ಭಾನುವಾರ, ಅಕ್ಟೋಬರ್ 25, 2020
28 °C

‘ಸಂಡೇ ರೈಡ್’‌ ಮುಗಿಸದೇ ಹೊರಟ ಕಾಕಾ!

ವೆಂಕಟೇಶ ಜಿ.ಎಚ್ Updated:

ಅಕ್ಷರ ಗಾತ್ರ : | |

Prajavani

ಬಾಗಲಕೋಟೆ: ಮುಂಜಾನೆ ತುಂತುರು ಮಳೆಯ ನಡುವೆಯೇ ಕೆರೂರಿನ ಅಮೃತ್ ಹೋಟೆಲ್‌ನಲ್ಲಿ ’ಸಂಡೆ ರೈಡ್‘‌ನ ನಿರುಮ್ಮಳ ಭಾವದಲ್ಲಿ ಹಿರಿ–ಕಿರಿಯರಿಗೆ ಕೀಟಲೆ ಮಾಡಿ ನಗುತ್ತಾ, ನಗಿಸುತ್ತಾ ಚಹಾ ಹೀರಿದ್ದ ವಿನೋದ್ ಕಾಕಾ ಇನ್ನಿಲ್ಲ ಎಂಬ ಸುದ್ದಿ ಬಾಗಲಕೋಟೆ ಸೈಕ್ಲಿಂಗ್ ಕ್ಲಬ್‌ನ ಗೆಳೆಯರಿಗೆ ಅರಗಿಸಿಕೊಳ್ಳಲು ಆಗುತ್ತಿಲ್ಲ.

ತಾನೊಬ್ಬ ಮಾಜಿ ಶಾಸಕರ ಪುತ್ರ ಎಂಬ ಹಮ್ಮು–ಬಿಮ್ಮು ಎಲ್ಲದೇ ಎಲ್ಲರೊಂದಿಗೆ ಸರಳವಾಗಿ ಬೆರೆಯುತ್ತಿದ್ದ ವಿನೋದ ಪಾಟೀಲ ಅಗಲಿಕೆ ಅವರ ಸೈಕಲ್‌ ಜೊತೆಗಾರರಿಗೆ ನಂಬಲು ಆಗುತ್ತಿಲ್ಲ.

’ಅವರು ಬಹಳ ಚೆನ್ನಾಗಿ ಸೈಕಲ್ ರೈಡ್ ಮಾಡುತ್ತಿದ್ದರು. ನಿತ್ಯ ನಾವು ಒಟ್ಟಿಗೆ ಹೋಗುತ್ತಿದ್ದೆವು. ಆದರೆ ಇಂದು ಅವರು ಸ್ವಲ್ಪ ಬೇಗನೇ ಹೊರಟಿದ್ದರು. ನಾವು ಮೂರು ಜನ ಸ್ವಲ್ಪ ತಡವಾಗಿ ಹೋಗಿದ್ದೆವು.  ಅಮೃತ್‌ ಹೋಟೆಲ್‌ನಲ್ಲಿಯೇ ಎಲ್ಲರೂ ಜೊತೆಗೂಡಿದ್ದೆವು. ಅಲ್ಲಿ ಎಂದಿನಂತೆ ನಮಗೆ ಚೇಸ್ಟೆ ಮಾಡಿದ್ದಾರೆ. ಫೋಟೊ ಹೊಡೆಸಿಕೊಂಡರು‘ ಎಂದು ಸೈಕ್ಲಿಸ್ಟ್ ಸಿದ್ದು ಹಿರೇಮಠ ಭಾವುಕರಾದರು.

’ವಾಪಸ್ ಬರುವಾಗ ನಾವು ಸ್ವಲ್ಪ ಮುಂದೆ ಬಂದಿದ್ದೆವು. ಕೆರೂರು ಬಿಟ್ಟು 3 ಕಿ.ಮೀ ದೂರ ಬರುತ್ತಿದ್ದಂತೆಯೇ ವಿನೋದ ಅವರಿಗೆ ಹೃದಯಾಘಾತ ಆಗಿ ಸೈಕಲ್‌ನಿಂದ ಕೆಳಗೆ ಬಿದ್ದಿದ್ದಾರೆ. ಅವರೊಂದಿಗೆ ಇದ್ದ ಸೈಕ್ಲಿಸ್ಟ್ ಡಾ.ಗಿರೀಶ್ ತಕ್ಷಣ ಪ್ರಾಥಮಿಕ ಚಿಕಿತ್ಸೆ ನೀಡಿದ್ದಾರೆ. ಅದು ಫಲಕಾರಿಯಾಗಿಲ್ಲ. ನಮಗೆ ಕರೆ ಮಾಡಿ ತಿಳಿಸಿದ್ದರಿಂದ ಎಲ್ಲರೂ ಸೈಕಲ್‌ಗಳನ್ನು ಅಲ್ಲಿಯೇ ಬಿಟ್ಟು ವಾಹನದಲ್ಲಿ ಸ್ಥಳಕ್ಕೆ ತೆರಳಿದೆವು. ಆ ಹೊತ್ತಿಗೆ ಅವರು ನಿಧನರಾಗಿದ್ದರು‘ ಎಂದು ಹಿರೇಮಠ ತಿಳಿಸಿದರು.

’ವಿನೋದ ಪಾಟೀಲ ಸೈಕ್ಲಿಂಗ್ ತಪ್ಪಿಸುತ್ತಿರಲಿಲ್ಲ. ಅವರ ಫಿಟ್‌ನೆಸ್ ಗುಟ್ಟು ಅದೇ ಆಗಿತ್ತು. ಕಳೆದ ನಾಲ್ಕು ವರ್ಷಗಳಿಂದ ಸೈಕ್ಲಿಂಗ್ ಮಾಡುತ್ತಿದ್ದರು. ಸೈಕಲ್ ಪೆಡಲ್ ತುಳಿಯುತ್ತಲೇ ಅವರ ದಿನಚರಿ ಆರಂಭವಾಗುತ್ತಿತ್ತು. ಕೊರೊನಾ ಲಾಕ್‌ಡೌನ್ ಸಂದರ್ಭದಲ್ಲೂ ಅವರು ಸೈಕ್ಲಿಂಗ್ ನಿಲ್ಲಿಸಿರಲಿಲ್ಲ‘ ಎಂದು ಮಾಜಿ ಅಂತಾರಾಷ್ಟ್ರೀಯ ಸೈಕ್ಲಿಸ್ಟ್ ಸಿದ್ದು ಸರ್ವರೆ ಹೇಳುತ್ತಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು