ಜಮಖಂಡಿ: ‘ಬೆಳಿ ನೀರಾಗ ಮುಳಗ್ಯಾವ, ಅದರ ಮ್ಯಾಲೆ ನಮ್ಮ ಕುಟುಂಬದ ಜೀವನ. ಬೆಳೀನ ಬರದಿದ್ರೆ ನಾವು ಎಲ್ಲಿ ಹೋಗುದ್ರಿ, ಜೀವನ ಹ್ಯಾಂಗ ಮಾಡೊದು, ಪ್ರತಿವರ್ಷ ಇದೆ ಪರಿಸ್ಥಿತಿಯಾದರೆ ಹ್ಯಾಂಗ ಬದುಕುದ. ನಮಗೆ ಶಾಶ್ವತ ಪರಿಹಾರ ಕೊಡ್ರಿ’ ಎನ್ನುತ್ತಾರೆ ರೈತರು.
ತಾಲ್ಲೂಕಿನ ಶಿರಗುಪ್ಪಿ, ಮುತ್ತೂರ, ಮೈಗೂರ, ಕಂಕಣವಾಡಿ, ಜಂಬಗಿ, ತುಬಚಿ, ಹಿರೇಪಡಸಲಗಿ ಸೇರಿದಂತೆ 18 ಗ್ರಾಮಗಳಲ್ಲಿ ಕೃಷ್ಣಾ ನದಿ ಪ್ರವಾಹದಿಂದ ಬೆಳೆ ನೀರಿನಲ್ಲಿ ನಿಂತಿವೆ. ಇನ್ನು ಕೆಲ ಗ್ರಾಮದಲ್ಲಿ ವಾರದಿಂದ ನೀರಿನಲ್ಲಿ ಜಲಾವೃತಗೊಂಡು ರೈತರಿಗೆ ಅಪಾರ ನಷ್ಟ ಉಂಟಾಗಿದೆ.
ಕೃಷ್ಣಾ ನದಿ ತೀರದ ಪ್ರದೇಶದಲ್ಲಿನ ರೈತರ ಮುಖ್ಯ ಬೆಳೆ ಕಬ್ಬು. ಇದನ್ನೆ ನಂಬಿಕೊಂಡು ಬದುಕು ಸಾಗಿಸುತ್ತಿದ್ದಾರೆ. ಬೇಸಿಗೆಯಲ್ಲಿ ನದಿ ಬತ್ತಿಹೋಗಿ ನೀರಿನ ಅಭಾವ ಆಗುತ್ತದೆ. ಕಷ್ಟಪಟ್ಟು ಕಬ್ಬಿನ ಜೀವ ಉಳಿಸಿರುತ್ತೇವೆ. ಬೇಸಿಗೆಯಲ್ಲಿ ಉಳಿಸಿರುವ ಕಬ್ಬು ಈಗ ನೀರಿನಲ್ಲಿ ನಿಂತು ಕೊಳೆಯುತ್ತಿದೆ. ನೋಡಲು ಆಗುತ್ತಿಲ್ಲ ಎನ್ನುತ್ತಾರೆ ರೈತರು.
ಹೆಚ್ಚು ಹಾನಿ: 2005, 2009, 2013, 2019 ಮತ್ತು 2021 ರ ಪ್ರವಾಹಗಳಲ್ಲಿ ಬೆಳೆಗಳು ಹಾನಿಯಾಗಿವೆ. ಇನ್ನೂ ಚಿಕ್ಕಪಡಸಲಗಿಯ ಶ್ರಮ ಬಿಂದು ಸಾಗರ, ಮತ್ತು ಗಲಗಲಿ ಬ್ಯಾರೇಜ್ ಎತ್ತರಿಸಿರು ವುದರಿಂದ ಬೇಸಿಗೆಯಲ್ಲಿ ಅನುಕೂಲವಾಗುತ್ತದೆ. ಆದರೆ ಪ್ರವಾಹದ ಸಂದರ್ಭದಲ್ಲಿ ಸ್ವಲ್ಪ ಮಟ್ಟಿಗೆ ಹೆಚ್ಚು ನೀರು ನಿಲ್ಲುವುದರಿಂದ ಬೆಳೆಗಳಿಗೂ ಹಾನಿಯಾಗಿರಬಹುದು ಎಂದು ಅಧಿಕಾರಿಗಳು ಹೇಳುತ್ತಾರೆ.
ಕೃಷ್ಣಾ ನದಿಯಲ್ಲಿ ಭಾನುವಾರ 2.8 ಲಕ್ಷ ಕ್ಯುಸೆಕ್‌ಗೂ ಅಧಿಕ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಮಹಾರಾಷ್ಟ್ರದಲ್ಲಿ ಮಳೆ ಕಡಿಮೆ ಆಗಿರುವುದರಿಂದ ಒಂದೆರಡು ದಿನಗಳಲ್ಲಿ ನೀರಿನ ಪ್ರಮಾಣ ಕಡಿಮೆ ಆಗುತ್ತದೆ. ಅಲ್ಲಿಯವರೆಗೆ ಜನ-ಜಾನುವಾರುಗಳಿಗೆ ಕಾಳಜಿ ಕೇಂದ್ರ ತೆರೆಯಲಾಗಿದ್ದು ಎಲ್ಲ ವ್ಯವಸ್ಥೆ ಮಾಡಲಾಗಿದೆ ಎಂದು ತಹಶೀಲ್ದಾರ್ ಪ್ರಶಾಂತ ಚನಗೊಂಡ ತಿಳಿಸಿದರು.
ಜಮಖಂಡಿ ಮತ್ತು ರಬಕವಿ ಬನಹಟ್ಟಿ ತಾಲ್ಲೂಕಿನ ವ್ಯಾಪ್ತಿಯಲ್ಲಿ ಕಬ್ಬು, ಗೋವಿನ ಜೋಳ, ಉದ್ದು, ಹೆಸರು, ಸೋಯಾ, ಅವರೆ ಬೆಳೆಗಳು ಕೃಷ್ಣಾ ನದಿ ಪ್ರವಾಹದಿಂದ ಆವೃತವಾಗಿವೆ. 11 ಸಾವಿರ ಹೆಕ್ಟೇರ್ ಬೆಳೆ ಜಲಾವೃತವಾಗಿದ್ದು, ನದಿ ಸಂಪೂರ್ಣವಾಗಿ ಇಳಿದ ನಂತರ ತೋಟಗಾರಿಕೆ, ಕೃಷಿ ಮತ್ತು ಕಂದಾಯ ಇಲಾಖೆಯವರು ಸೇರಿ ಹಾನಿಯ ಸಮೀಕ್ಷೆ ಮಾಡಿ ಎಷ್ಟು ಪ್ರಮಾಣದಲ್ಲಿ ಹಾನಿಯಾಗಿದೆ ಎಂಬುವದನ್ನು ವರದಿ ಸಿದ್ದಪಡಿಸುತ್ತೇವೆ ಎಂದು ಸಹಾಯಕ ಕೃಷಿ ನಿರ್ದೇಶಕ ಎಂ.ಎಸ್.ಬುಜರುಖ್ ಹೇಳುತ್ತಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.