ಗುರುವಾರ , ಫೆಬ್ರವರಿ 27, 2020
19 °C
ಮೋಟಗಿ ಬಸವೇಶ್ವರ ಜಾತ್ರೆಯಲ್ಲಿ ಕಿಲಾರಿ ಹೋರಿಗೆ ಲಕ್ಷ ಬೆಲೆ

ಬಾಗಲಕೋಟೆ: ಆಕರ್ಷಣೆಯ ಕೇಂದ್ರ ಗೀರ್ ತಳಿ

ಅಭಿಷೇಕ ಎನ್.ಪಾಟೀಲ Updated:

ಅಕ್ಷರ ಗಾತ್ರ : | |

Prajavani

ಬಾಗಲಕೋಟೆ: ಕಂದು ಬಣ್ಣ ಗಿಡ್ಡದಾದ ಮೈ ಕಟ್ಟು, ದೊಡ್ಡ ತಲೆ ಬಾಗಿದ ಕೋಡಿನ ಗೀರ್ ತಳಿಯ ಆಕಳು ಮೋಟಗಿ ಬಸವೇಶ್ವರ ಜಾತ್ರೆಯ ಪ್ರಮುಖ ಆಕರ್ಷಣೆ.

ದೂರದ ಗುಜರಾತ್‌ನ ದೇಸಿ ತಳಿ ಗೀರ್ ಆಕಳಿನ ಎ–2 ಸತ್ವದ ಹಾಲು ಇತ್ತೀಚಿಗೆ ಹೆಚ್ಚು ಬೇಡಿಕೆ ಪಡೆಯುತ್ತಿದೆ. ಈ ಕಾರಣ ಗೀರ್ ಆಕಳು ನೋಡಲು ಹಾಗೂ ಖರೀದಿಸಲು ರೈತರು ಮುಗಿಬೀಳುತ್ತಿದ್ದಾರೆ.

ಮುರ್ರಾ ಎಮ್ಮೆ ಹಾಗೂ ಎಚ್.ಎಫ್ ಆಕಳಿನ ಅಬ್ಬರದಲ್ಲಿ ದೇಸಿ ತಳಿಗಳು ಕಾಣದಂತೆ ಮಾಯವಾಗಿದ್ದವು.
ಸದ್ಯ ಜನರಲ್ಲಿ ಜವಾರಿ ಆಕಳುಗಳ ಹಾಲಿನ ಮಹತ್ವ ಅರಿವಾಗುತ್ತಿರುವ ಹಿನ್ನೆಲೆಯಲ್ಲಿ ದೇಸಿ ಆಕಳಿಗೆ ಬೇಡಿಕೆ ಹೆಚ್ಚುತ್ತಿದೆ. ಅದರಲ್ಲಿಯೇ ಹೆಚ್ಚು ಹಾಲು ನೀಡುವ ಗೀರ್‌ಗೆ ಬೇಡಿಕೆ ಹೆಚ್ಚಾಗಿದೆ.

ಬೇಡಿಕೆ ಹೆಚ್ಚಿರುವ ಕಾರಣ ಗುಜರಾತ್‌ನಿಂದ ಗೀರ್ ಆಕಳು ತಂದು ರಾಜ್ಯದಲ್ಲಿ ಮಾರಾಟ ಮಾಡಲಾಗುತ್ತಿದೆ. ವಿಜಯಪುರ ಜಿಲ್ಲೆಯ ಚಡಚಣ ಹತ್ತಿರದ ಹಾವಿನಾಳ ಗ್ರಾಮದ ಒಟ್ಟು 6 ಜನ 30ಕ್ಕೂ ಹೆಚ್ಚು ಆಕಳನ್ನು ಮಾರಾಟಕ್ಕೆ ತಂದಿದ್ದೇವೆ ಎಂದು ದಲ್ಲಾಳಿ ಕೆಂಚಪ್ಪ ಪೂಜಾರಿ ಹೇಳಿದರು.

ದೇಸಿ ತಳಿಗಳಲ್ಲಿಯೇ ಹೆಚ್ಚು ಹಾಲು ನೀಡುವ ಗೀರ್‌ನ ಗಂಜಳದಲ್ಲಿ ಔಷಧಿಯ ಗುಣವಿದೆ. ಹೀಗಾಗಿ ರೈತರು ಅದನ್ನು ಕಾಮಧೇನು ಎಂದು ಕರೆಯುತ್ತಾರೆ. ಇಂತಹ ಗುಣ ಹೊಂದಿದ ಚಿಕ್ಕ ಕರುಗಳು ₹15 ರಿಂದ 22 ಸಾವಿರಕ್ಕೆ ಮಾರಾಟವಾಗುತ್ತಿವೆ. ಆಕಳು ₹40 ರಿಂದ 80 ಸಾವಿರದವರೆಗೆ ಮಾರಾಟವಾಗುತ್ತಿವೆ. ಈಗಾಗಲೇ ಐದಾರು ಆಕಳು ಮಾರಾಟ ಮಾಡಲಾಗಿದೆ ಎಂದು ತಿಳಿಸಿದರು.

ಎತ್ತಿನ ಜೋಡಿಗೆ ₹2.20 ಲಕ್ಷ: ನೋಡಲು ನೀಳ ಕಾಯ, ಎತ್ತರ ಹಾಗೂ ನೇರ ಕೋಡುಗಳು, ಉದ್ದನೆಯ ಹಣೆ ಹಾಗೂ ಹಾಲುಬಿಳುಪಿನ ಮೈಬಣ್ಣ ಹೊಂದಿದ ಆರು ಹಲ್ಲಿನ ಕಿಲಾರಿ ತಳಿ ಎತ್ತಿನ ಜೋಡಿಗೆ ಶಿರೂರಿನ ನಾಗಪ್ಪ ಅಚನೂರ ₹2.20 ಲಕ್ಷ ಬೆಲೆ ಇಟ್ಟಿದ್ದಾರೆ. ಕಿಲಾರಿ ತಳಿಯ ರಾಸಿನ ದುಡಿಮೆ ರೈತರ ಮೆಚ್ಚುಗೆ ಪಡೆದಿದೆ ಎಂದು ನಾಗಪ್ಪ  ಹೇಳುತ್ತಾರೆ. ನಮ್ಮ ಗ್ರಾಮದಿಂದಲೇ ಹೆಚ್ಚು ಎತ್ತುಗಳನ್ನು ಮಾರಾಟಕ್ಕೆ ತರಲಾಗಿದೆ ಎಂದು ನಾಗಪ್ಪ ಹೇಳಿದರು.

ನಾಲ್ಕು ಹಲ್ಲಿನ ಎತ್ತಿಗೆ ₹60 ಸಾವಿರ
ಕಿಲಾರಿ ದನಗಳಿಗೆ ಹೆಚ್ಚಿನ ಆರೋಗ್ಯ ಸಮಸ್ಯೆ ಬರುವುದಿಲ್ಲ. ಕಷ್ಟಪಟ್ಟು ದುಡಿಯುವ ಗುಣ ರೈತರಿಗೆ ಬಹಳ ಪ್ರೀತಿ. ನೋಡಲು ದಷ್ಟಪುಷ್ಟವಾದ ಈ ಎತ್ತುಗಳ ಕೊಳ್ಳಲು ರೈತರ ನಡುವೆ ಪೈಪೋಟಿ ಇರುತ್ತದೆ. ಅದರಿಂದಲೇ ನಾಲ್ಕು ಹಲ್ಲಿನ ನಮ್ಮ ಎತ್ತು ₹60 ಸಾವಿರಕ್ಕೆ ಮಾರಾಟವಾಗಿದೆ ಎಂದು ಶಿರೂರಿನ ಬಸಪ್ಪ ಕರಡಿ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು