ಬಾಗಲಕೋಟೆ: ಮುಂದಿನ ದಿನಗಳಲ್ಲಿ ಮೀಸಲಾತಿ ರದ್ದತಿ ಚಿಂತನೆ ಇದೆ ಎಂದಿರುವ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ಲೋಕಸಭಾ ಸದಸ್ಯತ್ವ ರದ್ದುಗೊಳಿಸಬೇಕು ಎಂದು ಆಗ್ರಹಿಸಿ ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಮುಂದೆ ಬಿಜೆಪಿ ಮುಖಂಡರು ಪ್ರತಿಭಟನೆ ನಡೆಸಿದರು.
ಸಂವಿಧಾನ ವಿರುದ್ಧ ನಡೆದುಕೊಳ್ಳುತ್ತಿರುವ ಕಾಂಗ್ರೆಸ್ ನಡೆಯನ್ನು ಖಂಡಿಸಲಾಗುವುದು. ಈ ರೀತಿಯ ಹೇಳಿಕೆಯಿಂದ ದಲಿತ ಸಮುದಾಯಕ್ಕೆ ದ್ರೋಹ ಮಾಡಿದ್ದಾರೆ. ದೇಶದ ಬಗ್ಗೆ ಹೊರ ದೇಶದಲ್ಲಿ ಅನಾವಶ್ಯಕವಾಗಿ ಗೊಂದಲ ಸೃಷ್ಟಿಸುತ್ತಿದ್ದಾರೆ ಎಂದು ಆರೋಪಿಸಿದರು.
ಬಿಜೆಪಿ ಎಸ್‌ಸಿ ಮೋರ್ಚಾ ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದ ಜಿಲ್ಲಾ ಘಟಕದ ಅಧ್ಯಕ್ಷ ಮುತ್ತಣ್ಣ ಬೆನ್ನೂರ, ಮೀಸಲಾತಿ ತೆಗೆಯುವ ಮಾತನಾಡುವ ಮೂಲಕ ಕಾಂಗ್ರೆಸ್ ತನ್ನ ಅಸಲಿತನವನ್ನು ತೋರಿಸಿದೆ. ಮೀಸಲಾತಿ ತೆಗೆಯುವ ಹುನ್ನಾರ ನಿಲ್ಲಿಸಬೇಕು ಎಂದು ಆಗ್ರಹಿಸಿದರು.
ಜಿಲ್ಲಾ ಘಟಕದ ಅಧ್ಯಕ್ಷ ಶಾಂತಗೌಡ ಪಾಟೀಲ ಮಾತನಾಡಿ, ಮೀಸಲಾತಿ ರದ್ದು ಪಡಿಸಿದರೆ ಬಿಜೆಪಿ ಸುಮ್ಮನೆ ಕೂಡುವುದಿಲ್ಲ. ದಲಿತರಿಗೆ, ಹಿಂದುಳಿದವರಿಗೆ ಅನ್ಯಾಯ ಮಾಡಲು ಬಿಡುವುದಿಲ್ಲ ಎಂದರು.
ಮುಖಂಡರಾದ ಅಶೋಕ ಲಿಂಬಾವಳಿ ಮಾತನಾಡಿ, ಮೀಸಲಾತಿ ತೆಗೆಯುವ ಮಾತನಾಡಿರುವ ರಾಹುಲ್ ಗಾಂಧಿ ಅವರನ್ನು ದೇಶದಿಂದ ಗಡೀಪಾರು ಮಾಡಬೇಕು ಎಂದು ಆಗ್ರಹಿಸಿದರು.
ಮುಖಂಡರಾದ ಬಸವರಾಜ ಯಂಕಂಚಿ, ಶಿವಾನಂದ ಟವಳಿ, ವೀರಣ್ಣ ಹಳೇಗೌಡರ, ಸಾಬು ದೊಡ್ಡಮನಿ ಮತ್ತಿತರರು ಮಾತನಾಡಿ, ಮೀಸಲಾತಿ ವಿರೋಧಿ ನೀತಿ ಖಂಡಿಸಿದರು. ಕಾಂಗ್ರೆಸ್ ನಡೆಯ ವಿರುದ್ಧ ವಾಗ್ದಾಳಿ ನಡೆಸಿದರು. ಮೀಸಲಾತಿ ರದ್ದತಿಗೆ ಅವಕಾಶ ನಿಡುವುದಿಲ್ಲ ಎಂದರು.
ಮುಖಂಡರಾದ ರಾಜು ನಾಯ್ಕರ್, ಬಸವರಾಜ ಅವರಾದಿ, ಶಂಕರ ಗಲಗ, ಬಸವರಾಜ ಹುನಗುಂದ, ಉಮೇಶ ಹಂಚಿನಾಳ ಇದ್ದರು.
ಪ್ರತಿಭಟನೆ ಹಾಸ್ಯಾಸ್ಪದ
ಬಾಗಲಕೋಟೆ: ‘ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮೀಸಲಾತಿ ವಿರೋಧಿ ಹೇಳಿಕೆ ನೀಡಿದ್ದಾರೆ ಎಂದು ಸುಳ್ಳು ಆರೋಪ ಮಾಡಿ ಬಿಜೆಪಿಯವರು ಪ್ರತಿಭಟನೆ ಮಾಡುತ್ತಿರುವುದು ಹಾಸ್ಯಾಸ್ಪದ’ ಎಂದು ಕಾಂಗ್ರೆಸ್ ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ನಾಗರಾಜ ಹದ್ಲಿ ಟೀಕಿಸಿದ್ದಾರೆ. ‘ಮೀಸಲಾತಿ ವಿರೋಧಿಸುತ್ತಾ ಬಂದವರಿಗೆ ಸಂವಿಧಾನವನ್ನೇ ಬದಲಾಯಿಸಲು ಹೊರಟವರಿಗೆ ಇಂತಹ ಪ್ರತಿಭಟನೆ ಮಾಡುವ ಯಾವ ನೈತಿಕತೆಯೂ ಇಲ್ಲ. ರಾಹುಲ್ ಗಾಂಧಿ ಹೇಳಿಕೆಯನ್ನು ಅರ್ಥಮಾಡಿಕೊಳ್ಳುವ ಜ್ಞಾನವಾಗಲಿ ವ್ಯವದಾನವಾಗಲಿ ಇಲ್ಲದಿರುವುದು ಆಶ್ಚರ್ಯವೇನಲ್ಲ’ ಎಂದು ವ್ಯಂಗ್ಯವಾಡಿದ್ದಾರೆ. ‘ಶಿಕ್ಷಣ ಉದ್ಯೋಗದಲ್ಲಿ ಸರ್ವರಿಗೂ ಸಮಪಾಲು ನೀಡುವುದೇ ಮೀಸಲಾತಿಯ ಮೂಲ ಉದ್ದೇಶ. ಆ ಉದ್ದೇಶ ಈಡೇರಿದ ನಂತರ ಮೀಸಲಾತಿ ಯಾಕೆ ಬೇಕು ಎಂಬುದರ ಬಗ್ಗೆ ರಾಹುಲ್ ಗಾಂಧಿಯವರು ಹೇಳಿದ್ದಾರೆ’ ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.