ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಸ್ಪತ್ರೆಯಲ್ಲೇ ಪಿಎಸ್‌ಐ ಪರೀಕ್ಷೆಗೆ ಸಿದ್ಧತೆ!

ಕೋವಿಡ್–19 ಗೆದ್ದು ಬಂದ ಮುಧೋಳದ ಹೆಡ್‌ಕಾನ್‌ಸ್ಟೆಬಲ್ ಮಹಾಂತೇಶ ಲಮಾಣಿ
Last Updated 17 ಜುಲೈ 2020, 16:40 IST
ಅಕ್ಷರ ಗಾತ್ರ

ಬಾಗಲಕೋಟೆ: ’ಕೊರೊನಾ ಅಂದರೆ ಖಂಡಿತ ಸಾವು ಅಲ್ಲ. ಆದರೆ ಆನಗತ್ಯವಾಗಿ ಭಯಪಟ್ಟರೆ ಸಾವು ಖಚಿತ‘.. ಇದು ಕೋವಿಡ್–19 ಗೆದ್ದು ಬಂದ ಮುಧೋಳದ ವೃತ್ತದ ಹೆಡ್‌ಕಾನ್‌ಸ್ಟೆಬಲ್ ಮಹಾಂತೇಶ ಲಮಾಣಿ ಆತ್ಮವಿಶ್ವಾಸದ ಮಾತು..

ಕೋವಿಡ್ ಚಿಕಿತ್ಸೆಯ ವೇಳೆ ಆಸ್ಪತ್ರೆಯಲ್ಲಿ ಎಲ್ಲರೂ ಭಯದಲ್ಲಿ ಕಾಲಕಳೆದರೆ ಮಹಾಂತೇಶ ಅವರದ್ದು ವಿಭಿನ್ನ ನಡೆ. ಪಿಎಸ್‌ಐ ಪರೀಕ್ಷೆ ಕಟ್ಟಿದ್ದ ಅವರು, 22 ದಿನಗಳ ಚಿಕಿತ್ಸಾ ಅವಧಿಯಲ್ಲಿ ಜಿಲ್ಲಾ ಕೋವಿಡ್ ಆಸ್ಪತ್ರೆಯ ವಾರ್ಡ್‌ನಲ್ಲಿ ಕುಳಿತು ಅದಕ್ಕೆ ಸಿದ್ಧತೆ ನಡೆಸಿದ್ದಾರೆ. ಅಧ್ಯಯನಕ್ಕೆ ಸ್ಮಾರ್ಟ್‌ಫೋನ್‌ನಲ್ಲಿದ್ದ ’ಅನ್ ಅಕಾಡೆಮಿ‘ ಆ್ಯಪ್ ನೆರವಾಗಿದೆ.

ವಿಪರೀತ ಜ್ವರ:ಐದು ವರ್ಷಗಳಿಂದ ಅನಾರೋಗ್ಯ ಎಂದು ಒಮ್ಮೆಯೂ ವೈದ್ಯರ ಬಳಿಗೆ ಹೋಗಿರಲಿಲ್ಲ. ಆದರೆ ಮೇ 10ರಿಂದ ಎರಡು ದಿನ ಕಾಡಿದ ವಿಪರೀತ ಚಳಿ ಜ್ವರ ಗಡಗಡ ನಡುಗಿಸಿತ್ತು. ಕೊರೊನಾಗೆ ಮುನ್ನುಡಿ ಬರೆದಿತ್ತು. ಜಮಖಂಡಿಯ ವೈದ್ಯರ ಸಲಹೆ ಮೇರೆಗೆ ಮೇ 12ರಂದು ಗಂಟಲು ದ್ರವ ಮಾದರಿ ಪರೀಕ್ಷೆಗೆ ಕೊಟ್ಟೆನು. 14ರ ರಾತ್ರಿ 10.30ಕ್ಕೆ ಕರೆ ಮಾಡಿದ ಸಿಪಿಐ ಸಾಹೇಬರು, ಎರಡು ದಿನ ಚಿಕಿತ್ಸೆ ಪಡೆಯಲು ಬಾಗಲಕೋಟೆಗೆ ಹೋಗಿ ಬನ್ನಿ ಆಂಬುಲೆನ್ಸ್ ಬರಲಿದೆ ಎಂದು ಹೇಳಿದರು. ಆದರೆ ಹೆದರಿಕೊಳ್ಳುತ್ತೇನೆ ಎಂದು ಕೊರೊನಾ ಖಚಿತಪಟ್ಟಿರುವ ವಿಚಾರ ಅವರು ಹೇಳಲಿಲ್ಲ. ಮನೆಯಲ್ಲಿ ಪತ್ನಿಗೆ ನಾನೇ ಧೈರ್ಯ ಹೇಳಿ ಆಂಬುಲೆನ್ಸ್‌ನವರಿಗೆ ಕ್ವಾಟ್ರಸ್ ಒಳಗೆ ಬರಬೇಡಿ ನಾನೇ ಹೊರಗೆ ಬರುತ್ತೇನೆ ಎಂದು ಹೇಳಿ ಹೊರಟೆನು. ಮೊದಲ ಎರಡು ದಿನ ಬೇಸರವಾಗಿತ್ತು. ಕೊರೊನಾ ನನಗೆ ಹೇಗೆ ತಗುಲಿತ್ತು ಎಂಬುದೇ ಗೊತ್ತಾಗಲಿಲ್ಲ ಎಂದು ಲಮಾಣಿ ಹೇಳಿದರು.

ದಿನಕ್ಕೆ ಮೂರು ಬಾರಿ ಗುಳಿಗೆ ಕೊಡುತ್ತಿದ್ದರು. ಜ್ವರ ಬಂದು ಹೋಗಿದ್ದು ಬಿಟ್ಟರೆ ನನಗೆ ಯಾವುದೇ ಲಕ್ಷಣ ಇರಲಿಲ್ಲ. ಆಸ್ಪತ್ರೆಯ ನರ್ಸ್‌ಗಳು ಹಾಗೂ ಸಿಬ್ಬಂದಿ ವಿಪರೀತ ಕಾಳಜಿ ಮಾಡಿದರು. ಉತ್ತಮ ಊಟ ಕೊಟ್ಟರು. ಆಸ್ಪತ್ರೆಯಿಂದ ಬಿಡುಗಡೆಯಾದ ನಂತರ ಸ್ವತಃ ಐಜಿಪಿ, ಎಸ್ಪಿ ಸಾಹೇಬರು ಬಂದು ನಮ್ಮನ್ನು ಸ್ವಾಗತಿಸಿದ್ದು ಅಪರೂಪದ ಗೌರವ ಎಂದು ಸ್ಮರಿಸಿಕೊಳ್ಳುತ್ತಾರೆ. ಜೂನ್ 5ಕ್ಕೆ ಆಸ್ಪತ್ರೆಯಿಂದ ಬಿಡುಗಡೆಯಾಗಿ 14 ದಿನಗಳ ಹೋಂ ಕ್ವಾರಂಟೈನ್ ಮುಗಿಸಿ, ಜೂನ್ 20ರಿಂದ ಲಮಾಣಿ ಮತ್ತೆ ಕೆಲಸಕ್ಕೆ ಮರಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT