ಶನಿವಾರ, ಏಪ್ರಿಲ್ 4, 2020
19 °C
ಎರಡು ದಿನಗಳ ಮೇಳಕ್ಕೆ ಜಿಲ್ಲಾಡಳಿತದಿಂದ ಸಕಲ ಸಿದ್ಧತೆ

ಜಿಲ್ಲಾ ಮಟ್ಟದ ಉದ್ಯೋಗ ಮೇಳ ನಾಳೆಯಿಂದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬಾಗಲಕೋಟೆ: ಜಿಲ್ಲೆಯ ನಿರುದ್ಯೋಗಿಗಳಿಗೆ ದೊಡ್ಡ ಮಟ್ಟದಲ್ಲಿ ಉದ್ಯೋಗಾವಕಾಶ ಕಲ್ಪಿಸಲು ಜಿಲ್ಲಾಡಳಿತದ ನೇತೃತ್ವದಲ್ಲಿ ಫೆಬ್ರುವರಿ 27 ಹಾಗೂ 28ರಂದು ಇಲ್ಲಿನ ವಿದ್ಯಾಗಿರಿಯ ಗೌರಿಶಂಕರ ಕಲ್ಯಾಣ ಮಂಟಪದಲ್ಲಿ ಉದ್ಯೋಗ ಮೇಳ ಆಯೋಜಿಸಲಾಗಿದೆ.

ಮೇಳದಲ್ಲಿ ಎಸ್‌ಎಸ್‌ಎಲ್‌ಸಿಯಿಂದ ಮೊದಲುಗೊಂಡು ‍ಪಿಯುಸಿ, ಸಾಮಾನ್ಯ ಪದವಿ, ಡಿಪ್ಲೊಮಾ, ಐಟಿಐ, ಎಂಜಿನಿಯರಿಂಗ್, ನರ್ಸಿಂಗ್ ಸೇರಿದಂತೆ ವಿವಿಧ ಅರೆ ವೈದ್ಯಕೀಯ ಕೋರ್ಸ್‌ಗಳನ್ನು ಕಲಿತವರಿಗೆ ಉದ್ಯೋಗಾವಕಾಶ ಕಲ್ಪಿಸಲು ವೇದಿಕೆ ಸಜ್ಜುಗೊಳಿಸಲಾಗಿದೆ. ಐದು ಸಾವಿರ ಉದ್ಯೋಗಾಕಾಂಕ್ಷಿಗಳು ಮೇಳದಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದು ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಬಾಗಲಕೋಟೆ, ಹುಬ್ಬಳ್ಳಿ, ಹಾಸನ, ಬೆಂಗಳೂರು, ತುಮಕೂರು, ವಿಜಯಪುರ ಜಿಲ್ಲೆಗಳಿಂದ 75 ಉದ್ಯೋಗದಾತರು (ಕಂಪೆನಿಗಳು) ಭಾಗವಹಿಸಲಿದ್ದು, ಈಗಾಗಲೇ ನೋಂದಣಿ ಮಾಡಿಸಿದ್ದಾರೆ. ಅವರ ಸಂಖ್ಯೆ ಇನ್ನೂ ಹೆಚ್ಚಬಹುದು ಎಂದರು.

ಪ್ರಾಥಮಿಕ ಮಾಹಿತಿ ಅನ್ವಯ 2,800ಕ್ಕೂ ಹೆಚ್ಚು ಹುದ್ದೆಗಳಿಗೆ ಸಂದರ್ಶನದ ಮೂಲಕ ನೇಮಕಾತಿ ಮಾಡಿಕೊಳ್ಳಲಿದ್ದಾರೆ. ಆಯ್ಕೆಯಾದವರಿಗೆ ಸ್ಥಳದಲ್ಲಿಯೇ ಆಫರ್ ಲೆಟರ್ ಕೊಡಲಿದ್ದಾರೆ. ಜಿಲ್ಲೆಯ ಎಲ್ಲ ಕೌಶಲ ಕೇಂದ್ರಗಳಲ್ಲಿ ತರಬೇತಿ ಪಡೆದ ಅಭ್ಯರ್ಥಿಗಳನ್ನು ಆಹ್ವಾನಿಸಲಾಗಿದೆ ಎಂದು ತಿಳಿಸಿದರು.

ಉದ್ಯೋಗ ಮೇಳದಲ್ಲಿ ಪಾಲ್ಗೊಳ್ಳಲು ಆಸಕ್ತರು ತಮ್ಮ ಹೆಸರನ್ನು ಫೆಬ್ರುವರಿ 25ರ ಸಂಜೆ 5 ಗಂಟೆಯವರೆಗೂ www.bagalkoteudyogmela.com ಇಲ್ಲಿ ನೋಂದಾಯಿಸಿಕೊಳ್ಳಲು ಅವಕಾಶ ನೀಡಲಾಗಿತ್ತು. ಅನಿವಾರ್ಯ ಕಾರಣಗಳಿಂದ ಅಲ್ಲಿ ನೋಂದಾಯಿಸಿಕೊಳ್ಳಲು ಅವಕಾಶವಾಗದವರು ಉದ್ಯೋಗ ಮೇಳ ನಡೆಯುವ ಸ್ಥಳದಲ್ಲಿಯೇ ಸ್ಥಾಪಿಸಲಾಗುವ ಕೌಂಟರ್‌ನಲ್ಲಿ ತಮ್ಮ ಹೆಸರು ನೋಂದಾಯಿಸಿಕೊಳ್ಳಬಹುದು. ವಿದ್ಯಾರ್ಹತೆಯ ದಾಖಲಾತಿಯ ನಕಲು, ಅನುಭವ ಪ್ರಮಾಣಪತ್ರ ಹಾಗೂ ಸ್ವ–ವಿವರಗಳ ಪ್ರತಿಯನ್ನು ಮೇಳಕ್ಕೆ ತರಬೇತಿದೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಮಹಾದೇವ ಮುರಗಿ, ಪ್ರೊಬೆಷನರಿ ಐಎಎಸ್ ಅಧಿಕಾರಿ ಗರಿಮಾ ಪನ್ವಾರ್ ಹಾಜರಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು