ಬಾಗಲಕೋಟೆ: ರೈತ ಮುಖಂಡ ಯಲ್ಲಪ್ಪ ಹೆಗಡೆ ಪ್ರಕರಣದಲ್ಲಿ ಈಗಾಗಲೇ ಆರು ಮಂದಿಯನ್ನು ಬಂಧಿಸಲಾಗಿದೆ. ಪ್ರಕರಣದಲ್ಲಿ ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪುರ ಹೇಳಿದರು.
ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಯಲ್ಲಪ್ಪ ಹೆಗಡೆ ಅವರನ್ನು ಬುಧವಾರ ಭೇಟಿಯಾದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಂಧನಕ್ಕೊಳಗಾದ ಆರೋಪಿಗಳ ವಿಚಾರಣೆಯನ್ನು ಅಧಿಕಾರಿಗಳು ಮಾಡುತ್ತಿದ್ದಾರೆ. ಅವರ ಕಾಲ್ ರೆಕಾರ್ಡ್ ಪರಿಶೀಲಿಸಲಾಗುತ್ತಿದೆ. ತನಿಖೆ ಹಂತದಲ್ಲಿರುವುದರಿಂದ ಹೆಚ್ಚಿಗೆ ಏನೂ ಹೇಳಲು ಸಾಧ್ಯವಿಲ್ಲ ಎಂದರು.
ಹೋರಾಟ ನಿಲ್ಲಿಸಲಿಕ್ಕೆ ಯಾರಿಂದಲೂ ಸಾಧ್ಯವಿಲ್ಲ. ಅಂತಹ ಕೃತ್ಯ ಯಾರೇ ಮಾಡಲಿ ಖಂಡಿಸುತ್ತೇನೆ. ಹೋರಾಟಗಾರರ ಜೀವಕ್ಕೆ ಬೆದರಿಕೆ ಬಾರದ ರೀತಿಯಲ್ಲಿ ಸರ್ಕಾರ ಕ್ರಮಕೈಗೊಳ್ಳುತ್ತದೆ ಎಂದು ಹೇಳಿದರು.
ಇದಕ್ಕೂ ಮೊದಲು ಹಲ್ಲೆಗೆ ಒಳಗಾಗಿರುವ ರೈತ ಮುಖಂಡ ಯಲ್ಲಪ್ಪ ಅವರ ಆರೋಗ್ಯ ವಿಚಾರಿಸಿದರು. ಘಟನೆ ಹೇಗೆ ನಡೆದಿದೆ ಎಂದು ವಿವರಿಸಿದ ಯಲ್ಲಪ್ಪ, ಕೊಲೆಗೆ ಯತ್ನಿಸಿದ ಆರೋಪಿಗಳನ್ನು ಬಂಧಿಸಲಾಗಿದೆ. ಆದರೆ, ಕೊಲೆಗೆ ಸುಪಾರಿ ನೀಡಿದವರನ್ನು ಬಂಧಿಸಬೇಕು ಎಂದು ಆಗ್ರಹಿಸಿದರು.
ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಆಗುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಬರುವವರ ಸಂಖ್ಯೆ ನಿಖರವಾಗಿ ಗೊತ್ತಿಲ್ಲ. ಆದರೆ, ಬರುವುದು ಗ್ಯಾರಂಟಿ ಎಂದು ಹೇಳಿದರು.
ಮುಖ್ಯಮಂತ್ರಿ ಮನೆಗೆ ಶಾಸಕರು ಭೇಟಿ ನೀಡಿದಾಗ ಮಾತನಾಡಿಸಬೇಕಾಗುತ್ತದೆ. ಅವರು ಯಾವುದೇ ಪಕ್ಷದವರಿರಲಿ. ಜನಪ್ರತಿನಿಧಿಗಳಾಗಿರುತ್ತಾರೆ. ಅವರ ಕ್ಷೇತ್ರದ ಸಮಸ್ಯೆ ಕೇಳಿ, ಪರಿಹರಿಸಬೇಕಾಗುತ್ತದೆ ಎಂದರು.
ಸಿಲಿಂಡರ್ ಬೆಲೆ ಇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ಕೇಂದ್ರ ಸರ್ಕಾರದವರು ₹100 ಏರಿಸುತ್ತಾರೆ. ₹10 ಇಳಿಸುತ್ತಾರೆ. ಇದಕ್ಕೆ ಅರ್ಥ ಇದೆಯಾ? ಜನರ ಕಣ್ಣೊರೆಸುವ ತಂತ್ರ ಎಂದು ಟೀಕಿಸಿದರು.
ಕ್ರಮಕ್ಕೆ ಆಗ್ರಹ: ಯಲ್ಲಪ್ಪ ಹೆಗಡೆ ಮೇಲೆ ಹಲ್ಲೆ ನಡೆಸಿರುವವರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿ ಸಚಿವ ಆರ್.ಬಿ. ತಿಮ್ಮಾಪುರ ಅವರಿಗೆ ಕರ್ನಾಟಕ ರಕ್ಷಣಾ ವೇದಿಕೆ ಮುಖಂಡರು ಮನವಿ ಸಲ್ಲಿಸಿದರು.
ಹೆಗಡೆ ಅವರಿಗೆ ಸೂಕ್ತ ರಕ್ಷಣೆ ಒದಗಿಸಬೇಕು. ಇಂತಹ ಪ್ರಕರಣಗಳು ಮರುಕಳಿಸಿದಂತೆ ಕ್ರಮಕ್ಕೆ ಮುಂದಾಗಬೇಕು ಎಂದು ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ಧರ್ಮಂತಿ ಆಗ್ರಹಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.