ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೇಳೂರು, ಮಂಜುನಾಥಗೌಡ ರಾಜಕೀಯ ನಡೆ ನಿಗೂಢ

ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಗರಿಗೆದರಿದ ರಾಜಕೀಯ ಚಟುವಟಿಕೆ
Last Updated 18 ಜೂನ್ 2018, 13:21 IST
ಅಕ್ಷರ ಗಾತ್ರ

ಶಿವಮೊಗ್ಗ: ಕಳೆದ ಲೋಕಸಭಾ ಚುನಾವಣೆಯಲ್ಲಿ ಸಂಸತ್‌ ಸದಸ್ಯ ಬಿ.ವೈ.ರಾಘವೇಂದ್ರ ಅವರ ಗೆಲುವಿನಲ್ಲಿ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ, ಅಪೆಕ್ಸ್‌ ಬ್ಯಾಂಕ್ ಅಧ್ಯಕ್ಷ ಆರ್‌.ಎಂ.ಮಂಜುನಾಥ ಗೌಡ ಅವರ ಪಾಲು ಹೆಚ್ಚಿನದು. ಈಗ ರಾಘವೇಂದ್ರ ಬದಲು ಅವರ ತಂದೆ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಸ್ಪರ್ಧಾ ಕಣ ದಲ್ಲಿದ್ದಾರೆ. ಆದರೆ, ಬೇಳೂರು–ಮಂಜುನಾಥ ಗೌಡರ ರಾಜಕೀಯ ನಡೆ ಮಾತ್ರ ಇನ್ನೂ ನಿಗೂಢವಾಗಿದೆ.

ಬೇಳೂರು ಜೆಡಿಎಸ್‌ಗೆ ರಾಜೀನಾಮೆ ಕೊಟ್ಟು ಬೆಂಗಳೂರು ಸೇರಿದರೆ, ಮಂಜುನಾಥಗೌಡ, ಯಡಿಯೂರಪ್ಪ ಜತೆ ಬಿಜೆಪಿಗೆ ಹೋಗದೆ ಕೊಡಚಾದ್ರಿ ಯುವ ವೇದಿಕೆ ಕಟ್ಟಿ ಸಾರ್ವಜನಿಕರ ಕೆಲಸ–ಕಾರ್ಯದಲ್ಲಿ ತೊಡಗಿದ್ದಾರೆ.

2009ರ ಚುನಾವಣೆ, ಬಂಗಾರಪ್ಪ–ರಾಘವೇಂದ್ರ ಅವರ ಸ್ಪರ್ಧೆಯಿಂದ ತೀವ್ರ ಹಣಾಹಣಿಯ ಕಣವಾಗಿತ್ತು. ಬಂಗಾರಪ್ಪ ಅವರನ್ನು ಸೋಲಿಸಲು ಆಗ ಮುಖ್ಯಮಂತ್ರಿಯೂ ಆಗಿದ್ದ ಬಿ.ಎಸ್‌.ಯಡಿಯೂರಪ್ಪ ಅವರು ಆಪರೇಷನ್‌ ಕಮಲದ ಮೂಲಕ ಎಲ್ಲರನ್ನೂ ಸೆಳೆದಿದ್ದರು. ಅದರಂತೆ ಮಂಜುನಾಥಗೌಡ ಬಿಜೆಪಿಗೆ ಬಂದಿದ್ದರು. ಬಿಜೆಪಿಯಲ್ಲಿದ್ದರೂ ಅಂತರ ಕಾಯ್ದುಕೊಂಡಿದ್ದ ಬೇಳೂರು ಅವರನ್ನು ಚುನಾವಣೆ ಸಮಯದಲ್ಲಿ ಬಹಳ ಹತ್ತಿರಕ್ಕೆ ಯಡಿಯೂರಪ್ಪ ಅವರೇ ಕರೆದುಕೊಂಡಿದ್ದರು.

ಬೇಳೂರು–ಮಂಜುನಾಥಗೌಡ ತಮ್ಮದೇ ಪ್ರಭಾವ ಮತ್ತು ‘ಹತ್ಯಾರ’ಗಳನ್ನೆಲ್ಲವನ್ನೂ ಬಳಸಿ ರಾಘವೇಂದ್ರ ಅವರಿಗೆ ತೀರ್ಥಹಳ್ಳಿ ಮತ್ತು ಸಾಗರದಿಂದ ಅತಿ ಹೆಚ್ಚಿನ ಮತಗಳು ಬರುವಂತೆ ಮಾಡಿದ್ದರು. ತಮ್ಮದೇ ಶೈಲಿಯ ಮಾತು, ಡ್ರೆಸ್, ಕನ್ನಡಕಗಳ ಮೂಲಕ ಬೇಳೂರು ಯುವಕರನ್ನು ಬಿಜೆಪಿಗೆ ಸೆಳೆದಿದ್ದರು. ಮಂಜುನಾಥಗೌಡರು, ಸ್ವಸಹಾಯ ಸಂಘದ ಸದಸ್ಯರಿಗೆ ಹಾಗೂ ಯುವಕರಿಗೆ ತಮ್ಮದೇ ರೀತಿಯಲ್ಲಿ ನೆರವು ನೀಡುವ ಮೂಲಕ ಅವರೆಲ್ಲರೂ ಬಿಜೆಪಿಗೆ ಮತ ಹಾಕುವಂತೆ ಮಾಡಿದ್ದರು.

ಕಾಲಕ್ರಮೇಣ ಬೇಳೂರನ್ನು ಯಡಿಯೂರಪ್ಪ –ರಾಘವೇಂದ್ರ ಇಬ್ಬರೂ ದೂರು ಇಟ್ಟರು. ಜಿಲ್ಲೆಯಿಂದ ಅವಕಾಶ ಇದ್ದರೂ ಮಂತ್ರಿ ಸ್ಥಾನ ತಪ್ಪಿಸಿದರು. ಹಾಗಾಗಿ, ಬೇಳೂರು, ಯಡಿಯೂರಪ್ಪ ಅವರನ್ನು ಅಧಿಕಾರದಿಂದ ಕೆಳಗಿಳಿಸುವ ಗ್ಯಾಂಗ್‌ ಸೇರಿಕೊಂಡಿದ್ದರು. ಹೀಗಾಗಿಯೇ ಕೊನೆಗೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸಾಗರದಿಂದ ಬಿಜೆಪಿ ಟಿಕೆಟ್‌ ಸಿಗದೆ ಪರದಾಡಿದರು. ಕೊನೆಗಳಿಗೆ ಯಲ್ಲಿ ಜೆಡಿಎಸ್‌ನಿಂದ ಸ್ಪರ್ಧೆ ಮಾಡಿದ ಬೇಳೂರು, ಕಾಗೋಡು ತಿಮ್ಮಪ್ಪ ವಿರುದ್ಧ 23,217 ಮತಗಳನ್ನು ಪಡೆದರು.

ಸೋಲಿನಿಂದ ಕಂಗೆಟ್ಟು ಬೆಂಗಳೂರು ಸೇರಿದ ಬೇಳೂರು, ಈಚೆಗೆ ಲೋಕಸಭಾ ಚುನಾವಣೆಗೆ ಕಾಂಗ್ರೆಸ್‌ನಿಂದ ಕಾಗೋಡು ತಿಮ್ಮಪ್ಪ ಅಭ್ಯರ್ಥಿಯಾಗಬಹುದೆಂಬ ಸುದ್ದಿಗಳು ಹರಡಿದಾಗ ಸಾಗರಕ್ಕೆ ಓಡೋಡಿ ಬಂದಿದ್ದರು. ತುಮರಿ ಸೇತುವೆ ನಿರ್ಮಾಣಕ್ಕಾಗಿ ತುಮರಿಯಿಂದ ಶಿವಮೊಗ್ಗಕ್ಕೆ ಪಾದಯಾತ್ರೆ ನಡೆಸುವುದಾಗಿ ಘೋಷಣೆ ಮಾಡಿದರು; ಮಾರಿಜಾತ್ರೆ ಒಳಗೆ ಗಣಪತಿ ದೇವಸ್ಥಾನದ ರಿಪೇರಿಯಾಗದಿದ್ದರೆ ಉಪವಾಸ ಸತ್ಯಾಗ್ರಹದ ಬೆದರಿಕೆ ಒಡ್ಡಿದ್ದರು. ಆದರೆ, ಅವು ಕಾರ್ಯಾಚರಣೆಗೆ ಬರುವುದರ ಒಳಗೆ ಮತ್ತೆ ಬೆಂಗಳೂರಿಗೆ ಹೋಗಿ ಕುಳಿತಿದ್ದಾರೆ.

ಯಡಿಯೂರಪ್ಪ ಕೆಜೆಪಿಯಿಂದ ಬಿಜೆಪಿಗೆ ಹೋದರೂ, ಅವರೊಂದಿಗೆ ಕೆಜೆಪಿ ರಾಜ್ಯ ಉಪಾಧ್ಯಕ್ಷರಾಗಿದ್ದ ಮಂಜುನಾಥ ಗೌಡರು ಹೋಗಲಿಲ್ಲ. ಆದರೆ, ಯಡಿಯೂರಪ್ಪ ಬಗ್ಗೆ ವೈಯಕ್ತಿಕ ಅಭಿಮಾನ ಇದೆ ಎನ್ನುವ ಅವರು, ಇದುವರೆಗೂ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ತಮ್ಮ ನಡೆಯನ್ನು ಸ್ಪಷ್ಟಪಡಿಸಿಲ್ಲ.

ಬೇಳೂರಿಗೆ ಈಗ ಜೆಡಿಎಸ್‌ಗೆ ಸೇರ್ಪಡೆಯಾಗುವಂತೆ ಒತ್ತಡ ಆರಂಭವಾಗಿದೆ. ಅವರ ಜನಾಂಗದ ಮುಖಂಡರೂ ಕೂಡ ಈ ಬಾರಿ ಗೀತಾ ಶಿವರಾಜ್‌ಕುಮಾರ್‌ ಅವರನ್ನು ಬೆಂಬಲಿಸುವಂತೆ ಬೇಳೂರಿಗೆ ಮನವಿ ಮಾಡಿದ್ದಾರೆ. ಬಿಜೆಪಿಯಿಂದಲೂ ಯಡಿಯೂರಪ್ಪ ಪರವಾಗಿ ಕೆಲಸ ಮಾಡುವಂತೆ ಒತ್ತಡ ಸೃಷ್ಟಿಯಾಗಿದೆ. ಆದರೆ, ಸುಖಾಸುಮ್ಮನೆ ಬರಲೊಪ್ಪದ ಬೇಳೂರು ಕೆಲವೊಂದು ಷರತ್ತುಗಳನ್ನು ವಿಧಿಸಿಯೇ ಬಿಜೆಪಿಗೆ ಬರುವ ಕಡೆ ಮನಸ್ಸು ಮಾಡಿದ್ದಾರೆ ಎಂದು ಅವರ ಆಪ್ತ ಮೂಲಗಳು ದೃಢಪಡಿಸಿವೆ.

‘ಇದೇ 25ರ ನಂತರ ಕ್ಷೇತ್ರಕ್ಕೆ ಆಗಮಿಸುತ್ತಿದ್ದು, ಯಾರ ಪರವಾಗಿ ಕೆಲಸ ಮಾಡಬೇಕೆಂಬುದನ್ನು ಆವಾಗಲೇ ತಿಳಿಸುತ್ತೇನೆ’ ಎಂದ ಬೇಳೂರು, ತಮ್ಮ ಮುಂದಿನ ರಾಜಕೀಯ ನಡೆಯ ಗುಟ್ಟು ಬಿಟ್ಟುಕೊಟ್ಟಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT