ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಜಮಖಂಡಿ | ಹದಗೆಟ್ಟ ರಸ್ತೆ; ಸಂಚಾರ ದುಸ್ತರ

Published : 3 ಆಗಸ್ಟ್ 2024, 6:32 IST
Last Updated : 3 ಆಗಸ್ಟ್ 2024, 6:32 IST
ಫಾಲೋ ಮಾಡಿ
Comments

ಜಮಖಂಡಿ: ತಾಲ್ಲೂಕಿನ ಸಾವಳಗಿಯಿಂದ ಸಾವಳಗಿ ಸರಹದ್ದಿನವರೆಗೆ 2.5 ಕಿ.ಮೀ ತುಬಚಿ ರಸ್ತೆ ಸಂಪೂರ್ಣ ಹದಗೆಟ್ಟಿದೆ. ರಸ್ತೆ ಸಂಚಾರ ದುಸ್ತರವಾಗಿದೆ. ಡಾಂಬರ್‌ ಕಿತ್ತು ಹೋಗಿ ರಸ್ತೆ ತಗ್ಗು, ದಿನ್ನೆಗಳಿಂದ ಕೂಡಿದೆ. ಮಳೆಯಿಂದಾಗಿ ತಗ್ಗುಗಳಲ್ಲಿ ನೀರು ನಿಂತು ಜೀವ ಕೈಯಲ್ಲಿ ಹಿಡಿದುಕೊಂಡು ಸಂಚರಿಸುವಂತಾಗಿದೆ.

ಸಾವಳಗಿ ಗ್ರಾಮದಿಂದ ತುಬಚಿ, ಶೂರ್ಪಾಲಿ, ಝಂಜರವಾಡ ಗ್ರಾಮಗಳಿಗೆ ಹೋಗಲು ಹಾಗೂ ಸಾವಳಗಿ ಗ್ರಾಮದ ತೋಟದ ವಸ್ತಿಯ ಜನರಿಗೆ ತೀವ್ರ ತೊಂದರೆಯಾಗಿದೆ. ನೀರು ನಿಂತು ರಸ್ತೆ ಸಂಪೂರ್ಣ ಕೆಸರು ಗದ್ದೆಯಂತಾಗಿದೆ. ರಸ್ತೆಯುದ್ದಕ್ಕೂ ಬೃಹತ್‌ ಗುಂಡಿಗಳು ನಿರ್ಮಾಣವಾಗಿದ್ದು 2.5 ಕಿ.ಮೀ ರಸ್ತೆ ಕ್ರಮಿಸಲು 20-30 ನಿಮಿಷಗಳು ಬೇಕಾಗುತ್ತವೆ.

‘ರಸ್ತೆ ಹಾಳಾಗಿ ಐದಾರು ವರ್ಷಗಳಾಗಿವೆ. ಬೈಕ್‌ ಸವಾರರು, ವಾಹನ ಚಾಲಕರು ಸಂಚಾರಕ್ಕೆ ಪ್ರಯಾಸ ಪಡಬೇಕಾಗಿದೆ. ಆಗಾಗ ಸಣ್ಣ ಪುಟ್ಟ ಅಪಘಾತಗಳು ಸಂಭವಿಸುತ್ತಿವೆ. ವಾಹನಗಳಿಗೆ ಹಾನಿಯುಂಟಾಗುತ್ತಿದೆ. ಅನೇಕ ಬಾರಿ ವಾಹನಗಳು ರಸ್ತೆಯ ಮಧ್ಯದಲ್ಲಿ ಕೆಟ್ಟು ನಿಂತಿವೆ. ಕೂಡಲೇ ಅಧಿಕಾರಿಗಳು ರಸ್ತೆ ನಿರ್ಮಿಸಬೇಕು’ ಎಂದು ಸ್ಥಳೀಯ ನಿವಾಸಿ ಕೃಷ್ಣಾ ಬಂಡಿವಡ್ಡರ ಒತ್ತಾಯಿಸಿದ್ದಾರೆ.

‘ಈ ರಸ್ತೆಯ ಮೂಲಕ ನಿತ್ಯ ತೋಟದ ವಸ್ತಿಯಿಂದ ನೂರಾರು ವಿದ್ಯಾರ್ಥಿಗಳು ಶಾಲೆಗೆ ಹೋಗುತ್ತಾರೆ. ಪಕ್ಕಕ್ಕೆ ವಾಹನಗಳು ಹಾದು ಹೋದರೆ ರಸ್ತೆಯ ನೀರು ಮಕ್ಕಳಿಗೆ ಸಿಡಿದು ಬಟ್ಟೆ ಗಲಿಜಾಗುತ್ತಿದೆ. ಹಲವು ಮಕ್ಕಳು ಕಾಲು ಜಾರಿ ಬಿದ್ದಿರುವ ಉದಾಹರಣೆಗಳಿವೆ. ವೃದ್ಧರು, ಮಹಿಳೆಯರು ಜೀವಭಯದಿಂದ ಸಂಚರಿಸುವ ಅನಿವಾರ್ಯತೆ ಇದೆ’ ಎಂದು ಬಸವರಾಜ ಮಾಳಿ ದೂರಿದರು.

‘ಚುನಾವಣೆ ಬಂದಾಗ ಎಲ್ಲ ರಾಜಕೀಯ ಮುಖಂಡರು ರಸ್ತೆ ಮಾಡುವುದಾಗಿ ಆಶ್ವಾಸನೆ ನೀಡುತ್ತಾರೆ. ಆದರೆ ಚುನಾವಣೆ ಮುಗಿದ ನಂತರ ಯಾರು ಇತ್ತ ಸುಳಿಯುವದಿಲ್ಲ. ಡಾಂಬರ್‌ ರಸ್ತೆಯಾಗುವವರೆಗೆ ಬಿದ್ದಿರುವ ತಗ್ಗು ಮುಚ್ಚಲು ಗ್ರಾಮ ಪಂಚಾಯಿತಿ ಸದಸ್ಯರಿಗೆ ಹಾಗೂ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದರೂ ಕ್ರಮ ಕೈಗೊಳ್ಳುತ್ತಿಲ್ಲ’ ಎಂದು ತೋಟದ ವಸ್ತಿ ನಿವಾಸಿ ಅಜೀತ ಕವಟೆಕರ ಆರೋಪಿಸಿದರು.

ತುಬಚಿಯಿಂದ ಸಾವಳಗಿ ಸರಹದ್ದಿನವರೆಗೆ ಸಂಸದ ಪಿ.ಸಿ. ಗದ್ದಿಗೌಡರ ಅನುದಾನದಲ್ಲಿ ರಸ್ತೆ ಮಾಡಿದ್ದಾರೆ. ಉಳಿದ 2.5 ಕಿ.ಮೀ ರಸ್ತೆ ಮಾಡಲು ಅನುದಾನ ನೀಡುವಂತೆ ಮನವಿ ಮಾಡಲಾಗಿದೆ
ಬಸವರಾಜ ಪರಮಗೌಡ ಗ್ರಾ.ಪಂ ಸದಸ್ಯ
ಅನುದಾನದ ಕೊರತೆ
ಅನುದಾನದ ಕೊರತೆಯಿಂದ ರಸ್ತೆ ಕಾಮಗಾರಿ ಆಗಿಲ್ಲ. ರಸ್ತೆಯ ಪಕ್ಕದಲ್ಲಿ ಮನೆಗಳಿರುವುದರಿಂದ ಮನೆಯ ನೀರು ರಸ್ತೆಯ ಮೇಲೆ ಬರುತ್ತಿದೆ. ರಸ್ತೆಯನ್ನು ಎತ್ತರ ಮಾಡಿ ಡಾಂಬರೀಕರಣ ಮಾಡಲು ಅಂದಾಜು ₹ 60 ಲಕ್ಷ ಅನುದಾನದ ಅವಶ್ಯಕತೆ ಇದೆ. ಸರ್ಕಾರದಿಂದ ಅನುದಾನ ಬಂದ ನಂತರ ಮಾಡಲಾಗುವುದು ಎಂದು ಜಿಲ್ಲಾ ಪಂಚಾಯಿತಿ ಎಂಜಿನಿಯರ್ ರಾಮಪ್ಪ ರಾಠೋಡ ಪ್ರತಿಕ್ರಿಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT