ಮಂಗಳವಾರ, ಜೂನ್ 28, 2022
25 °C
ಪುರಸಭೆ: ಕರಡು ತಯಾರಿಸುವಾಗ ಸದಸ್ಯರ ನಿರ್ಲಕ್ಷ್ಯಿಸಿದ ಆರೋಪ

ಗೊಂದಲದ ಗೂಡಾದ ಗುಳೇದಗುಡ್ಡ ಪುರಸಭೆಯ ಬಜೆಟ್‌ ಸಭೆ

ಪ್ರಜಾವಾಣಿ ವಾರ್ತೆ  Updated:

ಅಕ್ಷರ ಗಾತ್ರ : | |

Prajavani

ಗುಳೇದಗುಡ್ಡ: ಬಜೆಟ್ ಪೂರ್ವಭಾವಿ ಸಭೆ ಕರೆಯದೇ, ಸದಸ್ಯರ ಗಮನಕ್ಕೂ ತರದೆ ತಯಾರಿಸಿ ಸಭೆಗೆ ಹಂಚಿದ ಕರಡು ಪ್ರತಿ ಅವೈಜ್ಞಾನಿಕವಾಗಿದೆ ಎಂದು ಪುರಸಭೆ ಸದಸ್ಯರು ವಿರೋಧ ವ್ಯಕ್ತಪಡಿಸಿದರು. ಇದರಿಂದಾಗಿ ಮಂಗಳವಾರ ಇಲ್ಲಿ ನಡೆದ ಪುರಸಭೆ ಬಜೆಟ್‌ ಸಭೆಯನ್ನೇ ಮುಂದೂಡಲಾಯಿತು.

ಬಜೆಟ್‌ ಕರಡು ಪ್ರತಿಯನ್ನು ಒಪ್ಪದೆ, ಸದಸ್ಯರು ಗರಂ ಆಗಿ ಒಕ್ಕೊರಲಿನಿಂದ ಆಕ್ಷೇಪ ವ್ಯಕ್ತಪಡಿಸಿದ್ದರಿಂದ ಅಧ್ಯಕ್ಷರು ಹಾಗೂ ಮುಖ್ಯಾಧಿಕಾರಿಗಳು ಸಭೆ ಮುಂದೂಡಿದರು. 

2021-22ನೇ ಸಾಲಿನ ಬಜೆಟ್‌ ಮಂಡಿಸಿ, ಚರ್ಚೆ ಮಾಡಿ, ಅನುಮೋದನೆ ಪಡೆಯಲು ಸಭೆ ಕರೆಯಲಾಗಿತ್ತು. ಸಭೆ ಆರಂಭವಾಗುತ್ತಿದ್ದಂತೆ ಜೆಡಿಎಸ್ ಸದಸ್ಯ ಉಮೇಶ ಹುನಗುಂದ, ಸಂತೋಷ ನಾಯನೇಗಲಿ, ಕಾಂಗ್ರೆಸ್ಸಿನ ವಿನೋದ ಮದ್ದಾನಿ, ಯಲ್ಲಪ್ಪ ಮನ್ನಿಕಟ್ಟಿ ಮುಂತಾದವರು ಪೂರ್ವಭಾವಿ ಸಭೆ ಕರೆಯದೆ ಕರಡು ಪ್ರತಿ ತಯಾರಿಸಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದರು. ಸಭೆ ಮುಂದೂಡಲು ಅಧ್ಯಕ್ಷರನ್ನು ಒತ್ತಾಯಿಸಿದರು. ಮುಖ್ಯಾಧಿಕಾರಿ ಚಿದಾನಂದ ಮಠಪತಿ ಸದಸ್ಯರ ಪ್ರಶ್ನೆಗಳಿಗೆ ಸರಿಯಾಗಿ ಉತ್ತರಿಸಲಿಲ್ಲ.

ಮೌನಕ್ಕೆ ಶರಣಾದ ಅಧ್ಯಕ್ಷರು: ಸಭೆ ಆರಂಭವಾಗುತ್ತಿದ್ದಂತೆ ಸದಸ್ಯರು ವಿರೋಧ ವ್ಯಕ್ತಪಡಿಸಿದ್ದರಿಂದ ಪುರಸಭೆ ಅಧ್ಯಕ್ಷರು ಮೌನಕ್ಕೆ ಜಾರಿದರು. ಅಧಿಕಾರರೂಢ ಕಾಂಗ್ರೆಸ್‌ ಸದಸ್ಯರ ಸಭೆಗೆ ಗೈರಾಗಿದ್ದು ಎದ್ದು ಕಾಣುತ್ತಿತ್ತು. 15 ಜನರ ಸದಸ್ಯರಲ್ಲಿ ಭಿನ್ನಮತದ ಹೊಗೆಯೂ ಆಡುತ್ತಿದೆ ಎಂಬ ಮಾತು ಕೈ ಸದಸ್ಯರಲ್ಲಿಯೇ ಕೇಳಿಬಂದಿತು. 

ಸಭೆಯ ಆರಂಭದಲ್ಲಿ ಕಾಂಗ್ರೆಸ್‌ ಸದಸ್ಯರು ಕೂಡ ಕರಡು ತಯಾರಿಕೆಗೆ ಕರೆಯದ ಕಾರಣಕ್ಕೆ ಅಸಮಾಧಾನ ವ್ಯಕ್ತಪಡಿಸಿ, ಅಧ್ಯಕ್ಷರು ಹಾಗೂ ಮುಖ್ಯಾಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು. ನಂತರ ಜೆಡಿಎಸ್ ಸದಸ್ಯರಾದ ಉಮೇಶ ಹುನಗುಂದ, ಸಂತೋಷ ನಾಯನೇಗಲಿ, ಬಿಜೆಪಿಯ ಪ್ರಶಾಂತ ಜವಳಿ, ಕರಡು ಪ್ರತಿಯ ದೋಷಗಳನ್ನು ಎಳೆ, ಎಳೆಯಾಗಿ ವಿವರಿಸಿದರು.  23 ಸದಸ್ಯರಲ್ಲಿ 19 ಸದಸ್ಯರು ಹಾಜರಿದ್ದರು.

‘ನಾವು ಅಭಿವೃದ್ಧಿ ಪರವಾಗಿದ್ದೇವೆ. ಬಜೆಟ್ ಪೂರ್ವಭಾವಿ ಸಭೆ ಕರೆದಿಲ್ಲ. ಕರಡು ಪ್ರತಿಗೆ ಅಧ್ಯಕ್ಷರ, ಮುಖ್ಯಾಧಿಕಾರಿಗಳ, ಲೆಕ್ಕಾಧಿಕಾರಿಗಳ ಸಹಿ ಇಲ್ಲ. ಕರಡು ಪ್ರತಿಯಲ್ಲಿ ಅಂಕಿ ಸಂಖ್ಯೆಗಳು ಸರಿ ಇಲ್ಲ’ ಎಂದು ಪುರಸಭೆ ಜೆಡಿಎಸ್‌ ಸದಸ್ಯರಾದ ಉಮೇಶ ಹುನಗುಂದ, ಸಂತೋಷ ನಾಯನಾಗಲಿ ಹಾಗೂ ಬಿಜೆಪಿಯ ಪ್ರಶಾಂತ ಜವಳಿ ಹೇಳಿದರು.

ಕೋಟ್

ನನ್ನ ಗಮನಕ್ಕೆ ತರದೇ ಅಧಿಕಾರಿಗಳು ಬಜೆಟ್‌ ಕರಡು ಪ್ರತಿ ತಯಾರಿಸಿದ್ದಾರೆ. ಅದಕ್ಕೆ ಸಭೆ ಮುಂದೂಡಿದ್ದೇನೆ. ಎಲ್ಲರ ವಿಶ್ವಾಸ ಪಡೆದು ವಾರದೊಳಗೆ ಬಜೆಟ್ ಸಭೆ ಮಾಡುತ್ತೇನೆ.
ಶಿಲ್ಪಾ ನಾಗರಾಜ ಹಳ್ಳಿ
ಪುರಸಭೆ ಅಧ್ಯಕ್ಷೆ

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು