ಶನಿವಾರ, 13 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಲ್ಯವಿವಾಹ ತಡೆಗೆ ಪ್ರತಿಯೊಬ್ಬರೂ ಶ್ರಮಿಸಿ: ನ್ಯಾ.ದ್ಯಾವಪ್ಪ

ಜಾಗೃತಿ ಅಭಿಯಾನಕ್ಕೆ ಚಾಲನೆ; ಮನೆ ಮನೆಗೆ ಕರಪತ್ರ ವಿತರಣೆ
Published 15 ಫೆಬ್ರುವರಿ 2024, 16:24 IST
Last Updated 15 ಫೆಬ್ರುವರಿ 2024, 16:24 IST
ಅಕ್ಷರ ಗಾತ್ರ


ಬಾಗಲಕೋಟೆ:
ಬಾಲ್ಯವಿವಾಹ ತಡೆಗಟ್ಟಲು ಪ್ರತಿಯೊಬ್ಬರೂ ಶ್ರಮಿಸಬೇಕು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ದ್ಯಾವಪ್ಪ ಎಸ್.ಬಿ ಹೇಳಿದರು.

ತಾಲ್ಲೂಕಿನ ನೀರಲಕೇರಿ ಗ್ರಾಮದಲ್ಲಿ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡುವ ಮೂಲಕ ಮನೆ, ಮನೆಗೆ ತೆರಳಿ ಕರಪತ್ರ ವಿತರಿಸಿ ಮಾತನಾಡಿದ ಅವರು, ಮನೆಯಲ್ಲಿರುವ ವಯೋವೃದ್ದರು ತಾವಿರುವಾಗಲೇ ಮೊಮ್ಮಕ್ಕಳ ಮದುವೆ ನೋಡಬೇಕೆಂಬ ಹಂಬಲದಿಂದ ಚಿಕ್ಕ ವಯಸ್ಸಿನಲ್ಲಿಯೇ ಮದುವೆ ಮಾಡಿಸುತ್ತಾರೆ. ಇದರಿಂದ ಮಕ್ಕಳ ಬಾಳು ಹಾಳು ಮಾಡಿದಂತಾಗುತ್ತದೆ. ಹೆಣ್ಣು ಮಕ್ಕಳಿಗೆ 18 ವರ್ಷ, ಗಂಡು ಮಕ್ಕಳಿಗೆ 21 ವರ್ಷಗಳ ನಂತರವೇ ಮದುವೆ ಮಾಡಬೇಕು ಎಂದು ತಿಳಿಸಿದರು.

ಚಿಕ್ಕ ವಯಸ್ಸಿನಲ್ಲಿ ಮದುವೆ ಮಾಡುವುದರಿಂದ ಆ ವಯಸ್ಸಿನಲ್ಲಿ ಶಾರೀರಿಕ, ಮಾನಸಿಕವಾಗಿ ಕುಗ್ಗಿ ಜೀವನ ಪರ್ಯಂತ ನರಳುವ ಸ್ಥಿತಿ ಉಂಟಾಗುತ್ತದೆ. ಇಂದಿನ ಆಹಾರ ಹಿಂದಿನ ಪದ್ದತಿಯಂತಿಲ್ಲ. ಪೌಷ್ಟಿಕ ಆಹಾರ ಕೊರತೆಯಿಂದ ಸದೃಢ ಇಲ್ಲದಿರುವುದರಿಂದ ಮಾನಸಿಕ ಒತ್ತಡಕ್ಕೆ ಒಳಗಾಗುತ್ತಾರೆ ಎಂದರು.

ಕುಟುಂಬದಲ್ಲಿನ ಸಂಬಂಧಗಳ ಕೊಂಡಿ ಕಳಚಿಕೊಂಡು ಬೇರೊಬ್ಬರ ಮನೆಯಲ್ಲಿ ಹೊಂದಿಕೊಳ್ಳಬೇಕಾದರೆ ಕಷ್ಟವಾಗುತ್ತದೆ. ಇಂತಹ ಪರಿಸ್ಥಿತಿಗೆ ಮಕ್ಕಳನ್ನು ನೂಕದೇ ಪ್ರತಿಯೊಬ್ಬ ಪಾಲಕರು ತಮ್ಮ ಮಕ್ಕಳ ಮದುವೆಯನ್ನು ವಯಸ್ಸಿಗೆ ಬಂದಾಗಲೇ ಮಾಡಬೇಕು. ಬಾಲ್ಯವಿವಾಹ ಮಾಡಿಸಿದಲ್ಲಿ ತಪ್ಪಿತಸ್ಥರಿಗೆ 2 ವರ್ಷ ಶಿಕ್ಷೆಯ ಜೊತೆಗೆ ₹1 ಲಕ್ಷ ದಂಡ ಕಟ್ಟಬೇಕಾಗುತ್ತದೆ ಎಂದು ಹೇಳಿದರು.

ಬಾಲ್ಯವಿವಾಹ ಸಾಮಾಜಿಕ ಪಿಡುಗು ಆಗಿದ್ದು, ಸರ್ಕಾರದ ಆದೇಶದಂತೆ ಕಾನೂನು ಕ್ರಮ, ಶಿಕ್ಷೆ, ದಂಡ ಅನುಭವಿಸುವ ಮೊದಲು ಜನರು ವಿಚಾರವಂತರಾಗಿ ಮಕ್ಕಳ ಭವಿಷ್ಯದ ಬಗ್ಗೆ ಗಂಭೀರವಾಗಿ ಆಲೋಚಿಸಿ ಶಿಕ್ಷಣವಂತರನ್ನಾಗಿ ಮಾಡುವ ಜೊತೆಗೆ ಆರೋಗ್ಯವಂತ ಜೀವನ ನಡೆಸುವಂತಾಗಬೇಕು ಎಂದರು.

ಮಕ್ಕಳ ಮೇಲೆ ದೌರ್ಜನ್ಯವಾದಲ್ಲಿ ಸಂಬಂಧಿಸಿದ ಅಧಿಕಾರಿಗಳಿಗೆ ದೂರು ನೀಡಬೇಕು. ಅಂದಾಗ ಮಾತ್ರ ತಪ್ಪಿತಸ್ಥರಿಗೆ ಶಿಕ್ಷೆ ಕೊಡಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷ ರಂಗಪ್ಪ ಪೂಜಾರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಉಪನಿರ್ದೇಶಕ ಅಮರೇಶ ಎಚ್, ಶಿಶು ಅಭಿವೃಧ್ದಿ ಯೋಜನಾಧಿಕಾರಿ ದಸ್ತಗರಿಸಾಬ್ ಮುಲ್ಲಾ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರತ್ಮಾ ಮೂಕಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಅಧಿಕಾರಿ ವೀಣಾ ಎಂ.ವಿ, ಪ್ರೌಢಶಾಲಾ ಮುಖ್ಯ ಶಿಕ್ಷಕ ಶಶಿಕಾಂತ ಹುನಗುಂದ ಪಾಲ್ಗೊಂಡಿದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT