ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳ ಅಗಲ | ಸೆ. 10 ಆತ್ಮಹತ್ಯೆ ತಡೆ ದಿನ – ಆತ್ಮಹತ್ಯೆ ಪರಿಹಾರವಲ್ಲ ಅದುವೇ ಸಮಸ್ಯೆ

ಸೆಪ್ಟೆಂಬರ್‌ 10ವಿಶ್ವ ಆತ್ಮಹತ್ಯೆ ತಡೆ ದಿನ
Last Updated 9 ಸೆಪ್ಟೆಂಬರ್ 2022, 4:20 IST
ಅಕ್ಷರ ಗಾತ್ರ

ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲ್ಯುಎಚ್‌ಒ) ಮಾಹಿತಿ ಪ್ರಕಾರ ಪ್ರತಿ ವರ್ಷ ಏಳು ಲಕ್ಷಕ್ಕೂ ಹೆಚ್ಚು ಮಂದಿ ಆತ್ಮಹತ್ಯೆ ಮಾಡಿಕೊಂಡು ತಮ್ಮ ಜೀವನ ಕೊನೆಗೊಳಿಸುತ್ತಿದ್ದಾರೆ. ಇದರ 20 ಪಟ್ಟಿಗೂ ಹೆಚ್ಚು ಮಂದಿ ಆತ್ಮಹತ್ಯೆಗೆ ಪ್ರಯತ್ನ ಮಾಡುತ್ತಾರೆ. ಇದಕ್ಕಿಂತ ಎಷ್ಟೋ ಪಟ್ಟು ಹೆಚ್ಚು ಜನರು ಆತ್ಮಹತ್ಯೆ ಕುರಿತು ಯೋಚಿಸುತ್ತಿರುತ್ತಾರೆ. ತೀವ್ರ ವೇದನೆ ಅಥವಾ ಸಮಸ್ಯೆಗಳಿಂದ ಬಳಲುತ್ತಿರುವ ಲಕ್ಷಾಂತರ ಮಂದಿಯಲ್ಲಿ ಆತ್ಮಹತ್ಯಾ ಮನೋಭಾವ ಇರುತ್ತದೆ. ಇದು ಗಂಭೀರವಾದ ಮಾನಸಿಕ ಆರೋಗ್ಯ ಸಮಸ್ಯೆ.

ಪ್ರತಿಯೊಂದು ಆತ್ಮಹತ್ಯೆಯನ್ನು ಕೂಡ ಸಾರ್ವಜನಿಕ ಆರೋಗ್ಯ ಸಮಸ್ಯೆ ಎಂದು ಪರಿಗಣಿಸಲಾಗುತ್ತದೆ. ಪ್ರತಿಯೊಂದು ಆತ್ಮಹತ್ಯೆಯೂ ಆ ವ್ಯಕ್ತಿಯ ಸುತ್ತಲೂ ಇರುವವರಲ್ಲಿ ಗಾಢ ಪರಿಣಾಮವನ್ನು ಉಂಟು ಮಾಡುತ್ತದೆ. ಜನರಲ್ಲಿ ಜಾಗೃತಿ ಮೂಡಿಸಿ, ಅವರು ಮಾಹಿತಿಯುಕ್ತ ನಿರ್ಧಾರಗಳನ್ನು ತೆಗೆದುಕೊಳ್ಳಲು ನೆರವಾದರೆ ಆತ್ಮಹತ್ಯೆ ಪ್ರಮಾಣವನ್ನು ಗಣನೀಯವಾಗಿ ಕಡಿತ ಮಾಡಬಹುದು ಎಂಬ ವಿಶ್ವಾಸವನ್ನು ಡಬ್ಲ್ಯುಎಚ್‌ಒ ಹೊಂದಿದೆ. ಈ ಉದ್ದೇಶದಿಂದಲೇ ವಿಶ್ವ ಆತ್ಮಹತ್ಯೆ ತಡೆ ದಿನವನ್ನು ಹಮ್ಮಿಕೊಳ್ಳಲು 2003ರಲ್ಲಿ ನಿರ್ಧರಿಸಲಾಯಿತು. ಡಬ್ಲ್ಯುಎಚ್‌ಒ ಮತ್ತು ಅಂತರರಾಷ್ಟ್ರೀಯ ಆತ್ಮಹತ್ಯೆ ತಡೆ ಸಂಸ್ಥೆಯ ಸಹಯೋಗದಲ್ಲಿ ಈ ದಿನ ಜಾಗೃತಿ ಮೂಡಿಸುವ ಕೆಲಸ ನಡೆಯುತ್ತದೆ.

ಪ್ರತಿ ವರ್ಷ ಸೆಪ್ಟೆಂಬರ್‌ 10ರಂದು ಆತ್ಮಹತ್ಯೆ ತಡೆ ದಿನ ಎಂದು ಘೋಷಿಸಲಾಗಿದೆ. ಸರ್ಕಾರ, ಸ್ವಯಂ ಸೇವಾ ಸಂಸ್ಥೆಗಳೆಲ್ಲವೂ ಜತೆಯಾಗಿ ಆತ್ಮಹತ್ಯೆಯನ್ನು ತಡೆಯಲು ಸಾಧ್ಯ ಎಂಬ ಏಕೈಕ ಧ್ಯೇಯದಿಂದ ಕೆಲಸ ಮಾಡುತ್ತವೆ. ‘ಕ್ರಿಯೆಯಮೂಲಕ ಭರವಸೆ ಮೂಡಿಸಿ’ ಎಂಬುದು 2021ರಿಂದ 2023ರವರೆಗಿನ ಧ್ಯೇಯವಾಕ್ಯವಾಗಿದೆ. ಆತ್ಮಹತ್ಯೆಗೆ ಪರ್ಯಾಯವಿದೆ ಎಂಬ ಭಾವನೆಯನ್ನು ಜನರಲ್ಲಿ ಮೂಡಿಸುವುದು, ಅವರಲ್ಲಿ ಆತ್ಮವಿಶ್ವಾಸ ಹಾಗೂ ಅರಿವಿನ ಬೆಳಕು ಮೂಡುವಂತೆ ಮಾಡುವುದು ಈ ಧ್ಯೇಯವಾಕ್ಯದ ಅರ್ಥವಾಗಿದೆ.

ಭೂಗೋಳಕ್ಕೆ ಸೈಕಲ್‌ ಸುತ್ತು: ಅಂತರರಾಷ್ಟ್ರೀಯ ಆತ್ಮಹತ್ಯೆ ತಡೆ ಸಂಸ್ಥೆಯು ಜನರಲ್ಲಿ ಜಾಗೃತಿ ಮೂಡಿಸುವುದಕ್ಕಾಗಿ ‘ಭೂಗೋಳಕ್ಕೆ ಸೈಕಲ್ ಸುತ್ತು’ ಎಂಬ ಅಭಿಯಾನವನ್ನೂ ನಡೆಸುತ್ತಿದೆ. ಸತತ ಒಂಬತ್ತನೇ ವರ್ಷಕ್ಕೆ ಇದು ಕಾಲಿಟ್ಟಿದೆ. ವಿಶ್ವ ಆತ್ಮಹತ್ಯೆ ತಡೆ ದಿನಂದು ಆರಂಭವಾಗಿ ವಿಶ್ವ ಮಾನಸಿಕ ಆರೋಗ್ಯ ದಿನದಂದು (ಅಕ್ಟೋಬರ್ 10) ಇದು ಸಮಾರೋಪಗೊಳ್ಳುತ್ತದೆ. ಜಗತ್ತಿನ ವಿವಿಧ ಭಾಗಗಳಲ್ಲಿ ವ್ಯಕ್ತಿಗಳು ಮತ್ತು ಸಂಸ್ಥೆಗಳು ಇದರಲ್ಲಿ ಭಾಗಿಯಾಗಿದ್ದಾರೆ, ಜಾಗೃತಿ ಮೂಡಿಸಿದ್ದಾರೆ.

ಭಾರತದ ಚಿತ್ರಣ: ಜಗತ್ತಿನ ಒಟ್ಟು ಆತ್ಮಹತ್ಯೆಗಳ ಪೈಕಿ ಶೇ 77ರಷ್ಟು ಮಧ್ಯಮ ಮತ್ತು ಕೆಳ ಆದಾಯದ ದೇಶಗಳಲ್ಲಿ ಸಂಭವಿಸುತ್ತವೆ. ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೊದ (ಎನ್‌ಸಿಆರ್‌ಬಿ) ಅಪಘಾತ ಮತ್ತು ಆತ್ಮಹತ್ಯೆಯಿಂದ ಸಾವು ವರದಿಯ ಪ್ರಕಾರ 2021ರಲ್ಲಿ ಭಾರತದಲ್ಲಿ 1.64 ಲಕ್ಷ ಜನರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಒಂದು ಲಕ್ಷ ಜನರಲ್ಲಿ 12 ಮಂದಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂದು ಲೆಕ್ಕಾಚಾರ ಹಾಕಲಾಗಿದೆ.

ಭಾರತದಲ್ಲಿ ವಾಸ್ತವದಲ್ಲಿ ಇನ್ನೂ ಹೆಚ್ಚು ಆತ್ಮಹತ್ಯೆಗಳು ನಡೆಯುತ್ತಿವೆ ಎಂದು ವಿಶ್ಲೇಷಿಸಲಾಗುತ್ತಿದೆ. ಎಫ್‌ಐಆರ್ ದಾಖಲಾದ ಆತ್ಮಹತ್ಯೆ ಪ್ರಕರಣಗಳು ಮಾತ್ರ ಎನ್‌ಸಿಆರ್‌ಬಿ ವರದಿಯಲ್ಲಿ ಉಲ್ಲೇಖವಾಗುತ್ತವೆ. ಕುಟುಂಬದ ಒಬ್ಬ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುದು ಬಹಿರಂಗವಾದರೆ, ಆ ಕುಟುಂಬದ ಹೆಣ್ಣು ಮತ್ತು ಗಂಡು ಮಕ್ಕಳ ಮದುವೆ ಕಷ್ಟವಾಗುತ್ತದೆ ಎಂಬ ಕಾರಣಕ್ಕೆ ಆತ್ಮಹತ್ಯೆಯನ್ನು ಬಹಿರಂಗಪಡಿಸದೇ ಇರಲು ಜನರು ಬಯಸುತ್ತಾರೆ. 2017ರವರೆಗೆ, ಆತ್ಮಹತ್ಯೆ ಪ್ರಯತ್ನವು ಶಿಕ್ಷಾರ್ಹ ಅಪರಾಧವಾಗಿತ್ತು. ಆತ್ಮಹತ್ಯೆಯು ಕಾನೂನು ಸಮಸ್ಯೆಗಳನ್ನು ಉಂಟು ಮಾಡಬಹುದು ಎಂಬ ಭಾವನೆಯೂ ಜನರಲ್ಲಿ ಇದೆ. ಈ ಎಲ್ಲ ಕಾರಣಗಳಿಂದ ಆತ್ಮಹತ್ಯೆ ಪ್ರಯತ್ನ ಮತ್ತು ಆತ್ಮಹತ್ಯೆಯನ್ನು ಮುಚ್ಚಿಡುವ ಸಾಧ್ಯತೆಗಳೇ ಹೆಚ್ಚು. ಜಾಗತಿಕ ಅನಾರೋಗ್ಯ ಹೊರೆ ವರದಿಯ ಪ್ರಕಾರ, ಭಾರತದಲ್ಲಿ ಶೇ 63ರಷ್ಟು ಆತ್ಮಹತ್ಯೆಗಳಷ್ಟೇ ದಾಖಲಾಗುತ್ತವೆ.

ಹೆಚ್ಚು ಪ್ರಕರಣ: ಮಹಾರಾಷ್ಟ್ರ ಮೊದಲು, ಐದನೇ ಸ್ಥಾನದಲ್ಲಿ ಕರ್ನಾಟಕ

* ಅತಿಹೆಚ್ಚು ಆತ್ಮಹತ್ಯೆ ಪ್ರಕರಣಗಳು ವರದಿಯಾದ ರಾಜ್ಯಗಳಲ್ಲಿ ಮಹಾರಾಷ್ಟ್ರ ಮೊದಲ ಸಾಲಿನಲ್ಲಿದೆ. 2021ರಲ್ಲಿ ದೇಶದಲ್ಲಿ ವರದಿಯಾದ ಒಟ್ಟು ಆತ್ಮಹತ್ಯೆಗಳಲ್ಲಿ ಶೇ 13ರಷ್ಟು ಪ್ರಕರಣಗಳು ಮಹಾರಾಷ್ಟ್ರ ಒಂದರಲ್ಲೇ ವರದಿಯಾಗಿವೆ

* ಮಹಾರಾಷ್ಟ್ರ, ತಮಿಳುನಾಡು, ಮಧ್ಯಪ್ರದೇಶ, ಪಶ್ಚಿಮ ಬಂಗಾಳ ಮತ್ತು ಕರ್ನಾಟಕವು ಅತಿಹೆಚ್ಚು ಆತ್ಮಹತ್ಯೆ ವರದಿಯಾದ ಮೊದಲ ಐದು ರಾಜ್ಯಗಳೆನಿಸಿವೆ

* ದೇಶದಲ್ಲಿ ವರದಿಯಾದ ಒಟ್ಟು ಆತ್ಮಹತ್ಯೆಗಳಲ್ಲಿ ಈ ಐದೂ ರಾಜ್ಯಗಳ ಪಾಲು ಶೇ 51ರಷ್ಟಿದೆ. ಉಳಿದೆಲ್ಲಾ ರಾಜ್ಯಗಳಲ್ಲಿ ಶೇ 49ರಷ್ಟು ಆತ್ಮಹತ್ಯೆಗಳು ವರದಿಯಾಗಿವೆ

* ಅತಿಹೆಚ್ಚು ಆತ್ಮಹತ್ಯೆಗಳು ವರದಿಯಾದ ರಾಜ್ಯಗಳಲ್ಲಿ ಕರ್ನಾಟಕವು ಐದನೇ ಸ್ಥಾನದಲ್ಲಿದೆ. ಒಟ್ಟು ಆತ್ಮಹತ್ಯೆಗಳಲ್ಲಿ ಕರ್ನಾಟಕದಲ್ಲಿ ವರದಿಯಾದ ಪ್ರಕರಣಗಳ ಪ್ರಮಾಣ ಶೇ 8.15ರಷ್ಟು

* ಲಡಾಖ್‌ ಕೇಂದ್ರಾಡಳಿತ ಪ್ರದೇಶದಲ್ಲಿ ಅತಿಕಡಿಮೆ (11) ಆತ್ಮಹತ್ಯೆ ಪ್ರಕರಣಗಳಷ್ಟೇ ವರದಿಯಾಗಿವೆ

ದೇಶದಲ್ಲಿ ಆತ್ಮಹತ್ಯೆ ಹೆಚ್ಚಳಕ್ಕೆ ಕಳವಳ

ದೇಶದಾದ್ಯಂತ 2021ರಲ್ಲಿ 1.64 ಲಕ್ಷ ಜನರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 2020ಕ್ಕೆ ಹೋಲಿಸಿದರೆ, ಆತ್ಮಹತ್ಯೆ ಮಾಡಿಕೊಂಡವರ ಸಂಖ್ಯೆಯಲ್ಲಿ ಶೇ 7.2ರಷ್ಟು ಏರಿಕೆಯಾಗಿದೆ. ಆದರೆ 2017ಕ್ಕೆ ಹೋಲಿಸಿದರೆ 2021ರಲ್ಲಿ ಪ್ರಮಾಣವು ಶೇ 27.13ರಷ್ಟು ಏರಿಕೆಯಾಗಿದೆ. ಆತ್ಮಹತ್ಯೆ ತಡೆಗೆ ಸರ್ಕಾರವು ಕೈಗೊಳ್ಳುತ್ತಿರುವ ಕ್ರಮಗಳು ಪರಿಣಾಮಕಾರಿಯಲ್ಲ ಎಂಬುದನ್ನು ಈ ಏರಿಕೆಯು ಸೂಚಿಸುತ್ತದೆ.

2017ರಲ್ಲಿ 1.29 ಲಕ್ಷ ಜನರು ಆತ್ಮಹತ್ಯೆಗೆ ಶರಣಾಗಿದ್ದರು. ಆನಂತರದಲ್ಲಿ ಪ್ರತಿ ವರ್ಷ ಆತ್ಮಹತ್ಯೆ ಮಾಡಿಕೊಳ್ಳುವವರ ಸಂಖ್ಯೆಯು 5,000ದಷ್ಟು ಏರಿಕೆ ಕಾಣುತ್ತಿತ್ತು. ಆದರೆ ಕೋವಿಡ್‌ ಸಾಂಕ್ರಾಮಿಕವು ತಲೆದೋರಿದ (2020) ವರ್ಷದಲ್ಲಿ ಆತ್ಮಹತ್ಯೆಗಳ ಸಂಖ್ಯೆ 15,000ದಷ್ಟು ಏರಿಕೆಯಾಗಿದೆ. ಇದು ಈವರೆಗೆ ವರ್ಷವೊಂದರಲ್ಲಿ ಆಗಿರುವ ಗರಿಷ್ಠ ಏರಿಕೆಯಾಗಿದೆ. 2021ರಲ್ಲಿ ಆತ್ಮಹತ್ಯೆಯ ಸಂಖ್ಯೆ ಏರುಗತಿಯಲ್ಲೇ ಇದೆ. 2020ಕ್ಕೆ ಹೋಲಿಸಿದರೆ 2021ರಲ್ಲಿ 10,000ದಷ್ಟು ಹೆಚ್ಚು ಜನರು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಕೋವಿಡ್‌ ಸಾಂಕ್ರಾಮಿಕ ಮತ್ತು ಅದರ ತಡೆಗೆ ಹೇರಲಾದ ಲಾಕ್‌ಡೌನ್‌ ಹಾಗೂ ಆತ್ಮಹತ್ಯೆಯ ಏರಿಕೆಗೂ ನೇರ ಸಂಬಂಧ ಇದೆ ಎಂದು ವಿಶ್ಲೇಷಿಸಲಾಗಿದೆ. ಲಾಕ್‌ಡೌನ್‌ ಸಂದರ್ಭದಲ್ಲಿ ದುಡಿಮೆಯ ಮೂಲವನ್ನು ಕಳೆದುಕೊಂಡವರಲ್ಲಿ ದಿನಗೂಲಿ ನೌಕರರ ಸಂಖ್ಯೆಯೇ ಹೆಚ್ಚು. 2020 ಮತ್ತು 2021ರಲ್ಲಿ ಆತ್ಮಹತ್ಯೆ ಮಾಡಿಕೊಂಡವರಲ್ಲಿ ದಿನಗೂಲಿ ನೌಕರರ ಪ್ರಮಾಣವು ಶೇ 25.6ರಷ್ಟಿದೆ.

ಆತ್ಮಹತ್ಯೆ ದರದಲ್ಲಿ ಏರಿಕೆ:2017ರಲ್ಲಿ ಪ್ರತಿ ಒಂದು ಲಕ್ಷ ಜನಸಂಖ್ಯೆಯಲ್ಲಿ 9.9ರಷ್ಟು ಜನರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರು. ಆದರೆ 2021ರಲ್ಲಿ ಈ ಸಂಖ್ಯೆ 12ಕ್ಕೆ ಏರಿದೆ. ದೇಶದ ಪ್ರತಿ 1 ಲಕ್ಷ ಜನರಲ್ಲಿ 12 ಜನರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಕೆಲವು ರಾಜ್ಯಗಳಲ್ಲಿ ಈ ಸಂಖ್ಯೆ ಕಡಿಮೆ ಇದೆ. ಕೆಲವು ರಾಜ್ಯಗಳಲ್ಲಿ ಈ ಸಂಖ್ಯೆ ಹೆಚ್ಚು ಇದೆ.

ಅಂಡಮಾನ್‌ ಮತ್ತು ನಿಕೋಬಾರ್‌ ದ್ವೀಪ ಸಮೂಹದ ಪ್ರತಿ ಒಂದು ಲಕ್ಷ ಜನರಲ್ಲಿ 39.7ರಷ್ಟು ಜನರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದು ದೇಶದಲ್ಲೇ ಗರಿಷ್ಠ ಆತ್ಮಹತ್ಯೆ ದರವಾಗಿದೆ. ಬಿಹಾರದಲ್ಲಿ ಆತ್ಮಹತ್ಯೆ ದರವು ಅತ್ಯಂತ ಕಡಿಮೆ ಇದೆ. ಅಲ್ಲಿ ಪ್ರತಿ 1 ಲಕ್ಷ ಜನರಲ್ಲಿ 0.7ರಷ್ಟು ಜನರು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಪುರುಷರಲ್ಲೇ ಹೆಚ್ಚು

ಆತ್ಮಹತ್ಯೆಗೆ ಶರಣಾದವರಲ್ಲಿ ಪುರುಷರ ಪ್ರಮಾಣವೇ ಹೆಚ್ಚು. 2021ರಲ್ಲಿ ಆತ್ಮಹತ್ಯೆ ಮಾಡಿಕೊಂಡವರಲ್ಲಿ ಪುರುಷರ ಪ್ರಮಾಣ ಶೇ 72.6ರಷ್ಟಿದೆ. ಮಹಿಳೆಯರ ಪ್ರಮಾಣ ಶೇ 27.4ರಷ್ಟು. ಬಹುತೇಕ ಎಲ್ಲಾ ವಯಸ್ಸಿನ ವರ್ಗದಲ್ಲೂ ಆತ್ಮಹತ್ಯೆ ಮಾಡಿಕೊಂಡವರಲ್ಲಿ ಪುರುಷರ ಸಂಖ್ಯೆಯೇ ಹೆಚ್ಚು ಇದೆ.

ಆದರೆ, 18 ವರ್ಷಕ್ಕಿಂತ ಕಡಿಮೆ ವಯಸ್ಸಿನಲ್ಲಿ ಆತ್ಮಹತ್ಯೆ ಮಾಡಿಕೊಂಡವರಲ್ಲಿ ಬಾಲಕಿಯರ ಸಂಖ್ಯೆಯೇ ಹೆಚ್ಚು. ಈ ವರ್ಗದಲ್ಲಿ ಆತ್ಮಹತ್ಯೆಗೆ ಶರಣಾದ ಬಾಲಕರ ಪ್ರಮಾಣ ಶೇ 47ರಷ್ಟಿದ್ದರೆ, ಬಾಲಕಿಯರ ಪ್ರಮಾಣ ಶೇ 53ರಷ್ಟಿದೆ. ಈ ವರ್ಗದಲ್ಲಿ ಬಹುತೇಕ ಮಂದಿ ಪರೀಕ್ಷೆಗಳಲ್ಲಿ ಅನುತ್ತೀರ್ಣರಾಗಿದ್ದಕ್ಕೆ, ಪ್ರೇಮ ವಿಫಲವಾಗಿದ್ದಕ್ಕೆ, ತೀವ್ರ ಅನಾರೋಗ್ಯದ ಸಮಸ್ಯೆಯಿಂದ ಬಳಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವಿಶ್ಲೇಷಿಸಲಾಗಿದೆ. 18–45 ವರ್ಷದ ಮಹಿಳೆಯರಲ್ಲಿ ಆತ್ಮಹತ್ಯೆ ಮಾಡಿಕೊಂಡವರ ಸಂಖ್ಯೆ ಹೆಚ್ಚು ಇದೆ. ಈ ವಯೋವರ್ಗದ ಒಟ್ಟು 30,217 ಮಹಿಳೆಯರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ವಯಸ್ಸಿನ ಮಹಿಳೆಯರಲ್ಲಿ ಬಹುತೇಕ ಮಂದಿ ಆತ್ಮಹತ್ಯೆ ಮಾಡಿಕೊಂಡಿರುವುದು ವಿವಾಹಕ್ಕೆ ಸಂಬಂಧಿಸಿದ ಸಮಸ್ಯೆಗಳಿಂದ. ಹಲವರು ವರದಕ್ಷಿಣೆ ಕಿರುಕುಳದಿಂದ ಪ್ರಾಣಬಿಟ್ಟಿದ್ದಾರೆ. ಉಳಿದವರು ಮಕ್ಕಳು ಆಗಿಲ್ಲ ಎಂಬ ಕಾರಣದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ವರದಕ್ಷಿಣೆ ನಿಷೇಧ ಕಾಯ್ದೆಯು ಪರಿಣಾಮಕಾರಿಯಾಗಿ ಜಾರಿಯಾಗದೇ ಇರುವುದನ್ನು ಇದು ಸೂಚಿಸುತ್ತದೆ.

‘ಆತ್ಮಹತ್ಯೆ ತಡೆ ಸಾಧ್ಯ’

ಭಾರತದಲ್ಲಿ ಅಷ್ಟೇ ಅಲ್ಲದೇ ಇಡೀ ಪ್ರಪಂಚದಾದ್ಯಂತ ಆತ್ಮಹತ್ಯೆಯಿಂದ ಬದುಕು ಕೊನೆಗಾಣಿಸಿಕೊಳ್ಳುವವರಲ್ಲಿ ಯುವ ಜನರೇ ಹೆಚ್ಚು. ಆತ್ಮಹತ್ಯೆಯ ಪರಿಣಾಮಗಳು ವರ್ಣಿಸಲಸದಳ, ಜೀವಕ್ಕಿಂತ ಮುಖ್ಯವಾದುದು ಯಾವುದೂ ಇಲ್ಲ, ಜೀವಂತವಾಗಿರಲು ಪ್ರತಿ ಪ್ರಾಣಿ-ಪಕ್ಷಿ ಇಡೀ ಜೀವನ ಹೋರಾಡುತ್ತದೆ. ಅಂತಹದರಲ್ಲಿ ಮನುಷ್ಯ ಸ್ವತಃ ತನ್ನ ಜೀವನವನ್ನೇ ಕೊನೆಗಾಣಿಸಿಕೊಂಡಲ್ಲಿ ಅವರನ್ನು ಅವಲಂಬಿಸಿದ ಪ್ರೀತಿ ಪಾತ್ರರ ಭವಿಷ್ಯವನ್ನು ಕತ್ತಲೆಯೆಡೆಗೆ ದೂಡಿದಂತಯೇ ಸರಿ.

ಆತ್ಮಹತ್ಯೆ ನಿಯಂತ್ರಣ ಅಸಾಧ್ಯವಲ್ಲ. ಪ್ರತಿವ್ಯಕ್ತಿಯ ಜೀವನದಲ್ಲಿ ವಿವಿಧ ಸಂದರ್ಭಗಳಲ್ಲಿ-ಸನ್ನಿವೇಶಗಳಲ್ಲಿ, ಸೋಲು-ನಿರಾಸೆ-ಹತಾಶೆಗಳು ಬಂದೇ ಬರುತ್ತದೆ. ಬಡತನ-ಸಿರಿತನಹೊರತುಪಡಿಸಿಯೂ ಅನೇಕ ಸನ್ನಿವೇಶಗಳು ಆತ್ಮಹತ್ಯೆಯದಾರಿಯನ್ನು ಹೆಚ್ಚಿಸುತ್ತವೆ. ಆದರೆ, ಛಲವುಎಂತಹವರನ್ನೂ ಬದುಕಿಸುತ್ತದೆ. ಅದನ್ನು ಭರವಸೆ,ಉತ್ಸಾಹ ಎಂದೆಲ್ಲ ಹೇಳಬಹುದು.

ಮಾನಸಿಕ ಆರೋಗ್ಯದ ಪಾತ್ರ ಬಹುಮುಖ್ಯವಾದುದು. ನಿಮ್ಮ ಸುತ್ತಲಿನ ಯಾರಲ್ಲೇ ಆದರೂ ಖಿನ್ನತೆ ಕಂಡು ಬಂದರೆ, ತಕ್ಷಣಅವರೊಂದಿಗೆಮಾತಾಡಿ ಖಿನ್ನತೆಗೆ ಕಾರಣವನ್ನು ಅವರದೇ ಆದ ಮಾರ್ಗದಲ್ಲಿತಿಳಿಯುವ ಪ್ರಯತ್ನ ಮಾಡಬೇಕು. ಅವರ ಹತ್ತಿರದವರಿಗೆ, ಸಂಬಂಧಿಕರಿಗೆ ಇದನ್ನುತಿಳಿಸುವ ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಶಾಲಾ-ಕಾಲೇಜುಗಳಲ್ಲಿ, ವಿಶ್ವವಿದ್ಯಾಲಯಗಳಲ್ಲಿ, ಉನ್ನತ ವಿದ್ಯಾಭ್ಯಾಸಕೇಂದ್ರಗಳಲ್ಲಿ, ಕೆಲಸ ನಿರ್ವಹಿಸುವ ಸ್ಥಳಗಳಲ್ಲಿ, ರೈತಾಪಿಜನಗಳಲ್ಲಿ ಎಲ್ಲಾದರೂ ಸರಿ ಖಿನ್ನತೆಯ ವ್ಯಕ್ತಿಗಳನ್ನು ಗುರುತಿಸುವ ಕೆಲಸ ಮಾಡಿದರೆ,ಅದೆಷ್ಟೋ ಆತ್ಮಹತ್ಯೆಗಳನ್ನು ತಡೆಯಬಹುದು.

- ಡಾ. ಜಿ. ಎಸ್. ವೇಣುಮಾಧವ,ಮುಖ್ಯಸ್ಥ, ಅಪರಾಧಶಾಸ್ತ್ರ ಮತ್ತು ನ್ಯಾಯವಿಜ್ಞಾನ ವಿಭಾಗ, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ

ಆಧಾರ: ಎನ್‌ಸಿಆರ್‌ಬಿಯ ‘ಅಪಘಾತದ ಸಾವುಗಳು ಮತ್ತು ಆತ್ಮಹತ್ಯೆಗಳು–2021’ರ ವರದಿ, ವಿಶ್ವ ಆರೋಗ್ಯ ಸಂಸ್ಥೆ, ಅಂತರರಾಷ್ಟ್ರೀಯ ಆತ್ಮಹತ್ಯೆ ತಡೆ ಸಂಸ್ಥೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT