ಶನಿವಾರ, ಫೆಬ್ರವರಿ 27, 2021
19 °C
ಯೋಜನಾ ಬದ್ಧವಾಗಿ ಕಾರ್ಯಾಚರಣೆ ಕೈಗೊಳ್ಳಲು ಜಿಲ್ಲಾಧಿಕಾರಿ ಸೂಚನೆ

ಸಿಂಧುದುರ್ಗದಿಂದ 1300 ಮಂದಿ ವಿಜಯಪುರ ಜಿಲ್ಲೆಗೆ ಇಂದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ಮಹಾರಾಷ್ಟ್ರದ ಸಿಂಧುದುರ್ಗದಿಂದ ಸೋಮವಾರ(ಮೇ 11) ರೈಲಿನ ಮೂಲಕ ನಗರಕ್ಕೆ 1300 ಪ್ರಯಾಣಿಕರು ಆಗಮಿಸುತ್ತಿದ್ದು, ಯೋಜನಾ ಬದ್ಧವಾಗಿ ಕಾರ್ಯಾಚರಣೆ ಕೈಗೊಂಡು, ಅವರೆಲ್ಲರನ್ನು ವ್ಯವಸ್ಥಿತ ರೀತಿಯಲ್ಲಿ ಕ್ವಾರಂಟೈನ್ ಮಾಡುವಂತೆ ಜಿಲ್ಲಾಧಿಕಾರಿ ವೈ.ಎಸ್‌.ಪಾಟೀಲ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಭಾನುವಾರ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಅತಿ ಹೆಚ್ಚು ಕೊರೊನಾ ಪೀಡಿತ ಮಹಾರಾಷ್ಟ್ರದಿಂದ ಜಿಲ್ಲೆಯ ನಾಗರಿಕರು ವಾಪಸ್ ಆಗುತ್ತಿರುವ ಹಿನ್ನೆಲೆಯಲ್ಲಿ ನಗರದ ರೈಲು ನಿಲ್ದಾಣದಲ್ಲಿ ಕಟ್ಟೆಚ್ಚರ ವಹಿಸುವಂತೆ ತಿಳಿಸಿದರು.

ರೈಲು ನಿಲ್ದಾಣಕ್ಕೆ ಕರ್ತವ್ಯಕ್ಕೆ ನಿಯೋಜಿಸಲಾಗಿರುವ ಸಿಬ್ಬಂದಿ, ಬಸ್ ಚಾಲಕ, ನಿರ್ವಾಹಕರು, ಪೊಲೀಸ್ ಸಿಬ್ಬಂದಿ ಎನ್ 95 ಮಾಸ್ಕ್, ಪಿಪಿಇ ಕಿಟ್ ಮತ್ತು ಅವಶ್ಯಕ ಸುರಕ್ಷತಾ ಸಾಮಗ್ರಿಗಳೊಂದಿಗೆ ಸಿದ್ಧ ಇರುವಂತೆ ಅವರು ಸೂಚಿಸಿದರು.

40 ಬಸ್‍ಗಳ ಮೂಲಕ ಜಿಲ್ಲೆಯ 12 ತಾಲ್ಲೂಕುಗಳಿಗೆ ಈ ಪ್ರಯಾಣಿಕರು ತೆರಳಲಿದ್ದಾರೆ. ಪ್ರತಿ ತಾಲ್ಲೂಕಿಗೆ ಒಂದು ಬಸ್ ಹಾಗೂ ತಲಾ ಒಬ್ಬರು ನೋಡಲ್ ಅಧಿಕಾರಿಯನ್ನು ನಿಯೋಜಿಸಲಾಗಿದೆ. ರೈಲು ನಿಲ್ದಾಣದಿಂದ ಆಯಾ ತಾಲ್ಲೂಕುಗಳಿಗೆ ಬಸ್‍ಗಳು ಈ ಪ್ರಯಾಣಿಕರನ್ನು ಕರೆದುಕೊಂಡು ಹೋಗುವ ಮುಂಚೆ ಆಯಾ ತಾಲ್ಲೂಕು ತಹಶೀಲ್ದಾರರ ಗಮನಕ್ಕೆ ತರಬೇಕು. ಆಯಾ ತಾಲ್ಲೂಕು ಕೇಂದ್ರಗಳಲ್ಲಿ ಈ ಪ್ರಯಾಣಿಕರ ಆರೋಗ್ಯ ತಪಾಸಣೆ ಮಾಡಬೇಕು ಎಂದರು.

ವಿಜಯಪುರ ತಾಲ್ಲೂಕು ಮತ್ತು ನಗರಕ್ಕೆ ಸಂಬಂಧಪಟ್ಟ ಪ್ರಯಾಣಿಕರಿಗೆ ನಗರ ಕೇಂದ್ರ ಬಸ್ ನಿಲ್ದಾಣದಿಂದ ಬಸ್‍ಗಳ ವ್ಯವಸ್ಥೆ ಮಾಡಬೇಕು. ಕ್ವಾರಂಟೈನ್ ಮತ್ತು ಆರೋಗ್ಯಕ್ಕೆ ಸಂಬಂಧಪಟ್ಟಂತೆ ಪ್ರತ್ಯೇಕ ಕೌಂಟರ್‌ಗಳನ್ನು ಸ್ಥಾಪಿಸುವಂತೆ ತಿಳಿಸಿದರು.

12 ಬಸ್‍ಗಳನ್ನು ರೈಲು ನಿಲ್ದಾಣದ ಹತ್ತಿರ, 8 ಬಸ್‍ಗಳನ್ನು ಗೋಳಗುಮ್ಮಟ ಹತ್ತಿರ ಮತ್ತು ಹೆಚ್ಚುವರಿ ಬಸ್‍ಗಳನ್ನು ಒಳಗೊಂಡಂತೆ 20 ಬಸ್‍ಗಳನ್ನು ಕೇಂದ್ರ ಬಸ್ ನಿಲ್ದಾಣದಲ್ಲಿ ಸಿದ್ಧವಾಗಿಟ್ಟುಕೊಳ್ಳುವಂತೆ ಸೂಚಿಸಿದರು.

ಅಧಿಕಾರಿಗಳು ಪರಸ್ಪರ ಸಮನ್ವಯತೆಯಿಂದ ಕಾರ್ಯ ನಿರ್ವಹಿಸಬೇಕು. ಪೊಲೀಸ್ ಅಧಿಕಾರಿಗಳೊಂದಿಗೆ ಸೂಕ್ತ ಮಾಹಿತಿ ಹಂಚಿಕೊಂಡು ಕಾರ್ಯನಿರ್ವಹಿಸಬೇಕು ಎಂದರು.

ಎಲ್ಲೆಲ್ಲಿ ಕ್ವಾರಂಟೈನ್‌: ಸಾಂಸ್ಥಿಕ ಕ್ವಾರಂಟೈನ್‍ಗಾಗಿ ವಸತಿ ಶಾಲೆಗಳು, ವಸತಿ ನಿಲಯಗಳು, ಪ್ರೌಢಶಾಲೆ, ಪ್ರಾಥಮಿಕ ಶಾಲೆಗಳನ್ನು(ಸರ್ಕಾರ ಮತ್ತು ಅನುದಾನಿತ, ಅನುದಾನ ರಹಿತ) ಮೂಲಸೌಕರ್ಯಗಳೊಂದಿಗೆ ಸಿದ್ಧವಾಗಿಟ್ಟುಕೊಳ್ಳಬೇಕು ಎಂದರು.

‌ಸೋಮವಾರದಿಂದ ಆಯಾ ಶಾಲಾ ಮುಖ್ಯೋಪಾಧ್ಯಾಯರು, ಪಿಡಿಒಗಳು, ವಾರ್ಡನ್‍ಗಳು, ಗ್ರಾಮ ಲೆಕ್ಕಾಧಿಕಾರಿಗಳು ಕೇಂದ್ರ ಸ್ಥಾನದಲ್ಲಿದ್ದು, ಜನರಿಗೆ ಅವಶ್ಯಕವಿರುವ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು ಎಂದು ತಿಳಿಸಿದರು.

ಕುಡಿಯುವ ನೀರು, ಊಟ, ಉಪಹಾರ, ಅಗತ್ಯ ಸಾಮಗ್ರಿಗಳನ್ನು ಸಿದ್ಧವಾಗಿಟ್ಟುಕೊಳ್ಳಬೇಕು. ಅಧಿಕೃತವಾಗಿ ಮತ್ತು ಅನಧಿಕೃತವಾಗಿ ಬಂದವರ ಬಗ್ಗೆಯೂ ತೀವ್ರ ನಿಗಾ ಇಡುವಂತೆ ಅವರು ಸೂಚಿಸಿದರು.

ನಗರ ವ್ಯಾಪ್ತಿಯಲ್ಲಿ ಆಯಾ ನಗರ ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ಆಯಾ ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿಗಳು, ಪಿಡಿಒಗಳು, ಶಾಲಾ ಮುಖ್ಯೋಪಾಧ್ಯಾಯರು, ವಸತಿ ನಿಲಯಗಳ ವಾರ್ಡನ್‍ಗಳು ಸಿದ್ಧತೆ ಮಾಡಿಕೊಳ್ಳುವುದರ ಜೊತೆಗೆ ಆಯಾ ತಹಶೀಲ್ದಾರ್‌, ತಾಲ್ಲೂಕು ಪಂಚಾಯ್ತಿ ಮುಖ್ಯಕಾರ್ಯನಿರ್ವಾಹಣಾಧಿಕಾರಿಗಳು, ಪೊಲೀಸ್ ಇನ್‌ಸ್ಪೆಕ್ಟರ್‌ ಕ್ವಾರಂಟೈನ್‍ಗಳಿಗೆ ತಮ್ಮ ಹಂತದಲ್ಲಿ ನಿರ್ಣಯ ಕೈಗೊಳ್ಳುವಂತೆ ಅವರು ಸೂಚಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನುಪಮ್ ಅಗರವಾಲ್, ಜಿಲ್ಲಾ ಪಂಚಾಯ್ತು ಸಿಇಒ ಗೋವಿಂದ ರೆಡ್ಡಿ, ಮಹಾನಗರ ಪಾಲಿಕೆ ಆಯುಕ್ತ ಹರ್ಷಾ ಶೆಟ್ಟಿ, ಉಪ ವಿಭಾಗಾಧಿಕಾರಿ ಸೋಮಲಿಂಗ ಗೆಣ್ಣೂರ, ಕೆ.ಎಸ್.ಆರ್.ಟಿ.ಸಿ ವಿಭಾಗೀಯ ನಿಯಂತ್ರಣಾಧಿಕಾರಿ ಗಂಗಾಧರ ಉಪಸ್ಥಿತರಿದ್ದರು.

ಪ್ರತಿಯೊಬ್ಬರಿಗೂ ಕ್ವಾರಂಟೈನ್‍ ಕಡ್ಡಾಯ
ವಿಜಯಪುರ:
ಗೋವಾ ಹೊರತುಪಡಿಸಿ ಮಹಾರಾಷ್ಟ್ರ, ಗುಜರಾತ್, ರಾಜಸ್ಥಾನ, ತಮಿಳುನಾಡು ಮತ್ತು ದೆಹಲಿಗಳಿಂದ ಬರುವವರನ್ನು ಕಡ್ಡಾಯವಾಗಿ ಸಾಂಸ್ಥಿಕ ಕ್ವಾರಂಟೈನ್ ಮಾಡುವ ಜೊತೆಗೆ ತೀವ್ರ ನಿಗಾ ಇಡಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದರು.

ಪ್ರಕರಣ ದಾಖಲು: ಬೇರೆ ರಾಜ್ಯಗಳಿಂದ ಮಾಹಿತಿ ನೀಡದೆ ಅಥವಾ ಸುಳ್ಳು ಮಾಹಿತಿ ನೀಡಿ ಜಿಲ್ಲೆಗೆ ಪ್ರವೇಶ ಪಡೆಯುವುದರ ಜೊತೆಗೆ ಮನೆಗಳಲ್ಲಿ ಬಂದು ತಂಗಿದ್ದಲ್ಲಿ ಅಂತಹವರ ವಿರುದ್ಧ ಸಾಂಕ್ರಾಮಿಕ ರೋಗ ನಿಯಂತ್ರಣ ಕಾಯ್ದೆಯಡಿ ಪ್ರಕರಣ ದಾಖಲಿಸುವುದಾಗಿ ಎಚ್ಚರಿಕೆ ನೀಡಿದರು.

‌ಎಲ್ಲ ಅಧಿಕಾರಿಗಳು ಮಾನವೀಯತೆ ನೆಲೆಯ ಮೇಲೆ, ಪರಸ್ಪರ ಸಮನ್ವಯತೆಯಿಂದ ಹಾಗೂ ಸಾಂಘಿಕವಾಗಿ ಕಾರ್ಯನಿರ್ವಹಿಸಬೇಕು. ಹೊರರಾಜ್ಯಗಳಿಂದ ಬಂದು ಕ್ವಾರಂಟೈನ್ ಆಗುವ ಪ್ರತಿಯೊಬ್ಬ ವ್ಯಕ್ತಿಯೂ ಹೊರಗೆ ಬರದಂತೆ ಮುನ್ನೆಚ್ಚರಿಕೆ ಕೈಗೊಳ್ಳಬೇಕು ಎಂದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು