ಗುಳೇದಗುಡ್ಡ: ಪಟ್ಟಣ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಶನಿವಾರ ಗಣೇಶ ಮೂರ್ತಿ ಪ್ರತಿಷ್ಠಾಪನೆ ಸಂಭ್ರಮದಿಂದ ನಡೆಯಿತು.
ಲಂಬಾಣಿ ಯುವಕ, ಯುವತಿಯರು ಗಣೇಶೋತ್ಸವ ಮೂರ್ತಿ ಮೆರವಣಿಗೆಯಲ್ಲಿ ಸಾಂಪ್ರದಾಯಿಕ ನೃತ್ಯ ಮಾಡಿದರು. ತಳವಾರ ಓಣಿ ಗಜಾನನ ಯುವಕ ಮಂಡಳಿ ವತಿಯಿಂದ ಮಹಿಳೆಯರು ಕುಂಭ ಹೊತ್ತು ಮೆರವಣಿಗೆ ಮೂಲಕ ಸಾಗಿದರು.
ಪಟ್ಟಣದ ಅಕ್ಕಲಕೋಟ ಶರಣರ ಮಠದಿಂದ ಹಲವು ಗಣೇಶ ಮೂರ್ತಿಗಳನ್ನು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಿ ತಾಲ್ಲೂಕಿನ ಸುತ್ತಮುತ್ತಲಿನ ಹಳ್ಳಿಗಳಿಗೆ ಗಣೇಶ ಮೂರ್ತಿಯನ್ನು ತೆಗೆದುಕೊಂಡು ಹೋಗಿ ಪ್ರತಿಷ್ಠಾಪನೆ ಮಾಡಲಾಯಿತು.
ತಾಲ್ಲೂಕಿನ ಕೆಲವಡಿ, ಲಿಂಗಾಪೂರ, ತೆಗ್ಗಿ, ಪಾದಾನಕಟ್ಟಿ, ಹಳದೂರು, ಲಾಯದಗುಂದಿ, ಹಂಗರಗಿ, ಜಮ್ಮನಕಟ್ಟಿ, ಕೊಂಕಣಕೊಪ್ಪ, ಕಟಗೇರಿ, ತಿಮ್ಮಸಾಗರ, ಅಲ್ಲೂರ ಎಸ್.ಪಿ.ಪಾದನಕಟ್ಟಿ, ಇಂಜಿನವಾರಿ, ಕೋಟೆಕಲ್ ಪರ್ವತಿ, ಹುಲ್ಲಿಕೇರಿ ಎಸ್.ಪಿ. ಇನ್ನಿತರ ಗ್ರಾಮಗಳಲ್ಲಿ ಮೂರ್ತಿ ಪ್ರತಿಷ್ಠಾಪನೆ ನಡೆಯಿತು. ಕೆಲವೆಡೆ ರಾತ್ರಿಯೇ ವಿಸರ್ಜನೆ ನಡೆಯಿತು.
ಮಹಾಲಿಂಗಪುರ ವರದಿ: ಪಟ್ಟಣದಾದ್ಯಂತ ಗಣೇಶ ಮೂರ್ತಿಯನ್ನು ಭವ್ಯ ಮೆರವಣಿಗೆ ಮೂಲಕ ಹಲವು ಬಡಾವಣೆಗಳಲ್ಲಿ ಪ್ರತಿಷ್ಠಾಪಿಸಲಾಯಿತು.
ಎಪಿಎಂಸಿ, ಹೆಸ್ಕಾಂ, ಜಿಎಲ್‍ಬಿಸಿ ಆವರಣ ಸೇರಿದಂತೆ ವಿವಿಧೆಡೆ ಗಣಪತಿ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ನೆರವೇರಿಸಲಾಯಿತು.
ವಿವಿಧ ಬಗೆಯ ಅಲಂಕಾರಗಳು, ಮಂಟಪಗಳನ್ನು ನಿರ್ಮಿಸಲಾಗಿತ್ತು. ಭಕ್ತರು ಮೆರವಣಿಗೆಯಲ್ಲಿ ಪಾಲ್ಗೊಂಡು ಸಂಭ್ರಮದಿಂದ ನೃತ್ಯ ಮಾಡಿದರು. ಅಲ್ಲಲ್ಲಿ ಪಟಾಕಿ ಸಿಡಿಸಿ ಉತ್ಸವ ಆಚರಿಸಿದರು.
ಕಲಾದಗಿ ವರದಿ: ಗ್ರಾಮದಲ್ಲಿ ಶನಿವಾರ ಗಣೇಶ ಪ್ರತಿಷ್ಠಾಪನೆ ವಿಜ್ರಂಭಣೆಯಿಂದ ನಡೆಯಿತು.
ಪೋಲಿಸ್ ಠಾಣೆ, ಗುರುಲಿಂಗೇಶ್ವರ ಪ್ರೌಢಶಾಲೆ,ಹೆಸ್ಕಾಂ ಕಚೇರಿ ಸೇರಿದಂತೆ ವಿವಿಧ ಸರ್ಕಾರಿ ಕಚೇರಿ ಅಡತ್ ಬಜಾರ, ಕಂಬಾರ ಸಮಾಜ,ಹೊಸೂರ ಚೌಕ್, ಗೊಂದಳಿ ಸಮಾಜ, ಮಲ್ಲಯ್ಯ ಸಮಾಜ,ಪ್ಯಾಟಿ ಬಸವೇಶ್ವರ ದೇವಸ್ಥಾನ, ವಾಹನ ಮಾಲೀಕರು ಹಾಗೂ ಚಾಲಕರ ಸಂಘದಿಂದ ಗಣಪತಿ ಪ್ರತಿಷ್ಠಾಪನೆ ನಡೆಯಿತು.
ಗ್ರಾಮಗಳಾದ ಅಂಕಲಗಿ, ಶಾರದಾಳ, ಉದಗಟ್ಟಿ, ಶೆಲ್ಲಿಕೇರಿ, ಗೋವಿಂದಕೊಪ್ಪ ಗ್ರಾಮಗಳಿಗೆ ಕಲಾದಗಿಯಿಂದ ಗಣೇಶನನ್ನು ಮೆರವಣಿಗೆ ಮೂಲಕ ಕೊಂಡೊಯ್ಯಲಾಯಿತು.
ಗ್ರಾಮ ಪಂಚಾಯಿತಿ, ಸರ್ಕಾರಿ ಕನ್ನಡ ಗಂಡು ಮಕ್ಕಳ ಶಾಲೆ, ಹಣ್ಣು ಬೆಳೆಗಾರರ ಕನ್ನಡ ಪ್ರಾಥಮಿಕ ಶಾಲೆ, ಸರ್ಕಾರಿ ಹೆಣ್ಣು ಮಕ್ಕಳ ಶಾಲೆಯಲ್ಲಿ ಗಣೇಶ ಮೂರ್ತಿ ವಿಸರ್ಜನೆ ಮಾಡಲಾಯಿತು.
ಕಲಾದಗಿ ಸಮೀಪದ ಚಿಕ್ಕಶಲ್ಲಿಕೇರಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಶನಿವಾರ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿತ್ತು.
Cut-off box - 232 ಕಡೆ ಗಣೇಶ ಮೂರ್ತಿ ಪ್ರತಿಷ‍್ಠಾಪನೆ ರಬಕವಿ ಬನಹಟ್ಟಿ: ನಗರದಲ್ಲಿ ಗಣೇಶ ಮೂರ್ತಿಗಳ ಪ್ರತಿಷ‍್ಠಾಪನೆ ಸಡಗರದಿಂದ ನಡೆಯಿತು. ಬನಹಟ್ಟಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಬನಹಟ್ಟಿ ಹಾಗೂ ಸುತ್ತಮುತ್ತಲಿನ ಗ್ರಾಮೀಣ ಪ್ರದೇಶದಲ್ಲಿ 232 ಕಡೆ ಸಾರ್ವಜನಿಕ ಗಣೇಶ ಮೂರ್ತಿಗಳನ್ನು ಪ್ರತಿಷ‍್ಠಾಪನೆ ಮಾಡಲಾಗಿದೆ. ಪ್ರಸಾದ ಸೇವೆ: ಭದ್ರನವರ ಮನೆಯ ಆವರಣದಲ್ಲಿ ಕಾಡಸಿದ್ಧೇಶ್ವವರ ಹಮಾಲರ ಸಂಘದವರು ಗಣೇಶೋತ್ಸವದ ಅಂಗವಾಗಿ ಶನಿವಾರ ಹಮ್ಮಿಕೊಂಡಿದ್ದ ಪ್ರಸಾದ ಸೇವೆಗೆ ರಬಕವಿಯ ಗುರುದೇವ ಬ್ರಹ್ಮಾನಂದ ಆಶ್ರಮದ ಗುರುಸಿದ್ಧೇಶ್ವರ ಸ್ವಾಮೀಜಿ ಚಾಲನೆ ನೀಡಿ ಮಾತನಾಡಿದರು. ಹಿರೇಮಠದ ಶರಣಬಸವ ಶಿವಾಚಾರ್ಯರು ಸಾಹಿತಿ ಬಿ.ಆರ್. ಪೊಲೀಸಪಾಟೀಲ ರಾಜೇಂದ್ರ ಭದ್ರನವರ ಹಮಾಲರ ಸಂಘದ ಅಧ್ಯಕ್ಷ ಬಸಯ್ಯ ವಸ್ತ್ರದಮಾಳಪ್ಪ ಕರಿಗಾಗ ಸದಾಶಿವ ಹನಗಂಡಿ ಸದಾಶಿವ ಆಲಕನೂರ ನಾಗಪ್ಪ ಪೋತದಾರ ಕರೆಪ್ಪ ಆಲಕನೂರ ಮುರಳಿಧರ ಕಾಬರಾ ರಾಜು ಬುರಡ ಅನೇಕರು ಇದ್ದರು. ಐದು ಕ್ವಿಂಟಲ್ ಹಾಲುಗ್ಗಿ ಮೂರು ಕ್ವಿಂಟಲ್ ಕಿಚಡಿ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ವಕೀಲರ ಸಂಘ: ಬನಹಟ್ಟಿಯ ವಕೀಲರ ಸಂಘದ ಸದಸ್ಯರು ಗಣೇಶೋತ್ಸವದ ಅಂಗವಾಗಿ ವಕೀಲರ ಸಂಘದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ನಡೆಯಿತು. ಸಂಘದ ಅಧ್ಯಕ್ಷ ಶ್ರೀಕಾಂತ ಕುಲಕರ್ಣಿ ಎ.ಜಿ. ಸಲಬನ್ನವರ ಜಿ.ಎಸ್. ಅಮ್ಮಣಗಿಮಠ ರಾಜು ಫಕೀರಪೂರ ಪಿ.ಜಿ.ಪಾಟೀಲ ರಮೇಶ ಎಕ್ಸಂಬಿ ಕಿರಣ ದೇಸಾಯಿ ಇದ್ದರು.
Cut-off box - ಬಂಡಿಯಲ್ಲಿ ಮೂರ್ತಿ ಮೆರವಣಿಗೆ ಬಾದಾಮಿ: ವಿವಿಧೆಡೆ ಶನಿವಾರ ಗಣೇಶನ ಮೂರ್ತಿಯ ಮೆರವಣಿಗೆ ನಡೆದ ಬಳಿಕ ಪ್ರತಿಷ್ಠಾಪನೆ ನಡೆಯಿತು. ಶಾಲಾ– ಕಾಲೇಜು ಸಂಘ ಸಂಸ್ಥೆಗಳು ಮತ್ತು ಸರ್ಕಾರಿ ಇಲಾಖೆಗಳ ಕಾರ್ಯಾಲಯದಲ್ಲಿ ವೇದಿಕೆಯನ್ನು ಅಲಂಕರಿಸಿ ಮೂರ್ತಿ ಪ್ರತಿಷ್ಠಾಪಿಸಲಾಯಿತು. ಇಲ್ಲಿನ ಪಶು ಸಂಗೋಪನೆ ಇಲಾಖೆ ಆವರಣದಲ್ಲಿ ಏಕದಂತ ಸೇವಾ ಸಮಿತಿಯು ಪರಿಸರ ಸ್ನೇಹಿ ಮಣ್ಣಿನ ಗಣೇಶನ ಮೂರ್ತಿ ಪ್ರತಿಷ್ಠಾಪಿಸಿತು. ರೈತರು ಎತ್ತುಗಳನ್ನು ಸಿಂಗರಿಸಿ ಅಲಂಕೃತ ಬಂಡಿಯಲ್ಲಿ ರೈತರು ಬೆಳೆದ ಮುಂಗಾರು ಹಸಿರು ಬೆಳೆಯನ್ನು ಪ್ರದರ್ಶಿಸುತ್ತ ಮೆರವಣಿಗೆ ನಡೆಸಿದರು. ಸಾಂಪ್ರದಾಯಿಕ ಕರಡಿ ಮಜಲು ಚಿಮ್ಮಲಗಿ ಗ್ರಾಮದ ದ್ಯಾವಪ್ಪ ಭಜಂತ್ರಿ ಶಹನಾಯಿ ವಾದನ ಗಮನ ಸೆಳೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.