ಭಾನುವಾರ, ಆಗಸ್ಟ್ 14, 2022
23 °C
ಕೃಷಿ ಅಧಿಕಾರಿ, ಮಾಧ್ಯಮದವರನ್ನು ತರಾಟೆಗೆ ತೆಗೆದುಕೊಂಡ ಜಿ.ಪಂ ಸದಸ್ಯರು

ಯೂರಿಯಾ ಕೊರತೆ: ಸದಸ್ಯರಿಂದ ತರಾಟೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬಾಗಲಕೋಟೆ: ಜಿಲ್ಲೆಯಲ್ಲಿ ಯೂರಿಯಾ ಗೊಬ್ಬರ ಪೂರೈಕೆ ಸಾಧ್ಯವಾಗದೇ ಮುಂಗಾರು ಹಂಗಾಮಿನಲ್ಲಿ ರೈತರ ಪರಿಸ್ಥಿತಿ ಗಂಭೀರವಾಗಿದೆ. ಹಿಂಗಾರಿ ಹಂಗಾಮಿನಲ್ಲಾದರೂ ಅವರ ಸ್ಥಿತಿ ಸುಧಾರಿಸಲು ಸಮರ್ಪಕವಾಗಿ ಪೂರೈಕೆ ಮಾಡಿ ಎಂದು ಶುಕ್ರವಾರ ನಡೆದ ಜಿಲ್ಲಾ ಪಂಚಾಯ್ತಿ ಸಾಮಾನ್ಯ ಸಭೆಯಲ್ಲಿ ಸದಸ್ಯರು ಪಕ್ಷಬೇಧ ಮರೆತು ಆಗ್ರಹಿಸಿದರು.

ಇದಕ್ಕೆ ಉತ್ತರಿಸಿದ ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಚೇತನಾ ಪಾಟೀಲ ಜಿಲ್ಲೆಗೆ ಪೂರೈಸಿದ ರಸಗೊಬ್ಬರ ಪ್ರಮಾಣವನ್ನು ಅಂಕಿ–ಅಂಶ ಸಮೇತ ವಿವರಿಸಲು ಮುಂದಾದರು.

ಆದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಸದಸ್ಯರು 'ಸುಳ್ಳು ಅಂಕಿ–ಅಂಶ ಹೇಳಿ ಸಭೆಯ ದಿಕ್ಕು ತಪ್ಪಿಸಬೇಡಿ. ರಸಗೊಬ್ಬರ ಅಲ್ಲಿ ಇದೆ, ಇಲ್ಲಿ ಇದೆ ಎಂದು ಮಾಧ್ಯಮಗಳಿಗೆ ಸುಳ್ಳು ಹೇಳಿಕೆ ನೀಡುತ್ತೀರಿ. ರೈತರು ನಿಮ್ಮ ಹೆಸರಿನಲ್ಲಿ ನೇಣು ಹಾಕಿಕೊಂಡು ಸಾಯುವ ಸ್ಥಿತಿ ಬಂದಿದೆ. ಜಿಲ್ಲೆಯ ಮರ್ಯಾದೆ ತೆಗೆಯಬೇಡಿ' ಎಂದು ಗರಂ ಆದರು.

‘ನೀವು ಮಾಧ್ಯಮದವರು ಯಾವ ಅಂಗಡಿಗೆ ಹೋಗಿ ಅಲ್ಲಿ ರಸಗೊಬ್ಬರ ಇದೆ ಎಂದು ಪರಿಶೀಲಿಸಿ ವರದಿ ಮಾಡಿದ್ದೀರಿ. ಅಧಿಕಾರಿಗಳು, ಜನಪ್ರತಿನಿಧಿಗಳು ಹೇಳಿದ್ದನ್ನು ಬರೆಯುತ್ತೀರಿ. ಇಂದಿನ ಸಮಸ್ಯೆಗೆ ಪರೋಕ್ಷವಾಗಿ ನೀವು ಕಾರಣರಾಗಿದ್ದೀರಿ. ವಾಸ್ತವ ಸಂಗತಿ ಬರೆದು ರೈತರಿಗೆ ನೆರವಾಗಿ’ ಎಂದು ಮಾಧ್ಯಮದವರನ್ನೂ ತರಾಟೆಗೆ ತೆಗೆದುಕೊಂಡರು. 

ರೈತರಿಗೆ ಕಷ್ಟವಾದರೆ ನಾವು ಇಲ್ಲಿ (ಜಿಲ್ಲಾ ಪಂಚಾಯ್ತಿ) ಬಂದು ಕೂರಲು ಆಗೊಲ್ಲ. ರಸಗೊಬ್ಬರ ಸಿಗದೇ ಹಾಳಾದ ಪೀಕಿನ ಸಮೀಕ್ಷೆ ಮಾಡಿ ರೈತರಿಗೆ ಪರಿಹಾರ ಕೊಡಿಸಿ ಎಂದು ಒತ್ತಾಯಿಸಿದರು.

ಅದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾ ಪಂಚಾಯ್ತಿ ಸಿಇಒ ಟಿ.ಭೂಬಾಲನ್ ಯೂರಿಯಾ ಸಮರ್ಪಕ ಪೂರೈಕೆಗೆ ಜಿಲ್ಲಾ ಮಟ್ಟದಲ್ಲಿ ಟಾಸ್ಕ್‌ಫೋರ್ಸ್ ನೇಮಿಸಲಾಗಿದೆ ಎಂದರು. ಅದರಿಂದ ತೃಪ್ತರಾಗದ ಸದಸ್ಯರು ನಿಮಗೆ ವಾಸ್ತವ ಗೊತ್ತಿಲ್ಲ. ನೀವು ಎಷ್ಟು ಅಂಗಡಿಗಳಿಗೆ ಭೇಟಿ ನೀಡಿ ಪರಿಶೀಲಿಸಿದ್ದೀರಿ ಎಂದು ಪ್ರಶ್ನಿಸಿದರು. ಸಿಇಒ ನಿರುತ್ತರ ಆದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು