ಗುರುವಾರ , ಅಕ್ಟೋಬರ್ 29, 2020
27 °C
ರೈತರನ್ನು ಬಳಸಿಕೊಂಡು ಕಾಂಗ್ರೆಸ್‌ನಿಂದ ರಾಜಕೀಯ: ಕಡಾಡಿ ಆಕ್ರೋಶ

ಕೇಂದ್ರದ ಕೃಷಿ ಮಸೂದೆ: ರೈತ ಪರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬಾಗಲಕೋಟೆ: 'ಕೇಂದ್ರ ಸರ್ಕಾರದ ನೂತನ ಕೃಷಿ ಮಸೂದೆಗಳ ಬಗ್ಗೆ ರೈತರಿಗೆ ತಪ್ಪು ತಿಳಿವಳಿಕೆ ಮೂಡಿಸುವ ಮೂಲಕ ಕಾಂಗ್ರೆಸ್‌ನವರು ರಾಜಕೀಯ ಮಾಡುತ್ತಿದ್ದಾರೆ' ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಆಕ್ರೋಶ ವ್ಯಕ್ತಪಡಿಸಿದರು.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ನವರ ಸುಳ್ಳುಗಳನ್ನು ನಂಬಿ ಮುಗ್ಧ ರೈತರು ಬಲಿಯಾಗಲು ಬಿಡೊಲ್ಲ. ರೈತಾಪಿ ವರ್ಗಕ್ಕೆ ಸತ್ಯ ತಿಳಿಸಲು ಬಿಜೆಪಿ ರೈತ ಮೋರ್ಚಾದಿಂದ ರಾಜ್ಯಾದ್ಯಂತ ಪ್ರವಾಸ ಕೈಗೊಂಡಿರುವುದಾಗಿ ಹೇಳಿದರು.

ಕೃಷಿ ಸಂಬಂಧಿ ಮಸೂದೆಗಳ ವಿಚಾರದಲ್ಲಿ ಯಾವುದು ಸತ್ಯ, ಯಾವುದು ಮಿಥ್ಯ ಎಂಬುದನ್ನು ಬಿಜೆಪಿ ಬಹಿರಂಗಗೊಳಿಸಲಿದೆ. ಗ್ರಾಮ ಮಟ್ಟದಲ್ಲಿ ಸಭೆ ನಡೆಸಿ ಕಾಯ್ದೆಯಿಂದ ರೈತರಿಗೆ ಆಗುವ ಉಪಯೋಗಗಳ ಬಗ್ಗೆ ಜಾಗೃತಿ ಅಭಿಯಾನ ನಡೆಸಲಾಗುವುದು ಎಂದು ತಿಳಿಸಿದರು.

ನೂತನ ಕಾಯ್ದೆಯಿಂದ ಎಪಿಎಂಸಿಗಳನ್ನು ಮುಚ್ಚುವುದಿಲ್ಲ. ಆದರೆ ಸ್ಪರ್ಧಾತ್ಮಕ ಬೆಲೆಗೆ ರೈತರು ತಮ್ಮ ಉತ್ಪನ್ನಗಳನ್ನು ಎಲ್ಲಿಯಾದರೂ ಮಾರಾಟ ಮಾಡಬಹುದು. ರೈತರಿಗೆ ಸ್ಪರ್ಧಾತ್ಮಕ ದರ ಸಿಗಬೇಕು ಎಂಬುದು ಸರ್ಕಾರದ ಆಶಯ. ಮಸೂದೆ ಜಾರಿಯ ನಂತರ ಪ್ರಧಾನಮಂತ್ರಿ ನರೇಂದ್ರ ಮೋದಿ 22 ಬೆಳೆಗಳಿಗೆ ಬೆಂಬಲ ಬೆಲೆ ಘೋಷಿಸಿದ್ದಾರೆ. ಹೀಗಾಗಿ ಬೆಂಬಲ ಬೆಲೆ ನಿಂತು ಹೋಗಲಿದೆ ಎಂಬುದು ಶುದ್ಧ ಸುಳ್ಳು. ಆ ಬಗ್ಗೆ ಕಾಂಗ್ರೆಸ್ ಅಪಪ್ರಚಾರ ಮಾಡುವುದು ನಿಲ್ಲಿಸಬೇಕು ಎಂದು ಆಗ್ರಹಿಸಿದರು.

ರಾಜ್ಯ ಸರ್ಕಾರ ಜಾರಿಗೆ ತಂದಿರುವ ಭೂ ಸುಧಾರಣೆ ಕಾಯ್ದೆ ತಿದ್ದುಪಡಿಯಿಂದ ಕೃಷಿ ಕ್ಷೇತ್ರದಲ್ಲಿ ಮಹತ್ತರ ಬದಲಾವಣೆ ಆಗಲಿದೆ. ರಾಜ್ಯದಲ್ಲಿ ಅರಣ್ಯ ಪ್ರದೇಶ ಹೊರತುಪಡಿಸಿ ಇನ್ನೂ 22 ಲಕ್ಷ ಹೆಕ್ಟೇರ್ ಭೂಮಿ ಬಳಕೆಯಾಗದೇ ಪಾಳು ಬಿದ್ದಿದೆ. ಈ ಭೂಮಿ ಸದುಪಯೋಗವಾಗಬೇಕು ಎಂಬುದು ರಾಜ್ಯ ಸರ್ಕಾರದ ಉದ್ದೇಶವಾಗಿದೆ. ಕೊರೊನಾ ಕಾರಣ ಬಹಳಷ್ಟು ಮಂದಿ ನಗರ ತೊರೆದು ಗ್ರಾಮೀಣ ಪ್ರದೇಶಕ್ಕೆ ಮರಳಿದ್ದಾರೆ. ಅವರು ಕೃಷಿ ಭೂಮಿ ಖರೀದಿಸಿ ವ್ಯವಸಾಯ ಮಾಡಲು ಅನುಕೂಲ ಮಾಡಿಕೊಡಲಾಗಿದೆ ಎಂದರು.

ಮುಂಬರುವ ದಿನಗಳಲ್ಲಿ ಕೃಷಿ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡುವ ಕಾರಣ ಕೃಷಿಕರಿಗೆ ಅನುಕೂಲ ಮಾಡಿಕೊಡಲು ಪ್ರಧಾನಿ ನರೇಂದ್ರ ಮೋದಿ ಅಸ್ಥೆ ವಹಿಸಿ ಈ ಮಸೂದೆಗಳನ್ನು ಜಾರಿಗೆ ತಂದಿದ್ದಾರೆ ಎಂದರು.

ಸುದ್ದಿಗೋಷ್ಠಿಯಲ್ಲಿ ಸಂಸದ ಪಿ.ಸಿ.ಗದ್ದಿಗೌಡರ, ಶಾಸಕ ವೀರಣ್ಣ ಚರಂತಿಮಠ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಶಾಂತಗೌಡ ಪಾಟೀಲ, ಮಾಜಿ ಶಾಸಕರಾದ ಪಿ.ಎಚ್.ಪೂಜಾರ, ನಾರಾಯಣ ಸಾ ಭಾಂಡಗೆ ಹಾಜರಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.