ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ವೈದ್ಯರ ರಕ್ಷಣೆಗೆ ಕಾನೂನು ಜಾರಿಯಾಗಲಿ’

ಹಲ್ಲೆ ಪ್ರಕರಣಗಳಿಗೆ ಕಡಿವಾಣ ಹಾಕಲು ವೈದ್ಯರ ಒಕ್ಕೊರಲ ಆಗ್ರಹ
Last Updated 18 ಜೂನ್ 2021, 17:24 IST
ಅಕ್ಷರ ಗಾತ್ರ

ಮಹಾಲಿಂಗಪುರ/ರಬಕವಿ ಬನಹಟ್ಟಿ: ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಭಾರತೀಯ ವೈದ್ಯಕೀಯ ಸಂಘದ ಸ್ಥಳೀಯ ಘಟಕದ ವತಿಯಿಂದ ಪುರಸಭೆ ಮುಖ್ಯಾಧಿಕಾರಿ ಮೂಲಕ ಪ್ರಧಾನಮಂತ್ರಿಗೆ ಶುಕ್ರವಾರ ಮನವಿ ಸಲ್ಲಿಸಲಾಯಿತು.

ಸ್ಥಳೀಯ ಘಟಕದ ಅಧ್ಯಕ್ಷ ಡಾ.ವಿಜಯ ಹಂಚಿನಾಳ ಮಾತನಾಡಿ, ಇತ್ತೀಚೆಗೆ ವೈದ್ಯರ ಮೇಲೆ ಹಲ್ಲೆ ಪ್ರಕರಣಗಳು ಹೆಚ್ಚುತ್ತಿದ್ದು, ತಮ್ಮ ಪ್ರಾಣವನ್ನೇ ಲೆಕ್ಕಿಸದೆ ರೋಗಿಗಳ ಪ್ರಾಣ ಉಳಿಸಲು ಹೆಣಗಾಡುವ ವೈದ್ಯರ ಪ್ರಾಣಕ್ಕೇ ಭದ್ರತೆ ಇಲ್ಲದಂಥ ಸ್ಥಿತಿ ನಿರ್ಮಾಣವಾಗಿದೆ. ಎಲ್ಲ ವ್ಯೆದ್ಯರು ನಿರಾಂತಕವಾಗಿ ತಮ್ಮ ಸೇವೆ ಸಲ್ಲಿಸಬೇಕಾದರೆ ಸರ್ಕಾರ ಈ ಕೂಡಲೆ ವೈದ್ಯರಿಗೆ ಮತ್ತು ಆಸ್ಪತ್ರೆಗಳಿಗೆ ರಕ್ಷಣಾ ಕಾನೂನು ತರಬೇಕು ಎಂದು ಆಗ್ರಹಿಸಿದರು.

ಕೋವಿಡ್ 19 ಸಾಂಕ್ರಾಮಿಕ ರೋಗದ ವಿರುದ್ಧದ ಯುದ್ಧದಲ್ಲಿ ಪ್ರಾಣ ಕಳೆದುಕೊಂಡ ವೈದ್ಯರನ್ನು ಕೋವಿಡ್ ಹುತಾತ್ಮರೆಂದು ಗುರುತಿಸಬೇಕು. ಅವರ ಕುಟುಂಬಗಳಿಗೆ ಸರ್ಕಾರ ಸೂಕ್ತ ಪರಿಹಾರ ನೀಡಬೇಕು ಎಂದರು.

ಪುರಸಭೆ ಮುಖ್ಯಾಧಿಕಾರಿ ಅನುಪಸ್ಥಿತಿಯಲ್ಲಿ ಕಚೇರಿ ವ್ಯವಸ್ಥಾಪಕ ರಾಘು ನಡುವಿನಮನಿ ಮನವಿ ಸ್ವೀಕರಿಸಿದರು. ಡಾ.ಮಾರುತಿ ಮೇದಾರ, ಡಾ.ವಿ.ಎಸ್.ಮಮದಾಪುರ, ಡಾ.ಮಂಜುನಾಥ ಚನ್ನಾಳ, ಡಾ. ಬಿ.ಡಿ.ಬಾಳಿಗಿಡ, ಡಾ.ಅಶೋಕ ದಿನ್ನಿಮನಿ, ಡಾ.ಎಂ.ಎಸ್.ಚನ್ನಾಳ, ಡಾ. ಸಂಜಯ ಮುರಗೋಡ, ಡಾ. ಜಬ್ಬಾರ ಯಕ್ಸಂಬಿ, ಡಾ.ಗುಂಡಪ್ಪ, ಡಾ.ಪ್ರಭುದೇವ ಅಂದಾನಿ, ಡಾ.ಅನುಪಮಾ ಅರಿಷಿಣಗೋಡಿ, ಡಾ.ಪ್ರಭಾಕರ ಕುಳ್ಳೊಳ್ಳಿ, ಡಾ.ವೆಂಕಟೇಶ ಬುರುಡ, ಡಾ.ಪವನಕುಮಾರ ಸೋರಗಾಂವಿ, ಡಾ.ಮಹಾಂತೇಶ ಯಂಕಚಿ ಇದ್ದರು.

ರಬಕವಿ ಬನಹಟ್ಟಿ: ದೇಶದಲ್ಲಿ ವೈದ್ಯರ ಮೇಲೆ ಹಲ್ಲೆ ಪ್ರಕರಣಗಳು ಹೆಚ್ಚಾಗುತ್ತಿವೆ. ಕರ್ತವ್ಯನಿರತ ವೈದ್ಯರು ಮತ್ತು ಆರೋಗ್ಯ ಆರೈಕೆ ವೃತ್ತಿ ಪರರ ಮೇಲೆ ಹಲ್ಲೆ ಮಾಡುವವರಿಗೆ ಹತ್ತು ವರ್ಷಗಳ ಕಾಲ ಜೈಲು ಶಿಕ್ಷೆಯನ್ನು ವಿಧಿಸಬೇಕು. ವೃತ್ತಿಪರ ವೈದ್ಯರ ಮೇಲೆ ದಾಳಿ ಮಾಡುವ ಸಮಾಜ ವಿರೋಧಿ ಶಕ್ತಿಗಳನ್ನು ಕಠಿಣ ಕಾನೂನಿನ ಮೂಲಕ ಮಟ್ಟಹಾಕಬೇಕು ಎಂದು ಸ್ಥಳೀಯ ಐಎಂಎ ಅಧ್ಯಕ್ಷ ಡಾ.ಪದ್ಮಜೀತ ನಾಡಗೌಡ ಪಾಟೀಲ ತಿಳಿಸಿದರು.

ಶುಕ್ರವಾರ ರಬಕವಿ ಬನಹಟ್ಟಿ ತೇರದಾಳದ ಐಎಂಎ ಸಂಘ ರಾಷ್ಟ್ರೀಯ ಪ್ರತಿಭಟನಾ ದಿನದ ನಿಮಿತ್ತವಾಗಿ ಉಪ ತಹಶೀಲ್ದಾರ್ ಎಸ್‍.ಎಲ್‍.ಕಾಗಿಯವರ ಅವರಿಗೆ ಮನವಿ ಸಲ್ಲಿಸಿತು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕೋವಿಡ್ 19 ಸಂದರ್ಭದಲ್ಲಿ ಪ್ರಾಣ ಕಳೆದುಕೊಂಡ ವೈದ್ಯರನ್ನು ಕೋವಿಡ್‍ ಹುತಾತ್ಮರು ಎಂದು ಘೋಷಣೆ ಮಾಡಬೇಕು. ಪ್ರಾಣ ಕಳೆದುಕೊಂಡ ವೈದ್ಯರ ಕುಟುಂಬಗಳಿಗೆ ವಿಮಾ ಸೌಲಭ್ಯಗಳನ್ನು ಪ್ರಧಾನಿಗಳು ಕಲ್ಪಿಸುತ್ತಿದ್ದಾರೆ. ಆದರೆ ದೇಶದಲ್ಲಿ 754 ವೈದ್ಯರು ನಿಧನರಾಗಿದ್ದಾರೆ ಎಂದರು.

ಡಾ.ಬಿ.ಎನ್‍.ಬಾಗಲಕೋಟ ಮನವಿ ಪತ್ರವನ್ನು ಓದಿದರು. ವೈದ್ಯರು ಕಪ್ಪು ಬಟ್ಟೆ ಕಟ್ಟಿಕೊಂಡು ಪ್ರತಿಭಟನೆ ಮಾಡಿದರು.

ಐಎಂಎ ಕಾರ್ಯದರ್ಶಿ ಸಂಗಮೇಶ ಹತಪಕಿ, ವೈದ್ಯರಾದ ಕೆ.ಡಿ. ಭದ್ರನವರ, ವೈ.ಎಂ.ಪೂಜಾರ, ರಾಜೇಂದ್ರ ಭದ್ರನವರ, ರವಿ ಜಮಖಂಡಿ, ಚಂದ್ರಶೇಖರ ಬಡೇಮಿ, ವಿನೋದ ಮೇತ್ರಿ, ಡಿ.ಎಂ.ಕುಪಾಟೆ, ಶ್ರೀನಾಥ ಕಮೀತಕರ್, ಪ್ರಭು ಪಾಟೀಲ, ಎಂ.ಐ. ಬಡ್ಡೂರ, ಸತೀಷ ಮಾಳಿ ಸೇರಿದಂತೆ ಅನೇಕ ವೈದ್ಯರುಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT