ಶುಕ್ರವಾರ, ಆಗಸ್ಟ್ 6, 2021
27 °C
ಅಗಸನಕೊಪ್ಪ: ಕೃಷಿಯಲ್ಲಿ ಭಾಗ್ಯ ತಂದು ಕೊಟ್ಟ ಹೊಂಡ

ಬಾಗಲಕೋಟೆ | ಮಳೆಕೊಯ್ಲು: ಸಮೃದ್ಧಿಗೆ ಹಾದಿ

ವೆಂಕಟೇಶ ಜಿ.ಎಚ್ Updated:

ಅಕ್ಷರ ಗಾತ್ರ : | |

Prajavani

ಬಾಗಲಕೋಟೆ: ‘ಮೊದಲು ಎಲ್ಲಾ ಮಳಿ ಮ್ಯಾಲ ಆಗ್ಬೇಕಿತ್ರಿ. ತಿನ್ನಾಕ 10 ಚೀಲ ಜ್ವಾಳ ಆಗ್ತಾ ಇರ್ಲಿಲ್ರಿ. ಈಗ ನೀರು ಹಿಡಿದಿಡೋದು ಕಲ್ತೇವ್ರಿ, ಹಂಗಾಗಿ ವರ್ಷ ನಾಲ್ಕು ಲಕ್ಷ ಆದಾಯ ಸಿಗ್ತೈತಿ’ ಎಂದು ಬಾದಾಮಿ ತಾಲ್ಲೂಕು ಅಗಸನಕೊಪ್ಪದ ಹನುಮಂತಪ್ಪ ಗೋಡಿ ಅಭಿಮಾನದಿಂದ ಹೇಳಿಕೊಂಡರು.

ಅಗಸನಕೊಪ್ಪದಲ್ಲಿನ ತಮ್ಮ 10 ಎಕರೆ ಜಮೀನನ್ನು ನೀರಾವರಿಗೆ ಒಳಪಡಿಸಲು ಹನುಮಂತಪ್ಪ 2015ರಲ್ಲಿ ಎರಡು ಬೋರ್‌ವೆಲ್ ಕೊರೆಸಿದ್ದರು. ಆಗ ತಲಾ ಮೂರು ಇಂಚು ನೀರು ಬಿದ್ದು ಹನುಮಂತಪ್ಪ ಹಿರಿಹಿರಿ ಹಿಗ್ಗಿದ್ದರು. ಹೊಲದಲ್ಲಿ ಇನ್ನು ಸಮೃದ್ಧಿಯೇ ಎಂದು ಕನಸು ಕಂಡಿದ್ದರು. ಆದರೆ ಆ ಖುಷಿ ಬಹಳ ದಿನ ಉಳಿಯಲಿಲ್ಲ. ಒಂದೇ ವರ್ಷದಲ್ಲಿ ನೀರು ಕಡಿಮೆಯಾಗಿತ್ತು. ‘ಬೋರ್ ಚಾಲೂ ಮಾಡಿದ 20 ನಿಮಿಷದಲ್ಲಿಯೇ ನೀರು ಬರುತ್ತಿರಲಿಲ್ಲ. ಇದು ಕೃಷಿ ಮಾಡುವ ಉತ್ಸಾಹವನ್ನೇ ಬತ್ತಿಸಿಬಿಟ್ಟಿತ್ತು’ ಎಂದು ಗೋಡಿ ಹೇಳುತ್ತಾರೆ.

ವರವಾದ ಕೃಷಿ ಭಾಗ್ಯ: ‘ಆಗ ನಾನು ಗ್ರಾಮ ಪಂಚಾಯ್ತಿ ಉಪಾಧ್ಯಕ್ಷನಾಗಿದ್ದ ಕಾರಣ ಕೃಷಿ ಇಲಾಖೆಯೊಂದಿಗೆ ನಿರಂತರ ಸಂಪರ್ಕ ಹೊಂದಿದ್ದೆನು. ಈ ವೇಳೆ ಅಧಿಕಾರಿಯೊಬ್ಬರು ಕೃಷಿ ಹೊಂಡ ಮಾಡಿಕೊಳ್ಳುವಂತೆ ಸಲಹೆ ನೀಡಿದರು. ಅದರಂತೆ ಹೊಲದಲ್ಲಿ 21 ಮೀಟರ್ ಸುತ್ತಳತೆಯ ಹೊಂಡ ಮೈದಳೆಯಿತು.

ಮಳೆ ನೀರು ಸಂಗ್ರಹ: ‘ಜಮೀನಿನ ಇಳಿಜಾರಿನಲ್ಲಿ ಹೊಂಡ ನಿರ್ಮಿಸಿ ಅದಕ್ಕೆ ಹೊಲದ ಎಲ್ಲ ದಿಕ್ಕುಗಳಿಂದಲೂ 2 ಅಡಿ ಆಳದಲ್ಲಿ ಸಿಮೆಂಟ್ ಪೈಪ್‌ನ ಸಂಪರ್ಕ ಕಲ್ಪಿಸಿದೆವು. ಹೀಗಾಗಿ ಹೊಲದ ಸರಹದ್ದಿನಲ್ಲಿ ಬಿದ್ದ ಮಳೆ ನೀರು ಹೊರಗೆ ಹೋಗದೇ ಸೀದಾ ಕೃಷಿ ಹೊಂಡಕ್ಕೆ ಹರಿದು ಬರುವಂತಾಯಿತು. ಈಗ ಒಂದು ದೊಡ್ಡ ಮಳೆಯಾದರೆ ಸಾಕು ಹೊಂಡ ತುಂಬುತ್ತದೆ’ ಎನ್ನುತ್ತಾರೆ.

‘ಹೆಚ್ಚಾದ ನೀರನ್ನು ಬೋರ್‌ವೆಲ್ ಸುತ್ತಲೂ ಇಂಗುವಂತೆ ಮರುಪೂರಣ ವ್ಯವಸ್ಥೆ ಮಾಡಿದ್ದೇನೆ. ಹೀಗಾಗಿ ಬೋರ್‌ವೆಲ್‌ನಲ್ಲಿ ನೀರು ಹೆಚ್ಚಾಗಿದೆ. ಬೇಸಿಗೆ– ಮಳೆಗಾಲ ಎಂಬ ವ್ಯತ್ಯಾಸವಿಲ್ಲದೇ ವರ್ಷವಿಡೀ ನಿರಂತರವಾಗಿ ನೀರು ಇರುತ್ತದೆ. ನಿಜವಾದ ಸಮೃದ್ಧಿ ಈಗ ಬಂದಿದೆ’ ಎಂದು ಗೋಡಿ ಹರ್ಷ ವ್ಯಕ್ತಪಡಿಸುತ್ತಾರೆ.

ಹೊಲದಲ್ಲಿ ನೀರಿನ ಸಮೃದ್ಧಿಗೆ ಮುನ್ನ ಹನುಮಂತಪ್ಪ ಮಳೆ ಆಶ್ರಯಿಸಿ ಜೋಳ, ಸೂರ್ಯಕಾಂತಿ, ಶೇಂಗಾ ಬೆಳೆಯುತ್ತಿದ್ದರು. ಈಗ ಕಾಯಿಪಲ್ಲೆ (ತರಕಾರಿ), ಗೋವಿನಜೋಳ, ಕಬ್ಬು ಬೆಳೆಯುತ್ತಿದ್ದಾರೆ. ಕೈತುಂಬ ಆದಾಯವೂ ಸಿಗುತ್ತಿದೆ. ಹನುಮಂತಪ್ಪ ಅವರದ್ದು ನಾಲ್ವರು ಸಹೋದರರ ಕೂಡು ಕುಟುಂಬ. ಸದಾ ನೀರಿನ ಲಭ್ಯತೆ ಅವರನ್ನು ಸ್ವಾವಲಂಬಿಗಳಾಗಿಸಿದೆ.

ಹನುಮಂತಪ್ಪ ಅವರ ಸಂಪರ್ಕ ಸಂಖ್ಯೆ: 9620401441.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು