ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬಾಗಲಕೋಟೆ ಲೋಕಸಭಾ ಚುನಾವಣೆ: ಹೊಸ ದಾಖಲೆ ಬರೆದ ಗದ್ದಿಗೌಡರ

ಫಲಿಸದ ಕಾಂಗ್ರೆಸ್‌ನ ಅಭ್ಯರ್ಥಿ ಬದಲಾವಣೆ ತಂತ್ರ
Published 5 ಜೂನ್ 2024, 6:04 IST
Last Updated 5 ಜೂನ್ 2024, 6:04 IST
ಅಕ್ಷರ ಗಾತ್ರ

ಬಾಗಲಕೋಟೆ: ಬಿಜೆಪಿ ಅಭ್ಯರ್ಥಿ ಪಿ.ಸಿ. ಗದ್ದಿಗೌಡರ ಸತತ ಐದನೇ ಬಾರಿ (68,399 ಮತಗಳ ಅಂತರದಿಂದ) ಗೆಲುವು ಸಾಧಿಸುವ ಮೂಲಕ ಬಾಗಲಕೋಟೆ ಕ್ಷೇತ್ರದಲ್ಲಿ ಅತಿ ಹೆಚ್ಚು ಬಾರಿ ಗೆಲುವು ಸಾಧಿಸಿರುವ ದಾಖಲೆ ಬರೆದಿದ್ದಾರೆ.

ಇಲ್ಲಿಯವರೆಗೆ ಸುನಗದ ಎಸ್‌.ಬಿ. ಪಾಟೀಲರು ಮಾತ್ರ ನಾಲ್ಕು ಬಾರಿ ಗೆದ್ದಿದ್ದು ದಾಖಲೆಯಾಗಿತ್ತು. ಇವರು ಐದನೇ ಬಾರಿಗೆ ಗೆಲ್ಲುವ ಮೂಲಕ ಆ ದಾಖಲೆ ಮುರಿದಿದ್ದಾರೆ.

ಸುನಗದ ಎಸ್‌.ಬಿ. ಪಾಟೀಲರು 1961, 67, 72 ಹಾಗೂ 1977ರಲ್ಲಿ ನಡೆದ ಚುನಾವಣೆಗಳಲ್ಲಿ ಸತತ ನಾಲ್ಕು ಬಾರಿ ಗೆಲುವು ಸಾಧಿಸಿರುವುದು ಇಲ್ಲಿಯವರೆಗಿನ ದಾಖಲೆಯಾಗಿದೆ. 1980ರಲ್ಲಿ ನಡೆದ ಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ವೀರೇಂದ್ರ ಪಾಟೀಲ ಅವರಿಗೆ ಅವಕಾಶ ನೀಡಿದ್ದರಿಂದ ಎಸ್‌.ಬಿ. ಪಾಟೀಲ ಸ್ಪರ್ಧಿಸಿರಲಿಲ್ಲ.

ಹಾಲಿ ಸಂಸದ, ಬಿಜೆಪಿಯ ಪಿ.ಸಿ. ಗದ್ದಿಗೌಡರ 2004, 09, 14, 19ರ ಜತೆಗೆ ಈ ಬಾರಿಯೂ ಗೆಲುವು ಸಾಧಿಸಿದ್ದಾರೆ. ಮೊದಲ ಬಾರಿಗೆ ಕೋಟೆ ನಾಡಿನಲ್ಲಿ ಕಮಲ ಅರಳಿಸಿದ್ದ ಅವರು, ಈಗಲೂ ಮುಂದುವರೆಸಿದ್ದಾರೆ.

ಏಳು ವಿಧಾನಸಭಾ ಕ್ಷೇತ್ರಗಳಲ್ಲಿ ಲೀಡ್: ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಗದಗ ಜಿಲ್ಲೆಯ ನರಗುಂದ, ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳಿವೆ. ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳಲ್ಲಿ ಐವರು ಕಾಂಗ್ರೆಸ್‌ ಶಾಸಕರಿದ್ದು, ಅವರೆಲ್ಲರ ಕ್ಷೇತ್ರಗಳೂ ಸೇರಿದಂತೆ ಏಳು ಕ್ಷೇತ್ರಗಳಲ್ಲಿ ಬಿಜೆಪಿ ಲೀಡ್‌ ಪಡೆದಿದೆ. ಬಿಜೆಪಿ ಶಾಸಕ ಸಿ.ಸಿ. ಪಾಟೀಲ ಪ್ರತಿನಿಧಿಸುವ ನರಗುಂದ ಕ್ಷೇತ್ರದಲ್ಲಿ ಮಾತ್ರ ಕಾಂಗ್ರೆಸ್‌ 925 ಮತಗಳ ಮುನ್ನಡೆ ಪಡೆದಿದೆ.

ಠೇವಣಿ ನಷ್ಟ: ಒಟ್ಟು ಚಲಾವಣೆಯಾದ ಮತಗಳಲ್ಲಿ ಆರನೇ ಒಂದರಷ್ಟು ಮತಗಳನ್ನು ಪಡೆದವರ ಠೇವಣಿ ಉಳಿಯುತ್ತದೆ. ಗೆಲುವು ಸಾಧಿಸಿರುವ ಬಿಜೆಪಿಯ ಪಿ.ಸಿ. ಗದ್ದಿಗೌಡರ, ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತಾ ಪಾಟೀಲ ಮಾತ್ರ ಠೇವಣಿ ಉಳಿಸಿಕೊಂಡಿದ್ದಾರೆ. ಉಳಿದಂತೆ ಕಣದಲ್ಲಿದ್ದ 20 ಅಭ್ಯರ್ಥಿಗಳ ಠೇವಣಿ ನಷ್ಟವಾಗಿದೆ.

ಫಲ ನೀಡದ ಅಭ್ಯರ್ಥಿ ಬದಲಾವಣೆ: ಸಂಸದ ಪಿ.ಸಿ. ಗದ್ದಿಗೌಡರ ವಿರುದ್ಧ ಗೆಲುವಿಗಾಗಿ ಪ್ರತಿ ಚುನಾವಣೆಯಲ್ಲಿಯೂ ಕಾಂಗ್ರೆಸ್‌ ತನ್ನ ಅಭ್ಯರ್ಥಿಯನ್ನು ಬದಲಾವಣೆ ಮಾಡಿಕೊಂಡು ಬಂದಿದೆ. ಈ ಬಾರಿಯೂ ಬದಲಾವಣೆ ಮಾಡಿತ್ತಾದರೂ, ಗೆಲುವಿನ ಫಲ ಸಿಕ್ಕಿಲ್ಲ.

2004ರಲ್ಲಿ ಕಾಂಗ್ರೆಸ್‌ನಿಂದ ಸಂಸದರಾಗಿದ್ದ ಆರ್‌.ಎಸ್‌. ಪಾಟೀಲ ಸ್ಪರ್ಧಿಸಿದ್ದರು. 2009ರ ಕಾಂಗ್ರೆಸ್‌ನಿಂದ ಜೆ.ಟಿ. ಪಾಟೀಲ (ಹಾಲಿ ಬೀಳಗಿ ಶಾಸಕ) ಅವರನ್ನು ಕಣಕ್ಕಿಳಿಸಿದ್ದರೂ ಗೆಲುವು ಸಾಧಿಸಲು ಸಾಧ್ಯವಾಗಿರಲಿಲ್ಲ.

2014ರಲ್ಲಿ ಮಾಜಿ ಸಂಸದರಾಗಿದ್ಜ ಅಜಯಕುಮಾರ ಸರನಾಯಕ, 2019ರಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ವೀಣಾ ಕಾಶಪ್ಪನವರ ಅವರನ್ನು ಕಣಕ್ಕಿಳಿಸಲಾಗಿತ್ತು. ಈ ಬಾರಿ ಗೆಲ್ಲಲೇಬೇಕು ಎಂದು ಸಚಿವ ಶಿವಾನಂದ ಪಾಟೀಲರ ಪುತ್ರಿ ಸಂಯುಕ್ತಾ ಪಾಟೀಲ ಅವರನ್ನು ಕಣಕ್ಕಿಳಿಸಲಾಯಿತು. ಅವರಿಗೂ ಸೋಲಾಗಿದೆ.

ಸಚಿವರ ಕ್ಷೇತ್ರದಲ್ಲೇ ಬಿಜೆಪಿಗೆ ಹೆಚ್ಚು ಲೀಡ್

ಬಾಗಲಕೋಟೆ: ಜಿಲ್ಲೆಯಲ್ಲಿ ಕಾಂಗ್ರೆಸ್‌ ಶಾಸಕರಿರುವ ಕ್ಷೇತ್ರದಲ್ಲಿ ಬಿಜೆಪಿ ಲೀಡ್ ತೆಗೆದುಕೊಂಡರೆ ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ ಎಂಬ ಮಾತುಗಳು ಕಾಂಗ್ರೆಸ್‌ನಲ್ಲಿ ಕೇಳಿ ಬರುತ್ತಿದ್ದವು. ಜಿಲ್ಲಾ ಉಸ್ತುವಾರಿ ಸಚಿವ ಆರ್‌.ಬಿ. ತಿಮ್ಮಾಪುರ ಕ್ಷೇತ್ರದಲ್ಲಿಯೇ ಬಿಜೆಪಿ ಅಭ್ಯರ್ಥಿ ಹೆಚ್ಚು ಲೀಡ್‌ ಪಡೆದಿದ್ದಾರೆ. ಜಿಲ್ಲೆಯಲ್ಲಿರುವ ಐದು ಶಾಸಕರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಲೀಡ್ ಪಡೆದಿದ್ದಾರೆ. ಅದೇ ಬಿಜೆಪಿ ಗೆಲುವನ್ನು ಸರಳಗೊಳಿಸಿದೆ.

ಅದೃಷ್ಟ ತರದ ‘ಗಜಕೇಸರಿ ಯೋಗ’

ಬಾಗಲಕೋಟೆ: ಗಜಕೇಸರಿ ಯೋಗದಲ್ಲಿ ಜನಿಸಿರುವುದರಿಂದ ಗೆಲುವು ನನ್ನದೇ ಎನ್ನುತ್ತಿದ್ದ ಸಂಯುಕ್ತಾ ಪಾಟೀಲರಿಗೆ ಸೋಲಾಗಿದ್ದು ಗಜಕೇಸರಿ ಯೋಗ ಕೈಹಿಡಿದಿಲ್ಲ. ‘ಗಜಕೇಸರಿ ಯೋಗದಲ್ಲಿ ಹುಟ್ಟಿದ್ದೇನೆ. ನಾನು ಹುಟ್ಟಿದ ಮೇಲೆಯೇ ನನ್ನ ತಂದೆ (ಸಚಿವ ಶಿವಾನಂದ ಪಾಟೀಲ) ಶಾಸಕರಾಗಿದ್ದು. ಇಲ್ಲಿಗೆ ಬಂದಿದ್ದೇನೆ ಎಂದ ಮೇಲೆ ಗುಲಾಲು ಹಾರಿಸಿಯೇ ಹೋಗುವುದು’ ಎಂದು ಸಭೆಗಳಲ್ಲಿ ಪದೇ ಪದೇ ಹೇಳುತ್ತಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT