ಮತಾಂತರ ಆರೋಪ: ಶಾಲೆ ಮಾನ್ಯತೆ ರದ್ದತಿಗೆ ಒತ್ತಾಯ

ಇಳಕಲ್ (ಬಾಗಲಕೋಟೆ ಜಿಲ್ಲೆ): ‘ಪಟ್ಟಣದ ಸೇಂಟ್ ಪಾಲ್ ಕಾನ್ವೆಂಟ್ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಹಾಗೂ ಪಾಲಕರಿಗೆ ಆಮಿಷ ಒಡ್ಡಿ ಮತಾಂತರ ಮಾಡಲಾಗುತ್ತಿದ್ದು, ಕೂಡಲೇ ಶಾಲೆಯ ಮಾನ್ಯತೆ ರದ್ದುಪಡಿಸಿ, ಮತಾಂತರಕ್ಕೆ ಕುಮ್ಮಕ್ಕು ನೀಡಿದವರ ವಿರುದ್ಧ ಸರ್ಕಾರ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿ ಇಲ್ಲಿಯ ಬಿಜೆಪಿ ಹಾಗೂ ಆರ್ಎಸ್ಎಸ್ ಪ್ರಮುಖರು ಬುಧವಾರ ಪ್ರತಿಭಟನೆ ನಡೆಸಿದರು.
‘ಡಿ.25ರಂದು ಇಲ್ಲಿನ ಸೇಂಟ್ ಪಾಲ್ ಕಾನ್ವೆಂಟ್ ಶಾಲೆಯಲ್ಲಿ ಕ್ರಿಸ್ಮಸ್ ಆಚರಣೆ ನೆಪದಲ್ಲಿ ವಿದ್ಯಾರ್ಥಿಗಳು ಹಾಗೂ ಪಾಲಕರನ್ನು ಸೇರಿಸಿ, ಅವರಿಗೆ ಮಾಂಸದ ಊಟ ಬಡಿಸಿ, ಪ್ರಸಾದವೆಂದು ವೈನ್ ಹಾಗೂ ‘ಸತ್ಯವೇದ’ ಎನ್ನುವ ಪುಸ್ತಕ ನೀಡಿದ್ದಾರೆ. ಶಾಲೆಯ ನೆರೆಹೊರೆಯವರು ನೀಡಿದ ದೂರಿನ ಮೇರೆಗೆ ಶಿಕ್ಷಣ ಸಂಯೋಜಕರು ಶಾಲೆಗೆ ಭೇಟಿ ನೀಡಿ, ಬಿಇಒ ಅವರಿಗೆ ವರದಿ ನೀಡಿದ್ದಾರೆ. ಆದರೂ ಈವರೆಗೆ ಶಾಲೆಯ ಸಿಬ್ಬಂದಿ ಹಾಗೂ ಆಡಳಿತ ಮಂಡಳಿ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ’ ಎಂದು ಬಿಜೆಪಿ ಮುಖಂಡರು ಆರೋಪಿಸಿದರು.
‘ಶಾಲೆಯ ಮುಖ್ಯಶಿಕ್ಷಕಿ ಸೆಲ್ವಿಯಾ ಡಿ.ಮಾರ್ಕ್ ಮತ್ತು ಆಡಳಿತ ಮಂಡಳಿ ಸದಸ್ಯ ಜಾನ್ಸನ್ ಡಿ.ಮಾರ್ಕ್ ಅವರು ಹರಪನಹಳ್ಳಿಯ ಉಮೇಶ ನಾಯಕ ಎಂಬ ಪಾದ್ರಿಯ ಜೊತೆಗೂಡಿ, ಶಾಲೆಯಲ್ಲಿ ಪ್ರತಿ ಭಾನುವಾರ ವಿದ್ಯಾರ್ಥಿಗಳು, ಪಾಲಕರು ಹಾಗೂ ವಿವಿಧ ಸಮುದಾಯಗಳ ಬಡವರನ್ನು ಹಾಗೂ ಮುಗ್ಧರನ್ನು ಕರೆ ತಂದು ಆಮಿಷ ಒಡ್ಡುತ್ತಿದ್ದಾರೆ. ಇಲ್ಲಿ ಕ್ರೈಸ್ತ ಧರ್ಮದ ಬೋಧನೆ ಮಾಡಿ, ಮತಾಂತರಕ್ಕೆ ಪ್ರಚೋದಿಸುತ್ತಿದ್ದಾರೆ’ ಎಂದು ದೂರಿದರು. ಬಳಿಕ ಗ್ರೇಡ್ 2 ತಹಶಿಲ್ದಾರ್ ರತ್ನಾ ಕೆ. ಅವರಿಗೆ ಮನವಿ ಸಲ್ಲಿಸಿದರು.
ಶಾಲೆ ಬಂದ್: ಈ ಶಾಲೆಯಲ್ಲಿ 400 ವಿದ್ಯಾರ್ಥಿಗಳು ಓದುತ್ತಿದ್ದು, ಮುಂದಿನ ಆದೇಶದವರೆಗೆ ಶಾಲೆ ಮುಚ್ಚುವಂತೆ ಬಿಇಒ ಅವರು ಸೂಚನೆ ನೀಡಿದ್ದರಿಂದ ಡಿ.27ರಿಂದ ಶಾಲೆಯನ್ನು ಮುಚ್ಚಲಾಗಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.