ಮಂಗಳವಾರ, 25 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಬಾಗಲಕೋಟೆ ಲೋಕಸಭಾ ಕ್ಷೇತ್ರ: ಕಾಂಗ್ರೆಸ್‌ ಗೆಲುವು ‘ಕೈ‘ ಚೆಲ್ಲಿತೇ?

Published 9 ಜೂನ್ 2024, 5:33 IST
Last Updated 9 ಜೂನ್ 2024, 5:33 IST
ಅಕ್ಷರ ಗಾತ್ರ

ಬಾಗಲಕೋಟೆ: ಕೇಂದ್ರ ಸರ್ಕಾರದ ವಿರುದ್ಧದ ಆಡಳಿತ ವಿರೋಧಿ ಅಲೆ, 20 ವರ್ಷಗಳಿಂದ ಇರುವ ಸಂಸದರ ವಿರುದ್ಧ ಇದ್ದ ಅಸಮಾಧಾನ, ಐವರು ಶಾಸಕರ ಪಡೆ, ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ, ಗ್ಯಾರಂಟಿ ಯೋಜನೆಗಳ ಜಾರಿಯಂತಹ ಅಸ್ತ್ರಗಳಿದ್ದರೂ ಬಾಗಲಕೋಟೆ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಗೆಲುವು ‘ಕೈ’ ಚೆಲ್ಲಿತೇ ಎಂಬ ಚರ್ಚೆ ಕಾಂಗ್ರೆಸ್‌ ವಲಯದೊಳಗೆ ಜೋರಾಗಿದೆ.

ಕಾಂಗ್ರೆಸ್‌ ನಾಯಕರು ಬಹಿರಂಗವಾಗಿ ಒಗ್ಗಟ್ಟು ಪ್ರದರ್ಶಿಸಿದರಾದರೂ, ಒಳಗಡೆಯೂ ಅದೇ ಒಗ್ಗಟ್ಟನ್ನು ತೋರಲು ವಿಫಲರಾದರು. ಗ್ಯಾರಂಟಿ ಯೋಜನೆಗಳು ಕೈ ಹಿಡಿಯದಿದ್ದರೆ ಸೋಲಿನ ಅಂತರ ಲಕ್ಷ ಮತಗಳನ್ನು ದಾಟುತ್ತಿತ್ತು ಎಂಬುದನ್ನು ಕಾಂಗ್ರೆಸ್‌ ನಾಯಕರೇ ಖಾಸಗಿಯಾಗಿ ಒಪ್ಪಿಕೊಳ್ಳುತ್ತಾರೆ.

ಜಿಲ್ಲೆಯಲ್ಲಿ ಐವರು ಶಾಸಕರು, ರಾಜ್ಯದಲ್ಲಿ ಪಕ್ಷವೇ ಆಡಳಿತ ನಡೆಸುತ್ತಿರುವುದರಿಂದ ಗೆಲುವು ಸುಲಭವಾಗಬಹುದು ಎಂದು ಸಚಿವ ಶಿವಾನಂದ ಪಾಟೀಲ ಪುತ್ರಿ ಸಂಯುಕ್ತಾ ಪಾಟೀಲರನ್ನು ಕಣಕ್ಕಿಳಿಸಿದ್ದರು. ವೀಣಾ ಕಾಶಪ್ಪನವರ ಪರವಾಗಿ ಮಾತನಾಡದ ಜಿಲ್ಲೆಯ ಶಾಸಕರು ಸಂಯುಕ್ತಾ ಅವರಿಗೆ ಭರ್ಜರಿಯಾಗಿ ಸಾಥ್‌ ನೀಡಿದ್ದರು. ಆದರೆ, ಅದೇ ಸಾಥ್‌ ಅಭ್ಯರ್ಥಿಯನ್ನು ಗೆಲುವಿನ ದಡ ಸೇರಿಸುವವರೆಗೂ ಉಳಿಯಲಿಲ್ಲ.

ಜಿಲ್ಲೆಯ ಕಾಂಗ್ರೆಸ್‌ ಶಾಸಕರ ಎಲ್ಲ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿ ಲೀಡ್‌ ಪಡೆದಿದ್ದಾರೆ. ಕಳೆದ ಬಾರಿಗಿಂತ ಲೀಡ್‌ ಕಡಿಮೆಯಾಗಿದೆ ಎನ್ನುವುದೇ ಸಮಾಧಾನದ ಸಂಗತಿ. ಪಕ್ಕದ ರಾಯಚೂರು, ಕೊಪ್ಪಳ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳು ಜಯ ಸಾಧಿಸಿದರೂ ಬಾಗಲಕೋಟೆಯಲ್ಲಿ ಸಾಧ್ಯವಾಗಲಿಲ್ಲ.

ಅಧಿಕಾರ ಚಲಾವಣೆ ಅನುಮಾನ: ಸಂಯುಕ್ತಾ ಪಾಟೀಲ ಅವರು ಸಂಸದೆಯಾದರೆ, ವಿವಿಧ ಕಾರಣಗಳಿಗಾಗಿ ಸಚಿವ ಶಿವಾನಂದ ಪಾಟೀಲ ಅವರು ಜಿಲ್ಲಾ ರಾಜಕಾರಣ ಹಾಗೂ ವರ್ಗಾವಣೆ ಮುಂತಾದ ವಿಷಯಗಳಲ್ಲಿ ಅಧಿಕಾರ ಚಲಾಯಿಸಬಹುದು ಎಂಬ ಅನುಮಾನ ಕಾಂಗ್ರೆಸ್‌ ನಾಯಕರನ್ನು ಹಿಂದಡಿ ಇಡುವಂತೆ ಮಾಡಿತು.

ಒಳ ಒಪ್ಪಂದ: ಜಿಲ್ಲೆಯ ಕೆಲ ನಾಯಕರು ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯವರಿಂದ ನೆರವು ಪಡೆಯುವುದು, ಲೋಕಸಭಾ ಚುನಾವಣೆಯಲ್ಲಿ ಅವರ ಋಣ ತೀರಿಸುವ ಕೆಲಸ ಮಾಡುವುದರಿಂದ ಪಕ್ಷದ ಅಭ್ಯರ್ಥಿಗೆ ಹಿನ್ನಡೆಯಾಗುತ್ತದೆ ಎಂಬ ಮಾತುಗಳು ಕಾಂಗ್ರೆಸ್‌ ಪಡಸಾಲೆಯಲ್ಲಿ ಕೇಳಿ ಬರುತ್ತವೆ.

ವಿಧಾನಸಭೆ ಚುನಾವಣೆಯಲ್ಲಿ ಪಕ್ಷ ಬಿಟ್ಟು ಹೋದ ಹಲವರನ್ನು ಸಚಿವ ಶಿವಾನಂದ ಪಾಟೀಲ ಪಕ್ಷಕ್ಕೆ ಮರಳಿ ಕರೆ ತಂದರು. ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆ ಮಾಡಿದವರನ್ನು ಕರೆದುಕೊಂಡು ಬಂದದ್ದು ಅಸಮಾಧಾನ ಹೆಚ್ಚಾಗಲು ಕಾರಣವಾಯಿತು. ಈ ವಿಷಯದಲ್ಲಿ ತಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಿಲ್ಲ ಎಂಬ ದೂರು ಹಲವರದ್ದಾಗಿತ್ತು.

ಪುತ್ರಿಯನ್ನು ಗೆಲ್ಲಿಸಬೇಕು ಎಂಬ ಭರದಲ್ಲಿ ಮತ ಸೆಳೆಯುವವರು, ಸೆಳೆಯದಿರುವವರಿಗೆ ಮಣೆ ಹಾಕಿದರು ಎಂಬ ಗುಸು, ಗುಸು ಕೇಳಿ ಬಂದಿತು. ವಿಧಾನಸಭಾ ಕ್ಷೇತ್ರದಲ್ಲಿ ಎರಡು ಶಕ್ತಿ ಕೇಂದ್ರಗಳ ನಿರ್ಮಾಣ ಮಾಡಲು ಮುಂದಾಗಿದ್ದು, ಹಾಲಿ, ಮಾಜಿ ಶಾಸಕರಲ್ಲಿ ಅಸಮಾಧಾನ ಉಂಟು ಮಾಡಿತು ಎನ್ನುತ್ತಾರೆ ಕಾಂಗ್ರೆಸ್‌ ನಾಯಕರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT