ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಾತಂತ್ರ್ಯಾನಂತರ ಮೊದಲ ಬಾರಿಗೆ ಸಾಳಗುಂದಿಗೆ ಬಂದ ಬಸ್

Last Updated 9 ಜುಲೈ 2019, 19:30 IST
ಅಕ್ಷರ ಗಾತ್ರ

ಬಾಗಲಕೋಟೆ : ಸಮುದ್ರದ ನೆಂಟಸ್ತನ ಉಪ್ಪಿಗೆ ಬಡತನ ಎಂಬ ಪರಿಸ್ಥಿತಿ ಬೀಳಗಿ ತಾಲ್ಲೂಕಿನ ಸಾಳಗುಂದಿಯ ಗ್ರಾಮಸ್ಥರದ್ದು. ಘಟಪ್ರಭಾ ನದಿಯ ಆಚೆ ದಡದಲ್ಲಿ ಸಾಳಗುಂದಿ ಇದ್ದರೂ ಈಚೆ ದಂಡೆಯಲ್ಲಿ ಬಾಗಲಕೋಟೆ ನಗರವಿದೆ. ನಗರ ಹತ್ತಿರವಿದ್ದರೂ ಊರಿಗೆ ಬಸ್‌ ವ್ಯವಸ್ಥೆ ಇರಲಿಲ್ಲ.

‌ನಿತ್ಯದ ಬದುಕಿಗೆ ಗ್ರಾಮಸ್ಥರು ಬಾಗಲಕೋಟೆಯನ್ನೇ ಅವಲಂಬಿಸಿದ್ದಾರೆ.ಮಳೆಗಾಲದಲ್ಲಿ ನದಿ ದಾಟಿ ಬರಲು ದೋಣಿ, ಉಳಿದ ಕಾಲದಲ್ಲಿ ಕಾಲ್ನಡಿಗೆ, ಎತ್ತಿನಬಂಡಿ, ರಿಕ್ಷಾ, ಟಂಟಂಇಲ್ಲವೇ ಖಾಸಗಿ ವಾಹನಗಳನ್ನು ಅವಲಂಬಿಸಿದ್ದರು. ಹೀಗಾಗಿ ಸ್ವಾತಂತ್ರ್ಯಾನಂತರ ಇಲ್ಲಿಯವರೆಗೆ ಗ್ರಾಮಸ್ಥರು ಬಸ್ ಮುಖವನ್ನೇ ಕಂಡಿರಲಿಲ್ಲ. ಮಂಗಳವಾರ ಮೊದಲ ಬಾರಿಗೆ ಊರಿಗೆಬಂದ ವಾಯವ್ಯ ಸಾರಿಗೆ ಸಂಸ್ಥೆ ಬಸ್‌ ಕಂಡು ಹಿರಿಹಿರಿ ಹಿಗ್ಗಿದರು. ಕೊನೆಗೂ ತಮ್ಮ ದನಿಗೆ ಇಂಬು ಸಿಕ್ಕ ಸಂಭ್ರಮದಲ್ಲಿ ತೇಲಿದರು.

ಹಿಂದೆಯೂ ಬಸ್ ಬಂದಿದ್ದವು!:

ಸಾಳಗುಂದಿಗೆ ಈ ಹಿಂದೆಯೂ ಬಸ್‌ಗಳು ಬಂದಿದ್ದವು. ಆದರೆ ಅವು ಜನರನ್ನು ಕರೆದೊಯ್ಯಲು ಅಲ್ಲ. ಬದಲಿಗೆ ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆಗಳ ವೇಳೆ ಸಿಬ್ಬಂದಿ ಹಾಗೂ ಮತಪೆಟ್ಟಿಗೆಗಳನ್ನು ಹೊತ್ತು ಬರುತ್ತಿದ್ದವು. ‘ನಮ್ಮೂರಿನಲ್ಲಿ ಬಹುತೇಕರಿಗೆ ಬಸ್‌ ಹತ್ತಿಯೇ ಗೊತ್ತಿಲ್ಲ. ಚುನಾವಣೆ ವೇಳೆ ಬರುತ್ತಿದ್ದ ಬಸ್‌ಗಳನ್ನು ನೋಡಿದವರೇ ಹೆಚ್ಚು’ ಎಂದು ಸ್ಥಳೀಯರಾದ ವಿಠ್ಠಲ ಮೂಲಿಮನಿ ಹೇಳುತ್ತಾರೆ.

ಬಾಗಲಕೋಟೆಯ ಅವಲಂಬನೆ:

ಕೃಷಿಯೇ ಇಲ್ಲಿನ ಮುಖ್ಯ ಕಾಯಕವಾಗಿದ್ದರೂ ಈಗಲೂ ಗ್ರಾಮದ ಹಲವರು ಮನೆಗೆಲಸ, ಗೌಂಡಿ, ಕೂಲಿ ಕಾರ್ಮಿಕರು, ವ್ಯಾಪಾರಕ್ಕೆ ನಗರವನ್ನೇ ಆಶ್ರಯಿಸಿದ್ದಾರೆ. ಮಹಿಳೆಯರು ತರಕಾರಿ, ಹಾಲು ಮಾರಾಟಕ್ಕೆ ಇಲ್ಲಿಗೆ ಬರುತ್ತಾರೆ. ಮಕ್ಕಳ ಶಾಲೆ–ಕಾಲೇಜಿಗೂ ಬಾಗಲಕೋಟೆಯೇ ಆಸರೆ.

ಮಳೆಗಾಲದಲ್ಲಿ ಒಮ್ಮೊಮ್ಮೆ ಬೋಟ್ ಕೈಕೊಟ್ಟರೆ ಮಕ್ಕಳು ಶಾಲೆಗೆ, ದೊಡ್ಡವರು ದೈನಂದಿನ ಕೆಲಸಕ್ಕೆ ಹೋಗಲು ತೊಡಕಾಗುತ್ತಿತ್ತು. ಇದನ್ನು ತಪ್ಪಿಸಲು ಊರಿಗೊಂದು ಬಸ್ ವ್ಯವಸ್ಥೆ ಮಾಡಿ ಎಂಬುದು ಗ್ರಾಮಸ್ಥರ ಬಹುದಿನದ ಬೇಡಿಕೆಯಾಗಿತ್ತು. ಅದಕ್ಕೆ ವಾಯವ್ಯ ಸಾರಿಗೆ ಸಂಸ್ಥೆ ಅಧಿಕಾರಿಗಳು ಕೊನೆಗೂ ಸ್ಪಂದಿಸಿದ್ದಾರೆ.

ಊರಿಗೆ ಬಸ್ ಬರುತ್ತಿದ್ದಂತೆಯೇ ಹಿರಿಯರ ನೇತೃತ್ವದಲ್ಲಿ ಅದಕ್ಕೆ ಪೂಜೆ ಮಾಡಿ ಸಿಹಿ ಹಂಚಿದರು. ನಂತರ ಸವಾರಿ ಆರಂಭಿಸಿದರು. ತಮ್ಮೂರಿಗೆ ಬಸ್ ಆರಂಭವಾಗಲು ನೆರವಾದ ಸಾರಿಗೆ ಸಂಸ್ಥೆವಿಭಾಗೀಯ ನಿಯಂತ್ರಣಾಧಿಕಾರಿ ನಿತಿನ್ ಹೆಗಡೆ, ವಿಭಾಗೀಯ ಸಾರಿಗೆ ಅಧಿಕಾರಿ ಪಿ.ವಿ.ಮೇತ್ರಿ ಹಾಗೂ ಡಿ‍ಪೊ ಮ್ಯಾನೇಜರ್ ಎಸ್.ಬಿ.ಗಸ್ತಿ ಅವರಿಗೆ ಇದೇ ವೇಳೆ ಅಭಿನಂದನೆ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT