ಗುರುವಾರ , ಡಿಸೆಂಬರ್ 12, 2019
26 °C
ವಿಶ್ವ ಏಡ್ಸ್‌ ದಿನಾಚರಣೆ; ಜಾಗೃತಿ ಜಾಥಾ ಆಯೋಜನೆ

‘ರೋಗಿಗಳಲ್ಲಿ ಆತ್ಮವಿಶ್ವಾಸ ತುಂಬುವ ಕೆಲಸವಾಗಲಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ರಾಮನಗರ: ಸಮಾಜದಲ್ಲಿ ಎಚ್ಐವಿ ಸೋಂಕಿತರನ್ನು ತಾರತಮ್ಯದಿಂದ ಕಾಣದೆ ಅವರಲ್ಲಿ ಆತ್ಮಸ್ಥೈರ್ಯ ತುಂಬುವ ಕೆಲಸ ಹೆಚ್ಚಾಗಿ ನಡೆಯಬೇಕು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ಎಸ್. ಹೊನ್ನಸ್ವಾಮಿ ಹೇಳಿದರು.

ಇಲ್ಲಿನ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅರ್ಕಾವತಿ ಸಭಾಂಗಣದಲ್ಲಿ ಶನಿವಾರ ನಡೆದ ವಿಶ್ವ ಏಡ್ಸ್‌ ವಿರೋಧಿ ದಿನವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಎಚ್ಐವಿ ಪೀಡಿತರನ್ನು ನೋಡುವ ದೃಷ್ಟಿಕೋನ ಬದಲಾಗಬೇಕಿದೆ. ಸೋಂಕಿತರನ್ನು ಪ್ರೀತಿ ವಿಶ್ವಾಸದಿಂದ ಕಂಡು ಅವರಲ್ಲಿ ಆತ್ಮವಿಶ್ವಾಸ ಮೂಡಿಸಲು ಪ್ರತಿಯೊಬ್ಬರೂ ಮುಂದಾಗಬೇಕಿದೆ. ಜಿಲ್ಲಾ ಆರೋಗ್ಯ ಇಲಾಖೆಯೊಂದಿಗೆ ಸ್ವಯಂ ಸೇವಾ ಸಂಸ್ಥೆಗಳು ಒಗ್ಗೂಡಿ ರೋಗದ ಪರಿಣಾಮಗಳ ಬಗ್ಗೆ ಮನವರಿಕೆ ಮಾಡಿಕೊಡಬೇಕಿದೆ ಎಂದು ತಿಳಿಸಿದರು.

ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ.ಆರ್.ಎನ್‌. ಲಕ್ಷ್ಮೀಪತಿ ಮಾತನಾಡಿ ಏಡ್ಸ್‌ ರೋಗದ ಕುರಿತು ಈಗಾಗಲೇ ಸಾಕಷ್ಟು ಜನರಲ್ಲಿ ತಿಳಿವಳಿಕೆ ಉಂಟಾಗಿದೆ. ಹಾಗಿದ್ದರೂ ಇನ್ನಷ್ಟು ಜನ ಜಾಗೃತಿ ಅಗತ್ಯವಾಗಿ ಬೇಕು ಎಂದು ತಿಳಿಸಿದರು.

ದುಷ್ಪರಿಣಾಮ ಮತ್ತು ಹೇಗೆ ರೋಗ ಬರುತ್ತದೆ ಎನ್ನುವ ಕುರಿತು ಜನರಲ್ಲಿ ಸರ್ಕಾರ ವಿವಿಧ ಕಾರ್ಯಕ್ರಮಗಳ ಮೂಲಕ ತಿಳಿವಳಿಕೆ ಮತ್ತು ಮಾಹಿತಿ ನೀಡಿದೆ. ಗ್ರಾಮೀಣ ಮಟ್ಟದಲ್ಲೂ ಕೂಡ ಜನರಲ್ಲಿ ಈ ಬಗ್ಗೆ ಒಂದಷ್ಟು ಎಚ್ಚರಿಕೆ ಮೂಡಿದೆ. ಏಡ್ಸ್‌ ರೋಗ ಬಾರದಂತೆ ತಡೆಗಟ್ಟಲು ಮುಂಜಾಗರೂಕತೆಯೊಂದೇ ಸರಳ ಉಪಾಯವಾಗಿದೆ ಎಂದರು.

ಶೇ 85ರಷ್ಟು ಅಸುರಕ್ಷಿತ ಲೈಂಗಿಕ ಕ್ರಿಯೆಯಿಂದಲೇ ರೋಗ ಹರಡಲಿದ್ದು, ರಕ್ತದಾನ ಮತ್ತು ಸಿರಿಂಜ್‌ಗಳ ಬಳಕೆಯಲ್ಲಿ ಸುರಕ್ಷತೆ ಕಾಪಾಡುವುದು ಅತ್ಯಗತ್ಯ. ಈ ರೋಗ ಒಬ್ಬರಿಂದ ಇನ್ನೊಬ್ಬರಿಗೆ ಹರಡದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಎನ್.ಕೆ. ಪುಟ್ಟರಾಜು, ಎಚ್.ಬಿ. ಬಸವರಾಜೇ ಅರಸ್, ವರುಣ್‌ಕುಮಾರ್ ಎಂ. ದಾಂಬೋಜಿ ಹಾಗೂ ರೇಖಾ ಅವರನ್ನು ಸನ್ಮಾನಿಸಲಾಯಿತು. ಜಿಲ್ಲಾ ಆಸ್ಪತ್ರೆಯ ಆವರಣದಿಂದ ಜಿಲ್ಲಾ ತರಬೇತಿ ಕೇಂದ್ರದವರೆಗೆ ಜಾಗೃತಿ ಜಾಥಾ ನಡೆಯಿತು.

ಜಿಲ್ಲಾ ಕುಷ್ಠ ರೋಗ ನಿವಾರಣಾ ಅಧಿಕಾರಿ ಡಾ. ರೋಚನಾ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ದಕ್ಷಿಣಮೂರ್ತಿ, ರೋಟರಿ ಸಿಲ್ಕ್‌ ಸಿಟಿ ಕ್ಲಬ್‌ನ ಲತಾ ಗೋಪಾಲ್, ಪ್ಯಾರಾ ಮೆಡಿಕಲ್‌ ಕಾಲೇಜಿನ ಪ್ರಾಚಾರ್ಯೆ ಹರೀಣಾಕ್ಷಿ ಇದ್ದರು.

ಗಾಯಕ ವಿನಯ್‌ಕುಮಾರ್ ಪ್ರಾರ್ಥಿಸಿದರು. ಎಂ. ಫಯಾಜ್‌ ಅಹಮದ್‌ ನಿರೂಪಿಸಿದರು. ನಟರಾಜು ಚುಟುಕು ಕವನಗಳನ್ನು, ಪುಟ್ಟಸ್ವಾಮಿ ಜಾಗೃತಿ ಗೀತೆಗಳನ್ನು ಹಾಡಿದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್‌ ನಿಯಂತ್ರಣ ಮತ್ತು ಪ್ರತಿಬಂಧಕ ಘಟಕ, ರೋಟರಿ ಸಿಲ್ಕ್‌ ಸಿಟಿ ಕ್ಲಬ್‌, ನೇತಾಜಿ ಪಬ್ಲಿಕ್‌ ಶಾಲೆ ಹಾಗೂ ಸ್ವಯಂ ಸೇವಾ ಸಂಸ್ಥೆಗಳ ಸಹಯೋಗದಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

* ಎಚ್ಐವಿ ಕುರಿತು ಯುವಜನರಲ್ಲಿ ಜಾಗೃತಿ ಮೂಡಿಸುವ ಅವಶ್ಯಕತೆಯಿದೆ. ರೋಗ ಹರಡದಂತೆ ಮುನ್ನೆಚರಿಕೆ ವಿಧಾನಗಳ ಕುರಿತು ತಿಳುವಳಿಕೆ ನೀಡಬೇಕಿದೆ

ಬಿ.ಎಸ್. ಹೊನ್ನಸ್ವಾಮಿ, ಸದಸ್ಯ ಕಾರ್ಯದರ್ಶಿ, ಕಾನೂನು ಸೇವೆಗಳ ಪ್ರಾಧಿಕಾರ

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು