಟು ಗರ್ಭಿಣಿಯರು ನಾಲ್ಕು ಬಾರಿ ತಪಾಸಣೆಗೆ ಒಳಗಾಗುವುದರಿಂದ ವಂಚಿತರಾಗಿದ್ದಾರೆ. ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಈ ಪರಿಸ್ಥಿತಿ ಇನ್ನೂ ಶೋಚನೀಯವಾಗಿದೆ. ರಾಜ್ಯದಲ್ಲಿ ಈ ಕಾರ್ಯಕ್ರಮವು ಪೂರ್ಣಪ್ರಮಾಣದಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನವಾಗುತ್ತಿಲ್ಲ ಎಂಬುದನ್ನು ಈ ದತ್ತಾಂಶಗಳು ಹೇಳುತ್ತವೆ.

ಸುರಕ್ಷಿತ ಹೆರಿಗೆಗೆ ತಜ್ಞರ ಕೊರತೆ
ರಾಜ್ಯದಲ್ಲಿ ಕಳೆದ ಐದು ವರ್ಷಗಳಲ್ಲಿ ನಡೆದ ಒಟ್ಟು ಹೆರಿಗೆಗಳಲ್ಲಿ, ಶೇ 6.2ರಷ್ಟು ಹೆರಿಗೆಗಳು ತಜ್ಞ ಆರೋಗ್ಯ ಸಿಬ್ಬಂದಿ ಇಲ್ಲದೇ ನಡೆಯುತ್ತವೆ ಎನ್ನುತ್ತದೆ ಎನ್‌ಎಫ್‌ಎಚ್‌ಎಸ್‌ ದತ್ತಾಂಶಗಳು. ಹೆರಿಗೆ ಸಂದರ್ಭದಲ್ಲಿ ನುರಿತ ವೈದ್ಯರು, ದಾದಿಯರು, ಮಿಡ್‌ವೈಫ್‌ ಅಥವಾ ಮಹಿಳಾ ಆರೋಗ್ಯ ಅಧಿಕಾರಿ ಅಥವಾ ವೈದ್ಯಕೀಯ ಸಿಬ್ಬಂದಿ ಇರಬೇಕು. ಈ ಸಿಬ್ಬಂದಿಗಳಲ್ಲಿ ಯಾರೂ ಇಲ್ಲದೇ ಶೇ 6.2ರಷ್ಟು ಹೆರಿಗೆಗಳು ರಾಜ್ಯದಲ್ಲಿ ನಡೆದಿವೆ. ಕೆಲವು ಜಿಲ್ಲೆಗಳಲ್ಲಿ ಇಂತಹ ಹೆರಿಗೆಗಳ ಪ್ರಮಾಣ ಶೇ 10ಕ್ಕಿಂತಲೂ ಹೆಚ್ಚು ಇದೆ.

ರಾಜ್ಯದ ಆಸ್ಪತ್ರೆಗಳಲ್ಲಿ ಅಗತ್ಯ ಸಿಬ್ಬಂದಿ ಇಲ್ಲದೇ ಇರುವುದನ್ನು ಈ ದತ್ತಾಂಶಗಳು ಸೂಚಿಸುತ್ತವೆ. ಎಲ್ಲಾ ಸ್ವರೂಪದ ಆರೋಗ್ಯ ಕೇಂದ್ರಗಳು ಮತ್ತು ಆಸ್ಪತ್ರೆಗಳಲ್ಲಿ ಸಿಬ್ಬಂದಿ ಕೊರತೆ ಇದೆ ಹಾಗೂ ಇದರಿಂದ ಆರೋಗ್ಯ ಸೇವೆಯನ್ನು ಪರಿಣಾಮಕಾರಿಯಾಗಿ ನೀಡಲು ಸಾಧ್ಯವಾಗುತ್ತಿಲ್ಲ. ಇದರಿಂದ ತಾಯಿ ಮತ್ತು ಶಿಶುವಿನ ಜೀವಕ್ಕೆ ಹಾನಿಯಾಗುವ ಅಪಾಯವಿದೆ ಎಂಬುದನ್ನು ಈ ದತ್ತಾಂಶಗಳು ಒತ್ತಿ ಹೇಳುತ್ತವೆ.

ಸರ್ಕಾರಿ ಆಸ್ಪತ್ರೆಯಲ್ಲೂ ಹೆರಿಗೆಗೆ ಹಣ ನೀಡಬೇಕು...
ತುಮಕೂರು ಜಿಲ್ಲಾ ಆಸ್ಪತ್ರೆಯಲ್ಲಿ ದಾಖಲಾತಿ ಮತ್ತು ಚಿಕಿತ್ಸೆ ದೊರೆಯದೇ ಇದ್ದ ಕಾರಣಕ್ಕೆ ಆ ಗರ್ಭಿಣಿಯು, ಖಾಸಗಿ ಆಸ್ಪತ್ರೆಗೆ ಹೋಗುವ ಅನಿವಾರ್ಯತೆ ಉಂಟಾಗಿತ್ತು. ಆದರೆ ಹಣ ಇಲ್ಲದೇ ಇರುವ ಕಾರಣಕ್ಕೆ ಖಾಸಗಿ ಆಸ್ಪತ್ರೆಗೂ ಹೋಗಲಾಗದೆ, ಆ ಗರ್ಭಿಣಿ ಮನೆ ಹೆರಿಗೆಗೆ ಒಳಗಾಗಬೇಕಾಯಿತು. ಜಿಲ್ಲೆಯಲ್ಲಿ ಶೇ 100ರಷ್ಟು ಹೆರಿಗೆಗಳು ಆಸ್ಪತ್ರೆಯಲ್ಲೇ ನಡೆಯುತ್ತದೆ ಎಂದರೂ, ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳಲ್ಲಿ ಪ್ರತಿ ಹೆರಿಗೆಗೆ ಯಾವುದೇ ರಸೀದಿ ಇಲ್ಲದೆ ₹4,533 ವೆಚ್ಚ ಮಾಡಬೇಕಾಗುತ್ತದೆ ಎನ್ನುತ್ತದೆ ಎನ್‌ಎಫ್‌ಎಚ್‌ಎಸ್ ದತ್ತಾಂಶ.

ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಇದೇ ಪರಿಸ್ಥಿತಿ ಇದೆ. ಕೆಲವು ಜಿಲ್ಲೆಗಳಲ್ಲಿ ಹೀಗೆ ವೆಚ್ಚ ಮಾಡಬೇಕಾದ ಹಣದ ಮೊತ್ತ ಕಡಿಮೆ ಇದ್ದರೆ, ಕೆಲವು ಜಿಲ್ಲೆಗಳಲ್ಲಿ ಹೆಚ್ಚು. ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಹೀಗೆ ಮಾಡಬೇಕಾದ ಸರಾಸರಿ ಮೊತ್ತವು ₹4,955ರಷ್ಟಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಎಲ್ಲಾ ಸವಲತ್ತುಗಳು ಉಚಿತವಾಗಿದ್ದರೂ, ಹಣ ವೆಚ್ಚ ಮಾಡದೆ ಹೆರಿಗೆ ನಡೆಯುವುದಿಲ್ಲ ಎಂಬುದನ್ನು ಇದು ಸೂಚಿಸುತ್ತದೆ.

ಆಧಾರ: ಎನ್‌ಎಫ್‌ಎಚ್‌ಎಸ್‌–5 ವರದಿ, ತಾಯಿ ಮತ್ತು ಶಿಶು ಕಾರ್ಡ್‌ ಮಾರ್ಗಸೂಚಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT