ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನಿಸರ್ಗದ ಮಡಿಲಲ್ಲಿ ನೆಲೆಸಿದ ಬನಶಂಕರಿದೇವಿ

ಆದಿಶಕ್ತಿ ಬನಶಂಕರಿದೇವಿ ರಥೋತ್ಸವ ಜ.25ರಂದು
ಎಸ್.ಎಂ. ಹಿರೇಮಠ
Published 21 ಜನವರಿ 2024, 5:52 IST
Last Updated 21 ಜನವರಿ 2024, 5:52 IST
ಅಕ್ಷರ ಗಾತ್ರ

ಬಾದಾಮಿ: ಚೊಳಚಗುಡ್ಡ ಗ್ರಾಮದ ಸೀಮೆಯ ತಿಲಕ ವನದ ನಿಸರ್ಗ ಸೌಂದರ್ಯದ ಮಡಿಲಿನಲ್ಲಿ ನೆಲೆಸಿರುವ ಮತ್ತು ಉತ್ತರ ಕರ್ನಾಟಕದ ಧಾರ್ಮಿಕ ಕ್ಷೇತ್ರಗಳಲ್ಲೊಂದಾದ ಬನಶಂಕರಿದೇವಿ ದೇವಿ ದೇವಾಲಯ 17ನೇ ಶತಮಾನದಲ್ಲಿ ಪೇಶ್ವೆ ಕಾಲಕ್ಕೆ ನಿರ್ಮಿಸಲಾಗಿದೆ ಎಂಬ ಪ್ರತೀತಿ ಇದೆ.

ದೇವಾಲಯದ ಎದುರಿಗೆ ವಿಶಾಲವಾದ ಹರಿದ್ರಾತೀರ್ಥ ಪುಷ್ಕರಣಿ ಇದ್ದು, ಪಕ್ಕದಲ್ಲಿ ಹರಿಯುವ ಸರಸ್ವತಿ ಹಳ್ಳವು ಮೊದಲು ವರ್ಷದುದ್ದಕ್ಕೂ ತುಂಬಿ ಹರಿಯುತ್ತಿದ್ದವು. ಆದರೆ ಈಚೆಗೆ ಮಳೆ ಅಭಾವದಿಂದ ಬತ್ತಿವೆ. ಸರಸ್ವತಿ ಹಳ್ಳಕ್ಕೆ ಮತ್ತು ಹರಿದ್ರಾತೀರ್ಥ ಪುಷ್ಕರಣಿಗೆ ನವಿಲುತೀರ್ಥ ಜಲಾಶಯದಿಂದ ನೀರನ್ನು ಬಿಡಲಾಗುತ್ತಿದೆ. ಭಕ್ತರು ಇಲ್ಲಿಯೇ ಪುಣ್ಯಸ್ನಾನ ಮತ್ತು ಮಕ್ಕಳ ತೆಪ್ಪ ಬಿಡುವ ಕಾರ್ಯ ಮಾಡುತ್ತಿದ್ದಾರೆ.

ದೇಗುಲದ ಐತಿಹ್ಯ: ಚಿಕ್ಕ ಪುಷ್ಕರಣಿ ಸಮೀಪ ಮರಳು ಶಿಲೆಯಲ್ಲಿ ದ್ರಾವಿಡ ಶೈಲಿಯಲ್ಲಿ ದೇವಾಲಯವನ್ನು ಅರ್ಧ ಭಾಗ ಭೂಮಿಯಲ್ಲಿ ನಿರ್ಮಿಸಲಾಗಿದೆ. ಈ ದೇವಾಲಯ ರಾಷ್ಟ್ರಕೂಟರ ಕಾಲದ್ದು, ಇದುವೇ ಮೂಲ ಬನಶಂಕರಿ ದೇವಾಲಯವೆಂದು ಹೇಳುವರು. ಆದರೆ, ಇದರಲ್ಲಿ ಯಾವುದೇ ಮೂರ್ತಿ ಲಭ್ಯವಾಗಿಲ್ಲ ಎಂದು ಸಂಶೋಧಕರು ಹೇಳುತ್ತಾರೆ.

ಈ ದೇವಾಲಯದ ಹಿಂದೆಯೇ ಈಗಿನ ಬನಶಂಕರಿ ದೇವಾಲಯವಿದ್ದು, 17ನೇ ಶತಮಾನದಲ್ಲಿ ಪೇಶ್ವೆ ಕಾಲಕ್ಕೆ ಈ ದೇವಾಲಯವನ್ನು ನಿರ್ಮಿಸಲಾಗಿದೆ ಎಂದು ಹೇಳುವರು. ದೇವಾಲಯದ ಎದುರಿಗೆ ವಿಶಾಲವಾದ ಹರಿದ್ರಾತೀರ್ಥ ಪುಷ್ಕರಣಿ, ಮೂರು ಮಹಲಿನ ದೀಪಸ್ತಂಭವಿದೆ. ಮಹಾದ್ವಾರದಿಂದ ಒಳಗೆ ಹೋದಾಗ ಮೂರು ದೀಪಸ್ತಂಭಗಳು ಎದುರಿಗೆ ವಿಶಾಲವಾದ ಬನಶಂಕರಿದೇವಿ ಗುಡಿಯನ್ನು ಕಾಣುತ್ತೇವೆ. ಮುಖಮಂಟಪ, ಸಭಾ ಮಂಟಪ ಮತ್ತು ಗರ್ಭಗುಡಿಯಲ್ಲಿ ಬನಶಂಕರಿದೇವಿ ಸಿಂಹಾರೂಢಳಾಗಿ ಕಂಗೊಳಿಸುತ್ತಾಳೆ. ಸುತ್ತ ಪೌಳಿ ಇದೆ. ಎಡಕ್ಕೆ ಬಸವಣ್ಣನ ದೇವಾಲಯವಿದೆ.

ಹೀಗೆ ಹಿನ್ನೆಲೆಯುಳ್ಳ ಬನಶಂಕರಿ ದೇವಿ ರಥೋತ್ಸವವು ಜ.25ರಂದು ಸಂಜೆ 5ಕ್ಕೆ ಲಕ್ಷಾಂತರ ಭಕ್ತರ ಸಾಕ್ಷಿಯಾಗಿ ಸಂಭ್ರಮದಿಂದ ನಡೆಯುತ್ತದೆ. ರಥೋತ್ಸವಕ್ಕೆ ಮಹಾರಾಷ್ಟ್ರ, ಗೋವಾ ಹಾಗೂ ನಾಡಿನ ವಿವಿಧ ಜಿಲ್ಲೆಗಳಿಂದ ಭಕ್ತರು ರಥೋತ್ಸವಕ್ಕೆ ಆಗಮಿಸುವರು.

ಉತ್ತರ ಕರ್ನಾಟಕದ ಜನತೆ ಬನಶಂಕರಿದೇವಿ ಜಾತ್ರೆಯನ್ನು ನಾಡಿನ ಹಬ್ಬದಂತೆ ಆಚರಿಸುತ್ತಾರೆ. ದೇವಿಗೆ ಹರಕೆ ಹೊತ್ತ ಭಕ್ತರು ಪಾದಯಾತ್ರೆಯ ಮೂಲಕ ದೇವಿಯ ದರ್ಶನ ಪಡೆಯುವರು. ಕೆಲವರು ಗುಡಿಯ ಸುತ್ತ ದೀರ್ಘದಂಡ ಪ್ರಣಾಮಗಳನ್ನು ಅರ್ಪಿಸುವರು. ಮಕ್ಕಳಾಗದವರು ದೇವಿಗೆ ಬೇಡಿಕೊಂಡು ಮಕ್ಕಳಾದ 4-5 ವರ್ಷಗಳ ನಂತರ ಹರಿದ್ರಾ ತೀರ್ಥದಲ್ಲಿ ಮಗುವನ್ನು ತೆಪ್ಪದಲ್ಲಿ ಬಿಟ್ಟು ಹರಕೆ ತೀರಿಸುವ ಸಂಪ್ರದಾಯವಿದೆ.

ಜಾತ್ರೆಗೆ ಬಂದವರಿಗೆ ಮನೆಯಲ್ಲಿ ಖಡಕ್ ಸಜ್ಜೆ, ಜೋಳದ ರೊಟ್ಟಿ, ವೈವಿಧ್ಯಮಯ ಖಾರದ ಚಟ್ನಿ, ಶೇಂಗಾ ಹೋಳಿಗೆ, ಕರಚಿಕಾಯಿ, ಎಣ್ಣೆ ಹೋಳಿಗೆ ಮತ್ತಿತರ ತಿನಿಸನ್ನು ಬೀಗರಿಗಾಗಿ ಮನೆಯಲ್ಲಿ ಮಹಿಳೆಯರು ಬಿಡುವಿಲ್ಲದ ಕೆಲಸ ಮಾಡುವರು.

ನಾಟಕೋತ್ಸವ: ತಿಂಗಳ ವರೆಗೆ ಹಗಲೂ ರಾತ್ರಿ ನಡೆಯುವ ಜಾತ್ರೆಗೆ 10ಕ್ಕೂ ಅಧಿಕ ನಾಟಕ ಕಂಪನಿಗಳ ಕಲಾವಿದರಿಂದ ನಾಟಕೋತ್ಸವ ನಡೆಯಲಿದೆ. ಮಧ್ಯಾಹ್ನ ಮೂರು ಗಂಟೆಯಿಂದ ಬೆಳಿಗ್ಗೆ 6 ಗಂಟೆಯ ವರೆಗೂ ನಿತ್ಯ ನಾಲ್ಕು ಪ್ರಯೋಗಗಳು ಪ್ರದರ್ಶನಗೊಳ್ಳುತ್ತಿವೆ.

ಅನ್ನಪೂರ್ಣೆಯರಿಂದ ದಾಸೋಹ: ತಾಲ್ಲೂಕಿನ ಸುತ್ತಲಿನ ಢಾಣಕಶಿರೂರ, ಖ್ಯಾಡ, ಮಣ್ಣೇರಿ, ಚೊಳಚಗುಡ್ಡ ಮತ್ತು ಮಂಗಳೂರು ಗ್ರಾಮದ ಅನ್ನಪೂರ್ಣೆಯರು ಜಾತ್ರೆಗೆ ಬಂದ ಯಾತ್ರಿಕರಿಗೆ ಕಡಿಮೆ ದರದಲ್ಲಿ ಉತ್ತರ ಕರ್ನಾಟಕದ ಊಟವನ್ನು ತಾಯಿಯಂತೆ ಉಣಬಡಿಸುವರು. 50ಕ್ಕೂ ಅಧಿಕ ಮಹಿಳೆಯರು ಜಾತ್ರೆಯಲ್ಲಿ ಅನ್ನ ದಾಸೋಹ ಸೇವೆ ಮಾಡುವರು.

ಪಲ್ಯದ ಹಬ್ಬ ಆಚರಣೆ: ಮಳೆ ಹೋಗಿ ಬರದಿಂದ ಜನ ಮತ್ತು ಜಾನುವಾರುಗಳು ತತ್ತರಿಸಿದಾಗ ದೇವಿಯು ತನ್ನ ತನುವಿನಿಂದ ತರಕಾರಿಯನ್ನು ಸೃಷ್ಟಿಸಿ ಕಾಪಾಡಿದ ಕುರುಹಿಗೆ ಇಂದಿಗೂ ರಥೋತ್ಸವದ ಹಿಂದಿನ ದಿನ ದೇವಿಗೆ 108 ಬಗೆಯ ತರಕಾರಿಯನ್ನು ಅರ್ಚಕರು ಪೂಜೆ ಸಲ್ಲಿಸುವ ಸಂಪ್ರದಾಯವಿದೆ. ರಥೋತ್ಸವದ ಹಿಂದಿನ ದಿನ ಭಕ್ತರು ಪಲ್ಯದ ಹಬ್ಬವೆಂದು ಆಚರಿಸುವರು.

ಗರ್ಭಗುಡಿಯಲ್ಲಿ ಸಿಂಹಾರೂಢಳಾದ ಬಾದಾಮಿ ಸಮೀಪದ ಬನಶಂಕರಿದೇವಿ ಮೂರ್ತಿ
ಗರ್ಭಗುಡಿಯಲ್ಲಿ ಸಿಂಹಾರೂಢಳಾದ ಬಾದಾಮಿ ಸಮೀಪದ ಬನಶಂಕರಿದೇವಿ ಮೂರ್ತಿ
ಬನಶಂಕರಿ ದೇವಾಲಯದ ಎದುರಿನ ಹರಿದ್ರಾತೀರ್ಥ ಪುಷ್ಕರಣಿಯಲ್ಲಿ ಭಕ್ತರು ಪುಣ್ಯಸ್ನಾನ ಮಾಡುತ್ತಿರುವುದು (ಸಂಗ್ರಹ ಚಿತ್ರ)
ಬನಶಂಕರಿ ದೇವಾಲಯದ ಎದುರಿನ ಹರಿದ್ರಾತೀರ್ಥ ಪುಷ್ಕರಣಿಯಲ್ಲಿ ಭಕ್ತರು ಪುಣ್ಯಸ್ನಾನ ಮಾಡುತ್ತಿರುವುದು (ಸಂಗ್ರಹ ಚಿತ್ರ)

ನಾಡಿನ ಹಬ್ಬದಂತೆ ಜಾತ್ರೆ ಆಚರಣೆ ತಿಂಗಳ ವರೆಗೆ ನಡೆಯುವ ಜಾತ್ರೆ ಜಾತ್ರೆಯಲ್ಲಿ ಸರ್ವಧರ್ಮಗಳ ಸಮನ್ವಯತೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT