ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಜಿಗಜಿಣಗಿ ಸೋಲಿಸುವ ಆಟಕ್ಕೆ ನಾನೇ ನಿರ್ಣಾಯಕ!’

Last Updated 18 ಜೂನ್ 2018, 13:22 IST
ಅಕ್ಷರ ಗಾತ್ರ

ವಿಜಾಪುರ: ‘ರಮೇಶ ಜಿಗಜಿಣಗಿ ಯಾವಾಗಲೂ ಟಿ–20 ಕ್ರಿಕೆಟ್‌ ಪಂದ್ಯ ಆಡುತ್ತ ಬಂದಿದ್ದಾರೆ. ಇದೇ ಪ್ರಥಮ ಬಾರಿ ಟೆಸ್ಟ್‌ ಪಂದ್ಯ ಆಡುತ್ತಿದ್ದಾರೆ. ಅವರ ಆಟಕ್ಕೆ ನಾನೇ ನಿರ್ಣಾಯಕ. ನಾವೆಲ್ಲರೂ ಸೇರಿ ಅವರನ್ನು ರಾಜಕೀಯದಿಂದ ಔಟ್‌ಮಾಡಿ  ವಿಶ್ರಾಂತಿ ಕರುಣಿಸುತ್ತೇವೆ’ ಎಂದು ಬಸವನ ಬಾಗೇವಾಡಿ ಶಾಸಕ ಶಿವಾನಂದ ಪಾಟೀಲ ಹೇಳಿದರು.

ಕಾಂಗ್ರೆಸ್‌ ಅಭ್ಯರ್ಥಿ ಪ್ರಕಾಶ ರಾಠೋಡ ನಾಮಪತ್ರ ಸಲ್ಲಿಕೆಯ ನಂತರ ಸೋಮವಾರ ಇಲ್ಲಿ ನಡೆದ ಕಾಂಗ್ರೆಸ್‌ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದರು.

‘15 ವರ್ಷ ಮಂತ್ರಿ, 15 ವರ್ಷ ಸಂಸದರಾಗಿರುವ ಜಿಗಜಿಣಗಿ ಈ ಜಿಲ್ಲೆಯ ಸುದೈವಿ ರಾಜಕಾರಣಿ. ಅವರು ಈ ಜಿಲ್ಲೆಗೆ ನೀಡಿದ ಕೊಡುಗೆ ಏನು? ಒಬ್ಬ ಸಂಸದರು ರೈಲ್ವೆ ತರುತ್ತೇನೆ ಎಂದು ರೈಲು ಹಳಿ ಕಿತ್ತಿಸಿ ಬರೀ ರೀಲು ಬಿಟ್ಟರು. ಹಿಂದಿನ ಮಂತ್ರಿಯೊಬ್ಬರು ವಿಮಾನ ತರುತ್ತೇನೆ ಎಂದಿದ್ದರು. ಅವರ ವಿಮಾನ ಇನ್ನೂ ಇಲ್ಲಿ ಕೆಳಗೆ ಇಳಿದಿಲ್ಲ. ನಾನೇ ರಾಜ ಎಂದು ಮೆರೆಯುವವರನ್ನು ಪೋತರಾಜರನ್ನಾಗಿ ಮಾಡುವ ಶಕ್ತಿ ನಮ್ಮ ಜನಕ್ಕಿದೆ. ಅದು ಈ ಬಾರಿ ಸಾಬೀತಾಗಲಿದೆ’ ಎಂದರು.

‘ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ ಮೋದಿ ಹೆಸರು ಹೇಳಿ ಮತ ಕೇಳುವುದು ಬೇಡ. ಬದಲಾಗಿ ತಮ್ಮ ಸಾಧನೆ ತಿಳಿಸಿ ಮತ ಕೇಳಲಿ’ ಎಂದು ಸವಾಲು ಹಾಕಿದರು.

ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ, ‘ಜಿಲ್ಲೆಯಲ್ಲಿ ಕಾಂಗ್ರೆಸ್‌ ಪರ ಅಲೆ ಇದೆ. ಭಾರತೀಯ ಜನತಾ ಪಕ್ಷ  ಧರ್ಮದ ಹೆಸರಿನಲ್ಲಿ ಯುವಜನತೆಯನ್ನು ದಾರಿತಪ್ಪಿಸಲು ಯತ್ನಿಸುತ್ತಿದ್ದು, ಜನ ಇದಕ್ಕೆ ಮರುಳಾಗಬಾರದು’ ಎಂದು ಮನವಿ ಮಾಡಿದರು.

‘ಜಿಲ್ಲೆಯ ಪ್ರವಾಸೋದ್ಯಮ, ರೈಲ್ವೆ, ತೋಟಗಾರಿಕೆ ಮತ್ತಿತರ ಸಮಸ್ಯೆಗಳ ಕುರಿತು ಕೇಂದ್ರದಲ್ಲಿ ಧ್ವನಿ ಎತ್ತಲು ಪ್ರಕಾಶ ರಾಠೋಡರ ಆಯ್ಕೆ ಅನಿವಾರ್ಯವಾಗಿದೆ. ನಾವೆಲ್ಲ ಒಟ್ಟಾಗಿ ಅವರನ್ನು ಗೆಲ್ಲಿಸುವ ಸಂಕಲ್ಪ ಮಾಡಿದ್ದೇವೆ. ಮತದಾರರೂ ಅವರಿಗೆ ಆಶೀರ್ವದಿಸಬೇಕು’ ಎಂದರು.

ವಿಜ್ಞಾನ ಮತ್ತು ತಂತ್ರಜ್ಞಾನ ಖಾತೆ ಸಚಿವ ಎಸ್.ಆರ್. ಪಾಟೀಲ, ‘ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅಲೆ ಬರಿ ಮಾಧ್ಯಮದಲ್ಲಿ ಮಾತ್ರ ಇದೆ. ಮಾಧ್ಯಮ ಹೊರತು ಪಡಿಸಿ ಎಲ್ಲಿಯೂ ಮೋದಿ ಅಲೆ ಇಲ್ಲವೇ ಇಲ್ಲ. ಕಾಂಗ್ರೆಸ್‌ಗೆ ಬಿಜೆಪಿ ಸರಿಸಾಟಿ ಅಲ್ಲ, ಅಧಿಕಾರದ ಲಾಲಸೆಗಾಗಿ ಹುಟ್ಟಿದ ಪಕ್ಷವಲ್ಲ. ಬಿಜೆಪಿ ಜಾತಿ ಜಾತಿಗಳ ನಡುವೆ ಕಂದಕ ನಿರ್ಮಿಸುತ್ತಿದ್ದರೆ, ಕಾಂಗ್ರೆಸ್‌ ಎಲ್ಲ ಜಾತಿಗಳನ್ನು ಒಗ್ಗೂಡಿಸುತ್ತಿದೆ’ ಎಂದು ಹೇಳಿದರು.

ಮುದ್ದೇಬಿಹಾಳ ಶಾಸಕ ಸಿ.ಎಸ್. ನಾಡಗೌಡ, ‘ಯಾವ ವ್ಯಕ್ತಿ ಹಣದಿಂದ ಜನತೆಯನ್ನು ಖರೀದಿಸುತ್ತಾನೋ ಆತ ಎಲ್ಲವನ್ನೂ ಹಣಕ್ಕಾಗಿಯೇ ಮಾಡುತ್ತಾನೆ. ಹೀಗಾಗಿ ಮತದಾರರು ಬಿಜೆಪಿ ಬಗ್ಗೆ ಎಚ್ಚರ ವಹಿಸಬೇಕು’ ಎಂದರು.

ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ, ನಾಗಠಾಣ ಶಾಸಕ ರಾಜು ಆಲಗೂರ, ಜಮಖಂಡಿ ಶಾಸಕ ಸಿದ್ದು ನ್ಯಾಮಗೌಡ, ವಿಜಾಪುರ ನಗರ ಶಾಸಕ ಡಾ.ಮಕ್ಬೂಲ್‌ ಬಾಗವಾನ, ‘ರಮೇಶ ಜಿಗಜಿಣಗಿ ಸುಳ್ಳಿನ ಸರದಾರ. ಲೋಕಸಭೆಯಲ್ಲಿ ಮಾತನಾಡದೇ ಜಿಲ್ಲೆಯ ಜನತೆಗೆ ಮೋಸ ಮಾಡಿರುವ ಅವರನ್ನು ಮತದಾರರು ಕ್ಷಮಿಸಬಾರದು’ ಎಂದರು.

ಅಭ್ಯರ್ಥಿ ಪ್ರಕಾಶ ರಾಠೋಡ, ಜಿಲ್ಲೆಯ ಸೇವೆ ಮಾಡಲು ತಮಗೆ ಮತ ನೀಡಬೇಕು ಎಂದು ವಿಂತಿಸಿದರು. ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಶರಣಪ್ಪ ಸುಣಗಾರ ಮಾತನಾಡಿದರು. ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷೆ ಅಪ್ಸರಾಬೇಗಂ ಚಪ್ಪರಬಂದ, ರುಕ್ಮಿಣಿ ಚವ್ಹಾಣ, ಮಲ್ಲಯ್ಯಸ್ವಾಮಿ ಸಾರಂಗಮಠ ಇತರರು ಕಾಂಗ್ರೆಸ್ ಸೇರಿದರು.

ವಿಧಾನ ಪರಿಷತ್ ಸದಸ್ಯ ಮಹಾಂತೇಶ ಕೌಜಲಗಿ, ಮಾಜಿ ಶಾಸಕರಾದ ಆರ್.ಆರ್. ಕಲ್ಲೂರ, ಬಿ.ಜಿ. ಪಾಟೀಲ ಹಲಸಂಗಿ, ಮುಖಂಡ­ರಾದ ಹಾಸಿಂಪೀರ ವಾಲಿಕಾರ, ಎಸ್‌.ಎಂ. ಪಾಟೀಲ ಗಣಿಹಾರ, ವೈಜನಾಥ ಕರ್ಪೂ­ರಮಠ, ಅರುಣ ಹುಂಡೇ­­­ಕಾರ, ಅರವಿಂದ ಹಿರೊಳ್ಳಿ, ಜ್ಯೋತಿ­ರಾಮ ಪವಾರ, ಬಿ.ಎಚ್. ಮಹಾಬರಿ, ಎನ್.ಆರ್. ಪಂಚಾಳ, ವಸಂತ ಹೊನಮೋಡೆ, ಮಹಾದೇವಿ ಗೋಕಾಕ, ಜಾವೀದ್‌ ಜಮಾದಾರ, ಗಂಗಾಧರ ಸಂಬಣ್ಣಿ ಇತರರು ಉಪಸ್ಥಿತರಿದ್ದರು.

ವಿಳಂಬ: ನಗರದ ಸಿದ್ಧೇಶ್ವರ ದೇವಸ್ಥಾನದಿಂದ ಬೆಳಿಗ್ಗೆ 11.30ಕ್ಕೆ ಮೆರವಣಿಗೆ ನಡೆಯಲಿದೆ ಎಂದು ತಿಳಿಸಲಾಗಿತ್ತು. ಆದರೆ, ಜನ ತಡವಾಗಿ ಬಂದಿದ್ದರಿಂದ ಮೆರವಣಿಗೆ ಒಂದೂವರೆ ಗಂಟೆಗೂ ಹೆಚ್ಚು ಕಾಲ ತಡವಾಗಿ ಆರಂಭವಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT